ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು.

ಹಿಂದಿರುಗಿ ನೋಡಿದಾಗ

ಒಬ್ಬ ಮನುಷ್ಯನು ಮನಸ್ಸು ಮಾಡಿದರೆ ಇತಿಹಾಸವನ್ನು ಬದಲಾಯಿಸಬಹುದು. ಲ್ಯೂವೆನ್ ಹಾಕ್ ತನ್ನ ಸೂಕ್ಷ್ಮದರ್ಶಕದಿಂದ ಸೂಕ್ಷ್ಮಜೀವಿಗಳ ಲೋಕವನ್ನು ಅನಾವರಣ ಮಾಡಿದ. ಫ್ಲೆಮಿಂಗ್ ತನ್ನ ಸೂಕ್ಷ್ಮ ಅವಲೋಕನ ಸಾಮರ್ಥ್ಯದಿಂದ ಪ್ರತಿ ಜೈವಿಕಗಳನ್ನು ಸೃಜಿಸಿದ.

ಜೆನರ್, ತನ್ನ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತಂದು ಲಸಿಕೆಯೆಂಬ ಬ್ರಹ್ಮಾಸ್ತ್ರವನ್ನು ಮನುಕುಲಕ್ಕೆ ನೀಡಿದ. ಹೀಗೆ ನಮ್ಮ ಇತಿಹಾಸ, ವಿಜ್ಞಾನ, ಸಾಹಿತ್ಯ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಜ್ಞಾನಕ್ಕೆ ಮಹಾತಿರುವುಗಳನ್ನು ನೀಡಿದ ಅನೇಕ ಮಹಾನುಭಾವರಿದ್ದಾರೆ. ಅಂಥವರಲ್ಲಿ ಒಬ್ಬ ಫೀನಿಯಸ್ ಪಿ.ಗೇಜ್ (1823-1869) ಎಂಬ ಕಾರ್ಮಿಕ. ಇವನು ಮನುಷ್ಯನ ಮಿದುಳಿನ ರಚನೆ ಮತ್ತು ಕಾರ್ಯವನ್ನು ತಿಳಿಯಲು ನೆರವಾಗುವುದರ ಜತೆಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲು ಕಾರಣನಾದ.

ಸಿಡಿಮದ್ದು

ಸೆಪ್ಟೆಂಬರ್ ೧೩, 1848. ಅಮೆರಿಕದ ನ್ಯೂಇಂಗ್ಲಂಡ್ ಜಿಲ್ಲೆಯ ವೆರ್ಮೌಂಟ್ ನಗರದ ಹೊರ ಅಂಚಿನದಲ್ಲಿದ್ದ ಗ್ರಾಮಾಂತರ ಪ್ರದೇಶ. ರೈಲು ರಸ್ತೆಯನ್ನು ನಿರ್ಮಿಸುತ್ತಿದ್ದರು. ಫೀನಿಯಸ್ ಗೇಜ್ ಎಂಬ ಇಪ್ಪತ್ತರ ವಯಸ್ಸಿನ ತರುಣ ಒಬ್ಬ ಸಮರ್ಥ ಮುಖ್ಯ ಕೆಲಸಗಾರನಾಗಿದ್ದ (ಫೈರ್‌ಮನ್), ಜನಪ್ರೀತಿಯನ್ನು ಗಳಿಸಿದ್ದ.

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿ ನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು. ಆನಂತರ ಆ ಫ್ಯೂಸ್, ಸಿಡಿಮದ್ದು ಮತ್ತು ಗುಣಿಯ ಮೇಲೆ ಮರಳು ಅಥವಾ ಜೇಡಿಮಣ್ಣನ್ನು ಸುರಿದು ಒಟ್ಟಾಗಿ ಜಡಿಯಬೇಕಿತ್ತು.

