ಹೊಸ್ಮನೆ ಮುತ್ತು
ಇಂದಿನ ಧಾವಂತದ ಬದುಕಿನಲ್ಲಿ ಎಲ್ಲೇ ಇದ್ದರೂ, ಯಾವುದೂ ಸಾಲದು ಎಂಬ ಹಪಾಹಪಿ. ಒಂದು ಕಡೆ ಅತಿಯಾಗಿ ಗಳಿಸುವ ಹಂಬಲ ಹಾಗೂ ವೇಗದ ಅಬ್ಬರವಿದ್ದರೆ, ಮತ್ತೊಂದೆಡೆ ಅತೃಪ್ತಿ ಯಿಂದ ಎಲ್ಲವನ್ನೂ ತ್ಯಜಿಸುವ ತುಡಿತ. ಈ ಎರಡು ಅತಿರೇಕಗಳ ನಡುವೆ, ಅತಿಯಾದ ಆಕಾಂಕ್ಷೆ ಯೂ ಅಲ್ಲದ, ಸಂಪೂರ್ಣ ನಿರ್ಲಕ್ಷ್ಯವೂ ಸಲ್ಲದ, ಸಮತೋಲನದ ಬದುಕನ್ನು ಕಂಡುಕೊಳ್ಳುವ ಹದವರಿತ ಜೀವನಶೈಲಿಯೇ ಸ್ವೀಡನ್ ಮೂಲದ ‘ಲಾಗೋಮ್’ (Lagom).
‘ಲಾಗೋಮ್’ ಎನ್ನುವುದು ಕೇವಲ ಒಂದು ಪದವಲ್ಲ; ಅದು ಇಡೀ ಬದುಕಿನ ಸಾರವನ್ನೇ ಅಡಗಿಸಿ ಕೊಂಡಿರುವ ಸ್ವೀಡನ್‌ನ ವಿಶಿಷ್ಟ ಜೀವನ ಧರ್ಮ. ಅಲ್ಲಿನ ಜನರ ಅಪಾರ ನೆಮ್ಮದಿಯ ರಹಸ್ಯವೂ ಇದೇ ಆಗಿರುವುದರಿಂದಲೇ, ವಿಶ್ವದ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಸ್ವೀಡನ್ ಸದಾ ಅಗ್ರಸ್ಥಾನದಲ್ಲಿರುತ್ತದೆ.
ಕೇವಲ ಕೆಲಸಕ್ಕಾಗಿ ಬದುಕದೆ, ಕುಟುಂಬ ಮತ್ತು ಹವ್ಯಾಸಗಳಿಗೂ ಅಷ್ಟೇ ಪ್ರಾಮುಖ್ಯ ನೀಡುವುದು, ಕಚೇರಿಯ ಕೆಲಸವನ್ನು ಅಲ್ಲೇ ಮುಗಿಸಿ ಮನೆಗೆ ಬರುವುದು ಅಪ್ಪಟ ಲಾಗೋಮ್ ಶೈಲಿ. ಸತತವಾಗಿ ಬಿಡುವಿಲ್ಲದೆ ದುಡಿಯುವುದರಿಂದ ಕೆಲಸದ ದಕ್ಷತೆ ಕಡಿಮೆಯಾಗುವುದಲ್ಲದೆ, ಮಾನಸಿಕ ಬಳಲಿಕೆ ಯೂ ಉಂಟಾಗುತ್ತದೆ. ಆದ್ದರಿಂದಲೇ ಸ್ವೀಡನ್ ಜನರು ಕೆಲಸದ ನಡುವೆ ‘ಫಿಕಾ’ ಎಂಬ ಕಾಫಿ ವಿರಾಮವನ್ನು ತೆಗೆದುಕೊಳ್ಳುತ್ತಾರೆ.
ದಿನಕ್ಕೆರಡು ಬಾರಿ ಸಹೋದ್ಯೋಗಿಗಳೊಂದಿಗೆ ಕಳೆಯುವ ಈ ಸಮಯ ಸೋಮಾರಿತನವಲ್ಲ, ಬದಲಿಗೆ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಮನಸ್ಸನ್ನು ಚೈತನ್ಯಗೊಳಿಸುವ ಸಾಧನವಾಗಿದೆ.
