ಪುರುಷೋತ್ತಮ್ ವೆಂಕಿ, ಚಿತ್ರದುರ್ಗ
ಮಣ್ಣಿನ ಮಡಕೆ ಕೊಂಡುಕೊಳ್ಳಲು ಇತ್ತೀಚೆಗೆ ಪೇಟೆಗೆ ಹೋಗಿದ್ದೆ. ಕುಂಬಾರರ ಓಣಿ ಹೊಕ್ಕಿದ ತಕ್ಷಣ ಅಲ್ಲಿದ್ದವರು ಎದ್ದು ಬಂದು, “ನಮ್ಮ ಹತ್ತಿರ ಬನ್ನಿ, ನಮ್ಮಲ್ಲಿಗೆ ಬನ್ನಿ" ಅಂತ ಪುಸಲಾಯಿಸ ತೊಡಗಿದರು. ನನಗಂತೂ ತಲೆ ಕೆಟ್ಟಂತಾಯ್ತು. ಆಮೇಲೆ ಅರ್ಥವಾಗಿದ್ದೇನೆಂದರೆ, ಅಲ್ಲಿರುವ ಯಾರಿಗೂ ಸರಿಯಾಗಿ ವ್ಯಾಪಾರವೇ ಆಗುತ್ತಿರಲಿಲ್ಲ.
“ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಪ್ಲಾಸ್ಟಿಕ್, ಅಲ್ಯುಮೀನಿಯಂ, ಸ್ಟೀಲ್ ಪಾತ್ರೆಗಳಿಗೆ ಮಾರು ಹೋಗಿದ್ದು, ಮಣ್ಣಿನಿಂದ ತಯಾರಿಸಿದ ಮಡಕೆ-ಕುಡಿಕೆ ಇನ್ನಿತರೆ ವಸ್ತುಗಳಿಗೆ ಬೇಡಿಕೆಯೇ ಕುಸಿದು ಹೋಗಿದೆ" ಎಂದು ವ್ಯಾಪಾರಿಗಳು ಅಲವತ್ತುಕೊಂಡರು.
ದೀಪಾವಳಿಯ ಸಮಯದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳು ಝಗಮಗಿಸುತ್ತವೆ; ಆದರೆ ಆ ಹಣತೆಗಳನ್ನು ತಯಾರಿಸುವ ಕುಂಬಾರರ ಬದುಕು ಮಾತ್ರ ಇನ್ನೂ ಅಂಧಕಾರದಲ್ಲೇ ಇದೆ. ತಲೆ ತಲಾಂತರದಿಂದ ಮಣ್ಣನ್ನೇ ನಂಬಿ ಜೀವನ ಸಾಗಿಸುತ್ತಿರುವ ಬಹುತೇಕ ಕುಂಬಾರರ ಕಥೆಯಿದು.
ಒಂದು ಮಡಕೆ ತಯಾರಿಸಲು ಕನಿಷ್ಠ 10 ದಿನ ಬೇಕು. 2 ಕೊಡ ನೀರು ಹಿಡಿಯುವ ಮಡಕೆಯ ತಯಾರಿಗೆ 4 ಕೆ.ಜಿ. ಮಣ್ಣು ಬೇಕು. ಇದು ಒಬ್ಬರೇ ಮಾಡುವ ಕೆಲಸವಲ್ಲ, ಇಡೀ ಕುಟುಂಬದವರು ಕೈಜೋಡಿಸಬೇಕಾಗುವ ಬಾಬತ್ತು. ಮೊದಲು ಮಣ್ಣನ್ನು ಜರಡಿ ಹಿಡಿಯಬೇಕು, ಬಳಿಕ ರಾಡಿ ಮಾಡಿ ಸೋಸಿ, ಕಲ್ಲಿನ ಚೂರು, ಕಸ-ಕಡ್ಡಿ ಇತ್ಯಾದಿಗಳನ್ನು ಬೇರ್ಪಡಿಸಬೇಕು.
