ಹಿಂದಿರುಗಿ ನೋಡಿದಾಗ
ಒಂದು ಸಣ್ಣ ಮಠ. ಮಠದ ಹಿಂಭಾಗದಲ್ಲಿ ಒಂದು ತೋಟ. ಆ ತೋಟದಲ್ಲಿ ಸಾಮಾನ್ಯ ಬಟಾಣಿ ಗಿಡಗಳು. ಅವುಗಳಲ್ಲಿ ಕೆಲವಕ್ಕೆ ನೇರಳೆ ಹೂವು, ಕೆಲವಕ್ಕೆ ಬಿಳಿ ಹೂವು. ಕೆಲವಕ್ಕೆ ಉದ್ದ ಕಾಂಡ, ಕೆಲವಕ್ಕೆ ಗಿಡ್ಡ ಕಾಂಡ. ಕೆಲವು ಬೀಜಗಳ ಮೇಲ್ಮೆ ನುಣುಪು, ಕೆಲವು ಬೀಜಗಳ ಮೇಲ್ಮೆ ಮುದುಡಿಕೆ. ಜನ ಸಾಮಾನ್ಯರ ಕಣ್ಣಿಗೆ ಇದು ತೋಟಗಾರಿಕೆಯ ಒಂದು ಸಾಮಾನ್ಯ ವಿಷಯ ಮಾತ್ರ.
ಒಬ್ಬ ಶಾಂತ, ಹಠಮಾರಿ, ಲೆಕ್ಕಪ್ರಿಯ ಸನ್ಯಾಸಿಯ ಕಣ್ಣಿಗೆ, ಇದು ಸಾಮಾನ್ಯ ತೋಟಗಾರಿಕೆಯ ವಿಷಯವಾಗಿರಲಿಲ್ಲ, ಅದರಲ್ಲಿ ಅಡಗಿದ್ದ ಪ್ರಕೃತಿಯ ರಹಸ್ಯವನ್ನು ಭೇದಿಸುವ ಛಲವಿತ್ತು! ಆ ಸನ್ಯಾಸಿಯ ಹೆಸರು ಗ್ರೆಗರ್ ಜೋಹಾನ್ ಮೆಂಡಲ್ (1822-1884). ಅವರನ್ನು ಇಂದು ನಾವು ‘ತಳಿ ವಿಜ್ಞಾನದ ಪಿತಾಮಹ’ (ಫಾದರ್ ಆಫ್ ಜೆನೆಟಿಕ್ಸ್) ಎಂದು ಕರೆಯುತ್ತೇವೆ. ಆದರೆ ಅವರ ಬದುಕಿನ ಕಾಲದಲ್ಲಿ ಅವರನ್ನು ಅಷ್ಟಾಗಿ ಯಾರೂ ಗಮನಿಸಲಿಲ್ಲ. ಅವರು ದೊಡ್ಡ ವಿಶ್ವವಿದ್ಯಾ ಲಯದ ಪ್ರಸಿದ್ಧ ಪ್ರಾಧ್ಯಾಪಕರಾಗಿರಲಿಲ್ಲ. ರಾಜನ ಅರಮನೆಯ ವಿಜ್ಞಾನಿಯಲ್ಲ. ದೊಡ್ಡ ಪ್ರಯೋಗಾಲಯ ದ ಮುಖ್ಯಸ್ಥರಾಗಿರಲಿಲ್ಲ. ಅವರು ಕೇವಲ ಬ್ರುನೊ ನಗರದಲ್ಲಿದ್ದ ಆಗಸ್ಟಿನಿಯನ್ ಮಠದ ಸನ್ಯಾಸಿ; ತಮ್ಮ ತೋಟದಲ್ಲಿ ಬಟಾಣಿ ಗಿಡಗಳನ್ನು ಬೆಳೆಸಿ, ಅವುಗಳ ಸಂತತಿಯನ್ನು ಎಣಿಸುತ್ತಿದ್ದ ಅಪರೂಪದ, ವಿಚಿತ್ರ ಹವ್ಯಾಸದ ಒಬ್ಬ ಅಸಾಮಾನ್ಯ ಮಾನವ ಮಾತ್ರವಾಗಿದ್ದ.
