ದೇಶದಾದ್ಯಂತ 160 ಕಡೆ ನದಿಗಳಿಗೆ ತೂಗು ಸೇತುವೆಗಳನ್ನು ಕಟ್ಟಿ ಹಳ್ಳಿ- ನಗರಗಳನ್ನು ಬೆಸೆದ, ಜನರ ಎದೆಗಳನ್ನು ಬೆಸೆದು ‘ಸೇತುಬಂಧು’ಎನಿಸಿ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.ಗಿರೀಶ್ ಭಾರದ್ವಾಜ್ ಅವರಿಗೊಂದು ನುಡಿನಮನ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಎಂಬ ಸಣ್ಣ ಊರಿನಲ್ಲಿದ್ದ ಅವರನ್ನು ಕನ್ನಡ ನಾಡು ಮಾತ್ರವಲ್ಲ, ಇಡೀ ಭಾರತ ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆದಿತ್ತು. ‘ತೂಗುಸೇತುವೆ ಗಳ ಸರದಾರ’ ಎಂದು ಅರ್ಹ ಗೌರವಕ್ಕೆ ಅವರು ಪಾತ್ರರಾಗಿದ್ದರು. ಅವರಿಗೆ ದೇಶದ ಹೆಮ್ಮೆಯ ‘ಪದ್ಮಶ್ರೀ; ಪ್ರಶಸ್ತಿ ಬಂದದ್ದು 2017ರಲ್ಲಿ. ಆದರೆ ದೇಶದ ನೂರಾರು ಹಳ್ಳಿಗಳ ಸಾವಿರಾರು ಜನ ಅವರಿಗೆ ತಮ್ಮ ಹೃದಯದ ಸಿಂಹಾಸನ ಕೊಟ್ಟು ಗೌರವಿಸಿದ್ದರು. ಅಷ್ಟು ಖ್ಯಾತರಾಗಿದ್ದರೂ ನಿಗರ್ವಿ, ಸಜ್ಜನ, ಕಡಿಮೆ ಮಾತುಗಾರಿಕೆಯ ಉತ್ಸಾಹಿ. ಅವರು ಗಿರೀಶ್ ಭಾರದ್ವಾಜ್. ಮಳೆಗಾಲ ಬಂದರೆ ಸಾಕು, ಪ್ರವಾಹಕ್ಕೆ ಸಿಲುಕಿ ದ್ವೀಪದಂತಾಗುತ್ತಿದ್ದ ನೂರಾರು ಹಳ್ಳಿಗಳಿಗೆ ಅವರೇ ಆಪತ್ಬಾಂಧವ ರಾಗಿದ್ದರು. ದಕ್ಷಿಣ ಕನ್ನಡದ ಸುಳ್ಯ ತಾಲೂಕು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹರಿದು ಸಮುದ್ರ ಸೇರುವ ಪಯಸ್ವಿನಿ - ಚಂದ್ರಗಿರಿ ನದಿಯ ಪಕ್ಕದಲ್ಲಿರುವ ಹಲವಾರು ಗ್ರಾಮ ಗಳು ಮಳೆಗಾಲದಲ್ಲಿ ನಗರಗಳ ಜೊತೆಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದವು.
