ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

ಹಿಂದಿರುಗಿ ನೋಡಿದಾಗ

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ್ತ್ರ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

ಒಬ್ಬ ಕಳ್ಳನಿಗೆ ಕೊಡಬಹುದಾದ ಕಠಿಣತಮ ಶಿಕ್ಷೆ ಎಂದರೆ ಯಾವುದು? ಅದು ಮರಣ ದಂಡನೆಯೂ ಅಲ್ಲ, ಜೀವಾವಧಿ ಶಿಕ್ಷೆಯೂ ಅಲ್ಲ. ಅವನ ಕಿವಿ, ಮೂಗುಗಳನ್ನು ಕತ್ತರಿಸು ವುದು!

ವಿರೂಪಗೊಂಡ ಮುಖವನ್ನು ಹೊತ್ತು ಆತ ಎಲ್ಲಿಗೂ ಹೋಗಲಾರ. ಎಲ್ಲಿ ಹೋದರೂ ಅವನೊಬ್ಬ ಕಳ್ಳ, ಶಿಕ್ಷೆಗೆ ಒಳಗಾಗಿದ್ದಾನೆ ಎಂಬುದು ಜಗಜ್ಜಾಹೀರಾಗುತ್ತಿದ್ದ ಕಾರಣ, ಅವನು ನಾಗರಿಕ ಸಮಾಜದಲ್ಲಿ ಬೆರೆಯುವುದು ಅಸಾಧ್ಯದ ಮಾತಾಗಿತ್ತು. ಇಂಥ ಕಳ್ಳನಿಗೆ ಮರು ಜೀವನವನ್ನು ಕೊಟ್ಟವರು ಸುಶ್ರುತ ಮಹರ್ಷಿಗಳು. ಸುಶ್ರುತ ಮಹರ್ಷಿಗಳು ಯಾವುದೇ ಕಾರಣದಿಂದ ಛೇದನಕ್ಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರು ರೂಪಿಸಿ, ಅವರಿಗೆ ಹೊಸ ಬದುಕನ್ನು ನೀಡುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿ ಪಡಿಸಿ, ಸುರೂಪಿಕಾ ಶಸ್ತ್ರವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರವಾದ ಬುನಾದಿಯನ್ನು ಹಾಕಿ ಸುರೂಪಿಕ ಶಸ್ತ್ರವೈದ್ಯಕೀಯ ಪಿತಾಮಹ (ಫಾದರ್ ಆಫ್ ಪ್ಲಾಸ್ಟಿಕ್‌ ಸರ್ಜರಿ) ಎಂಬ ಅಭಿದಾನಕ್ಕೆ ಪಾತ್ರರಾದರು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

ಗ್ಲಾಡಿಯೇಟರ್ ವೀರರು: ಪ್ರಾಚೀನ್ ರೋಮ್ ಸಾಮ್ರಾಜ್ಯದಲ್ಲಿ ‘ಗ್ಲಾಡಿಯೇಟರ್’ ಎಂಬ ವೃತ್ತಿಪರ ವೀರರಿದ್ದರು. ಇವರು ಸಾಮಾನ್ಯವಾಗಿ ಗುಲಾಮರು, ಯುದ್ಧಕೈದಿಗಳು ಅಥವಾ ಅಪರಾಧಿಗಳಾಗಿರುತ್ತಿದ್ದರು. ಅಪರೂಪಕ್ಕೆ ಜನಸಾಮಾನ್ಯರು, ಹಣ, ಹೆಸರು ಅಥವಾ ಸಾಲ ಮುಕ್ತರಾಗಲು ಗ್ಲಾಡಿಯೇಟರುಗಳು ಆಗುತ್ತಿದ್ದರು. ಈ ಗ್ಲಾಡಿಯೇಟರುಗಳಿಗೆ ತರಬೇತಿ ಯನ್ನು ನೀಡುವ ‘ಲೂಡಿ’ ಎಂಬ ಶಾಲೆಗಳಿರುತ್ತಿದ್ದವು. ಇಬ್ಬರು ಗ್ಲಾಡಿಯೇಟರುಗಳು ಕೊಲೋಸಿಯಮ್ ಎಂಬ ಸಾರ್ವಜನಿಕ ಮಲ್ಲಶಾಲೆಯಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಯುದ್ಧವನ್ನು ಮಾಡುತ್ತಿದ್ದರು.

ಇದು ನಿಜವಾದ ದ್ವಂದ್ವ ಕಾಳಗ. ಇದು ಕ್ರೂರವೂ, ಭಯಂಕರವೂ ಹಾಗೂ ಸಾವಿನಲ್ಲಿ ಕೊನೆ ಗೊಳ್ಳಬಹುದಾದ ಅಮಾನುಷ ಕಾಳಗವೂ ಆಗಿರುತ್ತಿತ್ತು. ಗೆದ್ದವರಿಗೆ ಬಹುಮಾನದ ಹಣ, ಹೆಸರು, ಸಾರ್ವಜನಿಕ ಸಮ್ಮಾನಗಳು ದೊರೆಯುತ್ತಿದ್ದವು. ಅವರು ಯುದ್ಧ ಕೈದಿಗಳು ಇಲ್ಲವೇ ಗುಲಾಮರಾಗಿದ್ದರೆ ಅವರಿಗೆ ಸ್ವಾತಂತ್ರ್ಯವು ದೊರೆಯುತ್ತಿತ್ತು.

