ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ಚಳಿಗಾಲದಲ್ಲಿ ತುಪ್ಪ ಮರೆಯದಿರಿ: ಆಂತರಿಕ ಸ್ನೇಹನದ ಮಹತ್ವ

ಚಳಿಗಾಲ ಆರಂಭವಾಗುತ್ತಿದ್ದಂತೆ ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿಯೂ ಕೆಲವು ಬದಲಾವಣೆ ಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಹಸಿವು ಹೆಚ್ಚಾಗುವುದು, ಆಹಾರದಲ್ಲಿ ಹೆಚ್ಚು ರುಚಿ ಮತ್ತು ಪೌಷ್ಟಿಕತೆಯನ್ನು ಬಯಸುವುದು, ದೇಹಕ್ಕೆ ಬಲವನ್ನು ನೀಡುವ ಆಹಾರಗಳತ್ತ ಮನಸ್ಸು ವಾಲುವುದು ಇವೆಲ್ಲವೂ ಋತುಧರ್ಮದ ಸಹಜ ಅಭಿವ್ಯಕ್ತಿಗಳು.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಚಳಿಗಾಲ ಆರಂಭವಾಗುತ್ತಿದ್ದಂತೆ ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿಯೂ ಕೆಲವು ಬದಲಾವಣೆ ಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಹಸಿವು ಹೆಚ್ಚಾಗುವುದು, ಆಹಾರದಲ್ಲಿ ಹೆಚ್ಚು ರುಚಿ ಮತ್ತು ಪೌಷ್ಟಿಕತೆಯನ್ನು ಬಯಸುವುದು, ದೇಹಕ್ಕೆ ಬಲವನ್ನು ನೀಡುವ ಆಹಾರಗಳತ್ತ ಮನಸ್ಸು ವಾಲುವುದು ಇವೆಲ್ಲವೂ ಋತುಧರ್ಮದ ಸಹಜ ಅಭಿವ್ಯಕ್ತಿಗಳು.

ಇಂತಹ ಸಂದರ್ಭದಲ್ಲಿ ಆಯುರ್ವೇದವು ವಿಶೇಷವಾಗಿ ಒತ್ತಿ ಹೇಳುವ ಒಂದು ಪ್ರಮುಖ ಆಹಾರ ನಿಯಮವೆಂದರೆ ಸ್ನಿಗ್ಧ ಆಹಾರದ ಸೇವನೆ. ಅಂದರೆ ಜಿಡ್ಡಿನ ಪದಾರ್ಥಗಳ ಬಳಕೆ! ಅದರಲ್ಲೂ ತುಪ್ಪದ ಬಳಕೆ ಚಳಿಗಾಲದಲ್ಲಿ ಮರೆಯಬಾರದ ಒಂದು ಮುಖ್ಯ ವಿಚಾರ. ಆಯುರ್ವೇದದಲ್ಲಿ ಚಳಿಗಾಲವನ್ನು ಹೇಮಂತ ಮತ್ತು ಶಿಶಿರ ಋತುಗಳ ದೃಷ್ಟಿಯಿಂದ ಅರ್ಥಮಾಡಿಕೊಳ್ಳಲಾಗುತ್ತದೆ. ಈ ಕಾಲದಲ್ಲಿ ಹೊರಗಿನ ಶೀತದ ಪ್ರಭಾವದಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಜಠರಾಗ್ನಿಯು ಬಲವಾಗಿರುತ್ತದೆ. ಆಹಾರ ವನ್ನು ಚೆನ್ನಾಗಿ ಜೀರ್ಣಿಸಿ ಕೊಳ್ಳುವ ಸಾಮರ್ಥ್ಯವೂ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಸಮರ್ಪಕ ಪ್ರಮಾಣದಲ್ಲಿ ಪೌಷ್ಟಿಕ, ಗುರು ಹಾಗೂ ಸ್ನಿಗ್ಧ ಆಹಾರವನ್ನು ಸೇವಿಸುವುದು ದೇಹದ ಬಲ ಮತ್ತು ಧಾತುಪೋಷಣೆಗೆ ಸಹಕಾರಿಯಾಗುತ್ತದೆ.

