ಬೆಂಕಿ ಬಸಣ್ಣ ನ್ಯೂಯಾರ್ಕ್
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವನದ ಸಾಲಿನಂತೆ ತಾಯಿನಾಡಿನಿಂದ ಹೊರಗೆ ಇದ್ದು, ತಮ್ಮ ಕಸ್ತೂರಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಕಲೆಗಳು, ಆಟ ಪಾಠ, ಆಚರಣೆ, ವಿಚಾರಣೆ ಹಾಗೂಮುಂದಿನ ಪೀಳಿಗೆಗೆ ಕಲಿಸುವ ಉದ್ದೇಶದಿಂದ ಸೈಂಟ್ ಲೂಯಿಸ್ ಕನ್ನಡಾಭಿಮಾನಿ ಮಿತ್ರರ ಸಮಾಲೋಚನೆಯಿಂದ ಸಂಗಮದ ಉಗಮ.
ಇದು ಮಿಸ್ಸರಿ ಮತ್ತು ಮಿಸ್ಸಿಸ್ಸಿಪ್ಪಿ ನದಿಗಳ ಸಂಗಮ ಸ್ಥಾನ, ಸಂಗಮ ಕನ್ನಡ ಜನರ ಮಿಲನ ಸ್ಥಾನ. ಹಾಗಾಗಿ ಸಂಗಮದ ನಾಮಕರಣ ಈ ಕಾರಣಗಳಿಂದ. 1985ರ ಯುಗಾದಿಯ ಸಡಗರದೊಂದಿಗೆ ಸಂಗಮದ ಮೊತ್ತ ಮೊದಲ ಕಾರ್ಯಕ್ರಮ ನಡೆಯಿತು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಸಂಗಮ ಯುಗಾದಿ, ತಂದೆಯರ ದಿನಾಚರಣೆ ಹಾಗೂ ವನಭೋಜನ, ಗಣೇಶಹಬ್ಬ ಹಾಗೂ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಡಾ. ಶಂಕರ್ ಶಾಸ್ತ್ರೀ ಅವರು 40 ವರ್ಷಗಳಿಂದ ಗಣೇಶ ಹಬ್ಬವನ್ನು ಶಾಸೋಕ್ತವಾಗಿ, ಮಕ್ಕಳಿಗೆ ಮನ ಮುಟ್ಟುವಂತೆ ನಡೆಸಿಕೊಡು ತ್ತಿರುವುದು ಹಾಗೆಯೇ ಗಣೇಶ ಭಜನೆಗಳನ್ನು ಯುವ ಕಲಾವಿದರು ಪುಟಾಣಿ ಮಕ್ಕಳಿಗೆ ಕಲಿಸಿ ಹಾಡಿಸುತ್ತಿರುವ ಕ್ರಮ, ಅಂಬೊಡೆ ಕಡುಬುಗಳನ್ನು ಸದಸ್ಯರು ಒಂದೇ ಮನೆಯವರಂತೆ ಸೇರಿ ಮಾಡುತ್ತಿರುವುದು ವಿಶೇಷ ಸಂಗತಿ.
ಇದನ್ನೂ ಓದಿ: Raghav Sharma Nidle Column: ಬಿಹಾರ ಜೆಡಿಯು ಕಚೇರಿಯೊಳಗೆ ಕಾಪುವಿನ ಹುಡುಗ !
೮೦-೯೦ರ ದಶಕಗಳಲ್ಲಿ ಬಹಳ ಸಂಪನ್ಮೂಲಗಳ ಕೊರತೆ ಇದ್ದರೂ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿ ಕೊಟ್ಟು ಸದಸ್ಯರು ಮನೆಯ ತಯಾರಿಸಿದ ಊಟ ಉಪಹಾರ ತಂದು ಹಂಚಿ ತಿನ್ನುವ ಪದ್ದತಿಯಿತ್ತು. ಸಂಗಮ ಸದಸ್ಯರು ಕಥೆ, ಕವಿತೆ, ಚಿತ್ರ ವಿನ್ಯಾಸಗಳನ್ನು ತಮ್ಮ ಕೈಯ ಮುದ್ದಾಗಿ ಬರೆದು ಸಂಗಮ ವಾರ್ಷಿಕ ಪತ್ರಿಕೆಯನ್ನು ದಿವಂಗತ ಡಾ.ಅಶ್ವಥ್ ರಾವ್ ಅವರ ನೇತೃತ್ವ ದಲ್ಲಿ ಬಿಡುಗಡೆ ಮಾಡಿ ಪ್ರತೀ ಸದಸ್ಯರೊಡನೆ ಹಂಚಿಕೊಂಡಿರುವುದು ಸಂತಸದ ಸಂಗತಿ.
ವರ್ಷದಿಂದ ವರ್ಷಕ್ಕೆ ಮಕ್ಕಳು ಉತ್ಸಾಹದಿಂದ ಸಂಗಮದ ನೃತ್ಯ, ಸಂಗೀತ, ನಾಟಕಗಳಲ್ಲಿ ಭಾಗವ ಹಿಸಿ ಕಳೆ ಹೆಚ್ಚಿಸುತ್ತಿರುವುದು ನಮಗೆ ಸಾರ್ಥಕ ಭಾವನೆ ನೀಡಿದೆ. ಅಷ್ಟೇ ಅಲ್ಲದೆ ಸಂಗಮ ಚದುರಂಗ, ಕ್ರಿಕೆಟ, ಕರ್ನಾಟಕದ ಕ್ರೀಡೆಗಳಾದ ಲಗೋರಿ, ಚಿನ್ನಿದಾಂಡು, ಕಬಡ್ಡಿ ಮುಂತಾದ ಆಟಗಳನ್ನು ಯುವ ಪೀಳಿಗೆಗೆ ಪರಿಚಯಿಸಿ, ಪ್ರೋತ್ಸಾಹಿಸಿ, ಉಳಿಸಿ ಬೆಳೆಸುವ ಅವಕಾಶಗಳನ್ನು, ಕಲಿಸುತಿದೆ. ಸಂಗಮದ ಸದಸ್ಯರು ಹಿಂದೂ ದೇವಾಲಯ ಮತ್ತು ಅದಕೆ ಸೇರಿದ ಯೂತ್ ಗ್ರೂಪ್, ಬಾಲವಿಹಾರ್, ಸೈಂಟ್ ಲೂಯಿಸ್ ಏರಿಯ ಫುಡ್ ಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿಕೊಟ್ಟು, ನಿಸ್ವಾರ್ಥ ಸೇವೆಯ ಮಹತ್ವವನ್ನು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವ ಕೆಲಸ ನಿರಂತರ.
