ಹಿಂದಿರುಗಿ ನೋಡಿದಾಗ
ನಮಗೆ ತಿಳಿಯದಂತೆಯೇ ನಾವು ವಾಸನಾದ್ರವ್ಯಗಳನ್ನು ಉತ್ಪಾದಿಸಿ, ನಮ್ಮ ಕಣ್ಣ ಮುಂದೆ ಯೇ ಅವುಗಳ ಪರಿಣಾಮ ಕಾಣುತ್ತಿದ್ದರೂ, ನಾವು ಅವುಗಳನ್ನು ತಿಳಿಯದಿರಲು ಸಾಧ್ಯವಿದೆ. ಸಾಮಾನ್ಯವಾಗಿ ಒಬ್ಬರು ಆಕಳಿಸಿದಾಗ ಮತ್ತೊಬ್ಬರು ಆಕಳಿಸುವುದನ್ನು ಗಮನಿಸಿರ ಬಹುದು.
ನಾಯಿ ತನ್ನ ಯಜಮಾನನನ್ನು ಸುಲಭವಾಗಿ ಕಂಡುಹಿಡಿಯುತ್ತದೆ, ಅಂತೆಯೇ ಕಳ್ಳರನ್ನು ಹಿಡಿಯುತ್ತದೆ. ಸೊಳ್ಳೆಗಳು ನಾವೆಲ್ಲೇ ಇದ್ದರೂ ನಮ್ಮನ್ನು ಹುಡುಕಿಕೊಂಡು ಬಂದು ರಕ್ತ ಹೀರುತ್ತವೆ. ಇರುವೆಗಳು ಒಂದರ ಹಿಂದೆ ಒಂದಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತವೆ. ಇವನ್ನೆಲ್ಲಾ ನೋಡಿದಾಗ ತುಸು ಆಶ್ಚರ್ಯವಾಗಬಹುದು.
ಮಾನವ ಮತ್ತೊಬ್ಬ ಮಾನವನೊಂದಿಗೆ ಮಾತಿನ ಮೂಲಕ, ಪಶು-ಪಕ್ಷಿಗಳು ತಮಗೆ ಅರ್ಥವಾಗು ವಂಥ ಶಬ್ದಗಳ ಮೂಲಕ ಸಂಪರ್ಕ ನಡೆಸುತ್ತವೆ. ಇವೆರಡರ ಲಭ್ಯವಿಲ್ಲದ ಕೆಲವು ಜೀವಿಗಳು ವಾಸನಾಯುಕ್ತವಾದ ಹಲವು ಸಾವಯವ ಸಂಕೀರ್ಣ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವು ದರ ಮೂಲಕ ಸಂಪರ್ಕ ನಡೆಸುತ್ತವೆ.
ಒಂದು ಪ್ರಾಣಿ ಉತ್ಪಾದಿಸಿದ ವಾಸನೆಯನ್ನು ಮತ್ತೊಂದು ಪ್ರಾಣಿ ಘ್ರಾಣಿಸಿ ಅದರ ಅರ್ಥವನ್ನು ತಿಳಿಯಬಲ್ಲದು. ಈ ರಾಸಾಯನಿಕ ವಸ್ತುಗಳು ದೇಹದಲ್ಲಿ ಉತ್ಪಾದಿತವಾಗುವ ಕಾರಣ ದೈಹಿಕ ರಾಸಾಯನಿಕಗಳು (semio chemicals) ಎಂದೂ, ಇವುಗಳಿಂದ ನಡೆಯುವ ಸಂಪರ್ಕವನ್ನು ‘ದೇಹೋ- ರಾಸಾಯನಿಕ ಸಂಪರ್ಕ’ (Semio-Chemic Communication) ಎಂದೂ ಕರೆಯ ಲಾಗುತ್ತದೆ. ಈ ರಾಸಾಯನಿಕ ವಸ್ತುಗಳನ್ನು ವಾಸನಾದ್ರವ್ಯಗಳೆಂದು ( Pheromones ) ಕರೆಯ ಲಾಗುತ್ತದೆ. ವಾಸನಾದ್ರವ್ಯಗಳ ಬಗ್ಗೆ ಕೀಟಗಳಲ್ಲಿ ಹೆಚ್ಚಿನ ಅಧ್ಯ ಯನವನ್ನು ಮಾಡಲಾಗಿದೆ. ಈ ದ್ರವ್ಯಗಳ ಅಸ್ತಿತ್ವವನ್ನು ಇತರ ಪ್ರಾಣಿಗಳಲ್ಲಿ ಕಂಡುಹಿಡಿದಿದ್ದು, ಮಾನವರಲ್ಲಿಯೂ ನಿರೀಕ್ಷಿಸ ಲಾಗಿದೆ.