ಇಂತಹ ಆಹಾರದಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಆಹಾರ ಸೇವನಾ ನಿಯಮದಲ್ಲಿ ಬರುವ ಬಹಳ ಮುಖ್ಯವಾದ ನಿಯಮವೆಂದರೆ ‘ಸ್ನಿಗ್ಧಂ ಅಶ್ನೀಯಾತ್’. ಅಂದರೆ ನಾವು ಸ್ನಿಗ್ಧ(ಜಿಡ್ಡು) ಗುಣವುಳ್ಳ ಆಹಾರವನ್ನು ಸೇವಿಸಬೇಕು ಎಂದರ್ಥ. ಹಾಗಾದರೆ, ಆಯುರ್ವೇದದಲ್ಲಿ ಈ ಜಿಡ್ಡಿನ ಪದಾರ್ಥಗಳಿಗೆ ಯಾಕೆ ಇಷ್ಟೊಂದು ಮಹತ್ವ ನೀಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆಯುರ್ವೇದದಲ್ಲಿ ಜಿಡ್ಡಿನ ಪದಾರ್ಥಗಳನ್ನು ಸಾಮಾನ್ಯವಾಗಿ ‘ಸ್ನೇಹ’ ಎಂದು ಕರೆಯುತ್ತಾರೆ.

ಇದನ್ನೂ ಓದಿ: Dr Sadhanashree Column: ಹೇಮಂತ ಋತು: ದೇಹದ ಶಕ್ತಿ ಪೋಷಿಸಿಕೊಳ್ಳುವ ಸಮಯ

ಅರೇ! ಸಂಸ್ಕೃತದಲ್ಲಿ ಸ್ನೇಹ ಎಂದರೆ ಪ್ರೀತಿ, ಬಂಧನ ಎಂದರ್ಥವಲ್ಲವೇ? ಹಾಗಾದರೆ ಜಿಡ್ಡಿನ ಪದಾರ್ಥ ಗಳಿಗೆ ಸ್ನೇಹ ಎಂದು ಯಾಕೆ ಕರೆದಿzರೆ? ಅದರ ಒಂದು ಸ್ವಾರಸ್ಯಕರವಾದ ಅರ್ಥ ಅಡಗಿದೆ. ಸ್ನೇಹವೆಂದರೆ ಎರಡು ಅಥವಾ ಅನೇಕ ವಸ್ತುಗಳನ್ನು ಪರಸ್ಪರ ಒಪ್ಪಿಗೆಯಿಂದ ಒಟ್ಟಿಗೆ ಹಿಡಿದಿಡುವ ಬಂಧನ. ಯಾವ ದ್ರವ್ಯವು ವಿವಿಧ ಘಟಕಗಳನ್ನು ಪರಸ್ಪರ ಬೆಸೆದು, ಅವುಗಳ ಒಕ್ಕೂಟವನ್ನು ಕಾಪಾಡುತ್ತದೆಯೋ ಅದುವೇ ಸ್ನೇಹ. ನಮ್ಮ ಜೀವವೂ ಒಂದು ಸುಂದರವಾದ ಒಕ್ಕೂಟ. ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮ ಎಂಬ ನಾಲ್ಕು ಘಟಕಗಳ ಸಮನ್ವಯವೇ ಆಯುಸ್ಸು. ಈ ಒಕ್ಕೂಟದಲ್ಲಿ ಬಿರುಕುಂಟಾದರೆ ಅದುವೇ ರೋಗ. ಈ ಬಿರುಕು ಬೆಳೆದು ಒಕ್ಕೂಟವೇ ನಾಶವಾದರೆ ಅದುವೇ ಮರಣ. ಹಾಗಾದರೆ, ಈ ಒಕ್ಕೂಟವನ್ನು ಒಟ್ಟಿಗೆ ಹಿಡಿದಿಟ್ಟು, ಅದರ ಸಮನ್ವಯ ಮತ್ತು ಸ್ಥಿರತೆಯನ್ನು ಕಾಪಾಡುವಲ್ಲಿ ಸ್ನೇಹ ದ್ರವ್ಯಗಳ ಪಾತ್ರ ಮಹತ್ವದ್ದು. ಅತಿ ಸೂಕ್ಷ್ಮ ಘಟಕಗಳಿಂದ ಹಿಡಿದು ದೊಡ್ಡ ದೊಡ್ಡ ಅವಯವಗಳವರೆಗೂ ದೇಹದ ವಿವಿಧ ಘಟಕಗಳ ಪೋಷಣೆ ಮತ್ತು ಸಮನ್ವಯದಲ್ಲಿ ಸ್ನೇಹ ದ್ರವ್ಯಗಳು ಸಹಕಾರಿಯಾಗುತ್ತವೆ.