ದ್ವಂದ್ವ ಕಾಳಗದಲ್ಲಿ ನಾನಾ ನಮೂನೆಗಳಿದ್ದವು. ಯಾವುದೇ ನಮೂನೆಯ ಕಾಳಗವಿರಲಿ, ಅವರಿಗೆ ಮಾರಣಾಂತಿಕ ಗಾಯಗಳಾಗುತ್ತಿದ್ದವು. ಎದೆ ಅಥವಾ ಹೊಟ್ಟೆಗೆ ತೀವ್ರಸ್ವರೂಪದ ಗಾಯವಾದಾಗ, ಆ ಗ್ಲಾಡಿಯೇಟರ್ ಸಾಯುವ ಸಾಧ್ಯತೆಯೇ ಅಧಿಕವಾಗಿರುತ್ತಿತ್ತು. ಆದರೆ ಮುಖಕ್ಕೆ ಪೆಟ್ಟಾಗಿ ಕಿವಿ, ಮೂಗು, ಬಾಯಿ, ಅರ್ಧ ಮುಖವು ಛೇದನಕ್ಕೆ ಒಳಗಾದಾಗ ಅವನು ಸಾಯುತ್ತಿರಲಿಲ್ಲ. ಹಾಗೆಯೇ ಗಾಯಗಳಿಂದ ನೆಮ್ಮದಿಯ ಬದುಕನ್ನೂ ನಡೆಸುವಂತಿರಲಿಲ್ಲ. ಇಂಥವರ ಪಾಲಿಗೆ ದೇವರಂತೆ ಬಂದವನು ಕ್ಲಾಡಿಯಸ್ ಗ್ಯಾಲನಸ್ ಎಂ ರೋಮನ್ ವೈದ್ಯ!

ಇದನ್ನೂ ಓದಿ: Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ಗ್ಯಾಲೆನ್: ಐಲಿಯಸ್ ಗ್ಯಾಲನಸ್, ಕ್ಲಾಡಿಯಸ್ ಗ್ಯಾಲನಸ್, ಪೆರ್ಗಮಾನಿನ ಗ್ಯಾಲೆನ್ ಎಂದು ಇತಿಹಾಸದಲ್ಲಿ ಪ್ರಸಿದ್ಧನಾದ ಗ್ರೀಕ್ ಮೂಲದ ರೋಮನ್ ವೈದ್ಯ, ವೈದ್ಯಕೀಯ ಲೋಕದಲ್ಲಿ ಗ್ಯಾಲೆನ್ (ಕ್ರಿ.ಶ.129-ಕ್ರಿ.ಶ.216) ಎಂಬ ಹೆಸರಿನಿಂದ ಸುಪರಿಚಿತ. ಅಂದು ಪೆರ್ಗಮಾನ್ ಎಂಬ ಹೆಸರನ್ನು ಪಡೆದಿದ್ದ ಇಂದಿನ ಟರ್ಕಿ ಪ್ರದೇಶದಲ್ಲಿ ಹುಟ್ಟಿದ ಈತ ಶ್ರೀಮಂತ ತಂದೆಯನ್ನು ಪಡೆದಿದ್ದ. ಹಾಗಾಗಿ ಅತ್ಯುತ್ತಮ ಶಿಕ್ಷಣವನ್ನು ಪಡೆದು, ತನ್ನ 16ನೆಯ ವಯಸ್ಸಿಗೆ ಅಲೆಗ್ಸಾಂಡ್ರಿಯಕ್ಕೆ ಹೋಗಿ ವೈದ್ಯಕೀಯವನ್ನು ಕಲಿತ. ಕ್ರಿ.ಶ.162ರಂದು ರೋಮಿಗೆ ಮರಳಿದ.

ಅಲ್ಪಾವಧಿಯಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದ. ಚಕ್ರವರ್ತಿ ಮಾರ್ಕ್ ಅರಿಯಲಿಸ್‌ನ (ಕ್ರಿ. ಶ.121-ಕ್ರಿ.ಶ.180) ಖಾಸಗಿ ವೈದ್ಯನಾದ. ಇವನಿಗೆ ಗ್ರೀಕ್ ವೈದ್ಯಕೀಯ ಸಿದ್ಧಾಂತಗಳು ಚೆನ್ನಾಗಿ ತಿಳಿದಿದ್ದವು. ಅದಕ್ಕಿಂತಲೂ ಹೆಚ್ಚಿಗೆ ಪ್ರಾಯೋಗಿಕ ತಿಳಿವು ಅದ್ಭುತವಾಗಿತ್ತು. ಅವನು ತನಗೆ ಸರಿಕಂಡ ಹೊಸ ಹೊಸ ಪ್ರಯೋಗಗಳನ್ನು ನಡೆಸಲು ಹಿಂದೆಗೆಯುತ್ತಿರಲಿಲ್ಲ. ಹಾಗಾಗಿ ಅಂಗರಚನಾ ವಿಜ್ಞಾನ (ಅನಾಟಮಿ), ಅಂಗ ಕ್ರಿಯಾವಿಜ್ಞಾನ (ಫಿಸಿಯಾಲಜಿ), ರೋಗ ವಿಜ್ಞಾನ (ಪೆಥಾಲಜಿ), ಔಷಧವಿಜ್ಞಾನ (ಫಾರ್ಮಕಾಲಜಿ), ನರ ವಿಜ್ಞಾನ (ನ್ಯೂರಾಲಜಿ), ದರ್ಶನವಿಜ್ಞಾನ (ಫಿಲಾಸಫಿ) ಹಾಗೂ ತರ್ಕದಲ್ಲಿ (ಲಾಜಿಕ್) ಅದುವರೆಗೂ ಯಾರೂ ಸಾಧಿಸ ದಂಥ ಅದ್ಭುತ ಅರಿವನ್ನು ಗಳಿಸಿ ವೈದ್ಯವಿಜ್ಞಾನದ ಪ್ರಾತಃ ಸ್ಮರಣೀಯರಲ್ಲಿ ಒಬ್ಬನಾದ. ಆದರೆ ಅವನ ಕಾಣಿಕೆಯ ಬಗ್ಗೆ ಅಷ್ಟಾಗಿ ಚಿರಪರಿಚಿತವಲ್ಲದ ಕ್ಷೇತ್ರ ವೆಂದರೆ ಗಾಯ ಶಸ್ತ್ರವೈದ್ಯಕೀಯ (ಟ್ರಾಮಾ ಸರ್ಜರಿ) ಹಾಗೂ ಪುನಾರಚನೆಯ ಶಸ್ತ್ರವಿಜ್ಞಾನದ (ರಿ-ಕನ್‌ ಸ್ಟ್ರಕ್ಟಿವ್ ಸರ್ಜರಿ) ಬಗ್ಗೆ ಕ್ರಿಸ್ತಶಕಾರಂಭದಲ್ಲಿ ಆತನು ನೀಡಿದ ತಿಳಿವು.

ತೀವ್ರ ಗಾಯಗಳು: ಗ್ಯಾಲೆನ್ ಇದ್ದ ರೋಮಿನಲ್ಲಿ ಗ್ಲಾಡಿಯೇಟರ್ ಕಾಳಗಗಳು ಪ್ರಸಿದ್ಧ ವಾಗಿದ್ದವು. ಕೊಲೋಸಿಯಮ್‌ನಲ್ಲಿ ನಡೆಯುತ್ತಿದ್ದ ಈ ಕಾಳಗಗಳು ಜನ ಸಾಮಾನ್ಯರ ಸರ್ವೆಸಾಮಾನ್ಯ ಮನರಂಜನಾ ಮಾಧ್ಯಮವಾಗಿದ್ದವು. ನಿಯಮಿತವಾಗಿ ಏರ್ಪಡುತ್ತಿದ್ದ ಈ ಸಾರ್ವಜನಿಕ ಕ್ರೌರ್ಯ ಪರಾಕಾಷ್ಠೆಯಲ್ಲಿ ಕೆಲವುಸಲ ಮನುಷ್ಯರು ಕ್ರೂರ ಪ್ರಾಣಿಗಳ ಜತೆಯಲ್ಲಿ ಹೋರಾಡಬೇಕಾಗಿತ್ತು.

‘ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ’ ಎಂಬ ಗಾದೆಮಾತು ಕೋಲೋಸಿಯಮ್ ಕಾಳಗಗಳಿಗೆ ನೂರಕ್ಕೆ ನೂರರಷ್ಟು ಒಪ್ಪಿಗೆಯಾಗುತ್ತಿದ್ದವು. ಗ್ಲಾಡಿಯೇಟರುಗಳ ದ್ವಂದ್ವ ಕಾಳಗದಲ್ಲಿ ಸಾಯುವ ಸಾಧ್ಯತೆಯಿದ್ದರೂ, ಬಹಳಷ್ಟು ಸಲ ತೀವ್ರವಾಗಿ ಗಾಯಗೊಳ್ಳುತ್ತಿದ್ದರು. ಮೂಗು ಜಜ್ಜಿಹೋಗುತ್ತಿತ್ತು. ತುಟಿಗಳು ಹರಿದು ತುಂಡಾಗಿ ಜೋತಾಡುತ್ತಿದ್ದವು. ಒಂದು ಕಣ್ಣು ಗುಡ್ಡೆ ಹೊರಬಂದು, ಉಳಿದ ಗುಡ್ಡೆಯು ರಕ್ತಸಿಕ್ತವಾಗುತ್ತಿತ್ತು.

ಪೂರ್ಣ ಕೆನ್ನೆಯು ಛೇದನಕ್ಕೊಳಗಾಗಿ ಒಳಗಿದ್ದ ದವಡೆಯು ಹಲ್ಲುಗಳ ಸಮೇತ ಎದ್ದು ಕಾಣುತ್ತಿತ್ತು. ಇಂಥವರು ಏನನ್ನೂ ತಿನ್ನಲು ಆಗುತ್ತಿರಲಿಲ್ಲ, ಕುಡಿಯಲು ಆಗುತ್ತಿರಲಿಲ್ಲ, ಮಾತನಾಡಲು ಆಗುತ್ತಿರಲಿಲ್ಲ. ಉಸಿರಾಟವೂ ಕಷ್ಟವಾಗುತ್ತಿತ್ತು. ಅನೇಕರಿಗೆ ಅರ್ಧ ಮುಖವೇ ಇರುತ್ತಿರಲಿಲ್ಲ.

