ಹಿಂದಿರುಗಿ ನೋಡಿದಾಗ
ಮೊದಲು ಜ್ವರ ಬಂದಿತು. ವಿಪರೀತ ತಲೆನೋವು, ಮೈಕೈ ನೋವು. ನಂತರ ಕಂಕುಳು, ತೊಡೆಸಂದಿ ಮತ್ತು ಕುತ್ತಿಗೆಯಲ್ಲಿ ಗಳಲೆ ಕಟ್ಟಿತು. ಅದಾದ ಮೇಲೆ ಗೊಂದಲ ಆರಂಭವಾಯಿತು. ನಾನು ಯಾರು? ಎಲ್ಲಿದ್ದೇನೆ? ಯಾಕೆ ಇಲ್ಲಿ ಇದ್ದೇನೆ..? ಆಮೇಲೆ ಎಲ್ಲಿಲ್ಲದ ನಿರಾಸಕ್ತಿ... ಉದಾಸೀನತೆ!
ಗಂಡಸರು ಹೊಲ ಗದ್ದೆಗಳಿಗೆ ಹೋಗುವುದನ್ನು ನಿಲ್ಲಿಸಿದರು. ಹೆಂಗಸರು ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಅಲಂಕಾರ ಮಾಡಿಕೊಳ್ಳುವುದು ಎಲ್ಲವನ್ನೂ ನಿಲ್ಲಿಸಿದರು. ಅಳುವ ಮಕ್ಕಳನ್ನು ಸಂತೈಸಲು ಮರೆತು ಶೂನ್ಯದಲ್ಲಿ ದೃಷ್ಟಿಯನ್ನು ನೆಟ್ಟರು.ಕೊನೆಗೆ ಮಲಗಿದರು. ಒಂದು ದಿನವಲ್ಲ... ಒಂದು ವಾರವಲ್ಲ... ಒಂದು ತಿಂಗಳಲ್ಲ!!! ನಿದ್ರೆ ನಿದ್ರೆ ನಿದ್ರೆ!
ಅನ್ನಾಹಾರ ಮೈಥುನ ಮನರಂಜನೆಗಳನ್ನು ಮರೆತು ಬರೀ ನಿದ್ದೆ. ನಿದ್ರೆಯಿಂದ ಕೋಮಾಕ್ಕೆ ಜಾರುತ್ತಿದ್ದರು. ಆ ಕೋಮಾದಲ್ಲಿ ಅವರು ಯಾವಾಗ ಜೀವವನ್ನು ಬಿಡುತ್ತಿದ್ದರೋ... ಅದು ದೇವರಿಗೆ ಗೊತ್ತು. ನಾಮುಸೋಕ್ ಎಂಬ ಮಹಿಳೆಯು ಹೇಳಿದಳು ‘ನಮ್ಮಜ್ಜಿ ಮೂರು ವರ್ಷಗಳ ಕಾಲ ಮಲಗಿದ್ದಳು.
ಏಳಲೇ ಇಲ್ಲ! ಕೊನೆಗೆ ನಮಗೇ ಬೇಸರವಾಗಿ ಆಕೆಯನ್ನು ಹಾಗೆಯೇ ಹೂತುಬಿಟ್ಟೆವು!’ ಇದುವೇ ಆಫ್ರಿಕದ ನಿದ್ರಾ ರೋಗ! (ಆಫ್ರಿಕನ್ ಸ್ಲೀಪಿಂಗ್ ಸಿಕ್ನೆಸ್). ಎಚ್ಚರವನ್ನು ಕದಿಯುತ್ತದೆ: ಈ ವಿಲಕ್ಷಣ ಕಾಯಿಲೆಯು ಆಫ್ರಿಕಾ ಖಂಡದ ನಟ್ಟನಡುವೆ ಆರಂಭವಾಯಿತು. ಅಕೇಶಿಯ ಮರಗಳ ಹಸಿರು ಚಾವಣಿಯ ನಡುವೆ ಕಾಂಗೋ ಮತ್ತು ನೈಲ್ ನದಿಗಳು ಹರಿಯುತ್ತಿದ್ದವು. ಈ ನದಿಗಳ ಕ್ಕೆಲದಲ್ಲಿದ್ದ ಹಳ್ಳಿಗಳಲ್ಲಿ ಈ ನಿದ್ರಾರೋಗವು ಕಾಣಿಸಿಕೊಳ್ಳುತ್ತಿತ್ತು.
ಇದನ್ನೂ ಓದಿ: Dr N Someshwara Column: ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?