ಜನನ: ಮೆಂಡಲ್ 1822 ಜುಲೈ 20ರಂದು ಇಂದಿನ ಚೆಕ್ ಗಣರಾಜ್ಯದ ಭಾಗವಾಗಿರುವ ಸಿಲೆಷಿಯಾ ದಲ್ಲಿ ಜನಿಸಿದರು; 1843ರಲ್ಲಿ ಬ್ರುನೊದ ಸೇಂಟ್ ಥಾಮಸ್ ಮಠಕ್ಕೆ ಸೇರಿದರು. ಮೆಂಡಲ್ ಹುಟ್ಟಿದ್ದು ರೈತ ಕುಟುಂಬದಲ್ಲಿ. ಬಾಲ್ಯದಿಂದಲೇ ಗಿಡಮರಗಳ ಜೀವನವನ್ನು ಗಮನಿಸುವ ಅಭ್ಯಾಸ ಇತ್ತು. ಮೆಂಡಲ್ ಮೊದಲಿನಿಂದಲೇ ವಿಜ್ಞಾನಿಯಾಗಿ ಗೌರವಿಸಲ್ಪಟ್ಟವರಲ್ಲ. ಅವರು ಶಿಕ್ಷಕರಾಗಲು ಪ್ರಯತ್ನಿಸಿದರು; ಆದರೆ ಶಿಕ್ಷಕ ಪ್ರಮಾಣಪತ್ರ ಪರೀಕ್ಷೆಯಲ್ಲಿ ವಿಫಲರಾದರು.
1850ರಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾದ ನಂತರ, ಮಠದ ಮುಖ್ಯಸ್ಥರಾದ ಅಬ್ಬಾಟ್ ಸಿರಿಲ್ ನ್ಯಾಪ್ ಅವರು ಅವರನ್ನು ವಿಯನ್ನಾ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅಧ್ಯಯನಕ್ಕಾಗಿ ಕಳುಹಿಸಿದರು. ಅಲ್ಲಿ ಮೆಂಡಲ್ ಗಣಿತ, ಭೌತಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿಗಳನ್ನು ಕಲಿತರು. ನಂತರ ಮತ್ತೆ ಮಠಕ್ಕೆ ಹಿಂದಿರುಗಿ ಬೋಧನೆಯಲ್ಲಿ ತೊಡಗಿದರು.
ಇದನ್ನೂ ಓದಿ: Dr N Someshwara Column: ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...
ವಿಫಲ: ಎಲ್ಲರೂ ಎಲ್ಲ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ ಒಬ್ಬರು ಒಂದು ವಿಷಯದಲ್ಲಿ ನಪಾಸು ಆದರೆಂದು, ಅವರನ್ನು ದಡ್ಡರ ಗುಂಪಿಗೆ ಸೇರಿಸುವ ಹಾಗಿರಲಿಲ್ಲ. ಅವರು ಮತ್ಯಾವುದೋ ಒಂದು ಕ್ಷೇತ್ರದಲ್ಲಿ ಮನುಕುಲದ ಕಣ್ಣನ್ನು ತೆರೆಸಬಲ್ಲ ಪ್ರತಿಭಾವಂತ ರಾಗಿರಬಹುದು. ಮೆಂಡಲ್ ಶಿಕ್ಷಕ ಪರೀಕ್ಷೆಯಲ್ಲಿ ಸೋತರು; ಆದರೆ ಪ್ರಕೃತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮಠದ ತೋಟದಲ್ಲಿ ಮೆಂಡಲ್ ಬಟಾಣಿ ಗಿಡಗಳನ್ನು ಆರಿಸಿಕೊಂಡದ್ದು ಯಾದೃಚ್ಛಿಕವಲ್ಲ.
ಬಟಾಣಿ ಗಿಡದಲ್ಲಿ ಕೆಲವು ಗುಣಗಳು ಸ್ಪಷ್ಟವಾಗಿ ಕಾಣುತ್ತವೆ: ಹೂವು ನೇರಳೆ ಅಥವಾ ಬಿಳಿ; ಬೀಜ ಮೃದುವು ಅಥವಾ ಮುದುರು; ಬೀಜ ಹಳದಿ ಅಥವಾ ಹಸಿರು; ಗಿಡ ಉದ್ದ ಅಥವಾ ಕುಬ್ಜ. ಇವುಗಳನ್ನು ಎಣಿಸಲು ಸುಲಭ. ಬಟಾಣಿ ಗಿಡವನ್ನು ಸ್ವಯಂ ಪರಾಗಸ್ಪರ್ಶಗೊಳಿಸಬಹುದು; ಬೇಕಾದರೆ ಒಂದು ಗಿಡದ ಪುಷ್ಪರಜವನ್ನು ಮತ್ತೊಂದು ಗಿಡಕ್ಕೆ ಮಾನವನೇ ಹಾಕಬಹುದು.
