ಅಜಕ್ಕಳ ಗಿರೀಶ್ ಭಟ್
ಪೂರ್ತಿ ಹೆಸರು: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ
ಹುಟ್ಟಿದ ದಿನಾಂಕ: ೧೯೩೧, ಆಗಸ್ಟ್-೨೦
ಹುಟ್ಟೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ
ತಂದೆ: ಲಿಂಗಣ್ಣಯ್ಯ
ತಾಯಿ: ಗೌರಮ
ಆಧುನಿಕ ಕನ್ನಡ ಸಾಹಿತ್ಯದ ಮೇರುರತ್ನ ಎಸ್.ಎಲ್.ಭೈರಪ್ಪ ಅವರಿಗೆ ಇಂದು 95ನೇ ಹುಟ್ಟು ಹಬ್ಬದ ಸಂಭ್ರಮ. ಅವರ ಓದುಗ ಅಭಿಮಾನಿಗಳಿಗೂ ಇಂದು ಸಂಭ್ರಮದ ದಿನ. ಆಳವಾದ ಚಿಂತನೆ, ಸಂಶೋಧನೆ ಮತು ವಿನೂತನ ವಸ್ತು ವಿಷಯಗಳಿಂದ ಕೂಡಿದ ಅವರ ಸಾಹಿತ್ಯ ಕೃತಿಗಳನ್ನು ಓದಿದವರಿಗೆ ಭೈರಪ್ಪ, ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟ ದಾರ್ಶನಿಕನಂತೆ ಕಾಣುತ್ತಾರೆ. ಈ ಸಾಹಿತ್ಯ ರತ್ನ 100 ವಸಂತಗಳನ್ನು ದಾಟಿ ನಮ್ಮೊಂದಿ ಗಿರಲಿ ಎನ್ನುವುದು ಕನ್ನಡಿಗರೆಲ್ಲರ ಅಭಿಮಾನದ ನುಡಿ.
ಆವರಣದಾಚೆ ತನ್ನ ಜೀವನದ ಆರಂಭ ಕಾಲದಲ್ಲಿ ಒಬ್ಬ ವ್ಯಕ್ತಿ ಪಡೆದ ಅನುಭವವು ಶ್ರೀಮಂತ ವಾಗಿದ್ದಷ್ಟು ಆ ವ್ಯಕ್ತಿಯ ಮುಂದಿನ ಬದುಕಿನ ಬುತ್ತಿ ದೊಡ್ಡದಾಗುತ್ತದೆ. ಮನಕೆಲಸ, ಕೊಟ್ಟಿಗೆ ಕೆಲಸ, ಪೌರೋಹಿತ್ಯದ ಪರಿಚಾಕರಿ, ಹೋಟೆಲ್ ಕೆಲಸ, ಸಂತೆಯಲ್ಲಿ ಶರಬತ್ತು ಮಾರಾಟ, ಊದು ಬತ್ತಿ ಮಾರಾಟ, ಸಿನಿಮಾ ದ್ವಾರಪಾಲನೆ, ಖಾಸಗಿ ಪಾಠ ಹೇಳುವುದು, ಕಥಾ ನಿರೂಪಣೆ, ಸಾಧುಗಳ ಜೊತೆ ಅಲೆದಾಟ, ರೈಲು ನಿಲ್ದಾಣದಲ್ಲಿ ಕೂಲಿ, ಅಡಿಗೆ ನಾಟಕ ಕಂಪನಿಯಲ್ಲಿ ಲೆಕ್ಕ ಬರೆಯುವುದು ಮೊದಲಾದ ಅನುಭವಗಳನ್ನು ತೀರ ಸಣ್ಣ ವಯಸ್ಸಿನಲ್ಲಿಯೇ ಪಡೆದ ವ್ಯಕ್ತಿಯೊಬ್ಬ ತತ್ವಶಾಸ್ತ್ರ ಪ್ರಾಧ್ಯಾಪಕನಾಗಿ ಕಾದಂಬರಿಕಾರನಾಗಿ ರೂಪುಗೊಂಡರೆ ಅಂತಹ ವ್ಯಕ್ತಿ ಸೃಷ್ಟಿಸಿದ ಸಾಹಿತ್ಯದಲ್ಲಿ ವಸ್ತುವೈವಿಧ್ಯ ಮತ್ತು ಅನುಭವ ಶ್ರೀಮಂತಿಕೆ ಇಲ್ಲದಿರಲು ಸಾಧ್ಯವಿಲ್ಲ. ಅಂತಹ ಸಾಹಿತಿಯು ಕಲಾಪ್ರಜ್ಞೆಯನ್ನು ಕೂಡ ಹೊಂದಿದ್ದಾಗ ಸಾಹಿತ್ಯ ಕೃತಿಗಳು ಉತ್ತಮ ಕಲಾಕೃತಿಗಳಾಗುತ್ತವೆ.