ಸ್ನೇಹ ದ್ರವ್ಯಗಳಿಲ್ಲದೆ ದೇಹದ ಸಹಜ ಪೋಷಣೆ ಮತ್ತು ಸ್ವಾಸ್ಥ್ಯವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಈ ಕಾರಣಕ್ಕಾಗಿಯೇ ಆಯುರ್ವೇದವು ಸ್ನೇಹ ದ್ರವ್ಯಗಳಿಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಿದೆ. ಆಯುರ್ವೇದವು ನಾಲ್ಕು ಪ್ರಮುಖ ಸ್ನೇಹ ದ್ರವ್ಯಗಳನ್ನು ಗುರುತಿಸಿದೆ. ಅವುಗಳೆಂದರೆ ಘೃತ (ತುಪ್ಪ), ತೈಲ (ಎಣ್ಣೆ), ವಸಾ (ಚರ್ಬಿ) ಮತ್ತು ಮಜ್ಜಾ (ಮೂಳೆಗಳಲ್ಲಿರುವ ಸ್ನೇಹ). ಇವುಗಳಲ್ಲಿ ತುಪ್ಪವನ್ನು ಅತ್ಯಂತ ಶ್ರೇಷ್ಠ ಸ್ನೇಹ ದ್ರವ್ಯವೆಂದು ಪರಿಗಣಿಸಲಾಗಿದೆ. ತುಪ್ಪವು ಕೇವಲ ಶರೀರದ ಪೋಷಣೆ ಯನ್ನಷ್ಟೇ ಮಾಡದೆ, ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಪೋಷಣೆಗೂ ಸಹಕಾರಿಯಾಗಿದೆ.

ಇದೇ ಕಾರಣಕ್ಕೆ ಘೃತಕ್ಕೆ ಆಯುರ್ವೇದದಲ್ಲಿ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ಚಳಿಗಾಲದಲ್ಲಿ ಸ್ನೇಹನದ ಮಹತ್ವವನ್ನು ಅರ್ಥ ಮಾಡಿ ಕೊಳ್ಳುವುದು ಬಹಳ ಮುಖ್ಯ. ಶೀತ ಮತ್ತು ರೂಕ್ಷ (ಒಣಗಿಸುವ) ಗುಣಗಳ ಪ್ರಭಾವದಿಂದ ದೇಹದಲ್ಲಿ ವಾತದ ಪ್ರಕೋಪವಾಗುವ ಸಾಧ್ಯತೆ ಇರುತ್ತದೆ. ವಾತದ ಸ್ವಭಾವವೇ ರೂಕ್ಷ, ಲಘು, ಶೀತ ಮತ್ತು ಚಲ ಗುಣಗಳಿಂದ ಕೂಡಿರುವುದು. ಇದಕ್ಕೆ ವಿರುದ್ಧವಾದ ಸ್ನಿಗ್ಧ ಗುಣವು ವಾತ ವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ತುಪ್ಪವು ಸ್ನಿಗ್ಧ ಗುಣವುಳ್ಳದ್ದಾಗಿದ್ದು, ವಾತ ಮತ್ತು ಪಿತ್ತವನ್ನು ಶಮನಗೊಳಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಚಳಿಗಾಲದಲ್ಲಿ ದೇಹದ ಆಂತರಿಕ ಸ್ನಿಗ್ಧತೆಯನ್ನು ಕಾಪಾಡಿ ಕೊಳ್ಳಲು ತುಪ್ಪದ ಸಮರ್ಪಕ ಸೇವನೆ ಬಹಳ ಉಪಯುಕ್ತ ವಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯವಾದ ವಿಷಯವೆಂದರೆ ಆಂತರಿಕ ಸ್ನೇಹನ (Internal Oleation). ಸಾಮಾನ್ಯವಾಗಿ ಅಭ್ಯಂಗದಂತಹ ಬಾಹ್ಯ ಸ್ನೇಹನದ ಬಗ್ಗೆ ನಮಗೆ ಹೆಚ್ಚು ಪರಿಚಯವಿರುತ್ತದೆ. ಆದರೆ ದೇಹದ ಒಳಗಿನ ಧಾತುಗಳಿಗೆ ಸ್ನಿಗ್ಧತೆಯನ್ನು ಒದಗಿಸುವ ಆಂತರಿಕ ಸ್ನೇಹನಕ್ಕೂ ಅಷ್ಟೇ ಮಹತ್ವವಿದೆ.

