ಹಿಂದಿರುಗಿ ನೋಡಿದಾಗ
ಅದು 2005ರ ವರ್ಷ. ಹೊಸವರ್ಷದ ಸಂಜೆ. ಮೈಕೇಲ್ ಡಿಬೇಕಿ (1908-2008) ಹ್ಯೂಸ್ಟನ್ನಿನ ತಮ್ಮ ಮನೆಯ ಓದುವ ಕೋಣೆಯಲ್ಲಿದ್ದರು. ಅವರು ಮುಂದಿನ ವಾರ ನೀಡಬೇಕಿದ್ದ ಭಾಷಣದ ಕುರಿತಾದ ಟಿಪ್ಪಣಿಯನ್ನು ಸಿದ್ಧಪಡಿಸುತ್ತಿದ್ದರು. ಆಗ ಇದ್ದಕ್ಕಿದ್ದ ಹಾಗೆ ಒಂದು ತೀವ್ರಸ್ವರೂಪದ ನೋವು, ಅವರ ಎದೆಯ ಮೇಲ್ಭಾಗವನ್ನು ಭೇದಿಸಿ, ಎರಡು ಭುಜ ಫಲಕಗಳ ನಡುವೆ ತೂರಿ ಕುತ್ತಿಗೆಯ ಕಡೆಗೆ ಧಾವಿಸಿತು. ಡಿಬೇಕಿಯವರಿಗೆ ತಮಗೇನಾಗುತ್ತಿದೆ ಎನ್ನುವುದು ತಕ್ಷಣವೇ ಗೊತ್ತಾಯಿತು.
ಅವರ ಮಹಾಧಮನಿಯು ಛೇದನಕ್ಕೆ (ಅಯೋರ್ಟಿಕ್ ಡಿಸೆಕ್ಷನ್) ಒಳಗಾಗುತ್ತಿತ್ತು. ಮಹಾ ಧಮನಿಯ ಛೇದನ ಎಂದರೆ ಅದೊಂದು ಶಸ್ತ್ರವೈದ್ಯಕೀಯ ತುರ್ತು ಪರಿಸ್ಥಿತಿ. ತಕ್ಷಣವೇ ಅಗತ್ಯ ಶಸ್ತ್ರಚಿಕಿತ್ಸೆಯನ್ನು ಮಾಡದಿದ್ದರೆ, ಆ ವ್ಯಕ್ತಿಯು ಸ್ಥಳದಲ್ಲಿಯೇ ಸಾಯುವ ಸಾಧ್ಯತೆಯು ಅಧಿಕವಾಗಿರುತ್ತದೆ.
ಮಹಾಧಮನಿ: ಮಹಾಧಮನಿ ಎಂದರೆ ಏನು? ಅದು ಏಕೆ ಛೇದನಕ್ಕೆ ಒಳಗಾಗುತ್ತದೆ, ಏಕೆ ಅಷ್ಟೊಂದು ನೋವು ಕಾಣಿಸಿಕೊಳ್ಳುತ್ತದೆ, ತಕ್ಷಣವೇ ಏಕೆ ಶಸ್ತ್ರಚಿಕಿತ್ಸೆಯನ್ನು ಮಾಡ ಬೇಕು? ಮಾಡದಿದ್ದರೆ ಸಾವು ಏಕೆ ಸಂಭವಿಸುತ್ತದೆ? ಈ ಎಲ್ಲವೂ ಸ್ವಲ್ಪ ಅಯೋಮಯ ವಾಗಿ ಕಾಣಬಹುದು. ಹಾಗಾಗಿ ಕೆಲವು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಹೃದಯದ ಚಿತ್ರವನ್ನು ಗಮನಿಸಿ. ಹೃದಯದ ಎಡ ಹೃತ್ಕುಕ್ಷಿಯಿಂದ ಮಹಾಧಮನಿ (ಅಯೋರ್ಟ) ಹುಟ್ಟುತ್ತಿದೆ. ಅಯೋರ್ಟದಲ್ಲಿ ಮೂರು ಭಾಗಗಳಿವೆ: ಹೃದಯದಿಂದ ಹುಟ್ಟಿದ ಕೂಡಲೇ ಸ್ವಲ್ಪ ಮೇಲಕ್ಕೆ ಸಾಗುವ ಮಹಧಮನಿಯ ಏರುಭಾಗ (ಅಸೆಂಡಿಂಗ್ ಅಯೋರ್ಟ), ನಂತರ ಕಮಾನಿನ ಹಾಗೆ ಬಾಗಿ, ಸ್ವಲ್ಪ ದೂರ ಸಾಗುವ ಮಹಾಧಮನಿಯ ಕಮಾನು (ಅಯೋರ್ಟಿಕ್ ಆರ್ಚ್) ಹಾಗೂ ಕೆಳಕ್ಕೆ ಇಳಿಯುವ ಭಾಗ (ಡಿಸೆಂಡಿಂಗ್ ಅಯೋರ್ಟ). ಮಹಾಧಮನಿಯ ಭಿತ್ತಿಯಲ್ಲಿ ಮೂರು ಪದರಗಳಿರುತ್ತವೆ. ಒಳಪದರ (ಟ್ಯೂನಿಕ ಇಂಟಿಮ), ನಡುಪದರ (ಟ್ಯೂನಿಕ ಮೀಡಿಯ) ಮತ್ತು ಹೊರಪದರ (ಟ್ಯೂನಿಕ ಅಡ್ವೆನ್ಷಿಯ). ಮಹಾಧಮನಿ ಎಂದರೆ ನಮ್ಮ ದೇಹದ ಪ್ರಮುಖ ರಕ್ತನಾಳ. ಅನಿಯಂತ್ರಿತ ರಕ್ತದ ಏರೊತ್ತಡ: ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ.
