ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maya Balachandra Column: ದೇವರು ಮೇಲಿದ್ದಾನೆಯೇ? ನಮ್ಮೊಳಗಿದ್ದಾನೆಯೇ ?

ವ್ಯಕ್ತಿ ಅಥವಾ ವಸ್ತುವಿನ ಇರುವಿಕೆಯನ್ನು ಗುರುತಿಸಬೇಕಾದರೆ, ಆ ವ್ಯಕ್ತಿ ಅಥವಾ ವಸ್ತು ವಿನ ಪರಿಚಯ ಇರಲೇಬೇಕು. ಇಲ್ಲವಾದಲ್ಲಿ, ನಮ್ಮೆದುರಿಗೆ ಇದ್ದರೂ, ಆ ವ್ಯಕ್ತಿ/ವಸ್ತುವನ್ನು ಗುರುತಿಸಲು ಸೋತು ಬಿಡುತ್ತೇವೆ. ‘ಇದೆ’ ಎಂದುಕೊಳ್ಳುವ ವಸ್ತುವಿನ ಯಾವ ಪರಿಚಯ ವೂ ಇಲ್ಲದಿದ್ದ ಮೇಲೆ, ಆ ನಂಬಿಕೆ ಏನು ತಾನೆ ಮಾಡಲು ಸಾಧ್ಯ? ಹಾಗಾಗಿ, ಎಲ್ಲಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿ, ಭಗವಂತ ಅಥವಾ ದೇವರ ಚಿತ್ರಣ ಹೇಗಿದೆ ಅನ್ನುವುದು ಬಹಳ ಮುಖ್ಯ.

ಮಾಯಾ ಬಾಲಚಂದ್ರ, ಶ್ರೀನಿವಾಸಪುರ

‘ದೇವರು ಎಲ್ಲೂ ಇದ್ದಾನೆ’ ಎನ್ನುವುದೊಂದು ಗುಂಪಿನ ಸಿದ್ಧಾಂತವಾದರೆ, ‘ಎಲ್ಲಿಯೂ ಇಲ್ಲ’ ಎನ್ನುವುದು ಇನ್ನು ಕೆಲವರ ತರ್ಕ. ಈ ಎರಡೂ ಚಿಂತನೆಗಳನ್ನು ಪುಷ್ಟೀಕರಿಸಲು, ತಮಗೆ ತೋಚಿದ ನಿದರ್ಶನ, ವಾದ, ತರ್ಕಗಳನ್ನು ಇಬ್ಬರೂ ಮಂಡಿಸುವವರೇ. ಅವರವರ ನೆಲೆಯಲ್ಲಿ ಅದು ಸರಿ ಕೂಡ. ‘ನಾಸ್ತಿಕ ಎಂದರೆ, ಎಲ್ಲಾ ಇರುವನೆಂದುಕೊಳ್ಳುವ ದೇವರನ್ನು ನಂಬದೇ ಇರುವವನಲ್ಲ, ತನ್ನಲ್ಲಿರುವುದನ್ನೇ ನಂಬದವನು’ ಎಂದು ಇಂದಿನ ಮನೋ ವಿಜ್ಞಾನ ಹೇಳುತ್ತದೆ.

ಇದು ಅದ್ವೈತಕ್ಕೆ ಬಹಳ ಹತ್ತಿರ. ‘ದೇವರಿದ್ದಾನೆ’ ಎನ್ನುವ ಅನೇಕ ಆಸ್ತಿಕರು, ‘ದೇವರಿದ್ದಂತೆ’ ವರ್ತಿಸದೆ, ದೇವರು ಇದ್ದೂ ಪ್ರಯೋಜನವಿಲ್ಲ ಎನ್ನುವ ಸಂದೇಶವನ್ನೇ ಕೊಟ್ಟು ಬಿಡುತ್ತಾರೆ.