ಇದನ್ನೂ ಓದಿ: Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ
ಅದು ಕೆಸರಾದ ನಂತರ ಬೂದಿ ಕಲೆಸಿ ಮಡಕೆ ಮಾಡಬೇಕು. ನೆರಳಲ್ಲೇ 8 ದಿನ ಒಣಗಿಸಿ, 9ನೇ ದಿನ ಬಿಸಿಲಲ್ಲಿ ಒಣಗಿಸಬೇಕು. ಬಳಿಕ ಭಟ್ಟಿಯಲ್ಲಿ ಹದವಾಗಿ ಸುಡಬೇಕು. ಆಗ ಅದು ಬಳಕೆಗೆ ಯೋಗ್ಯವಾಗುತ್ತದೆ. ಇಷ್ಟೆಲ್ಲ ಪರಿಶ್ರಮದೊಂದಿಗೆ ತಯಾರಾಗುವ ಮಡಕೆಗೆ ದಕ್ಕುವ ಬೆಲೆ ಮಾತ್ರ ಏನೇನೂ ಸಾಲದು!
ಮಡಕೆ ಮಾಡುವ ಕುಂಬಾರ ಸಮುದಾಯಕ್ಕೆ ರಾಜಧಾನಿ ಬೆಂಗಳೂರು, ಕರಾವಳಿಯ ಮಂಗಳೂರು ಭಾಗಗಳಲ್ಲಿ ‘ಕುಲಾಲ’ ಎಂದೂ, ಧಾರವಾಡ, ಬಾಗಲಕೋಟೆ ಭಾಗಗಳಲ್ಲಿ ‘ಚಕ್ರಸಾಲಿ’ ಎಂದೂ ಕರೆಯಲಾಗುತ್ತದೆ. ಗುಜರಾತ್‌ನಲ್ಲಿ ‘ಪ್ರಜಾಪತಿ’, ರಾಜಸ್ಥಾನದಲ್ಲಿ ‘ಕುಮಾರ್’ ಎಂದೂ ಹೆಸರಾಗಿ ರುವ ಈ ಸಮುದಾಯಕ್ಕೆ 17 ಉಪನಾಮಗಳಿವೆ. ಈ ಸಮುದಾಯದವರ ಸಾಕ್ಷರತೆ ಪ್ರಮಾಣ ಕೇವಲ ಶೇ.15ರಷ್ಟಿದ್ದರೆ, ನಿರುದ್ಯೋಗ ಪ್ರಮಾಣ ಶೇ.30ರಷ್ಟಿದೆ. ಶೇ.10ರಷ್ಟು ಮಂದಿ ಕೂಲಿ ಕೆಲಸ ಮಾಡಿ ಕೊಂಡು ಬದುಕುತ್ತಿದ್ದಾರೆ.
ಸರಕಾರಿ ಮತ್ತು ಅರೆ-ಸರಕಾರಿ ನೌಕರಿ ಹಿಡಿದವರು ಶೇ.2ರಷ್ಟು ಜನ ಮಾತ್ರ. ರಾಜ್ಯದೆಲ್ಲೆಡೆಯ ಭೂಪ್ರದೇಶವು ವಿಭಿನ್ನವಾಗಿರುವುದರಿಂದ, ಕುಂಬಾರಿಕೆಗೆ ಒಂದೇ ರೀತಿಯ ಮಣ್ಣು ಸಿಗುವುದು ಸವಾಲಿನ ಕೆಲಸವಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಖಾನಾಪುರ ಪ್ರದೇಶದ ಮಣ್ಣು ಜಿಗುಟಿನಿಂದ ಕೂಡಿರುವುದರಿಂದ ಕಸುಬಿಗೆ ಅದು ಯೋಗ್ಯ ಎನ್ನುವುದು ಬಹುತೇಕ ಕುಂಬಾರರ ಮಾತು.
ಹೀಗಾಗಿ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ ಪ್ರದೇಶ ಗಳ ಬಹುತೇಕ ಕುಂಬಾರರು ಖಾನಾಪುರದ ಮಣ್ಣನ್ನೇ ತರಿಸುತ್ತಾರೆ. ಆದರೆ, ಗಣಿನಿಯಮ ಗಳು ಮತ್ತು ಸಾಗಣೆ ವೆಚ್ಚದ ಕಾರಣದಿಂದಾಗಿ ಅಲ್ಲಿಂದ ಮಣ್ಣು ತರಿಸೋದು ತ್ರಾಸದಾಯಕ; ಹೀಗಾಗಿ ಕಲಬುರ್ಗಿ, ಬೀದರ್ ಪ್ರದೇಶದ ಕುಂಬಾರರು ಜಮೀನಿನ ಕರಿಮಣ್ಣು, ಕೆರೆಮಣ್ಣನ್ನು ಬಳಸುತ್ತಾರೆ.
