ಶ್ರೀದೇವಿ ವೈದ್ಯ, ಬೆಂಗಳೂರು
ಈ ಸಲ ಜ್ಯೇಷ್ಠ ಮಾಸ ಅಧಿಕ ಆಗಿ ಬಂದದ, ಎಲ್ಲ ಕಡೆ ಅಧಿಕ ಮಾಸ ಅಗದಿ ಸಂಭ್ರಮ ದಿಂದ ನಡದದ, ಯಾವ ಮಾಸ ಅಧಿಕ ಬಂದ್ರೂನು ನಮಗ ಸಂಭ್ರಮನ ಆ ಮಾತ ಬ್ಯಾರೆ! ಮಂದಿ ತಮ್ಮ ಕೈಲಾದ ದಾನ, ಧರ್ಮ, ಪೂಜೆ ಪುನಸ್ಕಾರ ಮಾಡ್ತಾರ. ಅದರಾಗ ನಮ್ಮ ಮಂದಿ 33 ಅನಾರಸ ದಾನ ಕೊಟ್ಟರ ಶ್ರೇಷ್ಠ ಅಂತ ನಂಬ್ತಾರ ಅದ್ರಾಗ ಅಳಿಯನಿಗೆ ಕೊಟ್ಟರ ಇನ್ನೂ ಶ್ರೇಷ್ಠ ಅಂತ.
33 ಕೊಡಬೇಕು 2 ಹೆಚ್ಚಿಸಿ ಕೊಡಬೇಕು ಅಂತ ತಿಳಿದವರು ಹೇಳ್ತಾರ. ಹಿಂಗಾಗಿ ಒಟ್ಟು 35 ಅನಾರಸ ದಾನ ಕೊಡೋ ಪದ್ಧತಿ ನಡೆದು ಬಂದದ.
ಹೋದ ಸಲ ಅಧಿಕ ಮಾಸದಾಗ ನಮ್ಮ ಮನಿಯವರಿಗೆ ಭಾಳ ಮಂದಿ ಅನಾರಸ ದಾನ ಕೊಟ್ಟು ಕೊಟ್ಟು , ಅವರಿಗೆ ‘ಅನಾರಸ’ ಅಂದ್ರ ಹೆದರೋ ಹಂಗ ಆಗಿಬಿಟ್ಟದ ರೀ ಪಾಪ!
ಅದೇನಾತು ಅಂದ್ರ ನಮ್ಮ ಅಮ್ಮ 35 ಅನಾರಸ ಅಳಿಯಂದಿರಿಗೆ ದಾನ ಕೊಟ್ಟಳು, ಅವು ಇನ್ನೂ ಡಬ್ಬಿ ತುಂಬ ಹಂಗ ಅವ, ನಮ್ಮ ಸಣ್ಣ ಮೌಂಶಿಗೆ ಹೆಣ್ಣುಮಕ್ಕಳಿಲ್ಲ ಹಿಂಗಾಗಿ ಆಕೀನೂ ಇವರಿಗೆ ಅಳಿಯ ಅಂತ ದಾನ ಕೊಟ್ಟಳು. ಹಿಂಗಾಗಿ 70 ಅನಾರಸ ಆದವು. ನಮ್ಮ ಮನೆಯವರು ಆ ಅನಾರಸ ನೋಡಿನ ಸುಸ್ತಾಗಿ ಬಿಟ್ರು. ಮುಂದ ಒಂದೆರಡು ದಿನ ಆಗಿದೆ ನಮ್ಮ ಸ್ವಾದರತ್ತಿ ಫೋನ್ ಮಾಡಿದ್ರು ನಿಮ್ಮ ಮನೆ ಅವರಿಗೆ ‘ಅಳಿಯ’ ಅಂತ ದಾನ ಕೊಡ್ತೀನಿ ನನಗರೇ ಬರೇ ಗಂಡು ಹುಡುಗರು ಅವ, ನಿನಗ ನಾ ನನ್ನ ಮಗಳ ಅಂತ ತಿಳಕೊಂಡೆನಿ ಅಂತ!