ವ್ಯಾಪಕ ಅರ್ಥದ ಭಗವಂತ

ವ್ಯಕ್ತಿ ಅಥವಾ ವಸ್ತುವಿನ ಇರುವಿಕೆಯನ್ನು ಗುರುತಿಸಬೇಕಾದರೆ, ಆ ವ್ಯಕ್ತಿ ಅಥವಾ ವಸ್ತು ವಿನ ಪರಿಚಯ ಇರಲೇಬೇಕು. ಇಲ್ಲವಾದಲ್ಲಿ, ನಮ್ಮೆದುರಿಗೆ ಇದ್ದರೂ, ಆ ವ್ಯಕ್ತಿ/ವಸ್ತುವನ್ನು ಗುರುತಿಸಲು ಸೋತು ಬಿಡುತ್ತೇವೆ. ‘ಇದೆ’ ಎಂದುಕೊಳ್ಳುವ ವಸ್ತುವಿನ ಯಾವ ಪರಿಚಯ ವೂ ಇಲ್ಲದಿದ್ದ ಮೇಲೆ, ಆ ನಂಬಿಕೆ ಏನು ತಾನೆ ಮಾಡಲು ಸಾಧ್ಯ? ಹಾಗಾಗಿ, ಎಲ್ಲಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿ, ಭಗವಂತ ಅಥವಾ ದೇವರ ಚಿತ್ರಣ ಹೇಗಿದೆ ಅನ್ನುವುದು ಬಹಳ ಮುಖ್ಯ. ಶಂಖ- ಚಕ್ರಧಾರಿಯೋ, ತ್ರಿಶೂಲ-ಢಮರುಗ, ಚರ್ಮಾಂಬರ ಧಾರಿಯೋ, ವೀಣಾ ಪಾಣಿಯೋ, ಅಥವಾ ಇನ್ಯಾವುದೇ ಚಿಹ್ನೆ, ಸಂಕೇತಗಳಾಗಿ ಮೂರ್ತ, ಅಮೂರ್ತ ರೂಪದಲ್ಲಿರುವ ದೇವರ ಕಲ್ಪನೆಯನ್ನು ಮೀರಿದ, ವ್ಯಾಪಕ ಅರ್ಥದ ಭಗವಂತನ ಚಿಂತನೆ ಗೆ ತೊಡಗಿದವರಿಂದ, ಭಗವಂತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಪುರಾಣದ ಹಿನೆ ಲೆ, ತಾರ್ಕಿಕ ಚಿಂತನೆ

ಭಗವಂತ ಕೆಳಗಿನಿಂದ ಮೇಲೇರಿ ಬಂದು ಭಕ್ತರನ್ನು ಉದ್ದರಿಸಿದ ಎಂದು ಕೇಳಿದ್ದಿಲ್ಲ. ಆದರೆ, ಮೇಲಿನಿಂದ ಕೆಳಗಿಳಿದು ಬಂದು ಉದ್ಧರಿಸಿದ ಎಂದಂತೂ ಕೇಳಿದ್ದೇವೆ. ನರಸಿಂಹಾವತಾರ, ರಾಮಾವತಾರ, ಕೃಷ್ಣಾವತಾರ ಎಲ್ಲವೂ ಲೋಕೋದ್ಧಾರಕ್ಕಾಗಿ ಆದ ಅವತರಣಗಳೇ. ‘ಅವ’ ಎಂದರೆ ಕೆಳಗೆ, ‘ತರಣ’ ಎಂದರೆ ಇಳಿಯುವುದು ಎನ್ನುವ ಅರ್ಥ ಸರಿಯಷ್ಟೇ? ಕೆಳಗಿಳಿದು ಬರಬೇಕಾದರೆ, ಭಗವಂತ ಮೇಲಿದ್ದಾನೆಯೇ? ಅನ್ನುವ ಪ್ರಶ್ನೆ ಮೂಡುವುದು ಸಹಜ. ಪುರಾಣದ ಹಿನ್ನೆಲೆ, ತತ್ವ ಶಾಸ್ತ್ರದ ಆಧಾರ, ತಾರ್ಕಿಕ ಚಿಂತನೆಗಳೆಲ್ಲವೂ, ಈ ಪ್ರಶ್ನೆಗೆ ಹೌದು ಎಂದೇ ಉತ್ತರಿಸುತ್ತವೆ.

