ಸುರೇಂದ್ರ ಪೈ ಭಟ್ಕಳ
ಭಗವಾನ್ ಬುದ್ಧನಿಗೆ ನೇರವಾಗಿ ಸಂಬಂಧಿಸಿದ ಕೆಲವು ವಸ್ತುಗಳು, ಮೂಳೆಯ ಚೂರುಗಳು ಮತ್ತು ಅಪರೂಪದ ಬ್ರಾಹ್ಮಿ ಲಿಪಿಯ ಶಾಸನವನ್ನು, ಬ್ರಿಟಿಷ್ ವ್ಯಕ್ತಿ ಪೆಪ್ಪೆ ಎಂಬಾತನು 1898ರಲ್ಲಿ ನಮ್ಮ ದೇಶದ ಒಂದು ಗ್ರಾಮದಲ್ಲಿದ್ದ ಸ್ತೂಪದಿಂದ ಅಗೆದು ತೆಗೆದು, ಇಂಗ್ಲೆಂಡಿಗೆ ಸಾಗಿಸಿದ್ದ. ಅದನ್ನು ಆತನ ವಂಶಸ್ತರು ಇತ್ತೀಚೆಗೆ ಹರಾಜು ಮಾಡಲು ನಿರ್ಧರಿಸಿದಾಗ, ಅದನ್ನು ತಡೆಯಲು ನಮ್ಮ ದೇಶ ಪ್ರಯತ್ನಿಸಿತ್ತು. ಈಗ ಆ ಅಮೂಲ್ಯ ವಸ್ತುಗಳನ್ನು, ಮುತ್ತು ರತ್ನಗಳನ್ನು ದೆಹಲಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ.
ಜನವರಿ 3 ರಂದು ನವದೆಹಲಿಯಲ್ಲಿ ಆಧ್ಯಾತ್ಮಿಕ ಶುದ್ಧತೆ ಮತ್ತು ಪರಿಪೂರ್ಣತೆ ಸಾರುವ ‘ದಿ ಲೈಟ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ (‘ಬೆಳಕು ಮತ್ತು ಕಮಲ : ಜ್ಞಾನೋದಯ ಪಡೆದವರ ಅವಶೇಷ’) ಎಂಬ ಶೀರ್ಷಿಕೆಯಡಿಯಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಿ ದರು.
127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಒಂದು ಶತಮಾನ ಕ್ಕೂ ಹೆಚ್ಚು ಅವಧಿಯ (127 ವರ್ಷಗಳ ಬಳಿಕ) ಜುಲೈ 30, 2025ರಂದು ಸ್ವದೇಶಕ್ಕೆ ಮರಳಿ ತರಲಾದ ಪಿಪ್ರಹ್ವಾದ ಅಧಿಕೃತ ಅವಶೇಷಗಳು ಮತ್ತು ಪುರಾತತ್ತ್ವ ವಸ್ತುಗಳನ್ನು ಇದೇ ಮೊದಲ ಬಾರಿ ನಮ್ಮ ದೇಶದಲ್ಲಿ ಪ್ರದರ್ಶಿಸಲಾಗುತ್ತಿದೆ.
ಪಿಪ್ರಾಹ್ವಾ ಅವಶೇಷಗಳ ಮಹತ್ವ: 1898 ರಲ್ಲಿ ಪತ್ತೆಯಾದ ಪಿಪ್ರಾಹ್ವಾ ಅವಶೇಷಗಳು ಆರಂಭಿಕ ಬೌದ್ಧಧರ್ಮದ ಅಧ್ಯಯನದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ. ಇವು ಭಗವಾನ್ ಬುದ್ಧನಿಗೆ ನೇರವಾಗಿ ಸಂಬಂಧಿಸಿದ ಮತ್ತು ಅತ್ಯಂತ ಐತಿಹಾಸಿಕ ಮಹತ್ವದ ಅವಶೇಷಗಳು. ಭಗವಾನ್ ಬುದ್ಧನು ಅರಮನೆ ತ್ಯಜಿಸುವ ಮೊದಲು ತನ್ನ ಆರಂಭಿಕ ಜೀವನವನ್ನು ಕಳೆದ ಸ್ಥಳ ಎಂದು ವ್ಯಾಪಕವಾಗಿ ಗುರುತಿಸಲಾದ ಕಪಿಲವಸ್ತುವಿನೊಂದಿಗೆ ಪ್ರಾಚೀನ ಪಿಪ್ರಾಹ್ವಾಗಳನ್ನು ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಸಂಯೋಜಿಸುತ್ತವೆ.