ಇದು ಡಾ. ಎಸ್.ಎಲ್.ಭೈರಪ್ಪನವರ ವಿಶಿಷ್ಟತೆ
ದೇಶ ಸುತ್ತು, ಕೋಶ ಓದು ಎನ್ನುವ ಮಾತನ್ನು ಭೈರಪ್ಪನವರ ಹಾಗೆ ಅಕ್ಷರಶ: ಪಾಲಿಸಿದ ಬೇರೆ ಕಾದಂಬರಿಕಾರರು ಕನ್ನಡದಲ್ಲಷ್ಟೇ ಅಲ್ಲ ಬಹುಶಃ ಭಾರತೀಯ ಭಾಷೆಗಳಲ್ಲಿ ಇರಲಾರರು. ಭೈರಪ್ಪ ನವರು ದೇಶ ಸುತ್ತಿ ಕೋಶ ಓದಿದ್ದಷ್ಟೇ ಅಲ್ಲ; ಬರವಣಿಗೆಯನ್ನೂ ಮಾಡಿದರು. ಹೀಗೆ ಕನ್ನಡದಲ್ಲಿ ಬಹುದೊಡ್ಡ ಸಂಖ್ಯೆಯ ಓದುಗರಿಂದ ಪ್ರೀತಿ- ಅಭಿಮಾನವನ್ನು ಪಡೆದ ಭೈರಪ್ಪನವರು ಇತರ ಹಲವು ಭಾರತೀಯ ಭಾಷೆಗಳ ಓದುಗರಿಂದಲೂ ಮೆಚ್ಚುಗೆಯನ್ನು ಪಡೆದು ಪ್ರಸಿದ್ಧರಾಗಿದ್ದಾರೆ.
ಇದನ್ನೂ ಓದಿ: S L Byrappa: ಇಂದು ಭೈರಪ್ಪ ಪ್ರತಿಷ್ಠಾನ ಉದ್ಘಾಟನೆ
ಕನ್ನಡದ ಕೆಲವು ಪ್ರಸಿದ್ಧ ವಿಮರ್ಶಕರ ಟೀಕೆಗಳೇನೇ ಇದ್ದರೂ ಅವರ ಕೃತಿಗಳನ್ನು ಮೆಚ್ಚಿದ ಮತ್ತು ಗಂಭೀರವಾಗಿ ವಿಶ್ಲೇಷಿಸಿದ ಮಹತ್ವದ ವಿಮರ್ಶಕರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಅವರ ಕೃತಿಗಳ ಬಗ್ಗೆ ಅದೆಷ್ಟೋ ಪುಸ್ತಕಗಳು ಬಂದಿವೆ. ಅಲ್ಲದೆ ಅನೇಕ ಪಿಎಚ್.ಡಿ ಮತ್ತು ಎಂ.ಫಿಲ್. ಸಂಶೋಧನಾ ಪ್ರಬಂಧಗಳು ರಚನೆಯಾಗಿವೆ.

ಜನಪ್ರಿಯವಾಗಿರುವುದೇ ಭೈರಪ್ಪನವರ ಕಾದಂಬರಿಗಳ ದೌರ್ಬಲ್ಯ ಎಂಬ ಗ್ರಹಿಕೆಯನ್ನು ಕನ್ನಡದ ಕೆಲವು ಮುಂಚೂಣಿ ವಿಮರ್ಶಕರು ಪ್ರಚಾರ ಮಾಡಿದ್ದುಂಟು. ಆದರೆ ಭೈರಪ್ಪನವರ ಕಾದಂಬರಿಗಳ ವಸ್ತು ಮತ್ತು ತಂತ್ರಗಳನ್ನು ಅಧ್ಯಯನ ಮಾಡಿದರೆ ಅವರ ಕಾದಂಬರಿಗಳು ಯಾಕೆ ಜನಪ್ರಿಯ ವಾಗಿವೆ ಎಂಬುದು ಅರ್ಥವಾಗಬಹುದು.
ಕಾದಂಬರಿಗಳೆಂಬ ಕಲಾಕೃತಿಗಳು
ಇಡೀ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕಾದಂಬರಿ ರಚನೆಯ ಹಿಂದಿರುವ ತತ್ವ ಮತ್ತು ತಂತ್ರಗಳ ಕುರಿತಾಗಿ ಭೈರಪ್ಪನವರಂತೆ ಗಾಢವಾಗಿ ಚಿಂತಿಸಿದ ಮತ್ತು ಬರವಣಿಗೆ ಮಾಡಿದ ಮತ್ತು ಮಾತನಾಡಿದ ಕಾದಂಬರಿಕಾರರು ಇಲ್ಲವೆನ್ನಬಹುದು. ಈ ಕುರಿತಾಗಿ ಭೈರಪ್ಪನವರು ಬರೆದಿರುವ ಹಾಗೂ ವಿವಿಧ ಸಂದರ್ಶನಗಳಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರ ಕಾದಂಬರಿ ಗಳನ್ನು ಪ್ರವೇಶಿಸಲು ಇರುವ ವಿವಿಧ ದಾರಿಗಳನ್ನು ತೋರಿಸಿಕೊಡುತ್ತವೆ.