ಇದನ್ನೂ ಓದಿ: Maya Balachandra Column: ಜೈಸಾ ಅನ್ನ್‌, ವೈಸಾ ಮನ್...:‌ ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ಇಲ್ಲಿ, ‘ಮೇಲೆ’ ಎನ್ನುವುದು ನಮ್ಮ ಕಣ್ಣಿಗೆ ಕಾಣುವ ಎತ್ತರವಲ್ಲ, ಅದು ಔನ್ನತ್ಯ. ಸಾಧನೆ ಯ ಎತ್ತರ. ಭಗವಂತನನ್ನು ಜನರು ಕಲ್ಪಿಸಿಕೊಳ್ಳುವುದು ಅತ್ಯಂತ ಎತ್ತರದ ಸ್ಥಾನ ದಲ್ಲಿ. ಅಂದರೆ ನಮ್ಮ ವ್ಯಕ್ತಿತ್ವ ಎಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲವೋ, ಆ ಎತ್ತರದಲ್ಲಿ ಭಗವಂತನಿದ್ದಾನೆ ಎನ್ನುವ ನಂಬಿಕೆ.

ಅದಕ್ಕಲ್ಲವೇ ಮನುಷ್ಯತ್ವದಿಂದ ದೈವತ್ವಕ್ಕೆ ಏರುವುದು ಎನ್ನುವುದು?! ಅಂದರೆ, ಮನುಷ್ಯ ನು ದ್ವೇಷ, ಮತ್ಸರ, ಮೋಹ, ತಾತ್ಸಾರಗಳಂಥ ಮನಸ್ಸಿನ ವಿಕಾರಗಳನ್ನು ಮೆಟ್ಟಿ ನಿಂತು, ನಿರ್ವಿಕಾರ ಭಾವ ತಾಳುವುದಾದರೆ, ಅದು ಎತ್ತರವೇ ಅಲ್ಲವೇ? ಹಾಗೆ ಗಟ್ಟಿಯಾಗಿ ನಿಂತು, ಮೇಲೇರಲು ನಮಗೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಸಮಸ್ಯೆ.

ನಮಗಿಂತ ಶ್ರೇಷ್ಠ ಎಂದು ನಂಬುವುದನ್ನೆಲ್ಲ, ನಮಗಿಂತ ಎತ್ತರದ ಸ್ಥಾನದಲ್ಲಿಯೇ ಗುರುತಿಸುತ್ತೇವೆ. ಇದು ಭೌತಿಕ ಎತ್ತರಕ್ಕೆ ಸಂಬಂಧಿಸಿದ್ದಲ್ಲ, ವ್ಯಕ್ತಿತ್ವದ ಉನ್ನತಿಗೆ ಸಂಬಂಧಿಸಿದ್ದು. ಹೀಗೆ, ಜನರ ಮನಸ್ಸಿನಲ್ಲಿ, ಭಗವಂತನ ಕಲ್ಪನೆ, ಅತ್ಯಂತ ಎತ್ತರದ ಸ್ಥಾನ ಪಡೆದುಬಿಟ್ಟಿದೆ. ಅದು ನಿರ್ಗುಣ ನಿರಾಕಾರವಾಗಿರಬಹುದು ಅಥವಾ ಸಗುಣ ಸಾಕಾರ ವಾಗಿರಬಹುದು.

god

‘ಆವುದನು ಕಾಣದೊಡ ಮಳ್ತಿಯಿಂ ನಂಬಿಹುದೊ, ಆ ವಿಚಿತ್ರಕೆ ನಮಿಸೊ- ಮಂಕುತಿಮ್ಮ’ ಎನ್ನುತ್ತದೆ ಕಗ್ಗ. ಯಾವತ್ತೂ ಕಣ್ಣಿಗೆ ಕಾಣದ ದೇವರ ಬಗ್ಗೆ, ಜನರಲ್ಲಿರುವ ಸಡಿಲಿಸಲಾಗದ ನಂಬಿಕೆ, ಡಿವಿಜಿಯವರು ಕಂಡ ವಿಸ್ಮಯ.