ಗ್ಲಾಡಿಯೇಟರ್ ಕಾಳಗಗಳು ಕಟ್ಟುನಿಟ್ಟಾದ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತಿದ್ದವು. ಆಟವು ನ್ಯಾಯಬದ್ಧವಾಗಿ ನಡೆಯಲು ಅನುಕೂಲವನ್ನು ಮಾಡಿಕೊಡುತ್ತಿದ್ದ ರೆಫರಿಗಳು ಹಾಗೂ ಅಂಪೈರುಗಳು ಇರುತ್ತಿದ್ದರು. ಒಬ್ಬ ಗ್ಲಾಡಿಯೇಟರ್ ತೀವ್ರವಾಗಿ ಗಾಯ ಗೊಂಡಾಗ, ಎದುರಾಳಿಯು ಅವನನ್ನು ಸುಲಭವಾಗಿ ಕೊಲ್ಲಬಹುದಾಗಿತ್ತು. ಆದರೆ ಹಾಗೆ ಕೊಲ್ಲಲು ಅವಕಾಶವನ್ನು ನೀಡದೆ, ಅವನನ್ನು ಕಾಳಗಕಣದಿಂದ ಹೊರಕ್ಕೆ ತಂದು ಆಸ್ಪತ್ರೆಗೆ ಸೇರಿಸು ತ್ತಿದ್ದರು.

ಇಂಥವರಿಗೆ ಚಿಕಿತ್ಸೆಯನ್ನು ನೀಡುವುದು ಸವಾಲಿನ ಕೆಲಸವಾಗಿತ್ತು. ಬಹಳಷ್ಟು ಸಂದರ್ಭ ಗಳಲ್ಲಿ ಅವರು ನರಳಿ ನರಳಿ ಸಾಯುತ್ತಿದ್ದರು. ಗ್ಯಾಲನ್ ರೋಮಿಗೆ ಬಂದು ನೆಲೆ ನಿಂತ ಮೇಲೆ ಗ್ಲಾಡಿಯೇಟರುಗಳಿಗೆ ತರಬೇತಿಯನ್ನು ನೀಡುತ್ತಿದ್ದ ‘ಲೂಡಿ’ ಶಾಲೆಗಳ ವೈದ್ಯನಾಗಿ ಸೇರಿ ಕೊಂಡನು. ಗಾಯಾಳುಗಳಿಗೆ ಈ ಹಿಂದೆ ರೋಮ್ ಕಂಡಿರದಂಥ ಅದ್ಭುತ ಸೇವೆಯನ್ನು ನೀಡಲಾರಂಭಿಸಿದನು.

20 ಸಂಪುಟಗಳು: ಗ್ಯಾಲನ್, ಗ್ಲಾಡಿಯೇಟರುಗಳ ಗಾಯಗಳನ್ನು ಕರಾರುವಾಕ್ಕಾಗಿ ಹೊಲಿಯ ಬೇಕಾದರೆ, ಅವನಿಗೆ ಮನುಷ್ಯನ ಅಂಗರಚನೆಯ ಬಗ್ಗೆ ನಿಖರವಾಗಿ ತಿಳಿದಿರಬೇಕಾಗಿತ್ತು. ಅವನು ಅಲೆಗ್ಸಾಂಡ್ರಿಯದಲ್ಲಿ ಈಜಿಪ್ಷಿಯನ್ನರ ಹಾಗೂ ಗ್ರೀಕರ ಅಂಗರಚನೆಯ ಅರಿವನ್ನು ಆಳವಾಗಿ ಗಳಿಸಿದ್ದ. ಆದರೆ ಅಂದಿನ ರೋಮಿನಲ್ಲಿ ಮಾನವ ಶರೀರ ವಿಚ್ಛೇದನಕ್ಕೆ ಅನುಮತಿ ಯಿರಲಿಲ್ಲ.

ಹಾಗಾಗಿ ಗ್ಯಾಲನ್ ಹಂದಿ, ಮಂಗ ಮುಂತಾದ ಜೀವಿಗಳನ್ನು ಛೇದಿಸಿ, ಮುಖ್ಯವಾಗಿ ಅಂಗಗಳಿಗೆ ಸಂಬಂಧಿಸಿದ ರಕ್ತನಾಳಗಳು ಹಾಗೂ ನರಗಳ ಬಗ್ಗೆ ವಿಶೇಷ ಅಧ್ಯಯನವನ್ನು ಕೈಗೊಂಡ. ಇವನು ತನ್ನ ಅಂಗರಚನೆಯ ಅರಿವನ್ನೆಲ್ಲ 20 ಸಂಪುಟಗಳಲ್ಲಿ ದಾಖಲಿಸಿದ. ಈ ಗ್ರಂಥಗಳು ಸುಮಾರು 1000 ವರ್ಷಗಳವರೆಗೆ ಯುರೋಪಿಯನ್ ಹಾಗೂ ಇಸ್ಲಾಂ ವೈದ್ಯರ ಅಂಗರಚನಾ ಅರಿವಿನ ಪ್ರಧಾನ ಅಧ್ಯಯನ ಆಕರವಾಗಿತ್ತು.