ವಾಸನಾದ್ರವ್ಯಗಳು ನಡೆಸುವ ಕಾರ್ಯದ ಆಧಾರದ ಮೇಲೆ ಅವುಗಳನ್ನು ಲೈಂಗಿಕ ವಾಸನಾದ್ರವ್ಯ ( Sex Pheromone), ಎಚ್ಚರಿಕಾ ವಾಸನಾದ್ರವ್ಯ ( Alarming Pheromone), ಸಮಷ್ಟಿ ವಾಸನಾದ್ರವ್ಯ ( Aggregating phero mones ) ಮಾರ್ಗಸೂಚಕ ವಾಸನಾದ್ರವ್ಯ ( Trial making pheromone ) ಕ್ಷೇತ್ರಸೂಚಕ ವಾಸನಾದ್ರವ್ಯ ( Territory marking phero mone) ವಿಕರ್ಷಕ ವಾಸನಾದ್ರವ್ಯ ( repellants ) ಎಂಬುದಾಗಿ ವಿಂಗಡಿಸಲಾಗಿದೆ.
ಇದನ್ನೂ ಓದಿ: Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !
ಮಾರ್ಗಸೂಚಕಗಳು: ಇರುವೆಗಳು ಒಂದರ ಹಿಂದೆ ಒಂದಾಗಿ ಶಿಸ್ತಿನ ಸಿಪಾಯಿಗಳಂತೆ ನಡೆಯು ತ್ತಿರುವುದನ್ನು ನೀವು ಗಮನಿಸಿರಬಹುದು. ಅವುಗಳು ನಡೆಯುತ್ತಿರುವ ಮಾರ್ಗವನ್ನು ನಮ್ಮ ಬೆರಳಿನಿಂದ ಅಡ್ಡಡ್ಡವಾಗಿ ಒರೆಸಿ ಬಿಟ್ಟಾಗ ಅವು ದಾರಿ ತಿಳಿಯದೆ ಅತ್ತಿತ್ತ ಚದುರುತ್ತವೆ, ಕಾರಣ ಮಾರ್ಗಸೂಚಕಗಳು ಸಿಗದಿರುವುದು.
ಇರುವೆಯ ಹಿಂಭಾಗದಲ್ಲಿ ಕಿಬ್ಬೊಟ್ಟೆಯ ತಳದಲ್ಲಿ ವಾಸನಾ ದ್ರವ್ಯೋತ್ಪಾದಕ ಗ್ರಂಥಿಗಳಿರುತ್ತವೆ. ಉತ್ಪಾದಿತ ವಾದ ದ್ರವ್ಯವು ಇರುವೆಯು ನೆಲದ ಮೇಲೆ ನಡೆಯುವಾಗ ಒಂದು ಮುಳ್ಳಿನ ಮುಖಾಂ ತರ ಹರಿದುಕೊಂಡು ಹೋಗುತ್ತದೆ- ಲೇಖನಿಯಿಂದ ಶಾಯಿ ಹರಿಯುವ ಹಾಗೆ. ಈ ಮಾರ್ಗ ಸೂಚಕವು ಉತ್ಪಾದಿಸಿದ ವಾಸನೆಯನ್ನು ಗುರುತುಹಿಡಿದುಕೊಂಡು ಮತ್ತೊಂದು ಇರುವೆಯು ಮೊದಲಿನ ಇರುವೆ ಹೋಗಿರುವ ಸ್ಥಳವನ್ನು ತಲುಪಬಲ್ಲದು. ಈ ಇರುವೆ ಹೋಗುವಾಗಲೂ ಮಾರ್ಗ ಸೂಚಕಗಳನ್ನು ಹರಿಸಿಕೊಂಡೇ ಹೋಗುತ್ತದೆ.
ಇದನ್ನು ಸರಿಸಿ ಮತ್ತೊಂದು ಇರುವೆ ಬರುತ್ತದೆ. ಈ ಕ್ರಿಯೆ ಹೀಗೆ ಅವ್ಯಾಹತವಾಗಿ ನಡೆಯುವ ಕಾರಣ ಇರುವೆಗಳು ಒಂದರ ಹಿಂದೆ ಒಂದು ನಡೆಯುವಂತೆ ಕಾಣುತ್ತದೆ.
ಒಂದು ಜೇನುನೊಣವು ಹೂಗಳಿರುವ ಸ್ಥಳವನ್ನು ಕಂಡುಹಿಡಿದುಕೊಂಡು, ಗೂಡಿಗೆ ಬರುವಾಗ ಮಾರ್ಗ ಸೂಚಕಗಳನ್ನು ಸಿಂಪಡಿಸಿಕೊಂಡು ಬಂದು, ಹುಟ್ಟಿನ ಸುತ್ತಲೂ ಒಂದು ರೀತಿಯ ನಾಟ್ಯ ವನ್ನಾಡಲಾರಂಭಿಸುತ್ತದೆ. ಆಗ ಹುಟ್ಟಿನಲ್ಲಿರುವ ಇತರ ನೊಣಗಳು ಈ ನೊಣವನ್ನು ಹಿಂಬಾಲಿಸು ತ್ತವೆ. ಸಿಂಪಡಿಸಿಕೊಂಡು ಬಂದ ಮಾರ್ಗಸೂಚಕಗಳು ಹೂಗಳಿರುವ ಸ್ಥಳವನ್ನು ಸೇರಲು ಅದು ಸಹಾಯಕವಾಗುತ್ತವೆ.