ಇದನ್ನೂ ಓದಿ: Piyush Goel Column: ಒಮಾನ್ ಜತೆ ಹೊಸ ಒಪ್ಪಂದ: ಕೊಲ್ಲಿಯ ಮಹಾದ್ವಾರ
ನನಗ ಏನ ಹೇಳಬೇಕೋ ತಿಳಿಯವಲ್ತು ನಾ ‘ನಿಮಗ ಮಗಳು ಅವರು ಅಳಿಯಾನ ಖರೇ ಆದ್ರ ಅನಾರಸ ಕೊಡಬೇಡ್ರಿ’ ಅಂತ ಹೇಳಿದೆ. ಅಯ್ಯ ಮಾರಾಳ, ಮೂರು ಮೂರು ದಿನ ಅಕ್ಕಿ ತೊಳದ ಕೊಲ್ಹಾಪುರದ ಛೋಲೋ ಬೆಲ್ಲದ ಜೋಡಿ ಮನಿ ಒಳ್ಳಾಗ ಕುಟ್ಟಿ, ಘಮ ಘಮ ಅನ್ನೊ ಮನಿ ತುಪ್ಪದಾಗಿ ಕರೆದೇನಿ ಬಾಯಾಗ ಇಟ್ರ ಕರಗತಾವ ಸುಮ್ಮನೇ ಬಂದು ತಗೊಂಡು ಹೋಗ್ರೀ ಅಂತ ಜೋರು ಮಾಡಿದ್ರು. ನಾ ಮತ್ತ ಇವರಿಗೆ ವರಾತ ಶುರು ಮಾಡಿದೆ ನಮ್ಮ ಅತ್ಯಾ ನಿಮಗೆ ‘ಅಳಿಯ’ ಅಂತ ದಾನ ಕೊಡ್ತಾರ ಅಂತ, ಅವರು ಅನಾರಸ ಆದ್ರ ನಾ ಬರಂಗಿಲ್ಲ ಅಂತ ರಗಳಿ ತಕ್ಕೊಂಡು ಕೂತ್ರು.. ಅಯ್ಯೋ ಅವರನ್ನ ರಮಿಸಿ, ಮಸ್ಕಾ ಹಚ್ಚಿ ಒಟ್ಟ ನಮ್ಮ ಅತ್ಯಾ ಮನಿಗೆ ಹೋಗಿ ಅನಾರಸದ ದಾನ ಇಸ್ಕೊಂಡು ಬರೋದ್ರಾಗ ನಾ ಕಲತ ವಿದ್ಯಾ ನೈವೇದ್ಯ ಆಗಿ ಹೋಗಿತ್ತು.
ಮುಂದ ಹಂಗ ಒಂದೆರಡು ದಿನ ಆಗೇದ ನಮ್ಮ ನಾದಿನಿ ಬಂದು ತಮ್ಮ ಅಣ್ಣಂಗ ಅಂತ ಅದ ಆ ಅನರಸನ ದಾನ ಕೊಟ್ಟು ಹೋದಳು. ಹಿಂಗಾಗಿ ಆ ಅನಾರಸದ ಸಂಖ್ಯೆ 140 ಆಯ್ತು. ಇನ್ನು 4 ಡಬ್ಬಿ ತುಂಬ ಅನಾರಸ ಕುತಾವ. ಅಡಿಗೆ ಮನಿ ತುಂಬ ಘಮ್ಮಂತ ಅನಾ ರಸದ ವಾಸನೆ. ಇಷ್ಟರ ನಡುವೆ ನಮ್ಮ ಗೆಳತಿ ಸುಮಾ ಅವರ ತಮ್ಮಗ ಹೈದರಾಬಾದ್ ಟ್ರಾನ್ಸಫರ್ ಆಗೇದ ಅಂತ ಹೇಳಿ ಅಲ್ಲಿ ತನಕ ಹೋಗಿ ಏನ ಕೊಡೋದು ನಿಮ್ಮ ಮನಿಯ ವರಿಗೆ ಕೊಡ್ತೀನಿ ಅಂದ್ಲು.. ನನಗ ನಿಮ್ಮ ಮನಿಯವರು ಅಣ್ಣ ಇದ್ದಂಗ ಅನಕೋತ. ನನಗ ಏನ ಹೇಳಲಿ ಏನ ಬಿಡಲಿ ಅನ್ನೋ ಹಂಗ ಆತು. ನಮ್ಮ ಮನೆಯವರಿಗೆ ಹೇಳಿದೆ ಹಿಂಗ್ಹಿಂಗ ಸುಮಾ ಅವರ ತಮ್ಮಗ ಟ್ರಾನ್ಸಫರ್ ಆಗೇದ ಅಂತ, ಅದಕ್ಕ ಅಕೀನೂ ನಿಮಗ ಅಧಿಕ ಮಾಸದ ಬಾಗಿನ ತಂದ ಕೊಡತಾಳ ಅಂತ, ಇನ್ನೂ ನಾ ಹೇಳೋದ ಮುಗದಿಲ್ಲ ಅನಾರಸ ಕೊಡತೇನಿ ಅಂದ್ರ ಸ್ವಚ್ಛ ಬ್ಯಾಡ ಅಂತ ಹೇಳು ಅಂತ ಜೋರಾಗಿ ಒದರಾಡ್ಲಿಕ್ಕೆ ಶುರು ಮಾಡಿದ್ರು. ಇವರದೊಳ್ಳೆ ಆತು, ದಾನ ಕೊಟ್ಟ ಎತ್ತಿನ ಹಲ್ಲು ಎಣಿಸಿದರು ಅಂತ ಏನೋ ಪಾಪ ಅಂತ ತಂದು ದಾನ ಕೊಟ್ರ ಯಾಕೋ ಅತೀನ ಉರಿಲಿಕ್ಕೆ ಹತ್ಯಾರ ಅನಸ್ತ ನನಗ!