ಹಾಗೆ ಜಡಿಯಲು ೩’೭" ಉದ್ದದ ಕಬ್ಬಿಣದ ಸರಳನ್ನು ಬಳಸುತ್ತಿದ್ದ. ಇದರ ವ್ಯಾಸ 1.25". ತೂಕ ಸುಮಾರು ೬ ಕೆಜಿ. ಆನಂತರ ಫ್ಯೂಸಿಗೆ ಬೆಂಕಿಯನ್ನು ಹೊತ್ತಿಸಿ ದೂರ ಹೋಗುತ್ತಿದ್ದ. ಫ್ಯೂಸ್ ಉರಿದು ಸಿಡಿಮದ್ದನ್ನು ಸ್ಫೋಟಿಸುತ್ತಿತ್ತು. ಸೆಪ್ಟೆಂಬರ್ 13ರಂದು ಗೇಜ್ ಹೀಗೆ ಒಂದು ಕುಣಿಯಲ್ಲಿ ಸಿಡಿಮದ್ದನ್ನು ತುಂಬಿದ. ಫ್ಯೂಸನ್ನು ಇಟ್ಟ. ಅದರ ಮೇಲೆ ಮರಳು ಅಥವಾ ಜೇಡಿಮಣ್ಣನ್ನು ಮೆತ್ತಿ, ಆನಂತರ ತನ್ನ ಕಬ್ಬಿಣದ ಸರಳಿನಿಂದ ಜೇಡಿಮಣ್ಣನ್ನು ಒತ್ತಾಗಿ ಕುಟ್ಟಬೇಕಿತ್ತು.

ಬಹುಶಃ ಅವನು ಜೇಡಿಮಣ್ಣನ್ನು ಮೆತ್ತದೆ, ಕಬ್ಬಿಣದ ಸರಳಿನಿಂದ ಹಾಗೆಯೇ ಒತ್ತಾಗಿ ಕುಟ್ಟಲು ಪ್ರಯತ್ನಿಸಿದನೆಂದು ಕಾಣುತ್ತದೆ. ಕಬ್ಬಿಣದ ಸರಳು ಅಕಸ್ಮಾತ್ ಬಂಡೆಗೆ ತಾಗಿ ಒಂದು ಕಿಡಿ ಎದ್ದಿತು. ಆ ಕಿಡಿಯು ಸಿಡಿಮದ್ದನ್ನು ಸ್ಫೋಟಿಸಿತು. ಕೂಡಲೇ ಅವನ ಕೈ ಯಲ್ಲಿದ್ದ ಕಬ್ಬಿಣದ ಸರಳು ಒಂದು ಕ್ಷಿಪಣಿಯಂತೆ ಹಾರಿತು.

ಗೇಜ್‌ನ ಎಡೆಗೆನ್ನೆಯೊಳಗೆ ನುಗ್ಗಿ, ಬಾಯನ್ನು ಪ್ರವೇಶಿಸಿ, ತಾಲನ್ನು ಭೇದಿಸಿ, ಎಡಕಣ್ಣಿನ ಹಿಂಭಾಗದ ಮೂಲಕ ಮಿದುಳಿನ ಲಲಾಟ ಹಾಲೆಯಲ್ಲಿ (ಫ್ರಾಂಟಲ್ ಲೋಬ್) ತೂರಿ, ಕಪಾಲದ ಮೂಲಕ, ತನ್ನ ಅಕ್ಷದ ಮೆಲೆ ಸುತ್ತುತ್ತಾ, ಹೊರಬಂದಿತು. ಹಲವು ಮೀಟರ್ ಮೇಲಕ್ಕೆ ಹೋಯಿತು. ಆನಂತರ ಮೀಟರುಗಳ ದೂರದಲ್ಲಿ ನೆಲಕ್ಕೆ ಬಿತ್ತು!

ಆ ಸರಳು ರಕ್ತಸಿಕ್ತವಾಗಿತ್ತು ಹಾಗೂ ಅದಕ್ಕೆ ಮಿದುಳಿನ ತುಣುಕುಗಳು ಮೆತ್ತಿಕೊಂಡಿದ್ದವು. ಸಿಡಿಮದ್ದು ಸ್ಫೋಟಿಸಿದಾಗ, ಆತನ ಕಣ್ಣಿನ ಮುಂದೆ ಪ್ರಕಾಶಮಾನವಾದ ಬೆಳಕು ಕಂಡಿತು. ಹಠಾತ್ತನೆ ಹಿಂದಕ್ಕೆ ಯಾರೋ ದೂಡಿದಂತೆ ಆದಾಗ, ಸಂಪೂರ್ಣ ಗೊಂದಲವುಂಟಾ ಯಿತು. ಶಾಖ ಹಾಗೂ ಶಬ್ದಗಳ ಜತೆಯಲ್ಲಿ ಧಡ್ ಎಂದು ನೆಲಕ್ಕೆ ಬಿದ್ದ. ಪ್ರಜ್ಞೆಯೇನೂ ಹೋಗಲಿಲ್ಲ. ನೋವೂ ಆಗಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲಿ ವಿಪರೀತ ನೋವು ಕಾಣಿಸಿ ಕೊಂಡಿತು.