ಅನೇಕ ವಿಮರ್ಶಕರು ಭೈರಪ್ಪನವರ ಕಾದಂಬರಿಗಳಲ್ಲಿರುವ ವಸ್ತುವನ್ನು ಮಾತ್ರ ಪರಿಗಣಿಸಿ ವಿಶ್ಲೇಷಿಸುತ್ತಾರೆ. ಅಂತಹ ವಿಮರ್ಶಕರು ಭೈರಪ್ಪನವರ ಕೃತಿಗಳಲ್ಲಿ ಸಾಮಾಜಿಕ - ರಾಜಕೀಯ ನಿಲುವುಗಳನ್ನು ಹುಡುಕಲು ತೊಡಗುತ್ತಾರೆ. ತಮ್ಮ ಪೂರ್ವನಿರ್ಧರಿತ ಸಿದ್ಧಾಂತಗಳಿಗೆ ಭೈರಪ್ಪ ನವರ ಕಾದಂಬರಿಗಳು ಹೊಂದದಿದ್ದಾಗ ಅವರಿಗೆ ಸಮಸ್ಯೆಯಾಗುತ್ತದೆ. ಆದರೆ, ಸಾಹಿತ್ಯ ಕೃತಿಯನ್ನು ಕಲಾಕೃತಿಯಾಗಿ ಪರಿಗಣಿಸುವವರಿಗೆ ಭೈರಪ್ಪನವರ ಕಾದಂಬರಿಗಳು ದಾರ್ಶನಿಕ ಎನಿಸುತ್ತವೆ. ರಸಾನುಭವದೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆಯನ್ನು ವಿಸ್ತರಿಸುವ ಕೃತಿಗಳಾಗಿ ಕಾಣುತ್ತವೆ.
ಭೈರಪ್ಪನವರ ಕಾದಂಬರಿಗಳಲ್ಲಿ ವಸ್ತುವೈವಿಧ್ಯ ಇರುವಂತೆ ತಂತ್ರವೈವಿಧ್ಯವು ಇದೆ. ಅವರ ಕಾದಂಬರಿಗಳಲ್ಲಿರುವ ತಂತ್ರಗಳನ್ನು ಹಲವು ನೆಲೆಗಳಲ್ಲಿ ಗುರುತಿಸಲು ಸಾಧ್ಯ. ಘಟನೆಗಳ ಪೋಣಿಸುವಿಕೆ, ಪಾತ್ರ ಚಿತ್ರಣ ಕ್ರಮ, ಸಮಾನಾಂತರ ಕಥೆಗಳು, ಉಪಕಥೆಗಳು, ಕಥೆಯೊಳಗೆ ಕಥೆ, ಪ್ರಥಮ ಪುರುಷ, ಉತ್ತಮ ಪುರುಷ, ಪ್ರಜ್ಞೆ ಪ್ರವಾಹ ತಂತ್ರ ನಿರೂಪಣೆ, ಭಾಷೆಯ ಬಳಕೆಯ ಕ್ರಮ- ಗ್ರಾಮ್ಯ ಭಾಷೆ ಪ್ರಾದೇಶಿಕ ಭಾಷಾ ಪ್ರಭೇದಗಳು, ಉಲ್ಲೇಖಗಳ ಬಳಕೆ- ಗಾದೆ, ಮಂತ್ರಗಳು, ಪುರಾಣ, ನಂಬಿಕೆ- ಆಚರಣೆಗಳ ಉಖಗಳು ಇತ್ಯಾದಿ.

ದಾರ್ಶನಿಕ ಅನ್ವೇಷಣೆಯುಳ್ಳ ಭೈರಪ್ಪನವರ ಕಾದಂಬರಿಗಳೆಂಬ ಕಲಾಕೃತಿಗಳನ್ನು ಕೇವಲ ಸಾಮಾಜಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಮಾತ್ರ ನೋಡಿ ವಿಶ್ಲೇಷಿಸಿದರೆ ಅಥವಾ ಕೇವಲ ಸಮಾಜ ವಿಮರ್ಶೆಯ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಂಡರೆ ಆಗ ಕೃತಿಯಿಂದ ನಮಗಾಗುವ ಲಾಭ ಕಡಿಮೆ. ಹಾಗೆ ನೋಡಿದರೆ, ಭೈರಪ್ಪನವರು ಸಮಕಾಲೀನ ಸಾಮಾಜಿಕ ಸಂಗತಿಗಳಿಗೆ ತಮ್ಮ ಕಾದಂಬರಿಗಳ ಮೂಲಕ ಸ್ಪಂದಿಸಿದ ಬಗೆಯೂ ವಿಶೇಷವಾಗಿ ಉಲ್ಲೇಖನೀಯವೇ.