ಒಂದಿನ ಹಂಗೂ ಹಿಂಗೂ ಮುಂದ ಹಾಕಿದೆ ಆದ್ರ ಅಕಿ ನನ್ನ ಗೆಳತಿ ವಾಟ್ಸಾಪ್ ಮ್ಯಾಲೆ ವಾಟ್ಸಾಪ್ ಮೆಸೇಜು ಮಾಡಕೋತ ಕುತ್ಲು ಯಾವಾಗ ಬರ್ತಿ, ನೀವು ಬರ್ತಿರೋ ನಾವ ಬರೋಣೋ, ಹುಣ್ಣಿಮೆಯ ಒಳಗ ಕೊಡಬೇಕು ಅಂತ! ಈ ನನ್ನ ಗಂಡ ನೋಡಿದ್ರ ಇನ್ನೊಬ್ಬರು ಯಾರರೇ ಅನಾರಸ ಕೊಡ್ತೀನಿ ಅಂದ್ರೆ ನಾ ಮನೀಗ ಬರುದಿಲ್ಲ ಅಧಿಕ ಮಾಸ ಮುಗಿಯೋ ತನ ಅಂತ ರಾದ್ಧಾಂತ ಶುರು ಮಾಡಿಕೊಂಡ್ರು. ಆ 140 ಅನಾರಸದಾಗ ಇವರೇನ ಒಂದು ತಿಂದಿರಲಿಲ್ಲ, ಎಲ್ಲ ನಾನ ಮುಂಜಾನೆ ಒಂದು, ಮಧ್ಯಾಹ್ನ ಒಂದು, ಸಂಜಿಕೆ ಒಂದು, ರಾತ್ರಿ ಒಂದು ಅನಕೋತ ಒಂದಿಪ್ಪತ್ತು ತಿಂದಿದ್ದೆ.
ಒಂದು ದೊಡ್ಡ ಡಬ್ಬಿಗೆ ಹಾಕಿ ಅವರ ಆಫೀಸ್‌ಗೂ ಕಳಿಸಿದ್ದೆ ಅಂದು ಇಪ್ಪತ್ತು ಖರ್ಚಾ ಗಿದ್ವು. ಇನ್ನು ಒನ್ನೂರು ಉಳಕೊಂಡಿದ್ವು. ಈ ನನ್ನ ಮಕ್ಕಳು ಒಂದೇ ಒಂದು ಅನಾರಸ ತಿನ್ನಲಿಲ್ಲ. ಈಕಿ ನನ್ನ ಗೆಳತಿ ದಿನಾ ಮುಂಜಾನೆ, ಮಧ್ಯಾಹ್ನ, ರಾತ್ರಿ ಮೆಸೇಜ್ ಮ್ಯಾಲೆ ಹಾಕ್ಲಿಕತ್ಲು ಯಾವಾಗ ಬರ್ಲಿ ಅಂತ, ಅಕಿಗೆ ಹಂಗರ ಡಬ್ಬ್ಯಾ ಮುಚ್ಚಿ ಕೊಡವಾ ಅಂದೆ ಹೂಂ ಅಂದ್ಲು, ನಾ ಇವರಿಗೆ ಮತ್ತ ಶುರು ಹಚ್ಕೊಂಡೆ ಇದೊಂದು ಸಲ ಇಸ್ಕೊಳ್ರೀ ಅಂತ ಅನಾರಸ ಅಂತಂದ್ರ ನಾ ಜಪ್ಪಯ್ಯ ಅಂದ್ರು ಇಸ್ಕೊಳೋದಿಲ್ಲ ಅಂತ ಜೋರಾಗಿ ಒದರಾಡ್ಲಿಕ್ಕೆ ಶುರು ಮಾಡಿದ್ರು. ಹೂಂ ಆತ ತೋಗೋರಿ ಅಕಿಗೆ ಅತಿರಸ ಮಾಡ್ಕೊಂಬಾವಾ ಅಂತೇನಿ ಅಂತ ಸಮಾಧಾನ ಮಾಡಿದೆ.
ಅಕಿಗೂ ತಗೊಂಡು ಬಾ ಅಂತ ಹೇಳಿದೆ. ಅಕಿ ನಮ್ಮ ಗೆಳತಿ ಸುಮೀ ಇದರ ಜೋಡಿ ಬಂದಿಷ್ಟೂ ಮಸ್ತ ಪೈಕಿ ಚಕ್ಲಿ ಚೂಡಾ ತಂದು ಕೊಟ್ಟಳು. ಒಂದು ಸ್ವಲ್ಪ ಮಾರಿ ಹಿಗ್ಗಿಸಿದ್ರು. ಅಕಿ ಅತಿರಸ ಅತಿರಸ ಅನಕೋತ ಅನಾರಸನೆ ಕೊಟ್ಟು ಹೋದಳು.
