ಬೆಂಗಳೂರು, ಸೆ. 8: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ (Karnataka Weather) ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಸದ್ಯ ರಾಜ್ಯದ ಯಾವುದೇ ಮೂರು ಹವಾಮಾನ ವಲಯಗಳಿಗೂ ಭಾರಿ ಮಳೆಯ ಎಚ್ಚರಿಕೆ ಅಥವಾ ಯೆಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಿಸಲಾಗಿಲ್ಲ. ಕರಾವಳಿ ಕರ್ನಾಟಕದಲ್ಲಿ ಇಂದು ಮಳೆಯ ಚಟುವಟಿಕೆ ತುಸು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ. ಇದೇ ರೀತಿಯ ಮಳೆಯ ವಾತಾವರಣ ಮುಂದಿನ ಕೆಲವು ದಿನಗಳಲ್ಲೂ ಮುಂದುವರಿಯುವ ಮುನ್ಸೂಚನೆ ಇದೆ.
ಉತ್ತರ ಒಳನಾಡಿನಲ್ಲೂ ಅಲ್ಲಲ್ಲಿ ಮಳೆ
ಉತ್ತರ ಒಳನಾಡು ಕರ್ನಾಟಕದಲ್ಲಿಯೂ ಇಂದು ಕೆಲವೆಡೆ ಹಗುರ ಮಳೆಯ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಸ್ಥಳೀಯವಾಗಿ ಮಳೆ ಅಥವಾ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಆದರೆ ಇಂದು ಈ ಭಾಗಕ್ಕೆ ಯಾವುದೇ ಅಧಿಕೃತ ಮಳೆ ಎಚ್ಚರಿಕೆ ನೀಡಲಾಗಿಲ್ಲ. ಸೆಪ್ಟೆಂಬರ್ 10ರಿಂದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು-ಮಿಂಚಿನ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯನ್ನು IMD ಸೂಚಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿಯೇ ರಾಜ್ಯದ ಹಲವೆಡೆ ಬರಗಾಲ; ಇಂದಿನ ಹವಾಮಾನ ಹೇಗಿದೆ
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?
ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ ಸುಮಾರು 32°C ಹಾಗೂ ಕನಿಷ್ಠ ತಾಪಮಾನ ಸುಮಾರು 20–21°C ಇರಬಹುದು. ಮೋಡ ಕವಿದ ವಾತಾವರಣದ ನಡುವೆ ಅಲ್ಲಲ್ಲಿ ತುಂತುರು ಅಥವಾ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರೂ, ಮುಂದಿನ ಕೆಲವು ದಿನಗಳಲ್ಲಿ ಸ್ಥಳೀಯ ಮಳೆ ಹಾಗೂ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿಯುವ ಮುನ್ಸೂಚನೆ ಇದೆ.