ಹೀಗಾಗಿ ‘ತಂದೆ ಯಾರು, ತಾಯಿ ಯಾರು’ ಎಂಬುದನ್ನು ನಿಯಂತ್ರಿಸಬಹುದು. ವಿಜ್ಞಾನದಲ್ಲಿ ನಿಯಂತ್ರಣವೇ ಪ್ರಯೋಗದ ಆತ್ಮ. 1856ರಿಂದ 1863ರವರೆಗೆ ಮೆಂಡಲ್ ಸಾವಿರಾರು ಬಟಾಣಿ ಗಿಡಗಳನ್ನು ಬೆಳೆಸಿ, ಅವುಗಳ ಸಂತತಿಯನ್ನು ಪರಿಶೀಲಿಸಿದರು. ಅನೇಕ ಮೂಲಗಳು ಅವರು ಸುಮಾರು 28000 ಬಟಾಣಿ ಗಿಡಗಳನ್ನು ಪರೀಕ್ಷಿಸಿದರೆಂದು ಹೇಳುತ್ತವೆ. ಅವರು 1865ರಲ್ಲಿ ಬ್ರುನೊದ ಪ್ರಕೃತಿ ವಿಜ್ಞಾನ ಸಂಘದಲ್ಲಿ ತಮ್ಮ ಫಲಿತಾಂಶಗಳನ್ನು ಮಂಡಿಸಿದರು;
1866ರಲ್ಲಿ ‘ಎಕ್ಸ್‌ಪೆರಿಮೆಂಟ್ಸ್ ಆನ್ ಪ್ಲಾಂಟ್ ಹೈಬ್ರಿಡ್ಸ್’ ಎಂಬ ಪ್ರಸಿದ್ಧ ಪ್ರಬಂಧವನ್ನು ಪ್ರಕಟಿಸಿ ದರು. ಇಲ್ಲಿ ಒಂದು ದೃಶ್ಯವನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳಿ. ಮಠದ ತೋಟದಲ್ಲಿ ಮೆಂಡಲ್ ಬೆಳಗಿನ ಮಂಜಿನಲ್ಲಿ ನಿಧಾನವಾಗಿ ನಡೆಯುತ್ತಿದ್ದಾರೆ.
ಕೈಯಲ್ಲಿ ಕಾಗದ, ಪೆನ್ಸಿಲ್. ಪ್ರತಿಯೊಂದು ಗಿಡಕ್ಕೆ ಸಂಖ್ಯೆ. ಯಾವ ಗಿಡದ ಹೂವು ಯಾವ ಬಣ್ಣ? ಯಾವ ಗಿಡದಿಂದ ಯಾವ ಬೀಜ? ಯಾವ ಸಂತತಿಯಲ್ಲಿ ಯಾವ ಗುಣ? ಎಲ್ಲವನ್ನೂ ಎಣಿಕೆ. ಅವರು ಕೇವಲ ತೋಟಗಾರನಲ್ಲ; ಅವರು ಪ್ರಕೃತಿಯ ಲೆಕ್ಕಿಗ. ಹಳದಿ ಬಟಾಣಿ ಮತ್ತು ಹಸಿರು ಬಟಾಣಿ ಗಿಡಗಳನ್ನು ಅಡ್ಡ ಹಾಯಿಸಿದಾಗ (ಕ್ರಾಸ್) ಮೊದಲ ತಲೆಮಾರಿನಲ್ಲಿ ಎಲ್ಲ ಗಿಡಗಳು ಹಳದಿಯ ಗಿಡಗಳೇ ಆಗಿದ್ದವು.
ಹಸಿರು ಗುಣ ಮಾಯವಾದಂತಾಗಿತ್ತು. ಆದರೆ ಮೆಂಡಲ್ ಅಲ್ಲಿ ನಿಲ್ಲಲಿಲ್ಲ. ಅವರು ಮುಂದಿನ ತಲೆಮಾರನ್ನು ನೋಡಿದರು. ಆಗ ಹಸಿರು ಮತ್ತೆ ಕಾಣಿಸಿತು - ಸುಮಾರು 3:1 ಅನುಪಾತದಲ್ಲಿ. ಅಂದರೆ ಮೂರು ಹಳದಿ, ಒಂದು ಹಸಿರು. ಇದೇ ಅದ್ಭುತ. ಹಸಿರು ಗುಣವು ಮಾಯವಾಗಿರಲಿಲ್ಲ; ಅದು ಮರೆಮಾಡಲ್ಪಟ್ಟಿತ್ತು.
ಹೀಗಾಗಿ ಮೆಂಡಲ್ ‘ಪ್ರಬಲ’ ಮತ್ತು ‘ಅಪ್ರಬಲ’ ಗುಣಗಳ ಕಲ್ಪನೆಯನ್ನು ರೂಪಿಸಿದರು. ಇಂದು ನಾವು ಅವನ್ನು ಡಾಮಿನಂಟ್ ಟ್ರೈಟ್ ಮತ್ತು ರಿಸೆಸಿವ್ ಟ್ರೈಟ್ಸ್ ಎಂದು ಕರೆಯುತ್ತೇವೆ. ಈ ಪರಿಕಲ್ಪನೆಯನ್ನು ದೈನಂದಿನ ಉದಾಹರಣೆಗಳೊಂದಿಗೆ ಸರಳವಾಗಿ ವಿವರಿಸಬಹುದು.