ನಂಬಿಕೆಗಳೇ ನಿರ್ಣಾಯಕ

ನಮಗಿಂತ ಹೆಚ್ಚಿನ ಸಾಧಕರು, ಶಕ್ತಿವಂತರು ನಮ್ಮನ್ನು ಮೇಲೆತ್ತಿ ಉದ್ಧಾರ ಮಾಡಬಹುದು ಎನ್ನುವುದೇ ಜನ ಮನದ ಗಾಢನಂಬಿಕೆ. ಇಲ್ಲಿ ನಮ್ಮೊಳಗಿನ ಶಕ್ತಿಯ ಬಗ್ಗೆ ಸಂದೇಹವೂ ಕಾಣುತ್ತದೆ. ಭಕ್ತರ, ಇಂಥ ಕಲ್ಪನೆಯ ಭಗವಂತ, ಕೆಳಗೆ ಇದ್ದೇವೆ ಎಂದು ನಂಬಿರುವ ಭಕ್ತರನ್ನು ಉದ್ದರಿಸಲು ಬರುವುದೇ ಆದರೆ, ಅವರನ್ನು ತಲುಪಲು ಕೆಳಗೆ ಇಳಿಯಲೇಬೇಕು. ಯಾಕೆಂದರೆ, ತಮ್ಮೊಳಗೆ ಇರುವ ಶಕ್ತಿಯ ಬಗ್ಗೆ ಇರುವ ನಂಬಿಕೆಗಿಂತ, ತಮಗಿಂತ ಮೇಲೆ ಇದೆ ಎಂದುಕೊಂಡ ಶಕ್ತಿಯ ಬಗ್ಗೆ ಇರುವ ನಂಬಿಕೆಯೇ ಗಟ್ಟಿ.

ಹಾಗಾಗಿಯೇ ಆ ಶಕ್ತಿಯೇ ನಮ್ಮನ್ನು ಮೇಲೆತ್ತಬೇಕು ಎನ್ನುವ ಪಟ್ಟು. ಹೀಗಾದರೂ ಸರಿಯೇ, ದೇವರೆನ್ನುವ ಸೂತ್ರವನ್ನು ಹಿಡಿದು, ಮೇಲೇರುವ ಪ್ರಯತ್ನ ನಡೆಯುತ್ತದಲ್ಲ, ಅದು ಸಮಾಧಾನದ ವಿಷಯ. ಆ ನಂಬಿಕೆಗಳು ಮೌಢ್ಯಕ್ಕೆ ತಿರುಗಿ, ಸಮಾಜ ಘಾತುಕವಾಗ ದಿದ್ದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಬಹುದು.

‘ನ್ಯೂ ಸೈಂಟಿ’ ಬಿಡುಗಡೆ ಮಾಡಿದ ‘ನಥಿಂಗ್’ ಎನ್ನುವ ಪುಸ್ತಕದಲ್ಲಿ ‘ಪ್ಲಸೀಬೋ’ (ಹುಸಿ ಔಷಧ) ಕೂಡ ಕೆಲಸ ಮಾಡುತ್ತದೆ ಎನ್ನುವ ಉದಾಹರಣೆ ಇದೆ. ಅದು ಹೇಗೆ ಅನ್ನುವುದನ್ನು ಅಲ್ಲಿ ವಿವರಿಸಿಲ್ಲ. ದೇವರೆಂಬ ಸೂತ್ರ ಹಿಡಿದು ಮೇಲೇರುವಲ್ಲಿಯೂ, ಪ್ಲಸೀಬೋ ಪಡೆದು ಸ್ವಸ್ಥರಾಗುವಲ್ಲಿಯೂ, ಫಲಿತಾಂಶವನ್ನು ನಿರ್ಧರಿಸುವುದು ನಂಬಿಕೆಗಳೇ ಎನ್ನುವುದು ಸ್ಪಷ್ಟವಾಗುತ್ತದೆ.

ಮನಸ್ಸು ಶುದ್ಧವಾಗಬೇಕು

ಮನುಷ್ಯರೇ ಸ್ವತಃ ಮೇಲೇರಲು ಸಾಧ್ಯವಾದಾಗ, ನಮ್ಮ ನಂಬಿಕೆಯ ದೇವರು ಕೆಳಗಿಳಿಯ ಬೇಕಾಗಿಲ್ಲ. ಮೇಲೇರಿದವರೇ ದೇವರಾಗಿಬಿಡುತ್ತಾರೆ, ರಾಮ-ಕೃಷ್ಣರ ಹಾಗೆ. ‘ಅವರೆಲ್ಲ ಭಗವಂತನ ಅವತಾರವೇ, ಹಾಗಾಗಿ ಅವರಿಂದ ಅದೆಲ್ಲ ಸಾಧ್ಯವಾಯಿತು. ನಾವೋ ಹುಲುಮಾನವರು, ನಮ್ಮಿಂದೇನಾದೀತು?’ ಅನ್ನೋದು ಹೆಚ್ಚಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣತನ.