ಈ ನಿದ್ರಾರೋಗವು ಪಿಡುಗು ಸ್ವರೂಪವನ್ನು ತಳೆದಾಗ, ಕುಟುಂಬಕ್ಕೆ ಕುಟುಂಬವನ್ನು ಬಿಡಿ, ಹಳ್ಳಿಗೆ ಹಳ್ಳಿಯೇ ಕುಂಭಕರ್ಣನ ತವರೂರಾಗಿ ಎಲ್ಲರೂ ನಿದ್ರೆಯಲ್ಲಿಯೇ ಸದ್ದಿಲ್ಲದ ಹಾಗೆ ಮರಣಿಸು ತ್ತಿದ್ದರು. ಮನುಷ್ಯರನ್ನು ಬಿಡಿ, ಮನುಷ್ಯರ ಜತೆಯಲ್ಲಿ ಸ್ಪರ್ಧಿಸುವಂತೆ ದನಕರುಗಳೂ ಈ ನಿದ್ರಾರೋಗಕ್ಕೆ ಬಲಿಯಾಗಿ ವಾರಗಟ್ಟಲೆ ನಿದ್ರೆಯನ್ನು ಮಾಡುತ್ತಾ ಮರಣಿಸುತ್ತಿದ್ದವು. ಈ ರೋಗವು ಹಳ್ಳಿಗಳನ್ನು ಮಾತ್ರವಲ್ಲ, ರಾಜ್ಯ ಸಾಮ್ರಾಜ್ಯಗಳನ್ನು ಒರೆಸಿ ಹಾಕಿತು.
ಈ ನಿದ್ರಾರೋಗಕ್ಕೆ ಕಾರಣವೇನೆಂದು ಆಫ್ರಿಕನ್ನರಿಗೆ ತಿಳಿದಿರಲಿಲ್ಲ. ಕೆಲವರು ದೈವದ ಪ್ರಕೋಪ ವೆಂದರು. ದುಷ್ಟ ಶಕ್ತಿಗಳ ಲೀಲೆಯೆಂದರು. ಹಿರಿಯರ ಆತ್ಮವು ‘ಎಚ್ಚರವನ್ನು ಕದಿಯುತ್ತದೆ’ ಎಂದರು. ವಾಮಾಚಾರಿಗಳು, ಮಂತ್ರವಾದಿಗಳು ಹಾಗೂ ದೈವಜ್ಞರು ನಾನಾ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡಿದರು. ನಾಟಿ ವೈದ್ಯರು, ಅಭಿಚಾರಿಗಳು ನಾನಾ ರೀತಿಯ ಔಷಧಗಳನ್ನು ಪ್ರಯೊಗಿಸಿದರು. ಏನೂ ಪ್ರಯೋಜನವಾಗಲಿಲ್ಲ. ಜನರು ನಿರಂತರವಾಗಿ ಸಾಯುವುದು ನಿಲ್ಲಲಿಲ್ಲ.
ವ್ಯವಸ್ಥಿತ ಲೂಟಿ: ಯುರೋಪಿಯನ್ ವಸಾಹತುಶಾಹಿಗಳು ಜಗತ್ತಿನ ಎಲ್ಲ ಖಂಡಗಳ ಅನ್ವೇಷಣೆಗೆ ಹೊರಟಹಾಗೆ ಆಫ್ರಿಕಾ ಖಂಡಕ್ಕೂ ಬಂದರು. ಹೀಗೆ ಬಂದ ವಸಾಹತುಶಾಹಿಗಳಲ್ಲಿ, ರೆವರೆಂಡ್ ಡೇವಿಡ್ ಲಿವಿಂಗ್ ಸ್ಟೋನ್ (೧೮೧೩-೧೮೭೩) ಮುಖ್ಯನಾದವನು. ಇವನಿಗೆ ಈ ನಿದ್ರಾರೋಗವು ಅರ್ಥವಾಗಲೇ ಇಲ್ಲ. ಆದರೆ ತಾನು ಕಂಡದ್ದನ್ನೆಲ್ಲ ವಿವರವಾಗಿ ಪತ್ರದಲ್ಲಿ ಬರೆದನು. ದನಗಳು ಹಾಗೂ ಮನುಷ್ಯರು ನಿದ್ರೆಯಲ್ಲಿಯೇ ಸಾಯುವ, ಕಂಡು ಕೇಳರಿಯದ ಹೊಸ ಕಾಯಿಲೆಯ ಬಗ್ಗೆ ವಿವರವಾಗಿ ಬರೆದನು. 20ನೆಯ ಶತಮಾನದ ಆರಂಭದ ಹೊತ್ತಿಗೆ, ಯುರೋಪಿಯನ್ನರು ಇಡೀ ಆಫ್ರಿಕವನ್ನು ತಮ್ಮ ತಮ್ಮೊಳಗೆ ಹಂಚಿಕೊಂಡಿದ್ದರು.
ತಮ್ಮ ಪಾಲಿನ ಭೂಪ್ರದೇಶದಲ್ಲಿದ್ದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಹೊಡೆಯಲು ಆರಂಭಿಸಿದರು. ೧೮೯೬-೧೯೦೬ರ ನಡುವೆ ಸುಮಾರು ಉಗಾಂಡ, ಕಾಂಗೋ ಮತ್ತು ಪೂರ್ವ ಆಫ್ರಿಕದ (ಇಂದಿನ ಟಾಂಜಾನಿಯ) ಸುಮಾರು ೩-೫ ಲಕ್ಷ ಜನರು ಈ ನಿದ್ರಾರೋಗಕ್ಕೆ ಬಲಿಯಾದರು. ಹೆಚ್ಚು ಕಡಿಮೆ ಈ ಪ್ರದೇಶದಲ್ಲಿದ್ದ ೨/೩ರಷ್ಟು ಜನರನ್ನು ಈ ನಿದ್ರಾಮಾರಿ ನುಂಗಿ ನೀರು ಕುಡಿದಿತ್ತು.
