Nandini Sweet Products: ʼನಂದಿನಿʼಯಿಂದ ಗ್ರಾಹಕರಿಗೆ ಸಿಹಿಸುದ್ದಿ; ದೀಪಾವಳಿ ಪ್ರಯುಕ್ತ ಸಕ್ಕರೆ ರಹಿತ ಸ್ವೀಟ್ಸ್ ಬಿಡುಗಡೆ
ಕರ್ನಾಟಕದ ಪ್ರತಿಷ್ಠಿತ ಮತ್ತು ಹೆಮ್ಮೆಯ ನಂದಿನಿ ಬ್ರ್ಯಾಂಡ್ ದೀಪಾವಳಿ ಪ್ರಯುಕ್ತ ಹೊಸ ಸಕ್ಕರೆ ರಹಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಖೋವಾ ಗುಲಾಬ್ ಜಾಮೂನ್ , ಹಾಲಿನ ಪೇಡಾ, ನಂದಿನಿ ಬೆಲ್ಲದ ಓಟ್ಸ್ ಆ್ಯಂಡ್ ನಟ್ಸ್ ಬರ್ಫಿ ಇವೇ ಹೊಸ ಉತ್ಪನ್ನಗಳು.

-

ಬೆಂಗಳೂರು, ಅ. 15: ಕರ್ನಾಟಕದ ಪ್ರತಿಷ್ಠಿತ ಮತ್ತು ಹೆಮ್ಮೆಯ ನಂದಿನಿ ಬ್ರ್ಯಾಂಡ್ (Nandini Brand) ದೀಪಾವಳಿ ಪ್ರಯುಕ್ತ ಹೊಸ ಸಕ್ಕರೆ ರಹಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ (Nandini Sweet Products). ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್ ಜಾಮೂನ್ , ನಂದಿನಿ ಹಾಲಿನ ಪೇಡಾ, ನಂದಿನಿ ಬೆಲ್ಲದ ಓಟ್ಸ್ ಆ್ಯಂಡ್ ನಟ್ಸ್ ಬರ್ಫಿಯನ್ನು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಕಾಸ ಸೌಧದಲ್ಲಿ ಬುಧವಾರ ಬಿಡುಗಡೆಗೊಳಿಸಿದರು. ಈ ಬಗ್ಗೆ ಕೆಎಂಎಫ್ (KMF) ಮಾಹಿತಿ ನೀಡಿದೆ.
ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 5 ದಶಕಗಳಿಂದ ʼನಂದಿನಿʼ ಬ್ರ್ಯಾಂಡ್ ಮೂಲಕ ರಾಜ್ಯ ಮತ್ತು ಹೊರ ರಾಜ್ಯದ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಪರಿಶುದ್ಧ ಮತ್ತು ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುತ್ತಿದೆ. ನಂದಿನಿ ಬ್ರ್ಯಾಂಡ್ ಮೂಲಕ ಈಗಾಗಲೇ 175ಕ್ಕೂ ಅಧಿಕ ಮಾದರಿಯ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Nandini Milk: ತುಪ್ಪ, ಬೆಣ್ಣೆ ಬೆಲೆ ಇಳಿಕೆ ಹಿಂದೆಯೇ ನಂದಿನಿ ದೇಸಿ ಹಾಲಿನ ದರ ಏರಿಕೆ
2025ರ ದಸರಾ ಹಬ್ಬದ ಸಂದರ್ಭದಲ್ಲಿ 750 ಮೆ.ಟನ್‌ಗಳನ್ನು ನಂದಿನಿ ಸಿಹಿ ತಿಂಡಿ ಮಾರಾಟವಾಗಿತ್ತು. ಕಾಲಕ್ಕೆ ಅನುಗುಣವಾಗಿ ನಂದಿನಿ ತನ್ನ ಉತ್ಪನ್ನಗಳನ್ನು ಅಭಿವೃದ್ದಿಪಡಿಸುತ್ತಲೇ ಬಂದಿದೆ. ಅದರ ಫಲವೇ ಇದೀಗ ಬಿಡುಗಡೆಗೊಳಿಸಿರುವ ಸಕ್ಕರೆ ರಹಿತ ಸಿಹಿ ಉತ್ಪನ್ನಗಳು.
ಪ್ರಸ್ತುತ ಯುವಜನತೆಯಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಹೀಗಾಗಿ ಬಹುತೇಕರು ಸಕ್ಕರೆ ರಹಿತ ಆಹಾರ ಉತ್ಪನ್ನಗಳತ್ತ ಮುಖ ಮಾಡಿದ್ದಾರೆ. ಇವು ಮಧುಮೇಹಿಗಳಿಗೂ ಉತ್ತಮ. ತೂಕ ನಿಯಂತ್ರಣಕ್ಕೆ ಸಹಕಾರಿ. ಹೀಗಾಗಿ ಸಕ್ಕರೆ ರಹಿತ ಸಿಹಿತಿಂಡಿಗಳೂ ಜನಪ್ರಿಯಗೊಳ್ಳುತ್ತಿವೆ. ಈ ಹಿನ್ನೆಲೆಯೊಂದಿಗೆ ಗ್ರಾಹಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಎಂಎಫ್ ಗ್ರಾಹಕರಿಗೆ ಹೊಸ ಸಕ್ಕರೆ ರಹಿತ ಸಿಹಿ ತಿಂಡಿಗಳನ್ನು ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.