ಮುಖ ಹಾಗೂ ಕುತ್ತಿಗೆಗೆ ಪೆಟ್ಟಾದಾಗ ಆ ಭಾಗವನ್ನು ಹೊಲಿಯಬೇಕಾದರೆ ಇವನು ತುಂಬಾ ಎಚ್ಚರಿಕೆಯನ್ನು ವಹಿಸುತ್ತಿದ್ದ. ಏಕೆಂದರೆ ಅಲ್ಲಿ ರೆಕರೆಂಟ್ ಲರೆಂಜಿಯನ್ ನರ್ವ್ ಎಂಬ ಮುಖ್ಯವಾದ ನರವು ಹಾದು ಹೋಗುತ್ತದೆ. ಹೊಲಿಯುವಾಗ ಈ ನರಕ್ಕೆ ಪೆಟ್ಟಾದರೆ, ವ್ಯಕ್ತಿಯ ಧ್ವನಿ ಹಾಗೂ ಮಾತು ಸದಾಕಾಲಕ್ಕೂ ನಿಂತು ಹೋಗುತ್ತದೆ ಎನ್ನುವ ಅಂಶವನ್ನು ಗಮನಿಸಿ ದಾಖಲಿಸಿದ. ಮುಖದ ಸ್ನಾಯುಗಳ ಬಗ್ಗೆ ಈತನ ಅರಿವು ಅಪಾರವಾಗಿತ್ತು. ಮುಖಕ್ಕೆ ಪೆಟ್ಟಾ ದಾಗ ಗ್ಯಾಲನ್ ಎರಡು ಅಂಶಗಳಿಗೆ ಗಮನವನ್ನು ನೀಡುತ್ತಿದ್ದ.

ಮೊದಲನೆಯದು ಪೆಟ್ಟಾದ ಭಾಗವು ತನ್ನ ಕೆಲಸ ಕಾರ್ಯಗಳನ್ನು ಸರಾಗವಾಗಿ ನಡೆಸುವಂತೆ ಎಚ್ಚರವಹಿಸುತ್ತಿದ್ದ. ಎರಡನೆಯದಾಗಿ ಅವನು ಮುಖದ ಸೌಂದರ್ಯವನ್ನು ಸಾಧ್ಯ ವಾದಷ್ಟು ಕಾಪಾಡಲು ಪ್ರಯತ್ನಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ‘ಮುಖವೆನ್ನುವುದು ಮನಸ್ಸಿನ ರಂಗಭೂಮಿ’ ಎಂದ. ನಮ್ಮ ಮುಖದ ಸ್ನಾಯುಗಳು ಆರೋಗ್ಯವಾಗಿದ್ದಾಗ ಮಾತ್ರ, ನಮ್ಮ ಮನಸ್ಸಿನ ಎಲ್ಲ ಭಾವನೆಗಳನ್ನು ಸಮರ್ಥ ವಾಗಿ ತೋರಬಲ್ಲವಾಗಿರುತ್ತವೆ.

ಪ್ರಾಚೀನ ಭಾರತೀಯ ಸಮುದಾಯದಂತೆ, ಪ್ರಾಚೀನ ರೋಮನ್ ಸಮುದಾಯವೂ ವೈದ್ಯ ರಿಗೆ, ಅದರಲ್ಲೂ ಶಸವೈದ್ಯರಿಗೆ ಅಂಥ ಮಾನ್ಯತೆಯನ್ನು ನೀಡುತ್ತಿರಲಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಅಶ್ವಿನಿ ದೇವತೆಗಳು ದೇವವೈದ್ಯರು. ಅವರು ದೇವವೈದ್ಯರಾಗಿದ್ದರೂ ಅವರಿಗೆ ದೇವಾನುದೇವತೆಗಳ ಜತೆಯಲ್ಲಿ ಸಹ ಪಂಕ್ತಿಯಿರಲಿಲ್ಲ.

ಯಜ್ಞಯಾಗಾದಿಗಳಲ್ಲಿ ದೊರೆಯುತ್ತಿದ್ದ ಹವಿಸ್ಸಿನಲ್ಲಿ ಅವರಿಗೆ ಸಮಪಾಲಿರಲಿಲ್ಲ. ಅಶ್ವಿನಿ ಕುಮಾರರು, ಚ್ಯವನ ಮಹರ್ಷಿಗಳಿಗೆ ತಮ್ಮ ಚಿಕಿತ್ಸೆಯಿಂದ ಯೌವನವನ್ನು ಮರಳಿಸಿದ್ದಕ್ಕೆ, ಚ್ಯವನರು ತಮ್ಮ ತಪಃಶಕ್ತಿಯಿಂದ ಅಶ್ವಿನಿ ಕುಮಾರರಿಗೆ ಹವಿಸ್ಸಿನಲ್ಲಿ ಒಂದು ಭಾಗ ದೊರೆಯುವಂತೆ ಮಾಡಿದರು.

