ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉಲ್ಲಾಸದ ಹೂಮಳೆ ಜಿನುಗಲಿ ತನು-ಮನದಲ್ಲೀ...

ಮನೆಯಲ್ಲಿ ಆದಷ್ಟೂ ಸೌಮ್ಯ ಆಹಾರ ಸೇವಿಸಿ. ಟಿ.ವಿ.ಯಲ್ಲಿ ಅತ್ತೆ-ಸೊಸೆ ಜಗಳ, ಕೊಲೆ, ಕಿಡ್ ನ್ಯಾಪ್, ಅಪಘಾತ, ಆಸ್ಪತ್ರೆಯ ಸುತ್ತಲೇ ಗಿರಕಿ ಹೊಡೆಯುವ ಧಾರಾವಾಹಿಗಳನ್ನು ನೋಡಬೇಡಿ. ಬದಲಾಗಿ ವಾರ್ತೆಗಳ ಜತೆಗೆ ಹಾಸ್ಯ ಹಾಗೂ ಆಧ್ಯಾತ್ಮಿಕ ವಿಷಯ ಹೊಂದಿರುವ ಪ್ರಸಂಗಗಳನ್ನು ವೀಕ್ಷಿಸಿ. ಆದಷ್ಟೂ ಮನೆಮಂದಿಯೊಡನೆ ಕುಳಿತು ಪ್ರಚಲಿತ ವಿದ್ಯಮಾನಗಳ ಕುರಿತು ಮುಕ್ತ ಮನದಿಂದ ಮಾತನಾಡಿ.

ಕೆ.ಶ್ರೀನಿವಾಸರಾವ್, ಹರಪನಹಳ್ಳಿ

ಮನುಷ್ಯನು ಬಾಲ್ಯ, ಯೌವನ, ಪ್ರೌಢ, ಮಧ್ಯಮ ಅವಸ್ಥೆ ದಾಟಿ ಅರವತ್ತರ ನಂತರ ವೃದ್ಧಾಪ್ಯಕ್ಕೆ ಕಾಲಿಟ್ಟಾಗ ತನ್ನಿಂತಾನೆ ನಿರುತ್ಸಾಹಿ ಆಗುತ್ತಾನೆ. ಅದಕ್ಕೆ ಸರಿಯಾಗಿ ಸರಕಾರವೂ ಸೇವಾ ನಿವೃತ್ತಿ ಕೊಟ್ಟು ಮನೆಗೆ ಕಳಿಸುತ್ತದೆ. ಮನೆಯಲ್ಲಿ, ಸಮಾಜದಲ್ಲಿ, ಬಂಧು-ಬಾಂಧವರ ನಡುವೆ ಗೌರವ, ಸಂವಹನ ಕಡಿಮೆಯಾಗುತ್ತದೆ. ಅವನ ಮನಸ್ಸಿನಲ್ಲಿ ಕೀಳರಿಮೆ ಸುರಿಸಿ, ಕುಗ್ಗುವ ಸಂಭವ ಇರುತ್ತದೆ.

ಆದರೆ ನಾವು ನಮ್ಮ ಮನದಲ್ಲಿ ಉತ್ಸಾಹವನ್ನು ಪುನರುಜ್ಜೀವನಗೊಳಿಸಿ ದಿನಚರಿಯನ್ನು ರೂಪಿಸಿ ಕೊಂಡರೆ 71ರಲ್ಲೂ 21ರಂತೆ ಬದುಕಬಹುದು. ಉದಾಹರಣೆಗೆ. ಹಿರಿಯ ನಾಗರಿಕರು ಬೆಳಗ್ಗೆ ಬೇಗನೆ ಎದ್ದು ಲಘು ವಾಕಿಂಗ್ ಮಾಡಿ ಮನೆಗೆ ಬಂದವರು ವ್ಯಾಯಾಮ, ಪ್ರಾಣಾಯಾಮ, ಯೋಗ, ಧ್ಯಾನ ಮಾಡಿರಿ. ನೆನಪಿಡಿ, ದೇಹ ಸಾಕೆನಿಸುವಷ್ಟು ಮಾತ್ರ ಮಾಡಿ. ಹೆಚ್ಚು ಮಾಡಿದಲ್ಲಿ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ನಂತರ ಬಿಸಿನೀರಿನಲ್ಲಿ ಸ್ನಾನ, ಕೈಲಾದಷ್ಟು ದೇವರ ಪೂಜೆ, ಖಾರ ಕಡಿಮೆಯಿರುವ ಇಡ್ಲಿ, ದೋಸೆ, ರೊಟ್ಟಿಯಂಥ ಸೌಮ್ಯ ಉಪಾಹಾರ ಸೇವಿಸಿ.ಈಗ ವರ್ತಮಾನ ಪತ್ರಿಕೆಯನ್ನು ಓದುವ ಸಮಯ. ದೇಶದ ಆಗುಹೋಗುಗಳನ್ನು ಮನನ ಮಾಡಿಕೊಂಡು ಯಾವುದಾದರೂ ಬ್ಯಾಂಕ್ ಕೆಲಸ ಇತರೆ ಮುಗಿಸಿ ಮನೆಗೆ ವಾಪಸ್ ಆಗಿ; ಊಟ, ಲಘು ವಿಶ್ರಾಂತಿ, ಟಿವಿ ವೀಕ್ಷಣೆ, ಕಾಫಿ ಸೇವನೆ, ಮತ್ತದೇ ಹೊಟ್ಟೆ ತುಂಬಿಸಿಕೊಳ್ಳುವಿಕೆ, ರಾತ್ರಿಯ ನಿದ್ರೆ.... ಏಕೆ ಬೋರೆನಿಸುತ್ತದೆಯೇ? ನಿತ್ಯ ಅದೇ ಯಾಂತ್ರಿಕ ಕ್ರಿಯೆ! ಉತ್ಸಾಹ ಬತ್ತಿ ಮನಸ್ಸು ಬಗ್ಗಡವಾಗದಿದ್ದೀತೇ? ಅದಕ್ಕೆ ಉಪಾಯವಿದೆ.

ಇದನ್ನೂ ಓದಿ: Lakshmikanth L V Column: ಟೀಕೆಗಳಿಗಿಲ್ಲ ಆಯುಷ್ಯ, ಕೆಲಸಕ್ಕಿದೆ ಭವಿಷ್ಯ

ಈ ಎಲ್ಲ ನಿತ್ಯವಿಧಿಗಳ ನಡುವೆ ಇತರೆ ಉಪಕ್ರಮಗಳನ್ನು ಅನುಸರಿಸಿ. ಬೆಳಗಿನ ವಾಕಿಂಗಿಗೆ ಸಮ ವಯಸ್ಕ ಗೆಳೆಯರನ್ನು ಜತೆ ಮಾಡಿಕೊಳ್ಳಿ. ಪಾರ್ಕ್ ಒಳಗೆ ಹರಟುತ್ತ ಸುತ್ತಿ. ಸಾಧ್ಯವಾದಷ್ಟು ನಕ್ಕು ಹಗು ರಾಗಿ. ನಗು ದೀರ್ಘಾಯುಷ್ಯಕ್ಕೆ ಪರಮೌಷಧಿ. ಪಾರ್ಕ್ ಹೊರಗಿನ ಕ್ಯಾಂಟೀನಲ್ಲಿ ಕಾಫಿ ಸವಿಯಿರಿ.

ಮನೆಯಲ್ಲಿ ಆದಷ್ಟೂ ಸೌಮ್ಯ ಆಹಾರ ಸೇವಿಸಿ. ಟಿ.ವಿ.ಯಲ್ಲಿ ಅತ್ತೆ-ಸೊಸೆ ಜಗಳ, ಕೊಲೆ, ಕಿಡ್ ನ್ಯಾಪ್, ಅಪಘಾತ, ಆಸ್ಪತ್ರೆಯ ಸುತ್ತಲೇ ಗಿರಕಿ ಹೊಡೆಯುವ ಧಾರಾವಾಹಿಗಳನ್ನು ನೋಡಬೇಡಿ. ಬದಲಾಗಿ ವಾರ್ತೆಗಳ ಜತೆಗೆ ಹಾಸ್ಯ ಹಾಗೂ ಆಧ್ಯಾತ್ಮಿಕ ವಿಷಯ ಹೊಂದಿರುವ ಪ್ರಸಂಗಗಳನ್ನು ವೀಕ್ಷಿಸಿ. ಆದಷ್ಟೂ ಮನೆಮಂದಿಯೊಡನೆ ಕುಳಿತು ಪ್ರಚಲಿತ ವಿದ್ಯಮಾನಗಳ ಕುರಿತು ಮುಕ್ತ ಮನದಿಂದ ಮಾತನಾಡಿ.