ಎಚ್ಚರಿಕಾ ವಾಸನಾದ್ರವ್ಯಗಳು: ಅಪಾಯದ ಸನ್ನಿವೇಶಗಳಲ್ಲಿ ಕೀಟಗಳು ಇದನ್ನು ಉತ್ಪಾದಿಸು ತ್ತವೆ. ಗೂಡಿನಲ್ಲಿರುವ ಒಂದು ಇರುವೆಯನ್ನು ಕೆದಕಿದರೆ ಸಾಕು, ಅಲ್ಲಿರುವ ಇರುವೆಗಳೆಲ್ಲಾ ಗಲಿಬಿಲಿಗೊಳ್ಳುತ್ತವೆ. ಇದಕ್ಕೆ ಕಾರಣ ಕೆಣಕಲ್ಪಟ್ಟ ಇರುವೆಯ ಎಚ್ಚರಿಕಾ ವಾಸನಾದ್ರವ್ಯ. ಇದನ್ನು ಘ್ರಾಣಿಸಿದ ಇತರ ಇರುವೆಗಳು ತಕ್ಷಣ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ.
ಜೇನುನೊಣ ಕೆರಳಿ ಕಚ್ಚಿದಾಗ, ಮುಳ್ಳಿನೊಡನಿರುವ ಅನೇಕ ಏಕಕೋಶ ಗ್ರಂಥಿಗಳು ‘ಐಸೋ ಅಮೈಲ್ ಅಸಿಟೇಲ್’ ಎಂಬ ವಾಸನಾದ್ರವ್ಯವನ್ನು ಉತ್ಪಾದಿಸುತ್ತದೆ. ಇದನ್ನು ಘ್ರಾಣಿಸಿದ ಇತರ ನೊಣಗಳು, ಅದೇ ವ್ಯಕ್ತಿಯನ್ನು, ಅದೇ ಸ್ಥಳದಲ್ಲಿ ಮುತ್ತಿ ಕಚ್ಚಲಾರಂಭಿಸುತ್ತವೆ.
ಸಮಷ್ಟಿ ವಾಸನಾದ್ರವ್ಯಗಳು: ಲೈಕಸ್ ಲೋರಿಪೆಸ್ ಎಂಬ ಜೀರುಂಡೆಯು ಇದನ್ನು ಉತ್ಪಾದಿಸು ತ್ತದೆ. ಇದು ಬಿಡುಗಡೆಯಾದ ಕೂಡಲೆ, ಎಲ್ಲೆಲ್ಲಿರುವ ಜೀರುಂಡೆಗಳೆಲ್ಲ ಒಂದೆಡೆ ಕಲೆಯಲಾ ರಂಭಿಸುತ್ತವೆ. ಸೋಲೆನೋಪ್ಸಿಸ್ ಪೆಸ್ಸಿಮ ಎಂಬ ಜಾತಿಯ ಕೆಲಸಗಾರ ಇರುವೆ ಬಹುಶಃ ಇಂಗಾಲದ ಡೈ-ಆಕ್ಸೈಡನ್ನು ಉತ್ಪಾದಿಸಿ, ಇರುವೆಗಳನ್ನೆಲ್ಲ ಒಂದೆಡೆ ಕಲೆಯುವಂತೆ ಮಾಡುತ್ತದೆ.
ವಿಕರ್ಷಿಕ ವಾಸನಾದ್ರವ್ಯಗಳು: ಒಂದೇ ಜಾತಿಯ ಕೀಟಗಳ ಸಂಖ್ಯೆ, ಒಂದೇ ಕಡೆ ಹೆಚ್ಚಾದಾಗ ಇದು ಉತ್ಪಾದಿಸಲ್ಪಡುತ್ತದೆ. ಆಗ ಕೀಟಗಳು ಆ ಸ್ಥಳದಿಂದ ಬೇರೆ ಬೇರೆ ಕಡೆಗೆ ಪ್ರಯಾಣ ಮಾಡುತ್ತವೆ. ಟ್ರೈಟೋಲಿಯಂ ಕ್ಯಾಸ್ಟೆನಂ ಮತ್ತು ಟ್ರೈಟೋಲಿಯಂ ಕಾರ್-ಸಂ ಇದಕ್ಕೆ ಉತ್ತಮ ಉದಾಹರಣೆಗಳು.
ಇರುವೆಯು ಸತ್ತು ಕೊಳೆಯಲಾರಂಭಿಸಿದಾಗ ಒಂದು ರೀತಿಯ ವಾಸನಾದ್ರವ್ಯ ಉತ್ಪಾದನೆ ಯಾಗುತ್ತದೆ. ಆಗ ಕೆಲಸಗಾರ ಇರುವೆಗಳು ಸತ್ತ ಇರುವೆಯ ಹೆಣವನ್ನು ಗೂಡಿನಿಂದ ಹೊರಗಿರುವ ‘ಸ್ಮಶಾನಕ್ಕೆ’ ಎಳೆದುಕೊಂಡು ಬರುತ್ತವೆ. ಈ ಸತ್ತ ಇರುವೆಯಿಂದ ಹೊರತೆಗೆದ ವಾಸನಾ ದ್ರವ್ಯವನ್ನು ಬದುಕಿರುವ ಇರುವೆಯ ದೇಹಕ್ಕೆ ಬಳಿದರೆ, ಕೆಲಸಗಾರ ಇರುವೆಗಳು ಅದನ್ನು ಸತ್ತಿದೆಯೆಂದೇ ಭಾವಿಸಿ, ‘ಸ್ಮಶಾನಕ್ಕೆ’ ಎಳೆದು ತರುತ್ತವೆ.