ಏಕೆಂದರೆ ಮಿದುಳಿಗೆ ನೋವು ಗ್ರಾಹಕಗಳು (ಪೇಯ್ನ್ ರೆಸೆಪ್ಟಾರ್) ಇರುವುದಿಲ್ಲ. ಹಾಗಾಗಿ ಮಿದುಳಿಗೆ ಪೆಟ್ಟಾದರೆ ನೋವಾಗುವುದಿಲ್ಲ. ಆದರೆ ಚರ್ಮ, ಸ್ನಾಯು, ಮೂಳೆಗಳಲ್ಲಿ ನೋವು ಗ್ರಾಹಕಗಳು ಇರುವ ಕಾರಣ ನೋವು ತಿಳಿಯುತ್ತದೆ. ವಾಂತಿಯಾಗುವಂಥ ಅನುಭವವಾಯಿತು.

ಅವೈಜ್ಞಾನಿಕ ಚಿಕಿತ್ಸೆ

1848. ಅರಿವಳಿಕೆಯ ಆವಿಷ್ಕಾರವಾಗಿರಲಿಲ್ಲ. ನಂಜುರೋಧಕ ದ್ರಾವಣಗಳಿರಲಿಲ್ಲ. ಕೈಗವಸುಗಳನ್ನು ಯಾರೂ ಕಂಡುಹಿಡಿದಿರಲಿಲ್ಲ. ಪ್ರತಿಜೈವಿಕ ಔಷಧಗಳನ್ನು 1928ರಲ್ಲಿ ಫ್ಲೆಮಿಂಗ್ ಕಂಡುಹಿಡಿದ. ಒಂದು ಕುದುರೆ ಗಾಡಿ ಬಂದಿತು. ಗಾಡಿಯಿಂದ ಆ ಗ್ರಾಮಾಂತರ ಪ್ರದೇಶದಲ್ಲಿದ್ದ ಡಾ.ಜಾನ್ ಮಾರ್ಟಿನ್ ಹಾರ್ಲೊ (1819-1907) ಎಂಬ ವೈದ್ಯನು ಬಂದ. “ಓಹ್ ಡಾಕ್ಟ್ರೆ ಬನ್ನಿ!... ಇಲ್ಲಿ ನಿಮಗೊಂದಿಷ್ಟು ಕೆಲಸವಿದೆ" ಎಂದು ಗೇಜ್ ಸ್ವಾಗತಿಸಿದ.

ಆ ಗಾಡಿಯಲ್ಲಿಯೇ ನೆಟ್ಟಗೆ ಕುಳಿತುಕೊಂಡ. ವೈದ್ಯರು ಅವನನ್ನು ತಮ್ಮ ಚಿಕಿತ್ಸಾಲಯಕ್ಕೆ ಕರೆದೊಯ್ದರು. ಅಲ್ಲಿ ಗಾಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆಳವಾದ ಗಾಯ. ಚರ್ಮ, ಮಾಂಸ ಮತ್ತು ಕೂದಲು ಸುಟ್ಟ ವಾಸನೆ. ಗಾಯದ ತುಂಬಾ ಮೂಳೆಯ ತುಣುಕು ಗಳು. ಇಕ್ಕಳದ ನೆರವಿನಿಂದ ಒಂದೊಂದೇ ಮೂಳೆಯನ್ನು ಹೆಕ್ಕತೊಡಗಿದರು.