ಮಧ್ಯಾಹ್ನ ಸಣ್ಣ ನಿದ್ರೆ, ಕಿವಿಗೆ ಬ್ಲೂಟೂತ್ ಸಿಕ್ಕಿಸಿ ಹಳೆಯ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು, ಭಾವಗೀತೆಗಳು, ನಾಟಕ, ಕೇಳಿರಿ. ಮನ ಮುದಗೊಳ್ಳುತ್ತದೆ. ಸಂಜೆ ಪಾರ್ಕುಗಳು ಅಥವಾ ಹಳ್ಳಿ ಗಳದರೆ ಅರಳಿಮರದ ಕಟ್ಟೆ ಇಲ್ಲವೇ ಶಾಲಾ ಜಗಲಿಯ ಮೇಲೆ ಗೆಳೆಯರೊಂದಿಗೆ ಕುಳಿತು ಪಕ್ಕದಲ್ಲಿ ಹುರಿದ ಶೇಂಗಾ ಇಟ್ಟುಕೊಂಡು ತಿನ್ನುತ್ತ ಮನಸಾರ ಇಷ್ಟಬಂದಂತೆ ಹರಟಿ. ಜೋಕ್ ಹೇಳಿ ಕೊಂಡು ಗಹಗಹಿಸಿ ನಗುವನ್ನು ಆಸ್ವಾದಿಸಿ.

ಗೆಳೆಯರೊಡನೆ ಅನತಿ ದೂರದಲ್ಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಿ. ಮನೆಯಲ್ಲಿ ಇತರ ಸದಸ್ಯ ರೊಡನೆ ಸದಾ ಹಸನ್ಮುಖರಾಗಿ ಮಾತನಾಡಿ. ಮಗನೊಂದಿಗೆ ವಿಶ್ವಾಸದಿಂದ ಚರ್ಚಿಸಿ. ಅವನ ಭವ್ಯ ಭವಿಷ್ಯತ್ತಿಗೆ ನಿಮ್ಮ ಅನುಭವದ ಮೂಟೆಯಿಂದ ಆರಿಸಿ ಉತ್ತಮ ಸಲಹೆಗಳನ್ನು ಕೊಡಿ.

ಕಿರಿಯರಿಗೆ ಹಿತವಚನ ಹೇಳುತ್ತಿರಿ. ಸೊಸೆಯನ್ನು ಮಗಳಂತೆ ಕಂಡು ಆದರಿಸಿ. ತಪ್ಪಿದಲ್ಲಿ ತಿದ್ದಿ ಹೇಳಿ. ತನ್ನವರನ್ನೆಲ್ಲ ಬಿಟ್ಟು ಬಂದು ನಿಮ್ಮ ಮನೆಯವರಬ್ಬಳಾದ ಅವಳನ್ನು ಪರಕೀಯ ಭಾವ ಕಾಡದಿರಲಿ. ಮೊಮ್ಮಕ್ಕಳೊಂದಿಗೆ ಕೂಸುಮರಿ, ಪಗಡೆ, ಹಾವು ಏಣಿಯಾಟ, ಕಳ್ಳ ಪೋಲಿಸ್ ಆಟ ಗಳನ್ನು ನೀವೂ ಮಕ್ಕಳಾಗಿ ಆಡಿ. ನಿಮ್ಮ ಮಕ್ಕಳಿಗೆ ಕೆಲಸದ ಒತ್ತಡದಿಂದ ಆಡಿಸಲಾಗದ ಲೋಪ ವನ್ನು ಈಗ ಸರಿಪಡಿಸಿಕೊಳ್ಳಿ. ಅಷ್ಟಕ್ಕೂ ಮೊಮ್ಮಕ್ಕಳಿಗೆ ಅಜ್ಜ- ಅಜ್ಜಿಯರೇ ಅತ್ಯಾಪ್ತರು!

ಪ್ರತಿ ತಿಂಗಳು ತಪ್ಪದೇ ಪತ್ನಿಯೊಂದಿಗೆ ವೈದ್ಯರ ಬಳಿ ಹೋಗಿ ಚೆಕಪ್ ಮಾಡಿಸಿಕೊಳ್ಳಿ. ಆಗಾಗ ದ್ರಾಕ್ಷಿ, ಗೋಡಂಬಿ, ಬಾದಾಮಿ ಸೇವಿಸಿ. ಸೋದರಿಯರು, ಭಾವಂದಿರು, ಬಂಧುಗಳಿಗೆ ಸಾಧ್ಯ ವಾದಾಗೆಲ್ಲ ಫೋನ್ ಮಾಡಿ ಮಾತನಾಡಿ ಬಂಧವನ್ನು ಹೆಚ್ಚಿಸಿಕೊಳ್ಳಿ.