ಅಜ್ಜಿಗೆ ನಗುವಾಗ ಕೆನ್ನೆಯಲ್ಲಿ ಗುಳಿ ಬೀಳುತ್ತಿತ್ತು. ಮಗಳಲ್ಲಿ ಅಂತಹ ಗುಳಿಯು ಕಂಡು ಬರಲೇ ಇಲ್ಲ. ಆದರೆ ಮೊಮ್ಮಗಳಿಗೆ ಆ ಕೆನ್ನೆಗುಳಿ ಮತ್ತೆ ಕಾಣಿಸಿಕೊಂಡಿತು. ಆಗ ಊರಿನ ಜನರೆಲ್ಲ ಅಜ್ಜಿಯ ಗುಣ ಮೊಮ್ಮಗಳಿಗೆ ಬಂದಿದೆ ಎಂದರು. ಮೆಂಡಲ್ ಇದೇ ವಿಷಯವನ್ನು ವೈಜ್ಞಾನಿಕ ಪರಿಭಾಷೆ ಯಲ್ಲಿ ಹೇಳಿದರು.
ಮನುಷ್ಯರಲ್ಲಿ ಮಾತ್ರವಲ್ಲ, ಎಲ್ಲ ಜೀವರಾಶಿಗಳಲ್ಲಿ ಕೆಲವು ಗುಣಗಳು ಕೆಲವು ತಲೆಮಾರುಗಳಲ್ಲಿ ಸುಪ್ತವಾಗಿ ಅಡಗಿರಬಹುದು; ಆದರೆ ಅವು ನಾಶವಾಗುವುದಿಲ್ಲ. ಸೂಕ್ತ ಅವಕಾಶ-ಅನುಕೂಲ ದೊರೆತಾಗ ಅವು ಮತ್ತೆ ಹೊರಬರುತ್ತವೆ.
19ನೆಯ ಶತಮಾನದಲ್ಲಿ ಮೆಂಡಲ್ ಅವರು ಬಹಳ ದೊಡ್ಡದಾದ, ಆದರೆ ನಂಬಲು ಅಸಾಧ್ಯವಾದ ಒಂದು ಹೇಳಿಕೆಯನ್ನು ನೀಡಿದರು. ಜೀವರಾಶಿಗಳಲ್ಲಿರುವ ಪ್ರತಿಯೊಂದು ಗುಣ-ಲಕ್ಷಣವನ್ನು ತಂದೆತಾಯಿಯರಿಂದ ಬರುವ ಅಂಶಗಳು ನಿರ್ಧರಿಸುತ್ತವೆ. ಈ ಅಂಶಗಳನ್ನು ಫ್ಯಾಕ್ಟರ್ಸ್ ಎಂದು ಕರೆಯಬಹುದು. ಅವರು ‘ಜೀನ್’ ಎಂಬ ಪದವನ್ನು ಬಳಸಲಿಲ್ಲ; ಆ ಪದ ನಂತರ ಬಂದಿತು. ಆದರೆ ಅವರು ರೂಪಿಸಿದ ‘ಫ್ಯಾಕ್ಟರ್ಸ್’ ಇಂದಿನ ಜೀನ್ಸುಗಳ ಮೂಲಭಾವವೇ ಆಗಿತ್ತು. ಊಹಿಸಿಕೊಳ್ಳಿ. 19ನೆಯ ಶತಮಾನದಲ್ಲಿ, ವಿಜ್ಞಾನಿಯೇ ಅಲ್ಲದ ಓರ್ವ ಸಾಮಾನ್ಯ ಸನ್ಯಾಸಿಯು, ಕಣ್ಣಿಗೆ ಕಾಣದ ಅಂಶಗಳು ಜೀವಿಗಳ ಗುಣ-ಲಕ್ಷಣಗಳನ್ನು ನಿರ್ಧರಿಸುತ್ತವೆ ಎಂದು ದಿಟ್ಟವಾಗಿ ಘೋಷಿಸಿದ! ಹೀಗೆ ಹೇಳುವುದು ಒಂದು ದೊಡ್ಡ ಸಾಹಸವೇ ಆಗಿತ್ತು.