ವಸಾಹತುಶಾಹಿಗಳ ಜಂಘಾಬಲವೇ ಉಡುಗಿದಂತಾಯಿತು. ನಿದ್ರಾಮಾರಿಯು ಅಫ್ರಿಕದ ಕಪ್ಪು ಜನರನ್ನು ಮಾತ್ರವಲ್ಲ, ಯುರೋಪಿನ ಅರ್ಥವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡುತ್ತಿರುವು ದನ್ನು ನೋಡಿ ಬೆದರಿದರು. ಕಾಡಿನ ಉತ್ಪನ್ನಗಳನ್ನು ಯುರೋಪಿಗೆ ಸಾಗಿಸಲು ಜನರು ಇಲ್ಲದಂತಾಯಿತು. ಯುರೋಪಿಯನ್ನರು ಆರಂಭಿಸಿದ್ದ ಪ್ಲಾಂಟೇಶನ್ನುಗಳು ಕಾರ್ಮಿಕರಿಲ್ಲದೇ ಭಣಗುಡಲಾರಂಭಿಸಿದವು. ಜನರು ಸಾಯಲೆಂದು ಸಾಲುಗಟ್ಟಿ ನಿಂತಿದ್ದಾರೇನೋ ಎಂಬ ಅನುಮಾನವು ಮೂಡಿತು.
ಹಳ್ಳಿಯ ಒಂದೊಂದು ಮನೆಗಳಲ್ಲಿ ಹತ್ತಾರು ಹೆಣಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಅವುಗಳನ್ನು ಹೂಳಲೂ ಜನರಿರಲಿಲ್ಲ. ಇಂಥ ದುರ್ಭರ ಸ್ಥಿತಿಯಲ್ಲಿ ವೈದ್ಯರು, ಕೀಟಶಾಸಜ್ಞರು, ರಸಾಯನ ಶಾಸಜ್ಞರು ಹಾಗೂ ಅನ್ವೇಷಕರು ಸಾಮೂಹಿಕವಾಗಿ ದುಡಿದು, ಈ ಆಫ್ರಿಕ ನಿದ್ರಾರೋಗದ ಶತಮಾನಗಳ ಗುಟ್ಟನ್ನು ಒಂದೊಂದಾಗಿ ರಟ್ಟು ಮಾಡಲಾರಂಬಿಸಿದರು.
ಸಂಶೋಧನೆ:
೧೮೯೫. ಡೇವಿಡ್ ಬ್ರೂಸ್ (೧೮೫೫-೧೯೩೧) ಎಂಬ ಸ್ಕಾಟಿಶ್ ವೈದ್ಯನು ಜ಼ುಲುಲ್ಯಾಂಡ್ ಎಂಬ ಪ್ರದೇಶದಲ್ಲಿ ವೃತ್ತಿ ನಿರತನಾಗಿದ್ದನು. ಇವನು ಒಂದು ಕುತೂಹಲಕರವಾದ ವಿದ್ಯಮಾನವನ್ನು ಗಮನಿಸಿದ. ಆ ಪ್ರದೇಶದಲ್ಲಿ ‘ತ್ಸೆತ್ಸೆ ನೊಣಗಳು’ (ಗ್ಲಾಸಿನ ಪ್ಯಾಲ್ಪಾಲಿಸ್) ವಿಪುಲವಾಗಿ ವಾಸವಾಗಿ ದ್ದವು. ಯಾವ ದನಗಳನ್ನು ತ್ಸೆತ್ಸೆ ನೊಣಗಳು ಹೆಚ್ಚು ಕಚ್ಚುತ್ತಿದ್ದವೊ, ಆ ದನಗಳಲ್ಲಿ ನಿದ್ರಾ ರೋಗವು ಬೇಗ ಕಂಡುಬರುವುದನ್ನು ಆತ ಗಮನಿಸಿದ. ಆಗ ಡೇವಿಡ್ ಬ್ರೂಸ್, ತನ್ನ ಬಳಿಯಿದ್ದ ಓಬೀರಾಯನ ಕಾಲದ ಸೂಕ್ಷ್ಮದರ್ಶಕದಡಿಯಲ್ಲಿ, ರೋಗಗ್ರಸ್ತ ದನಗಳ ರಕ್ತವನ್ನು ಪರೀಕ್ಷಿಸಿದ. ಆಗ ಅವನಿಗೆ ಆ ರಕ್ತದಲ್ಲಿ ‘ಟ್ರಿಪನೋಸೋಮ ಬ್ರೂಸಿ’ ಎಂಬ ಆದಿಜೀವಿಯು (ಪ್ರೋಟೋಜ಼ೊವ) ಮುಲುಗುಟ್ಟುತ್ತಿರುವುದು ಕಂಡುಬಂದಿತು.
