ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಚಳಿಗಾಲ ಆರಂಭವಾಗುತ್ತಿದ್ದಂತೆ ನಮ್ಮ ಆಹಾರ ಪದ್ಧತಿ, ದಿನಚರಿ ಮತ್ತು ದೈಹಿಕ ಚಟುವಟಿಕೆ ಗಳಲ್ಲಿ ಸಹಜವಾಗಿಯೇ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹಸಿವು ಹೆಚ್ಚಾಗುತ್ತದೆ, ಬಿಸಿಯಾದ ಆಹಾರದ ಮೇಲೆ ಒಲವು ಮೂಡುತ್ತದೆ, ತಣ್ಣನೆಯ ವಾತಾವರಣದಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ಬಯಕೆ ಉಂಟಾಗುತ್ತದೆ. ಇವೆಲ್ಲವೂ ಕೇವಲ ಋತುಮಾನಕ್ಕೆ ಸಂಬಂಧಿಸಿದ ಸಹಜ ಬದಲಾವಣೆಗಳಲ್ಲ; ನಮ್ಮ ದೇಹವು ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತಿರುವುದರ ಸೂಚನೆಗಳೂ ಹೌದು.
ಪ್ರಕೃತಿಯ ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ ತಕ್ಕಂತೆ ಆಹಾರ ಮತ್ತು ಜೀವನ ಕ್ರಮವನ್ನು ರೂಪಿಸಿಕೊಳ್ಳುವುದಕ್ಕೆ ಆಯು ರ್ವೇದದಲ್ಲಿ ಋತುಚರ್ಯೆ ಎಂದು ಕರೆಯಲಾಗುತ್ತದೆ. ವರ್ಷವಿಡೀ ಒಂದೇ ರೀತಿಯ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸುವ ಬದಲು, ಆಯಾ ಋತುವಿನ ಗುಣಧರ್ಮಕ್ಕೆ ಅನುಗುಣವಾಗಿ ನಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳುವುದೇ ಇದರ ಉದ್ದೇಶ.
ಆಯುರ್ವೇದವು ವರ್ಷವನ್ನು ಶಿಶಿರ, ವಸಂತ, ಗ್ರೀಷ್ಮ, ವರ್ಷಾ, ಶರದ್ ಮತ್ತು ಹೇಮಂತ ಎಂಬ ಆರು ಋತುಗಳಾಗಿ ವಿಂಗಡಿಸಿದೆ. ಇವುಗಳನ್ನು ಸೂರ್ಯನ ಚಲನೆ ಮತ್ತು ಪ್ರಕೃತಿಯ ಮೇಲಿನ ಅದರ ಪ್ರಭಾವದ ಆಧಾರದ ಮೇಲೆ ಉತ್ತರಾಯಣ ಮತ್ತು ದಕ್ಷಿಣಾಯಣ ಎಂಬ ಎರಡು ಕಾಲಗಳಾಗಿ ವಿಂಗಡಿಸಲಾಗಿದೆ.
ಉತ್ತರಾಯಣವನ್ನು ಆದಾನ ಕಾಲವೆಂದು ಕರೆಯಲಾಗುತ್ತದೆ. ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳು ಇದರಲ್ಲಿ ಸೇರುತ್ತವೆ. ಈ ಅವಧಿಯಲ್ಲಿ ಸೂರ್ಯನ ಪ್ರಖರತೆ ಮತ್ತು ವಾತಾವರಣದ ಒಣತನದಿಂದ ದೇಹದ ತೇವಾಂಶ ಹಾಗೂ ಬಲ ಕ್ರಮೇಣ ಕಡಿಮೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣಾಯಣವನ್ನು ವಿಸರ್ಗ ಕಾಲವೆಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ: Dr Sadhanashree Column: ಬದುಕನ್ನು ಬೆಳಗಿಸುವ ಷೋಡಶ ಸಂಸ್ಕಾರಗಳು !