80-90ರ ದಶಕದಲ್ಲಿ ಗಿರೀಶ್ ಈ ಹಳ್ಳಿಗಳಿಗೆ ದೇವರಂತೆ ಬಂದರು. ಕೋಟಿ ವೆಚ್ಚದಲ್ಲಿ ಸೇತುವೆ ಪಡೆಯಲು ಸಾಧ್ಯವಾಗದ ಹಳ್ಳಿಗಳಿ ಗೆಲ್ಲಾ ಅವರು ತೂಗುಸೇತುವೆ ನಿರ್ಮಿಸಿಕೊಟ್ಟರು. ಹಳ್ಳಿಗರು ದ್ವೀಪವಾಗುವ, ಅಸ್ವಸ್ಥರನ್ನು ಆಸ್ಪತ್ರೆಗೆ ತಲುಪಿಸಲಾಗದೆ ಕಣ್ಣೀರು ಹಾಕುವ, ನೂರಾರು ಕಿಲೋ ಮೀಟರ್ ಸುತ್ತುಹಾಕಿಕೊಂಡು ತಾಲೂಕು ಕೇಂದ್ರಕ್ಕೆ ಬರುವ ಸಂಕಷ್ಟ ತಪ್ಪಿತು. ಡಾ.ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಉತ್ತರಾಖಂಡ ಪ್ರವಾಸ ಮುಗಿಸಿ ವಾಪಸಾಗಿದ್ದ ಅವರಿಗೆ ತೀವ್ರ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.
ಇದನ್ನೂ ಓದಿLokesh Kayarga Column: ಗಿರೀಶ್ ಭಾರದ್ವಾಜರ ‘ಎಂಜಿನಿಯರಿಂಗ್’ ನಮಗೇಕೆ ಸಿದ್ಧಿಸದು ?
ಉತ್ತರಾಖಂಡದಲ್ಲಿಯೂ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿಯೂ ಅವರ ತಂಡ ನಿರ್ಮಿಸಿದ ತೂಗು ಸೇತುವೆಗಳಿವೆ. ಗಿರೀಶ್ ಭಾರದ್ವಾಜ್ ಅವರು 1950ರ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದರು. ಹಳ್ಳಿಯ ಪರಿಸರದ ಬೆಳೆದ ಅವರಿಗೆ ಗ್ರಾಮೀಣ ಭಾಗದ ಜನರ ಕಷ್ಟಗಳ ಅರಿವಿತ್ತು. 1973ರಲ್ಲಿ ಮಂಡ್ಯದ ಪ್ರತಿಷ್ಠಿತ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿ ಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ಅವರು ಪದವಿ ಮುಗಿದ ತಕ್ಷಣ ನಗರದತ್ತ ಮುಖ ಮಾಡಲಿಲ್ಲ. ತಮ್ಮ ತಂದೆಯ ಆಶಯದಂತೆ ಹುಟ್ಟೂರಿನ ಉಳಿದುಕೊಂಡರು. ಊರಿನ ಸಣ್ಣದೊಂದು ವರ್ಕ್‌ಶಾಪ್ ಆರಂಭಿಸಿ ಸ್ಥಳೀಯರಿಗೆ ನೆರವಾಗಲು ಆರಂಭಿಸಿದರು.
ಮೊದಲ ತೂಗುಸೇತುವೆ
1989ರಲ್ಲಿ ಗಿರೀಶ್ ಅವರ ಜೀವನದಲ್ಲಿ ಮಹತ್ವದ ತಿರುವು. ಕರ್ನಾಟಕದ ಕೊಡಗು ಜಿಲ್ಲೆಯ ನಿಸರ್ಗ ಧಾಮದಲ್ಲಿ ಒಂದು ಸಣ್ಣ ತೂಗುಸೇತುವೆ ನಿರ್ಮಿಸು ವಂತೆ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಅಧಿಕಾರಿ ಅವರನ್ನು ಸಂಪರ್ಕಿಸಿದರು. ಆಗ ಗಿರೀಶ್ ಅವರಿಗೆ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ಅನುಭವ ಇರಲಿಲ್ಲ. ಆದರೂ ಅವರು ಆ ಕೆಲಸವನ್ನು ಸವಾಲಾಗಿ ಸ್ವೀಕರಿಸಿದರು.