ನಮಗೆ ಅಮೀಬ ಗೊತ್ತು. ಅದು ಒಂದೇ ಒಂದು ಜೀವಕೋಶದಿಂದ ಆಗಿರುವ ಏಕಕಣ ಜೀವಿ. ಭೂಮಿಯ ಮೇಲೆ ಜೀವರಾಶಿ ಆರಂಭದ ದಿನಗಳಲ್ಲಿ ಈ ನಮೂನೆಯ ಜೀವಿಗಳು ಹುಟ್ಟಿದ ಕಾರಣ ಇವು ಆದಿಜೀವಿಗಳು. ಇದೇ ರೀತಿ, ಒಂದೇ ಒಂದು ಕಣದಿಂದ ರೂಪಿತವಾಗಿರುವ ಹಲವು ಜೀವಿಗಳಿವೆ. ಅವುಗಳಲ್ಲಿ ಮಲೇರಿಯವನ್ನು ಉಂಟುಮಾಡುವ ‘ಪ್ಲಾಸ್ಮೋಡಿಯಮ್’ ಮುಖ್ಯವಾದದ್ದು.
ಪ್ಲಾಸ್ಮೋಡಿಯಮ್ಮಿನ ಹಾಗೆ, ಒಂದೇ ಜೀವಕೋಶವಿರುವ ‘ಟ್ರಿಪನೋಸೋಮ’ ನಿದ್ರಾರೋಗವನ್ನು ಉಂಟುಮಾಡುತ್ತಿತ್ತು. ಡೇವಿಡ್ ಬ್ರೂಸ್ ಕಂಡುಹಿಡಿದ ಪ್ಲಾಸ್ಮೋಡಿಯಮ್ಮಿಗೆ ನಾಮಕರಣವನ್ನು ಮಾಡುವಾಗ, ವಿಜ್ಞಾನಿಗಳು ಬ್ರೂಸಿನ ಹೆಸರನ್ನೂ ಸೇರಿಸಿದರು. ಹಾಗಾಗಿ ಆ ಪರಾವಲಂಬಿ ರೋಗಜನಕವು ‘ಪ್ಲಾಸ್ಮೋಡಿಯಂ ಬ್ರೂಸಿ’ ಎಂದು ಹೆಸರಾಯಿತು.
೧೯೦೨. ಫ್ರೆಂಚ್ ವೈದ್ಯ ಮೇಜರ್ ಚಾರ್ಲ್ಸ್ ಲೂಯೀಸ್ ಆಲೋನ್ಸ್ ಲ್ಯಾವರನ್ (೧೮೪೫-೧೯೨೨) ಹಾಗೂ ಫೆಲಿಕ್ಸ್ ಮೆನ್ಸಿಲ್ (೧೮೬೮-೧೯೩೮) ಮನುಷ್ಯರಲ್ಲಿ ನಿದ್ರಾರೋಗವನ್ನು ಉಂಟು ಮಾಡುತ್ತಿದ್ದ, ‘ಟ್ರಿಪನೋಸೋಮ ಗ್ಯಾಂಬಿಯನ್ಸ್’ ನಮೂನೆಯ ಹೊಸ ಜೀವಿಯನ್ನು ರೋಗಿಗಳ ರಕ್ತದಲ್ಲಿ ಪತ್ತೆಹಚ್ಚಿದರು. ಇತಿಹಾಸದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾದ, ನೂರಕ್ಕೆ ನೂರಷ್ಟು ಜನರನ್ನು ಖಚಿತವಾಗಿ ಕೊಲ್ಲುತ್ತಿದ್ದ ಈ ರೋಗಕ್ಕೆ ಮೊದಲ ಬಾರಿಗೆ ಕಾರಣವನ್ನು ಪತ್ತೆಹಚ್ಚಿದ್ದರು. ಇವರಲ್ಲಿ ಲ್ಯಾವೆರನ್ ಈಗಾಗಲೇ ಮಲೇರಿಯಕ್ಕೆ ಕಾರಣವಾದ ರೋಗಜನಕ ‘ಪ್ಲಾಸ್ಮೋಡಿಯಮ್’ ಅನ್ನು ಪತ್ತೆಹಚ್ಚಿದ್ದರು.