ಸೂಕ್ಷ್ಮದರ್ಶಕದಡಿಯಲ್ಲಿ ಕ್ರೋಮೋಸೋಮುಗಳ ಸ್ವರೂಪವನ್ನು ಅರಿಯುವುದಕ್ಕೆ ಮೊದಲೇ, ಡಿಎನ್ಎಗಳ ಸ್ವರೂಪವನ್ನು ತಿಳಿಯುವ ಮೊದಲೇ, ಈ ಆ ಜೀನುಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದು ಬರುವ ನಿಯಮಗಳನ್ನು ಘೋಷಿಸಿದರು ಎಂದರೆ ಅದು ನಂಬು ವುದಕ್ಕೆ ಕಷ್ಟವಾದ ವಿಷಯವಾಗಿತ್ತು.
ಮೈ ಟೈಮ್ ವಿಲ್ ಕಮ್: ಜಗತ್ತು ಕಿವುಡಾಗಿದ್ದ ಕ್ಷಣ. 1866ರಲ್ಲಿ ಮೆಂಡಲ್ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಆ ಸಭೆಯಲ್ಲಿದ್ದ ವಿಜ್ಞಾನಿಗಳಿಗೆ ಮೆಂಡಲ್ ಹೇಳುತ್ತಿರುವುದು ಏನೆಂದು ಅರ್ಥವೇ ಆಗಲಿಲ್ಲ! ಮೆಂಡಲ್ ‘ಜೀವವಿಜ್ಞಾನದೊಳಗೆ ಗಣಿತ’ವನ್ನು ತಂದಿದ್ದರು.
ಗಿಡಗಳ ಲಕ್ಷಣಕ್ಕೂ 3:1 ಅನುಪಾತಕ್ಕೂ ಏನು ಸಂಬಂಧ? ಎಂದು ಅವರು ಲೇವಡಿ ಮಾಡಿದರು. ಆ ಕಾಲದ ವಿಖ್ಯಾತ ವಿಜ್ಞಾನಿ ಕಾರ್ಲ್ ವಾನ್ ನಾಗಿಲಿ ಎಂಬುವವರಿಗೆ ಮೆಂಡಲ್ ಪತ್ರ ಬರೆದು ತಮ್ಮ ಸಂಶೋಧನೆ ವಿವರಿಸಿದರು. ಆದರೆ ನಾಗಿಲಿ ಅವರು ಇದು ಕೇವಲ ಬಟಾಣಿ ಗಿಡಗಳಿಗೆ ಸೀಮಿತವಾದ ಹವ್ಯಾಸವಷ್ಟೇ ಎಂದು ಅದನ್ನು ತಿರಸ್ಕರಿಸಿದರು.
ಮೆಂಡಲ್ ಅವರ ಸಂಶೋಧನೆ ಡಾರ್ವಿನ್ ಅವರ ಗಮನಕ್ಕೂ ಬರಲಿಲ್ಲ. ಒಂದು ವೇಳೆ ಡಾರ್ವಿನ್ ಮತ್ತು ಮೆಂಡಲ್ ಅಂದು ಒಂದಾಗಿದ್ದರೆ, ವಿeನದ ಇತಿಹಾಸವೇ ಬದಲಾಗುತ್ತಿತ್ತು. ಮೆಂಡಲ್ ಮಾತಿಗೆ ಕಿವಿಗೊಡದ ಜಗತ್ತಿನ ಬಗ್ಗೆ ನಿರಾಸೆ ಹೊಂದಲಿಲ್ಲ. ಅವರು ತಮ್ಮ ಸ್ನೇಹಿತನಿಗೆ ಹೇಳಿದ್ದರು: ನನ್ನ ಸಮಯ ಇನ್ನೂ ಬಂದಿಲ್ಲ, ಆದರೆ ನನ್ನ ಕಾಲ ಬಂದೇ ಬರುತ್ತದೆ. (ಮೈ ಟೈಮ್ ವಿಲ್ ಕಮ್) ಸಾವಿನ ನಂತರದ ವಿಜಯ: 1884ರಲ್ಲಿ ಮೆಂಡಲ್ ಮರಣ ಹೊಂದಿದರು. ಅವರ ಸಾವಿನ ನಂತರ ಮಠದ ಹೊಸ ಮುಖ್ಯಸ್ಥರು ಮೆಂಡಲ್ ಅವರ ಎಲ್ಲಾ ಸಂಶೋಧನಾ ಡೈರಿಗಳನ್ನು ಸುಟ್ಟು ಹಾಕಿದರು! ವೈಜ್ಞಾನಿಕ ಜಗತ್ತು ಅವರನ್ನು ಮರೆತೇ ಬಿಟ್ಟಿತು. ಆದರೆ ಮೆಂಡಲ್ ಹೇಳಿದ ಭವಿಷ್ಯ ಸುಳ್ಳಾಗಲಿಲ್ಲ.