‘ನನ್ನ ಬಳಿ ಯಾವುದೇ ವಿನ್ಯಾಸ ಇರಲಿಲ್ಲ. ಲೆಕ್ಕಾಚಾರಗಳೂ ಇರಲಿಲ್ಲ. ಆದರೂ ನಾನು ಕಟ್ಟಿದ ಆ ಸೇತುವೆ ಇಂದಿಗೂ ಜನರಿಗೆ ಸೇವೆ ಸಲ್ಲಿಸುತ್ತಿದೆ. ಆಗ ನನಗೆ, ಜೀವನ ಪೂರ್ತಿ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸೇತುವೆ ಗಳನ್ನು ನಿರ್ಮಿಸುತ್ತೇನೆ ಎಂಬ ಕನಸೂ ಇರಲಿಲ್ಲ’ ಎಂದಿದ್ದರು ಅವರು.
ಊರಿನಲ್ಲಿ ಬೃಹತ್ ಸೇತುವೆ
1989ರಲ್ಲೇ ತಮ್ಮೂರಿನಲ್ಲೇ ಇನ್ನೊಂದು ದೊಡ್ಡ ಸೇತುವೆ ಕಟ್ಟ ಬೇಕಾಯಿತು. ಸುಳ್ಯದ ಹತ್ತಿರದ ಊರೇ ಆದ ಅರಂಬೂರು ಗ್ರಾಮಕ್ಕೆ, ಮಳೆಗಾಲದಲ್ಲಿ ಸುಳ್ಯ ದೊಂದಿಗೆ ಸಂಪರ್ಕ ಕಟ್ ಆಗುತ್ತಿತ್ತು. ಸೊಕ್ಕಿ ಹರಿಯುತ್ತಿದ್ದ ಪಯಸ್ವಿನಿ ನದಿಯನ್ನು ದಾಟಲು ಸೇತುವೆ ಇರಲಿಲ್ಲ. ಒಂದೆರಡು ಸಾವಿರ ಜನರಿರುವ ಹಳ್ಳಿಗೆ ಕಾಂಕ್ರೀಟ್ ಬ್ರಿಜ್ ನಿರ್ಮಿಸಲು ಸರಕಾರ ಮುಂಬರು ವಂತೆಯೇ ಇರಲಿಲ್ಲ. ಊರಿನವರು ತಮ್ಮ ಊರಿನ ಹುಡುಗನೇ ಆದ ಗಿರೀಶ್ ಮೊರೆ ಹೋಗಿ, ನೀನೇ ಏನಾದರೂ ಮಾಡಬೇಕು ಎಂದು ವಿನಂತಿಸಿಕೊಂಡರು. ಊರಿನವರ ಈ ಕಷ್ಟ ಪರಿಹಾರವನ್ನು ಸವಾಲಾಗಿ ಸ್ವೀಕರಿಸಿದ ಗಿರೀಶ್, 40 ಜನ ಉತ್ಸಾಹಿ ಯುವಕರನ್ನು ಸೇರಿಸಿಕೊಂಡು ಕೆಲವೇ ದಿನಗಳಲ್ಲಿ ಗಟ್ಟಿಯಾದ ತೂಗು ಸೇತುವೆ ನಿರ್ಮಿಸಿಯೇ ಬಿಟ್ಟರು. ಅಚ್ಚರಿಯ ವಿಚಾರ ಅಂದರೆ, 35 ವರ್ಷಗಳಾ ದರೂ ಆ ಸೇತುವೆ ಇಂದಿಗೂ ಸಾರ್ವಜನಿಕರ ಬಳಕೆಗೆ ಸುಭದ್ರವಾಗಿ ನಿಂತಿದೆ! ಅದರ ಉದ್ದ 87 ಮೀಟರ್. ಆಗ ಅದಕ್ಕೆ ಆದ ವೆಚ್ಚ ಒಂದು ಲಕ್ಷ ರು. ಮಾತ್ರ. ತಮ್ಮ ಫೀಸ್ ಎಂದು ನಯಾಪೈಸೆ ಯನ್ನೂ ಅವರು ತೆಗೆದುಕೊಳ್ಳಲಿಲ್ಲ.