ಮೇಲೆ ಕಾಣುತ್ತಿದ್ದ ಚೂರುಗಳನ್ನು ತೆಗೆದ ಮೇಲೆ, ಗಾಯದ ಒಳಗೂ ಮೂಳೆಗಳು ಇರಬ ಹುದು ಎನಿಸಿತು. ತಮ್ಮ ಬರೀ ಬೆರಳನ್ನು (ಕೈಗವಸನ್ನು ಕಂಡುಹಿಡಿದಿರಲಿಲ್ಲ) ಗಾಯದ ಒಳಗೆ ತೂರಿಸಿ, ಸಾಧ್ಯವಾದಷ್ಟು ಚೂರುಗಳನ್ನು ಹೊರತೆಗೆದರು. ಆಗ ಗೇಜ್ ನೋವಿನಿಂದ ಚಡಪಡಿಸುತ್ತಿದ್ದ. ಒಂದು ಸಾಲ ವಾಂತಿಯನ್ನು ಮಾಡಿಕೊಂಡ. ಕುಳಿತಲ್ಲಿಯೇ ಭ್ರಮಾ ಧೀನನಾಗಿ ಕನವರಿಸಲಾರಂಬಿಸಿದ. ಆದರೆ ಅವನ ಪ್ರeಯು ಮಾತ್ರ ಪೂರ್ತಿ ಹೋಗಲಿಲ್ಲ. ವೈದ್ಯರು ಗಾಯವನ್ನು ಸ್ವಚ್ಛಗೊಳಿಸಿ, ಪಟ್ಟಿಯನ್ನು ಕಟ್ಟಿದರು.

ಚೇತರಿಕೆ

ಗೇಜ್ ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡ. ಗಾಯದಲ್ಲಿ ಸೋಂಕು ತಲೆದೋರಿತ್ತು. ಹಾಗಾಗಿ ಗಾಯವು ಗುಣವಾಗಲು ಹೆಚ್ಚು ಸಮಯವನ್ನು ತೆಗೆದುಕೊಂಡಿತ್ತು. ಅದನ್ನು ಬಿಟ್ಟರೆ ಮತ್ತೇನೂ ತೊಂದರೆಯಿರಲಿಲ್ಲ. ಸೋಂಕು ಹತೋಟಿಗೆ ಬಂದ ತಿಂಗಳ ಹೊತ್ತಿಗೆ ಅವನು ಎದ್ದು ನಿಲ್ಲುತ್ತಿದ್ದ. ನಡೆಯುತ್ತಿದ್ದ. ಮಾತನಾಡುತ್ತಿದ್ದ. ಅವನ ನೆನಪು ಚೆನ್ನಾಗಿತ್ತು. ಮಾತು ಸರಾಗವಾಗಿತ್ತು. ಕೈಕಾಲುಗಳ ಚಲನೆ ಹಾಗೂ ಸಾಮಾನ್ಯ ಜ್ಞಾನವು ಸಮಗ್ರ ವಾಗಿತ್ತು. ಆದರೆ, ಅವನು ಆಸ್ಪತ್ರೆಯನ್ನು ಬಿಟ್ಟು ಮನೆಗೆ ಬಂದ ಮೇಲೆ, ಮನೆಯವರು ‘ಇವನು ನಮ್ಮ ಗೇಜ್ ಅಲ್ಲ’ ಎಂದು ದೂರಿದರು.

ಹಾರ್ಲೋ, ಮೊದಲ ಬಾರಿಗೆ ಗೇಜ್ ಮಾತನಾಡಿದ ಕ್ಷಣದಿಂದ ಹಿಡಿದು, ಅವನ ಚಿಕಿತ್ಸೆಯು ಮುಗಿಯುವವರಿಗೂ ಅವನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ವರ್ತನೆಗಳನ್ನು ಬಹಳ ನಿಕಟವಾಗಿ ಅಧ್ಯಯನ ಮಾಡಿದ್ದರು. ಎಲ್ಲವನ್ನೂ ಕ್ರಮಬದ್ಧವಾಗಿ ದಾಖಲಿಸಿ ದ್ದರು. ಗೇಜ್, ಮೂಲತಃ ಸಭ್ಯ, ಪರಿಣತ ಹಾಗೂ ವಿಶ್ವಾಸಾರ್ಹ ಮುಖ್ಯ ಕೆಲಸಗಾರನಾಗಿದ್ದ. ಅಂಥವನಲ್ಲಿ ಅನೇಕ ಹೊಸ ಲಕ್ಷಣಗಳು ಕಂಡುಬರಲಾರಂಭಿಸಿದವು.