ಆನಂತರ ಬಂದ ಜೋಸೆಫ್ ಎವರೆಟ್ ದತ್ತನ್ (೧೮೭೪-೧೯೦೫) ಗ್ಯಾಂಬಿಯದಲ್ಲಿ ಆಫ್ರಿಕನ್ ನಿದ್ರಾರೋಗದಿಂದ ಸತ್ತಿದ್ದ ಓರ್ವ ಬಿಳಿಯನ ದೇಹವನ್ನು ಪರೀಕ್ಷಿಸಿದನು. ಅವನ ರಕ್ತದಲ್ಲಿ ಟ್ರಿಪನೋಸೋಮ ಗ್ಯಾಂಬಿಯನ್ಸ್ ಕಂಡುಬಂದಿತು. ಆಗ ಟ್ರಿಪನೋಸೋಮವು ಕರಿಯರಲ್ಲಿ ಮಾತ್ರವಲ್ಲ, ಬಿಳಿಯರಲ್ಲೂ ನಿದ್ರಾರೋಗವನ್ನು ಉಂಟುಮಾಡುತ್ತದೆ ಎಂಬ ಸತ್ಯವನ್ನು ಒಪ್ಪಿಕೊಂಡರು.
೧೯೦೩. ಆಲ್ಡೋ ಕ್ಯಾಸ್ಟೆಲೆನಿ (೧೮೭೪-೧೯೭೧) ಎಂಬ ಇಟಾಲಿಯನ್ ವಿಜ್ಞಾನಿಯು ಉಗಾಂಡದಲ್ಲಿ, ರೋಗಿಗಳ ಮತ್ತು ಮಿದುಳು ಮೇರುದ್ರವವನ್ನು (ಸೆರ್ರೆಬ್ರೋ ಸ್ಪಿನಲ್ ಫ್ಲೂಯಿಡ್) ಅಧ್ಯಯನ ಮಾಡಿದ. ಆ ದ್ರವದಲ್ಲಿ ಪರಾವಲಂಬಿಗಳ ದಂಡೇ ಇತ್ತು. ಆಗ ಅವನಿಗೆ ಯಾಕೆ ಈ ರೋಗದ ಪ್ರಮುಖ ಲಕ್ಷಣ ನಿದ್ರೆ ಎನ್ನುವುದು ಗೊತ್ತಾಯಿತು.
ನಮ್ಮ ಮಿದುಳಿನಲ್ಲಿ ಚೀನಾ ಗೋಡೆಗಿಂತಲೂ ಬಲವತ್ತರವಾದ ರಕ್ತ-ಮಿದುಳ- ಮಹಾಕೋಟೆ (ಬ್ಲಡ್-ಬ್ರೇನ್ ಬ್ಯಾರಿಯರ್) ಇರುತ್ತದೆ. ಸಾಮಾನ್ಯ ವಾಗಿ ಅಪಾಯಕಾರಿ ರಾಸಾಯನಿಕಗಳಾಗಲಿ ಅಥವಾ ರೋಗಜನಕಗಳಾಗಲಿ ಈ ಮಹಾಕೋಟೆಯನ್ನು ದಾಟಿ ಮಿದುಳನ್ನು ಪ್ರವೇಶಿಸುವುದಿಲ್ಲ. ಆದರೆ ಟ್ರಿ. ಗ್ಯಾಂಬಿಯನ್ಸ್ ಮಾತ್ರ, ಅದು ಹೇಗೋ ಈ ಕೋಟೆಯನ್ನು ಕ್ರಮಿಸಿ ಮಿದುಳನ್ನು ಪ್ರವೇಶಿಸುತ್ತಿದ್ದ ಕಾರಣ, ಮಿದುಳಿನ ಎಲ್ಲ ಚಟುವಟಿಕೆಗಳನ್ನು ಒಂದರ ನಂತರ ಒಂದನ್ನು ಸ್ಥಗಿತಗೊಳಿಸುತ್ತಾ, ಅಂತಿಮವಾಗಿ ಕೊನೆಯಿಲ್ಲದ ನಿದ್ರೆಗೆ ದೂಡಿ, ಆ ನಿದ್ರೆಯಲ್ಲಿಯೇ ಸಾವನ್ನು ತರುತ್ತಿತ್ತು.