ಕಡಿಮೆ ವೆಚ್ಛ, ಹೆಚ್ಚು ಬಾಳಿಕೆ
ಸಾಂಪ್ರದಾಯಿಕ ಕಾಂಕ್ರೀಟ್ ಸೇತುವೆಗಳಿಗೆ ಹೋಲಿಸಿದರೆ ಇವರ ತೂಗುಸೇತುವೆಗಳು ಅತ್ಯಲ್ಪ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದವು. ಬಹಳ ಬೇಗನೆ ಕಟ್ಟಲು ಸಾಧ್ಯವಿತ್ತು. ಕಾಂಕ್ರೀಟ್ ಸೇತುವೆ ಕಟ್ಟಲು ಆರು ತಿಂಗಳು ಬೇಕಿದ್ದರೆ, ಇವರು ಒಂದೇ ತಿಂಗಳಲ್ಲಿ ತೂಗು ಸೇತುವೆ ನಿರ್ಮಿಸುತ್ತಿದ್ದರು. ಕಟ್ಟುವಾಗ ಕೇವಲ ಕಾರ್ಮಿಕರನ್ನಷ್ಟೇ ಬಳಸದೆ, ಆಯಾ ಹಳ್ಳಿಯ ಜನ ರನ್ನು ಒಟ್ಟುಗೂಡಿಸಿ ಶ್ರಮದಾನದ ಮೂಲಕ ಕಾಯಕ ಮಾಡುತ್ತಿದ್ದರು. ಇದರಿಂದ ಹಳ್ಳಿಯ ಜನರಿಗೆ ಆ ಸೇತುವೆ ತಮ್ಮದೇ ಎಂಬ ಭಾವನೆ ಮೂಡುತ್ತಿತ್ತು. ಈ ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳು ಸಲೀಸಾಗಿ ಹೋಗುತ್ತವೆ. ಸಾಮಾನ್ಯವಾಗಿ ಇವರ ಸೇತುವೆಗಳ ಅಗಲ ಒಂದು ಮೀಟರ್. ಎರಡು ಮೀಟರ್ ಅಗಲದ ಸೇತುವೆ ಯೂ ಇದೆ. ಅವರ ಸೇತುವೆಗಳು 10-20 ವರ್ಷ ಆಯುಷ್ಯ ಹೊಂದಿವೆ ಎಂದು ಅಂದಾಜಿಸಲಾಗಿತ್ತು. ಆದರೆ ದಶಕಗಳು ಕಳೆದರೂ ಅವು ಇಂದಿಗೂ ಭದ್ರವಾಗಿ ನಿಂತಿವೆ. ವೈರ ಮರೆತ ಊರುಗಳು!
ಇವರ ಸೇತುವೆಗಳು ದಡಗಳನ್ನು ಮಾತ್ರ ಜೋಡಿಸಿಲ್ಲ. ಹೃದಯಗಳನ್ನೂ ಬೆಸೆದಿವೆ. ಕಾಸರಗೋಡು ಸಮೀಪದ ಬಾವಿಕೆರೆಯಲ್ಲಿ ನದಿಯ ಎರಡೂ ದಡಗಳಲ್ಲಿ ವಾಸಿಸುತ್ತಿದ್ದ ಜನರ ನಡುವೆ ಉತ್ತಮ ಸಂಬಂಧ ಇರಲಿಲ್ಲ. ‘ಆದರೆ ನಾವು ಸೇತುವೆ ನಿರ್ಮಾಣ ಮುಗಿಸುವಷ್ಟರಲ್ಲಿ ಅವರ ನಡುವಿನ ಭಿನ್ನಾಭಿ ಪ್ರಾಯಗಳು ಕರಗಿಹೋಗಿದ್ದವು. ಸೇತುವೆಯ ಉದ್ಘಾಟನಾ ಸಮಾರಂಭದ ದಿನ, ಒಂದು ದಡದ ಜನರು ಕುಳಿತುಕೊಳ್ಳಲು ಬೆಂಚುಗಳನ್ನು ತಂದರೆ, ಮತ್ತೊಂದು ದಡದ ಜನರು ಮನೆಯಲ್ಲಿ ತಯಾರಿ ಸಿದ ಸಿಹಿತಿಂಡಿಗಳನ್ನು ತಂದಿದ್ದರು. ಆ ದೃಶ್ಯವನ್ನು ನೋಡಿದಾಗ ನನಗೆ ಅಪಾರ ಸಂತೋಷವಾಯಿತು’ ಎಂದು ಗಿರೀಶ್ ನೆನಪಿಸಿಕೊಂಡಿದ್ದರು.