ಕುಲಕಸುಬನ್ನೇ ಮುಂದುವರಿಸಲು ಈ ಸಮುದಾಯಕ್ಕೆ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಗಳೆರಡಕ್ಕೂ ಸಮಸ್ಯೆ ಇದೆ. ಸ್ವಂತ ಜಮೀನನ್ನೇ ಹೊಂದಿರದ ಈ ಸಮುದಾಯದವರು ಮಣ್ಣನ್ನೂ ಕೊಂಡು ತರಬೇಕು, ಬೆಲೆ ಒಂದು ಟಿಪ್ಪರ್‌ಗೆ 15 ಸಾವಿರ ರುಪಾಯಿ. ತಯಾರಿಸಿದ ಮಡಕೆ-ಕುಡಿಕೆ ಗಳನ್ನು ಸುಡಲು ಬೇಕಾದ ಕಟ್ಟಿಗೆಯನ್ನೂಕೊಳ್ಳಲೇಬೇಕು.
ಹೀಗಾಗಿ, ಎಲ್ಲ ಖರ್ಚುಗಳನ್ನು ಕಳೆದು ಇವರ ಪರಿಶ್ರಮಕ್ಕೆ ಸಿಗುವ ಪ್ರತಿಫಲವು ಪುಡಿಗಾಸಿನ ಪ್ರಮಾಣದಲ್ಲಿರುತ್ತದೆ. ಮತ್ತೊಂದೆಡೆ, ಜನರ ಬದಲಾದ ಅಭಿರುಚಿಗೆ ಅನಿವಾರ್ಯವಾಗಿ ತಲೆ ಬಾಗುವ ವ್ಯಾಪಾರಿಗಳು ಸ್ಥಳೀಯ ಕುಂಬಾರರನ್ನು ಕೈಬಿಟ್ಟು, ಹೊರರಾಜ್ಯಗಳಿಂದ ಕುಂಬಾರಿಕೆ ಉತ್ಪನ್ನಗಳನ್ನು ತರಿಸಿ ಮಾರುವುದೂ ಇದೆ. ಈ ಎಲ್ಲ ಕಾರಣಗಳಿಂದಾಗಿ ಕುಂಬಾರರು ತಮ್ಮ ಕುಲಕಸುಬಿನ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿರುವ ಕುಂಬಾರರಿಗೆ ಮಣ್ಣೇ ಬದುಕಿನ ಜೀವಾಳ. ಕುಂಬಾರಿಕೆ ಯು ಕಸುಬಷ್ಟೇ ಅಲ್ಲ, ಕಲೆಯೂ ಹೌದು. ಹೀಗಾಗಿ ಶೇ.20ರಷ್ಟು ಜನ ಈ ಕುಲಕಸುಬನ್ನೇ ನೆಚ್ಚ ಬೇಕಾಗಿದೆ. ದಸರಾ ಮುಗಿಯುತ್ತಿದ್ದಂತೆ ಹಣತೆಗಳ ತಯಾರಿಕೆಗೆ ಮುಂದಾಗುವ ಇವರು, ದೀಪಾವಳಿ ಬಳಿಕ ಮೇ ತಿಂಗಳವರೆಗೂ ಮಡಕೆ-ಕುಡಿಕೆ, ಗಡಿಗೆಗಳನ್ನು ತಯಾರಿಸುತ್ತಾರೆ. ಆದರೆ, ಮಳೆಗಾಲದ ಭರ್ತಿ 4 ತಿಂಗಳು ಇವರಿಗೆ ನಿರುದ್ಯೋಗ ಕಟ್ಟಿಟ್ಟಬುತ್ತಿ. ಅದುವೇ ವಿಷಾದದ ಸಂಗತಿ...