ಇದನ್ನೂ ಓದಿ: Surendra Pai Column: ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು
ಸರ್ಕಾರದ ನಿರಂತರ ಪ್ರಯತ್ನ, ಸಾಂಸ್ಥಿಕ ಸಹಕಾರ ಮತ್ತು ನವೀನ ಸಾರ್ವಜನಿಕ-ಖಾಸಗಿ ಸಹಭಾಗಿ ತ್ವದ ಮೂಲಕ ಇತ್ತೀಚೆಗೆ ಈ ಅವಶೇಷಗಳನ್ನು ತವರಿಗೆ ಮರಳಿ ತರಲು ಸಾಧ್ಯವಾಗಿದೆ. ಈ ಪ್ರದರ್ಶನವನ್ನು ವಿಷಯಾಧಾರಿತವಾಗಿ ಆಯೋಜಿಸಲಾಗಿದೆ. ಸಾಂಚಿ ಸ್ತೂಪದಿಂದ ಪ್ರೇರಣೆ ಪಡೆದು ಪುನರ್ ನಿರ್ಮಿಸಲಾದ ಹಾಗೂ ರಾಷ್ಟ್ರೀಯ ಸಂಗ್ರಹಗಳಿಂದ ಅಧಿಕೃತ ಅವಶೇಷಗಳು ಮತ್ತು ಸ್ವದೇಶಕ್ಕೆ ಮರಳಿ ತಂದ ರತ್ನಗಳನ್ನು ಒಟ್ಟುಗೂಡಿಸಿದ ನಿರೂಪಣಾ ಮಾದರಿಯನ್ನು ಪ್ರದರ್ಶನದ ಮಧ್ಯಭಾಗದಲ್ಲಿ ನೋಡಬಹುದು.
ಪಿಪ್ರಾಹ್ವಾ ರಿವಿಸಿಟೆಡ್ (ಮರಳಿ ತಂದ ಅವಶೇಷ), ವಿಗ್ನೆಟ್ಸ್ ಆಫ್ ದಿ ಲೈಫ್ ಆಫ್ ಬುದ್ಧ (ಬುದ್ಧನ ಜೀವನ ಪಯಣ), ಇಂಟ್ಯಾಂಜಿಬಲ್ ಇನ್ ದಿ ಟಾಂಜಿಬಲ್: ದಿ ಏಸ್ಥೆಟಿಕ್ ಲ್ಯಾಂಗ್ವೇಜ್ ಆಫ್ ಬುದ್ದಿಸ್ಟ್ ಟೀಚಿಂಗ್ಸ್ (ಅಮೂರ್ತದಲ್ಲಿ ವಾಸ್ತವ: ಬುದ್ಧನ ಬೋಧನೆಗಳ ಸೌಂದರ್ಯ), ಎಕ್ಸ್ ಪ್ಯಾನ್ಶನ್ ಆಫ್ ಬುದ್ಧಿಸ್ಟ್ ಆರ್ಟ್ ಅಂಡ್ ಐಡಿಯಲ್ಸ್ ಬಿಯಾಂಡ್ ಬಾರ್ಡರ್ಸ್ (ಎಲ್ಲೆ ಮೀರಿ ಬೌದ್ಧ ಕಲೆ ಮತ್ತು ಆದರ್ಶಗಳ ವಿಸ್ತರಣೆ) ಹಾಗೂ ರಿಪ್ಯಾಟ್ರಿಯೇಶನ್ ಆಫ್ ಕಲ್ಚರಲ್ ಆರ್ಟೆ ಫ್ಯಾಕ್ಟ್ಸ್: ದಿ ಕಂಟಿನ್ಯೂಯಿಂಗ್ ಎಂಡೀವರ್ (ಸಾಂಸ್ಕೃತಿಕ ಕರಕುಶಲತಾ ವಸ್ತುಗಳು ತವರಿಗೆ ವಾಪಸ್ ಮುಂದುವರಿದ ಪ್ರಯತ್ನ) ಇತರ ವಿಭಾಗಗಳಾಗಿವೆ.