ತ್ರಿಮೂರ್ತಿಗಳು: 1900ರಲ್ಲಿ, ಅಂದರೆ ಮೆಂಡಲ್ ಸತ್ತು 16 ವರ್ಷಗಳ ನಂತರ, ಮೂವರು ಬೇರೆ ಬೇರೆ ದೇಶದ ವಿಜ್ಞಾನಿಗಳು ಸ್ವತಂತ್ರವಾಗಿ ಪ್ರಯೋಗಗಳನ್ನು ಮಾಡಿದಾಗ ಅವರಿಗೆ ಮೆಂಡಲ್ ಅಂದು ಬರೆದಿದ್ದ ಸತ್ಯಗಳು ಗೋಚರಿಸಿದವು. ಹಳೆಯ ಗ್ರಂಥಾಲಯದ ಮೂಲೆಯಲ್ಲಿದ್ದ ಮೆಂಡಲ್ ಪ್ರಬಂಧಕ್ಕೆ ಆಗ ಬೆಲೆ ಬಂದಿತು. ಇಡೀ ಜಗತ್ತು ಬೆಚ್ಚಿ ಬಿದ್ದಿತು. ಒಬ್ಬ ಸನ್ಯಾಸಿ ಮಠದ ಗಾರ್ಡನ್ ನಲ್ಲಿ ಕುಳಿತು ಆಧುನಿಕ ವೈದ್ಯಕೀಯ ವಿಜ್ಞಾನದ ಬಾಗಿಲನ್ನು ಆಗಲೇ ತೆರೆದಿದ್ದರು!
ಮಹತ್ವ: ಇಂದು ಮೆಂಡಲ್ ಅವರ ಸಂಶೋಧನೆಯಿಲ್ಲದೆ ನಾವು ಕ್ಯಾನ್ಸರ್ ಚಿಕಿತ್ಸೆ, ಅಂಗಾಂಗ ಕಸಿ, ಕೃಷಿಯಲ್ಲಿ ಸುಧಾರಿತ ತಳಿ ಅಥವಾ ಅಪರಾಧ ಪತ್ತೆಯ ‘ಡಿಎನ್‌ಎ ಟೆಸ್ಟ್’ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಮೆಂಡಲ್ ಪ್ರತಿಪಾದಿಸಿದ ಅನುವಂಶೀಯತೆಯ ಮೂರು ಮಹಾನ್ ನಿಯಮಗಳು: ಮೆಂಡಲ್ ಅವರು ತಮ್ಮ ಎಂಟು ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಮೂರು ಮುಖ್ಯ ನಿಯಮಗಳನ್ನು ಜಗತ್ತಿಗೆ ನೀಡಿದರು. ಇವುಗಳನ್ನು ಇಂದಿಗೂ ‘ಜೆನೆಟಿಕ್ಸ್‌ನ ಬೈಬಲ್’ ಎಂದು ಪರಿಗಣಿಸಲಾಗುತ್ತದೆ.
- ಪ್ರಬಲತೆಯ ನಿಯಮ (ಲಾ ಆಫ್ ಡಾಮಿನನ್ಸ್): ಮೆಂಡಲ್ ಗಮನಿಸಿದಂತೆ, ಒಂದು ಲಕ್ಷಣದ ಎರಡು ವಿರುದ್ಧ ರೂಪಗಳು (ಉದಾಹರಣೆಗೆ: ಎತ್ತರ ಮತ್ತು ಗಿಡ್ಡ) ಒಂದಾದಾಗ, ಮೊದಲ ತಲೆಮಾರಿನಲ್ಲಿ ಕೇವಲ ಒಂದು ಲಕ್ಷಣ ಮಾತ್ರ ವ್ಯಕ್ತವಾಗುತ್ತದೆ.
ಉದಾಹರಣೆ: ಶುದ್ಧ ಎತ್ತರದ ಗಿಡ ಮತ್ತು ಶುದ್ಧ ಗಿಡ್ಡ ಗಿಡದ ನಡುವೆ ಪರಾಗಸ್ಪರ್ಶ ಮಾಡಿದಾಗ, ಹುಟ್ಟುವ ಎಲ್ಲಾ ಗಿಡಗಳೂ ಎತ್ತರವಾಗಿಯೇ ಇರುತ್ತವೆ. ಇಲ್ಲಿ ಎತ್ತರದ ಗುಣವು ‘ಪ್ರಬಲ’ ಮತ್ತು ಗಿಡ್ಡದ ಗುಣವು ‘ಸುಪ್ತ’ (Recessive) ಆಗಿರುತ್ತದೆ. ಅಂದರೆ, ಸುಪ್ತ ಗುಣವು ಒಳಗಿದ್ದರೂ ಅದು ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಇದು ನಮ್ಮ ಜೀವನದ ಅನೇಕ ಗುಣಗಳಿಗೂ ಅನ್ವಯಿಸುತ್ತದೆ.