ಅತಿರಸ, ಅನಾರಸ, ಅಪೂಪ ಎಲ್ಲ ಒಂದ ....ಆ ಅನಾರಸನದ ಕೌಂಟು 135 ಆಯ್ತು. ಮತ್ತೆ ಒಂದೆರಡು ಸಲ ಆಫೀಸ್‌ಗೆ ಒಂದಿಷ್ಟೂ ಕೊಟ್ಟು ಕಳಿಸಿದೆ. ಕೆಲಸದಕಿಗೂ ಒಂದಿಷ್ಟೂ ಕೊಟ್ಟೆ. ಏನ ಜಿಗದಾಡಿದ್ರುನೂ ಇನ್ನೂ 85-90 ಅನಾರಸ ಡಬ್ಬ್ಯಾಗ ಹಂಗ ಕುಲು ಕುಲು ಅಂತ ನನ್ನ ನೋಡಿ ನೋಡಿ ನಕ್ಕಂಗ ಆಗ್ಲಿಕ್ಕತ್ತಿತ್ತು. ನಾನು ಅದ್ರಾಗಿಂದನ ನಮ್ಮ ತಮ್ಮಗೆ ಕೊಟ್ರಾತು ಅನ್ಕೊಂಡೆ, ಅಂವಾ ನಮ್ಮ ಅತ್ತಿ ಅನಾರಸನ ದಾನ ಕೊಟ್ಟಾರ, ನೀನು ಅವನ್ನ ಕೊಡೋದಿದ್ರ ಕೊಡಬ್ಯಾಡ ಅಂತ ಅಗದೀ ಸ್ಪಷ್ಟ ಆಗಿ ಹೇಳಿದಾ.. ಹಿಂಗಾಗಿ ಅವಂಗ ಸೇರತಾವ ಅಂತ ಶೇಂಗಾ ಉಂಡಿ ಮಾಡಿ ಕೊಟ್ಟೆ. ಅವಂಗ ಆ ಶೇಂಗಾ ಉಂಡಿ ದಾನ ಅಂತ ಕೊಟ್ಟೆ ನೋಡ್ರಿ ನಮ್ಮ ಅನಾರಸದ ಜಗಳ ತಾರಕಕ್ಕ ಹೋತು, ಮನಿ ಮಂದಿ ಎಲ್ಲರೂ ಕೂಡಿ ಅನಾರಸ ಶ್ರೇಷ್ಠ, ಅನಾರಸ ಶ್ರೇಷ್ಠ, ಅತಿರಸ ಅನರಸ ಅನಕೋತ ನನಗೆ ಯಾಕ ಕೊಟ್ರಿ ಅಂತ. ನನಗೂ ಏನ ಸೇರತದ ಅದನ್ನ ಹೇಳಿ ಮಾಡಸಬೇಕಾಗಿತ್ತು ಅಂತ!
ಅದಕ್ಕ ಈ ವರ್ಷ ಒಣ ಈ ಝಂಝಾಟ ಬ್ಯಾಡ ಅಂತ ಮದ್ಲ ಎಲ್ಲರಿಗೂ ಹೇಳೇನಿ ಅತಿರಸ, ಅನಾರಸ, ಅಪೂಪ ಅನ್ಕೋತ ಅದನ್ನ ಕೊಡಬ್ಯಾಡ್ರೀ ಹೆಂಗೂ ಮಾವಿನ ಹಣ್ಣಿನ ಸೀಸನ್ ಅದ ಹಣ್ಣು ಕೊಡ್ರಿ, ಮಾವಿನ ಹಣ್ಣಿನ ಕೊಬ್ಬರಿ ವಡಿ ಕೊಡ್ರಿ, ಶೇಂಗಾ ಉಂಡಿ, ಬೇಸನ್ ಉಂಡಿ ಏನರೇ ಬ್ಯಾರೆ ಕೊಡ್ರಿ ಅಕಸ್ಮಾತ್ ಅನಾರಸನ ಕೊಡೋದಿದ್ರ ಬ್ಯಾರೆದವ್ರಿಗೆ ಕೊಡ್ರಿ ಅಂತ. ನಾಳೆ ನಮ್ಮ ಅಮ್ಮ ಬರ್ಲಿಕ್ಕತ್ತಾಳ ಅಧಿಕ ಮಾಸದ ಬಾಗಿನ ತೊಗೊಂಡು, ಏನ ತರ್ತಾಳ ಅಂತ ನನಗೂ ಗೊತ್ತಿಲ್ಲ!