ನಾವು ಸೇವಿಸುವ ಆಹಾರದಲ್ಲಿರುವ ಸ್ನಿಗ್ಧ ದ್ರವ್ಯಗಳು ದೇಹದ ಪೋಷಣೆ ಮತ್ತು ಧಾತುಗಳ ವೃದ್ಧಿಗೆ ನೆರವಾಗುತ್ತವೆ. ತುಪ್ಪದ ನಿಯಮಿತ ಮತ್ತು ಯುಕ್ತಿಯುಕ್ತ ಸೇವನೆಯು ಈ ದೃಷ್ಟಿಯಿಂದ ಮಹತ್ವದ್ದಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ಆಂತರಿಕ ಸ್ನೇಹನವನ್ನು ನಿರ್ಲಕ್ಷಿಸಬಾರದು. ಘೃತದ ಗುಣಗಳನ್ನು ವಿವರಿಸುವಾಗ ಆಯುರ್ವೇದವು ಅದನ್ನು ಬುದ್ಧಿ, ಸ್ಮೃತಿ, ಅಗ್ನಿ, ಬಲ, ಆಯಸ್ಸು, ಓಜಸ್ಸು ಮತ್ತು ಕಾಂತಿಯನ್ನು ವೃದ್ಧಿಸುವ ದ್ರವ್ಯವೆಂದು ವರ್ಣಿಸಿದೆ. ಇದು ಇಂದ್ರಿಯ ಗಳಿಗೆ ಪುಷ್ಟಿಯನ್ನು ನೀಡುತ್ತದೆ.

ವಿಶೇಷವಾಗಿ ದೃಷ್ಟಿಶಕ್ತಿಗೆ ಹಿತಕರವಾಗಿದೆ. ಮನಸ್ಸಿಗೆ ಪ್ರಸನ್ನತೆಯನ್ನು ನೀಡುತ್ತದೆ. ಸತ್ತ್ವಗುಣ ವನ್ನು ವೃದ್ಧಿಸುತ್ತದೆ. ವಾತ ಮತ್ತು ಪಿತ್ತವನ್ನು ಶಮನಗೊಳಿಸುತ್ತದೆ. ಉತ್ತಮ ರಸಾಯನವಾಗಿರುವು ದರಿಂದ ಧಾತುಪೋಷಣೆ ಮತ್ತು ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪವು ದೇಹದ ರಸಧಾತುವನ್ನು ಪೋಷಿಸಿ, ಧಾತುಗಳ ಪುಷ್ಟಿಗೆ ಸಹಕಾರಿಯಾಗಿದೆ. ಶುಕ್ರಧಾತುವಿನ ಪೋಷಣೆಯಲ್ಲಿಯೂ ಇದರ ಪಾತ್ರವನ್ನು ಆಯುರ್ವೇದ ವಿವರಿಸಿದೆ. ಓಜಸ್ಸನ್ನು ವೃದ್ಧಿಸಿ ದೇಹಬಲ ಮತ್ತು ವ್ಯಾಧಿಕ್ಷಮತ್ವವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ತುಪ್ಪವು ಕೇವಲ ರುಚಿಗಾಗಿ ಬಳಸುವ ಆಹಾರ ಪದಾರ್ಥವಲ್ಲ; ಅದು ಆಹಾರದಲ್ಲಿಯೇ ಅಡಕವಾಗಿರುವ ಒಂದು ಮಹತ್ವದ ಔಷಧಿಯ ದ್ರವ್ಯ.