- ಪ್ರತ್ಯೇಕೀಕರಣದ ನಿಯಮ (ಲಾ ಆಫ್ ಸೆಗ್ರಿಗೇಶನ್): ಇದು ಮೆಂಡಲ್ ಅವರ ಅತ್ಯಂತ ಮಹತ್ವದ ಸಂಶೋಧನೆ. ಮೊದಲ ತಲೆಮಾರಿನಲ್ಲಿ ಗಿಡ್ಡ ಗಿಡದ ಗುಣ ಕಾಣಿಸದಿದ್ದರೂ, ಅದು ನಾಶವಾಗಿರುವುದಿಲ್ಲ ಎಂದು ಮೆಂಡಲ್ ವಾದಿಸಿದರು.
ಸಂತಾನೋತ್ಪತ್ತಿಯ ಸಮಯದಲ್ಲಿ ಈ ಗುಣಗಳು (ಫ್ಯಾಕ್ಟರ್ಸ್/ಜೀನ್ಸ್) ಒಂದಕ್ಕೊಂದು ಮಿಶ್ರಣ ವಾಗದೆ ಪ್ರತ್ಯೇಕವಾಗುತ್ತವೆ. ಈ ಕಾರಣದಿಂದಲೇ, ಎರಡನೇ ತಲೆಮಾರಿನ ಗಿಡಗಳಲ್ಲಿ ಅಚ್ಚರಿಯ ರೀತಿಯಲ್ಲಿ ಮತ್ತೆ ಗಿಡ್ಡ ಗಿಡಗಳು (25% ಅನುಪಾತದಲ್ಲಿ) ಪ್ರತ್ಯೇಕವಾಗಿ ಹುಟ್ಟುತ್ತವೆ. ಅಂದರೆ, ತಂದೆ-ತಾಯಿಯ ಲಕ್ಷಣಗಳು ಮಗುವಿನಲ್ಲಿ ಸೇರಿಕೊಂಡರೂ, ಅವು ತಮ್ಮ ಅನನ್ಯತೆಯನ್ನು ಕಳೆದುಕೊಳ್ಳುವುದಿಲ್ಲ.
- ಸ್ವತಂತ್ರ ವಿಂಗಡಣೆಯ ನಿಯಮ (ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್ಮೆಂಟ್): ಒಂದು ಗಿಡದ ಬಣ್ಣ ಮತ್ತು ಅದರ ಎತ್ತರಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ಮೆಂಡಲ್ ಕಂಡುಕೊಂಡರು.
ಉದಾಹರಣೆ: ಹಳದಿ ಬಣ್ಣದ ಕಾಳುಗಳಿರುವ ಗಿಡ ಯಾವಾಗಲೂ ಎತ್ತರವಾಗಿಯೇ ಇರಬೇಕೆಂದಿ ಲ್ಲ. ಹಳದಿ ಕಾಳುಗಳು ಗಿಡ್ಡ ಗಿಡದಲ್ಲೂ ಇರಬಹುದು ಅಥವಾ ಹಸಿರು ಕಾಳುಗಳು ಎತ್ತರ ಗಿಡದಲ್ಲೂ ಇರಬಹುದು.
ಪ್ರತಿಯೊಂದು ಲಕ್ಷಣವೂ (ಬಣ್ಣ, ಎತ್ತರ, ಬೀಜದ ಆಕಾರ) ಇನ್ನೊಂದು ಲಕ್ಷಣದ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಮುಂದಿನ ತಲೆಮಾರಿಗೆ ಸಾಗುತ್ತದೆ. ಈ ನಿಯಮಗಳು ನಮಗೇಕೆ ಮುಖ್ಯ? ಮೆಂಡಲ್ ಅವರ ಈ ನಿಯಮಗಳು ಕೇವಲ ಬಟಾಣಿ ಗಿಡಗಳಿಗೆ ಸೀಮಿತವಲ್ಲ.
ಮನುಷ್ಯರಲ್ಲಿ ಕಣ್ಣಿನ ಬಣ್ಣ, ಕೂದಲಿನ ವಿನ್ಯಾಸ, ರಕ್ತದ ಗುಂಪುಗಳು ಮತ್ತು ಕೆಲವು ಅನುವಂಶೀ ಯ ಕಾಯಿಲೆಗಳು (ಉದಾಹರಣೆಗೆ ಹಿಮೋಫಿಲಿಯಾ ಅಥವಾ ವರ್ಣಾಂಧತೆ) ಹೇಗೆ ಹರಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನಿಯಮಗಳೇ ದಾರಿದೀಪ. ದೊಡ್ಡ ಪಾಠಗಳು: ಮೆಂಡಲ್ ನಮಗೆ ಐದು ದೊಡ್ಡ ಪಾಠಗಳನ್ನು ಕೊಡುತ್ತಾರೆ.