ವರ್ಷಾ, ಶರದ್ ಮತ್ತು ಹೇಮಂತ ಋತುಗಳು ಇದರ ವ್ಯಾಪ್ತಿಗೆ ಬರುತ್ತವೆ. ಈ ಕಾಲದಲ್ಲಿ ಸೂರ್ಯನ ತೀಕ್ಷ್ಣತೆ ಕಡಿಮೆಯಾಗಿ ಚಂದ್ರನ ಶೀತಲ, ಸೌಮ್ಯ ಗುಣಗಳ ಪ್ರಭಾವ ಹೆಚ್ಚುತ್ತದೆ. ಇದರಿಂದ ಪ್ರಕೃತಿ ಯಲ್ಲಿಯೂ ದೇಹದಲ್ಲಿಯೂ ಪೋಷಣೆ ಮತ್ತು ಬಲ ವೃದ್ಧಿಯಾಗುತ್ತದೆ. ಈ ವಿಸರ್ಗ ಕಾಲದ ಕೊನೆಯ ಋತುವಾದ ಹೇಮಂತವು (ಅಕ್ಟೋಬರ್ 15ರಿಂದ ಡಿಸೆಂಬರ್ 14ರವರೆಗೆ) ಆರೋಗ್ಯದ ದೃಷ್ಟಿಯಿಂದ ಅತ್ಯಂತ ವಿಶಿಷ್ಟವಾದದ್ದು.
ಆಯುರ್ವೇದದ ಪ್ರಕಾರ, ಇಡೀ ವರ್ಷದ ಆರು ಋತುಗಳ ಪೈಕಿ ದೇಹಬಲ ಅತ್ಯಧಿಕವಾಗಿರುವ ಕಾಲವಿದು. ಹೊರಗಿನ ವಾತಾವರಣ ತಂಪಾ ಗುತ್ತಿದ್ದಂತೆ ದೇಹದ ಆಂತರಿಕ ಜಠರಾಗ್ನಿ ಬಲಗೊಳ್ಳು ತ್ತದೆ. ಪರಿಣಾಮ ವಾಗಿ ಹಸಿವು ಹೆಚ್ಚುತ್ತದೆ ಮತ್ತು ಜೀರ್ಣಶಕ್ತಿಯೂ ಉತ್ತಮವಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ಸಾಕಷ್ಟು ಪೋಷಕ ಆಹಾರ ದೊರೆತರೆ ರಸಧಾತುವಿನ ನಿರ್ಮಾಣ ಸಮರ್ಪಕವಾಗಿ ನಡೆದು, ದೇಹದ ಒಟ್ಟಾರೆ ಪೋಷಣೆ ಮತ್ತು ಆರೋಗ್ಯ ಸುಧಾರಿಸುತ್ತದೆ. ಮಂಜಿ ನಿಂದ ಆವೃತವಾದ ಬೆಳಗು, ಮಂಜಿನ ಮುಸುಕಿನಲ್ಲಿ ಮರೆಯಾಗುವ ಸೂರ್ಯ, ಚರ್ಮ ದಲ್ಲಿ ಹೆಚ್ಚಾಗುವ ಒಣತನ, ತುಟಿಗಳ ಬಿರುಕು, ತೀವ್ರ ಹಸಿವು ಹಾಗೂ ಉತ್ತಮ ಜೀರ್ಣಶಕ್ತಿ ಇವೆಲ್ಲವೂ ಹೇಮಂತದ ಆಗಮನವನ್ನು ಗುರುತಿಸುವ ಲಕ್ಷಣಗಳು.
