ಡಾ.ಶಾಲಿನಿ ರಜನೀಶ್
ಸರಕಾರದ ಮುಖ್ಯ ಕಾರ್ಯದರ್ಶಿ
ನನ್ನ ಹಿಂದಿನ ಲೇಖನದಲ್ಲಿ ಮೈಸೂರು ದಸರಾ- ನವರಾತ್ರಿ ವಿಜಯದಶಮಿ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದುಕೊಂಡಿದ್ದೀರಿ. ಇಂದಿನ ನನ್ನ ಲೇಖನದಲ್ಲಿ ಆಧುನಿಕ ಯುಗದ ದಸರಾ- ಕಣ್ಮನ ಸೆಳೆಯುವ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರತಿ ವರ್ಷವೂ 10 ದಿನಗಳು ಮೈಸೂರಿ ನಲ್ಲಿ ನಡೆಯುವ ಸಾಂಪ್ರದಾಯಿಕ ದಸರಾ ಆಚರಣೆಗಳು, ಆಯುಧ ಪೂಜೆ, ವಿಜಯದಶಮಿ, ಜಂಬೂಸವಾರಿಯಂತಹ ಆಕರ್ಷಕ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆ ಜೊತೆಗೆ, ಸಾರ್ವ ಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನರಿಗೆ, ಮಕ್ಕಳಿಗಾಗಿ ವಿವಿಧ ಮನೋರಂಜನಾ ತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವುಗಳ ಕಿರುನೋಟ ಇಲ್ಲಿದೆ.
ದಸರೆಯ ವಿಶೇಷ ಕಾರ್ಯಕ್ರಮಗಳು ಜಂಬೂಸವಾರಿ ಮತ್ತು ಆಧುನಿಕ ಶೈಲಿಯ ಸ್ತಬ್ಧಚಿತ್ರಗಳು: ವಿಜಯದಶಮಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ.
ಇದನ್ನೂ ಓದಿ: Dr Shalini Rajaneesh Column: ನವರಾತ್ರಿಗೆ ರಂಗೇರಿಸುವ ದುರ್ಗೆಯ ಪೂಜೆ, ಜಂಬೂಸವಾರಿ !
ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತ್ತದೆ. ಜಂಬೂಸವಾರಿಯು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆಯುತ್ತದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಯನ್ನು ಹೊತ್ತು 14 ಅಲಂಕೃತ ಗಜಗಳೊಂದಿಗೆ, ಜನಸಾಗರದೊಡನೆ ಧೀರ-ಗಂಭೀರ ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಗಜರಾಜನ ಠೀವಿಗೆ ಸರಿಸಾಟಿಯಿಲ್ಲ.
ಅಂಬಾರಿ ಹೊತ್ತ ಗಜರಾಜನ ಜತೆಗೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳ ವಾದ್ಯ ಕಳೆಗಟ್ಟುತ್ತದೆ. ಅಲ್ಲದೆ, ಕಂಸಾಳೆ ಕುಣಿತ, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜತೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿ ಸಾರುವ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತದೆ. ಇದರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ಯುವ ಸಂಭ್ರಮ, ಯುವ ದಸರಾ: ದಸರಾಗೆ ಯುವಜನರನ್ನು ಸೆಳೆಯಲು ಯುವ ಸಂಭ್ರಮ ಮತ್ತು ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯ ದಲ್ಲಿರುವ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಸಮಾರಂಭ ನಡೆಯುತ್ತದೆ. ಇದರಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಜನಪದ ಸೇರಿದಂತೆ ವಿವಿಧ ಪ್ರಾಕಾರಗಳ ನೃತ್ಯ ಕಲಾವಿದರ ಪ್ರದರ್ಶನ ಗಮನ ಸೆಳೆಯುತ್ತದೆ.
ವಿವಿಧ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಇನ್ನು ಯುವ ದಸರಾದಲ್ಲಿ ಸಿನಿಮಾ ತಾರೆಯರು ಹಾಗೂ ಖ್ಯಾತ ಗಾಯಕರ ಸಮಾಗಮವಾಗುತ್ತದೆ. ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೆವಸ್ಥಾನದ ಹತ್ತಿರದ ಸ್ಥಳದಲ್ಲಿ ಸಮಾರಂಭ ನಡೆಯುತ್ತದೆ. ತಮ್ಮ ನೆಚ್ಚಿನ ನಟ-ನಟಿಯರು, ಗಾಯಕರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಯುವ ದಸರಾದಲ್ಲಿ ಜನ ಸೇರುತ್ತಾರೆ.