ಸಿದ್ದಲಿಂಗಯ್ಯನವರು ‘ಇಕ್ರಲಾ ವದೀರ್ಲಾ’ ಎಂದು ಬರೆಯುವುದಕ್ಕೆ ಮೊದಲೇ ಬೈರಪ್ಪನ ವರ ’ದಾಟು’ ಕಾದಂಬರಿಯ ಮೋಹನದಾಸ ’ಮೇಲುಜಾತಿಯವರನ್ನು ‘ಒದೀದೆ ಯಾರೂ ದಾರಿಗೆ ಬರುಲ್ಲ’ ಎಂದು ಹೇಳಿದ್ದ ಎನ್ನುವುದನ್ನು ನಾವು ಮರೆಯಬಾರದು.
ಅಸ್ಪೃಶ್ಯತೆಯನ್ನು ಸೂಕ್ಷ್ಮವಾಗಿ ಚಿತ್ರಿಸಲು ಭೈರಪ್ಪನವರು ಬಳಸಿಕೊಂಡ ಸನ್ನಿವೇಶವಂತು ಬಹಳ ವಿಶಿಷ್ಟವಾಗಿ ಮೂಡಿಬಂದಿದೆ. ದಾಟು ಕಾದಂಬರಿಯಲ್ಲಿ ಮಗಳು ಸತ್ಯಳನ್ನು ಸರಿದಾರಿಗೆ ತರಲು ಬೆಂಗಳೂರಿಗೆ ಹೋಗುವ ವೆಂಕಟರಮಣಯ್ಯನ ಜೊತೆ ಇರುವ ಬೆಟ್ಟಯ್ಯ ಅಲ್ಲಿ ಬೇರೆ ಆಟೋರಿಕ್ಷಾ ದಲ್ಲಿ ಹೋಗಬೇಕಾಗುತ್ತದೆ.

ಮಗಳಿಗೆ ಹೊಡೆದು ಸುಸ್ತಾಗಿ ಎಚ್ಚರ ತಪ್ಪಿ ಬಿದ್ದ ವೆಂಕಟರಮಣಯ್ಯ ಎಚ್ಚರಗೊಂಡಾಗ ಬೆಟ್ಟಯ್ಯ ಹೇಳುವ ಮಾತು ತುಂಬಾ ಮಾರ್ಮಿಕವಾದದ್ದು. ಸ್ವಾಮಿಯೋರೆ, ನಾನೇನು ಮುಟ್ಟಿಲ್ಲ. ಚೆನ್ನಾಗಿ ಜ್ಞಾನ ಬಂದ ಮೇಲೆ ಮಡಿ ಉಟ್ಟುಕೊಳ್ಳುವಿರಂತೆ.. ಆಸ್ಪೃಶ್ಯತೆಯನ್ನು ಬಹುಶ ಇದಕ್ಕಿಂತ ಸೂಕ್ಷ್ಮ ವಾಗಿ ವಿಡಂಬಿಸಲು ಸಾಧ್ಯವಿಲ್ಲ.
’ದಾಟು’ ಎಂದಲ್ಲ, ಭೈರಪ್ಪನವರ ಯಾವ ಕೃತಿಯೂ ಬದುಕಿನ ಯಾವುದೋ ಒಂದು ಮುಖವನ್ನು ಮಾತ್ರ ನೋಡುವುದಿಲ್ಲ. ಅವರ ಕೃತಿಗಳು ಸಾಂಸ್ಕೃತಿಕ, ನೈತಿಕ ಮೌಲ್ಯಗಳ ವಿವೇಚನೆಯೊಂದಿಗೆ, ಬದುಕಿನ ಹಲವು ಮಗ್ಗುಲುಗಳನ್ನು ಸ್ಪರ್ಶಿಸುತ್ತವೆ. ಆದರೆ ಸಿದ್ಧಾಂತಗಳ ಪ್ರತಿಬಿಂಬವಾಗಿ ಸಾಹಿತ್ಯ ವನ್ನು ಸೃಷ್ಟಿಸಬೇಕೆಂಬುದನ್ನು ಅವರು ಒಪ್ಪುವುದಿಲ್ಲ. ಅವರ ಪ್ರಕಾರ, ಸಾಹಿತಿಗಳಾದವರು ಬದುಕಿನ ಸತ್ಯಗಳನ್ನೂ ಮೌಲ್ಯಗಳನ್ನೂ ಶೋಧಿಸಿ ಓದುಗರಿಗೆ ಕಾಣಿಸಿದರೆ ಅದುವೇ ಸಮಾಜಕ್ಕೆ ಸಾಹಿತಿಗಳ ಕೊಡುಗೆ.