ಎಲ್ಲರೂ, ಎಲ್ಲವೂ ಚೈತನ್ಯ ಸ್ವರೂಪದ ಅವತರಣವೇ ಎಂದು ಗಟ್ಟಿಯಾಗಿ ನಂಬಿ, ನಡೆಯದಿರಲು ಈ ಜಾಣತನವೂ ಒಂದು ಕಾರಣ ಇರಬಹುದು. ಅಥವಾ ಹುಟ್ಟಿ ದಾಗಿನಿಂದ ನಮಗೆ ಸಿಗುವ ಸಂಸ್ಕಾರದ ಪ್ರಭಾವದಿಂದಲೂ ಇರಬಹುದು. ಹುಟ್ಟಿನಿಂದ ಅಂಟಿಕೊಂಡೇ ಬರುವ ಪೊರೆಯನ್ನು ಕಳಚಿಕೊಂಡಾಗ ಆ ಎತ್ತರ ಏರಲು ಸಾಧ್ಯವೇ? ಅನ್ನುವುದೊಂದು ಪ್ರಶ್ನೆ.

ಪೀಟರ್ ಹರ್ಕೋಸ್, ನೆದರ್ಲ್ಯಾಂಡ್‌ನ ಯುವಕ. ಗೋಡೆಗೆ ಬಣ್ಣ ಬಳಿಯುವುದು ಅವನ ಕಾಯಕ. ಹಾಗೆ ಬಣ್ಣ ಬಳಿಯುತ್ತಿದ್ದಾಗ, ಎತ್ತರದ ಏಣಿಯಿಂದ ಜಾರಿ, ಕೆಳಗೆ ಬಿದ್ದು, ತಲೆಗೆ ದೊಡ್ಡ ಪೆಟ್ಟಾಯಿತವನಿಗೆ. ಕೆಲವು ದಿನಗಳ ಕಾಲ ಪ್ರಜ್ಞೆ ಕಳೆದುಕೊಂಡಂತಿದ್ದು, ನಂತರ ಪ್ರಜ್ಞಾಪೂರ್ವಕವಾಗಿ ವರ್ತಿಸಲು ಪ್ರಾರಂಭಿಸಿದಾಗ, ಸಾಮಾನ್ಯರಿಗಿಂತ ಭಿನ್ನವಾದ ಮಾನಸಿಕ ಶಕ್ತಿಯನ್ನು ಪ್ರದರ್ಶಿಸಲಾರಂಭಿಸಿದ.

ಇದನ್ನು ನಾವು ದೈವತ್ವಕ್ಕೆ ಏರಿಸುವ ಬದಲು, ವೈeನಿಕ ಹಿನ್ನೆಲೆಯಲ್ಲಿ ನೋಡಬೇಕು. ಇಂದ್ರಿಯಗಳು ನಿಯಂತ್ರಣದಲ್ಲಿ ಇದ್ದಾಗ, ಮಾನವ ಸಹಜವಾಗಿ ಆತ್ಮೋನ್ನತಿಯ ಕಡೆಗೆ ಸಾಗುತ್ತಾನೆ. ಈ ಸಂದರ್ಭದಲ್ಲಿ ಮನಸ್ಸಿನಲ್ಲಿ ಅಸಾಧಾರಣ ಶಕ್ತಿಗಳು ಬೆಳೆಯುವ ಸಾಧ್ಯತೆ ಇದೆ. ಉಪನಿಷತ್ತುಗಳು ಹೇಳುವ ಹಾಗೆ “ಮನಸ್ಸು ಶುದ್ಧವಾದಾಗ ಸೂಕ್ಷ್ಮ ಗ್ರಹಿಕೆ ಬೆಳೆಯು ತ್ತದೆ". ಆಗ intution ಉಂಟಾಗುತ್ತದೆ. ಆ ಯುವಕನಿಗೆ ಆದದ್ದೂ ಅದೇ ಇರಬಹುದು.

