ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಹಾರಕ್ಕೆ ಸಮನಾದ ಔಷಧ ಬೇರೆ ಯಾವುದೂ ಇಲ್ಲ ಎಂಬುದು ಆಯುರ್ವೇದದ ಅತ್ಯಂತ ಮಹತ್ವದ ಸಂದೇಶಗಳಲ್ಲಿ ಒಂದು. ಸರಿಯಾದ ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸುವು ದರಿಂದಲೇ ದೇಹವನ್ನು ಆರೋಗ್ಯವಂತವಾಗಿರಿಸಿಕೊಳ್ಳಬಹುದು. ಆಹಾರವೇ ಔಷಧವಾಗ ಬಹುದು; ಅದೇ ಆಹಾರವನ್ನು ತಪ್ಪಾದ ರೀತಿಯಲ್ಲಿ ಸೇವಿಸಿದರೆ ರೋಗಕ್ಕೂ ಕಾರಣವಾಗಬಹುದು.
ಹಾಗಾದರೆ, ಆಹಾರವೇ ಆರೋಗ್ಯದ ಮೂಲವಾದರೆ, ಇಂದು ಏಕೆ ಇಷ್ಟೊಂದು ಆಸ್ಪತ್ರೆಗಳು, ಔಷಧಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳನ್ನು ಅವಲಂಬಿಸಬೇಕಾಗಿದೆ? ಕಾರಣ ಒಂದೇ- ಆಹಾರವನ್ನು ಹೇಗೆ ಸೇವಿಸಬೇಕು ಎಂಬ ವಿಜ್ಞಾನವನ್ನು ನಾವು ನಿಧಾನವಾಗಿ ಮರೆತಿದ್ದೇವೆ.
ಆಯುರ್ವೇದದ ಆಹಾರ ವಿಜ್ಞಾನವು ಒಂದು ಮಹಾಸಾಗರದಂತೆ ವಿಶಾಲ. ಅದರ ಪ್ರತಿಯೊಂದು ಅಂಶವನ್ನೂ ಒಂದೇ ಲೇಖನದಲ್ಲಿ ವಿವರಿಸುವುದು ಅಸಾಧ್ಯ. ಆದರೆ ಇಂದು ಅದರ ಒಂದು ಅತ್ಯಂತ ಮಹತ್ವದ ಭಾಗವಾದ ‘ವಿರುದ್ಧ ಆಹಾರ’ದ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ಅರ್ಥ ಮಾಡಿಕೊಳ್ಳುವ ಮುನ್ನ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಟ್ಟುಕೊಳ್ಳೋಣ.
ಮಧುಮೇಹ ಇಂದು ಜಗತ್ತಿನಾದ್ಯಂತ ಅತ್ಯಂತ ಸಾಮಾನ್ಯವಾಗಿರುವ ವ್ಯಾಧಿಗಳಂದು. ಆದರೆ ಇದರ ನಿಖರವಾದ ಕಾರಣಗಳ ಕುರಿತು ಆಧುನಿಕ ವೈದ್ಯಕೀಯ ವಿಜ್ಞಾನ ಇನ್ನೂ ಅನೇಕ ಆಯಾಮ ಗಳಲ್ಲಿ ಸಂಶೋಧನೆ ನಡೆಸುತ್ತಿದೆ. Rheumatoid Arthritis ಎಂಬ ಸಂಧಿವ್ಯಾಧಿ ಏಕೆ ಆರಂಭ ವಾಗುತ್ತದೆ ಎಂಬುದಕ್ಕೂ ಒಂದೇ ಒಂದು ನಿಖರ ಕಾರಣವನ್ನು ಗುರುತಿಸುವುದು ಸುಲಭವಲ್ಲ. Psoriasis ಎಂಬ ದೀರ್ಘಕಾಲೀನ ಚರ್ಮವ್ಯಾಧಿ, Alopecia ಎಂಬ ಕೂದಲು ಉದುರುವಿಕೆ ಯ ಸಮಸೈ- ಇದರ ಹಿಂದಿರುವ ಕಾರಣಗಳೂ ಸಂಕೀರ್ಣವಾಗಿವೆ.
ಇದನ್ನೂ ಓದಿ: Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?