ಒಂದು ವೇಳೆ ಆ ಇರುವೆ ಮತ್ತೆ ಗೂಡಿನೊಳಗೆ ಪ್ರವೇಶಿಸಿತೆಂದರೆ, ಮತ್ತೆ ಅದನ್ನು ಸ್ಮಶಾನ ಕ್ಕೆಳೆದು ಕೊಂಡು ಬಂದು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತವೆ. ಇರುವೆಯ ಮೈ ಮೇಲೆ ಆ ರಾಸಾಯನಿಕ ದ್ರವ್ಯ ಇರುವವರೆಗೂ ಈ ಕ್ರಿಯೆ ನಡೆಯುತ್ತಲೇ ಇರುತ್ತದೆ. ಈ ದ್ರವ್ಯವನ್ನು ಒಂದು ಕಲ್ಲಿನ ಚೂರಿಗೆ ಬಳಿದರೂ, ಮೇಲ್ಕಂಡ ಪರಿಣಾಮವನ್ನೇ ಕಾಣಬಹುದು.
ಲೈಂಗಿಕ ವಾಸನಾದ್ರವ್ಯಗಳು: ಗಂಡು ಕೀಟ, ಹೆಣ್ಣು ಕೀಟವಿರುವ ಸ್ಥಳವನ್ನು ಗುರುತು ಹಿಡಿಯು ವುದು ಲೈಂಗಿಕ ವಾಸನಾದ್ರವ್ಯಗಳ ಸಹಾಯದಿಂದ. ಇವು ಲೈಂಗಿಕಾರ್ಷಣೆಯನ್ನು ಮಾಡಬಲ್ಲವು. ಅಂತೆಯೇ ಕ್ರಿಯೆ ಗಳನ್ನೂ ಉತ್ತೇಜಿಸಬಲ್ಲವು.
ವಿಜ್ಞಾನಿಗಳು ರೇಷ್ಮೆ ಪತಂಗ ( Silk moth )ಮತ್ತು ಜಿಪ್ಸಿ ಪತಂಗಗಳ (Gypsy moth) ಮೇಲೆ ಪ್ರಯೋಗ ನಡೆಸಿ, ಕ್ರಮವಾಗಿ ‘ಬಾಂಬಿಕೋಲ್’ ಮತ್ತು ‘ಜಿಪ್ಲೂರ್’ ಎಂಬ ಲೈಂಗಿಕ ವಾಸನಾ ದ್ರವ್ಯಗಳನ್ನು ಕಂಡು ಹಿಡಿದಿದ್ದಾರೆ. ಸುಮಾರು ಐದು ಲಕ್ಷ ಜಿಪ್ಸಿ ಪತಂಗಗಳಿಂದ ಕೇವಲ 20 ಮಿಲಿ ಗ್ರಾಂ.ನಷ್ಟು ಜಿಪ್ಲೂರನ್ನು ಪಡೆಯಲಾಯಿತು.
ಅಂದರೆ ಪ್ರತಿಯೊಂದು ಪತಂಗದಲ್ಲೂ 0.01 ಮೈಕ್ರೋಗ್ರಾಂ.ನಷ್ಟಿದೆಯೆಂದಾಯಿತು. ಇಷ್ಟು ಅಲ್ಪ ಪ್ರಮಾಣದ ವಾಸನಾದ್ರವ್ಯ ಸುಮಾರು ಎರಡು ಮೈಲಿಗೂ ಮಿಕ್ಕಿ ದೂರದಲ್ಲಿರುವ ಒಂದು ಬಿಲಿಯನ್ʼನಷ್ಟು ಗಂಡು ಪತಂಗಗಳನ್ನು ಆಕರ್ಷಿಸಬಲ್ಲದು. ಈ ವಾಸನೆ ಎಷ್ಟು ಪ್ರಬಲ ವಾಗಿರುತ್ತದೆಯೆಂದರೆ, ಈ ವಾಸನಾದ್ರವ್ಯವನ್ನು ಯಾವುದಾದರೂ ಮರ ಅಥವಾ ಪ್ಲಾಸ್ಟಿಕ್ಕಿನ ಪತಂಗಗಳಿಗೆ ಸವರಿದರೆ, ಗಂಡು ಅದನ್ನೇ ನಿಜವಾದ ಹೆಣ್ಣು ಪತಂಗವೆಂದು ಗಣಿಸಿ ಅದರೊಡನೆ ಸಂಭೋಗ ಮಾಡಲೆತ್ನಿಸುತ್ತದೆ.