೮೦ರ ದಶಕದಲ್ಲಿ, ಮಧ್ಯಮವಲಯ ಕನ್ನಡ ಸಮ್ಮೇಳನ ಸೈಂಟ್ ಲೂಯಿಸ್‌ನಲ್ಲಿ ವಿಜೃಂಭಣೆ ಯಿಂದ ನಡೆಯಿತು. ಇದಕ್ಕೆ ಮಿಸ್ಸೋರಿ ಆಸುಪಾಸಿನ ರಾಜ್ಯಗಳ ಕನ್ನಡಿಗರೂ ಭಾಗವಹಿಸಿ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು. ಕವಿಗೋಷ್ಟಿ, ವಿವಿಧ ಕನ್ನಡ ಕೂಟಗಳ ನಾಟಕ, ಜಾನಪದ ನೃತ್ಯ, ಭಾವ ಗೀತೆಗಳು ನಡೆಸಲ್ಪಟ್ಟು ಕನ್ನಡ ಕೋಗಿಲೆ ಹಾಡಿ ನಲಿಯಿತು. ಆ ಸಮಯದಲ್ಲಿ ಸಂಗಮ ಕನ್ನಡ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಅಮೆರಿಕ ಕನ್ನಡ ಪತ್ರಿಕೆಯ ಹರಿಹರೇಶ್ವರ ದಂಪತಿಗಳು ಆ ಸಮಯದಲ್ಲಿ ಸೈಂಟ್ ಲೂಯಿಸ್ ನಲ್ಲಿ ನೆಲೆಸಿದ್ದರು. ಅವರು ಸಂಗಮದ ಮಕ್ಕಳಿಗೆ ಕನ್ನಡ ಶಾಲೆಯನ್ನು ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರಾರಂಭಿಸಿದರು. ಹೀಗಾಗಿ ನಮ್ಮ ಮಕ್ಕಳಿಗೆ ಕನ್ನಡ ಅಕ್ಷರ ಹಾಗೂ ವ್ಯಾಕರಣ ಪರಿಚಯ ಆಯ್ತು. ಹರಿಹರೇಶ್ವರ ದಂಪತಿಗಳಿಗೆ ಸಂಗಮ ಚಿರಋಣಿ, ಕನ್ನಡ ಶಾಲೆ ಮುಂದುವರೆದು ಈಗ ಶಾಲೆಯ ಮಕ್ಕಳು ಕನ್ನಡ ನಿರರ್ಗಳವಾಗಿ ಮಾತನ್ನಾಡುತ್ತಿರುವುದು ಶ್ಲಾಘನೀಯ.
ಹಲವಾರು ವರ್ಷಗಳಿಂದ ಸಂಗಮ ಕಾರ್ಯಕಾರಿ ಸಮಿತಿಗಳು ನಮ್ಮ ಕನ್ನಡಿಗರೇ ಆದ ಮೈಸೂರು ಅನಂತಸ್ವಾಮಿ ಮತ್ತು ಅವರ ಮಕ್ಕಳು. ಡಾ.ವಿಧ್ಯಾಭೂಷಣ, ಶ್ಯಾಮಲಾ ಭಾವೆ. ಶಂಭು, ಶಿವಾನಂದ ಹೆಗ್ಗಡೆ ಮತ್ತು ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ತಂಡಗಳು, ಸಿ.ಆರ್. ಸಿಂಹ ನಾಟಕಗಳು, ಕವಿಗಳಾದ ಲಕ್ಷ್ಮೀನಾರಾಯಣ ಭಟ್ಟ ಹಾಗೂ ನಿಸ್ಸಾರ್ ಅಹ್ಮದ್, ಕಣ್ಣನ್ ಅವರ ಹಾಸ್ಯ ಉತ್ಸವ, ವರ್ಮಾ (ಆಶು ಚಿತ್ರ) ಹಾಗೂ ಶತವಧಾನಿ ಗಣೇಶ್ (ಆಶು ಕವಿತೆ), ಚಿತ್ರ ನಿರ್ದೇಶಕ ಟಿ. ಎಸ್. ನಾಗಭೂಷಣ. ಹೀಗೆ ಇನ್ನೂ ವಿವಿಧ ಕಲಾವಿದರ ತಂಡಗಳನ್ನು ಬರಮಾಡಿಕೊಂಡು ಅವರ ಕಾರ್ಯಕ್ರಮಗಳನ್ನು ಮಕ್ಕಳೊಂದಿಗೆ ಕುಳಿತು, ಸವಿದು ಕಲಾವಿದರನ್ನು ಆದರಿಸಿ ಗೌರವಿಸು ತ್ತಿರುವುದು ಸಂಗಮದ ಬೆಳವಣಿಗೆಗೆ ರೆಕ್ಕೆ ಕೊಟ್ಟಂತಿದೆ.