ಇಲ್ಲಿ ಆಯುರ್ವೇದದ ಒಂದು ವಿಶಿಷ್ಟ ಸಿದ್ಧಾಂತ ನಮ್ಮ ಗಮನ ಸೆಳೆಯುತ್ತದೆ- ‘ಆಮ’ ಮತ್ತು ‘ಆಮವಿಷ’. ‘ಆಮ’ ಎಂದರೆ ಸಂಪೂರ್ಣವಾಗಿ ಪಕ್ವವಾಗದ, ಸರಿಯಾಗಿ ಜೀರ್ಣವಾಗಿರದ. ಆಹಾರ ವು ಜಠರಾಗ್ನಿಯಿಂದ ಸಮರ್ಪಕವಾಗಿ ಪಚನವಾಗದೆ ಉಳಿದಾಗ ಉಂಟಾಗುವ ಈ ಅಪಕ್ವ ಸ್ಥಿತಿ ಯನ್ನು ಆಯುರ್ವೇದ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಅದು ದೇಹದಲ್ಲಿ ಅಸಹಜ ವಾಗಿ ಉಳಿದು, ದೋಷಗಳೊಂದಿಗೆ ಸೇರಿ ರೋಗೋತ್ಪತ್ತಿಗೆ ಕಾರಣವಾಗುವ ಸ್ಥಿತಿಯನ್ನು ‘ಆಮವಿಷ’ದ ಮೂಲಕ ವಿವರಿಸುತ್ತದೆ.
ನಮ್ಮ ಅಡುಗೆಮನೆಯ ಕಸದ ಬುಟ್ಟಿಯನ್ನು ನೆನಪಿಸಿಕೊಳ್ಳಿ. ತ್ಯಾಜ್ಯವನ್ನು ಹೊರಗೆ ಹಾಕದೆ ಅದೇ ಸ್ಥಳದಲ್ಲಿ ದಿನಗಟ್ಟಲೆ ಬಿಟ್ಟರೆ ಅದು ಕೊಳೆಯುತ್ತದೆ, ದುರ್ವಾಸನೆ ಬೀರುತ್ತದೆ. ಅದೇ ರೀತಿಯಲ್ಲಿ, ದೇಹಕ್ಕೆ ಬೇಕಾದ ರೀತಿಯಲ್ಲಿ ಪಚನವಾಗದ ಆಹಾರವನ್ನು ದೇಹ ನಿರ್ವಹಿಸಲು ಸಾಧ್ಯವಾಗದೆ ಹೋದರೆ, ಅದು ದೇಹದಲ್ಲಿ ಅನಾರೋಗ್ಯಕರ ಪರಿಣಾಮಗಳಿಗೆ ಕಾರಣವಾಗಬಹುದು.
ಈ ಪರಿಣಾಮ ಯಾವ ರೂಪದಲ್ಲಿ ವ್ಯಕ್ತವಾಗುತ್ತದೆ ಎಂಬುದು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ- ನಾವು ಸೇವಿಸುವ ಆಹಾರ, ಅದರ ಗುಣ, ಪ್ರಮಾಣ, ಸಂಯೋಜನೆ, ನಮ್ಮ ಜೀರ್ಣಶಕ್ತಿ, ವಯಸ್ಸು, ವ್ಯಾಯಾಮ, ವಾತಾವರಣ ಹಾಗೂ ಒಟ್ಟಾರೆ ದೇಹದ ಸ್ಥಿತಿ. ಆಯುರ್ವೇದದ ಪ್ರಕಾರ, ಈ ಅಪಕ್ವ ಪದಾರ್ಥಗಳು ದೇಹದಲ್ಲಿ ಉಳಿದು ದೋಷಗಳೊಂದಿಗೆ ಸಂಯೋಜಿಸಿ, ದೇಹದ ವಿವಿಧ ಧಾತುಗಳ ಸಹಜ ಕಾರ್ಯಕ್ಕೆ ಅಡಚಣೆ ಉಂಟು ಮಾಡಬಹುದು. ಈ ರೀತಿಯ ಪ್ರಕ್ರಿಯೆಯೇ ಮುಂದೆ ವಿವಿಧ ರೀತಿಯ ವ್ಯಾಧಿಗಳಿಗೆ ನೆಲೆಯಾಗುತ್ತದೆ.