ಇದನ್ನು ಕಂಡ ವಿಜ್ಞಾನಿಗಳು ದೊಡ್ಡ ದೊಡ್ಡ ಬಲೆಗಳಲ್ಲಿ ಈ ಲೈಂಗಿಕ ವಾಸನಾದ್ರವ್ಯಗಳನ್ನಿಟ್ಟು ಗಂಡುಗಳು ತಾವಾಗಿಯೇ ಅದರಲ್ಲಿ ಬಂದು ಬೀಳುವಂತೆ ಮಾಡುತ್ತಾರೆ. ಇದರಿಂದ ಬೆಳೆಗಳನ್ನು ನಾಶ ಮಾಡುವ ಈ ಕೀಟಗಳನ್ನು ನಿಯಂತ್ರಿಸಬಹುದಾಗಿದೆಯಲ್ಲದೆ, ಅವುಗಳ ವಂಶಾಭಿವೃದ್ಧಿ ಆಗದಂತೆ ತಡೆಗಟ್ಟಬಹುದಾಗಿದೆ.
ಜೇನು ನೊಣಗಳಲ್ಲಿ ರಾಣಿಜೇನು, ರಾಣಿ ದ್ರವ್ಯ ( Queens substance ) ಎಂಬ ವಾಸನಾ ದ್ರವ್ಯವನ್ನು ಉತ್ಪಾದಿಸುತ್ತದೆ. ಇದನ್ನು ಸೇವಿಸಿದಾಗ, ಕೆಲಸಗಾರ ನೊಣಗಳ ಲೈಂಗಿಕಾಂಗಗಳು ಬೆಳೆಯುವುದಿಲ್ಲ. ರಾಣಿ ನೊಣವು ಗಂಡಿನೊಡನೆ ಮಿಲನವಾಗಲು ಹಾರಿದಾಗ ( Nuptial flight ) ಇದು ಗಂಡು ನೊಣವನ್ನು ( Drones ) ಆಕರ್ಷಿಸುತ್ತದೆ.
ಡನೇಯ್ಡ್ ಗಂಡು ಚಿಟ್ಟೆ ಕುಂಚದಂಥ ಸ್ಪರ್ಶಾಂಗವನ್ನು ( antenna ) ಹೊಂದಿರುತ್ತದೆ. ಹಾರುವಾಗ ಹೆಣ್ಣಿನ ಸ್ಪರ್ಶಾಂಗವನ್ನು ಕುಂಚದಿಂದ ಹೊಡೆಯುತ್ತದೆ. ಈ ಹೊಡೆಯುವ ಕ್ರಿಯೆ, ಹೆಣ್ಣು ಸಂಭೋಗಕ್ಕೆ ಅಣಿಯಾಗುವವರೆಗೂ ನಡೆಯುತ್ತಲೇ ಇರುತ್ತದೆ.
ಕೀಟಗಳು ವಾಸನಾದ್ರವ್ಯೋತ್ಪಾದಕ ಗ್ರಂಥಿಗಳನ್ನು ದವಡೆಯ ಬಳಿ, ಗುದದ ಬಳಿ ಅಥವ ಮುಳ್ಳಿ ನಲ್ಲಿ ಹೊಂದಿದ್ದು, ಅಲ್ಲಿಂದಲೇ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಗಾಳಿಯಲ್ಲಿ ಆವಿಯಾಗಿ ತೇಲಿಹೋದಾಗ ಬೇರೆ ಕೀಟಗಳು, ಸ್ಪರ್ಶಾಂಗಗಳ ಮುಖಾಂತರ ಅದನ್ನು ಘ್ರಾಣಿಸಿ ಅದು ಸಾರುವ ಸಂದೇಶವನ್ನು ತಿಳಿಯುತ್ತವೆ.
ಗಂಡಿನ ಸ್ಪರ್ಶಾಂಗವು ಹೆಣ್ಣಿನದಕ್ಕಿಂತ ತುಸು ಭಿನ್ನವಾಗಿರುವ ಕಾರಣ ಇದು ವಾಸನೆಯನ್ನು ತತ್‌ಕ್ಷಣ ಗ್ರಹಿಸಬಲ್ಲದು. ಕೆಲವು ವೇಳೆ ಈ ವ್ಯಾಪಾರವು ರಸನೇಂದ್ರಿಯದ (Gustatory) ಮೂಲಕ ವೂ ನಡೆಯಬಹುದು. ವಾಸನಾದ್ರವ್ಯಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು.
ಒಂದು ಜಾತಿಯ ಜೀವಿಯು ಉತ್ಪಾದಿಸಿದ ವಾಸನಾದ್ರವ್ಯವನ್ನು ಅದೇ ಜಾತಿಯ ಮತ್ತೊಂದು ಜೀವಿಯು ತಿಳಿಯಲು ಸಾಧ್ಯವಿರುವಂಥವು ( Intra specific ) ಮತ್ತು ಒಂದು ಜಾತಿ ಉತ್ಪಾದಿಸಿದು ದನ್ನು ಇತರ ಜೀವಿಗಳೂ ತಿಳಿಯಬಲ್ಲಂಥವು ( Interspecific).
