ಬೆಂಗಳೂರು, ಜೂ. 18: ಈ ಬಾರಿ ಮುಂಗಾರು (Monsoon) ತಡವಾಗಿ ಆಗಮಿಸಿದ್ದು, ಒಂದೆರಡು ದಿನ ಮಳೆ ಬಂದದ್ದು ಬಿಟ್ಟರೆ ಬಳಿಕ ಮಾಯವಾಗಿದೆ. ಎರಡ್ಮೂರು ದಿನಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ (Karnataka weather). ರಾಯಚೂರು, ಕಲಬುರಗಿ, ಮೈಸೂರು-ಚಾಮರಾಜನಗರದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಬಲವಾದ ಬಿರುಗಾಳಿ ಬೀಸಲಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಕೊಪ್ಪಳ, ಗದಗ, ಹಾವೇರಿ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೀದರ್, ಕಲಬುರಗಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಗದಗ ಮತ್ತು ರಾಯಚೂರಿನಲ್ಲೂ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿಗೆ ಮುಂಗಾರು ಮಳೆ ಎಂಟ್ರಿ ಯಾವಾಗ? ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?
ಇನ್ನು ಜೂನ್ 20 ಹಾಗೂ 21 ರಂದು ರಾಜ್ಯದ ಕೆಲವೆಡೆ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಬೆಳಗಾವಿ, ಧಾರವಾಡದಲ್ಲಿ ಭಾರಿ ಮಳೆ ಮುನ್ಸೂಚನೆ ಇದ್ದು, ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಬಾರಿ ನೈಋತ್ಯ ಮುಂಗಾರು ಸಾಮಾನ್ಯಕ್ಕಿಂತ ಸ್ವಲ್ಪ ತಡವಾಗಿ, ಜೂನ್ 4ರಂದು ಕೇರಳವನ್ನು ಪ್ರವೇಶಿಸಿತು. ನಂತರ ಕರ್ನಾಟಕದ ಕರಾವಳಿ ಪ್ರವೇಶಿಸಿತು. ಆರಂಭಿಕ ಹಂತದಲ್ಲಿ ಮುಂಗಾರು ವೇಗವಾಗಿ ಮುನ್ನಡೆದರೂ, ಇದೀಗ ಕ್ಷಿಣಗೊಂಡಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಕ್ಷೀಣಗೊಂಡಿದ್ದು, ಕೆರೆ, ನದಿಗಳು ತುಂಬಿಲ್ಲ.
ಪ್ರಸ್ತುತ ಮುಂಗಾರು ಕೇರಳ, ತಮಿಳುನಾಡು, ಗೋವಾ, ಈಶಾನ್ಯ ರಾಜ್ಯಗಳು ಹಾಗೂ ಕರ್ನಾಟಕದ ಬಹುತೇಕ ಭಾಗಗಳನ್ನು ಆವರಿಸಿದ್ದು, ಮುಂದಿನ ದಿನಗಳಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಛತ್ತೀಸ್‌ಗಢದ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮುಂಗಾರು ದೇಶಾದ್ಯಂತ ಮಳೆ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಆಗುವ ಸಾಧ್ಯತೆಯಿದೆ.