ಆಧುನಿಕ ವಿಜ್ಞಾನದಲ್ಲಿ ಕಾಣುವ inflammation, immune dysregulation, auto- immunity ಮುಂತಾದ ಪರಿಕಲ್ಪನೆಗಳೊಂದಿಗೆ ಇದನ್ನು ನೇರವಾಗಿ ಸಮೀಕರಿಸುವುದಕ್ಕಿಂತ, ಆಯುರ್ವೇದವು ರೋಗೋತ್ಪತ್ತಿಯನ್ನು ತನ್ನದೇ ಆದ ಸಿದ್ಧಾಂತದ ಮೂಲಕ ವಿವರಿಸಿದೆ ಎಂದು ಅರ್ಥಮಾಡಿ ಕೊಳ್ಳುವುದು ಸೂಕ್ತ.
ಇಲ್ಲಿ ಒಂದು ಪ್ರಮುಖ ಸಂಗತಿ ಇದೆ- ಆಮದ ಉತ್ಪತ್ತಿಗೆ ಆಹಾರ ಪದ್ಧತಿ ಅತ್ಯಂತ ಮಹತ್ವದ ಕಾರಣ. ಅದರಲ್ಲಿಯೂ ಇಂದಿನ ಅಸಮರ್ಪಕ ಆಹಾರ ಸಂಯೋಜನೆಗಳು ವಿಶೇಷವಾಗಿ ಗಮ ನಾರ್ಹ. ಅವುಗಳಲ್ಲಿ ಪ್ರಮುಖವಾದುದು ವಿರುದ್ಧ ಆಹಾರ. ವಿರುದ್ಧ ಆಹಾರವನ್ನು ಅರ್ಥಮಾಡಿ ಕೊಳ್ಳಲು ಮೊದಲು ತ್ರಿದೋಷಗಳನ್ನು ನೆನಪಿಸಿಕೊಳ್ಳಬೇಕು. ದೇಹದ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸುವ ಮೂರು ಮೂಲಭೂತ ನಿಯಾಮಕ ಶಕ್ತಿಗಳೆಂದರೆ ವಾತ, ಪಿತ್ತ ಮತ್ತು ಕಫ. ಉಸಿರಾಟ, ಪಚನ, ರಕ್ತಸಂಚಾರ, ವಿಸರ್ಜನೆ, ನಿದ್ರೆ, ಚಲನೆ, ಸ್ಮರಣೆ, ಬುದ್ಧಿ, ಸಂತಾನೋತ್ಪತ್ತಿ ಸೇರಿದಂತೆ ದೇಹದ ಅನೇಕ ಕಾರ್ಯಗಳಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.
ದೋಷಗಳು ತಮ್ಮ ಸಮಸ್ಥಿತಿಯಲ್ಲಿದ್ದಾಗ ಆರೋಗ್ಯ; ಅವುಗಳ ಸಮತೋಲನ ಹಾಳಾದಾಗ ಅನಾರೋಗ್ಯ. ಆಯುರ್ವೇದದ ಪ್ರಸಿದ್ಧ ವಾಕ್ಯವೇ ಇದನ್ನು ಸ್ಪಷ್ಟಪಡಿಸುತ್ತದೆ- ರೋಗಸ್ತು ದೋಷ ವೈಷಮ್ಯಂ, ದೋಷಸಾಮ್ಯಂ ಅರೋಗತಾ. ಅಂದರೆ ದೋಷಗಳ ವೈಷಮ್ಯವೇ ರೋಗ; ದೋಷಗಳ ಸಾಮ್ಯವೇ ಆರೋಗ್ಯ. ಈಗ ‘ವಿರುದ್ಧ ಆಹಾರ’ದ ಕಡೆಗೆ ಬರೋಣ.
ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ತಪ್ಪಾದ ಸಂಯೋಜನೆ ಯಲ್ಲಿ ಅಥವಾ ತಪ್ಪಾದ ರೀತಿಯಲ್ಲಿ ಸೇವಿಸಿದಾಗ, ಅವು ಜಠರಾಗ್ನಿಯ ಸಾಮರ್ಥ್ಯಕ್ಕೆ ಅಸಮರ್ಪಕ ವಾಗಬಹುದು. ಇದರಿಂದ ಜೀರ್ಣಕ್ರಿಯೆ ವ್ಯತ್ಯಯಗೊಂಡು ಆಮದ ಉತ್ಪತ್ತಿಗೆ ಕಾರಣವಾಗ ಬಹುದು. ಆಮವು ದೋಷಗಳನ್ನು ವಿಕೃತಗೊಳಿಸಿದಾಗ, ಆ ವಿಕೃತ ದೋಷಗಳೊಂದಿಗೆ ಸೇರಿ ರೋಗೋತ್ಪತ್ತಿಗೆ ಕಾರಣವಾಗುವ ಸ್ಥಿತಿ ಉಂಟಾಗುತ್ತದೆ. ಇಂತಹ ಅಸಂಗತ ಆಹಾರ ಸಂಯೋಜನೆ ಗಳನ್ನು ಆಯುರ್ವೇದ ವಿರುದ್ಧ ಆಹಾರ ಎಂದು ವಿವರಿಸುತ್ತದೆ.
ಇಲ್ಲಿ ಅತ್ಯಂತ ಮುಖ್ಯವಾದ ಅಂಶವೆಂದರೆ- ಪ್ರತ್ಯೇಕವಾಗಿ ಆರೋಗ್ಯಕರವಾಗಿರುವ ಎರಡು ಆಹಾರ ಪದಾರ್ಥಗಳು ಒಟ್ಟಿಗೆ ಸೇವಿಸಿದಾಗಲೂ ಎಲ್ಲ ಸಂದರ್ಭಗಳಲ್ಲೂ ಆರೋಗ್ಯಕರವಾಗಿರ ಬೇಕೆಂದಿಲ್ಲ. ಆಹಾರದ ಗುಣ, ಪ್ರಮಾಣ, ಕಾಲ, ವ್ಯಕ್ತಿಯ ಪ್ರಕೃತಿ, ಜೀರ್ಣಶಕ್ತಿ ಮತ್ತು ಸೇವಿಸುವ ವಿಧಾನಗಳನ್ನೂ ಪರಿಗಣಿಸಬೇಕು. ಉದಾಹರಣೆಗೆ ಹಾಲು ಮತ್ತು ಬಾಳೆಹಣ್ಣು. ಎರಡೂ ಪ್ರತ್ಯೇಕ ವಾಗಿ ಪೌಷ್ಟಿಕ ಆಹಾರಗಳಾಗಿರಬಹುದು. ಆದರೆ ಆಯುರ್ವೇದೀಯ ವಿವರಣೆಗಳಲ್ಲಿ ಇವುಗಳ ಸಂಯೋಜನೆಯನ್ನು ವಿರುದ್ಧ ಹಾರದ ಉದಾಹರಣೆಯಾಗಿ ಪರಿಗಣಿಸಲಾಗಿದೆ. ವಿರುದ್ಧ ಆಹಾರದ ಪರಿಣಾಮವನ್ನು ಮುಖ್ಯವಾಗಿ ಎರಡು ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು. ಮೊದಲನೆ ಯದು- ಅಸಮರ್ಪಕ ಸಂಯೋಜನೆಯಿಂದ ಜಠರಾಗ್ನಿಗೆ ಆಹಾರವನ್ನು ಸಮರ್ಪಕವಾಗಿ ಪಚನ ಮಾಡಲು ತೊಂದರೆ ಉಂಟಾಗುವುದು.
