ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ (Karnataka Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆಯಿದೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಸಾಧಾರಣ ತುಂತುರು ಮಳೆಯಾಗುವ ಮುನ್ಸೂಚನೆಯಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದ್ದು, ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್ ವೇವ್ ಅಲರ್ಟ್ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಬಿಸಿಲಿನ ತಾಪ 40c ದಾಟುವ ಅಪಾಯವಿದೆ. ಇಲ್ಲಿನ ಜನರಿಗೆ ಮನೆಯಿಂದ ಹೊರಬರಲು ಕಷ್ಟವಾಗುವಷ್ಟು ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಬಾಗಲಕೋಟೆ ಜಿಲ್ಲೆಯ ಅಲ್ಲಲ್ಲಿ ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಹೆಚ್ಚಿದ ಬಿಸಿಲಿನ ತಾಪ; ಕೆಲವು ಜಿಲ್ಲೆಗಳಲ್ಲಿ ಮಳೆ ಸೂಚನೆ
ಹೀಟ್ ಸ್ಟ್ರೋಕ್ ವಾರ್ಡ್ ಆರಂಭ
ದಿನದಿಂದ ದಿನಕ್ಕೆ ತಾಪಮಾನ ತೀವ್ರ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ 'ಹೀಟ್ ಸ್ಟ್ರೋಕ್ ವಾರ್ಡ್' ಆರಂಭಿಸುವಂತೆ ರಾಜ್ಯ ಸರ್ಕಾರ ಶುಕ್ರವಾರ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಹೊರಡಿಸಿದ ಸುತ್ತೋಲೆಯಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳು ಎರಡು ಹಾಸಿಗೆಗಳ ಹೀಟ್ ಸ್ಟ್ರೋಕ್ ವಾರ್ಡ್, ತಾಲ್ಲೂಕು ಆಸ್ಪತ್ರೆಗಳು ಐದು ಹಾಸಿಗೆಯ ಹೀಟ್ ಸ್ಟ್ರೋಕ್ ವಾರ್ಡ್ ಮತ್ತು ಜಿಲ್ಲಾ ಆಸ್ಪತ್ರೆಗಳು 10 ಹಾಸಿಗೆಗಳನ್ನು ಹೀಟ್ ಸ್ಟ್ರೋಕ್ ವಾರ್ಡ್ ಅನ್ನು ಮೀಸಲಿಡಬೇಕು ಎಂದು ಹೇಳಿದೆ.