ಹಾಗಾದರೆ, ತುಪ್ಪವನ್ನು ಹೇಗೆ ಬಳಸಬೇಕು?: ಸ್ವಾಸ್ಥ್ಯ ಸಾಧನೆಗೆ ತುಪ್ಪವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ತುಪ್ಪದ ಸೇವನೆಯಿಂದ ಪೂರ್ಣ ಪ್ರಯೋಜನ ಪಡೆಯಬೇಕಾದರೆ ಅದರ ಸೇವನೆಯ ಪ್ರಮಾಣ, ಸಮಯ ಮತ್ತು ವಿಧಾನಗಳ ಬಗ್ಗೆ ವಿವೇಚನೆ ಇರಬೇಕು.

1 ತುಪ್ಪವನ್ನು ಹಸಿವಾದಾಗ ಮಾತ್ರ ಆಹಾರದೊಂದಿಗೆ ಬಳಸಬೇಕು: ನಿಜವಾದ ಹಸಿವು ಉಂಟಾದಾಗ ನಮ್ಮ ಜಠರಾಗ್ನಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸಿದ್ಧವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸೇವಿಸುವ ತುಪ್ಪವು ಸರಿಯಾಗಿ ಜೀರ್ಣಗೊಂಡು ದೇಹದ ಪೋಷಣೆಗೆ ಸಹಕಾರಿ ಯಾಗುತ್ತದೆ. ಹಸಿವಿಲ್ಲದಿದ್ದಾಗ ಕೇವಲ ರುಚಿಗಾಗಿ ಅಥವಾ ಅಭ್ಯಾಸಕ್ಕಾಗಿ ತುಪ್ಪವನ್ನು ಸೇವಿಸುವುದು ಸೂಕ್ತವಲ್ಲ.

2 ನಮ್ಮ ಜೀರ್ಣಶಕ್ತಿಗೆ ಅನುಗುಣವಾಗಿ ತುಪ್ಪದ ಪ್ರಮಾಣವನ್ನು ನಿರ್ಧರಿಸಿಕೊಳ್ಳಬೇಕು: ಎಲ್ಲರಿಗೂ ಒಂದೇ ಪ್ರಮಾಣದ ತುಪ್ಪ ಸೂಕ್ತವಾಗುವುದಿಲ್ಲ. ನಮ್ಮ ಅಗ್ನಿಬಲ, ದೇಹಬಲ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಅದರ ಪ್ರಮಾಣವನ್ನು ನಿರ್ಧರಿಸಬೇಕು. ಉದಾಹರಣೆಗೆ, ಬೆಳಗಿನ ಉಪಾಹಾರದಲ್ಲಿ ಸೇವಿಸಿದ ತುಪ್ಪವು ಯಾವುದೇ ತೊಂದರೆಯನ್ನು ಉಂಟುಮಾಡದೆ ಮಧ್ಯಾಹ್ನದ ಆಹಾರಕಾಲದೊಳಗೆ ಸಂಪೂರ್ಣವಾಗಿ ಜೀರ್ಣವಾಗಿ, ಮತ್ತೆ ಸಹಜವಾದ ಹಸಿವು ಉಂಟಾಗ ಬೇಕು. ಹೀಗೆ ಮುಂದಿನ ಆಹಾರ ಕಾಲದಲ್ಲಿ ಉತ್ತಮ ಹಸಿವು ಉಂಟಾಗುವುದೇ ನಮಗೆ ಸೇವಿಸಿದ ತುಪ್ಪದ ಪ್ರಮಾಣ ಸೂಕ್ತವಾಗಿದೆ ಎಂಬುದರ ಸೂಚನೆ.

೩ ತುಪ್ಪವನ್ನು ಸದಾ ಕರಗಿಸಿಯೇ ಬಳಸಬೇಕು: ತುಪ್ಪವನ್ನು ಕರಗಿದ ರೂಪದಲ್ಲಿ ಸೇವಿಸುವುದು ಆಯುರ್ವೇದದ ದೃಷ್ಟಿಯಿಂದ ಉತ್ತಮ. ಫ್ರಿಡ್ಜ್‌ನಲ್ಲಿ ಇಟ್ಟು ಗಟ್ಟಿಯಾದ ತುಪ್ಪವನ್ನು ನೇರವಾಗಿ ಆಹಾರ ದೊಂದಿಗೆ ಸೇವಿಸು ವುದನ್ನು ತಪ್ಪಿಸಬೇಕು. ಅಗತ್ಯವಿರು ವಷ್ಟು ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ದ್ರವರೂಪಕ್ಕೆ ತಂದು ಆಹಾರದಲ್ಲಿ ಬೆರೆಸಿಕೊಳ್ಳಬೇಕು.

4 ಯಾವಾಗಲೂ ಬಿಸಿಯಾದ ಆಹಾರದ ಜೊತೆ ಮಾತ್ರ ತುಪ್ಪವನ್ನು ಬಳಸಬೇಕು: ತುಪ್ಪವನ್ನು ಬಿಸಿಯಾದ ಅನ್ನ, ಬಿಸಿ ರೊಟ್ಟಿ ಅಥವಾ ಇತರ ಬಿಸಿಯಾದ ಆಹಾರ ಗಳೊಂದಿಗೆ ಸೇವಿಸುವುದು ಸೂಕ್ತ. ಆಹಾರದ ಉಷ್ಣತೆ ಯೊಂದಿಗೆ ಕರಗಿದ ತುಪ್ಪವು ಆಹಾರದೊಂದಿಗೆ ಸುಲಭವಾಗಿ ಬೆರೆಯುತ್ತದೆ. ಹೀಗಾಗಿ ತುಪ್ಪವನ್ನು ಬಳಸುವಾಗ ಆಹಾರವೂ ಬಿಸಿಯಾಗಿ ರುವಂತೆ ನೋಡಿಕೊಳ್ಳಬೇಕು.

5 ತುಪ್ಪದ ಆಹಾರದ ಸೇವನೆಯ ಜೊತೆ ಸದಾ ಬಿಸಿ ನೀರನ್ನು ಸೇವಿಸಬೇಕು: ತುಪ್ಪವನ್ನು ಒಳಗೊಂಡ ಆಹಾರವನ್ನು ಸೇವಿಸಿದಾಗ ಅದರ ಜೊತೆಗೆ ಬಿಸಿನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ವಿಶೇಷವಾಗಿ ಚಳಿಗಾಲದಲ್ಲಿ ಈ ನಿಯಮವನ್ನು ಪಾಲಿಸುವುದು ಇನ್ನೂ ಮುಖ್ಯ. ತುಪ್ಪದ ಆಹಾರವನ್ನು ಸೇವಿಸಿದ ತಕ್ಷಣ ತಣ್ಣೀರು, ಹಣ್ಣಿನ ರಸ, ಕೋಲ್ಡ್ ಡ್ರಿಂಕ್ಸ್ ಅಥವಾ ಐಸ್ಕ್ರೀಮ್ ಸೇವಿಸುವುದನ್ನು ತಪ್ಪಿಸಬೇಕು. ಆಹಾರದೊಂದಿಗೆ ತಣ್ಣನೆಯ ಪದಾರ್ಥಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆ ಇದೆ. ‌

6 ತುಪ್ಪದ ಸೇವನೆಯ ಜೊತೆಗೆ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಬೇಕು: ತುಪ್ಪವು ಗುರು ಮತ್ತು ಸ್ನಿಗ್ಧ ಗುಣವುಳ್ಳದ್ದಾಗಿರುವುದರಿಂದ ಅದರ ಸೇವನೆಯ ಜೊತೆಗೆ ದೇಹಕ್ಕೆ ತಕ್ಕಷ್ಟು ವ್ಯಾಯಾಮ ಮತ್ತು ದೈಹಿಕ ಶ್ರಮವೂ ಇರಬೇಕು. ವ್ಯಾಯಾಮವು ದೇಹದ ಬಲ ವನ್ನು ವೃದ್ಧಿಸುವುದರ ಜೊತೆಗೆ ಜೀರ್ಣಶಕ್ತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ದೈಹಿಕ ಚಟು ವಟಿಕೆಯೇ ಇಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿ ಮೇದಸ್ಸು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತುಪ್ಪದ ಸೇವನೆ ಮತ್ತು ವ್ಯಾಯಾಮ ಇವೆರಡೂ ಸಮತೋಲನದಿಂದ ಕೂಡಿರಬೇಕು.

