ಹಿಂದಿರುಗಿ ನೋಡಿದಾಗ
ಒಬ್ಬ ವೈದ್ಯನ ಬಳಿ ಎರಡು ಶಕ್ತಿಗಳಿರುತ್ತವೆ. ಮೊದಲನೆಯದು ಅವನ ವೈದ್ಯಕೀಯ ಜ್ಞಾನ. ಎರಡನೆಯದು ರೋಗಿಯು ಅವನ ಮೇಲಿಟ್ಟಿರುವ ನಂಬಿಕೆ. ವೈದ್ಯಕೀಯ ಜ್ಞಾನವು ರೋಗವನ್ನು ಗುರುತಿ ಸಲು ಮತ್ತು ಚಿಕಿತ್ಸೆ ನೀಡಲು ನೆರವಾಗುತ್ತದೆ. ಆದರೆ ಆ ಜ್ಞಾನ ವನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವುದು ವೈದ್ಯಕೀಯ ನೀತಿ. ಒಬ್ಬ ವೈದ್ಯನಿಗೆ ರೋಗವನ್ನು ಗುಣಪಡಿಸುವ ಸಾಮರ್ಥ್ಯವಿದ್ದರೆ ಮಾತ್ರ ಸಾಕೆ? ತನ್ನ ರೋಗಿಯ ಹಿತವನ್ನು ಕಾಪಾಡುವ ಜವಾಬ್ದಾರಿಯೂ ಅವನಿಗಿರಬೇಕಲ್ಲವೆ? ರೋಗಿಯು ತನ್ನ ಅತ್ಯಂತ ವೈಯಕ್ತಿಕ ಸಮಸ್ಯೆಗಳನ್ನು ವೈದ್ಯನೊಂದಿಗೆ ಹಂಚಿಕೊಂಡಾಗ ಅವುಗಳನ್ನು ಗೌಪ್ಯವಾಗಿಡುವುದು ವೈದ್ಯನ ಕರ್ತವ್ಯವಲ್ಲವೆ? ಚಿಕಿತ್ಸೆ ನೀಡುವಾಗ ರೋಗಿಗೆ ಅನಗತ್ಯ ವಾದ ಹಾನಿ ಯಾಗದಂತೆ ನೋಡಿಕೊಳ್ಳಬೇಕಲ್ಲವೆ? ಇಂತಹ ಪ್ರಶ್ನೆಗಳು ಹೊಸದಲ್ಲ.
ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪ್ರಾಚೀನ ಗ್ರೀಕ್ ವೈದ್ಯಕೀಯ ಪರಂಪರೆಯಲ್ಲಿ ಇವುಗಳ ಬಗ್ಗೆ ಚಿಂತನೆ ಆರಂಭವಾಗಿತ್ತು. ಗ್ರೀಕ್ ವೈದ್ಯ ಹಿಪ್ಪೊಕ್ರೇಟಿಸ್ನ ಹೆಸರಿನೊಂದಿಗೆ ಸಂಬಂಧಿಸಿರುವ ‘ಹಿಪ್ಪೊಕ್ರೇಟಿಸ್ ಪ್ರತಿಜ್ಞೆ’ (Hippocratic Oath) ವೈದ್ಯಕೀಯ ನೀತಿಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ.
ಈ ಪ್ರತಿಜ್ಞೆಯ ನಿಖರವಾದ ಕರ್ತೃ ಯಾರು ಎನ್ನುವುದು ಖಚಿತವಾಗಿಲ್ಲ. ಆದರೆ ವೈದ್ಯನು ತನ್ನ ವೃತ್ತಿ ಯನ್ನು ಕೆಲವು ನೈತಿಕ ಮೌಲ್ಯಗಳ ಆಧಾರದ ಮೇಲೆ ನಡೆಸಬೇಕು ಎನ್ನುವ ಆಶಯ ಅದರಲ್ಲಿದೆ. ರೋಗಿಯ ಹಿತಕ್ಕಾಗಿ ಕೆಲಸ ಮಾಡುವುದು, ಉದ್ದೇಶಪೂರ್ವಕವಾಗಿ ಹಾನಿ ಮಾಡದಿರುವುದು, ತನ್ನ ವೃತ್ತಿಯ ಗೌರವವನ್ನು ಕಾಪಾಡುವುದು, ವೈದ್ಯಕೀಯ ಜ್ಞಾನವನ್ನು ದುರುಪಯೋಗಪಡಿಸಿಕೊಳ್ಳ ದಿರುವುದು ಮತ್ತು ರೋಗಿಯ ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿಡುವುದು ಮುಂತಾದ ತತ್ವಗಳಿಗೆ ಇದರಲ್ಲಿ ಮಹತ್ವ ನೀಡಲಾಗಿದೆ.
ಇದನ್ನೂ ಓದಿ: Dr N Someshwara Column: ಎಕ್ಸ್-ಕಿರಣಗಳು: ಛೇದಿಸದೆ ದೇಹದೊಳಗೆ ನೋಡುವ ಅದ್ಭುತ !