ಬಲಿಷ್ಠ ಜಠರಾಗ್ನಿಗೆ ಬೇಕು ಸಮರ್ಪಕ ಆಹಾರ: ಹೇಮಂತದಲ್ಲಿ ಹಸಿವು ಹೆಚ್ಚಾಗುವುದು ಸಹಜ. ಆದರೆ ಈ ಸಮಯದಲ್ಲಿ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಉಪವಾಸದ ಮೊರೆ ಹೋಗುವುದು ದೇಹಕ್ಕೆ ಹಿತಕರವಲ್ಲ. ಬಲಿಷ್ಠವಾಗಿರುವ ಜಠರಾಗ್ನಿಗೆ ಸಮರ್ಪಕವಾದ ಆಹಾರ ದೊರೆಯದಿದ್ದರೆ ಅದು ದೇಹದ ಧಾತುಗಳನ್ನೇ ಪಚನಗೊಳಿಸಲು ಪ್ರಾರಂಭಿಸುತ್ತದೆ. ಇದರಿಂದ ದೇಹವನ್ನು ಪೋಷಿಸುವ ರಸಧಾತು ದುರ್ಬಲವಾಗಿ, ವಾತದೋಷದ ವೃದ್ಧಿಗೆ ಕಾರಣ ವಾಗಬಹುದು. ಹೀಗಾಗಿ ದೇಹದ ಪೋಷಣೆ ಕುಂಠಿತವಾಗಿ ವಿವಿಧ ರೀತಿಯ ಕೊರತೆಗಳು ಉಂಟಾ ಗುವ ಸಾಧ್ಯತೆಯಿದೆ. ಹೇಮಂತದಲ್ಲಿ ಪೌಷ್ಟಿಕ, ಸ್ನಿಗ್ಧ ಮತ್ತು ಸ್ವಲ್ಪ ಗುರು ಗುಣದ ಆಹಾರಕ್ಕೆ ಆದ್ಯತೆ ನೀಡಬೇಕೆಂಬ ಆಯುರ್ವೇದದ ಸೂಚನೆಯ ಹಿಂದಿರುವ ಕಾರಣವಿದು.
ಧನುರ್ಮಾಸದಲ್ಲಿ ದೇವಸ್ಥಾನಗಳಲ್ಲಿ ಮುಂಜಾನೆಯೇ ತುಪ್ಪದಿಂದ ತಯಾರಿಸಿದ ಬಿಸಿಬಿಸಿಯಾದ ಪೌಷ್ಟಿಕ ಪ್ರಸಾದವನ್ನು ವಿತರಿಸುವ ಸಂಪ್ರದಾಯವೂ ಈ ಋತುವಿನ ಆಹಾರ ಅವಶ್ಯಕತೆಯನ್ನು ನೆನಪಿಸುತ್ತದೆ. ನಮ್ಮ ಹಬ್ಬಗಳು ಮತ್ತು ಆಚರಣೆಗಳಲ್ಲಿಯೂ ಋತುಚರ್ಯೆಯ ವೈಜ್ಞಾನಿಕ ಹಿನ್ನೆಲೆ ಅಡಕವಾಗಿದೆ.
ದೇಹವನ್ನು ಬೆಚ್ಚಗಿಡುವುದಷ್ಟೇ ಅಲ್ಲ, ಪೋಷಿಸುವುದೂ ಮುಖ್ಯ: ಹೇಮಂತದಲ್ಲಿ ಚರ್ಮದ ಒಣತನ ಮತ್ತು ವಾತದ ಪ್ರಭಾವವನ್ನು ತಡೆಯಲು ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಪ್ರತಿದಿನ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹಕ್ಕೆ ಸ್ನಿಗ್ಧತೆ ಮತ್ತು ಪೋಷಣೆ ದೊರೆಯುತ್ತದೆ. ದೀಪಾವಳಿಯ ಎಣ್ಣೆ ಸ್ನಾನದ ಆಚರಣೆಯೂ ಶೀತಕಾಲದ ಆರಂಭದಲ್ಲಿ ದೇಹವನ್ನು ಸಿದ್ಧಗೊಳಿ ಸುವ ಒಂದು ಸಂಪ್ರದಾಯವಾಗಿದೆ. ಈ ಋತುವಿನಲ್ಲಿ ಎಳ್ಳೆಣ್ಣೆಯನ್ನು ಅಭ್ಯಂಗಕ್ಕೆ ಬಳಸುವುದು ಉತ್ತಮ. ತಲೆ, ಕಿವಿ, ಪಾದ ಮತ್ತು ಮೂಗಿ ಗೆ ನಿತ್ಯ ತೈಲ ಹಾಕುವುದರಿಂದ ವಾತದೋಷದ ಹೆಚ್ಚಳವನ್ನು ತಡೆಗಟ್ಟಬಹುದು. ಅಭ್ಯಂಗದ ನಂತರ ಬಿಸಿನೀರಿನ ಸ್ನಾನ ಮಾಡುವುದು ಬಲ ವರ್ಧಕ. ದೇಹಬಲ ಹೆಚ್ಚಿರುವ ಈ ಕಾಲವನ್ನು ವ್ಯಾಯಾಮಕ್ಕೂ ಸಮರ್ಪಕವಾಗಿ ಬಳಸಿಕೊಳ್ಳ ಬೇಕು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ದೇಹದ ಅರ್ಧಶಕ್ತಿಯ ಮಿತಿಯವರೆಗೆ ವ್ಯಾಯಾಮ ಮಾಡುವುದು ಸೂಕ್ತ. ಇದರಿಂದ ಕಫ ಸಂಗ್ರಹ ಕಡಿಮೆಯಾಗಿ ದೇಹದ ಸಾಮರ್ಥ್ಯ ಹೆಚ್ಚುತ್ತದೆ.