ಹಳೆಯ ಸ್ಮೃತಿ ಅಳಿಸಿ ಹೋಗಿ, ಸುಪ್ತ ಮನಸ್ಸಿನಲ್ಲಿ ಸ್ನಿಗ್ಧತೆ ಅರಳಿರಬಹುದು. ಕೆಲವೊಮ್ಮೆ ಇವು ಅತಿಂದ್ರೀಯ ಅನುಭವಗಳಂತೆ ಕಾಣಬಹುದು. ಆದರೆ ನಿಜವಾದ ಯೋಗಿಗಳು ಆ ಶಕ್ತಿಯನ್ನು ಪ್ರದರ್ಶಿಸಲು ಯತ್ನಿಸುವುದಿಲ್ಲ. ಹಾಗೆ ಬಳಸಲು ಬಯಸಿದರೆ ಅವರ ಸಾಧನೆಗೆ ಅಡ್ಡಿಯಾಗಬಹುದು. ರಾಮ, ಎಂದೂ ಮಾನವಾತೀತವಾದ ಶಕ್ತಿಯನ್ನು ಪ್ರದರ್ಶಿಸಲಿಲ್ಲ.

ಮಾನವನಾಗಿದ್ದುಕೊಂಡೇ ಉನ್ನತಿಯ ದಾರಿಯಲ್ಲಿ ಹೋಗಲು ಕಲಿಸಿದ. ಇವನಲ್ಲಿ ಅವನನ್ನು ಕಂಡರು...ಉನ್ನತಿ ಎಂದ ಮಾತ್ರಕ್ಕೆ, ಕಣ್ಣಿಗೆ ಕಾಣದ, ಕಲ್ಪನೆಗೂ ನಿಲುಕದ, ಬಹಳ ದೊಡ್ಡ ಸಾಧನೆ ಅಂದುಕೊಳ್ಳಬೇಕಿಲ್ಲ. ನಮ್ಮ ಕೈಗೆಟುಕುವಷ್ಟೇ ಒಳ್ಳೆಯದನ್ನು ಮಾಡುತ್ತಾ ಹೋದರೆ, ನಿಧಾನವಾಗಿ ಮೇಲೆ ಏರುವುದಂತೂ ಖಚಿತ. ಅದು ಬೇರೆಯವರ ದೃಷ್ಟಿಯಲ್ಲಿ ಎತ್ತರ ಅನ್ನಿಸದಿದ್ದರೂ ಸರಿಯೇ.

ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲ್ಲೂಕಿನಲ್ಲಿ ‘ಕುರುಡುಮಲೆ’ ಪ್ರಸಿದ್ಧ ಕ್ಷೇತ್ರ, ಗಣೇಶ ದೇವಸ್ಥಾನ ಅಲ್ಲಿಯ ಆಕರ್ಷಣೆ. ಆ ದೇವಾಲಯದ ಹೊರ ಭಾಗದಲ್ಲಿ, ಸಾಲು ಸಾಲಾಗಿ ಭಿಕ್ಷಾಟನೆಗೆ ಕೂತಿರುವ ಎಲ್ಲ ವಯೋಮಾನದವರನ್ನು ಕಾಣಬಹುದು. ಅಲ್ಲಿಗೆ ಬರುವ ಭಕ್ತಾದಿಗಳೆಲ್ಲ, ಹೆಚ್ಚು ಕಡಿಮೆ ಎಲ್ಲಾ ಯಾಚಕರಿಗೂ ತಮ್ಮ ಕೈಲಾದಷ್ಟು ನೀಡಿ ಹೋಗು ತ್ತಾರೆ. ಒಳಗೆ ವಿಗ್ರಹದ ದರ್ಶನ ಪಡೆದು, ಹೊರಗೆ ಮನಸ್ಸಿಗೆ ಬಂದದ್ದನ್ನು ನೀಡಿ ಹೋಗು ವಾಗ ಎಲ್ಲರ ಮನಸ್ಸಿನಲ್ಲಿ ಒಂದು ರೀತಿಯ ಆರ್ದ್ರ ಭಾವ ಮೂಡಿ ಬಿಟ್ಟಿರುತ್ತದೆ.

ಇಲ್ಲಿಗೆ ಆಗಾಗ ಭೇಟಿ ನೀಡುವ, ಕೋಲಾರದ ಒಂದು ಕುಟುಂಬಿಕರು, ಹೊರಗೆ ಯಾಚಕರ ಸಾಲಿನಲ್ಲಿ ಕೂರುವ ಎಲ್ಲಪ್ಪ ಎನ್ನುವ ಹೆಳವನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಿಟ್ಟಿದ್ದಾರೆ.