1 ಸಣ್ಣ ವಸ್ತುವಿನಲ್ಲೂ ದೊಡ್ಡ ಸತ್ಯ ಇರಬಹುದು. ಬಟಾಣಿ ಬೀಜ ಚಿಕ್ಕದು. ಆದರೆ ಅದರಿಂದ ಜೀವವಿಜ್ಞಾನದ ಮಹಾಸಿದ್ಧಾಂತ ಹುಟ್ಟಿತು. 2 ಎಣಿಕೆಯು (ಗಣಿತ) ವಿಜ್ಞಾನಕ್ಕೆ ಆತ್ಮ. ಅವರು ಕೇವಲ ‘ಹಳದಿ ಹೆಚ್ಚು, ಹಸಿರು ಕಡಿಮೆ’ ಎಂದು ಹೇಳಲಿಲ್ಲ. ಅವರು ಅನುಪಾತ ಕಂಡರು - 3:1, 1:5:1. ಸಂಖ್ಯೆಗಳು ಪ್ರಕೃತಿಯ ಭಾಷೆ. 3 ಸಹನೆ ಇಲ್ಲದೆ ಸಂಶೋ ಧನೆ ಇಲ್ಲ. ಎಂಟು ವರ್ಷಗಳ ಕಾಲ ಗಿಡ ಬೆಳೆಸಿ, ತಲೆಮಾರು ನೋಡಿದರು. ಇಂದಿನ ತಕ್ಷಣದ ಫಲಿತಾಂಶ ಬಯಸುವ ಕಾಲದಲ್ಲಿ ಮೆಂಡಲ್ ನಮಗೆ ನಿಧಾನಶೀಲತೆಯ ಮಹತ್ವ ಕಲಿಸುತ್ತಾರೆ.
4 ಒಂದು ತಲೆಮಾರಿನ ವಿಜ್ಞಾನಿಗಳು ನಿಮ್ಮನ್ನು ಅರ್ಥಮಾಡಿಕೊಳ್ಳದಿದ್ದರೂ ಸತ್ಯ ನಾಶ ವಾಗುವುದಿಲ್ಲ. ಅವರ ಲೇಖನವು ಕಾಲನ ಮಣ್ಣಿನಡಿಯಲ್ಲಿ ಮಲಗಿದ ಬೀಜದಂತೆ ಇತ್ತು. 1900ರಲ್ಲಿ ಅದು ಮೊಳಕೆಯೊಡೆಯಿತು.
5 ವಿಜ್ಞಾನ ಮತ್ತು ಆಧ್ಯಾತ್ಮ ಶತ್ರುಗಳಾಗಬೇಕಿಲ್ಲ. ಮಠದ ಸನ್ಯಾಸಿಯೊಬ್ಬ ಪ್ರಕೃತಿಯನ್ನು ಗಮನಿಸಿ, ದೇವರ ಸೃಷ್ಟಿಯಲ್ಲಿರುವ ನಿಯಮವನ್ನು ಗಣಿತದ ರೂಪದಲ್ಲಿ ಕಂಡುಹಿಡಿದ. ಜ್ಞಾನಕ್ಕೆ ಗಡಿ ಇಲ್ಲ. ಮೆಂಡಲ್ ಬದುಕಿನ ಕೊನೆಯ ಭಾಗ ಶಾಂತವಾಗಿತ್ತು; ಆದರೆ ಅವರ ಚಿಂತನೆ ಭವಿಷ್ಯ ದಲ್ಲಿ ಸ್ಫೋಟವಾಯಿತು. ಒಬ್ಬ ಸನ್ಯಾಸಿಯ ತೋಟದಿಂದ ಆರಂಭವಾದ ಪ್ರಯಾಣ ಇಂದು ಮಾನವ ಜೀನೋಮ್ ಯೋಜನೆ, ಜೀನ್ ಚಿಕಿತ್ಸೆ, ವೈಯಕ್ತಿಕ ವೈದ್ಯಕೀಯದವರೆಗೆ ಬಂದಿದೆ. ರೋಗದ ಅಪಾಯವನ್ನು ಮುಂಚಿತವಾಗಿ ತಿಳಿಯುವ ವೈದ್ಯಕೀಯ, ಕುಟುಂಬ ಸಲಹೆ, ಕೃಷಿಯಲ್ಲಿ ಉತ್ತಮ ತಳಿಗಳು, ಪಶುಸಂಗೋಪನೆಯಲ್ಲಿ ಆಯ್ಕೆ - ಇವೆಲ್ಲ ಮೆಂಡಲ್ ತೋರಿಸಿದ ದಾರಿಯ ಮುಂದಿನ ಮೈಲುಗಲ್ಲುಗಳು.