ದೇಹದ ತೂಕ ಇಳಿಸಿಕೊಳ್ಳಲು, ದೇಹಶಕ್ತಿ ವೃದ್ಧಿಸಿಕೊಳ್ಳಲು ಹಾಗೂ ಸ್ನಾಯುಗಳನ್ನು ಬಲಪಡಿಸಿ ಕೊಳ್ಳಲು ಇದು ಅನುಕೂಲಕರ ಕಾಲ. ಆದರೆ ವ್ಯಾಯಾಮದಷ್ಟೇ ಆಹಾರಕ್ಕೂ ಮಹತ್ವ ನೀಡಬೇಕು. ವ್ಯಾಯಾಮ ಮಾಡುವವರು ಸಾಕಷ್ಟು ಜಿಡ್ಡಿನಂಶ ಮತ್ತು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು. ಒಣ ಹಾಗೂ ಸ್ನಿಗ್ಧತೆಯಿಲ್ಲದ ಆಹಾರದಿಂದ ದೇಹದ ಆರೋಗ್ಯಕ್ಕೆ ಧಕ್ಕೆಯಾಗಬಹುದು. ಮಂಜಿನ ನಡುವೆ ಮೂಡುವ ಮುಂಜಾನೆಯ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು ದೇಹದ ಉಷ್ಣತೆ ಮತ್ತು ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ.
ವ್ಯಾಯಾಮದ ನಂತರ ಬಿಸಿನೀರಿನಿಂದ ಸ್ನಾನ ಮಾಡಬೇಕು. ತಲೆಗೆ ಮಾತ್ರ ಬಿಸಿನೀರನ್ನು ಬಳಸಬಾರದು. ಸ್ನಾನದ ನಂತರ ಬೆಚ್ಚಗಿನ ಉಡುಪುಗಳನ್ನು ಧರಿಸಿ, ವಿಶೇಷವಾಗಿ ತಲೆ ಮತ್ತು ಎದೆಯ ಭಾಗವನ್ನು ಚಳಿಯಿಂದ ರಕ್ಷಿಸಿಕೊಳ್ಳಬೇಕು. ತೀವ್ರ ಚಳಿಯಿರುವಾಗ ಬಾಷ್ಪಸ್ವೇದವನ್ನೂ ಮಾಡಬಹುದು. ನಿದ್ರೆಯ ವಿಚಾರದಲ್ಲಿಯೂ ಕೆಲವು ನಿಯಮಗಳನ್ನು ಪಾಲಿಸಬೇಕು. ದಪ್ಪನೆಯ ಹಾಸಿಗೆ, ಕಂಬಳಿ ಮತ್ತು ಬೆಚ್ಚಗಿನ ವಾತಾವರಣದಲ್ಲಿ ನಿದ್ರಿಸುವುದು ಸುಖಕರ. ಅಗತ್ಯವಿದ್ದಲ್ಲಿ ಮನೆಯಲ್ಲಿ ಬೆಂಕಿ ಅಥವಾ ಹೀಟರ್ ಬಳಸಿ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.