ರೋಮನ್ನರ ಕಾಲದಲ್ಲಿ ಗುಲಾಮರು ಶಸ್ತ್ರವೈದ್ಯಕೀಯವನ್ನು ಕಲಿಯುತ್ತಿದ್ದರು. ಗ್ಯಾಲನ್‌ ನಂಥ ವಿದ್ಯಾವಂತ, ಶ್ರೀಮಂತ ಹಾಗೂ ಕುಲೀನ ಮನೆತನದವರಿಗೆ ಸಮಾಜದಲ್ಲಿ ಗೌರವ ದೊರೆತಂಥ ಉದಾಹರಣೆಯು ಒಂದು ಅಪವಾದವಾಗಿತ್ತೇ ಹೊರತು, ಅದು ನಿಯಮ ವಾಗಿರಲಿಲ್ಲ. ರೋಮನ್ನರ ಕಾಲದಲ್ಲಿ ಶವವಿಚ್ಛೇದನಕ್ಕೆ ಅನುಮತಿಯಿರಲಿಲ್ಲ ನ್ನುವುದನ್ನು ಈಗಾಗಲೇ ತಿಳಿದಿದ್ದೇವೆ.

ಅದರ ಜತೆಯಲ್ಲಿ ಭಗವಂತನು ನೀಡಿದ ರೂಪವನ್ನು ಬದಲಿಸಲೂ ಅನುಮತಿಯಿರಲಿಲ್ಲ. ಹಾಗೆ ಬದಲಿಸುವುದನ್ನು ‘ದೈವದ್ರೋಹ’ ಎಂದೇ ಬಗೆಯುತ್ತಿದ್ದರು. ಆದರೆ ಗ್ಯಾಲನ್ನನ ವಿಚಾರವೇ ಭಿನ್ನವಾಗಿತ್ತು. ಅರ್ಧಮುಖ ಕೆತ್ತಿ ಹೋದವನಿಗೆ ಕೃತಕವಾಗಿ ಕೆನ್ನೆಯನ್ನು ರೂಪಿಸಿದರೆ, ಅವನು ಕೊನೆಯ ಪಕ್ಷ ಸರಾಗವಾಗಿ ಉಸಿರಾಡಬಲ್ಲ, ತಿನ್ನಬಲ್ಲ, ಕುಡಿಯಬಲ್ಲ ಹಾಗೂ ಮಾತನಾಡಬಲ್ಲ.

ಇಂಥವನಿಗೆ ಶಸ್ತ್ರಚಿಕಿತ್ಸೆಯನ್ನೇ ಮಾಡಬಾರದು ಎಂದರೆ ಅದು ಕ್ರೌರ್ಯದ ಪರಾಕಾಷ್ಠೆ ಯಾಗುತ್ತದೆ. ಒಬ್ಬನ ಬದುಕನ್ನು ಕಿತ್ತುಕೊಂಡ ಹಾಗಾಗುತ್ತದೆ. ಅವನು ಬದುಕಲು ಅಗತ್ಯ ವಾದ ಕನಿಷ್ಠ ನೆರವನ್ನು ನೀಡಬೇಕು ಎನ್ನುವುದು ಗ್ಯಾಲನ್ನನ ಅಭಿಮತವಾಗಿತ್ತು. ಹಾಗಾಗಿ ಅವನು ತನ್ನ ಕಾಲದ ಸಮಾಜವನ್ನು ಎದುರಿಸಿ, ಹಲವು ದಿಟ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ. ಇದು ಅತ್ಯಂತ ಶ್ಲಾಘನೀಯ ವಿಚಾರ. ಗ್ಯಾಲನ್, ತನ್ನ ಶಸ್ತ್ರಚಿಕಿತ್ಸೆಗೆ ಅಗತ್ಯ ವಾಗಿದ್ದ ಉಪಕರಣಗಳನ್ನು ಸ್ವಯಂ ರೂಪಿಸಿಕೊಳ್ಳುತ್ತಿದ್ದ.

ಹಾಗೆಯೇ ಗಾಯಗಳನ್ನು ಹೊಲಿಯಲು ಅಗತ್ಯವಾದ ವಿವಿಧ ದಾರಗಳನ್ನು ತಾನೇ ಸಿದ್ಧಪಡಿಸಿಕೊಂಡ. ಇನ್ನು ಚರ್ಮ, ಸ್ನಾಯು, ಕೊಬ್ಬು, ರಕ್ತನಾಳ, ನರಗಳು, ಕಂಡರಗಳು (ಟೆಂಡನ್), ರಜ್ಜುಗಳನ್ನು (ಲಿಗಮೆಂಟ್) ಹೊಲಿಯುವ ಸಮರ್ಥವಾದ ತಂತ್ರಗಳನ್ನು ತಾನೇ ಆವಿಷ್ಕರಿಸಿಕೊಂಡ. ಅವುಗಳಲ್ಲಿ ಕೆಲವನ್ನು ಗಮನಿಸೋಣ.