ಅಕ್ಕಪಕ್ಕದ ಮನೆಯವ ರೊಂದಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ. ಸಮಯ ಹೇಳಿಕೇಳಿ ಬರುವುದಿಲ್ಲ, ಆಪತ್ತಿನಲ್ಲಿ ಪರಸ್ಪರರ ಸಹಾಯ ಅತ್ಯವಶ್ಯ. ಇನ್ನು ಮುಖ್ಯವಾಗಿ ಪತ್ನಿಯನ್ನು ಗೌರವಿಸಿ. ಬಿಡುವಾ ದಾಗಲೆಲ್ಲ ಅಡುಗೆಮನೆಯಲ್ಲಿ, ತೋಟದಲ್ಲಿ, ಇತರೆ ಕೆಲಸಗಳಲ್ಲಿ ಸಹಾಯಮಾಡಿ. ನೆನಪಿಡಿ, ನೀವು ನಿವೃತ್ತಿ ಹೊಂದಿ ನಿರಾಳರಾಗಿದ್ದೀರಿ. ಆದರೆ ನಿಮ್ಮ ಪತ್ನಿಗೆ ನಿವೃತ್ತಿ ಸಿಕ್ಕಿಲ್ಲ. ಅದೇ ಅಡುಗೆಮನೆ, ನಿತ್ಯಕಾಯಕ! ಅವರನ್ನು ಆಗಾಗ ಹೊರಗೆ ಕರೆದುಕೊಂಡು ಹೋಗಿ. ಜನರು ಕಡಿಮೆಯಿರುವ ಪ್ರದೇಶದಲ್ಲಿ ಕುಳಿತು ಮನಸ್ಸಿನ ಮಾತುಗಳನ್ನು ಪರಸ್ಪರ ಹೇಳಿಕೊಳ್ಳಿ.

ಸಾಧ್ಯವಾದರೆ ಸಂಜೆಯ ವಾಕಿಂಗ್ ಪತ್ನಿಗೆ ಮೀಸಲಾಗಿಡಿ. ಕನಿಷ್ಠ ವರ್ಷಕ್ಕೊಮ್ಮೆ ಹೊರ ರಾಜ್ಯದ ದೇಗುಲಗಳ ಪ್ರವಾಸ ಹೋಗಿ ಬನ್ನಿ. ಮನಸ್ಸು-ಹೃದಯ ಫ್ರೆಶ್ ಆಗುತ್ತವೆ. ಅವರ ವಿಶೇಷ ದಿನ ಗಳನ್ನು ನೆನಪಿಟ್ಟು ಕೊಂಡು ಆ ದಿನ ಮರೆಯದೇ ಶುಭ ಹಾರೈಸಿ. ಹುಟ್ಟುಹಬ್ಬ, ವಿವಾಹ ವಾರ್ಷಿ ಕೋತ್ಸವದ ದಿನ ಪುಟ್ಟ ಉಡುಗೊರೆ ಕೈಗಿಟ್ಟು ಅವರ ಮೊಗದಲ್ಲಿ ನಗೆಯ ರಂಗೋಲಿ ಅರಳುವು ದನ್ನು ನೋಡಿ ನೀವೂ ಸಂತೃಪ್ತರಾಗಿ. ಹಣೆಗೊಂದು ಹೂಮುತ್ತ ನ್ನಿಡಿ. ಮನೆತುಂಬ ಹೂ ಅರಳುವ ಚಮತ್ಕಾರ ನೋಡಿ!

ಮನದಲ್ಲಿ ಸದಾ ಸಕಾರಾತ್ಮಕ ವಿಷಯಗಳ ಚಿಂತನೆಯಿರಲಿ. ಋಣಾತ್ಮಕ ವಿಚಾರಗಳು ಮನದ ಶಾಂತಿಗೆ ಮಾರಕ. ಕೋಪ ಬಂದಲ್ಲಿ ಎರಡು ನಿಮಿಷ ಮೌನವಾಗಿದ್ದರೆ, ಮಿದುಳು ತಹಬಂದಿಗೆ ಬರುತ್ತದೆ. ಈ ಕೆಲ ಕ್ರಮಗಳನ್ನು ಅನುಸರಿಸಿ ನೋಡಿ, 71ರ ಹಿರಿಯರಾಗಿದ್ದರೂ ನೀವು 21ರ ತರುಣ ರಾಗುವಿರಿ!