ಟ್ರಯಲ್ ಆಂಡ್ ಎರರ್: ಯುರೋಪಿಯನ್ನರಿಗೆ ಉಷ್ಣವಲಯವು ತೀರಾ ಹೊಸದು. ಇಲ್ಲಿರುವ ವಿಪರೀತ ಬಿಸಿಲು, ವಿಪರೀತ ಮಳೆ, ಅಸಾಧ್ಯ ಸೆಕೆ ಮತ್ತು ಆರ್ದ್ರತೆ ಹಾಗೂ ವೈವಿಧ್ಯಮಯ ಜೀವಿಸಂಕುಲಗಳು ಅವರಿಗೆ ಸವಾಲನ್ನು ಒಡ್ಡಿದವು. ಇವೆಲ್ಲವನ್ನು ಸಮರ್ಥವಾಗಿ ಎದುರಿಸಿದ ಕೆಲವರು, ಈ ಉಷ್ಣವಲಯದ ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯುವ ಭಗೀರಥ ಪ್ರಯತ್ನವನ್ನು ನಡೆಸಿದರು. ನಿದ್ರಾರೋಗಕ್ಕೆ ಕಾರಣವಾದ ಟ್ರಿ. ಗ್ಯಾಂಬಿಯನ್ಸ್ ಹಾಗೂ ಅದನ್ನು ರೋಗಿಗಳಿಂದ ಆರೋಗ್ಯವಂತರಿಗೆ ಹರಡುವ ತ್ಸೆತ್ಸೆ ನೊಣಗಳನ್ನು ಪತ್ತೆಹಚ್ಚಿದ್ದರು. ಆದರೆ ಈ ನಿದ್ರಾರೋಗವನ್ನು ಗುಣಪಡಿಸುವ ಅಥವಾ ಬರದಂತೆ ತಡೆಗಟ್ಟುವ ಔಷಧವಿನ್ನೂ ಅವರ ಕೈಗೆ ದೊರೆತಿರಲಿಲ್ಲ. ಹಾಗಾಗಿ ಅವರು ನಾನಾ ‘ಟ್ರಯಲ್ ಆಂಡ್ ಎರರ್’ ಪ್ರಯೋಗಗಳನ್ನು ನಡೆಸಿದರು. ಅವುಗಳಲ್ಲಿ ಬಹಳಷ್ಟು ಪ್ರಯೋಗಗಳು ಅಮಾನವೀಯವಾಗಿದ್ದವು ಹಾಗೂ ಇಂದಿನ ದಿನಗಳ ಲ್ಲಾಗಿದ್ದರೆ, ಅಂಥ ಪ್ರಯೋಗಗಳನ್ನು ನಡೆಸಲು ಜಗತ್ತಿನ ಯಾವುದೇ ದೇಶವು ಒಪ್ಪಿಗೆಯನ್ನು ಕೊಡುತ್ತಿರಲಿಲ್ಲ. ಆದರೆ ಅಂದಿನ ದಿನಗಳಲ್ಲಿ ವಸಾಹತುಶಾಹಿಗಳನ್ನು ತಡೆಯುವವರು ಯಾರೂ ಇಲ್ಲದ ಕಾರಣ, ಅವರು ಸ್ವೇಚ್ಛೆಯಿಂದ ಪ್ರಯೋಗಗಳನ್ನು ನಡೆಸಿದರು.
ಮೊದಲು ಶಂಖಪಾಷಾಣದ (ಅರ್ಸೆನಿಕ್) ಸಂಯುಕ್ತವಾದ ‘ಅಟೋಕ್ಸಿಲ್’ ಎಂಬ ರಾಸಾಯನಿಕ ವನ್ನು ಪ್ರಯೋಗಿಸಿದರು. ಇದು ಕೆಲವರಲ್ಲಿ ನಿದ್ರಾರೋಗವನ್ನು ಗುಣಪಡಿಸಿದರೂ, ಬಹಳಷ್ಟು ಜನರಲ್ಲಿ ಶಾಶ್ವತ ಅಂಧತ್ವವನ್ನು ಉಂಟುಮಾಡುತ್ತಿತ್ತು. ೧೯೦೧೫ರಲ್ಲಿ ಪಾಲ್ ಎರ್ಲಿಚ್ (೧೮೫೪-೧೯೧೫) ಮತ್ತು ಆಲ್ಪ್ರೆಡ್ ಬೆರ್ಥೀಮ್ (೧೮೭೯-೧೯೧೪) ಎಂಬ ವಿಜ್ಞಾನಿಗಳು ಈ ಅಟೋಕ್ಸಿಲ್ ಅನ್ನು ಪ್ರಯೋಗಿಸಿದ್ದರು.
ಇವರಲ್ಲಿ ಎರ್ಲಿಚ್ ‘ರಸಾಯನ ಚಿಕಿತ್ಸೆ’ ಅಥವಾ ‘ಕೀಮೋಥೆರಪಿ’ ಎಂದು ಯಾವ ಚಿಕಿತ್ಸೆಯನ್ನು ಇಂದು ಕರೆಯುತ್ತೇವೆಯೋ, ಅಂಥ ಚಿಕಿತ್ಸಾ ವಿಧಾನವು ರೂಪುಗೊಳ್ಳಲು ಕಾರಣನಾದ. ನಿಗದಿತ ರೋಗಜನಕವನ್ನು ಕೊಲ್ಲಬಲ್ಲ ‘ಮ್ಯಾಜಿಕ್ ಬುಲೆಟ್’ಗಳನ್ನು ಸಿದ್ಧಪಡಿಸುತ್ತಿದ್ದ ಎನ್ನುವ ಹೊಗಳಿಕೆಯೂ ಈತನಿಗೆ ಸಂದಿದೆ. ಆದರೆ ಅಟೋಕ್ಸಿಲ್ ಅಂಥ ಮ್ಯಾಜಿಕ್ ಬುಲೆಟ್ ಆಗುವುದರಲ್ಲಿ ವಿಫಲವಾಯಿತು.