ಎರಡನೆಯದು- ಅಪೂರ್ಣವಾಗಿ ಪಚನವಾದ ‘ಆಮ’ವು ದೋಷಗಳನ್ನು ವಿಕೃತಗೊಳಿಸಿ, ಅವು ಗಳೊಂದಿಗೆ ಸೇರಿ ದೇಹದಲ್ಲಿ ರೋಗೋತ್ಪತ್ತಿಗೆ ಕಾರಣವಾಗುವುದು. ಆಯುರ್ವೇದವು ವಿರುದ್ಧತೆ ಯನ್ನು ಒಂದೇ ರೀತಿಯಲ್ಲಿ ನೋಡಿಲ್ಲ. ಆಹಾರದ ಸ್ವಭಾವ, ಸಂಯೋಜನೆ, ಪ್ರಮಾಣ, ಕಾಲ, ಸ್ಥಳ, ವಿಧಾನ ಮುಂತಾದ ವಿವಿಧ ಆಧಾರಗಳಲ್ಲಿ 18 ವಿಧದ ವಿರುದ್ಧಗಳನ್ನು ವಿವರಿಸಿದೆ. ಅವುಗಳ ಕುರಿತು ಪ್ರತ್ಯೇಕವಾಗಿ ವಿವರವಾಗಿ ಚರ್ಚಿಸಬಹುದು. ಇಲ್ಲಿ ಮತ್ತೊಂದು ಸೂಕ್ಷ್ಮವಾದ ವಿಚಾರ ವನ್ನು ನಾವು ಅರ್ಥ ಮಾಡಿಕೊಳ್ಳ ಬೇಕು. ಆಯುರ್ವೇದದಲ್ಲಿ ಯಾವುದೇ ಆಹಾರವನ್ನು ಎಲ್ಲರಿಗೂ, ಎಲ್ಲ ಕಾಲಕ್ಕೂ, ಒಂದೇ ರೀತಿಯಲ್ಲಿ ಒಳ್ಳೆಯದು ಅಥವಾ ಕೆಟ್ಟದು ಎಂದು ಪರಿಗಣಿಸುವುದಿಲ್ಲ.
ದೇಶ, ಕಾಲ, ವಯಸ್ಸು, ಪ್ರಕೃತಿ, ದೇಹಬಲ, ಜೀರ್ಣಶಕ್ತಿ, ಆಹಾರದ ಪ್ರಮಾಣ ಮತ್ತು ಸೇವಿಸುವ ವಿಧಾನ- ಇವೆಲ್ಲವನ್ನೂ ಪರಿಗಣಿಸಿ ಆಹಾರವನ್ನು ನಿರ್ಧರಿಸಬೇಕು. ಒಬ್ಬರಿಗೆ ಹಿತವಾದ ಆಹಾರ ಮತ್ತೊಬ್ಬರಿಗೆ ಅಹಿತವಾಗಬಹುದು. ಅದೇ ಆಹಾರ ಬೇಸಿಗೆಯಲ್ಲಿ ಹಿತವಾಗಿದ್ದರೆ, ಚಳಿಗಾಲದಲ್ಲಿ ಅಷ್ಟೇ ಹಿತವಾಗಿರ ಬೇಕೆಂದಿಲ್ಲ. ಇಂದಿನ ಜೀವನಶೈಲಿಯಲ್ಲಿ ಈ ವಿವೇಕದ ಕೊರತೆಯೇ ಹೆಚ್ಚು ಕಂಡುಬರುತ್ತಿದೆ. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು, ಹಸಿವಿಲ್ಲದಿದ್ದರೂ ಸಮಯ ನೋಡಿಕೊಂಡು ತಿನ್ನುವುದು, ತಡರಾತ್ರಿಯಲ್ಲಿ ಭೋಜನ ಮಾಡುವುದು, ಒಂದೇ ಊಟದಲ್ಲಿ ಅತಿಯಾದ ವೈವಿಧ್ಯಮಯ ಪದಾರ್ಥ ಗಳನ್ನು ಸೇರಿಸುವುದು, ಊಟದ ಮಧ್ಯೆ ಪದೇಪದೆ ಏನಾದರೂ ಸೇವಿಸುವುದು- ಇವೆಲ್ಲವೂ ಜಠರಾಗ್ನಿಯ ಮೇಲೆ ಹೆಚ್ಚುವರಿ ಹೊರೆ ಹಾಕಬಹುದು. ಅದರ ಮೇಲೆ ಅಸಮರ್ಪಕ ಆಹಾರ ಸಂಯೋಜನೆ ಸೇರಿದಾಗ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಇಂದು ಆಹಾರವೆಂದರೆ ಕೇವಲ ಹೊಟ್ಟೆ ತುಂಬಿಸುವ ವಿಷಯವಾಗಿ ಉಳಿದಿಲ್ಲ. ಆಹಾರ ನಮ್ಮ ಸಂಸ್ಕೃತಿಯ ಭಾಗ, ನಮ್ಮ ದಿನಚರಿಯ ಭಾಗ, ನಮ್ಮ ಭಾವನೆಗಳ ಭಾಗವೂ ಹೌದು. ಆದರೆ ರುಚಿಯಾಗಿದೆ ಎನ್ನುವುದು ಹಿತಕರವಾಗಿದೆ ಎಂಬುದಕ್ಕೆ ಸಮಾನವಲ್ಲ. ನಾಲಿಗೆಗೆ ಇಷ್ಟವಾದ ಪ್ರತಿಯೊಂದು ಸಂಯೋಜನೆಯೂ ದೇಹಕ್ಕೆ ಹಿತವಾಗಿರಬೇಕೆಂದಿಲ್ಲ. ಅದರಲ್ಲಿಯೇ ಆಯುರ್ವೇದ ದ ಆಹಾರ ವಿಜ್ಞಾನವು ನಮಗೆ ಒಂದು ಸುಂದರವಾದ ವಿವೇಕವನ್ನು ಕಲಿಸುತ್ತದೆ- ಆಹಾರವನ್ನು ಕೇವಲ ರುಚಿಯಿಂದ ಆಯ್ಕೆ ಮಾಡಬೇಡಿ; ಅದರ ಗುಣ, ಪ್ರಮಾಣ, ಸಂಯೋಜನೆ ಮತ್ತು ನಿಮ್ಮ ದೇಹದ ಅಗತ್ಯವನ್ನು ಅರಿತು ಆಯ್ಕೆ ಮಾಡಿ.ವಿರುದ್ಧ ಆಹಾರದ ಅರಿವು ಎಂದರೆ ಪ್ರತಿಯೊಂದು ಆಹಾರ ಸಂಯೋಜನೆಯನ್ನೂ ಭಯದಿಂದ ನೋಡುವುದಲ್ಲ.
ಬದಲಾಗಿ, ನಾನು ಏನು ತಿನ್ನುತ್ತಿದ್ದೇನೆ? ಎಂಬ ಪ್ರಶ್ನೆಯ ಜೊತೆಗೆ ಹೇಗೆ ತಿನ್ನುತ್ತಿದ್ದೇನೆ? ಮತ್ತು ಯಾವುದರೊಂದಿಗೆ ತಿನ್ನುತ್ತಿದ್ದೇನೆ? ಎಂಬ ಪ್ರಶ್ನೆಗಳನ್ನೂ ಕೇಳಿಕೊಳ್ಳುವುದು. ಆರೋಗ್ಯದ ರಕ್ಷಣೆ ಆಸ್ಪತ್ರೆಯ ಬಾಗಿಲಿನಿಂದ ಮಾತ್ರ ಆರಂಭವಾಗುವುದಿಲ್ಲ. ಅದು ನಮ್ಮ ಅಡುಗೆಮನೆಯಿಂದ, ನಮ್ಮ ಊಟದ ತಟ್ಟೆಯಿಂದ ಮತ್ತು ನಾವು ಆಹಾರದ ಬಗ್ಗೆ ಹೊಂದಿರುವ ಅರಿವಿನಿಂದಲೇ ಆರಂಭವಾಗು ತ್ತದೆ. ಹಾಗಾದರೆ ವಿರುದ್ಧ ಆಹಾರದಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು? ಕೆಲವೊಮ್ಮೆ ಪರಿಣಾಮ ತಕ್ಷಣವೇ ಕಾಣಿಸಿಕೊಳ್ಳಬಹುದು- ವಾಂತಿ, ಭೇಧಿ, ಹೊಟ್ಟೆಯುಬ್ಬರ, ಅಜೀರ್ಣ, ಅಮ್ಲಪಿತ್ತ ಮುಂತಾದ ರೂಪಗಳಲ್ಲಿ. ಆದರೆ ಕೆಲವು ಸಂದರ್ಭಗಳಲ್ಲಿ ಪರಿಣಾಮ ನಿಧಾನವಾಗಿ ವ್ಯಕ್ತವಾಗಬಹುದು.