ಕಂಬಳ: ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೃಷಿ ಸಂಸ್ಕೃತಿ ಹಾಗೂ ಜನಪದದ ಪ್ರತೀಕವಾದ ‘ಕಂಬಳ’ ಆಯೋಜನೆ ಮಾಡಲಾಗುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ಸಾತಗಳ್ಳಿಯಲ್ಲಿ ಆಯೋಜಿಸಲು ಅಧಿಕೃತವಾಗಿ ಸಿದ್ಧತೆಗಳು ನಡೆದಿವೆ. ದಷ್ಟಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪದದೊಂದಿಗೆ ಹಾಸು ಹೊಕ್ಕಾಗಿದೆ. ಸಾಂಸ್ಕೃತಿಕ ಹಿನ್ನೆಲೆಯ ಈ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸಲಾಗುತ್ತಿದೆ.
ವಿವಿಧ ಬಗೆಯ ಮೇಳಗಳು: ದಸರಾದಲ್ಲಿ ಕೃಷಿ, ಆಹಾರ ಮೇಳಗಳನ್ನು ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳ ಸ್ಥಳೀಯ ಹಾಗೂ ವಿಶೇಷ ತಿನಿಸುಗಳು ಮಳಿಗೆಗಳಲ್ಲಿ ಸಿಗುತ್ತವೆ. ಆಹಾರ ಪ್ರಿಯರಿಗೆ ಈ ಮೇಳ ಖುಷಿಕೊಡುತ್ತದೆ. ಇಲ್ಲಿ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ. ತಿನ್ನುವ ಮತ್ತು ಅಡುಗೆ ಸ್ಪರ್ಧೆಗಳು ನಡೆಯುತ್ತವೆ. ವಿಜೇತರಿಗೆ ವಿಶೇಷ ಬಹುಮಾನಗಳು ಸಹ ಇರುತ್ತವೆ. ಕೃಷಿ ಮೇಳವು ರೈತರಿಗೆ ಸಹಕಾರಿಯಾಗಲಿದೆ. ನಾನಾ ತಳಿಯ ಬೆಳೆಗಳು ಮತ್ತು ಹಣ್ಣುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಇರುತ್ತದೆ. ರೈತರಿಗೆ ಕೃಷಿ ಸಂಬಂಧಿತ ಸಲಹೆಗಳಿಗಾಗಿ ವಿಚಾರಣಾ ಸಂಕಿರಣಗಳನ್ನು ಸಹ ಆಯೋಜನೆ ಮಾಡಲಾಗುತ್ತದೆ.
ಫಲಪುಷ್ಪ, ವಸ್ತು ಪ್ರದರ್ಶನ: ದಸರಾದಲ್ಲಿ ಫಲಪುಷ್ಪ ಮತ್ತು ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ನಾನಾ ಮಾದರಿಗಳನ್ನು ರಚಿಸಿ ಪ್ರದರ್ಶಿಸ ಲಾಗುತ್ತದೆ. ಆಕರ್ಷಕ ಪುಷ್ಪ ಮಾದರಿಗಳು ಜನ ರನ್ನು ಸೆಳೆಯುವಂತಿರುತ್ತವೆ. ಅನೇ ಕರಿಗೆ ಇದು ಸೆಲಿ ಸ್ಪಾಟ್ ಆಗುತ್ತದೆ. ಸರ್ಕಾ ರಗಳ ಪ್ರಮುಖ ಯೋಜನೆಗಳನ್ನು ವಸ್ತುಪ್ರ ದರ್ಶನದ ಮೂಲಕ ತಿಳಿಸಲಾಗುತ್ತದೆ. ನಾಡು-ದೇಶದ ಇತಿಹಾಸ, ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸುವ ಮಾದರಿ ಗಳು ಇರುತ್ತವೆ.
ಗೊಂಬೆ ಪ್ರದರ್ಶನ: ಸ್ಥಳೀಯವಾಗಿ ‘ಗೊಂಬೆ ಹಬ್ಬ’ ಅಥವಾ ‘ಬೊಂಬೆ ಮನೆ’ ಎಂದು ಕರೆಯ ಲ್ಪಡುವ ಮೈಸೂರು ದಸರಾ ಗೊಂಬೆ ಪ್ರದರ್ಶನವು ಶತಮಾನಗಳಷ್ಟು ಹಳೆಯ ಸಂಪ್ರದಾಯ ವಾಗಿದೆ. ಇದರಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಜೋಡಿಸಲಾದ ಗೊಂಬೆಗಳು ಮತ್ತು ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವು ರಾಮಾಯಣದಂತಹ ಪೌರಾಣಿಕ ಮಹಾಕಾವ್ಯಗಳು, ದಸರಾ ಮೆರವಣಿಗೆಯ ದೃಶ್ಯಗಳು (ಜಂಬೂ ಸವಾರಿ), ನವದುರ್ಗೆಯರು ಮತ್ತು ಅಷ್ಟಲಕ್ಷ್ಮಿಯರ ಜೊತೆಗೆ ಸಮಕಾಲೀನ ಅಥವಾ ಸಾಮಾಜಿಕ, ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಾಗಿ ಬಿಂಬಿಸುತ್ತವೆ.