ಉತ್ಪಾದನೆಯಾದ ವಾಸನಾದ್ರವ್ಯವು ಬಿಡುಗಡೆಯಾದ ಕೂಡಲೇ ಪ್ರಭಾವ ಬೀರಲಾರಂಭಿಸಿದರೆ ( Releaser ) ಅದು ನೇರವಾಗಿ ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರುವುದರಿಂದ ಪರಿಣಾಮ ತತ್‌ಕ್ಷಣ ಉಂಟಾಗುತ್ತದೆ. ಉದಾಹರಣೆಗೆ, ಎಚ್ಚರಿಕಾ ವಾಸನಾದ್ರವ್ಯಗಳು. ಅಥವಾ ಬಿಡುಗಡೆಯಾಗಿ ಸ್ವಲ್ಪಕಾಲದ ನಂತರ ಪ್ರಭಾವ ಬೀರಲಾರಂಭಿಸಿದರೆ ( primer ) ಅದು ನಿರ್ನಾಳ ಗ್ರಂಥಿಗಳು ( endocrine glands ) ಮತ್ತು ಜನನಾಂಗಳ ಮೇಲೆ ಪ್ರಭಾವ ಬೀರುತ್ತದೆ.
ಇದಕ್ಕೆ ರಾಣಿದ್ರವ್ಯ ಉತ್ತಮ ಉದಾಹರಣೆ. ಕೆಲವು ವಾಸನಾದ್ರವ್ಯಗಳು ಎರಡು ಕಾರ್ಯಗಳನ್ನೂ ಒಟ್ಟಾಗಿ ಮಾಡಬಲ್ಲವು. ಇತರೆ ಪ್ರಾಣಿಗಳಲ್ಲಿ, ಸೀಗಡಿ, ಮೀನು, ಸಲಾ ಮ್ಯಾಂಡರ್, ಕಪ್ಪೆ, ಹಾವು ಮುಂತಾದ ಪ್ರಾಣಿಗಳೂ ವಾಸನಾದ್ರವ್ಯಗಳನ್ನು ಉತ್ಪಾದಿಸುತ್ತವೆ ಎನ್ನಲಾಗಿದೆ.
ಕೆಲವು ಪ್ರಾಣಿಗಳು ಅತ್ಯಂತ ವಿಕಾಸ ಹೊಂದಿದ್ದರೂ, ಲೈಂಗಿಕಾಕರ್ಷಣೆಗೆ ವಾಸನಾದ್ರವ್ಯಗಳ ಮೊರೆ ಹೋಗುತ್ತವೆ. ಉದಾಹರಣೆಗೆ ಕಸ್ತೂರಿಮೃಗ ( Musk deer ) ವಾಸನಾಯುಕ್ತ ಕಸ್ತೂರಿಯನ್ನು ( Muscome ) ಪಡೆದಿರುತ್ತದೆ. ಇದು ಲೈಂಗಿಕಾಕರ್ಷಣೆಯನ್ನು ಅವುಗಳಲ್ಲಿ ಉಂಟುಮಾಡುತ್ತದೆ.
ಅಂತೆಯೇ ಪುನಗಿನ ಬೆಕ್ಕು ( Vivera Zibetha ) ಸಿವೆಟೋನ್ ಎಂಬ ವಾಸನಾ ದ್ರವ್ಯವನ್ನು ಉತ್ಪಾದಿಸುತ್ತದೆ. ಇದು ಲೈಂಗಿಕ ಮತ್ತು ಎಚ್ಚರಿಕಾ ವಾಸನಾದ್ರವ್ಯವಾಗಿ ಕಾರ್ಯನಿರ್ವಹಿಸುತ್ತದೆ. ಮೊಸಳೆಗಳೂ ಮಿಲನದ ಕಾಲದಲ್ಲಿ ವಾಸನಾದ್ರವ್ಯಗಳನ್ನು ಉತ್ಪಾದಿಸುತ್ತವೆನ್ನಲಾಗಿದೆ.
ಅಮೆರಿಕದಲ್ಲಿರುವ ಅಲೆಗೇಟರುಗಳು (ಮೊಸಳೆ ಜಾತಿಗೆ ಸೇರಿದ ಪ್ರಾಣಿ) ಕಾರಂಜಿಯ ರೂಪದಲ್ಲಿ ವಾಸ ನಾದ್ರವ್ಯವನ್ನು ಚಿಮ್ಮುತ್ತವೆ. ಈ ವಾಸನೆ ಮೈಲಿಗಟ್ಟಲೆ ಹರಡಿರುತ್ತದೆ. ಇವು ತಮ್ಮ ವಾಸ ಸ್ಥಾನವನ್ನು ಸೂಚಿಸಲು ಕ್ಷೇತ್ರ ಸೂಚಕಗಳನ್ನು (Territory marking) ಉತ್ಪಾದಿಸುತ್ತವೆ.