ಅವೆಂದರೆ:

ವ್ಯಕ್ತಿಗೆ ಅಸಹ್ಯವೆನಿಸುವ ಅಶ್ಲೀಲ, ಅಸಂಬದ್ಧ ಹಾಗೂ ಅಸಭ್ಯ ಭಾಷೆಯನ್ನು ಬಳಸುತ್ತಿದ್ದ.

ತಾಳ್ಮೆಯನ್ನು ಕಳೆದುಕೊಂಡಿದ್ದ. ಸಣ್ಣ ಪುಟ್ಟ ವಿಚಾರಕ್ಕೆ ಕೂಗಾಡುತ್ತಿದ್ದ. ಕಿರಿಕಿರಿಯ ಮನುಷ್ಯನಾಗಿ ಬದಲಾಗಿದ್ದ.

ಅಸಹನೆಯು ಅವನಲ್ಲಿ ಮನೆಮಾಡಿತ್ತು. ತರ್ಕಸಾಮರ್ಥ್ಯವನ್ನು ಕಳೆದುಕೊಂಡವಂತೆ ಅವನು ತೀರಾ ಹಠಮಾರಿಯಾಗಿ ಬದಲಾಗಿದ್ದ.

ಅವನ ಸಾಮಾಜಿಕ ವರ್ತನೆ ಹಾಗೂ ನೈತಿಕ ಬದ್ಧತೆಗಳು ಮರೆಯಾಗಿದ್ದವು.

ಯೋಜನಾ ಹಾಗೂ ಯೋಚನಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದ. ಹಾಗಾಗಿ ನಿಗದಿತ ಕೆಲಸವನ್ನು ಸಕಾಲದಲ್ಲಿ ಮುಗಿಸಬಲ್ಲ ಎಂಬ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದ.

ಹೊಸಬದುಕು

‘ಇವನು ನಮ್ಮ ಗೇಜ್ ಅಲ್ಲ’ ಎಂದು ಮನೆಮಂದಿಯು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವಂತೆಯೇ ವಿಜ್ಞಾನಿಗಳ ವಲಯದಲ್ಲಿ ಅತೀವ ಕುತೂಹಲವು ಕೆರಳಿತು. ನಂತರದ ದಾಖಲೆಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಜನಪ್ರಿಯ ಸಾಹಿತ್ಯವಂತೂ ‘ಗೇಜ್ ಓರ್ವ ಮಹಾಕುಡುಕ, ಸಂಪೂರ್ಣ ಮನೋರೋಗಿ, ಅಲೆಮಾರಿ, ಕುಡಿದಾಗ ಬಾಯಿಗೆ ಬಂದ ಹಾಗೆ ಮಾತನಾಡುವ ಬೇಜವಾಬ್ದಾರಿ ಮನುಷ್ಯ’ ಎಂದೇ ವರ್ಣಿಸಿದವು. ಆದರೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಗೇಜ್ ನಿಗೆ ಸಂಬಂಧಿಸಿದ ದಾಖಲೆಗಳನ್ನು ಮರುಪರಿಶೀಲಿಸಿದರು. ಆಗ ಬಹಳ ಭಿನ್ನವಾದ ಚಿತ್ರವು ದೊರೆಯಿತು.

ಗೇಜ್, ಅಮೆರಿಕವನ್ನು ಬಿಟ್ಟು ಚಿಲಿಯ ವಾಲ್ಪರೈಸೋ ಎಂಬಲ್ಲಿಗೆ ಹೋದ. ಅಲ್ಲಿ ಸುದೀರ್ಘ ಪ್ರಯಾಣದ ಕುದುರೆಗಾಡಿಗಳ ಚಾಲಕನಾದ. ಗಾಡಿಗೆ ೪-೬ ಕುದುರೆಗಳನ್ನು ಕಟ್ಟಿರುತ್ತಿದ್ದರು. ದಿನಕ್ಕೆ ನೂರಾರು ಮೈಲಿ ಸಂಚಾರವನ್ನು ಮಾಡಬೇಕಾಗಿತ್ತು. ಹಲವು ದಿನಗಳ ಸಂಚಾರದ ನಂತರ ಗಮ್ಯಸ್ಥಳವನ್ನು ತಲುಪುತ್ತಿದ್ದರು.