ಈ ಪ್ರದರ್ಶನದಲ್ಲಿ ಸಮಗ್ರ ಶ್ರವ್ಯ-ದೃಶ್ಯ ವಿವರಣೆಯೂ ಇದೆ ಮತ್ತು ಇವು ಭಗವಾನ್ ಬುದ್ಧನ ಜೀವನ, ಪಿಪ್ರಾಹ್ವಾ ಅವಶೇಷಗಳ ಆವಿಷ್ಕಾರ, ವಿವಿಧ ಪ್ರದೇಶಗಳಲ್ಲಿ ಅವುಗಳ ಚಲನೆ ಮತ್ತು ಅವುಗಳಿಗೆ ಸಂಬಂಧಿಸಿದ ಕಲಾತ್ಮಕ ಸಂಪ್ರದಾಯಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸು ತ್ತವೆ.
ಏನಿದು ಪಿಪ್ರಾಹ್ವಾ ರತ್ನ?: ಈ ಅವಶೇಷಗಳಲ್ಲಿ 349 ರತ್ನಗಳ ಸಂಗ್ರಹವೂ ಸೇರಿದೆ. ಇವುಗಳನ್ನು 1898ರಲ್ಲಿ ಇಂಗ್ಲೆಂಡಿನ ಎಸ್ಟೇಟ್ ಮ್ಯಾನೇಜರ್ ವಿಲಿಯಂ ಕ್ಲಾಕ್ಸ್ಟನ್ ಪೆಪ್ಪೆ ಎಂಬಾತನು ಭಾರತ- ನೇಪಾಳದ ಗಡಿಯ ಬಳಿ ಉತ್ತರ ಪ್ರದೇಶ ಸಿದ್ಧಾರ್ಥನಗರ ಜಿಲ್ಲೆಯ ಪಿಪ್ರಾಹ್ವಾ ಎಂಬ ಹಳ್ಳಿಯಲ್ಲಿ ರುವ ಬೌದ್ಧ ಸ್ತೂಪದಿಂದ ಸಂಗ್ರಹಿಸಿದ. ಪೆಪ್ಪೆ 1852ರಲ್ಲಿ ಭಾರತದಲ್ಲಿ ಜನಿಸಿದ. ಅವನ ತಂದೆ ಉತ್ತರ ಭಾರತದಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿದ್ದರು.
1897ರಲ್ಲಿ ಪೆಪ್ಪೆ ಪಿಪ್ರಾಹ್ವಾ ಗ್ರಾಮದ ಬಳಿ ಕಂಡುಬಂದ ಸ್ತೂಪದಲ್ಲಿ ಉತ್ಖನನ ಕೆಲಸ ಆರಂಭಿ ಸಿದ. 18 ಅಡಿ ಅಗೆದಾಗ ಅವರಿಗೆ ದೊಡ್ಡ ಕಲ್ಲಿನ ಚಪ್ಪಡಿ ಸಿಕ್ಕಿತು. ಅದರ ಅಡಿಯಲ್ಲಿ ಐದು ಲೋಹದ ಪಾತ್ರೆಗಳಿದ್ದವು. ಅದರಲ್ಲಿ ಬೆಳ್ಳಿ ಮತ್ತು ಚಿನ್ನದ ನಕ್ಷತ್ರಗಳ ಗುರುತಿತ್ತು. ಬೌದ್ಧ ಚಿಹ್ನೆ ಗಳನ್ನು ಕೆತ್ತಿದ ಚಿನ್ನದ ಎಲೆಯ ಡಿಸ್ಕ್‌ಗಳು, ಹಲವಾರು ಮುತ್ತುಗಳು, ಮಣಿಗಳು, ರತ್ನಗಳು, ನೀಲಮಣಿ, ಹವಳ ಮತ್ತು ಸ್ಫಟಿಕಗಳಿದ್ದವು.