ಈ ಪ್ರತಿಜ್ಞೆಯಲ್ಲಿ ಮತ್ತೊಂದು ಕುತೂಹಲಕರ ಸಂಗತಿಯಿದೆ. ವೈದ್ಯನು ಚಿಕಿತ್ಸೆಯ ಸಂದರ್ಭದಲ್ಲಿ ತಿಳಿದು ಕೊಂಡ ರೋಗಿಯ ಖಾಸಗಿ ವಿಚಾರಗಳನ್ನು ಇತರರಿಗೆ ಬಹಿರಂಗ ಪಡಿಸಬಾರದು ಎಂಬ ನಿರ್ದೇಶನವಿದೆ. ವೈದ್ಯ ಮತ್ತು ರೋಗಿಯ ನಡುವಿನ ನಂಬಿಕೆಯ ಸಂಬಂಧಕ್ಕೆ ಎಷ್ಟು ಹಿಂದಿನಿಂದಲೂ ಮಹತ್ವ ನೀಡಲಾ ಗುತ್ತಿತ್ತು ಎನ್ನುವುದಕ್ಕೆ ಇದೊಂದು ನಿದರ್ಶನ.
ಪ್ರಾಚೀನ ಹಿಪ್ಪೊಕ್ರೇಟಿಸ್ ಪ್ರತಿಜ್ಞೆಯೂ ಇಂದಿನ ವೈದ್ಯಕೀಯ ನೀತಿಸಂಹಿತೆಗಳೂ ಸಂಪೂರ್ಣವಾಗಿ ಒಂದೇ ಅಲ್ಲ. ಪ್ರಾಚೀನ ಪ್ರತಿಜ್ಞೆಯಲ್ಲಿ ಅಂದಿನ ಗ್ರೀಕ್ ಸಮಾಜದ ಧಾರ್ಮಿಕ ನಂಬಿಕೆಗಳು, ವೃತ್ತಿಪರ ಪದ್ಧತಿ ಗಳು ಮತ್ತು ಸಾಮಾಜಿಕ ಮೌಲ್ಯಗಳು ಪ್ರತಿಫಲಿಸಿವೆ. ಆಧುನಿಕ ವೈದ್ಯಕೀಯವು ಆ ಪರಂಪರೆಯ ಕೆಲವು ಮೌಲ್ಯಗಳನ್ನು ಉಳಿಸಿಕೊಂಡು, ಹೊಸ ಸಾಮಾಜಿಕ ಮತ್ತು ವೈಜ್ಞಾನಿಕ ಬೆಳವಣಿಗೆಗಳಿಗೆ ಅನುಗುಣವಾಗಿ ತನ್ನ ನೀತಿತತ್ವಗಳನ್ನು ವಿಸ್ತರಿಸಿಕೊಂಡಿದೆ.
ವಿಶೇಷವಾಗಿ ಎರಡನೆಯ ಮಹಾಯುದ್ಧದ ನಂತರ ವೈದ್ಯಕೀಯ ನೀತಿಯ ಬಗ್ಗೆ ಜಗತ್ತಿನಾದ್ಯಂತ ಹೊಸ ಚಿಂತನೆಗಳು ಆರಂಭವಾದವು. ಮಾನವ ಹಕ್ಕುಗಳು, ವ್ಯಕ್ತಿಯ ಘನತೆ, ವೈದ್ಯಕೀಯ ಪ್ರಯೋಗಗಳಲ್ಲಿ ರೋಗಿಯ ಒಪ್ಪಿಗೆ ಮತ್ತು ಚಿಕಿತ್ಸೆಯಲ್ಲಿ ಸಮಾನ ಅವಕಾಶಗಳು ಮುಂತಾದ ವಿಚಾರಗಳಿಗೆ ಹೆಚ್ಚಿನ ಮಹತ್ವ ದೊರೆಯಿತು.
1948ರಲ್ಲಿ ವಿಶ್ವ ವೈದ್ಯಕೀಯ ಸಂಘವು ‘ಜಿನೀವಾ ಘೋಷಣೆ’ (Declaration of Geneva) ಎಂಬ ಆಧುನಿಕ ವೈದ್ಯಕೀಯ ಪ್ರತಿಜ್ಞೆಯನ್ನು ಅಂಗೀಕರಿಸಿತು. ಕಾಲಕಾಲಕ್ಕೆ ಪರಿಷ್ಕೃತ ಗೊಂಡ ಈ ಪ್ರತಿಜ್ಞೆಯು ರೋಗಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮೊದಲ ಆದ್ಯತೆ ಯನ್ನು ನೀಡುತ್ತದೆ. ರೋಗಿಯ ಘನತೆ, ಸ್ವತಂತ್ರ ನಿರ್ಧಾರದ ಹಕ್ಕು ಮತ್ತು ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಗೌರವಿಸುವುದನ್ನೂ ಒತ್ತಿ ಹೇಳುತ್ತದೆ.
ಇಂದಿನ ವೈದ್ಯಕೀಯ ನೀತಿಯ ಚರ್ಚೆಗಳಲ್ಲಿ ನಾಲ್ಕು ಮೂಲಭೂತ ತತ್ವಗಳಿಗೆ ವಿಶೇಷ ಮಹತ್ವವಿದೆ.
