ಮಲ್ಲಪ್ಪ ಸಿ. ಖೊದ್ನಾಪೂರ
ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೋ ಕಪಟ ಮಳೆಯೋ, ಸುರಿ ಸುರಿಯೋ ಮಳೆರಾಯ’ ಎಂಬ ವರುಣದೇವನನ್ನು ಮಳೆಗಾಗಿ ಪ್ರಾರ್ಥಿಸುವ ಈ ಜಾನಪದ ಹಾಡನ್ನು ತಾವೆಲ್ಲ ಕೇಳಿರಬಹುದು. ಮಳೆಗಾಗಿ ದೇವರಲ್ಲಿ ಮೊರೆ ಹೋಗುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ನಂಬಿಕೆ. ಉತ್ತಮ ಮಳೆ, ಬೆಳೆ ಮತ್ತು ಅನ್ನದಾತರ ಸಮೃದ್ಧಿಗಾಗಿ ಜನತೆ ಮನೆಯಲ್ಲಿ ಯಾವುದೇ ಅಡುಗೆ ಮಾಡದೇ ವಾರ (ಉಪವಾಸ) ಮಾಡುವುದು, ಪೂಜೆ ಸಲ್ಲಿಸುವುದು, ಕತ್ತೆ ಮದುವೆ ಮಾಡುವುದು, ಗುರ್ಜಿ ಮಾಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಎಲ್ಲ ಮಾಡುತ್ತಾರೆ.
ವರುಣ ದೇವನಲ್ಲಿ ಭೂಮಿಗೆ ಜೀವಜಲವನ್ನು ಕರುಣಿಸಿ, ಬರಗಾಲವನ್ನು ದೂರ ಮಾಡುವಂತೆ ಭಕ್ತಿ-ಭಾವದಿಂದ ನಿವೇದನೆ ಮಾಡಿಕೊಳ್ಳುತ್ತಾರೆ. ‘ಕಣ್ಣು ಮುಚ್ಚಿ ಕುಳಿತ್ಯೇನೋ ವರುಣ ದೇವ, ಬೆಳೆ ಒಣಗಿ ಬಸವಳಿಯಿತು ಜೀವ, ಕಾರ ಮಳೆಯ ಸುರಿಸಿ, ಕಪಟ ಮಳೆ ಕರಗಿಸಿ, ಧರೆಯ ಸಿರಿ ತಣಿಸು ವರುಣ ದೇವ’ ಎಂದು ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ವರುಣ ದೇವನಿಗೆ ಮಹಿಳೆಯರು ಪ್ರಾರ್ಥನೆ ಮಾಡುವ ದೃಶ್ಯ ಕಂಡುಬರುತ್ತದೆ.
ಇದನ್ನೂ ಓದಿ: Mallappa C Khodnapur Column: ಸಮಷ್ಟಿ ಭಾವದ ಸಂದೇಶ ಸಾರಿದ ಕನಕದಾಸರು
ಹಳ್ಳಿಗಾಡಿನ ಜನರು ಮಳೆಗಾಗಿ ಮೇಘರಾಜನನ್ನು ಪ್ರಾರ್ಥಿಸುವ ಸಾಂಪ್ರದಾಯಿಕ ಮತ್ತು ಭಕ್ತಿ ಪೂರ್ವಕವಾದ ಜಾನಪದ ಹಾಡು ಹಾಡುತ್ತಾ, ಮಣ್ಣಿನಿಂದ ಮಾಡಿದ ಗುರ್ಜಿ ಹೊತ್ತು ಪ್ರತಿ ಮನೆ ಮನೆಗೆ ತೆರಳಿ ನೀರು ಹಾಕಿಸಿಕೊಂಡು ಎಲ್ಲೆಲ್ಲೂ ಮಳೆರಾಯನಿಗೆ ಕೋರಿಕೆ ಸಲ್ಲಿಸುವುದು ಒಂದು ವಿಶೇಷತೆ.