ಮಕ್ಕಳ ದಸರಾ: ದಸರಾದಲ್ಲಿ ವಿಶೇಷ ಆಕರ್ಷಣೆ ಮಕ್ಕಳ ದಸರಾ ಆಗಿದೆ. ಮಕ್ಕಳ ದಸರಾದಲ್ಲಿ ವಿಶೇಷವಾಗಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ಸಾಧನೆ ತೋರಿದ ಮಕ್ಕಳಿಂದ ಮಕ್ಕಳ ದಸರಾವನ್ನು ಉದ್ಘಾಟಿಸಲಾಗುತ್ತದೆ.
ಗೋಷ್ಠಿಗಳು: ಖ್ಯಾತ ವಿದ್ವಾಂಸರು, ಸಾಹಿತಿಗಳು, ಕವಿಗಳ ನೆಲೆವೀಡು ಮೈಸೂರು. ಸಂಗೀತ-ಸಾಹಿತ್ಯ ಕ್ಷೇತ್ರಗಳಿಗೆ ಮೈಸೂರು ತನ್ನದೇ ಆದ ಕೊಡುಗೆ ನೀಡಿದೆ. ಆದ್ದರಿಂದ ದಸರಾದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣಗಳು, ಸಂಗೀತ ಕಚೇರಿಗಳನ್ನು ಆಯೋಜಿಸಲಾ ಗುತ್ತದೆ.ಯುವ ಕವಿ ಗೋಷ್ಠಿ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯಲಾಗುತ್ತದೆ. ಓದುಗ ಪ್ರಿಯರಿಗಾಗಿ ಪುಸ್ತಕ ಮೇಳ ಕೂಡ ನಡೆಸಲಾಗುತ್ತದೆ. ಸಂಗೀತ ಪ್ರಿಯರಿಗಾಗಿ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಖ್ಯಾತ ವಿದ್ವಾಂಸರು, ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಕಲಾಸಕ್ತರಿಗಾಗಿ ಚಲಚಿತ್ರೋತ್ಸವ, ನಾಟಕ ಪ್ರದರ್ಶನಗಳು ಸಹ ನಡೆಯುತ್ತವೆ.
ಪಂಜಿನ ಕವಾಯತು: ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ಬಳಿಕ ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಅತ್ಯಂತ ಆಕರ್ಷಕ ಮತ್ತು ರೋಮಾಂಚಕ ಅಂತಿಮ ಕಾರ್ಯಕ್ರಮ ಪಂಜಿನ ಕವಾಯತು. ಇದು ಪೊಲೀಸ್ ಪಡೆಗಳ ಕವಾಯತು, ಸಾಹಸ ಪ್ರದರ್ಶನ ಹಾಗೂ ಬಣ್ಣಬಣ್ಣದ ಫಳಫಳಿಸುವ ಪಂಜುಗಳ ಬೆಳಕಿನ ಸಂಭ್ರಮದೊಂದಿಗೆ ಕಣ್ಮನ ಸೆಳೆಯುತ್ತದೆ. ಅತ್ಯಾಕರ್ಷಕ ಅಶ್ವಾರೋಹಿ ದಳದ ಸಾಹಸಗಳು, ಮೈ ಜುಮ್ಮೆನಿಸುವ ಮೋಟಾರ್ ಸೈಕಲ್ ಸಾಹಸ ಪ್ರದರ್ಶನಗಳು (ಡೇರ್‌ಡೆವಿಲ್ ಸ್ಟಂಟ್ಸ್), ಪೊಲೀಸ್ ಬ್ಯಾಂಡ್ ವಾದನ ಮತ್ತು ಪಂಜು ಗಳೊಂದಿಗೆ ಸಾಮೂಹಿಕ ಕವಾಯತು ನಡೆಯುತ್ತದೆ.
ರಾತ್ರಿಯ ವೇಳೆ ಆಕಾಶದಲ್ಲಿ ಮೂಡುವ ವರ್ಣ ರಂಜಿತ ಸುಂದರ ಸಿಡಿಮದ್ದು ಪ್ರದರ್ಶನ ಹಾಗೂ ಲೇಸರ್/ಡ್ರೋನ್ ಶೋ ಕೂಡ ಗಮನ ಸೆಳೆಯುತ್ತದೆ. ದಸರಾಗೆ ಅಂತಿಮ ಸ್ಪರ್ಶ ನೀಡುವ ಕಾರ್ಯಕ್ರಮ ಇದಾಗಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆಯು ದಸರಾ ಉತ್ಸವದ ಸಮಾಪ್ತಿಯನ್ನು ಸಾರುತ್ತದೆ.