ಇಲ್ಲಿ ಒಂದು ಎಚ್ಚರಿಕೆಯೂ ಅಗತ್ಯ. ಚಳಿಗಾಲವೆಂದು ಹೇಳಿ ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಸೇವಿಸ ಬೇಕೆಂದಲ್ಲ. ಮಂದಾಗ್ನಿ, ಅಜೀರ್ಣ, ಆಮದೋಷ, ಸ್ಥೌಲ್ಯ ಮುಂತಾದ ಸ್ಥಿತಿಗಳಲ್ಲಿ ತುಪ್ಪದ ಸೇವನೆಯನ್ನು ಯುಕ್ತಿಯಿಂದ ನಿರ್ಧರಿಸಬೇಕು. ವ್ಯಕ್ತಿಯ ಪ್ರಕೃತಿ, ವಯಸ್ಸು, ಅಗ್ನಿಬಲ, ದೇಹಬಲ ಮತ್ತು ವ್ಯಾಧಿಯ ಸ್ಥಿತಿಯನ್ನು ಪರಿಗಣಿಸಿ ಅದರ ಪ್ರಮಾಣ ಹಾಗೂ ಉಪಯೋಗದ ವಿಧಾನವನ್ನು ನಿರ್ಧರಿಸಬೇಕು.

ಆಯುರ್ವೇದವು ಯಾವುದೇ ಆಹಾರವನ್ನೂ ಎಲ್ಲರಿಗೂ ಒಂದೇ ರೀತಿಯಲ್ಲಿ ಸೂಚಿಸುವುದಿಲ್ಲ. ಹಿತ-ಮಿತ- ಯುಕ್ತಿಯುಕ್ತ ಸೇವನೆಯೇ ಅದರ ಮೂಲತತ್ತ್ವ. ಸ್ನೇಹಿತರೆ, ಚಳಿಗಾಲವೆಂದರೆ ಕೇವಲ ಶೀತದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಕಾಲವಲ್ಲ; ನಮ್ಮ ದೇಹವನ್ನು ಸಮೃದ್ಧವಾಗಿ ಪೋಷಿಸಿ ಕೊಳ್ಳುವ ಕಾಲವೂ ಹೌದು. ಆಯುರ್ವೇದದ ಪ್ರಕಾರ ಹೇಮಂತ ಋತುವಿನಲ್ಲಿ ಜಠರಾಗ್ನಿಯು ಸಹಜವಾಗಿಯೇ ಬಲಗೊಳ್ಳುತ್ತದೆ. ಹೊರಗಿನ ಶೀತದ ಪ್ರಭಾವದಿಂದ ಜಠರಾಗ್ನಿಯು ದೇಹದ ಒಳಭಾಗದಲ್ಲಿ ಪ್ರಬಲ ವಾಗುತ್ತದೆ. ಈ ಬಲಿಷ್ಠವಾದ ಅಗ್ನಿಗೆ ಸಮರ್ಪಕವಾದ ಆಹಾರವನ್ನು ಒದಗಿಸುವುದು ಅತ್ಯಂತ ಮುಖ್ಯ. ಈ ಸಂದರ್ಭದಲ್ಲಿ ತುಪ್ಪ, ಎಳ್ಳೆಣ್ಣೆ ಸೇರಿದಂತೆ ವಿವಿಧ ಸ್ನಿಗ್ಧ ದ್ರವ್ಯಗಳನ್ನು ನಮ್ಮ ಆಹಾರದಲ್ಲಿ ಯುಕ್ತವಾಗಿ ಅಳವಡಿಸಿಕೊಳ್ಳುವುದರಿಂದ ದೇಹದ ಸಮರ್ಪಕ ಪೋಷಣೆಗೆ ಸಹಕಾರಿಯಾಗುತ್ತದೆ.