ಸೇನೆಯಿಂದ ಒಂದು ಸಲಾಂ
ಅರಂಬೂರು ಸೇತುವೆಯ ಯಶಸ್ಸು ಗಿರೀಶ್ ಅವರನ್ನು ಸುಳ್ಯದಿಂದ ಕಾಶ್ಮೀರದವರೆಗೂ ಕೊಂಡೊ ಯ್ಯಿತು. ಕರ್ನಾಟಕ, ಕೇರಳ, ಒಡಿಶಾ, ಆಂಧ್ರ ಪ್ರದೇಶದಂತಹ ರಾಜ್ಯಗಳ ದುರ್ಗಮ ಕೊಳ್ಳಗಳಲ್ಲಿ, ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಬರೋಬ್ಬರಿ 160ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ಅವರು ನಿರ್ಮಿಸಿ ಕೊಟ್ಟಿದ್ದಾರೆ. ಒಡಿಶಾ ಮತ್ತು ಆಂಧ್ರದಲ್ಲಿ ಇವರು ಕಟ್ಟಿದ ಸೇತುವೆಗಳನ್ನು ನೋಡಿ ಅಂದಿನ ಸಿಎಂ ಚಂದ್ರ ಬಾಬು ನಾಯ್ಡು ಅವರೇ ಇವರ ಕಾಲಿಗೆ ನಮಸ್ಕರಿಸಿದ್ದರು. ಇಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ವಲಯದಲ್ಲಿ ಸೇತುವೆ ನಿರ್ಮಿಸಲು ಖುದ್ದು ಭಾರತೀಯ ಸೇನೆಯೇ ಇವರ ತಾಂತ್ರಿಕ ಮಾರ್ಗದರ್ಶನ ಪಡೆದಿತ್ತು.
ಅತೀ ಉದ್ದದ ಸೇತುವೆ
ಒಡಿಶಾದ ರಾಯಗಢ ಪ್ರದೇಶದಲ್ಲಿ ಇವರು ನಕ್ಸಲ್ ಪೀಡಿತ ಹಳ್ಳಿಗಳಲ್ಲಿ ಇವರು ಇದ್ದುಕೊಂಡು ಓಡಾಡುತ್ತ ಮೂರು ತೂಗುಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲಿ ಇವರು ನಿರ್ಮಿಸಿದ 997 ಅಡಿ ಉದ್ದದ, 1.5 ಅಡಿ ಉದ್ದದ ಸೇತುವೆ 2014ರಲ್ಲಿ ಲೋಕಾರ್ಪಣೆಯಾಗಿತ್ತು. ಅದೇ ಅತೀ ಉದ್ದದ ತೂಗುಸೇತುವೆ. ಇದಕ್ಕಾದ ವೆಚ್ಚ ಬರೀ 4 ಕೋಟಿ ರೂ. ಬೆಳಗಾವಿಯ ಹುಕ್ಕೇರಿಯಲ್ಲಿ ಘಟಪ್ರಭಾ ನದಿಗೆ ಕಟ್ಟಿದ 288 ಮೀಟರ್ ಉದ್ದದ ಸೇತುವೆ ಇನ್ನೊಂದು.