ಬೆಟ್ಟ, ಗುಡ್ಡ, ಕಣಿವೆ, ಕಾಡುಪ್ರಾಣಿಗಳ ಮಾರ್ಗದಲ್ಲಿ ಸಂಚರಿಸುವುದು ಹೇಳಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಇಂಥ ಕೆಲಸವನ್ನು ಸುಮಾರು ೬ ವರ್ಷಗಳ ಕಾಲ ನಡೆಸಿದ ಎಂದರೆ, ಆತನ ಮಿದುಳು-ಮನಸ್ಸು-ವರ್ತನೆಯು ಸಹಜವಾಗಿತ್ತು ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಅಪಘಾತವಾದ ನಂತರ ಕಂಡುಬಂದ ವರ್ತನೆಗಳು, ‘ಇವನು ನಮ್ಮ ಗೇಜ್ ಅಲ್ಲ’ ಎಂದು ಮನೆಯವರು ದೂರಬಹುದಾದ ವರ್ತನೆಗಳು ಹೇಗೆ ಬದಲಾದವು ಎನ್ನುವ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ವಿಜ್ಞಾನವು ಈಗ ಉತ್ತರ ವನ್ನು ನೀಡಿದೆ. ಅದುವೇ ನರಸುರೂಪಿಕೆ ಅಥವ ನ್ಯೂರೋಪ್ಲಾಸ್ಟಿಸಿಟಿ.

ನ್ಯೂರೋಪ್ಲಾಸ್ಟಿಸಿಟಿ

ಇದು ಮಿದುಳಿನ ಒಂದು ವಿಶೇಷ ಗುಣ. ನಮಗೆ ಒಂದು ಪುಟ್ಟ ಗಾಯವಾದರೆ, ಅದು ವಾರದಲ್ಲಿ ಗುಣವಾಗುತ್ತದೆ. ಹೆಪ್ಪಳಿಕೆಯು (ಸ್ಕ್ಯಾಬ್) ಹತ್ತು ದಿನದಲ್ಲಿ ಬಿದ್ದುಹೋಗುತ್ತದೆ. ತಿಂಗಳಾದ ಮೇಲೆ, ಗಾಯವಾದ ಗುರುತು ಲವಲೇಶವೂ ಉಳಿದಿರುವುದಿಲ್ಲ. ಈ ಲಕ್ಷಣವು ಮಿದುಳಿನ ನರಕೋಶಗಳಿಗೂ ಇವೆ. ಒಂದು ಸಲ ಲಕ್ವ ಹೊಡೆದು ಮಿದುಳಿನ ನರಕೋಶ ಗಳಿಗೆ ಘಾತವಾಗಿ ಅಸುನೀಗಿದಾಗ, ಅಕ್ಕಪಕ್ಕದ ನರಕೋಶಗಳು ತಮ್ಮ ಸ್ವರೂಪವನ್ನೇ ಬದಲಿಸಿ, ನಷ್ಟಕೋಶಗಳ ಕಾರ್ಯಸಾಮರ್ಥ್ಯವನ್ನು ಸರಿದೂಗಿಸಬಲ್ಲವು.

ಅಕ್ಕಪಕ್ಕದ ನರಕೋಶಗಳು ‘ರಿ-ವೈರಿಂಗ್’ ಮೂಲಕ ನಷ್ಟಕೋಶಗಳ ಕೆಲಸವನ್ನು ನಿಭಾಯಿಸಬಲ್ಲವು. ಹಾಗಾಗಿ ಲಕ್ವ ಹೊಡೆದವರು ಆತ್ಮವಿಶ್ವಾಸದಿಂದ, ವೈದ್ಯರು ಸೂಚಿ ಸಿದ ಚಿಕಿತ್ಸೆ ಹಾಗೂ ವ್ಯಾಯಾಮವನ್ನು ಪರಿಪಾಲಿಸುತ್ತಿದ್ದರೆ, ನಷ್ಟವಾದ ಸಾಮರ್ಥ್ಯ ವನ್ನು ಮರಳಿ ಪಡೆಯುವ ಸಾಧ್ಯತೆಯು ಹೆಚ್ಚಿರುತ್ತದೆ. ಗೇಜ್ ವಿಷಯದಲ್ಲಿ ಬಹುಶಃ ಇದೇ ಆಗಿರಬೇಕು ಎಂಬುದು ವಿಜ್ಞಾನಿಗಳ ಅಭಿಮತ.