ಪಾತ್ರೆಗಳ ಒಳಗೆ ಮೂಳೆ ಮತ್ತು ಬೂದಿಯ ಸಣ್ಣ ತುಂಡುಗಳು ಸಹ ಕಂಡುಬಂದಿತ್ತು. ಇವುಗಳಲ್ಲಿ ಚಿನ್ನಾಭರಣ, ರತ್ನಗಳು ಸೇರಿವೆ. ಬ್ರಾಹ್ಮಿ ಲಿಪಿಯಲ್ಲಿ ಬರೆದಿದ್ದ ಅಕ್ಷರಗಳೂ ಇದ್ದವು. ಸುಮಾರು ಕ್ರಿಪೂ 6ನೆಯ ಶತಮಾನದ ಆ ಬರಹದಲ್ಲಿ, ಅಲ್ಲಿರುವ ಮೂಳೆಯ ಚೂರುಗಳು ಭಗವಾನ್ ಬುದ್ಧ ನದ್ದು ಎಂದು ಖಚಿತಪಡಿಸಿವೆ. ಬುದ್ಧನ ವಂಶದವರೇ ಆದ ಶಾಕ್ಯರು, ಆ ಸ್ತೂಪವನ್ನು ನಿರ್ಮಿಸಿ, ಅಲ್ಲಿ ಬುದ್ಧನ ದೇಹದ ಅವಶೇಷ ಮತ್ತು ಬೆಲೆಬಾಳುವ ಮುತ್ತು ರತ್ನಗಳನ್ನು ಇರಿಸಿದ್ದರು.
ಸರಕಾರದ ವಶಕ್ಕೆ!: ಪೆಪ್ಪೆ ಎಂಬಾತನು ಖಾಸಗಿಯಾಗಿ ಉತ್ಖನನ ನಡೆಸಿ, ಪತ್ತೆ ಹಚ್ಚಿದ್ದ ಈ ಅವಶೇಷಗಳನ್ನು 1878ರಲ್ಲಿ ಭಾರತೀಯ ನಿಧಿ ಕಾಯ್ದೆಯಡಿಯಲ್ಲಿ ಬ್ರಿಟಿಷ್ ಸರಕಾರ ತಮ್ಮದಾಗಿಸಿ ಕೊಂಡಿತ್ತು. ಸುಮಾರು 1800 ಮುತ್ತುಗಳು, ಮಾಣಿಕ್ಯ, ನೀಲಮಣಿಗಳು (ಇಂದ್ರ ನೀಲಮಣಿ), ಚಿನ್ನದ ಹಾಳೆಗಳನ್ನು ಒಳಗೊಂಡಿರುವ ಅಮೂಲ್ಯ ಲೋಹಗಳು ಕೋಲ್ಕತ್ತಾದಲ್ಲಿರುವ ಭಾರತೀಯ ವಸ್ತುಸಂಗ್ರ ಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲ್ಪಟ್ಟವು. ಮುಖ್ಯ ಸಂಗ್ರಹದ ನಕಲುಗಳನ್ನು ಒಳ ಗೊಂಡಂತೆ ಪತ್ತೆಯಾದ ವಸ್ತುಗಳ ಐದನೇ ಒಂದು ಭಾಗವನ್ನು ಪೆಪ್ಪೆಯು ತನ್ನಲ್ಲೇ ಇರಿಸಿ ಕೊಂಡಿದ್ದ. ಈ ರತ್ನಗಳನ್ನು ಪೆಪ್ಪೆ ಕುಟುಂಬ ತಲೆಮಾರುಗಳಿಂದ ತಮ್ಮಲ್ಲೇ ಇರಿಸಿಕೊಂಡು ಬಂದಿದ್ದು 2013ರಲ್ಲಿ ಇದನ್ನು ಹರಾಜಿಗೆ ಇಟ್ಟಿದ್ದರು.
ಕಳೆದ ಮೇ ತಿಂಗಳಲ್ಲಿ ಸೋಥೆಬಿಸ್ ಹಾಂಗ್ ಕಾಂಗ್ ನಲ್ಲಿ ರತ್ನಗಳನ್ನು ಹರಾಜಿಗಿಡಲಾಗಿತ್ತು. ಇದರ ಮಾರಾಟ ಬೆಲೆ 100 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿತ್ತು. ಭಗವಾನ್ ಬುದ್ಧ ನದ್ದು ಎಂದು ನಂಬಲಾದ ಮೂಳೆಯ ತುಣುಕುಗಳು, ಬೂದಿ ಕೂಡ ಈ ಸಂಗ್ರಹದ ಭಾಗವಾಗಿದೆ. ಬ್ರಿಟಿಷರ ಅಂದಿನ ವೈಸ್‌ರಾಯ್ ಎಲ್ಜಿನ್ ಇವುಗಳನ್ನು ಸಿಯಾಮೀಸ್ ರಾಜ ರಾಮ ವಿ ಅವರಿಗೆ ಇದನ್ನು ದಾನ ಮಾಡಿದ್ದರು.