ಇದನ್ನೂ ಓದಿ: Dr N Someshwara Column: ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ
ರಕ್ತವು 120-140 ಎಂಎಂಎಚ್‌ಜಿ ಒತ್ತಡದಲ್ಲಿ ಮಹಾಧಮನಿಯನ್ನು ಪ್ರವೇಶಿಸುತ್ತದೆ. ಮಹಧಮನಿಯಿಂದ ಹೊರಡುವ ಅನೇಕ ರಕ್ತನಾಳಗಳ ಮೂಲಕ, ರಕ್ತವು ದೇಹದ ಎಲ್ಲ ಭಾಗಗಳಿಗೆ ರವಾನೆಯಾಗುತ್ತದೆ. ಕೆಲವರು ರಕ್ತದ ಏರೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ನರಳುವುದುಂಟು. ಈ ಏರೊತ್ತಡವನ್ನು ನಿಯಂತ್ರಿಸದಿದ್ದರೆ, ಗರಿಷ್ಠ 140 ಎಂಎಂಎಚ್‌ಜಿ ಯಲ್ಲಿ ಸಾಗಬೇಕಾದ ರಕ್ತವು 180 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಸಾಗಬಹುದು. ಈ ಅನಿಯಂತ್ರಿತ ರಕ್ತದೊತ್ತಡವು, ಮಹಾಧಮನಿಯ ಒಳಪದರಕ್ಕೆ ಹಾನಿ ಯನ್ನು ಉಂಟುಮಾಡುತ್ತದೆ.
ಹೀಗೆ ಸುದೀರ್ಘಕಾಲ ರಕ್ತದ ಏರೊತ್ತಡವನ್ನು ಭರಿಸಿದ ಒಳಪದರವು ದುರ್ಬಲವಾಗಿ ಸೀಳು ಬಿಡುತ್ತದೆ. ಈ ಸೀಳು ಆಳವಾಗಿ ವ್ಯಾಪಿಸಿ, ನಡುಪದರಕ್ಕೂ ವ್ಯಾಪಿಸುತ್ತದೆ. ಒಳಪದರ ಹಾಗೂ ನಡುಪದರದ ನಡುವೆ ಒಂದು ‘ಹುಸಿ ಕೊಳವೆ’ ರೂಪುಗೊಳ್ಳುತ್ತದೆ. ಆಗ ರಕ್ತವು ನಿಜ ರಕ್ತನಾಳದಲ್ಲಿ ಹರಿಯದೆ, ಹುಸಿಕೊಳವೆಯಲ್ಲಿ ಹರಿಯಲಾರಂಭಿಸುತ್ತದೆ.
ಈ ಹುಸಿಕೊಳವೆಯ ವ್ಯಾಪ್ತಿ ಹೆಚ್ಚಾದರೆ, ಅದು ಹೊರಪದರವನ್ನೂ ಸೀಳುತ್ತದೆ. ಆಗ ರಕ್ತವು ಎದೆಗೂಡಿನೊಳಗೆ ಹರಿಯಲಾರಂಭಿಸುತ್ತದೆ. ಆಗ ತಕ್ಷಣವೇ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ.
ಸೀಳುನೋವು: ಹೃದಯಾಘಾತದಲ್ಲಿ ನೋವಿನ ಸ್ವರೂಪವು ಹಾಗೂ ಮಹಾಧಮನಿಯ ಛೇದನದಲ್ಲಿ ಕಂಡುಬರುವ ನೋವಿನ ಅನುಭವವು ಭಿನ್ನವಾಗಿರುತ್ತವೆ.
ಹೃದಯಾಘಾತವಾದಾಗ ಯಾರೋ ‘ಕಟಿಂಗ್ ಪ್ಲೈಯರಿನಿಂದ ಹೃದಯವನ್ನು ಹಿಂಡು ತ್ತಿದ್ದಾರೇನೋ’ ಎಂದನಿಸುತ್ತದೆ. ಆದರೆ ಮಹಧಾಮನಿಯ ಛೇದನದಲ್ಲಿ ಅತ್ಯಂತ ತೀಕ್ಷ್ಣ ವಾದ ‘ಸೀಳು ನೋವು’ ಅಥವಾ ‘ಟೇರಿಂಗ್ ಪೇಯ್ನ್’ ಕಾಣಿಸಿಕೊಳ್ಳುತ್ತದೆ.
ಡಿಬೇಕಿಯವರು ಮಹಾಧಮನಿಯ ಛೇದನವನ್ನು ಹಲವು ದಶಕಗಳಿಂದ ಅಧ್ಯಯನ ಮಾಡಿದರು. ಮಹಾಧಮನಿಯ ಛೇದನದ ಸ್ವರೂಪವನ್ನು ಅಧ್ಯಯನ ಮಾಡಿ ಟೈಪ್-1, ಟೈಪ್-2 ಮತ್ತು ಟೈಪ್-3 ಎಂದು ವರ್ಗೀಕರಿಸಿದರು.
ಯಾವ ಯಾವ ನಮೂನೆಯ ಛೇದನಕ್ಕೆ ಯಾವ ರೀತಿಯ ಶಸ್ತ್ರಚಿಕಿತ್ಸೆಯು ಸೂಕ್ತ ಎಂಬ ವಿಧಿವಿಧಾನವನ್ನು ಅವರೇ ರೂಪಿಸಿದರು. ಅವೆಲ್ಲವನ್ನೂ ನೂರಾರು ಹೃದಯ ಶಸ್ತ್ರ ವೈದ್ಯರಿಗೆ ಬೋಧಿಸಿ, ಅಗತ್ಯ ತರಬೇತಿಯನ್ನೂ ನೀಡಿದ್ದರು. ಈಗ ಸ್ವಯಂ ಡಿಬೇಕಿಯವರೇ ಮಹಾಧಮನಿಯ ಛೇದನಕ್ಕೆ ಗುರಿಯಾಗಿದ್ದರು. ಡಿಬೇಕಿಯವರಿಗೆ ಬರೀ 97 ವರ್ಷ ಗಳಾಗಿದ್ದವು.
ಮಹಾಧಮನಿಯ ಛೇದನ: ಡಿಬೇಕಿಯವರು ತೀವ್ರವಾಗಿ ನೋಯುತ್ತಿದ್ದ ತಮ್ಮ ಎದೆಯನ್ನು ಹಿಡಿದುಕೊಂಡು ಕುಳಿತಿದ್ದರು. ಯಾವ ಕ್ಷಣದಲ್ಲಾದರೂ ಮಹಾಧಮನಿಯ ಛೇದನ ಪೂರ್ಣಗೊಂಡು, ಸಾವು ಎರಗಬಹುದಾಗಿತ್ತು. ಆ ಕ್ಷಣಕ್ಕಾಗಿ ಕಾದು ಕುಳಿತಿದ್ದರು. ತಮ್ಮ ಸಾವನ್ನು ಸ್ವಾಗತಿಸಲು ಸಿದ್ಧರಾಗಿದ್ದರು. ಆದರೆ ಸಾವು ಬರಲೇ ಇಲ್ಲ!
ಈ ಅವಧಿಯಲ್ಲಿ ಅವರು ವೈದ್ಯಕೀಯ ತುರ್ತು ಸೇವೆಗಾಗಿ 911ಕ್ಕೆ ಫೋನ್ ಮಾಡಿದ್ದರೆ, ಆಂಬುಲೆನ್ಸ್ ತ್ವರಿತವಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿ, ಅಗತ್ಯ ವೈದ್ಯಕೀಯ ನೆರವನ್ನು ನೀಡುತ್ತಿತ್ತು. ಆದರೆ ಅವರು ಫೋನ್ ಮಾಡಲಿಲ್ಲ.
ನೋವಿನ ಪಂಜರದಲ್ಲಿಯೇ ಸೆರೆಯಾಳಾಗಿ ನೋವನ್ನು ಅನುಭವಿಸುತ್ತಿದ್ದರು. ಕೊನೆಗೆ ಡಿಬೇಕಿಯವರ ಮನೆಯವರೇ ಫೋನ್ ಮಾಡಿ ಡಿಬೇಕಿಯವರನ್ನು ಮೆಥಾಡಿಸ್ಟ್ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಸಿ.ಟಿ. ಸ್ಕ್ಯಾನ್ ಮಾಡಿದರು. ಅದರಲ್ಲಿ ಮಹಧ ಮನಿಯ ಛೇದನವಾಗುತ್ತಿರುವ ಸ್ಪಷ್ಟ ಚಿತ್ರವು ಕಂಡುಬಂದಿತು.
ಆಸ್ಪತ್ರೆಯ ವೈದ್ಯರೆಲ್ಲ ಕೂಡಲೇ ಶಸ್ತ್ರಚಿಕಿತ್ಸೆಯನ್ನು ಮಾಡೋಣ ಎಂದು ಒತ್ತಾಯ ಮಾಡಿದರು. ಆದರೆ ಡಿಬೇಕಿಯವರು ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದರು. ನೇರವಾಗಿ ತಮ್ಮ ಮನೆಗೆ ಹೊರಟು ಬಿಟ್ಟರು.
ಡಿಎನ್‌ಆರ್: ಡಿಬೇಕಿಯವರು ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಲು ಕಾರಣಗಳಿದ್ದವು. ಅವರಿಗೆ 97 ವರ್ಷಗಳಾಗಿದ್ದವು. ಈ ವಯಸ್ಸಿನಲ್ಲಿ ಮಹಾಧಮನಿಯ ಛೇದನದಂಥ ಗಂಭೀರ ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ದೈಹಿಕ ಶಕ್ತಿ ಹಾಗೂ ಮಾನಸಿಕ ಸಾಮರ್ಥ್ಯವು ಇರುವುದಿಲ್ಲ.
ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಅವರು ದೈಹಿಕವಾಗಿ ಅಥವಾ ಮಾನಸಿಕವಾಗಿ ಶಾಶ್ವತ ಹಾನಿಗೊಳಗಾಗುವ ಸಾಧ್ಯತೆಯು ಅಧಿಕವಾಗಿತ್ತು. ತಮ್ಮ ಕೊನೆಯ ದಿನಗಳನ್ನು ಪರಾಧೀನರಾಗಿ ಕಳೆಯಲು ಅವರು ಇಷ್ಟಪಡಲಿಲ್ಲ. ಘನತೆಯ ಸಾವನ್ನು ಅವರು ನಿರೀಕ್ಷಿಸುತ್ತಿದ್ದರು. ಅವರು ಸ್ವಯಂ ಶಸ್ತ್ರವೈದ್ಯರಾಗಿದ್ದು, ಇಂಥ ನೂರಾರು ಶಸ್ತ್ರಚಿಕಿತ್ಸೆ ಗಳನ್ನು ಮಾಡಿದ್ದು, ಈ ಕ್ಷೇತ್ರದಲ್ಲಿ ಅವರೇ ಅಧಿಕೃತವಾಗಿ ಮಾತನಾಡಬಲ್ಲ ವ್ಯಕ್ತಿ ಯಾಗಿದ್ದ ಕಾರಣ, ಅವರು ಅಧಿಕಾರವಾಣಿಯಿಂದ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದರು.
ಜತೆಗೆ ಸಾವು ಸನ್ನಿಹಿತವಾದಾಗ ಬದುಕಿಸುವ ಯಾವುದೇ ಪ್ರಯತ್ನವನ್ನು ಮಾಡಬಾರದು ಎಂದು ‘ಪುನಶ್ಚೇತನ ನಿರಾಕರಣೆಯ ಆದೇಶ’ವನ್ನು (ಡು ನಾಟ್ ರಿಸಸಿಯೇಟ್ ಆರ್ಡರ್- ಡಿಎನ್‌ಆರ್) ಬರಹದ ಮೂಲಕ ನೀಡಿದರು.
ತಮಗೆ ಯಾವುದೇ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಬಾರದು ಎಂದು ಕಟ್ಟು ನಿಟ್ಟಾಗಿ ಹೇಳಿದರು. ಒಂದು ವಾರ ಕಳೆಯಿತು. ಅಂಥ ಗಂಭೀರ ಸಮಸ್ಯೆ ಏನೂ ಕಂಡು ಬರಲಿಲ್ಲ. ನಿಗದಿತ ಭಾಷಣವನ್ನೂ ಮಾಡಿಬಂದರು. 3 ವಾರಗಳು ಕಳೆದವು. ಡಿಬೇಕಿ ತಮ್ಮ ಮನೆಯಲ್ಲಿಯೇ ಉಳಿದರು.
ವೈದ್ಯರು ನಿಯತವಾಗಿ ಡಿಬೇಕಿಯವರ ರಕ್ತದ ಒತ್ತಡವನ್ನು ಪರೀಕ್ಷಿಸುತ್ತಿದ್ದರು. ಜತೆಗೆ ಮಹಾಧಮನಿಯ ಸೀಳು ಮತ್ತಷ್ಟು ಹೆಚ್ಚಿ, ಪೂರ್ಣ ಛೇದನವಾಗದಿರಲಿ ಎಂದು ಪ್ರಾರ್ಥಿಸು ತ್ತಿದ್ದರು. ಆದರೆ ಅವರ ಪ್ರಾರ್ಥನೆಯು ಫಲಿಸಲಿಲ್ಲ. ಮಹಧಮನಿಯ ಸೀಳು ಹೆಚ್ಚಾಗುತ್ತಲೇ ಹೋಯಿತು. ಹಾಗಾಗಿ ಡಿಬೇಕಿಯವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಸ್ಥಿತಿಯು ಗಂಭೀರವಾಗುತ್ತಾ ಹೋಯಿತು. ಕೊನೆಗೆ ಡಿಬೇಕಿಯವರು ಪ್ರಜ್ಞೆಯನ್ನು ಕಳೆದುಕೊಂಡರು.
ನೈತಿಕ ಚರ್ಚೆ: ಇದಾದ ನಂತರ ನಡೆದ ಘಟನೆ, ವೈದ್ಯಕೀಯ ಇತಿಹಾಸದಲ್ಲಿ ಒಂದು ಮಹಾಚರ್ಚೆಗೆ ಎಡೆಮಾಡಿಕೊಟ್ಟಿತು. ಇಂದಿಗೂ ಈ ಬಗ್ಗೆ ಚರ್ಚೆಯು ನಡೆಯುತ್ತಲೇ ಇದೆ. ಯಾರು ಸರಿ, ಯಾರು ತಪ್ಪು ಎನ್ನುವುದರ ಬಗ್ಗೆ ತೀರ್ಮಾನವನ್ನು ನೀಡುವುದು ಅಸಾಧ್ಯ ವಾಗಿದೆ.
ಡಿಬೇಕಿಯವರ ಪತ್ನಿ ಕತ್ರಿನ್ ಫೆಲಬರ್. ಈಕೆಯು ಡಿಬೇಕಿಯವರ ಸಹೋದ್ಯೋಗಿ ಹಾಗೂ ಕುಟುಂಬದ ಗೆಳೆಯನೂ ಆಗಿದ್ದ ಡಾ.ಜಾರ್ಜ್ ನೂನ್ ಎಂಬ ಶಸ್ತ್ರವೈದ್ಯನ ಮೇಲೆ ಒತ್ತಡ ವನ್ನು ತಂದು ಡಿಬೇಕಿಯವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕೆಂದು ಹೇಳಿದಳು. ಆದರೆ ಆಸ್ಪತ್ರೆಯ ಅರಿವಳಿಕಾ ತಜ್ಞರ ತಂಡವು ಅರಿವಳಿಕೆಯನ್ನು ನೀಡಲು ನಿರಾಕರಿಸಿತು.
ಡಿಬೇಕಿಯವರು ಸ್ಪಷ್ಟವಾಗಿ ಡಿಎನ್ಆರ್ ಆದೇಶವನ್ನು ನೀಡಿರುವ ಕಾರಣ, ತಾವು ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸುವುದಿಲ್ಲ ಎಂದರು. ಡಿಬೇಕಿಯವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡು, ವೈದ್ಯಕೀಯ ನೀತಿಯನ್ನು ಉಲ್ಲಂಸಲು ತಾವು ಸಿದ್ಧವಿಲ್ಲವೆಂದರು.
ಆಸ್ಪತ್ರೆಯಲ್ಲಿರುವ ವೈದ್ಯಕೀಯ ನೈತಿಕ ಮಂಡಳಿಯು (ಎಥಿಕ್ಸ್ ಕಮಿಟಿ) ಸಭೆ ಸೇರಿತು. ಅವರ ಮುಂದೆ ಇದ್ದದ್ದು ನೈತಿಕ ಪ್ರಶ್ನೆ. ‘ಯಾವ ಕಾರಣಕ್ಕೂ ನನಗೆ ಡಿಎನ್‌ಆರ್ ನೀಡಬಾರದು ಎನ್ನುವುದು ಅವರ ಅಂತಿಮ ಬಯಕೆ ಹಾಗೂ ಆಜ್ಞೆಯಾಗಿತ್ತು’ ಎನ್ನುವುದು ಒಂದು ಕಡೆ.
ಎರಡನೆಯ ಕಡೆ, ಡಿಬೇಕಿಯವರ ಪತ್ನಿಯಿಂದ, ಶಸ್ತ್ರಚಿಕಿತ್ಸೆಯನ್ನು ಮಾಡಲೇಬೇಕೆಂಬ ಆಗ್ರಹ. ಅರಿವಳಿಕೆಯ ತಂಡವು ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಲು ನಿರಾಕರಿಸಿದರೂ, ಶಸ್ತ್ರವೈದ್ಯ ಡಾ.ಜಾರ್ಜ್ ನೂನ್ ಶಸಚಿಕಿತ್ಸೆಯನ್ನು ಮಾಡಲು ಸಿದ್ಧರಾದರು. ಬಿಸಿಬಿಸಿ ಚರ್ಚೆಯು ನಡೆಯುವಾಗ ಕತ್ರಿನ್ ಸಭೆಯೊಳಗೆ ನುಗ್ಗಿ ‘ಹೇಗಿದ್ದರೂ ನನ್ನ ಗಂಡ ಸಾಯೋದು ಶತಃಸಿದ್ಧ. ಆದರೂ ಬದುಕುವ ಹುಲ್ಲುಕಡ್ಡಿಯ ಭರವಸೆಯಿದೆ.
ನಾವು ಯಾಕೆ ಪ್ರಯತ್ನಿಸಬಾರದು?’ ಎಂದು ವಾದಿಸಿದಳು. ಆಕೆಯ ವಾದವು ಗೆದ್ದಿತು. ನೈತಿಕ ಮಂಡಳಿಯು ಶಸ್ತ್ರಚಿಕಿತ್ಸೆಯನ್ನು ನಡೆಸಲು ಅನುಮತಿಯನ್ನು ನೀಡಿತು. ಒಬ್ಬ ವೈದ್ಯನು ರೂಪಿಸಿದ ಶಸ್ತ್ರಚಿಕಿತ್ಸೆಯನ್ನು, ಅವನು ಪ್ರಜ್ಞಾಹೀನನಾಗಿರುವಾಗ, ಯಾವುದೇ ಶಸ್ತ್ರಚಿಕಿತ್ಸೆಯು ನನಗೆ ಬೇಡ ಎಂದು ಬರಹದಲ್ಲಿ ತಿಳಿಸಿರುವಾಗ, ಅವನ ಮೇಲೆಯೇ ಪ್ರಯೋಗಿಸುವ ಒಂದು ಅಪರೂಪದ ಘಟನೆಯು ವೈದ್ಯಕೀಯ ಲೋಕದಲ್ಲಿ ದಾಖಲಾಯಿತು.
ಪವಾಡ: ಫೆಬ್ರವರಿ 9, 2006. ಮತ್ತೊಂದು ಆಸ್ಪತ್ರೆಯಿಂದ ಅರಿವಳಿಕೆಯ ತಂಡವನ್ನು ಆಹ್ವಾನಿಸಿದರು. ಡಿಬೇಕಿಯ ಶಿಷ್ಯಂದಿರೇ ಅವರ ಎದೆಗೂಡನ್ನು ತೆರೆದರು. ಸೀಳು ಬಿಡು ತ್ತಿದ್ದ ಮಹಾಧಮನಿಯನ್ನು ಗಮನಿಸಿದರು. ಆ ಭಾಗವನ್ನು ಛೇದಿಸಿ, ಡಾಕ್ರಾನ್ ಕಸಿಯನ್ನು ಹೊಲಿದರು. ಡಾಕ್ರಾನ್ ಕಸಿಯನ್ನು ಸ್ವಯಂ ಡಿಬೇಕಿ ರೂಪಿಸಿದ್ದರು.
1950ರ ದಶಕದ ಮಾತು. ಡಿಬೇಕಿಯವರ ಅಮ್ಮ ಹೊಲಿಗೆಯಲ್ಲಿ ನಿಷ್ಣಾತಳಾಗಿದ್ದಳು. ಅದುವರೆಗೂ ರೋಗಗ್ರಸ್ತ ರಕ್ತನಾಳವನ್ನು ಛೇದಿಸಿ, ಅದರ ಸ್ಥಳದಲ್ಲಿ ಶವಗಳಿಂದ ಛೇದಿಸಿದ ರಕ್ತನಾಳಗಳನ್ನು ಕಸಿಯ ರೂಪದಲ್ಲಿ ಹೊಲಿಯುತ್ತಿದ್ದರು. ಆದರೆ ಇವು ಹೆಚ್ಚು ಬಾಳಿಕೆ ಬರುತ್ತಿರಲಿಲ್ಲ. ಹಾಗಾಗಿ ಸಂಯೋಜಿತ ನೂಲಿನಿಂದ (ಸಿಂಥೆಟಿಕ್ ಫೈಬರ್) ಕಸಿಯನ್ನು ತಯಾರಿಸಬಹುದೇ ಎಂದು ಹುಡುಕಲಾರಂಬಿಸಿದರು. ಆಗ ಅವರಿಗೆ ‘ಪಾಲಿ ಇಥಲೀನ್ ಟೆಟ್ರಾ-ಲೇಟ್’ ಎಂಬ ನೂಲಿನ ಪರಿಚಯವಾಯಿತು.
ಈ ನೂಲನ್ನು ಬಳಸಿಕೊಂಡು, ತಮಗೆ ಬೇಕಾದಂತೆ ಹೆಣೆದು, ತಾಯಿಯ ಹೊಲಿಗೆಯ ಯಂತ್ರದಲ್ಲಿ ಸರಿಯಾದ ಅಳತೆಗೆ ಹೊಲಿದು, ಅಗತ್ಯ ಸಂಯೋಜಿತ ರಕ್ತನಾಳವನ್ನು ರೂಪಿಸಿದರು. ಈ ನೂಲು ಶಕ್ತಿಶಾಲಿಯಾಗಿತ್ತು. ದೇಹವು ಇದನ್ನು ತಿರಸ್ಕರಿಸಲಿಲ್ಲ. ಅದು ತೀರಾ ದುಬಾರಿಯೂ ಆಗಿರಲಿಲ್ಲ. ಕಸಿಯಾಗಿ ಬಳಸುವುದು ಸುಲಭವಾಗಿತ್ತು.
ಮಿಗಿಲಾಗಿ ದೀರ್ಘಕಾಲ ಬಾಳಿಕೆ ಬರುತ್ತಿತ್ತು. ಇದಕ್ಕೆ ಡಾಕ್ರಾನ್ ಎಂಬ ಹೆಸರಿಟ್ಟರು. ಕಸಿಯಲ್ಲಿ ಯಶಸ್ವಿಯಾಗಿ ಬಳಸಿದರು. ಡಾಕ್ರಾನ್ ಕಸಿಯು ವಿಶ್ವದಾದ್ಯಂತ ಜನಪ್ರಿಯ ವಾಯಿತು. ಏಳು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯು ನಡೆಯಿತು.
ಡಿಬೇಕಿಯವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎಂಟು ತಿಂಗಳು ಬೇಕಾದವು. ಆಸ್ಪತ್ರೆಯ ಶುಲ್ಕವು ಒಂದು ದಶಲಕ್ಷ ಡಾಲರ್ ಮೀರಿತು. ಆದರೆ ಡಿಬೇಕಿ ಜೀವಂತವಾಗಿ ಉಳಿದದ್ದಲ್ಲದೇ ಎದ್ದು ತಮ್ಮ ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿದರು. ಇದೊಂದು ವೈದ್ಯಕೀಯ ಪವಾಡ ಎಂದು ಜನಜನಿತವಾಯಿತು.
ಹುಟ್ಟು: ಡಿಬೇಕಿ 1908ರಲ್ಲಿ ಲೂಸಿಯಾನ ಪ್ರದೇಶದಲ್ಲಿದ್ದ ಲೇಕ್ ಚಾರ್ಲ್ಸ್‌ನಲ್ಲಿ ಹುಟ್ಟಿದರು. ತಂದೆ-ತಾಯಿ ಲೆಬನೀಸ್ ದಂಪತಿಗಳು. ಹೆಸರು ಶಿಕೆರ್ ಮತ್ತು ರಾಹೀಜ ದಬಾ. ಈ ‘ದಬಾ’ ಎನ್ನುವ ಹೆಸರೇ ಆಂಗ್ಲೀಕರಣಕ್ಕೆ ಒಳಗಾಗಿ ‘ಡಿಬೇಕಿ’ಯಾಯಿತು. ಡಿಬೇಕಿ ತನ್ನ ತಂದೆಯ ಔಷಧಾಲಯದಲ್ಲಿ ಕೆಲಸ ಮಾಡುತ್ತಿದ್ದ. ಆಗ ಹಲವು ವೈದ್ಯರನ್ನು ಭೇಟಿಯಾದ. ವೈದ್ಯಕೀಯದಲ್ಲಿ ಆಸಕ್ತಿ ಮೊಳೆಯಿತು. ಈ ಅವಧಿಯಲ್ಲಿ ಅವನ ಅಮ್ಮ ಹೊಲಿಗೆಯನ್ನು ಕಲಿಸಿದಳು.
ಹತ್ತು ವರ್ಷದ ಹುಡುಗ ತನ್ನ ಅಂಗಿಯನ್ನು ತಾನೇ ಹೊಲಿದುಕೊಳ್ಳುತ್ತಿದ್ದ. ಹೈಸ್ಕೂಲು ಮುಗಿಸುವ ವೇಳೆಗೆ ‘ಬ್ರಿಟಾನಿಕ ಎನ್‌ಸೈಕ್ಲೋಪೀಡಿಯ’ವನ್ನು ಮೊದಲಿನ ಪುಟದಿಂದ ಕೊನೆಯ ಪುಟದವರೆಗೆ ಓದಿ ಮುಗಿಸಿದ್ದ. ತುಲೇನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಆರಂಭಿಸಿದ.
20 ವರ್ಷದವನಾಗಿದ್ದಾಗ ‘ರೋಲರ್ ಪಂಪ್’ ಕಂಡುಹಿಡಿದ. ಇದು ರಕ್ತಪೂರಣಕ್ಕೆ (ಬ್ಲಡ್ ಟ್ರಾನ್ಸ್ ಫ್ಯೂಶನ್) ನೆರವಾಯಿತು. ಮುಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ಯಶಸ್ವಿ ಯಾಗಲು ರೂಪಿಸಿದ ‘ಹಾರ್ಟ್-ಲಂಗ್ ಮೆಷಿನ್’ನ ಒಂದು ಪ್ರಮುಖ ಭಾಗವಾಯಿತು.
ಆಗ ಅವನಿನ್ನೂ ವಿದ್ಯಾರ್ಥಿಯಾಗಿದ್ದ. ಕಂಠಧಮನಿಯಲ್ಲಿದ್ದ ಹೆಪ್ಪಳಿಕೆಯನ್ನು ನಿವಾರಿಸುವ ‘ಕೆರೋಟಿಡ್ ಎಂಡಾರ್ಟರೆಕ್ಟಮಿ’ ಎಂಬ ಶಸ್ತ್ರಚಿಕಿತ್ಸೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಮಾಡಿದ. ಕರೋನರಿ ಆರ್ಟರಿ ಬೈಪಾಸ್ ಸರ್ಜರಿಯನ್ನೂ ಮಾಡಿದ.
ಡಾಕ್ರಾನ್ ರಕ್ತನಾಳಗಳ ಕಸಿಯನ್ನು ರೂಪಿಸಿದ. ದುರ್ಬಲ ಎಡ ಹೃತ್ಕುಕ್ಷಿಗೆ ನೆರವನ್ನು ನೀಡುವ ಸಾಧನವನ್ನು ರೂಪಿಸಿದ. ಒಬ್ಬ ದಾನಿಯಿಂದ ಹಲವು ಅಂಗಗಳನ್ನು ಪಡೆದು ಬದಲಿ ಜೋಡಣೆಯನ್ನು ಮಾಡಿದ. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ‘ಸಂಚಾರಿ ಶಸ್ತ್ರಚಿಕಿತ್ಸಾ ಆಸ್ಪತ್ರೆ’ಯನ್ನು ಸ್ಥಾಪಿಸಿದ.
ಧೂಮಪಾನವೇ ಶ್ವಾಸಕೋಶ ಕ್ಯಾನ್ಸರಿಗೆ ಪ್ರಮುಖ ಕಾರಣ ಎಂದು ಸಾರಿದ. ತನ್ನ ಜೀವಮಾನದಲ್ಲಿ ೬೦,೦೦೦ ಹೃದಯ-ರಕ್ತನಾಳದ ಶಸ್ತ್ರಚಿಕಿತ್ಸೆಗಳನ್ನು ಮಾಡಿದ.
*ಶತಾಯುಷಿ?: 2006ರಲ್ಲಿ ಡಿಬೇಕಿ ಸಂಪೂರ್ಣ ಚೇತರಿಸಿಕೊಂಡರು. ತಮ್ಮನ್ನು ಉಳಿಸಿದ ಶಸ್ತ್ರವೈದ್ಯಕೀಯ ತಂಡವನ್ನು ಅಭಿನಂದಿಸಿದರು. ಸಂಶೋಧನಾ ಪ್ರಬಂಧಗಳನ್ನು ಬರೆದರು. ಕರೆದ ಕಡೆ ಹೋಗಿ ವೈದ್ಯಕೀಯ ಉಪನ್ಯಾಸಗಳನ್ನು ನೀಡಿದರು. ತಮ್ಮ 99ನೆಯ ವಯಸ್ಸಿನಲ್ಲಿ ಅಮೆರಿದ ಅಧ್ಯಕ್ಷ ಜಾರ್ಜ್ ಬುಶ್ ಅವರಿಂದ ಚಿನ್ನದ ಪದಕವನ್ನು ಪಡೆದರು. ತಮ್ಮ 100ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಇನ್ನೂ ಮೂರು ತಿಂಗಳು ಇರುವಂತೆಯೇ ಹೃದಯ ವೈಫಲ್ಯದ ಕಾರಣ ಜುಲೈ 11, 2008ರಂದು ಮರಣಿಸಿ ದರು.
ಒಂದು ರೋಗವನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿ, ಅದಕ್ಕೆ ಪರಿಣಾಮಕಾರಿ ಯಾದ ಶಸ್ತ್ರಚಿಕಿತ್ಸೆಯನ್ನು ರೂಪಿಸಿ, ಅದೇ ರೋಗಕ್ಕೆ ತುತ್ತಾಗಿ, ತಾವು ರೂಪಿಸಿದ ಚಿಕಿತ್ಸಾ ವಿಧಾನದಿಂದಲೇ ಮರಳಿ ಜೀವನವನ್ನು ಪಡೆದ ಅಪರೂಪದ ಪ್ರಸಂಗ ಡಾ.ಮೈಕೇಲ್ ಡಿಬೇಕಿ ಅವರ ಜೀವನಗಾಥೆ. ಇಂಥ ಮತ್ತೊಂದು ಪ್ರಸಂಗ ವೈದ್ಯಕೀಯ ಇತಿಹಾಸದಲ್ಲಿ ಇಲ್ಲ (ಈಗ ಡಿಎನ್‌ಆರ್ ಉಲ್ಲಂಸುವ ಪ್ರಕರಣವು ನಡೆಯಲು ಸಾಧ್ಯವಿಲ್ಲ).