? ಮೊದಲನೆಯದು, ರೋಗಿಯ ಹಿತವನ್ನು ಸಾಧಿಸುವುದು (ಬೆನಿಫಿಸೆನ್ಸ್). ವೈದ್ಯನು ತನ್ನ ಜ್ಞಾನ ಮತ್ತು ಕೌಶಲಗಳನ್ನು ರೋಗಿಯ ಆರೋಗ್ಯವನ್ನು ಸುಧಾರಿ ಸಲು ಬಳಸಬೇಕು.
? ಎರಡನೆಯದು, ಹಾನಿಯನ್ನು ತಪ್ಪಿಸುವುದು (ನಾನ್-ಮ್ಯಾಲೆಫಿಸೆನ್ಸ್). ಚಿಕಿತ್ಸೆಯು ಪ್ರಯೋ ಜನವನ್ನು ನೀಡುವಂತಿರಬೇಕು. ಅನಗತ್ಯವಾದ ಅಪಾಯಗಳನ್ನು ಉಂಟು ಮಾಡಬಾರದು. ಆದರೆ ಯಾವುದೇ ಚಿಕಿತ್ಸೆ ಯಲ್ಲಿಯೂ ಅಪಾಯವೇ ಇರ ಬಾರದು ಎಂದರ್ಥವಲ್ಲ. ನಿರೀಕ್ಷಿತ ಪ್ರಯೋಜನ ಮತ್ತು ಸಂಭವನೀಯ ಅಪಾಯಗಳ ನಡುವೆ ಸೂಕ್ತ ವಾದ ಸಮತೋಲನವನ್ನು ಕಾಯ್ದುಕೊಳ್ಳಬೇಕು.
? ಮೂರನೆಯದು, ರೋಗಿಯ ಸ್ವತಂತ್ರ ನಿರ್ಧಾರದ ಹಕ್ಕನ್ನು ಗೌರವಿಸುವುದು (ಅಟಾನಮಿ). ತನ್ನ ದೇಹ ಮತ್ತು ಆರೋಗ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ರೋಗಿಗಿರುತ್ತದೆ. ವೈದ್ಯನು ಕಾಯಿಲೆ, ಚಿಕಿತ್ಸೆ ಯ ಪ್ರಯೋಜನಗಳು, ಅಪಾಯಗಳು ಮತ್ತು ಪರ್ಯಾಯಗಳನ್ನು ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಬೇಕು. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವ ರೋಗಿಯು ತನ್ನ ಇಚ್ಛೆಯಂತೆ ಚಿಕಿತ್ಸೆ ಯನ್ನು ಒಪ್ಪಿಕೊಳ್ಳಬಹುದು ಅಥವಾ ನಿರಾಕರಿಸಬಹುದು. ವೈದ್ಯನ ಅಭಿಪ್ರಾಯಕ್ಕೆ ರೋಗಿಯು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕೆಂದಿಲ್ಲ.
? ನಾಲ್ಕನೆಯದು, ನ್ಯಾಯ ಮತ್ತು ಸಮಾನತೆ (ಜಸ್ಟೀಸ್). ರೋಗಿಯ ಆರ್ಥಿಕ ಸ್ಥಿತಿ, ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ ಅಥವಾ ಇತರ ವೈಯಕ್ತಿಕ ಹಿನ್ನೆಲೆಗಳಿಂದ ವೈದ್ಯಕೀಯ ಆರೈಕೆಯಲ್ಲಿ ಅನ್ಯಾಯ ವಾಗಬಾರದು. ಸೀಮಿತವಾದ ವೈದ್ಯಕೀಯ ಸೌಲಭ್ಯ ಗಳನ್ನು ನ್ಯಾಯಸಮ್ಮತವಾಗಿ ಬಳಸು ವುದೂ ಈ ತತ್ವದ ಭಾಗವಾಗಿದೆ. ಈ ತತ್ವಗಳ ಬೆಳವಣಿಗೆಯಿಂದ ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧದಲ್ಲಿಯೂ ಮಹತ್ವದ ಬದಲಾವಣೆಯಾಯಿತು. ಹಿಂದೆ ಅನೇಕ ಸಂದರ್ಭಗಳಲ್ಲಿ ವೈದ್ಯನೇ ರೋಗಿಗೆ ಯಾವುದು ಒಳ್ಳೆಯದು ಎಂದು ನಿರ್ಧರಿಸುತ್ತಿದ್ದ.
ರೋಗಿಯ ಅಭಿಪ್ರಾಯಕ್ಕೆ ಹೆಚ್ಚಿನ ಅವಕಾಶವಿರುತ್ತಿರಲಿಲ್ಲ. ಆದರೆ ಆಧುನಿಕ ವೈದ್ಯಕೀಯ ದಲ್ಲಿ ವೈದ್ಯನು ತನ್ನ ಜ್ಞಾನವನ್ನು ರೋಗಿಯೊಂದಿಗೆ ಹಂಚಿಕೊಂಡು, ಆತನಿಗೆ ಸೂಕ್ತ ವಾದ ನಿರ್ಧಾರ ತೆಗೆದುಕೊಳ್ಳಲು ನೆರವಾಗಬೇಕು ಎಂಬ ತತ್ವಕ್ಕೆ ಮಹತ್ವ ನೀಡಲಾಗುತ್ತಿದೆ. ಇದನ್ನೇ ತಿಳಿವಳಿಕೆಯುಕ್ತ ಒಪ್ಪಿಗೆ (ಇನ್-ಮ್ಡ ಕನ್ಸೆಂಟ) ಎಂದು ಕರೆಯುತ್ತೇವೆ. ಇದು ಕೇವಲ ಒಂದು ಅರ್ಜಿಗೆ ರೋಗಿಯ ಸಹಿ ಪಡೆಯುವುದಲ್ಲ.