ಭಾರತ ಈ ಅವಶೇಷಗಳ ಮರಳಿ ಪಡೆದದ್ದು ಹೇಗೆ?: ಕಳೆದ ವರ್ಷದ ಮೇ ತಿಂಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ಇವುಗಳನ್ನು ಹರಾಜು ಮಾಡಲು ದಿನಾಂಕ ನಿರ್ಧರಿಸಲಾಗಿತ್ತು. ಆದರೆ, ಇವು ಅಮೂಲ್ಯ ವಸ್ತುಗಳು ಎಂದು ಗುರುತಿಸಿದ ನಮ್ಮ ದೇಶದ ಸಂಸ್ಕೃತಿ ಸಚಿವಾಲವಯ, ಮೇ 5, 2025ರಂದು ಸೋಥೆಬಿಸ್ ಮತ್ತು ಪೆಪ್ಪೆ ಕುಟುಂಬಕ್ಕೆ ಕಾನೂನು ನೋಟಿಸ್ ಕಳಿಸಿ, ಹರಾಜನ್ನು ತಕ್ಷಣ ನಿಲ್ಲಿಸಬೇಕು ಮತ್ತು ಅವಶೇಷಗಳನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸಿತ್ತು.
ಭಾರತ ಮತ್ತು ಜಾಗತಿಕ ಬೌದ್ಧ ಸಮುದಾಯದ ಅಳಿಸಲಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಾಗವಾಗಿರುವ ಇವುಗಳನ್ನು ಹರಾಜು ಹಾಕಿದರೆ, ಭಾರತೀಯ ಮತ್ತು ಅಂತರ ರಾಷ್ಟ್ರೀಯ ಕಾನೂನುಗಳನ್ನು ಹಾಗೂ ವಿಶ್ವಸಂಸ್ಥೆಯ ಸಂಪ್ರದಾಯಗಳನ್ನು ಉಲ್ಲಂಘಿಸಿ ದಂತಾಗುದೆ ಎಂದು ಭಾರತ ಕಳುಹಿಸಿದ ನೋಟಿಸ್ ನಲ್ಲಿ ಹೇಳಲಾಗಿತ್ತು
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹಾಂಗ್ ಕಾಂಗ್‌ನ ಕಾನ್ಸುಲೇಟ್ ಜನರಲ್ ಅವರಲ್ಲಿ ಹರಾಜನ್ನು ತಕ್ಷಣವೇ ನಿಲ್ಲಿಸುವಂತೆ ವಿನಂತಿಸಿತು. ಹರಾಜನ್ನು ಸ್ಥಗಿತಗೊಳಿಸಿದಾಗ, ಪಿಪ್ರಾಹ್ವಾ ರತ್ನಗಳ ಮೇಲಿನ ತನ್ನ ಹಕ್ಕುಗಳ ಕುರಿತು, ನಮ್ಮ ದೇಶವು ಹಿನ್ನಡೆ ಅನುಭವಿಸಬೇಕಾಗಿ ಬಂತು. ಏಕೆಂದರೆ ಪೆಪ್ಪೆ ಎಂಬಾತನು, ಬ್ರಿಟಿಷ್ ಸರ್ಕಾರ ನೀಡಿದ್ದ ಜಮೀನಿನಲ್ಲಿ ಈ ಅವಶೇಷ ಗಳನ್ನು ಸಂಗ್ರಹಿಸಿದ್ದನು ಎಂದು ಅವರು ವಾದಿಸಿದರು.
ಇದಲ್ಲದೆ ಈ ಕುರಿತು ನಮ್ಮ ದೇಶವು 1972ರಲ್ಲಿ ಹೊರಿಡಿಸಿದ ಕಾನೂನು ಜಾರಿಗೆ ಬರುವ ಮೊದಲೇ ರತ್ನಗಳನ್ನು ಭಾರತದಿಂದ ಹೊರಗೆ ಕೊಂಡೊಯ್ಯಲಾಗಿತ್ತು ಎಂದು ವಾದಿಸಿದರು. ಕೊನೆಗೆ ಭಾರತೀಯ ಕೈಗಾರಿಕೋದ್ಯಮಿ ಪಿರೋಜ್‌ಶಾ ಗೋದ್ರೇಜ್ ಕೂಡ 349 ರತ್ನಗಳ ಸಂಪೂರ್ಣ ಸಂಗ್ರಹ ವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದರು.