1859ರಲ್ಲಿ ಗೇಜ್ ಅಮೆರಿಕಕ್ಕೆ ಹಿಂದಿರುಗಿದ. ಅವನು ಸದಾ ಆ ಕಬ್ಬಿಣದ ಸರಳನ್ನು ತನ್ನ ಜತೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ತಾನು ಎಲ್ಲಿಗೆ ಹೋದರೂ ಅದನ್ನು ಕೊಂಡೊಯ್ಯುತ್ತಿದ್ದ. ಅದರ ಜತೆಯಲ್ಲಿ ಅಸಂಖ್ಯ ಫೋಟೋಗಳನ್ನು ತೆಗೆಸಿಕೊಂಡ. ಕೆಲವು ಸಲ ಆ ಸರಳನ್ನು ಊರುಗೋಲಿನಂತೆ ಬಳಸುತ್ತಿದ್ದ. ಮಲಗುವಾಗ ಹಾಸಿಗೆಯಲ್ಲಿ ಅದನ್ನೂ ಮಲಗಿಸಿ ಕೊಳ್ಳುತ್ತಿದ್ದ.

1860ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದ. ಒಂದು ದಿನ ಇದ್ದಕ್ಕಿದ್ದ ಸೆಳವು (ಸೀಜ಼ರ್ಸ್) ಬಂದಿತು. ಸೆಳವಿಗೆ ಬಹುಶಃ ಹಿಂದೆ ಆಗಿದ್ದ ಗಾಯವೇ ಕಾರಣವಿದ್ದಿರಬಹುದು. ಸೆಳವಿನಲ್ಲಿ ಮೃತನಾದ. ಅವನ ಮನೆಯವರು ಗೇಜ್‌ನ ತಲೆಬುರುಡೆ ಹಾಗೂ ಆ ಕಬ್ಬಿಣದ ಸರಳನ್ನು ಹಾರ್ವರ್ಡ್ ವೈದ್ಯಕೀಯ ವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದರು.

ಮಿದುಳು

ಈಜಿಪ್ಷಿಯನ್ನರು ಮಿದುಳೊಂದು ‘ಕೆಲಸವಿಲ್ಲದ’ ಅಂಗ ಎಂದು ಬಗೆದರು. ಶವ ಸಂಸ್ಕಾರ ವನ್ನು ಮಾಡುವಾಗ, ಲೋಹದ ಕೊಕ್ಕೆಯನ್ನು ಮೂಗಿನ ಮೂಲಕ ತೂರಿಸಿ, ಮಿದುಳನ್ನು ಹೆರೆದು ಹೆರೆದು ಹೊರಗೆಸೆಯುತ್ತಿದ್ದರು. ಹಾಗಾಗಿ ಈಜಿಪ್ಟಿನ ಯಾವ ಮಮ್ಮಿಯ ತಲೆಯಲ್ಲೂ ಮಿದುಳಿಲ್ಲ. ಗ್ರೀಕರು ಮಿದುಳೊಂದು ‘ಹವಾನಿಯಂತ್ರಿತ’ ಅಂಗ. ದೇಹದ ಉಷ್ಣತೆಯನ್ನು ತಂಪಾಗಿಡುತ್ತದೆ ಎಂದರು. ಉಳಿದವರು ಇದೊಂದು ‘ಮಾಂಸದ ಮುದ್ದೆ’ ಎಂದು ಹಳಿದರು.

ಗೇಜ್ ಪ್ರಕರಣವು ಬೆಳಕಿಗೆ ಬರುತ್ತಿದ್ದ ಹಾಗೆ, ಮಿದುಳಿನ ರಚನೆ ಹಾಗೂ ಕಾರ್ಯದ ಬಗ್ಗೆ ಹೊಸ ಚಿಂತನೆಗಳು ಆರಂಭವಾದವು. ಅಂದಿನ ವಿಜ್ಞಾನಿಗಳಲ್ಲಿ ಎರಡು ಅಭಿಮತ ಗಳಿದ್ದವು. ಸಾಂಪ್ರದಾಯಿಕ ವಿಜ್ಞಾನಿಗಳು ಇಡೀ ಮಿದುಳು ಒಂದು ಮುದ್ದೆ, ಮನಸ್ಸು ಇಡೀ ಮಿದುಳಲ್ಲಿ ವ್ಯಾಪಿಸಿರುತ್ತದೆ ಎಂದು ಭಾವಿಸಿದರು.