ಜುಲೈ ತಿಂಗಳ ಮಧ್ಯಕಾಲ ಬಂದರೂ ಇನ್ನೂ ಮಳೆ ಬಾರದೇ ಇರುವ ಈ ಸಂದರ್ಭದಲ್ಲಿ ನಮ್ಮ ನವರಸಪುರದ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ದೇವರಿಗೆ ಜಲಾಭಿಷೇಕ, ದೇವರಿಗೆ ಉಡಿ ತುಂಬು ವುದು, ವರುಣದೇವವನ್ನು ಒಲಿಸಿಕೊಳ್ಳಲು ಮಂತ್ರ ಪಠಣ ನಡೆಯುತ್ತವೆ. ನಮ್ಮ ನವರಸಪುರ ಊರಿನ ಜನತೆ ಒಗ್ಗೂಡಿ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಾರ ಮಾಡುತ್ತಾ, ಮನೆಯಲ್ಲಿ ಯಾವುದೇ ತರಹದ ಅಡುಗೆ ಮಾಡದೇ ಉಪವಾಸ ವ್ರತ ಆಚರಿಸುತ್ತಾರೆ.
ಭಜನೆ, ಸತ್ಸಂಗ, ಕೀರ್ತನೆ, ದೇವರ ನಾಮಸ್ಮರಣೆ ಹೀಗೆ ಹಮ್ಮಿಕೊಳ್ಳುತ್ತಾರೆ. ಗುರ್ಜಿ ಪೂಜೆ ವೈಶಿಷ್ಟ್ಯ: ಮಳೆ ಬಾರದೇ ಇದ್ದಾಗ ನಮ್ಮ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಶತಮಾನ ಗಳಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆಯು ವಿಶಿಷ್ಟವಾಗಿದೆ. ಮಹಿಳೆಯರು ಮತ್ತು ಬಾಲಕರು ತಲೆಯ ಮೇಲೆ ತವೆ ಇಟ್ಟುಕೊಂಡು, ಅದರ ಮೇಲೆ ಆಕಳ ಸೆಗಣಿಯಿಂದ ಗುರ್ಜಿ ತಯಾರಿಸಿ, ಗುರ್ಜಿ ಹಾಡು ಹಾಡುತ್ತಾ, ಪ್ರತಿ ಮನೆಗೆ ತೆರಳಿ ಗುರ್ಜಿಗೆ ನೀರು ಸುರಿದು ದೇವರಲ್ಲಿ ಜನರು ಮಳೆ ನೀಡಲೆಂದು ಬೇಡಿಕೊಳ್ಳುತ್ತಾರೆ.
ಇದರಿಂದ ಸಂಕಷ್ಟ ಕಾಲದಲ್ಲಿ ಇಡೀ ರೈತ ಸಮುದಾಯಕ್ಕೆ ಧನಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಅಷ್ಟೇ ಅಲ್ಲದೇ ಜಾತಿ, ಮತ, ಪಂಥ-ಪಂಗಡಗಳ ಬೇಧ-ಭಾವವಿಲ್ಲದೇ ಇಡೀ ಊರೇ ಒಗ್ಗೂಡಿ ಸಕಲ ದೇವಾನುದೇವತೆಗಳಲ್ಲಿ ವರುಣನಿಗಾಗಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ರೈತ ಪ್ರಕೃತಿ, ಗಾಳಿ, ಮಳೆ, ಸೂರ್ಯ ಮತ್ತು ಭೂ ತಾಯಿಯನ್ನು ಸದಾ ದೈವಿಕ ಭಾವದಿಂದ ಪೂಜಿಸು ತ್ತಾನೆ. ರೈತ ಮತ್ತು ಪ್ರಕೃತಿಯ ಮಧ್ಯೆ ಅವಿನಾಭಾವ ಸಂಬಂಧ. ವರುಣನಿಗೆ ಮಳೆಗಾಗಿ ನಡೆಸುವ ಜಾನಪದ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಗ್ರಾಮೀಣ ಜನರ ಇಂಥ ಪ್ರಾಕೃತಿಕ ಸಂಬಂಧದ ಪ್ರತೀಕ.