ರಾತ್ರಿ ಮಲಗುವ ಮುನ್ನ ಪಾದಾಭ್ಯಂಗ ಮಾಡಿ, ಬೆಚ್ಚಗಿನ ಕಾಲುಚೀಲಗಳನ್ನು ಧರಿಸುವುದು ಉತ್ತಮ. ಗ್ರೀಷ್ಮ ಋತುವನ್ನು ಹೊರತುಪಡಿಸಿ ಇತರ ಋತುಗಳಲ್ಲಿ ಹಗಲು ನಿದ್ರೆಯನ್ನು ಆಯುರ್ವೇದವು ವರ್ಜ್ಯವೆಂದು ತಿಳಿಸುತ್ತದೆ. ರಾತ್ರಿ ಸಕಾಲದಲ್ಲಿ ಮಲಗಿ, ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಆರೋಗ್ಯಕರ. ದಂಪತಿಗಳು ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ, ಈ ಋತು ವಿನಲ್ಲ ನಿತ್ಯವೂ ಸಂಭೋಗದಲ್ಲಿ ತೊಡಗಬಹುದು.
ಹೇಮಂತದ ಆಹಾರದಲ್ಲಿ ಇರಲಿ ಪೋಷಕಾಂಶಗಳ ಸಮೃದ್ಧಿ: ದೀರ್ಘವಾದ ರಾತ್ರಿಗಳಿಂದಾಗಿ ಬೆಳಿಗ್ಗೆ ಎದ್ದಾಗಲೇ ತೀವ್ರ ಹಸಿವು ಕಾಣಿಸಿಕೊಳ್ಳಬಹುದು. ಆದ್ದರಿಂದ ನಿತ್ಯಕರ್ಮಗಳನ್ನು ಮುಗಿಸಿದ ತಕ್ಷಣ ಉಪಾಹಾರ ಸೇವಿಸುವುದು ಉತ್ತಮ. ಬಿಸಿಯಾದ ಹಾಲಿನೊಂದಿಗೆ ಬಾದಾಮಿ ಮತ್ತು ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಬಹುದು. ಉದ್ದಿನಬೇಳೆ ಮತ್ತು ಕಬ್ಬಿನಿಂದ ತಯಾರಿಸಿದ ಆಹಾರ ಪದಾರ್ಥಗಳಿಗೆ ಈ ಕಾಲದಲ್ಲಿ ಆದ್ಯತೆ ನೀಡಬೇಕು. ಇಡ್ಲಿ, ದೋಸೆ, ವಡೆ, ಮೋದಕ, ಹೋಳಿಗೆ, ಹಲ್ವಾ ಮತ್ತು ಸಿಹಿ ಪೊಂಗಲ್ನಂತಹ ಖಾದ್ಯಗಳು ಹೇಮಂತಕ್ಕೆ ಸೂಕ್ತ.
ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಹಲವು ದಿನಗಳ ಕಾಲ ಫ್ರಿಡ್ಜ್ನಲ್ಲಿ ಶೇಖರಿಸಿ ಬಳಸುವು ದನ್ನು ತಪ್ಪಿಸಬೇಕು. ಹಬೆಯಲ್ಲಿ ಬೇಯಿಸಿದ ಖಾದ್ಯಗಳೂ ಈ ಋತುವಿನಲ್ಲಿ ಉತ್ತಮ. ಆಹಾರದ ರಸಗಳ ವಿಚಾರದಲ್ಲಿ ಮಧುರ, ಅಮ್ಲ ಮತ್ತು ಲವಣ ರಸ ಪ್ರಧಾನವಾದ ಆಹಾರವನ್ನು ಆಯು ರ್ವೇದವು ಸೂಚಿಸುತ್ತದೆ. ಹೇಮಂತ ಮತ್ತು ಶಿಶಿರ ಋತು ಗಳಲ್ಲಿ ವಾತಾವರಣದ ಒಣತನದಿಂದ ದೇಹದಲ್ಲಿಯೂ ಶುಷ್ಕತೆ ಹೆಚ್ಚಾಗುವುದರಿಂದ ಎಣ್ಣೆ, ತುಪ್ಪ, ಬೆಣ್ಣೆ ಮತ್ತು ಹಾಲಿನಂತಹ ಸ್ನಿಗ್ಧ ಪದಾರ್ಥಗಳನ್ನು ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಸೇರಿಸಬೇಕು.
ಹಾಲು ಮತ್ತು ತುಪ್ಪದಿಂದ ತಯಾರಿಸಿದ ವಿವಿಧ ಬಗೆಯ ಪಾಯಸಗಳು ಈ ಕಾಲಕ್ಕೆ ಉತ್ತಮ. ಕೆನೆ, ಖೋವಾ, ಮೊಸರು, ಬೆಣ್ಣೆ ಮತ್ತು ಮಜ್ಜಿಗೆಯಂತಹ ಹಾಲಿನ ಉತ್ಪನ್ನಗಳನ್ನೂ ಸೇವಿಸಬ ಹುದು. ಆದರೆ ಮೊಸರನ್ನು ರಾತ್ರಿ ಸೇವಿಸಬಾರದು. ಮಾಂಸಾಹಾರ ಸೇವಿಸುವವರಿಗೆ ಮಾಂಸ ಮತ್ತು ಮಾಂಸರಸವನ್ನು ತುಪ್ಪದೊಂದಿಗೆ ಸೇವಿಸುವುದು ಸೂಕ್ತ. ಮೀನು, ಕೋಳಿ, ಆಡಿನ ಮಾಂಸ ಹಾಗೂ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಖಾದ್ಯಗಳೂ ಈ ಋತುವಿನಲ್ಲಿ ಸೇವಿಸಬಹುದಾದ ಆಹಾರಗಳಾಗಿವೆ. ಹೊಸ ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಉದ್ದಿನಬೇಳೆ ಹೇಮಂತದ ಪೋಷಕ ಆಹಾರಗಳಾಗಿವೆ.
ಗೋಧಿ ಮತ್ತು ಅಕ್ಕಿಹಿಟ್ಟಿನಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಬಳಸಬಹುದು. ಕಾಳು ಮತ್ತು ಬೇಳೆಗಳನ್ನು ಈ ಕಾಲದಲ್ಲಿ ಹೇರಳವಾಗಿ ಬಳಸಬಹುದಾದರೂ ಅವುಗಳನ್ನು ಚೆನ್ನಾಗಿ ನೆನೆಸಿ, ಎಣ್ಣೆ ಅಥವಾ ತುಪ್ಪದೊಂದಿಗೆ ಬೇಯಿಸಿ, ಒಗ್ಗರಣೆ ನೀಡಿ ಸೇವಿಸಬೇಕು. ಹಸಿಯಾಗಿ ಸೇವಿಸುವು ದನ್ನು ತಪ್ಪಿಸಬೇಕು. ಆಯುರ್ವೇದವು ಈ ಋತುವಿನಲ್ಲಿ ಮದ್ಯ ಮತ್ತು ದ್ರಾಕ್ಷಾರಸದಿಂದ ತಯಾರಿಸಿದ ಪಾನೀಯಗಳನ್ನು ಸೂಕ್ತ ವಿಧಾನದಲ್ಲಿ, ಪ್ರಮಾಣವನ್ನು ಅರಿತು ಸೇವಿಸಲು ಸೂಚಿಸುತ್ತದೆ.
ನೀರಿನ ವಿಚಾರದಲ್ಲಿಯೂ ಕುದಿಸಿ ಸಂಸ್ಕರಿಸಿದ ಬಿಸಿನೀರಿಗೆ ಆದ್ಯತೆ ನೀಡಬೇಕು. ಬಾಯಾರಿಕೆ ಯಾದಾಗ ಅಥವಾ ಊಟದೊಂದಿಗೆ ಬಿಸಿನೀರನ್ನು ಸೇವಿಸುವುದು ಉತ್ತಮ. ಕೆಲವು ಆಹಾರ ಮತ್ತು ಅಭ್ಯಾಸಗಳಿಂದ ದೂರವಿರಿ: ಹೇಮಂತದಲ್ಲಿ ವಾತವನ್ನು ಹೆಚ್ಚಿಸುವ ಸಲಾಡ್, ಹಸಿ ತರಕಾರಿಗಳು, ಮೊಳಕೆಕಾಳುಗಳು, ಅತಿಯಾದ ಬೇಳೆಕಾಳುಗಳು, ಉಪವಾಸ, ಅತಿಯಾಗಿ ಲಘುವಾದ ಆಹಾರ, ಸಿರಿಧಾನ್ಯಗಳು ಹಾಗೂ ಎಣ್ಣೆ- ತುಪ್ಪವಿಲ್ಲದ ಒಣ ಆಹಾರಗಳನ್ನು ವರ್ಜಿಸಬೇಕು.