ಇದನ್ನೂ ಓದಿ: Hosmane Muttu Column: ಸಾಂಪ್ರದಾಯಿಕ ‘ಕೂರಿ’ಯ ತಾಂತ್ರಿಕ ಚಮತ್ಕಾರ..!
ಆರ್ಥಿಕ ಹಾಗೂ ಭೌತಿಕ ವಿಷಯಗಳಲ್ಲೂ ಲಾಗೋಮ್ ಶಿಸ್ತು ತರುತ್ತದೆ. ನಮಗೆ ಬೇಕಿರುವಷ್ಟು ವಸ್ತುಗಳನ್ನು ಮಾತ್ರವೇ ಖರೀದಿಸುವುದು, ಆಡಂಬರವಿಲ್ಲದ ಗುಣಮಟ್ಟದ ವಸ್ತುಗಳಿಗೆ ಆದ್ಯತೆ ನೀಡುವುದು ಇದರ ಉದ್ದೇಶ. ಇದು ದುಂದುವೆಚ್ಚದಿಂದ ಉಂಟಾಗುವ ಆರ್ಥಿಕ ಸಂಕಷ್ಟಗಳನ್ನು ತಡೆಯುತ್ತದೆ.
‘ಅಗತ್ಯವಿರುವಷ್ಟನ್ನೇ ಬಳಸಿ, ಹೆಚ್ಚುವರಿ ಬೇಡ’ ಎನ್ನುವ ಈ ಪರಿಕಲ್ಪನೆಯು ಸಂಪನ್ಮೂಲಗಳ ಸಂರಕ್ಷಣೆಯ ತಿರುಳಾಗಿದೆ. ಆಹಾರದ ವಿಷಯಕ್ಕೆ ಬಂದರೆ, ಇದು ಹೊಟ್ಟೆಬಿರಿಯುವಂತೆ ತಿನ್ನು ವುದೂ ಅಲ್ಲ ಅಥವಾ ಹಸಿವಿನಿಂದ ಇರುವುದೂ ಅಲ್ಲ; ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಪೌಷ್ಟಿಕ ಆಹಾರವನ್ನು ಹಿತಮಿತವಾಗಿ ಸೇವಿಸುವುದಾಗಿದೆ.
ಇಲ್ಲಿ ಆಹಾರದ ತ್ಯಾಜ್ಯವನ್ನು ಕಡಿಮೆ ಮಾಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆಯಲ್ಲದೆ, ಉಳಿದ ಆಹಾರದ ಸದುಪಯೋಗವನ್ನು ‘Life giving powers of leftovers’ ಎಂದು ಗೌರವಿಸ ಲಾಗುತ್ತದೆ.
ಮನೆ ಹಾಗೂ ಕೆಲಸದ ಸ್ಥಳವು ಆಡಂಬರರಹಿತವಾಗಿ, ಸ್ವಚ್ಛವಾಗಿ ಮತ್ತು ಕಣ್ಣಿಗೆ ತಂಪು ನೀಡುವ ವಿನ್ಯಾಸದಿಂದ ಕೂಡಿರಬೇಕು ಎಂಬುದು ಲಾಗೋಮ್ ತತ್ವ. ಇದು ಅತಿಯಾದ ವಸ್ತುಗಳನ್ನಿಟ್ಟು ಕೊಳ್ಳುವ ‘ಮ್ಯಾಕ್ಸಿಮಲಿಸಂ’ಗಿಂತ ಶಾಂತ ಹಾಗೂ ಶೂನ್ಯತೆಯನ್ನು ಪ್ರತಿಪಾದಿಸುವ ‘ಮಿನಿಮಲಿಸಂ’ ಗಿಂತ ಬೆಚ್ಚಗಿನ ಅನುಭವ ನೀಡುತ್ತದೆ. ಆಡಂಬರವೂ ಇಲ್ಲ; ಖಾಲಿತನವೂ ಇಲ್ಲ. ಇನ್ನು ಸಂಬಂಧಗಳ ವಿಷಯದಲ್ಲಿಯೂ ಲಾಗೋಮ್ ಅತಿ ಮುಖ್ಯ. ಯಾರ ಮೇಲೂ ಅತಿಯಾಗಿ ಅವಲಂಬಿತವಾಗದೆ ಅಥವಾ ಅತಿಯಾದ ದೂರವನ್ನೂ ಕಾಯ್ದುಕೊಳ್ಳದೆ, ಎಲ್ಲರೊಂದಿಗೂ ಆರೋಗ್ಯಕರ ಗಡಿಗಳನ್ನು ಕಾಯ್ದುಕೊಳ್ಳುತ್ತಾ ವಾರಾಂತ್ಯಗಳನ್ನು ಕುಟುಂಬದೊಂದಿಗೆ ಆನಂದ ವಾಗಿ ಕಳೆಯುವುದನ್ನು ಇದು ಕಲಿಸುತ್ತದೆ.