ಇಲಿಯ ಮೂತ್ರದಲ್ಲಿ ಪ್ರಾಥಮಿಕ ವಾಸನಾದ್ರವ್ಯಗಳಿರುವುದನ್ನು ಕಂಡುಹಿಡಿಯಲಾಗಿದೆ. ರಜಸ್ವಲೆಯಾದ ಹೆಣ್ಣುಕಪಿ, ಆಡುಗಳ ಸುತ್ತಲೂ ಇರುವ ಗಂಡು ಕಪಿ, ಆಡುಗಳು ಹೆಚ್ಚಾಗಿ ಲೈಂಗಿಕ ಪ್ರಚೋದನೆಗೊಳಗಾಗುವುದನ್ನು ಗಮನಿಸಲಾಗಿದೆ. ಇದಕ್ಕೆ ಕಾರಣ ಹೆಣ್ಣಿನಿಂದ ಉತ್ಪಾದನೆ ಯಾಗುತ್ತಿರಬಹುದಾದ ಲೈಂಗಿಕ ವಾಸನಾದ್ರವ್ಯವೆನ್ನಲಾಗಿದೆ.
ಮಾನವರಲ್ಲಿ: ನಾಯಿಗಳು ಒಬ್ಬ ಮನುಷ್ಯನು ಉಪಯೋಗಿಸಿದ ಕರವಸ್ತ್ರ, ಕೈಕೋಲು ಮುಂತಾ ದವುಗಳ ವಾಸನೆಯನ್ನು ನೋಡಿ, ಅವರನ್ನು ಹಿಡಿಯಬಲ್ಲದು (ಆದರೆ ಅವಳಿ ಮಕ್ಕಳ ವ್ಯತ್ಯಾಸ ವನ್ನು ಗುರುತು ಹಿಡಿಯಲಾರವು). ಅಂದರೆ, ನಾಯಿಗಳು ಹಿಡಿಯಬಲ್ಲಂಥ ಯಾವುದೋ ಒಂದು ವಾಸನಾದ್ರವ್ಯವನ್ನು ಮಾನವ ಉತ್ಪಾದಿಸುತ್ತಿದ್ದಾನೆ ಎಂದಾಯಿತಲ್ಲವೆ? ಈ ವಾಸನೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತಿರುತ್ತದೆ.
ಇದನ್ನು ಮನುಷ್ಯ ಗುರುತಿಸಲಾರ. ಇದು ಅವನು ಸೇವಿಸುವ ಆಹಾರ, ಉಡುವ ಬಟ್ಟೆ, ದೈನಂದಿನ ಚಟುವಟಿಕೆಗಳನ್ನು ಅನುಸರಿಸಿರುತ್ತದೆ. ನಾವು ಎಲ್ಲೇ ಇದ್ದರೂ ನಮ್ಮನ್ನು ಹುಡುಕಿಕೊಂಡು ಬಂದು ಕಚ್ಚುವ ಸೊಳ್ಳೆಗಳು, ನಮ್ಮ ಬೆವರಿನಲ್ಲಿ ಉತ್ಪಾದನೆಯಾಗುವ ಹಲವು ರಾಸಾಯನಿಕ ವಸ್ತುಗಳ ವಾಸನೆಯನ್ನು ಗುರುತು ಹಿಡಿದುಕೊಂಡು ಬರುತ್ತವೆ.
ಹಳದೀ ಜ್ವರಕಾರಕ ಸೊಳ್ಳೆಗಳು ( Ades agyptei ) ಬೆವರಿನಲ್ಲಿರುವ ಎಲ್-ಲ್ಯಾಕ್ಟಿಕ್ ಆಮ್ಲವನ್ನು ಗ್ರಹಿಸಿ ಕೊಂಡು ಬರುತ್ತವೆ. ಜತೆಗೆ ಬೆವರಿನಲ್ಲಿರುವ ಇಂಗಾಲದ ಡಯಾಕ್ಸೈಡ್ ಸಹ ಈ ಕ್ರಿಯೆಯಲ್ಲಿ ಸಹಕರಿಸುತ್ತದೆ. ಸೊಳ್ಳೆಗಳು ಗಂಡಸರಿಗಿಂತಲೂ ಹೆಂಗಸರನ್ನು ಕಾಡುವುದು ಹೆಚ್ಚು. ಕಾಡುವ ಪ್ರಮಾಣ ಆಕೆಯ ಋತು ಚಕ್ರವನ್ನು ( Menstrueal cycle) ಅವಲಂಬಿಸಿರುತ್ತದೆ. ಅವು ಋತುಚಕ್ರದ 13-18 ದಿವಸಗಳಲ್ಲಿ ಕಾಡುವುದು ಹೆಚ್ಚು.
ನಮಗೆ ತಿಳಿಯದಂತೆಯೇ ನಾವು ವಾಸನಾದ್ರವ್ಯಗಳನ್ನು ಉತ್ಪಾದಿಸಿ, ನಮ್ಮ ಕಣ್ಣ ಮುಂದೆಯೇ ಅವುಗಳ ಪರಿಣಾಮ ಕಾಣುತ್ತಿದ್ದರೂ, ನಾವು ಅವುಗಳನ್ನು ತಿಳಿಯದಿರಲು ಸಾಧ್ಯವಿದೆ. ಸಾಮಾನ್ಯ ವಾಗಿ ಒಬ್ಬರು ಆಕಳಿಸಿದಾಗ ಮತ್ತೊಬ್ಬರು ಆಕಳಿಸುವುದನ್ನು ಗಮನಿಸಿರಬಹುದು.