ಗೋದ್ರೇಜ್ ಸಂಗ್ರಹದ ದೊಡ್ಡ ಭಾಗವನ್ನು ಐದು ವರ್ಷಗಳ ಅವಧಿಗೆ ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸಾಲವಾಗಿ ನೀಡಲು ಮತ್ತು ಅದು ಭಾರತಕ್ಕೆ ಬಂದ ನಂತರ ಮೂರು ತಿಂಗಳ ಕಾಲ ಸಂಪೂರ್ಣ ಸಂಗ್ರಹವನ್ನು ಪ್ರದರ್ಶಿಸಲು ಒಪ್ಪಿಕೊಂಡಿದ್ದಾರೆ.
ಪಿಪ್ರಹ್ವಾ ಗ್ರಾಮದಲ್ಲಿರುವ ಪುರಾತನ ಸ್ತೂಪವನ್ನು ಅಗೆದು, ಅದರಲ್ಲಿರುವ ವಸ್ತುಗಳನ್ನು ಸಂಗ್ರಹಿಸಿದ ಪ್ರಕ್ರಿಯೆಯೇ ಅಮಾನವೀಯ; ಜತೆಗೆ, ಅಲ್ಲಿದ್ದದ್ದು ಭಗವಾನ್ ಬುದ್ಧನಿಗೆ ನೇರವಾಗಿ ಸಂಬಂಧಿಸಿದ ವಸ್ತುಗಳು, ಆತನ ದೇಹದ ಅವಶೇಷಗಳು.
ಅವುಗಳನ್ನು ಪಡೆಯಲು ನಮ್ಮ ದೇಶಕ್ಕೆ ನೈತಿಕ ಹಕ್ಕು ಇದೆ ಎಂದೇ ತಿಳಿಯಲಾಗಿದೆ. ಕಳೆದ ವಾರ ಈ ಅಮೂಲ್ಯ ಅವಶೇಷಗಳನ್ನು ಪ್ರದರ್ಶಿಸುವ ಮೂಲಕ, ಬೌದ್ಧ ಪರಂಪರೆಗೆ ನಮ್ಮ ಸರಕಾರವು ಅಪರೂಪದ ಗೌರವವನ್ನು ತೋರಿದಂತಾಗಿದೆ. ಪಿಪ್ರಾಹ್ವಾ ಅವಶೇಷಗಳನ್ನು ಪುನಃ ಭಾರತಕ್ಕೆ ತಂದಿರುವುದು ಒಂದು ಮಹತ್ವದ ಸಾಧನೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಈ ಅಪರೂಪದ ಅವಶೇಷಗಳ ಪ್ರದರ್ಶನವು ಜನವರಿ 4ರಿಂದ ದೆಹಲಿಯಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.
ಅಪರೂಪದ ಬೌದ್ಧ ಅವಶೇಷಗಳು
ಈ ಪ್ರದರ್ಶನವು ಶಿಲ್ಪಗಳು, ಹಸ್ತಪ್ರತಿಗಳು, ಥಂಗ್ಕಾಗಳು ಮತ್ತು ಧಾರ್ಮಿಕ ವಸ್ತುಗಳು ಸೇರಿದಂತೆ ಕ್ರಿ.ಪೂ.6 ನೇ ಶತಮಾನದಿಂದ ಇತ್ತೀಚಿನ ತನಕದ, ಬೌದ್ಧ ಧರ್ಮಕ್ಕೆ ಸೇರಿದ 80ಕ್ಕೂ ಹೆಚ್ಚು ವಸ್ತುಗಳನ್ನು ಒಳಗೊಂಡಿದೆ. ಇದರಲ್ಲಿ 1898ರ ಕಪಿಲವಸ್ತು ಉತ್ಖನನದ ಅವಶೇಷಗಳು, 1972ರ ಉತ್ಖನನದ ನಿಧಿಗಳು, ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿದ್ದ ಅವಶೇಷಗಳು, ಆಭರಣ ಸಂಪತ್ತುಗಳು, ಪೆಪ್ಪೆ ಕುಟುಂಬ ಸಂಗ್ರಹದಿಂದ ಇತ್ತೀಚೆಗೆ ವಾಪಸ್ ಪಡೆದ ಅವಶೇಷಗಳು, ರತ್ನದ ಅವಶೇಷಗಳು ಇವೆ.