ಕಾಯಿಲೆಯ ಸ್ವರೂಪ, ಪ್ರಸ್ತಾಪಿಸಿರುವ ಚಿಕಿತ್ಸೆಯ ಅಗತ್ಯ, ಅದರ ಸಂಭವನೀಯ ಪ್ರಯೋಜನಗಳು, ಅಪಾಯಗಳು ಮತ್ತು ಲಭ್ಯವಿರುವ ಪರ್ಯಾಯ ಗಳನ್ನು ರೋಗಿಗೆ ವಿವರಿಸಿ, ಆತ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಇದರ ಉದ್ದೇಶ. ಇಂದು ವೈದ್ಯಕೀಯ ವಿeನವು ಅಪಾರವಾಗಿ ಬೆಳೆದಿದೆ. ದೂರವೈದ್ಯಕೀಯದ ಮೂಲಕ ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ರೋಗಿಗೆ ವೈದ್ಯಕೀಯ ಸಲಹೆ ನೀಡಬಹುದು.
ಯಂತ್ರ ಸಹಾಯಿತ ಶಸ್ತ್ರಚಿಕಿತ್ಸೆಯಿಂದ ದೇಹದ ಕೆಲವು ಭಾಗಗಳಲ್ಲಿ ಅತ್ಯಂತ ಸೂಕ್ಷ್ಮ ವಾದ ಶಸ್ತ್ರಕ್ರಿಯೆ ಗಳನ್ನು ನಡೆಸಬಹುದು. ಕೃತಕ ಬುದ್ಧಿಮತ್ತೆಯ ನೆರವಿನಿಂದ ವೈದ್ಯಕೀಯ ಚಿತ್ರಗಳು ಮತ್ತು ಪರೀಕ್ಷಾ ಫಲಿತಾಂಶಗಳನ್ನು ವಿಶ್ಲೇಷಿಸಬಹುದು. ಆದರೆ ಈ ತಂತ್ರಜ್ಞಾನಗಳು ಹೊಸ ನೈತಿಕ ಪ್ರಶ್ನೆಗಳನ್ನೂ ಹುಟ್ಟುಹಾಕಿವೆ.
ಉದಾಹರಣೆಗೆ, ಒಂದು ಹಳ್ಳಿಯಲ್ಲಿರುವ ರೋಗಿಯ ವೈದ್ಯಕೀಯ ದಾಖಲೆಗಳನ್ನು ದೂರದ ನಗರ ದಲ್ಲಿರುವ ತಜ್ಞವೈದ್ಯರಿಗೆ ಕಳುಹಿಸಬೇಕಾಗಿದೆ ಎಂದು ಭಾವಿಸೋಣ. ಈ ದಾಖಲೆ ಗಳಲ್ಲಿ ರೋಗಿಯ ಕಾಯಿಲೆಗಳು, ಔಷಧಗಳು ಮತ್ತು ಅತ್ಯಂತ ವೈಯಕ್ತಿಕವಾದ ಮಾಹಿತಿ ಗಳಿರಬಹುದು. ಇಂತಹ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳು ನೋಡದಂತೆ ಹೇಗೆ ರಕ್ಷಿಸಬೇಕು? ರೋಗಿಗೆ ತನ್ನ ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎನ್ನುವುದು ತಿಳಿದಿದೆಯೆ? ಹಿಪ್ಪೊಕ್ರೇಟಿಸ್ ಕಾಲದಲ್ಲಿ ವೈದ್ಯನು ರೋಗಿಯ ರಹಸ್ಯವನ್ನು ತನ್ನ ಮನಸ್ಸಿನಲ್ಲಿ ಕಾಪಾಡಿಕೊಳ್ಳ ಬೇಕಾ ಗಿತ್ತು. ಇಂದು ಅದೇ ರಹಸ್ಯವನ್ನು ಕಂಪ್ಯೂಟರ್ ಗಳು, ಅಂತರ್ಜಾಲ ಮತ್ತು ಆಸ್ಪತ್ರೆಗಳ ಮಾಹಿತಿ ವ್ಯವಸ್ಥೆಗಳಲ್ಲಿಯೂ ಕಾಪಾಡಬೇಕಾಗಿದೆ.
ರೋಗಿಯ ಗೌಪ್ಯತೆಯನ್ನು ರಕ್ಷಿಸಬೇಕೆಂಬ ಮೂಲತತ್ವ ಬದಲಾಗಿಲ್ಲ. ಆದರೆ ಅದನ್ನು ಪಾಲಿಸುವ ವಿಧಾನಗಳು ಬದಲಾಗಿವೆ. ಯಂತ್ರ ಸಹಾಯಿತ ಶಸ್ತ್ರಚಿಕಿತ್ಸೆಯಲ್ಲಿಯೂ ಇದೇ ಪ್ರಶ್ನೆಗಳು ಎದುರಾಗುತ್ತವೆ. ಇಂದಿನ ಬಹುತೇಕ ಇಂತಹ ಶಸ್ತ್ರಚಿಕಿತ್ಸೆಗಳಲ್ಲಿ ಯಂತ್ರವು ತನ್ನಷ್ಟಕ್ಕೆ ತಾನೇ ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ. ತರಬೇತಿ ಪಡೆದ ಶಸ್ತ್ರ ಚಿಕಿತ್ಸಕನು ಯಂತ್ರದ ಉಪಕರಣಗಳನ್ನು ನಿಯಂತ್ರಿಸುತ್ತಾನೆ.