ಆಧುನಿಕ ವಿಜ್ಞಾನಿಗಳು, ಮಿದುಳು ಏಕರೂಪದ ರಚನೆಯಲ್ಲ; ಇದರಲ್ಲಿ ವಿವಿಧ ಭಾಗ ಗಳಿವೆ; ಒಂದೊಂದು ಭಾಗವು ಒಂದೊಂದು ರೀತಿಯ ಕೆಲಸವನ್ನು ಮಾಡುತ್ತದೆ ಎಂದರು. ಮಿದುಳಿನ ಮುಂಭಾಗದಲ್ಲಿರುವ ಲಲಾಟಹಾಲೆಯನ್ನು ‘ಸೈಲೆಂಟ್ ಏರಿಯ’ ಎಂದು ಕರೆಯುತ್ತಿದ್ದರು. ಏಕೆಂದರೆ ಆ ಭಾಗವು ಏನು ಕೆಲಸವನ್ನು ಮಾಡುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಗೇಜ್ ಪ್ರಕರಣದಿಂದ ಲಲಾಟಹಾಲೆಯು ವ್ಯಕ್ತಿಂii ವ್ಯಕ್ತಿತ್ವ, ಸಕಾಲದಲ್ಲಿ ಸೂಕ್ತ ತೀರ್ಮಾನ ಗಳಲ್ಲಿ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸು ತ್ತದೆ ಎನ್ನುವುದು ತಿಳಿದು ಬಂದಿತು. ಗೇಜ್‌ನ ಬುದ್ಧಿವಂತಿಕೆಯು ಮೊದಲಿನ ಹಾಗೆಯೇ ಇತ್ತು. ಆದರೆ ಅವನ ವರ್ತನೆಯಲ್ಲಿ ಮಾತ್ರ ವಿಪರೀತ ವ್ಯತ್ಯಾಸಗಳು ಕಂಡುಬಂದಿದ್ದವು. ಎಂ.ಅಲ್ಲನ್ ಸ್ಟಾರ್ (1854-1932) ಮತ್ತು ವಿಲಿಯಂ ಮ್ಯಾಕ್‌ಈವನ್ (1848-1924) ಆರಂಭಿಕ ಮಿದುಳಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಗೇಜ್ ಪ್ರಕರಣವು ಪ್ರೇರಣೆಯನ್ನು ನೀಡಿತು.

ಮಿದುಳಿನ ಯಾವ ಹಾಲೆಯು ಯಾವ ಕೆಲಸವನ್ನು ಮಾಡುತ್ತದೆ, ಮಿದುಳಿನಲ್ಲಿರುವ ಗಂತಿಯನ್ನು ಇಲ್ಲವೇ ಕೀವುಗುಳ್ಳೆಯನ್ನು ಛೇದಿಸಬೇಕಾದರೆ ಯಾವ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂಬ ತಿಳಿವು ವೈದ್ಯರಿಗೆ ದೊರೆಯಿತು. ಈಗ ಮಿದುಳಿನ ಸ್ಕ್ಯಾನಿಂಗ್ ಯಂತ್ರಗಳಿರುವ ಕಾರಣ, ಶಸ್ತ್ರಚಿಕಿತ್ಸೆಯು ಸುಲಭವಾಗಿ ನಡೆಯುತ್ತಿದೆ. ಆದರೆ ನಮ್ಮೆಲ್ಲರ ಕುತೂಹಲವನ್ನು ಕೆರಳಿಸಿರುವುದು ಮಿದುಳ ಸುರೂಪಿಕೆ ಅಥವ ನ್ಯೂರೋಪ್ಲಾಸ್ಟಿಸಿಟಿ. ಅದರ ಬಗ್ಗೆ ಇಂದಿಗೂ ಅಧ್ಯಯನಗಳು ನಡೆಯುತ್ತಿವೆ.

ಡಾ.ನಾ. ಸೋಮೇಶ್ವರ

View all posts by this author