ನಂತರ ಸುರಾಮಿನ್ (೧೯೧೬) ಮತ್ತು ಮೆಲಾರ್ಸೋಪ್ರಾಲ್ (೧೯೪೦ ದಶಕ) ಎಂಬ ಮತ್ತೆರಡು ಘಟಕಗಳನ್ನು ಶಂಖಪಾಷಾಣದಿಂದಲೂ ಪ್ರತ್ಯೇಕಿಸಿ ಬಳಸಿದರು. ಸುರಾಮಿನ್ ಮೈತುಂಬಾ ದದ್ದುಗಳನ್ನು ಏಳಿಸಿ ಮೂತ್ರಪಿಂಡ ವೈ-ಲ್ಯಕ್ಕೆ ಕಾರಣವಾಗುತ್ತಿತ್ತು. ಮೆಲಾರ್ಸೋಪ್ರಾಲ್ ಔಷಧವನ್ನು ಸೇವಿಸಿದ ಹತ್ತು ಜನರಲ್ಲಿ ಒಬ್ಬನು ಸಾಯುತ್ತಿದ್ದ. ಆದರೂ ಜನರು ಈ ಔಷಧಗಳನ್ನು ಸೇವಿಸಲು ಮುಗಿಬಿದ್ದರು. ಸತ್ತು ಸುಣ್ಣವಾಗೋ ಬದಲು, ಬದುಕಿದ್ದರೆ ಹೇಗೋ ಸಾವಿನೊಡನೆ ಸೆಣಸುತ್ತಾ ಬದುಕಬಹುದು ಎಂಬ ತರ್ಕ ಅವರದ್ದಾಗಿತ್ತು.
ಆಫ್ರಿಕದ ನಿದ್ರಾರೋಗವು, ಜನರನ್ನು ಕರುಣೆಯಿಲ್ಲದೇ ಕೊಲ್ಲುವುದರ ಜತೆಯಲ್ಲಿ, ಆಫ್ರಿಕದಲ್ಲಿ ನವ ನಾಗರಿಕತೆಯು ಹುಟ್ಟಲು ಕಾರಣವಾಯಿತು. ತ್ಸೆತ್ಸೆ ನೊಣಗಳು ಹೆಚ್ಚಿಗೆ ನದಿದಡಗಳಲ್ಲಿ ವಾಸಿಸುತ್ತಿದ್ದವು. ಹಾಗಾಗಿ ಯುರೋಪಿಯನ್ನರು ತ್ಸೆತ್ಸೆ ನೊಣಗಳು ಇಲ್ಲದಂಥ ಸ್ಥಳಗಳನ್ನು ಹುಡುಕಿಕೊಂಡು ಒಳನಾಡಿಗೆ ಧಾವಿಸಿದರು.
ತಮ್ಮೊಡನೆ ದನಗಳ ದೊಡ್ಡಿಗಳನ್ನು ದೂರ ಪ್ರದೇಶಗಳಿಗೆ ಶಾಶ್ವತವಾಗಿ ಸಾಗಿಸಿದರು. ಯುರೋಪಿ ಯನ್ನರು ಸ್ಥಳೀಯರನ್ನು ನದಿಗಳ ಇಕ್ಕೆಲಗಳಲ್ಲಿದ್ದ ಹಳ್ಳಿಗಳನ್ನು ತ್ಯಜಿಸುವಂತೆ ಒತ್ತಡ ಹೇರಿದರು. ಸೊಳ್ಳೆಗಳ ಕಡಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರಿಗೆ ನಾನಾ ಮಾರ್ಗಗಳನ್ನು ಸೂಚಿಸಿದರು. ಸ್ಥಳೀಯರು ಅನಾದಿಕಾಲದಿಂದ ತಾವು ವಾಸಿಸುತ್ತಿದ್ದ ಹಳ್ಳಿಗಳನ್ನು ಬಿಟ್ಟು ಹೋಗಲು ಒಪ್ಪಲಿಲ್ಲ.
ಆದರೆ ಯುರೋಪಿಯನ್ನರ ನಾನಾ ತಂತ್ರಗಳ ಮುಂದೆ ಅವರ ಆಟವು ನಡೆಯಲಿಲ್ಲ. ನದಿಯ ತೀರಗಳು ನಿರ್ಜನವಾದವು. ವಿಶ್ವದ ಮೊದಲನೆಯ ಮಹಾಯುದ್ಧವು ಯುರೋಪಿನಲ್ಲಿ ಆರಂಭವಾಯಿತು. ಇದರೊಡನೆ ವೈದ್ಯಕೀಯ ಸಂಶೋಧನೆಗಳು ನಿಂತವು. ಕೊನೆಗೆ ಯುದ್ಧವು ಮುಗಿದು ‘ಲೀಗ್ ಆಫ್ ನೇಷನ್ಸ್’ (ಇಂದಿನ ವಿಶ್ವಸಂಸ್ಥೆಗೆ ಸಮಾನಾಂತರ ಸಂಸ್ಥೆ) ಹುಟ್ಟಿಕೊಂಡಿತು. ಈ ಸಂಸ್ಥೆಯು ಆಫ್ರಿಕನ್ ನಿದ್ರಾರೋಗಕ್ಕೆ ಸುರಕ್ಷಿತ ಔಷಧವನ್ನು ಕಂಡುಹಿಡಿಯುವಂತೆ ವಿಜ್ಞಾನಿ ಗಳ ಮೇಲೆ ಒತ್ತಡವನ್ನು ಹಾಕಿತು.