ಆತನಿಗೆ ಸರಿಯಾಗಿ ನಡೆಯಲು ಆಗುವುದಿಲ್ಲ. ಮಾತು ಸಹ ಸ್ಪಷ್ಟವಾಗಿ ಆಡಲು ಬರುವು ದಿಲ್ಲ. ಅದು ಹೇಗೋ ಆ ದಂಪತಿಗಳಿಗೆ ಈತನೊಂದಿಗೆ ಆತ್ಮೀಯತೆ ಬೆಳೆದು ಬಿಟ್ಟಿದೆ. ವರ್ಷದಮ್ಮೆ ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ಎಂಟ್ಹತ್ತು ದಿನಗಳ ಕಾಲ, ತಮ್ಮ ಮನೆಯ ತಮ್ಮೊಂದಿಗೆ ಇರಿಸಿಕೊಂಡು, ಆತನಿಗೆ ಆತಿಥ್ಯ ಮಾಡಿ, ಆತನಿಗೆ ಬೇಕಾದ್ದನ್ನೆ ಕೊಡಿಸಿ, ಉಪಚರಿಸಿ, ಮತ್ತೆ ಕುರುಡುಮಲೆಗೆ ಆತನನ್ನು ಬಿಟ್ಟು ಹೋಗುತ್ತಾರೆ. ಇದು, ಮೇಲ್ನೋಟಕ್ಕೆ ಎತ್ತರದ ಹೆಜ್ಜೆ ಅನಿಸದಿದ್ದರೂ, ಹೆಚ್ಚಿನವರಲ್ಲಿ ಇಂಥ ಅಭ್ಯಾಸ ರೂಢಿಗೆ ಬಂದರೆ, ಸಮಾಜ ಖಂಡಿತ ವಾಗಿಯೂ ಒಂದು ಹಂತ ಮೇಲೇರುತ್ತದೆ.

ದೇವಸ್ಥಾನದ ಹೊರಗೆ ಸಾಲುಗಟ್ಟಿ ಕೂತವರಲ್ಲಿ ಭಗವಂತನನ್ನು ಕಾಣಲಾಗದಿದ್ದರೆ, ಒಳಗೆ ಕಂಡದ್ದು ಖಂಡಿತ ಭಗವಂತನಲ್ಲ. ಎಲ್ಲ ತೋರಿಕೆಯ ವ್ಯತ್ಯಾಸಗಳು ಕರಗಿ ಒಂದಾಗುವ ನಿತ್ಯಸತ್ಯವೇ ‘ತತ್ವಮಸಿ’- ‘ಅದು ನೀನೇ’. ದೇವರನ್ನು ಕಾಣ ಹೊರಟವರಿಗೆ, ಭಾರತೀಯ ತತ್ವಶಾಸ ಹೇಳುವ ಮಹಾವಾಕ್ಯ ಇದು. ಇದನ್ನು ನಂಬಿಯೂ ಗೊಂದಲದಲ್ಲಿರುವವರು ಮತ್ತು ನಂಬದವರ ವಾದಕ್ಕೆ ಐನ್ ಸ್ಟೀನ್‌ರ ಈ ಹೇಳಿಕೆ ಹೊಂದುತ್ತದೆ: “ಜಗತ್ತಿನಲ್ಲಿ ಅನಂತವಾಗಿರುವುದು ಈ ಜಗತ್ತು ಮತ್ತು ಮನುಷ್ಯನ ಮೂರ್ಖತನ. ಜಗತ್ತಿನ ಅನಂತತೆಯ ಬಗ್ಗೆ ಸ್ವಲ್ಪ ಸಂದೇಹವಿದ್ದರೂ ಮನುಷ್ಯನ ಮೂರ್ಖತನದ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ". ಕನ್ನಡಿಗರು ಕಂಡ ಅನಂತ ಪ್ರeಯಾದ ಅಲ್ಲಮಪ್ರಭುಗಳ “ಎತ್ತನೇರಿ ಎತ್ತನರಸುವರು ಎತ್ತ ಹೋದರೈ ಗುಹೇಶ್ವರಾ?" ಎಂಬ ವಚನ ಇಲ್ಲಿ ಸೂಕ್ತವೆನಿಸುತ್ತದೆ