50ಕ್ಕೂ ಅಧಿಕ ನದಿಗಳು
ತಮ್ಮೂರಿನ ಪಯಸ್ವಿನಿ ನದಿಗೆ ಸೇತುವೆ ಕಟ್ಟುವುದ ರೊಂದಿಗೆ ಗಿರೀಶ್ ಅವರ ಪಯಣದ ಆರಂಭ. ಇಂದು ಅವರು ಕಾವೇರಿ, ಚಂದ್ರಗಿರಿ, ತುಂಗಾ, ಭದ್ರಾ, ಘಟಪ್ರಭಾ, ನೇತ್ರಾವತಿ ಮೊದಲಾದ 50 ನದಿಗಳಿಗೆ ಸೇತುವೆ ಬೆಸೆದಿದ್ದಾರೆ.
ಹಣ ಮುಖ್ಯವೇ ಆಗಿರಲಿಲ್ಲ
ಗಿರೀಶ್ ಅವರು ಯಾವತ್ತೂ ತಮ್ಮ ಜ್ಞಾನವನ್ನು ವ್ಯಾಪಾರ ಮಾಡಿಕೊಳ್ಳಲಿಲ್ಲ. ಸೇತುವೆಯ ನಕ್ಷೆ ಸಿದ್ಧ ಪಡಿಸುವುದರಿಂದ ಹಿಡಿದು ಸರ್ವೇ ಮಾಡುವವರೆಗೂ ನಯಾಪೈಸೆ ಸಂಭಾವನೆ ಪಡೆಯದ ಈ ನಿಸ್ವಾರ್ಥ ಜೀವಿ, ಹಳ್ಳಿಗರ ಬಳಿ ದುಡ್ಡಿಲ್ಲ ಅಂದಾಗ ತಮ್ಮ ಜೇಬಿ ನಿಂದಲೇ ಹಣ ಹಾಕಿ ಸೇತುವೆ ಕಟ್ಟಿಕೊಟ್ಟ ಅಪರೂಪದ ಉದಾಹರಣೆಗಳಿವೆ. ಕೇರಳದ ಎರಡು ಹಳ್ಳಿಗಳಲ್ಲಿ, ಸೇತುವೆ ನಿರ್ಮಾಣದ ಕೊನೆಯ ಹಂತದಲ್ಲಿ ಹಣದ ಕೊರತೆಯಾದಾಗ ತಾವೇ ಹಣ ಹಾಕಿ ಕಟ್ಟಿಕೊಟ್ಟರು. ಸೇತುವೆ ಬಂದ ಬಳಿಕ ಗ್ರಾಮಸ್ಥರ ಮುಖದಲ್ಲಿ ಮೂಡುತ್ತಿದ್ದ ನಗು ಅವರ ಸಂತೃಪ್ತಿಯ ಮೂಲವಾಗಿತ್ತು.
ಮಿಡಿದ ಹೃದಯ!
ಸೌಮ್ಯ ಸ್ವಭಾವದ ಗಿರೀಶ್ ಭಾರಧ್ವಾಜ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2012ರಲ್ಲಿ ಅವರಿಗೆ ಒಮ್ಮೆ ಹೃದಯಾಘಾತವಾಗಿತ್ತು. ಬಳಿಕ ಅವರು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾದರು. ಹೃದಯಾಘಾತದ ಬಳಿಕ ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾಗಲೂ, ಹೈದರಾ ಬಾದ್‌ನ ಒಬ್ಬ ಬಿಲ್ಡರ್‌ಗಾಗಿ ಸೇತುವೆಯ ವಿನ್ಯಾಸ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅದಾದ ಕೂಡಲೇ ಒಂದು ಸೇತುವೆಯ ನಿರ್ಮಾಣಕ್ಕೆ ಹೋಗಿ, ಅಲ್ಲಿ ವಿಶೇಷವಾಗಿ ವಿನ್ಯಾಸ ಗೊಳಿಸಿದ ದೋಣಿಯಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ದಿನಕ್ಕೆ ಕನಿಷ್ಠ ಆರರಿಂದ ಎಂಟು ಬಾರಿ ಓಡಾಡುತ್ತಾ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದ್ದರು! ನಂತರವೂ ಇಷ್ಟು ವರ್ಷ ನಿರಂತರ ಪ್ರಯಾಣ, ಹುಮ್ಮಸ್ಸಿನ ದುಡಿಮೆ, ಬಿಡುವಿಲ್ಲದ ಕಾರ್ಯನಿರತ ಜೀವನ ಅವರದಾಗಿತ್ತು.
ಕರುವಿಗೆ ಪದ್ಮಶ್ರೀ ಹೆಸರು
ಗಿರೀಶ್ ಅವರ ಕೊಡುಗೆ ಪರಿಗಣಿಸಿ 2017ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಕೇಂದ್ರ ಸರಕಾರ ಅವರಿಗೆ ಪ್ರಶಸ್ತಿ ಘೋಷಿಸಿದ ದಿನವೇ ಅವರ ಮನೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿತು. ಅವರ ಪತ್ನಿ ಉಷಾ ಆ ಕರುವಿಗೆ ‘ಪದ್ಮಶ್ರೀ’ ಎಂದೇ ನಾಮಕರಣ ಮಾಡಿ ಸಂಭ್ರಮಿಸಿ ದರು. ನಿವೃತ್ತಿಯ ನಂತರ ತಮ್ಮ ಊರಿನಲ್ಲಿ, ಅಡಿಕೆ- ತೆಂಗು ತೋಟದಲ್ಲಿ ಅತ್ಯಂತ ಸರಳ ಜೀವನ. ಹಸುಸಾಕಣೆ ಅವರ ಪ್ರೀತಿಯ ಹವ್ಯಾಸವಾಗಿತ್ತು.
ಮಗನಿಂದ ಸೇವೆ ಮುಂದುವರಿಕೆ
ಗಿರೀಶ್ ಅವರು ತಮ್ಮ ಪರಂಪರೆಯನ್ನು ಮುಂದುವ ರಿಸಲು ಮುಂದಿನ ಪೀಳಿಗೆಗೆ ದಾಟಿಸಿದ್ದಾರೆ. ಸಿವಿಲ್ ಎಂಜಿನಿಯರಿಂಗ್ ಓದಿರುವ ಅವರ ಮಗ ಪತಂಜಲಿ ಭಾರಧ್ವಾಜ್, ತಂದೆಯ ಈ ‘ಸೇತು ಬಂಧ’ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ನದಿಗಳ ನಡುವೆ ಕಟ್ಟಿದ 160 ಸೇತುವೆಗಳಂತೆ ಜನರ ಮನಸ್ಸುಗಳ ನಡುವೆ ಅವರು ಕಟ್ಟಿದ ಪ್ರೀತಿಯ ಸೇತುವೆ ಶಾಶ್ವತವಾಗಿರಲಿದೆ.
ಸಿಎಂ ಸಂತಾಪ
‘ತೂಗುಸೇತುವೆಗಳ ಸರದಾರ’, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ದೇಶದಾದ್ಯಂತ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದ ಭಾರದ್ವಾಜ್ ಅವರು, ಮೂಲಸೌಕರ್ಯ ವಂಚಿತ ಗ್ರಾಮೀಣ ಭಾಗಗಳ ಜನರಿಗೆ ಸುಲಭ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದರು. ಇವರ ಈ ತಾಂತ್ರಿಕ ಚಾತುರ್ಯ ಹಾಗೂ ಜನಪರ ಸೇವೆಯನ್ನು ಗುರುತಿಸಿಯೇ ಸಾರ್ವಜನಿಕರು ಇವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದು ಗೌರವಿಸುತ್ತಿದ್ದರು. ಅಸಾಧಾರಣ ತಾಂತ್ರಿಕ ನೈಪುಣ್ಯದ ಮೂಲಕ ಜನಸಾಮಾನ್ಯರ ಸೇವೆ ಮಾಡಿದ ಡಾ.ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಭಗವಂತ ನೀಡಲಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.