ಆದರೆ ಸತ್ಯವನ್ನು ಅಥವಾ ವಾಸ್ತವವನ್ನು ಭೈರಪ್ಪನವರು ಹಸಿಹಸಿಯಾಗಿ ವರದಿಯ ರೂಪದಲ್ಲಿ ಮಂಡಿಸುವವರಲ್ಲ.ಅದು ಕಲ್ಪನೆಯೊಂದಿಗೆ ಬೆರೆತು ಕಲಾತ್ಮಕವಾಗಿ ರಸಾನುಭವವನ್ನು ನೀಡು ವಂತಾಗಬೇಕು. ಹೀಗಾಗಿಯೇ ಇತಿಹಾಸದ ಸತ್ಯವನ್ನು ಹೇಳಬೇಕೆಂಬ ಅವರ ತುಡಿತವು ’ಆವರಣ’ ಕಾದಂಬರಿಯಲ್ಲಿ, ಕಥೆಯೊಳಗಿನ ಕಥೆಯ ತಂತ್ರವಾಗಿ ಬಂತು.
‘ಯಾನ’ ಕಾದಂಬರಿ ಅತ್ಯಂತ ಆಧುನಿಕವಾದ ತಂತ್ರಜ್ಞಾನದ ಬಗೆಗೆ ಭೈರಪ್ಪನವರಿಗಿರುವ ಆಸಕ್ತಿ ಯನ್ನು ನಮ್ಮ ಮುಂದೆ ತೆರೆದಿಟ್ಟರೆ, ಪರ್ವ, ಉತ್ತರಕಾಂಡದಂತಹ ಕಾದಂಬರಿಗಳು ಮಹಾಭಾರತ ರಾಮಾಯಣಗಳಂತಹ ಇತಿಹಾಸಪುರಾಣಗಳಲ್ಲಿ ಹೇಳಲಾದ ಘಟನೆಗಳು ನಿಜವಾಗಿಯೂ ನಡೆದಿದ್ದರೆ ಹೇಗಿರುತ್ತಿತ್ತು ಎಂಬ ಅವರ ಕಲ್ಪನೆಯನ್ನು ಮುಂದಿಡುತ್ತವೆ.
ವಿಶ್ವಮಾನ್ಯ ಸಾಹಿತಿ
ಕನ್ನಡದಲ್ಲಿ ನಿಸ್ಸಂಶಯವಾಗಿ ಅತಿದೊಡ್ಡ ಸಂಖ್ಯೆಯ ಓದುಗರನ್ನು ಹೊಂದಿರುವ ಭೈರಪ್ಪನವರು ವರ್ತಮಾನ ಕಾಲದಲ್ಲಿ ಅನುವಾದಗಳ ಮೂಲಕ ಹೆಚ್ಚಿನ ಎಲ್ಲಾ ಪ್ರಮುಖ ಭಾರತೀಯ ಭಾಷೆ ಗಳಿಗೂ ಇಂಗ್ಲಿಷಲ್ಲದೆ ಇತರ ಹಲವು ವಿದೇಶಿ ಭಾಷೆಗಳಿಗೂ ತಲುಪಿದ್ದಾರೆ ಎನ್ನುವುದು ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆಯ ಸಂಗತಿ.
ನಿಜವಾದ ಅರ್ಥದಲ್ಲಿ ಭಾರತೀಯ ತತ್ವಜ್ಞಾನ, ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಕಾವ್ಯ ಮೀಮಾಂಸೆ ಮತ್ತು ಭಾರತೀಯ ಕಲಾಮೀಮಾಂಸೆ - ಇವುಗಳನ್ನ ಓದಿಕೊಂಡು ಇವುಗಳ ಆಳವಾದ ಅರಿವಿನೊಂದಿಗೆ, ಪ್ರeಪೂರ್ವಕವಾಗಿ ಒಂದು ಕಲಾಕೃತಿಯನ್ನು ಸೃಷ್ಟಿಸುತ್ತಿದ್ದೇನೆ ಎನ್ನುವ ಅರಿವಿನೊಂದಿಗೆ ಬರೆದಂತಹ ಭಾರತೀಯ ಕಾದಂಬರಿಕಾರರೆಂದರೆ ಅದು ಭೈರಪ್ಪ ನವರು.
ಭೈರಪ್ಪನವರು ಕೇವಲ ಕಾದಂಬರಿಗಳ ರಚನೆಯ ಕಾರಣಕ್ಕಾಗಿ ಮಾತ್ರ ನಮಗೆ ಮುಖ್ಯ ಅನಿಸುವು ದಿಲ್ಲ ಬದಲಾಗಿ ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ ಮುಂತಾಗಿ ಅವರು ಸಾಹಿತ್ಯ ಮತ್ತು ಕಲೆಯ ಸೃಷ್ಟಿಪ್ರಕ್ರಿಯೆ ಬಗ್ಗೆ ನಡೆಸಿದಂತಹ ಚಿಂತನೆ, ಇತಿಹಾಸ ಮತ್ತು ಸಾಮಾಜಿಕ- ರಾಜಕೀಯ ಪರಿಸ್ಥಿತಿಗಳ ಬಗೆಗೆ ಅವರ ಪ್ರತಿಕ್ರಿಯೆಗಳು ಹಾಗೂ ಅಂಕಣ ಬರಹಗಳು, ಸಂದರ್ಶನ ಗಳು, ಭಿತ್ತಿಯಂತಹ ಆತ್ಮಕಥನ ಇವೆಲ್ಲ ಸಾಹಿತಿಯಾಗಿ ಭೈರಪ್ಪನವರನ್ನು ಮತ್ತಷ್ಟು ಪ್ರಸ್ತುತಗೊಳಿಸುತ್ತವೆ.
ಸಮಾಜಮುಖಿ ಬದುಕು
ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮಸೂಕ್ಷ್ಮಗಳ ಜಿಜ್ಞಾಸೆ ಇರುತ್ತದೆ ಅನ್ನುವುದು ಓದುಗರಿಗೆ ಗೊತ್ತಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಭಾರತೀಯ ಪುರುಷಾರ್ಥದ ಕಲ್ಪನೆಗಳನ್ನು ಅವರ ಕಾದಂಬರಿಗಳು ಒಂದಲ್ಲ ಒಂದು ರೀತಿಯಲ್ಲಿ ವಿಶ್ಲೇಷಿಸುತ್ತವೆ. ಆದರೆ, ’ಧರ್ಮ’ದ ಬದುಕನ್ನು ಬದುಕುವ ಮಟ್ಟಿಗೆ, ಭೈರಪ್ಪನವರು ಭಾರತದ ಯಾವ ಸಾಹಿತಿಯಲ್ಲೂ ಇಲ್ಲದ ಒಂದು ಗುಣವನ್ನು ಹೊಂದಿರುವುದನ್ನು ನಾವು ಕಾಣಬಹುದು. ಅವರ ಹುಟ್ಟೂರಿಗೆ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ಅವರು ಮಾಡಿದಂತಹ ಒಂದು ಪ್ರಯತ್ನ ಎಲ್ಲರಿಗೂ ಗೊತ್ತಿರು ವಂತದ್ದೇ.
ಆದರೆ, ಸಾಮಾಜಿಕ ಕಾರ್ಯಗಳಿಗಾಗಿ, ಕಷ್ಟದಲ್ಲಿ ಇರುವವರಿಗಾಗಿ ಜಾತಿಮತ ಭೇದ ಮಾಡದೆ, ಪ್ರಚಾರ ಬಯಸದೆ ಸಹಾಯ ಮಾಡುವ ಬಗೆಗೆ ತೀರ ಹತ್ತಿರದವರ ಬಳಿಯೂ ಹೇಳಿಕೊಳ್ಳದವರು ಅವರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಸಂದರ್ಭದಲ್ಲಿ ಅವರಿಗೆ ಕೊಟ್ಟಂತಹ ಆ ಕಾಲದ ದೊಡ್ಡ ಮೊತ್ತವನ್ನು ಹಿಂದಕ್ಕೆ ಕೊಟ್ಟದ್ದು ಹಳೆಯ ಸುದ್ದಿ. ಹೀಗೆಯೇ ಅವರಿಗೆ ಬಂದ ಇತರ ಅನೇಕ ಪ್ರಶಸ್ತಿಗಳ ಮೊತ್ತಗಳನ್ನು , ಕಾರ್ಯಕ್ರಮಗಳ ಆಯೋಜಕರು ಕೊಡುವ ಗೌರವಧನ, ಪ್ರಯಾಣಭತ್ಯೆಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ದಾನ ಮಾಡಿದ ಹಲವು ಉದಾಹರಣೆಗಳಿವೆ.
ಕೆಲವು ಸಂದರ್ಭಗಳಿಗೆ ಈ ಲೇಖಕನೂ ಸಾಕ್ಷಿ. ವರ್ತಮಾನಕಾಲದಲ್ಲಿ ಪ್ರಯಾಣಭತ್ಯೆ, ದಿನಭತ್ಯೆ, ಗೌರವಧನ ಮುಂತಾದವುಗಳ ಕುರಿತು ಸಾಹಿತಿ- ಪ್ರಾಧ್ಯಾಪಕರಲ್ಲಿ ಇರುವ ಆಗ್ರಹವನ್ನು ನೋಡಿರು ವವರಿಗೆ ಭೈರಪ್ಪನವರ ಈ ಗುಣ ಬಹಳ ವಿಶೇಷವೆನಿಸದಿರದು. ಇತ್ತೀಚೆಗೆ ಭೈರಪ್ಪನವರು ತಮ್ಮ ಕಾದಂಬರಿಗಳ ರಾಯಧನದ ಮೂಲಕ ಬಂದ ದೊಡ್ಡ ಮೊತ್ತದ ಉಳಿತಾಯದ ಹಣದಲ್ಲಿ ಟ್ರಸ್ಟ್ ಒಂದನ್ನು ವಿಶ್ವೇಶ್ವರ ಭಟ್ ಮತ್ತು ಸಹನಾ ವಿಜಯಕುಮಾರ್ ಮುಂತಾದ ಆತ್ಮೀಯರ ಮೂಲಕ ಸ್ಥಾಪಿಸಿರುವುದು ಗಮನಾರ್ಹ.