ಅನೇಕ ದೇಶಗಳು ಸಂಚಾರಿ ವೈದ್ಯಕೀಯ ಶಿಬಿರಗಳನ್ನು ನಡೆಸಲು ಮುಂದಾದವು. ಆಗ ‘ಲಂಬಾರ್ ಪಂಕ್ಚರ್’ ತಪಾಸಣೆಯು ಅತ್ಯುಪಯುಕ್ತ ಎನ್ನುವುದು ವೈದ್ಯರಿಗೆ ತಿಳಿದಿತ್ತು. ಅನುಮಾನಾಸ್ಪದ ರೋಗಿಗಳ ಬೆನ್ನುಮೂಳೆಗೆ ಸೂಜಿಯೊಂದನ್ನು ಚುಚ್ಚಿ, ಮಿದುಳು ಮೇರುದ್ರವವನ್ನು ಸಂಗ್ರಹಿಸಿ, ಅದನ್ನು ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷಿಸಿ, ಅದರಲ್ಲಿ ಟ್ರಿ. ಗ್ಯಾಂಬಿಯನ್ಸ್ ಇರುವಿಕೆಯನ್ನು ನಿಖರವಾಗಿ ಪತ್ತೆಹಚ್ಚುತ್ತಿದ್ದರು. ಆನಂತರ ಲಭ್ಯ ಔಷಧವನ್ನು ನೀಡುತ್ತಿದ್ದರು. ಹಾಗಾಗಿ ಬಿಳಿಯ ಸಮವಸವನ್ನು ಧರಿಸಿದ್ದ ಯುರೋಪಿಯನ್ ವೈದ್ಯರನ್ನು ಕಂಡರೆ, ಸ್ಥಳೀಯರು ಹೆದರುತ್ತಿದ್ದರು ಹಾಗೂ ಭಯದಿಂದ ನಮಿಸುತ್ತಿದ್ದರು.
೧೯೫೦. ಇ-ರೋನಿತಿನ್ ಮತ್ತು ಪೆಂಟಾಮಿಡಿನ್ ಎಂಬ ಎರಡು ಹೊಸ ಔಷಧಗಳು ಲಭ್ಯವಾದವು. ಇ-ರೋನಿತಿನ್ ಔಷಧವನ್ನು ಅಮೆರಿಕದಲ್ಲಿ ಕ್ಯಾನ್ಸರ್-ರೋಧಕ ಔಷಧವನ್ನಾಗಿ ಕಂಡು ಹಿಡಿದಿದ್ದರು. ಇದು ಬಹುಪಾಲು ಸುರಕ್ಷಿತವಾದ ಔಷಧವಾಗಿದ್ದ ಕಾರಣ, ನಿದ್ರಾರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಲಾರಂಭಿಸಿತು.
೧೯೬೦ರ ದಶಕ. ವಸಾಹತುಶಾಹಿಗಳ ದಬ್ಬಾಳಿಕೆಯಿಂದ ಬಹಳಷ್ಟು ಆಫ್ರಿಕನ್ ದೇಶಗಳು ಮುಕ್ತವಾಗಿ, ಸ್ವತಂತ್ರವಾಗಿದ್ದವು. ಆ ದೇಶಗಳು ವಿಶ್ವ ಆರೋಗ್ಯ ಸಂಸ್ಥೆಯ ನೆರವನ್ನು ಪಡೆದವು. ಹೊಸ ಕ್ರಮಗಳನ್ನು ಕೈಗೊಂಡವು. ೧೯೯೮ರಲ್ಲಿ ನಿದ್ರಾರೋಗದಿಂದ ೩ ಲಕ್ಷ ಜನರು ಸತ್ತಿದ್ದರು, ೨೦೨೦ರ ವೇಳೆಗೆ ಅದು ೧೦೦೦ಕ್ಕಿಂತಲೂ ಕಡಿಮೆಯಾಯಿತು.
೨೦೨೩ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು, ಆಫ್ರಿಕವು ನಿದ್ರಾರೋಗದಿಂದ ಮುಕ್ತವಾಗುವ ಅಂಚಿಗೆ ಬಂದಿದೆ ಎಂದು ಘೋಷಿಸಿತು. ಆದರೆ ಟ್ರಿಪನೋಸೋಮ ಬ್ರೂಸಿ ರೊಡೆನ್ಸಿಯನ್ಸಿಸ್ ಎಂಬ ಆದಿಜೀವಿಯು ಪೂರ್ವ ಆಫ್ರಿಕದ ನಿದ್ರಾರೋಗವನ್ನು ಉಂಟುಮಾಡುತ್ತಿದೆ. ಇದನ್ನು ನಿಗ್ರಹಿಸ ಬೇಕಾದ ಸವಾಲು ಸದ್ಯ ವಿಜ್ಞಾನಿಗಳ ಮುಂದಿದೆ.