ಶಸ್ತ್ರಚಿಕಿತ್ಸೆಗೂ ಮೊದಲು ಅದರ ಪ್ರಯೋಜನ ಗಳು, ಅಪಾಯಗಳು ಮತ್ತು ಇತರ ಚಿಕಿತ್ಸಾ ಆಯ್ಕೆಗಳನ್ನು ರೋಗಿಗೆ ವಿವರಿಸಬೇಕು. ಒಂದು ವೇಳೆ ಶಸ್ತ್ರಚಿಕಿತ್ಸೆಯ ನಡುವೆ ಯಂತ್ರ ದಲ್ಲಿ ದೋಷ ಕಾಣಿಸಿಕೊಂಡರೆ ಏನು ಮಾಡಬೇಕು? ತಂತ್ರಜ್ಞಾನ ವಿಫಲವಾದಾಗ ರೋಗಿಯ ಸುರಕ್ಷತೆಯನ್ನು ಹೇಗೆ ಕಾಪಾಡಬೇಕು? ಚಿಕಿತ್ಸೆಯಲ್ಲಿ ತಪ್ಪು ಸಂಭವಿಸಿದರೆ ವೈದ್ಯ, ಆಸ್ಪತ್ರೆ ಮತ್ತು ಉಪಕರಣ ತಯಾರಕರ ಜವಾಬ್ದಾರಿಗಳನ್ನು ಹೇಗೆ ನಿರ್ಧರಿಸಬೇಕು? ಇವುಗಳಿಗೆ ವೈದ್ಯಕೀಯ ನೀತಿಯ ಜೊತೆಗೆ ಕಾನೂನು, ತಾಂತ್ರಿಕ ಸುರಕ್ಷತೆ ಮತ್ತು ವೃತ್ತಿಪರ ಜವಾಬ್ದಾರಿಗಳ ಆಧಾರದ ಮೇಲೆಯೂ ಉತ್ತರಗಳನ್ನು ಹುಡುಕಬೇಕಾಗುತ್ತದೆ.
ಕೃತಕ ಬುದ್ಧಿಮತ್ತೆಯ ಬಳಕೆಯು ಮತ್ತೊಂದು ಹೊಸ ಸವಾಲನ್ನು ತಂದಿದೆ. ಕಂಪ್ಯೂಟರ್ ವ್ಯವಸ್ಥೆ ಯೊಂದು ರೋಗಿಯ ಪರೀಕ್ಷಾ ಫಲಿತಾಂಶವನ್ನು ವಿಶ್ಲೇಷಿಸಿ ನಿರ್ದಿಷ್ಟ ಕಾಯಿಲೆ ಯ ಸಾಧ್ಯತೆಯನ್ನು ಸೂಚಿಸಬಹುದು. ಆದರೆ ಆ ಸೂಚನೆ ತಪ್ಪಾಗಿದ್ದರೆ? ಕೆಲವು ಜನಸಮುದಾಯಗಳ ಮಾಹಿತಿಯನ್ನು ಸಮರ್ಪಕವಾಗಿ ಒಳಗೊಳ್ಳದೆ ತರಬೇತಿ ಪಡೆದ ವ್ಯವಸ್ಥೆಯು ಅವರ ಬಗ್ಗೆ ತಪ್ಪು ನಿರ್ಣಯಗಳನ್ನು ನೀಡಿದರೆ? ಹೀಗಾಗಿ ತಂತ್ರಜ್ಞಾನವನ್ನು ಬಳಸುವಾಗ ಅದರ ನಿಖರತೆ, ಸುರಕ್ಷತೆ, ಮಿತಿಗಳು ಮತ್ತು ಮಾನವ ಮೇಲ್ವಿಚಾರಣೆಯ ಅಗತ್ಯವನ್ನು ಮರೆಯಬಾರದು.
ಯಂತ್ರದ ಸಲಹೆಯು ವೈದ್ಯಕೀಯ ನಿರ್ಧಾರಕ್ಕೆ ನೆರವಾಗಬಹುದು. ಆದರೆ ರೋಗಿಯ ಹಿತ ಮತ್ತು ಸುರಕ್ಷತೆಗೆ ನೀಡಬೇಕಾದ ಆದ್ಯತೆಯನ್ನು ಅದು ಬದಲಾಯಿಸಲಾರದು. ಇಲ್ಲಿ ಒಂದು ಸಂಗತಿಯನ್ನು ವಿಶೇಷವಾಗಿ ಗಮನಿಸಬೇಕು. ವೈದ್ಯಕೀಯದಲ್ಲಿ ಯಾವುದನ್ನು ಮಾಡಲು ಸಾಧ್ಯವಿದೆ ಎನ್ನುವುದಕ್ಕೂ, ಯಾವುದನ್ನು ಮಾಡುವುದು ಸರಿಯಾದದ್ದು ಎನ್ನುವುದಕ್ಕೂ ವ್ಯತ್ಯಾಸವಿದೆ.