ಆಕಳಿಸಿದಾಗ ಉತ್ಪಾದನೆಯಾಗುವ, ಆವಿಯಾಗಬಲ್ಲ ಯಾವುದಾದರೂ ವಾಸನಾದ್ರವ್ಯ ಇದಕ್ಕೆ ಕಾರಣವಾಗಿರಬಹುದೇ? ಅಂತೆಯೇ ಅಳುವಾಗ, ನಗುವಾಗ, ಸೀನುವಾಗ, ಕೆಮ್ಮುವಾಗ, ಕೆರೆಯುವಾಗ ಅನೇಕ ವಾಸನಾದ್ರವ್ಯಗಳು ಉತ್ಪಾದನೆಯಾಗುತ್ತಿರ ಬಹುದು. ಇದರ ಬಗ್ಗೆ ವಿವರವಾದ ಸಂಶೋ ಧನೆ ಅಗತ್ಯವಿದೆ.
ಮಾನವರಲ್ಲಿ ವಾಸನಾದ್ರವ್ಯವ್ಯೋತ್ಪಾದಕ ಗ್ರಂಥಿಗಳು ಇನ್ನೂ ಪ್ರಾಥಮಿಕಾವಸ್ಥೆಯಲ್ಲೇ ಇವೆಯೆನ್ನಲಾಗಿದೆ. ಇಂಥ ಗ್ರಂಥಿಗಳು, ಮಾನವರಲ್ಲಿ ತಲೆಯಿಂದ ಕಾಲಿನವರೆಗೂ ಹರಡಿವೆ. ಕಂಕುಳ ಗ್ರಂಥಿಗಳು, ಸ್ತನ ತೊಟ್ಟಿನ ಸುತ್ತಲಿರುವ ಕೆಂಪಾದ ಪ್ರದೇಶದಲ್ಲಿರುವ ಗ್ರಂಥಿಗಳು, ತುಟಿಯಲ್ಲಿನ ಗ್ರಂಥಿಗಳು, ಲೈಂಗಿಕಾಂಗಗಳ ಸುತ್ತಲಿರುವ ಗ್ರಂಥಿಗಳು, ಕುತ್ತಿಗೆ ಸುತ್ತಲಿರುವ ಗ್ರಂಥಿಗಳು, ಶ್ರವಣನಳಿಕೆಯಲ್ಲಿನ ಗುಗ್ಗುತ್ಪಾದಕ ಗ್ರಂಥಿಗಳು, ಕಣ್ಣು ರೆಪ್ಪೆಯಲ್ಲಿನ ಗ್ರಂಥಿಗಳು ಇವುಗಳಲ್ಲಿ ಮುಖ್ಯವಾದವು.
ಇಲ್ಲಿ ನಾವು ಗಮನಿಸಬಹುದಾದ ಒಂದು ಅಂಶವೆಂದರೆ ಭಾರತೀಯ ಪ್ರಾಚೀನ ಕಾಮಶಾಸ್ರ್ತಜ್ಞ ರಾದ ವಾತ್ಸಾಯನ, ನಂದಿಕೇಶ, ಸಾಣಿಕಾಪುತ್ರ ಮುಂತಾದವರು ಮೇಲೆ ತಿಳಿಸಿದ ಅಂಗಾಂಗಗಳಿಗೆ ಪ್ರಾಮುಖ್ಯವನ್ನು ನೀಡಿದ್ದು, ಅವುಗಳನ್ನು ಕಾಮೋತ್ತೇಜಕ ಅಂಗಾಂಗಗಳೆಂದು ಪರಿಗಣಿಸಿರುವುದು. ಇವುಗಳಿಂದ ಉತ್ಪಾದನೆಯಾಗುವ ವಾಸನೆಯು ಗಂಡಸರಲ್ಲಿ ಕಾಮವನ್ನು ಕೆರಳಿಸುತ್ತದೆ.
ಅಂತೆಯೇ ದೇಹದ ವಾಸನೆಯ ಆಧಾರದ ಮೇಲೆ ಅವರು ಮಾನವರನ್ನು 4 ಮುಖ್ಯ ಗುಂಪುಗಳ ನ್ನಾಗಿ ವಿಂಗಡಿಸಿ, ಕೆಲವು ಪ್ರಭೇದಗಳನ್ನೂ ಮಾಡಿದ್ದಾರೆ. ಈ ಅಂಶಗಳನ್ನು ಕುರಿತು ಇಂದಿನ ವಿಜ್ಞಾನಿಗಳು ವಿವರವಾದ ಸಂಶೋಧನೆಗಳನ್ನು ಮಾಡಿದಲ್ಲಿ ವಾಸನಾ ದ್ರವ್ಯಗಳ ಬಗ್ಗೆ ಮತ್ತಷ್ಟು ತಿಳಿಯಬಹುದಾಗಿದೆ.