ಸಾಹಿತಿಗಳ ಹೆಸರಿನಲ್ಲಿ ಟ್ರಸ್ಟುಗಳು ಇರುವುದು ವಿಶೇಷವಲ್ಲ. ಆದರೆ ಅಂತಹ ಟ್ರಸ್ಟುಗಳು ಸಾಮಾನ್ಯವಾಗಿ ಸರಕಾರದ ಅನುದಾನ ಪಡೆದು ಪ್ರಶಸ್ತಿಯನ್ನೋ ಮತ್ತೊಂದನ್ನೋ ಕೊಡುತ್ತವೆ; ಕಾರ್ಯಕ್ರಮಗಳನ್ನು ನಡೆಸುತ್ತವೆ. ಇಂತಹ ಪರಿಪಾಠವಿರುವಾಗ ಸಾಹಿತಿಯೊಬ್ಬರು ತಮ್ಮ ಸ್ವಂತ ಹಣವನ್ನು ಟ್ರಸ್ಟಿಗಾಗಿ ನೀಡಿದ್ದಾರೆ ಎಂದರೆ ಅದು ನಂಬಲಸಾಧ್ಯವಾದ ಸತ್ಯ. ಭೈರಪ್ಪನವರ ಸಾಹಿತ್ಯ ಮತ್ತು ವ್ಯಕ್ತಿತ್ವಕ್ಕೆ ಭೈರಪ್ಪನವರೇ ಸಾಟಿ.
*
ಟಾಪ್ ಟೆನ್ ಕೃತಿಗಳು
ಎಸ್.ಎಲ್. ಭೈರಪ್ಪನವರ ಕೃತಿಗಳಲ್ಲಿ ’ಟಾಪ್ ಟೆನ್’ ಎಂದು ನಿಖರವಾಗಿ ಪಟ್ಟಿ ಮಾಡುವುದು ಕಷ್ಟ. ಆದರೂ, ವಿಮರ್ಶಕರು ಮತ್ತು ಓದುಗರಿಂದ ಅಪಾರ ಮೆಚ್ಚುಗೆ, ಬಹುಮುದ್ರಣ ಮತ್ತು ಚರ್ಚೆಗೊಳಪಟ್ಟ ಕೆಲವು ಪ್ರಮುಖ ಕೃತಿಗಳನ್ನು ಇಲ್ಲಿ ನೀಡಲಾಗಿದೆ.
೧. ಪರ್ವ
ಮಹಾಭಾರತವನ್ನು ಹೊಸ ದೃಷ್ಟಿಕೋನದಿಂದ, ವೈಚಾರಿಕ ಮತ್ತು ಮಾನಸಿಕ ವಿಶ್ಲೇಷಣೆಯೊಂದಿಗೆ ಬರೆದ ಈ ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು.
೨. ಗೃಹಭಂಗ
ಗ್ರಾಮೀಣ ಬದುಕಿನ ವಾಸ್ತವತೆಯನ್ನು, ಕಡುಬಡತನ ಮತ್ತು ಕಷ್ಟಗಳ ನಡುವೆ ಒಂದು ಕುಟುಂಬದ ಹೋರಾಟವನ್ನು ನೈಜವಾಗಿ ಈ ಕೃತಿ ಚಿತ್ರಿಸುತ್ತಿದೆ.
೩. ವಂಶವೃಕ್ಷ
ಮೌಲ್ಯಗಳು, ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ವಿವರಿಸುವ ಈ ಕಾದಂಬರಿ ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ
೪. ದಾಟು
ಧರ್ಮ ಮತ್ತು ಜಾತಿಯ ಸೂಕ್ಷ್ಮಗಳನ್ನು ಆಧುನಿಕ ಸಮಾಜದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ.
೫. ಸಾರ್ಥ
ಭಾರತೀಯ ತತ್ವಜ್ಞಾನದ ಆಳವನ್ನು ಅರಿಯಲು ಪ್ರೇರೇಪಿಸುವ, ಆದಿ ಶಂಕರರ ಜೀವನವನ್ನು ಐತಿಹಾಸಿಕ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಕಾದಂಬರಿ.
೬. ಮಂದ್ರ
ಸಂಗೀತ ಮತ್ತು ಸೃಜನಶೀಲ ಬದುಕಿನ ಜಗತ್ತನ್ನು ಆಳವಾಗಿ ಪರಿಶೀಲಿಸುವ ಈ ಕೃತಿಯು, ಕಲಾವಿದನ ಅಂತರಂಗದ ಸಂಘರ್ಷ ಮತ್ತು ಸಾಧನೆಯ ಹಾದಿಯನ್ನು ನಿರೂಪಿಸುತ್ತದೆ.
೭. ಆವರಣ
ಇತಿಹಾಸವನ್ನು ಪುನರ್ ವಿಮರ್ಶಿಸುವ, ಅದರಲ್ಲೂ ಭಾರತೀಯ ಇತಿಹಾಸದ ಕೆಲವು ನಿರ್ದಿಷ್ಟ ಘಟನೆಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
೮. ತಂತು
ತತ್ವಶಾಸ್ತ್ರ ಮತ್ತು ಮನುಷ್ಯ ಸಂಬಂಧಗಳನ್ನು, ವಿಶೇಷವಾಗಿ ಗುರು-ಶಿಷ್ಯರ ಸಂಬಂಧವನ್ನು ಆಧುನಿಕ ಸಂದರ್ಭದಲ್ಲಿ ವಿಶ್ಲೇಷಿಸುವ ಚಿಂತನೆಗೆ ಒಳಪಡಿಸುತ್ತದೆ.
೯. ಮತದಾನ
ರಾಜಕೀಯ ವ್ಯವಸ್ಥೆ, ಚುನಾವಣೆ ಮತ್ತು ಹಳ್ಳಿಗಳ ವಾಸ್ತವಿಕ ಚಿತ್ರಣವನ್ನು ಒದಗಿಸುವ ಈ ಕೃತಿ, ರಾಜಕಾರಣದ ಸೂಕ್ಷ್ಮತೆಗಳನ್ನು ವಿವರಿಸುತ್ತದೆ.
೧೦. ತಬ್ಬಲಿಯು ನೀನಾದೆ ಮಗನೆ
ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ತಾಯಿ-ಮಗುವಿನ ಬಾಂಧವ್ಯವನ್ನು ಭಾವನಾತ್ಮಕವಾಗಿ ವಿವರಿಸುತ್ತದೆ.
ಈ ಕೃತಿಗಳಲ್ಲದೆ ನಾಯಿ-ನೆರಳು, ಅಂಚು, ಧರ್ಮಶ್ರೀ, ಭಿತ್ತಿ ಮುಂತಾದ ಕೃತಿಗಳು ಸಹ ಸಾಕಷ್ಟು ಜನಪ್ರಿಯವಾಗಿವೆ.
ಭೈರಪ್ಪ ಅವರಿಗೆ ಸಂದ ಪ್ರಶಸ್ತಿ-ಗೌರವಗಳು
ಪದ್ಮ ಭೂಷಣ-೨೦೨೩
ಕೇಂದ್ರ ಸರಕಾರದ ಪದ್ಮಶ್ರೀ-೨೦೧೬
ಮಮೋನಿ ರೈಸೊಂ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (ಅಸ್ಸಾಂ ಸಾಹಿತ್ಯ ಸಭಾ)-೨೦೧೬
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್-೨೦೧೫
ಸಾಹಿತ್ಯ ಅಕಾಡೆಮಿ ಫೆಲೋಶಿಪ್-೨೦೧೫
ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ-೨೦೧೪
ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)-೨೦೧೨
ನಾಡೋಜ ಪ್ರಶಸ್ತಿ-೨೦೧೧
ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)-೨೦೧೦
ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ-೨೦೦೭
ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್-೨೦೦೭
ಪಂಪ ಪ್ರಶಸ್ತಿ-೨೦೦೫
ಎಸ್.ಆರ್.ಪ್ರಶಸ್ತಿ-೨೦೦೨
ಸಾಮಾನ್ಯ ಜ್ಞಾನ ಪ್ರಶಸ್ತಿ-೨೦೦೨
ಗೊರೂರು ಪ್ರಶಸ್ತಿ-೨೦೦೦
ಗ್ರಂಥಲೋಕ, ವರ್ಷದ ಅತ್ಯುತ್ತಮ ಸಾಹಿತ್ಯ ಕೃತಿ (ಸಾಕ್ಷಿ)-೧೯೯೮
ಭಾರತೀಯ ಭಾಷಾ ಪರಿಷತ್ ಸಂವತ್ಸರ ಪುರಸ್ಕಾರ್,
ಕೊಲ್ಕತ್ತಾ (ತಂತು ಕಾದಂಬರಿ): ೧೯೯೬ - ೯೭
ಮಾಸ್ತಿ ಸಾಹಿತ್ಯ ಪ್ರಶಸ್ತಿ-೧೯೯೬
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-೧೯೮೫
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)-೧೯೭೫
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ)-೧೯೬೬
ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊ-ಸರ್) ಗೌರವ ಸಾಹಿತ್ಯ ಅಕಾಡೆಮಿ ಫೆಲೋ ಗೌರವ