ವಿಜ್ಞಾನವು ನಮಗೆ ಹೊಸ ಸಾಮರ್ಥ್ಯಗಳನ್ನು ನೀಡುತ್ತದೆ. ಆದರೆ ಆ ಸಾಮರ್ಥ್ಯಗಳನ್ನು ಯಾವಾಗ, ಹೇಗೆ ಮತ್ತು ಯಾರ ಹಿತಕ್ಕಾಗಿ ಬಳಸಬೇಕು ಎನ್ನುವುದನ್ನು ನಿರ್ಧರಿಸಲು ವೈದ್ಯಕೀಯ ನೀತಿಯ ಅಗತ್ಯವಿದೆ. ಪ್ರಾಚೀನ ಗ್ರೀಸ್ನ ವೈದ್ಯನು ತನ್ನ ರೋಗಿಯ ರಹಸ್ಯ ವನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದ. ಇಂದಿನ ವೈದ್ಯನು ರೋಗಿಯ ದಾಖಲೆ ಗಳನ್ನು ಸುರಕ್ಷಿತವಾಗಿ ಸಂರಕ್ಷಿಸಬೇಕಾಗಿದೆ. ಅಂದಿನ ವೈದ್ಯನು ರೋಗಿಗೆ ಉದ್ದೇಶ ಪೂರ್ವಕವಾಗಿ ಹಾನಿ ಮಾಡಬಾರದೆಂದು ಬದ್ಧನಾಗಿದ್ದ.
ಇಂದಿನ ವೈದ್ಯನು ಔಷಧಗಳು, ಶಸ್ತ್ರಚಿಕಿತ್ಸೆಗಳು, ವೈದ್ಯಕೀಯ ಉಪಕರಣಗಳು ಮತ್ತು ಕೃತಕ ಬುದ್ಧಿಮತ್ತೆಯ ಸಂಭವನೀಯ ಅಪಾಯ ಗಳನ್ನೂ ಪರಿಗಣಿಸಬೇಕಾಗಿದೆ. ಕಾಲ ಬದಲಾಗಿದೆ. ವೈದ್ಯಕೀಯ ಜ್ಞಾನ ಅಪಾರವಾಗಿ ಬೆಳೆದಿದೆ. ಚಿಕಿತ್ಸೆಯ ವಿಧಾನಗಳು ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಮುಂದುವರಿದಿವೆ. ಆದರೆ ವೈದ್ಯಕೀಯ ವೃತ್ತಿಯ ಮೂಲಭೂತ ನೈತಿಕ ಜವಾಬ್ದಾರಿ ಬದಲಾಗಿಲ್ಲ.
ರೋಗಿಯ ಹಿತವನ್ನು ಕಾಪಾಡುವುದು, ಆತನ ಘನತೆಯನ್ನು ಗೌರವಿಸುವುದು, ಆತನ ನಂಬಿಕೆಯನ್ನು ಉಳಿಸಿಕೊಳ್ಳುವುದು ಮತ್ತು ವೈದ್ಯಕೀಯ ಜ್ಞಾನವನ್ನು ಮಾನವೀಯತೆ ಯಿಂದ ಬಳಸುವುದು- ಇವೇ ನಿಜವಾದ ವೈದ್ಯಕೀಯ ನೀತಿಯ ಆಧಾರಸ್ತಂಭಗಳು. ವೈದ್ಯಕೀಯದ ಸಾಧನೆಗಳನ್ನು ಅಳೆಯಲು ನಾವು ಹೊಸ ಔಷಧಗಳು, ಶಸ್ತ್ರಚಿಕಿತ್ಸೆಗಳು ಮತ್ತು ತಂತ್ರಜ್ಞಾನಗಳನ್ನು ಪರಿಗಣಿಸುತ್ತೇವೆ. ಆದರೆ ವೈದ್ಯಕೀಯದ ನೈತಿಕ ಶ್ರೇಷ್ಠತೆಯನ್ನು ಅಳೆಯಬೇಕಾದರೆ ರೋಗಿಯು ಎಷ್ಟು ಸುರಕ್ಷಿತನಾಗಿದ್ದಾನೆ, ಅವನ ಹಕ್ಕುಗಳಿಗೆ ಎಷ್ಟು ಗೌರವ ದೊರೆಯುತ್ತಿದೆ ಮತ್ತು ಅವನ ನೋವಿಗೆ ಎಷ್ಟು ಮಾನವೀಯ ಸ್ಪಂದನೆ ದೊರೆಯುತ್ತಿದೆ ಎಂಬುದನ್ನು ನೋಡಬೇಕು. ವಿಜ್ಞಾನವು ವೈದ್ಯನ ಕೈಗೆ ಸಾಮರ್ಥ್ಯವನ್ನು ನೀಡುತ್ತದೆ. ವೈದ್ಯಕೀಯ ನೀತಿಯು ಆ ಸಾಮರ್ಥ್ಯ ವನ್ನು ಸರಿಯಾದ ದಾರಿಯಲ್ಲಿ ಬಳಸಲು ಮಾರ್ಗ ದರ್ಶನ ನೀಡುತ್ತದೆ.