ವಿದ್ಯುತ್ ದಿಪಾಲಂಕಾರ: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ವತಿಯಿಂದ ಮೈಸೂರು ನಗರದಲ್ಲಿ ಸುಮಾರು 130ರಿಂದ 136 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈವಿಧ್ಯಮಯ ಹಾಗೂ ಆಕರ್ಷಕ ವಿದ್ಯುತ್ ದೀಪಾ ಲಂಕಾರ ಮಾಡಲಾಗುತ್ತದೆ.
ಮೈಸೂರು ಅರಮನೆಗೂ ಸಹ ವಿಶೇಷವಾಗಿ ದೀಪಾಲಂಕಾರ ಮಾಡಲಾಗುತ್ತದೆ. ಇಡೀ ಮೈಸೂರು ನಗರವನ್ನು ಕಂಗೊಳಿಸುವಂತೆ ಮಾಡುವ ಈ ದೀಪಾಲಂಕಾರವು ನಗರದ ಸುಮಾರು 118 ಪ್ರಮುಖ ವೃತ್ತಗಳು ಮತ್ತು ಜಂಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಕರ್ನಾಟಕದ ಸಂಸ್ಕೃತಿ ಮತ್ತು ಸಾಧಕರನ್ನು ಬಿಂಬಿಸುವ 75ಕ್ಕೂ ಹೆಚ್ಚು ಕಲಾಕೃ ತಿಗಳನ್ನು ಎಲ್ಇಡಿ ದೀಪಗಳ ಮೂಲಕ ಪ್ರದರ್ಶಿ ಸಲಾಗುತ್ತದೆ.
ದೇಶ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರ ವೀಕ್ಷಣೆಗಾಗಿ ಈ ಅದ್ಭುತ ಬೆಳಕಿನ ಹಬ್ಬವನ್ನು ಒಟ್ಟು 21 ದಿನಗಳ ಕಾಲ ಮುಂದುವರಿಸಲಾಗುತ್ತದೆ. ಮೈಸೂರು ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕಲೆ, ಸಂಗೀತ, ನೃತ್ಯ, ಜನಪದ ಸಂಪ್ರದಾಯಗಳು ಮತ್ತು ಐತಿಹಾಸಿಕ ನೆನಪುಗಳನ್ನು ಒಂದೆಡೆ ಸೇರಿಸುವ ಉತ್ಸವವಾಗಿದೆ. ಅರಮನೆಯೊಳಗಿನ ಸಾಂಪ್ರದಾಯಿಕ ಆಚರಣೆಗಳು ಮೈಸೂರು ಒಡೆಯರ ಇತಿಹಾಸವನ್ನು ನೆನಪಿಸಿದರೆ, ಸಾರ್ವಜನಿಕ ದಸರಾ ಕಾರ್ಯಕ್ರಮಗಳು ಆ ಪರಂಪರೆಯನ್ನು ಜನಸಾಮಾನ್ಯ ರೊಂದಿಗೆ ಸಂಪರ್ಕಿಸುತ್ತವೆ. ಆದ್ದರಿಂದ, ಮನಮೋಹಕ ದಸರಾದ ಸೊಬಗನ್ನು ಸವಿಯಲು ದೇಶ ಮಾತ್ರವಲ್ಲದೇ, ವಿದೇಶೀ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಾರೆ.
ಸಮಾರೋಪ: ಮೈಸೂರು ದಸರಾ ಹಲವು ಶತಮಾನಗಳ ಇತಿಹಾಸ, ಧಾರ್ಮಿಕ ನಂಬಿಕೆ, ರಾಜಪರಂ ಪರೆ, ಕಲೆ, ಸಂಸ್ಕೃತಿ ಮತ್ತು ಜನಪಾಲ್ಗೊಳ್ಳುವಿಕೆಯ ಅಪೂರ್ವ ಸಂಗಮವಾಗಿದೆ. ವಿಜಯನಗರದ ಪರಂಪರೆ ಯಿಂದ ಮೈಸೂರು ಒಡೆಯರ ರಾಜ ವೈಭವದವರೆಗೆ ಮತ್ತು ಅಲ್ಲಿಂದ ಇಂದಿನ ನಾಡಹಬ್ಬದ ರೂಪದವರೆಗೆ ದಸರಾ ಹಲವು ಹಂತಗಳನ್ನು ದಾಟಿ ಬೆಳೆದಿದೆ. ಆದ್ದರಿಂದಲೇ ಮೈಸೂರು ರಾಜ್ಯದ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಬನ್ನಿ, ಈ ವರ್ಷದ ನಾಡಹಬ್ಬ ದಸರಾದಲ್ಲಿ ಎಲ್ಲರೂ ಪಾಲ್ಗೊಂಡು, ವೈವಿಧ್ಯಮಯ ಆಚರಣೆಗಳನ್ನು ಕಣ್ತುಂಬಿಕೊಳ್ಳೋಣ.