ದೀರ್ಘಕಾಲದಲ್ಲಿ ಚರ್ಮವ್ಯಾಧಿಗಳು, ಸಂಧಿಸಂಬಂಧಿ ಸಮಸ್ಯೆಗಳು, ಜೀರ್ಣಾಂಗದ ತೊಂದರೆಗಳು, ಮಧುಮೇಹ, ಕ್ರಿಮಿರೋಗ, ರಕ್ತಕ್ಷಯ, ಮೂಲವ್ಯಾಧಿ, ಸಂತಾನೋತ್ಪತ್ತಿಗೆ ಸಂಬಂಧಿಸಿದ ತೊಂದರೆ ಗಳು ಹಾಗೂ ಕೆಲವು ಮಾನಸಿಕ ಮತ್ತು ಇತರ ದೀರ್ಘಕಾಲೀನ ವ್ಯಾಧಿಗಳೊಂದಿಗೆ ವಿರುದ್ಧ ಆಹಾರ ವನ್ನು ಆಯುರ್ವೇದ ಸಂಪರ್ಕಿಸುತ್ತದೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವನ್ನು ಗಮನಿಸಬೇಕು. ಒಮ್ಮೆ ವಿರುದ್ಧ ಆಹಾರ ಸೇವಿಸಿದ ತಕ್ಷಣವೇ ಎಲ್ಲರಿಗೂ ರೋಗ ಬರುವುದಿಲ್ಲ.
ವ್ಯಕ್ತಿಯ ದೈಹಿಕ ಬಲ, ಜೀರ್ಣಶಕ್ತಿ, ವ್ಯಾಯಾಮದ ಅಭ್ಯಾಸ, ವಯಸ್ಸು, ಪ್ರಕೃತಿ ಮತ್ತು ವ್ಯಾಧಿ ಕ್ಷಮತ್ವದ ಮೇಲೆ ಪರಿಣಾಮ ಬದಲಾಗಬಹುದು. ದೇಹದ ಸಾಮರ್ಥ್ಯ ಉತ್ತಮವಾಗಿರುವಾಗ ಕೆಲವು ಪರಿಣಾಮಗಳು ಹೊರಗೆ ಸ್ಪಷ್ಟವಾಗಿ ಕಾಣಿಸದೇ ಇರಬಹುದು. ಆದರೆ ಅದರಿಂದ ಆ ಆಹಾರ ಪದ್ಧತಿ ಎಲ್ಲರಿಗೂ ಸುರಕ್ಷಿತ ಎಂದು ಅರ್ಥವಲ್ಲ.
ಮನೆಯಲ್ಲಿ ಒಂದು ಮೂಲೆಯಲ್ಲಿ ಕಸವನ್ನು ಮುಚ್ಚಿಟ್ಟರೆ ಅದು ಕಣ್ಣಿಗೆ ಕಾಣಿಸದೇ ಇರಬಹುದು. ಆದರೆ ಅದು ಕಸವಾಗಿಯೇ ಉಳಿಯುತ್ತದೆ.
ಸೂಕ್ತ ಪರಿಸ್ಥಿತಿ ಸಿಕ್ಕಾಗ ಅದರ ಪರಿಣಾಮ ಹೊರಹೊಮ್ಮುತ್ತದೆ. ಅದೇ ರೀತಿಯಲ್ಲಿ, ದೇಹದ ಸಮತೋಲನ ದುರ್ಬಲವಾದಾಗ ಹಿಂದೆ ಸಂಗ್ರಹವಾಗಿದ್ದ ದೋಷ- ಆಮದ ಪ್ರಕ್ರಿಯೆಗಳು ವ್ಯಾಧಿಯ ರೂಪದಲ್ಲಿ ವ್ಯಕ್ತವಾಗಬಹುದು ಎಂಬುದು ಆಯುರ್ವೇದದ ದೃಷ್ಟಿಕೋನ. ಆದ್ದರಿಂದ ನಾನು ದಿನವೂ ಇಂತಹ ಆಹಾರ ತಿನ್ನುತ್ತೇನೆ, ನನಗೇನೂ ಆಗಿಲ್ಲ ಎನ್ನುವುದು ಆರೋಗ್ಯಕರ ಆಹಾರ ಪದ್ಧತಿಯ ವೈಜ್ಞಾನಿಕ ಮಾನದಂಡವಾಗಲಾರದು. ಇಲ್ಲಿ ಚಿಕಿತ್ಸೆಯ ಮತ್ತೊಂದು ಮಹತ್ವದ ತತ್ವ ನಮ್ಮ ಗಮನಕ್ಕೆ ಬರುತ್ತದೆ- ನಿಧಾನ ಪರಿವರ್ಜನೆ, ಅಂದರೆ ರೋಗಕ್ಕೆ ಕಾರಣ ವಾಗಿರುವ ಅಂಶಗಳನ್ನು ದೂರ ಮಾಡುವುದು. ಕೇವಲ ರೋಗದ ಲಕ್ಷಣಗಳನ್ನು ನಿಯಂತ್ರಿಸುವು ದರಿಂದ ಸಮಸ್ಯೆಯ ಮೂಲ ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ.
ಕಾರಣವನ್ನು ಗುರುತಿಸಿ, ಸಾಧ್ಯವಾದಷ್ಟು ಅದನ್ನು ದೂರ ಮಾಡುವುದು ಚಿಕಿತ್ಸೆಯ ಪ್ರಮುಖ ಭಾಗ. ಅದಕ್ಕಾಗಿಯೇ ಆಯುರ್ವೇದವು ಆಹಾರ, ವಿಹಾರ ಮತ್ತು ವಿಚಾರ- ಈ ಮೂರನ್ನೂ ಆರೋಗ್ಯದ ಅವಿಭಾಜ್ಯ ಅಂಗಗಳಾಗಿ ನೋಡುತ್ತದೆ. ಹೀಗಾಗಿ, ನಮ್ಮ ತಟ್ಟೆಯಲ್ಲಿರುವ ಪ್ರತಿ ಯೊಂದು ಆಹಾರ ಪದಾರ್ಥವನ್ನೂ ಇದು ಒಳ್ಳೆಯದೇ? ಕೆಟ್ಟದೇ? ಎಂದು ಮಾತ್ರ ಪ್ರಶ್ನಿಸುವು ದಕ್ಕಿಂತ, ಇದು ನನಗೆ, ಈ ಸಮಯದಲ್ಲಿ, ಈ ಪ್ರಮಾಣದಲ್ಲಿ, ಈ ಆಹಾರದೊಂದಿಗೆ ಹೊಂದಿಕೆ ಯಾಗುತ್ತದೆಯೇ? ಎಂದು ಪ್ರಶ್ನಿಸುವುದು ಹೆಚ್ಚು ಮುಖ್ಯ. ಆಹಾರವು ನಮ್ಮ ದೇಹವನ್ನು ನಿರ್ಮಿಸು ತ್ತದೆ. ಅದೇ ಆಹಾರವನ್ನು ತಪ್ಪಾದ ರೀತಿಯಲ್ಲಿ ಬಳಸಿದರೆ ದೇಹದ ಸಮತೋಲನವನ್ನು ಹಾಳು ಮಾಡಬಹುದು.
ಆದ್ದರಿಂದ ನೆನಪಿಡಿ- ಆಹಾರವನ್ನು ತಿಳಿದು ಸೇವಿಸಿದರೆ ಅದು ಅಮೃತ. ತಿಳಿಯದೆ, ಅಸಮರ್ಪಕ ವಾಗಿ ಸೇವಿಸಿದರೆ ಅದೇ ಆಹಾರ ವಿಷದಂತೆ ಪರಿಣಮಿಸಬಹುದು. ವಿರುದ್ಧ ಆಹಾರದ ಅರಿವು ಎಂದರೆ ಆಹಾರದ ಬಗ್ಗೆ ಭಯಪಡುವುದಲ್ಲ; ಆಹಾರದೊಂದಿಗೆ ವಿವೇಕಪೂರ್ಣವಾದ ಸಂಬಂಧ ವನ್ನು ಬೆಳೆಸಿಕೊಳ್ಳುವುದು. ನಮ್ಮ ಆರೋಗ್ಯದ ಜವಾಬ್ದಾರಿಯ ಮೊದಲ ಹೆಜ್ಜೆ ಬಹುಶಃ ನಮ್ಮ ಕೈಯಲ್ಲಿರುವ ತಟ್ಟೆಯಿಂದಲೇ ಆರಂಭವಾಗುತ್ತದೆ.