1 ರೋಗಿಯ ಒಪ್ಪಿಗೆ ಮತ್ತು ಸ್ವಾಯತ್ತತೆ (Informed Consent Autonomy)
ಪ್ರಕರಣ: ಸರ್ಮೀ ಕೊಹ್ಲಿ ವರ್ಸಸ್ ಪ್ರಭಾ ಮಂಚಂದ (2008) ನೈತಿಕ ಸಮಸ್ಯೆ: ರೋಗಿಯ ಸ್ವಾಯತ್ತತೆ ಮತ್ತು ತಿಳಿವಳಿಕೆಯುಳ್ಳ ಒಪ್ಪಿಗೆ.
ಸಂಕ್ಷಿಪ್ತ ವಿವರಣೆ: ರೋಗಿಯು ಲ್ಯಾಪರೊ ಸ್ಕೋಪಿ ಪರೀಕ್ಷೆಗಾಗಿ ಹೋಗಿದ್ದರು, ಆದರೆ ವೈದ್ಯರು ರೋಗಿಯ ಸ್ಪಷ್ಟ ಒಪ್ಪಿಗೆಯಿಲ್ಲದೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ (Hysterectomy) ನಡೆಸಿದರು.
ತೀರ್ಪು/ತತ್ವ: ತುರ್ತು ಸಂದರ್ಭಗಳನ್ನು ಹೊರತು ಪಡಿಸಿ, ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಒಳ ನುಗ್ಗುವ ವೈದ್ಯಕೀಯ ವಿಧಾನವನ್ನು ಮಾಡುವ ಮೊದಲು ವೈದ್ಯರು ರೋಗಿಯಿಂದ ಖಚಿತ ಮತ್ತು ತಿಳಿವಳಿಕೆಯುಳ್ಳ ಒಪ್ಪಿಗೆಯನ್ನು (Informed Consent) ಕಡ್ಡಾಯವಾಗಿ ಪಡೆಯಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು.
2 ರೋಗಿಯ ಗೋಪ್ಯತೆ ವರ್ಸಸ್ ಸಾರ್ವಜನಿಕ ಆರೋಗ್ಯ (Patient Confidentiality vs. Public Health) ಪ್ರಕರಣ: ಮಿಸ್ಟರ್ ‘ಎಕ್ಸ್’ ವರ್ಸಸ್ ಆಸ್ಪತ್ರೆ ‘ಝೆಡ್’ (1998)
ನೈತಿಕ ಸಮಸ್ಯೆ: ವೈದ್ಯಕೀಯ ಗೋಪ್ಯತೆ ಮತ್ತು ಸಾರ್ವಜನಿಕ ಸುರಕ್ಷತೆಯ ನಡುವಿನ ಸಂಘರ್ಷ.
ಸಂಕ್ಷಿಪ್ತ ವಿವರಣೆ: ಆಸ್ಪತ್ರೆಯೊಂದು ರೋಗಿಯ ಹೆಚ್ಐವಿ ಸೋಂಕಿನ ಮಾಹಿತಿಯನ್ನು ಆತನ ಭಾವೀ ಪತ್ನಿಗೆ ಬಹಿರಂಗಪಡಿಸಿತು, ಇದರಿಂದ ಮದುವೆ ರದ್ದಾಯಿತು. ರೋಗಿ ಗೋಪ್ಯತೆ ಉಲ್ಲಂಘನೆಗಾಗಿ ಮೊಕದ್ದಮೆ ಹೂಡಿದರು.
ತೀರ್ಪು/ತತ್ವ: ವೈದ್ಯರು ರೋಗಿಯ ಗೋಪ್ಯತೆ ಕಾಪಾಡುವುದು ಕಡ್ಡಾಯವಾಗಿದ್ದರೂ, ಇತರರ ಆರೋಗ್ಯಕ್ಕೆ ಸ್ಪಷ್ಟ ಮತ್ತು ತಕ್ಷಣದ ಅಪಾಯವಿದ್ದಾಗ (ಉದಾಹರಣೆಗೆ: ಸಂಗಾತಿಗೆ ಮಾರಣಾತಿಕ ರೋಗ ತಗುಲುವ ಅಪಾಯ) ಈ ನಿಯಮವು ಅನ್ವಯಿಸುವುದಿಲ್ಲ ಮತ್ತು ರಕ್ಷಣೆ ನೀಡಲಾಗದು ಎಂದು ನ್ಯಾಯಾಲಯ ತಿಳಿಸಿತು.
3 ತುರ್ತು ವೈದ್ಯಕೀಯ ಸೇವೆ ಮತ್ತು ಬದುಕುವ ಹಕ್ಕು (Emergency Medical Care)
ಪ್ರಕರಣ: ಪರಮಾನಂದ ಕಟಾರಾ ವರ್ಸಸ್ ಭಾರತ ಸರ್ಕಾರ (1989)
ನೈತಿಕ ಸಮಸ್ಯೆ: ತುರ್ತು ಚಿಕಿತ್ಸೆ ನಿರಾಕರಣೆ ಮತ್ತು ವೃತ್ತಿಪರ ಕರ್ತವ್ಯ.
