ಬೆಂಗಳೂರು: ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಒಣಹವೆ ಮುಂದುವರಿಯುತ್ತಿದ್ದು, ಚಳಿ ಪ್ರಾರಂಭವಾಗಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ (Karnataka Weather) ಹವೆ ಮುಂದುವರಿಯಲಿದ್ದು, ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ಅನೇಕ ಭಾಗಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ, ಕಲಬುರಗಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಹಾವೇರಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವೆ ಇರಲಿದೆ. ಈ ಭಾಗದಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 3ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದ್ದು, ಬೆಳಗಾವಿ (12.6°C) ಹಾಗೂ ಬಾಗಲಕೋಟೆ (14.1°C) ಸುತ್ತಮುತ್ತ ಚಳಿ ಹೆಚ್ಚಾಗಿದೆ. ಹಗಲಿನಲ್ಲಿ ಬಿಸಿಲು ಇರಲಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಇನ್ನು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲವಾಗಿದ್ದು, ಬೆಳಗಿನ ಜಾವ ದಟ್ಟ ಮಂಜು ಕವಿಯಲಿದೆ.
ಇಂದೂ ಸಹ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ; ರಾಜ್ಯದಲ್ಲಿ ಹವಾಮಾನ ಹೇಗಿದೆ?
ಬೆಂಗಳೂರು ನಗರದಲ್ಲಿ ಮಂಗಳವಾರ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಗರಿಷ್ಠ ತಾಪಮಾನ 27°C ಹಾಗೂ ಕನಿಷ್ಠ ತಾಪಮಾನ 18°C ದಾಖಲಾಗುವ ನಿರೀಕ್ಷೆಯಿದೆ. ಈಶಾನ್ಯ ದಿಕ್ಕಿನಿಂದ ಗಂಟೆಗೆ ಸುಮಾರು 10 ಕಿ.ಮೀ. ವೇಗದಲ್ಲಿ ತಂಪಾದ ಗಾಳಿ ಬೀಸಲಿದ್ದು, ಗಾಳಿಯಲ್ಲಿ ತೇವಾಂಶ ಶೇ. 57 ರಷ್ಟಿರಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಳೆ ಒಣ ಹವೆ ಇರಲಿದ್ದು, ಯಾವುದೇ ಭಾರಿ ಮಳೆಯ ಮುನ್ಸೂಚನೆ ಇಲ್ಲ. ಕರಾವಳಿ ತೀರದಲ್ಲಿ ಹಗಲಿನ ವೇಳೆ ಬೆಚ್ಚಗಿನ ವಾತಾವರಣ ಇರಲಿದ್ದು, ಸಂಜೆ ಮತ್ತು ರಾತ್ರಿ ವೇಳೆ ಹಿತಕರವಾದ ತಂಪು ಗಾಳಿ ಬೀಸಲಿದೆ.