ತಣ್ಣೀರಿನ ಸ್ನಾನ ಮತ್ತು ಶೀತಗಾಳಿಯ ನೇರ ಸಂಪರ್ಕವನ್ನೂ ತಪ್ಪಿಸಬೇಕು. ಚಳಿಗಾಳಿಗೆ ನಿರಂತರ ವಾಗಿ ಒಡ್ಡಿಕೊಳ್ಳುವುದು, ತಣ್ಣನೆಯ ಆಹಾರವನ್ನು ಹೆಚ್ಚಾಗಿ ಸೇವಿಸುವುದು ಹಾಗೂ ಸ್ನಿಗ್ಧ ಆಹಾರವನ್ನು ಸೇವಿಸಿ ದೈಹಿಕ ಚಟುವಟಿಕೆಯಿಲ್ಲದೆ ಇರುವುದು ದೇಹದಲ್ಲಿ ವಾತ ಮತ್ತು ಕಫಗಳ ಸಂಗ್ರಹಕ್ಕೆ ಕಾರಣವಾಗಬಹುದು.
ಇದರ ಪರಿಣಾಮ ಮುಂದಿನ ವಸಂತ ಋತುವಿನಲ್ಲಿ ಅಸ್ತಮಾ, ಅಲರ್ಜಿ, ಶ್ವಾಸಕೋಶ ಸಂಬಂಧಿ ತೊಂದರೆಗಳು ಮತ್ತು ಜ್ವರಗಳು ಉಲ್ಬಣಗೊಳ್ಳಬಹುದು. ಹೇಮಂತ ಋತುವಿನ ಆಹಾರ ಪದ್ಧತಿಯನ್ನು ಆಚಾರ್ಯರು ಒಂದು ಸುಂದರವಾದ ಸೂತ್ರದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಗೋಕ್ಷೀರ (ಹಸುವಿನ ಹಾಲು), ಇಕ್ಷುರಸ (ಕಬ್ಬಿನ ರಸ), ವಸಾ (ಪ್ರಾಣಿಗಳ ಕೊಬ್ಬು), ತೈಲ (ಎಣ್ಣೆ), ನವಾನ್ನ (ಹೊಸ ಅಕ್ಕಿ) ಮತ್ತು ಬಿಸಿನೀರನ್ನು ಈ ಋತುವಿನಲ್ಲಿ ಸೇವಿಸುವವನು ತನ್ನ ಆಯುಷ್ಯ ವನ್ನು ಸಂರಕ್ಷಿಸಿಕೊಳ್ಳುತ್ತಾನೆ ಎಂಬುದು ಆಚಾರ್ಯರ ಅಭಿಮತ. ಪ್ರಕೃತಿಯು ಹೇಮಂತದಲ್ಲಿ ನಮಗೆ ನೀಡುವ ಬಹುದೊಡ್ಡ ಕೊಡುಗೆ ಎಂದರೆ ದೇಹಬಲ ಮತ್ತು ಜೀರ್ಣಶಕ್ತಿಯ ಹೆಚ್ಚಳ. ಈ ಸಹಜ ಅನುಕೂಲವನ್ನು ಸಮರ್ಪಕ ಆಹಾರ, ಅಭ್ಯಂಗ, ವ್ಯಾಯಾಮ, ಬೆಚ್ಚಗಿನ ವಾತಾವರಣ ಮತ್ತು ನಿಯಮಿತ ಜೀವನಶೈಲಿಯ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು.
ಚಳಿಯನ್ನು ಕೇವಲ ಸಹಿಸಿಕೊಳ್ಳುವುದಕ್ಕಿಂತ, ಈ ಋತುವಿನ ಗುಣ ಧರ್ಮಕ್ಕೆ ಅನುಗುಣವಾಗಿ ದೇಹವನ್ನು ಪೋಷಿಸಿಕೊಳ್ಳುವುದೇ ನಿಜವಾದ ಋತುಚರ್ಯೆ. ಹೀಗೆ ಹೇಮಂತವನ್ನು ಆರೋಗ್ಯ ವರ್ಧನೆಯ ಕಾಲವನ್ನಾಗಿ ರೂಪಿಸಿಕೊಳ್ಳಬಹುದು.