ಸಂಕ್ಷಿಪ್ತ ವಿವರಣೆ: ಸ್ಕೂಟರ್ ಅಪಘಾತದ ಬಲಿ ಪಶುವಿಗೆ ಪೊಲೀಸ್ ಠಾಣೆ ಮತ್ತು ಕಾನೂನು ಪ್ರಕ್ರಿಯೆಗಳ ಭಯದಿಂದ ಆಸ್ಪತ್ರೆಗಳು ತಕ್ಷಣದ ಚಿಕಿತ್ಸೆ ನೀಡಲು ನಿರಾಕರಿಸಿ ದಾಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸ ಲಾಯಿತು.
ತೀರ್ಪು/ತತ್ವ: ಮಾನವ ಜೀವದ ರಕ್ಷಣೆಯೇ ಅತ್ಯಂತ ಮುಖ್ಯವಾದದ್ದು. ಯಾವುದೇ ಪೊಲೀಸ್ ಅನುಮತಿ ಅಥವಾ ಕಾನೂನು ಔಪಚಾರಿಕತೆಗಳಿ ಗಾಗಿ ಕಾಯದೆ, ಗಾಯಗೊಂಡ ವ್ಯಕ್ತಿಗೆ ತಕ್ಷಣದ ತುರ್ತು ವೈದ್ಯಕೀಯ ನೆರವು ನೀಡುವುದು ಎಲ್ಲಾ ವೈದ್ಯರ (ಸರ್ಕಾರಿ ಅಥವಾ ಖಾಸಗಿ) ವೃತ್ತಿಪರ ಮತ್ತು ಕಾನೂನುಬದ್ಧ ಕರ್ತವ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.
4 ಗ್ರಾಹಕ ಸಂರಕ್ಷಣೆ ಮತ್ತು ಜವಾಬ್ದಾರಿ (Consumer Protection)
ಪ್ರಕರಣ: ಇಂಡಿಯನ್ ಮೆಡಿಕಲ್ ಅಸೋಸಿ ಯೇಷನ್ ವರ್ಸಸ್ ವಿ.ಪಿ. ಶಾಂತ (1995)
ನೈತಿಕ ಸಮಸ್ಯೆ: ರೋಗಿಗಳಿಗೆ ವೈದ್ಯರ ಜವಾಬ್ದಾರಿ.
ಸಂಕ್ಷಿಪ್ತ ವಿವರಣೆ: ವೈದ್ಯಕೀಯ ವೃತ್ತಿಯು ವಾಣಿಜ್ಯ ಸೇವೆಯಲ್ಲ ಮತ್ತು ಅದನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ತರಬಾರದು ಎಂದು ವೈದ್ಯಕೀಯ ಸಮುದಾಯ ವಾದಿಸಿತು.
ತೀರ್ಪು/ತತ್ವ: ವೈದ್ಯಕೀಯ ಸೇವೆಯನ್ನು ಹಣ ನೀಡಿ ಪಡೆಯುವ ರೋಗಿಗಳು ಗ್ರಾಹಕರು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ, ವೈದ್ಯಕೀಯ ವೃತ್ತಿಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ (Consumer Protection Act) ವ್ಯಾಪ್ತಿಗೆ ತಂದಿತು. ನಿರ್ಲಕ್ಷ್ಯಕ್ಕಾಗಿ ರೋಗಿ ಗಳು ಪರಿಹಾರ ಕೋರಬಹುದು ಎಂದಿತು.
5 ಕ್ರಿಮಿನಲ್ ಮತ್ತು ಸಿವಿಲ್ ನಿರ್ಲಕ್ಷ್ಯ (Criminal vs. Civil Negligence)
ಪ್ರಕರಣ: ಜೇಕಬ್ ಮ್ಯಾಥ್ಯೂ ವರ್ಸಸ್ ಪಂಜಾಬ್ ಸರ್ಕಾರ (2005)
ನೈತಿಕ ಸಮಸ್ಯೆ: ರೋಗಿಯ ನ್ಯಾಯ ಮತ್ತು ವೈದ್ಯರ ರಕ್ಷಣೆ ನಡುವಿನ ಸಮತೋಲನ.
ಸಂಕ್ಷಿಪ್ತ ವಿವರಣೆ: ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಖಾಲಿಯಾದ ಕಾರಣ ರೋಗಿ ಯೊಬ್ಬರು ಮೃತಪಟ್ಟಿದ್ದರಿಂದ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಯಿತು.
ತೀರ್ಪು/ತತ್ವ: ಸಣ್ಣಪುಟ್ಟ ತಪ್ಪುಗಳಿಗೆ ಅಥವಾ ನಿರ್ಣಯಗಳಲ್ಲಿನ ವ್ಯತ್ಯಾಸಗಳಿಗೆ ವೈದ್ಯರನ್ನು ಕ್ರಿಮಿನಲ್ ಅಪರಾಧಿಗಳಂತೆ ಕಾಣಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ಕ್ರಿಮಿನಲ್ ಹೊಣೆಗಾರಿಕೆಗೆ ಘೋರ ನಿರ್ಲಕ್ಷ್ಯ (Gross Negligence) ಇರಬೇಕು. ಅಲ್ಲದೆ, ಸ್ವತಂತ್ರ ತಜ್ಞರ ಅಭಿಪ್ರಾಯವಿಲ್ಲದೆ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿತು.