Veena Bhat Column: ದ್ವಾರಕಾಧೀಶನ ರಾಜ್ಯದಲ್ಲಿ
ಇಲ್ಲಿನ ದೇವಸ್ಥಾನವನ್ನು ಜಗತ್ ಮಂದಿರ ಎಂದೂ ಕರೆಯುತ್ತಾರೆ. ಈ ದೇವಾಲಯವು ಭಾರತದ ಗುಜರಾತ್‌ನ ದ್ವಾರಕಾ ನಗರದಲ್ಲಿ, ಗೋಮತಿ ನದಿಯ ತಟದಲ್ಲಿದೆ. ಈ ದೇವಾಲಯವನ್ನು ಸುಮಾರು 2000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಮೂಲ ದೇವಾಲಯವನ್ನು ಕೃಷ್ಣನ ಮೊಮ್ಮಗ ವಜ್ರನಾಭನು ಕೃಷ್ಣನ ವಸತಿ ಸ್ಥಳದ ಮೇಲೆ ನಿರ್ಮಿಸಿದನೆಂದು ನಂಬಲಾಗಿದೆ.


ವೀಣಾ ಭಟ್
ಬೇಸಗೆ ರಜೆಗಳು ಬಂದಿವೆ, ಈ ರಜಾ ದಿನಗಳಲ್ಲಿ ಹೋಗಬಹುದಾದ ಒಂದು ಸೂಕ್ತ ತಾಣವೆಂದರೆ, ಸಮುದ್ರ ತಟದಲ್ಲಿರುವ ದ್ವಾರಕೆ.
ದ್ವಾರಕೆಯಲ್ಲಿ ಎಲ್ಲ ಕೃಷ್ಣಮಯ. ಇಲ್ಲಿಯ ಗಲ್ಲಿಗಳಲ್ಲಿ ಓಡಾಡುತ್ತಿದ್ದಂತೆ ಕೃಷ್ಣ ನಿಮ್ಮನ್ನು ಆವರಿಸಿಕೊಂಡು ಬಿಡುತ್ತಾನೆ. ಇಲ್ಲಿಯ ಅಂಗಡಿಗಳಲ್ಲಿ ಕೃಷ್ಣನ ಬೊಂಬೆಗಳು, ಕೃಷ್ಣನಿಗೆ ಅರ್ಪಿಸುವ ಆಭರಣಗಳು, ಕೃಷ್ಣನ ಉಡುಪುಗಳೇ ಮುಖ್ಯ ಆಕರ್ಷಣೆ. ಕೃಷ್ಣ ಇಲ್ಲಿಯ ರಾಜ, ದ್ವಾರಕಾಧೀಶ... ಇಲ್ಲಿ ದೇವಾಲಯದ ಮುಖ್ಯದ್ವಾರ, ಸುತ್ತುಮುತ್ತಲಿನ ರಸ್ತೆಗಳಲ್ಲಿ ಯಾವಾಗಲೂ ಭಕ್ತರು ಕಿಕ್ಕಿರಿದು ತುಂಬಿರುತ್ತಾರೆ. ಇಲ್ಲಿ ಕೃಷ್ಣ ದ್ವಾರಕಾಧೀಶ ಎಂಬ ಹೆಸರಿನಿಂದ ಪೂಜಿಸಲ್ಪಡು ತ್ತಾನೆ. ಇಲ್ಲಿನ ದೇವಸ್ಥಾನವನ್ನು ಜಗತ್ ಮಂದಿರ ಎಂದೂ ಕರೆಯುತ್ತಾರೆ. ಈ ದೇವಾಲಯವು ಭಾರತದ ಗುಜರಾತ್‌ನ ದ್ವಾರಕಾ ನಗರದಲ್ಲಿ, ಗೋಮತಿ ನದಿಯ ತಟದಲ್ಲಿದೆ.
ಈ ದೇವಾಲಯವನ್ನು ಸುಮಾರು 2000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಮೂಲ ದೇವಾಲಯವನ್ನು ಕೃಷ್ಣನ ಮೊಮ್ಮಗ ವಜ್ರನಾಭನು ಕೃಷ್ಣನ ವಸತಿ ಸ್ಥಳದ ಮೇಲೆ ನಿರ್ಮಿಸಿದನೆಂದು ನಂಬಲಾಗಿದೆ.
ಗೋಮತಿ ನದಿಯ ದಡದಲ್ಲಿರುವ ದ್ವಾರಕಾ ಪಟ್ಟಣವನ್ನು ಪುರಾಣದಲ್ಲಿ ಕೃಷ್ಣನ ರಾಜಧಾನಿ ಎಂದು ವಿವರಿಸಲಾಗಿದೆ. ಮೂಲ ದೇಗುಲವನ್ನ್ನು 1472ರಲ್ಲಿ ಗುಜರಾತಿನ ಸುಲ್ತಾನ ಮಹಮೂದ್ ಬೇಗಡಾ ನಾಶಪಡಿಸಿದನು ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಇದನ್ನೂ ಓದಿ: Naveen Sagar Column: ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್ ಕೂಲ್ ಧೋನಿಗೆ ಅಗ್ನಿಪರೀಕ್ಷೆ !
ನಂತರ ಚಾಲುಕ್ಯ ಶೈಲಿಯಲ್ಲಿ 15 ನೇ -16 ನೇ ಶತಮಾನದಲ್ಲಿ ಮರುನಿರ್ಮಿಸಲಾಯಿತು. ಎಂಟನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದಿಗೂ ಅವರ ಭೇಟಿಗಾಗಿ ದೇವಾಲಯದೊಳಗೆ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಇದನ್ನು ರಾಜಾ ಜಗತ್ ಸಿಂಗ್ ರಾಥೋಡ್ ಪುನರ್ನಿರ್ಮಿಸಿದ್ದರು.
ಈ ಸ್ಥಳವು ಪ್ರಾಚೀನ ನಗರವಾದ ದ್ವಾರಕಾ ಮತ್ತು ಮಹಾಭಾರತದ ಕೃಷ್ಣನೊಂದಿಗೆ ಸಂಬಂಧ ಹೊಂದಿರುವುದರಿಂದ ಪ್ರಮುಖ ತೀರ್ಥಯಾತ್ರಾ ಸ್ಥಳವಾಗಿದೆ. ಇಲ್ಲಿ ಗೋಡೆಗಳ ಮೇಲೆ ಶಂಕರಾ ಚಾರ್ಯರ ಜೀವನ ಚರಿತ್ರೆಯನ್ನು ಬಿಂಬಿಸುವ ವರ್ಣಚಿತ್ರಗಳಿವೆ. ಐದು ಅಂತಸ್ತಿನ ಗೋಪುರವು 72 ಕಂಬಗಳನ್ನು ಹೊಂದಿದೆ. ದೇವಾಲಯಕ್ಕೆ ಎರಡು ಪ್ರಮುಖ ಪ್ರವೇಶದ್ವಾರಗಳಿವೆ. ಮುಖ್ಯ ಪ್ರವೇಶ ದ್ವಾರವನ್ನು‘ಮೋಕ್ಷ ದ್ವಾರ’ ಎಂದು ಕರೆಯಲಾಗುತ್ತದೆ ಮತ್ತು ನಿರ್ಗಮನದ ಬಾಗಿಲನ್ನು‘ಸ್ವರ್ಗ ದ್ವಾರ’ ಎಂದು ಕರೆಯುತ್ತಾರೆ.
ಗರ್ಭಗುಡಿಯಲ್ಲಿ ಮುಖ್ಯ ದೇವತೆ ದ್ವಾರಕಾಧೀಶನಾಗಿದ್ದು, ಇದನ್ನು ವಿಷ್ಣುವಿನ ತ್ರಿವಿಕ್ರಮ ರೂಪ ಎಂದು ಕರೆಯಲಾಗುತ್ತದೆ. ನಾಲ್ಕು ತೋಳುಗಳಿಂದ ನಿರ್ಮಿಸಲಾದ ಕಪ್ಪು ಕಲ್ಲಿನ ಮೂರ್ತಿ ತುಂಬ ಸುಂದರವಾಗಿದೆ. ಮುಖ್ಯ ಬಲಿಪೀಠದ ಎಡಭಾಗದಲ್ಲಿರುವ ಕೋಣೆಯ ಮೇಲೆ ಕೃಷ್ಣನ ಹಿರಿಯ ಸಹೋದರ ಬಲರಾಮನ ದೇವರ ಚಿತ್ರವಿದೆ.
ಬಲಭಾಗದಲ್ಲಿರುವ ಕೊಠಡಿಯು ಪ್ರದ್ಯುಮ್ನ ಮತ್ತು ಅನಿರುದ್ಧ, ಕೃಷ್ಣನ ಮಗ ಮತ್ತು ಮೊಮ್ಮಗನ ಚಿತ್ರಗಳನ್ನು ಹೊಂದಿದೆ. ಮಧ್ಯ ದೇಗುಲದ ಸುತ್ತಲಿನ ಹಲವಾರು ಪುಟ್ಟ ಪುಟ್ಟ ದೇವಾಲಯಗಳಲ್ಲಿ ರಾಧಾ, ಜಾಂಬವತಿ, ಸತ್ಯಭಾಮಾ ಮತ್ತು ಲಕ್ಷ್ಮಿ ದೇವತೆಗಳ ವಿಗ್ರಹಗಳಿವೆ. ದ್ವಾರಕಾಧೀಶನ ಮುಖ್ಯ ದೇಗುಲದ ಮುಂಭಾಗದಲ್ಲಿ ರಾಧಾ ಕೃಷ್ಣ ಮತ್ತು ದೇವಕಿಗೆ ಸಮರ್ಪಿತವಾದ ಎರಡು ಪ್ರತ್ಯೇಕ ದೇವಾಲಯಗಳಿವೆ.
ಧ್ವಜ ಬದಲಾವಣೆ
ದೇವಾಲಯದ ಶಿಖರವು 256 ಅಡಿ ಎತ್ತರವಿದೆ ಮತ್ತು ಸೂರ್ಯ ಮತ್ತು ಚಂದ್ರನ ಚಿಹ್ನೆಗಳನ್ನು ಹೊಂದಿರುವ ದೊಡ್ಡ ಧ್ವಜವನ್ನು ಅದರ ಮೇಲೆ ಹಾರಿಸಲಾಗುತ್ತದೆ. ಧ್ವಜ, ತ್ರಿಕೋನ ಆಕಾರದಲ್ಲಿ 50 ಅಡಿ ಉದ್ದವಿದೆ. ಸೂರ್ಯೋದಯ, ಸೂರ್ಯೋದಯದ ನಂತರ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ - ಹೀಗೆ ಐದು ಬಾರಿ ದ್ವಾರಕಾಧೀಶ ದೇವಾಲಯದ ಧ್ವಜವನ್ನು ವಿಧ್ಯುಕ್ತವಾಗಿ ಬದಲಾಯಿ ಸಲಾಗುತ್ತದೆ. ಧ್ವಜ ಬದಲಾವಣೆಗೆ ಮೇಲೇರಲು ದೇವಾಲಯದ ಒಳಗೆ ಮೆಟ್ಟಿಲುಗಳಿವೆ. ಹೊಸ ಧ್ವಜವನ್ನು ಖರೀದಿಸಿ ಅದನ್ನು ಹಾರಿಸಲು ಭಕ್ತರು ಹರಕೆ ಹೇಳಿಕೊಳ್ಳುತ್ತಾರೆ, ಇದಕ್ಕಾಗಿ ಹಣವನ್ನು ಸಹ ಪಾವತಿಸುತ್ತಾರೆ.
ಭಕ್ತಿಯ ಸಂಕೇತ
ಪ್ರತಿ ದಿನ ನಡೆಯುವ ಧ್ವಜ ಬದಲಾವಣೆಯು ಒಂದು ಪ್ರಮುಖ ವಿದ್ಯಮಾನ. ಇದರ ಹರಕೆಯು ಮುಂದಿನ 2-3 ವರ್ಷಗಳವರೆಗೆ ಧ್ವಜ ಬದಲಾವಣೆಗೆ ಈಗಾಗಲೇ ಮುಂಗಡ ಬುಕಿಂಗ್ ಆಗಿದೆಯಂತೆ. ರೇಷ್ಮೆಯಿಂದ ರಚಿಸಲಾದ ಪ್ರತಿಯೊಂದು ಧ್ವಜವು ಸೂರ್ಯ, ಚಂದ್ರ ಮತ್ತು ಶ್ರೀಕೃಷ್ಣನ ಚಿಹ್ನೆ ಯಂತಹ ಸಾಂಕೇತಿಕ ಲಾಂಛನಗಳನ್ನು ಹೊಂದಿದೆ. ಈ ಮಹತ್ವದ ಘಟನೆಯು ಹಲವಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಧ್ವಜ ಕೇವಲ ಬಟ್ಟೆಯಲ್ಲ, ಇದು ಭಕ್ತಿಯ ಸಂಕೇತ. ದೇಶದ ನಾನಾ ಭಾಗಗಳಿಂದ ಈ ತಿಂಗಳಿನಲ್ಲಿ ದ್ವಾರಕಾಗೆ ಜನರು ಬರುತ್ತಿದ್ದಾರೆ; ಗುಜರಾತ್ ನಲ್ಲಿರುವ ಈ ಪಟ್ಟಣವು ಯಾತ್ರಾ ಸ್ಥಳವೂ ಹೌದು, ಪ್ರವಾಸಿಗರ ಮನ ಗೆಲ್ಲುವ ಊರೂ ಹೌದು.