ಹೀಗೆ ನಾವು ಸೇವಿಸುವ ಆಹಾರವು ಚೆನ್ನಾಗಿ ಜೀರ್ಣಗೊಂಡು ರಸದಿಂದ ಹಿಡಿದು ಶುಕ್ರದವರೆಗಿನ ಎಲ್ಲಾ ಧಾತುಗಳ ಪೋಷಣೆಗೆ ನೆರವಾಗುತ್ತದೆ. ಚಳಿಗಾಲದಲ್ಲಿ ದೇಹಕ್ಕೆ ಕೇವಲ ಹೊರಗಿನ ಉಷ್ಣತೆಯಷ್ಟೇ ಅಗತ್ಯವಿಲ್ಲ; ಒಳಗಿನ ಪೋಷಣೆ ಮತ್ತು ಸ್ನಿಗ್ಧತೆಯೂ ಅಗತ್ಯ. ಅದಕ್ಕಾಗಿಯೇ ನಮ್ಮ ಹಿರಿಯರು ಚಳಿಗಾಲದ ಆಹಾರದಲ್ಲಿ ತುಪ್ಪ, ಎಳ್ಳೆಣ್ಣೆ ಮತ್ತು ಇತರ ಸ್ನಿಗ್ಧ ಪದಾರ್ಥಗಳಿಗೆ ವಿಶೇಷ ಸ್ಥಾನ ನೀಡುತ್ತಿದ್ದರು.

ತುಪ್ಪವನ್ನು ಸಂಪೂರ್ಣವಾಗಿ ದೂರವಿಡುವುದು ಆರೋಗ್ಯದ ದೃಷ್ಟಿಯಿಂದ ವಿವೇಕಯುತ ನಿರ್ಧಾರ ವಲ್ಲ; ಹಾಗೆಯೇ ಮಿತಿಮೀರಿದ ಸೇವನೆಯೂ ಸೂಕ್ತವಲ್ಲ. ಹೀಗಾಗಿ ಚಳಿಗಾಲವು ನಮ್ಮ ದೇಹದ ಬಲವನ್ನು ವೃದ್ಧಿಸಿಕೊಳ್ಳಲು, ಧಾತುಗಳನ್ನು ಸಮೃದ್ಧವಾಗಿ ಪೋಷಿಸಿಕೊಳ್ಳಲು ಮತ್ತು ಓಜಸ್ಸನ್ನು ಹೆಚ್ಚಿಸಿಕೊಳ್ಳಲು ಪ್ರಕೃತಿ ನಮಗೆ ನೀಡಿರುವ ಒಂದು ಅತ್ಯುತ್ತಮ ಅವಕಾಶ. ಈ ಅವಕಾಶವನ್ನು ಕಳೆದುಕೊಳ್ಳದೆ, ನಮ್ಮ ಜೀರ್ಣಶಕ್ತಿಗೆ ಅನುಗುಣವಾಗಿ ಸ್ನಿಗ್ಧ ಆಹಾರಗಳನ್ನು, ಅದರಲ್ಲೂ ಅಮೃತ ಪ್ರಾಯವಾದ ತುಪ್ಪವನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತವಾಗಿ ಬಳಸಿಕೊಳ್ಳೋಣ. ಸ್ನೇಹವು ದೇಹವನ್ನು ಪೋಷಿಸುತ್ತದೆ, ಬಂಧಿಸುತ್ತದೆ ಮತ್ತು ಬಲಪಡಿಸುತ್ತದೆ. ಈ ಚಳಿಗಾಲವನ್ನು ಕೇವಲ ಕಳೆಯುವುದಲ್ಲ, ನಮ್ಮನ್ನು ನಾವು ಸಮೃದ್ಧವಾಗಿ ಪೋಷಿಸಿಕೊಳ್ಳುವ ಋತುವನ್ನಾಗಿ ಮಾಡಿಕೊಳ್ಳೋಣ.

ಈ ಋತುವಿನಲ್ಲಿ ಗಳಿಸಿದ ಬಲ ಮತ್ತು ಪೋಷಣೆಯು ಮುಂದಿನ ದಿನಗಳಲ್ಲಿಯೂ ನಮ್ಮ ಆರೋಗ್ಯ ವನ್ನು ಕಾಪಾಡಲು ನೆರವಾಗಲಿ. ತುಪ್ಪದ ಸೇವನೆ ಭಯದಿಂದಲ್ಲ, ವಿವೇಚನೆಯಿಂದಿರಲಿ!

ಡಾ. ಸಾಧನಾಶ್ರೀ ಪಿ,

View all posts by this author