ಸೂಜಿಗಳು: ಕಂಚು ಮತ್ತು ಕಬ್ಬಿಣದಿಂದ ಸೂಜಿಗಳನ್ನು ನಿರ್ಮಿಸಿಕೊಂಡ. ಸೂಜಿಗಳು ವಿವಿಧ ಗಾತ್ರ ಹಾಗೂ ಆಕಾರಗಳಲ್ಲಿ ಇರುತ್ತಿದ್ದವು. ತಾನೇ ಕುಲುಮೆಯ ಬಳಿ ನಿಂತು ಅವುಗಳ ಗುಣಮಟ್ಟವು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಿದ್ದ. ಅದೇ ವಿನ್ಯಾಸದ ಸೂಜಿಗಳನ್ನು ಅಲ್ಪಸ್ವಲ್ಪ ಬದಲಾಯಿಸಿಕೊಂಡು ಇಂದಿಗೂ ನಾವು ಬಳಸುತ್ತಿದ್ದೇವೆ.

ಉಪಕರಣಗಳು: ಸೂಜಿಗಳ ಜತೆಯಲ್ಲಿ ಚಾಕು, ಚೂರಿ, ಇಕ್ಕಳ, ಕೊಕ್ಕೆ, ಕೀವನ್ನು ಹರಿಸಲು ಅಗತ್ಯವಾದ ರಂಧ್ರಯುಕ್ತ ಕೊಳವೆಗಳು, ಮೂಳೆಯನ್ನು ಛೇದಿಸಲು ಅಗತ್ಯವಾದ ಗರಗಸ, ಕೆಲವು ಸ್ನಾಯು/ರಜ್ಜು/ಇಲ್ಲವೇ ಮೂಳೆಯನ್ನು ತಾತ್ಕಾಲಿಕವಾಗಿ ಎತ್ತರಿಸಿ ಹಿಡಿದುಕೊಳ್ಳಲು ಅಗತ್ಯವಾದ ಮೂಳೆ ಎತ್ತುಗವನ್ನು (ಬೋನ್ ಎಲಿವೇಟರ್) ಸಿದ್ಧಪಡಿಸಿದ.

ದಾರಗಳು: ಮನುಷ್ಯನ ದೇಹದಲ್ಲಿ ಚರ್ಮದಿಂದ ಹಿಡಿದು ರಜ್ಜುಗಳವರೆಗೆ ನಾನಾ ಬಿರುಸಿನ ಊತಕಗಳಿವೆ. ಹಾಗಾಗಿ ಅವನ್ನು ಜೋಡಿಸಿ, ಬಿಗಿಯಾಗಿ ಹೊಲಿಯಲು ವಿವಿಧ ಬಿರುಸಿನ ದಾರಗಳನ್ನು ಉಪಯೋಗಿಸಬೇಕಾಯಿತು. ಹಾಗಾಗಿ ಲಿನೆನ್ ಎಂಬ ವಿಶೇಷ ನಾರಿನ ಎಳೆಯನ್ನು ಸಿದ್ಧಪಡಿಸಿದ. ಹಾಗೆಯೇ ಪ್ರಾಣಿಗಳ ಕರುಳಿನಲ್ಲಿರುವ ನಾರು ಊತಕವನ್ನು ಹೊಸೆದು ಹೊಸ ನಮೂನೆಯ ದಾರವನ್ನು ಸಿದ್ಧಪಡಿಸಿದ. ಈ ದಾರವು ‘ಕ್ಯಾಟ್‌ಗಟ್’ ಎಂಬ ಹೆಸರಿನಿಂದ ವೈದ್ಯಕೀಯ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ. ಅಪರೂಪದ ಸಂದರ್ಭಗಳಲ್ಲಿ ಕುದುರೆಯ ಬಾಲದ ಕೂದಲನ್ನೂ ಗಾಯಗಳನ್ನು ಹೊಲಿಯಲು ಬಳಸುತ್ತಿದ್ದ.

ಕ್ರಿಮಿ ಶುದ್ಧೀಕರಣ: ಗ್ಯಾಲನ್ನನಿಗೆ ಬ್ಯಾಕ್ಟೀರಿಯ ಮುಂತಾದ ಸೂಕ್ಷ್ಮಜೀವಿಗಳ ಅಸ್ತಿತ್ವದ ಬಗ್ಗೆ ತಿಳಿದಿರಲಿಲ್ಲ. ಆದರೆ ಅವುಗಳ ಪ್ರಭಾವದಿಂದ ಗಾಯಗಳು ಕೀವುಗಟ್ಟುವುದು, ಕೊಳೆಯು ವುದು ಹಾಗೂ ಅಂಗನಷ್ಟವಾಗುವುದು ತಿಳಿದಿತ್ತು. ಅದನ್ನು ತಡೆಗಟ್ಟಲು ಅವನು ಲಿನೆನ್ ದಾರವನ್ನು ನೀರಿನಲ್ಲಿ ಕುದಿಸಿ ಬಳಸುತ್ತಿದ್ದ. ಕ್ಯಾಟ್‌ಗಟ್ ಮತ್ತು ಕುದುರೆಯ ಬಾಲದ ಕೂದಲನ್ನು ವೈನ್ ಅಥವಾ ವಿನಿಗರಿನಲ್ಲಿ ಮುಳುಗಿಸಿ ಶುದ್ಧೀಕರಿಸಿ ಬಳಸುತ್ತಿದ್ದ. ಗಾಯಗಳು ಕೊಳೆಯದಿರಲು ಜೇನು ತುಪ್ಪದ ಪಟ್ಟಿಯನ್ನು ಕಟ್ಟುತ್ತಿದ್ದ.