ಲಾಗೋಮ್‌ನ ಹಾದಿಯನ್ನು ಹಿಡಿದಾಗ ನಮ್ಮ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ‘ಇನ್ನೂ ಬೇಕು’ ಎನ್ನುವ ಹಪಾಹಪಿಯ ಬದಲು ‘ಇರುವುದು ಸಾಕಷ್ಟಿದೆ’ ಎನ್ನುವ ‘ತೃಪ್ತಭಾವ’ ಮೂಡುತ್ತದೆ. ಇದು ನಮಗೆ ಆರ್ಥಿಕ ಶಿಸ್ತು ನೀಡುವುದಲ್ಲದೆ, ಮಾನಸಿಕ ನೆಮ್ಮದಿಯನ್ನೂ ಹೆಚ್ಚಿಸು ತ್ತದೆ.
ಸಾಮಾಜಿಕವಾಗಿ ಎಲ್ಲರನ್ನೂ ಸಮನಾಗಿ ಕಾಣುವ ಮತ್ತು ಗೌರವಿಸುವ ಮನೋಭಾವ ಬೆಳೆಯು ತ್ತದೆ. ಈ ಸಮತೋಲನದ ಪರಿಕಲ್ಪನೆ ಭಾರತೀಯರಿಗೆ ಹೊಸದೇನಲ್ಲ. ಭಗವದ್ಗೀತೆಯ ‘ಸ್ಥಿತಪ್ರಜ್ಞತೆ’, ಬೌದ್ಧಧರ್ಮದ ‘ಮಧ್ಯಮ ಮಾರ್ಗ’, ಜೈನರ ‘ಅಪರಿಗ್ರಹ’ ಎಲ್ಲವೂ ಲಾಗೋಮ್ ತತ್ವಕ್ಕೆ ಸಂವಾದಿ ಯಾಗಿವೆ.
ದಾರ್ಶನಿಕ ಡಿವಿಜಿ ಅವರು ‘ಅತಿ ಬೇಡವೆಲ್ಲಿಯುಂ’ ಎಂದು ಎಚ್ಚರಿಸಿದರೆ, ಸಂಸ್ಕೃತ ಸುಭಾಷಿತವು ‘ಅತಿಸರ್ವತ್ರ ವರ್ಜಯೇತ್’ ಎನ್ನುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ‘ಇನ್ನೂ ಹೆಚ್ಚು, ಇನ್ನೂ ವೇಗ’ ಎಂಬ ಮಾಯೆಯಲ್ಲಿ ಸುಸ್ತಾಗಿರುವ ನಮಗೆ ಲಾಗೋಮ್ ಅತ್ಯಂತ ಪ್ರಸ್ತುತವಾಗಿದೆ.
ಒಟ್ಟಾರೆಯಾಗಿ, ಲಾಗೋಮ್ ಎಂದರೆ ‘ಪರಿಪೂರ್ಣತೆ’ಯನ್ನು ಹುಡುಕುವುದಲ್ಲ, ಬದಲಾಗಿ ಇರುವುದರಲ್ಲಿಯೇ ಪೂರ್ಣತೆಯನ್ನು ಅನುಭವಿಸುವುದು. ಇಲ್ಲಿ ಐಶ್ವರ್ಯದ ಅಮಲಿಲ್ಲ, ಕೊರತೆ ಯ ವ್ಯಥೆಯಿಲ್ಲ; ಕೇವಲ ಸರಿಯಾದ ಪ್ರಮಾಣದ ಸಮತೋಲನವಿದೆ. ಆತಂಕ ಮತ್ತು ಖಿನ್ನತೆ ಯಿಂದ ದೂರವಿರಲು ಈ ಸರಳ ಜೀವನಶೈಲಿ ಸಹಕಾರಿ...