ದಬ್ಬೆಗಳು: ಮುರಿದ ಮೂಳೆಗಳನ್ನು, ತಪ್ಪಿದ ಕೀಲುಗಳನ್ನು, ತುಂಡರಿಸಿದ ರಜ್ಜುಗಳನ್ನು ಸ್ವಸ್ಥಾನದಲ್ಲಿರಿಸಲು ದಬ್ಬೆಗಳನ್ನು (ಸ್ಪ್ಲಿಂಟ್ಸ್) ಬಳಸುತ್ತಿದ್ದ. ಸಾಮಾನ್ಯವಾಗಿ ಬಿದಿರಿನ ದಬ್ಬೆಗಳನ್ನು ಬಳಸುತ್ತಿದ್ದನಾದರೂ ಕೆಲವು ಸಲ ಮರದಿಂದ ಅಥವ ಕಂಚಿನಿಂದ ಮಾಡಿದ ಆಧಾರಕಗಳನ್ನು ರೂಪಿಸುತ್ತಿದ್ದ. ಈ ಆಧಾರಕಗಳ ಮೇಲೆ ಲಿನೆನ್ ಬಟ್ಟೆಯನ್ನು ಸುತ್ತಿ, ಅದನ್ನು ಚರ್ಮದ ಪಟ್ಟಿಗಳಿಂದ ಬಿಗಿದು ಸ್ವಸ್ಥಾನದಲ್ಲಿರುವಂತೆ ನೋಡಿಕೊಳ್ಳುತ್ತಿದ್ದ.

ಗ್ಯಾಲನ್, ಮೊದಲ ಬಾರಿಗೆ ಮನುಷ್ಯನ ಮುಖವನ್ನು ಹೊಲಿದು, ಅದರ ರೂಪ ಮತ್ತು ಕೆಲಸವನ್ನು ಕಾಪಾಡಿದ. ಅನೇಕ ಗ್ಲಾಡಿಯೇಟರುಗಳ ಜೀವವನ್ನು ಮಾತ್ರವಲ್ಲ, ಅವರ ಕುಟುಂಬಗಳನ್ನು ಕಾಪಾಡಿದ. ಗ್ಯಾಲನ್ ಆರಂಭಿಸಿದ ಅಭಿಯಾನವನ್ನು ಅವಿಸೆನ್ನ, ಗ್ಯಾಸ್ಪೇರ್ ತ್ಯಾಗ್ಲಿಯಾ ಕೋಜ಼ಿ, ಹೆರಾಲ್ಡ್ ಗಿಲ್ಲಿಸ್ ಮುಂತಾದವರು ಮುಂದುವರಿಸಿ, ಇಂದು ನಾವು ಕರೆಯುವ ಗಾಯ ಶಸ್ತ್ರ ವೈದ್ಯಕೀಯ (ಟ್ರಾಮ ಸರ್ಜರಿ), ಪುನಾರಚನೆಯ ಶಸ್ತ್ರ ವೈದ್ಯಕೀಯ (ರಿ-ಕನ್‌ಸ್ಟ್ರಕ್ಟಿವ್ ಸರ್ಜರಿ) ಹಾಗೂ ಸುರೂಪಿಕ ವೈದ್ಯಕೀಯ (ಪ್ಲಾಸ್ಟಿಕ್ ಸರ್ಜರಿ) ಮುಂತಾದ ಶಸ್ತ್ರವೈದ್ಯಕೀಯ ವಿಜ್ಞಾನಗಳಿಗೆ ಜನ್ಮವಿತ್ತರು.

2005ರಲ್ಲಿ ವಿಶ್ವದ ಮೊದಲ ಅರೆಮುಖ ಬದಲಿ ಜೋಡಣೆಯನ್ನು (ಪಾರ್ಷಿಯಲ್ ಫೇಸ್ ಟ್ರಾನ್ಸ್ ಪ್ಲಾಂಟ್) ಹಾಗೂ 2010ರಲ್ಲಿ ಇಡೀ ಮುಖದ ಬದಲಿ ಜೋಡಣೆಯನ್ನು (ಫುಲ್ ಫೇಸ್ ಟ್ರಾನ್ಸ್‌ಪ್ಲಾಂಟ್) ಯಶಸ್ವಿಯಾಗಿ ನಡೆಸಿದ್ದೇವೆ. ಇಂದಿನ ದಿನಗಳಲ್ಲಿ ‘ಎಐ ಅಸಿಸ್ಟೆಡ್ ರೋಬೋಟಿಕ್ ಸರ್ಜರಿ’ ಲಭ್ಯವಿದೆ. ಹಾಗಾಗಿ ಎಂಥ ಕ್ಲಿಷ್ಟಕರ ಶಸ್ತ್ರವೈದ್ಯವನ್ನಾದರೂ ಇಂದು ಸಮರ್ಪಕವಾಗಿ ನಡೆಸಲು ಸಾಧ್ಯವಾಗಿದೆ.

ಡಾ.ನಾ. ಸೋಮೇಶ್ವರ

View all posts by this author