ಗ.ನಾ.ಭಟ್ಟ
ಸೆ.4 ಹಾಗೂ 5ರಂದು ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಲೇಖನ.
ಶ್ರೀಕೃಷ್ಣನ ವಿಚಾರವೆಂದರೆ ಮಾತು ಹಿಮ್ಮೆಟ್ಟುತ್ತದೆ; ಮನಸ್ಸು ಹೆದರುತ್ತದೆ; ಬುದ್ಧಿ ಸ್ತಬ್ಧವಾಗುತ್ತದೆ. ಅಷ್ಟು ವಿಸ್ಮಯಭರಿತವಾದ, ಅಷ್ಟು ಸುಲಭವಲ್ಲದ, ಚರಿತ್ರೆ ಅದು. ಒಂದು ಕಡೆ ಆತ ಗೋಪಿಯ ರೊಡನೆ ಸರಸಸಲ್ಲಾಪ ನಡೆಸುತ್ತಾನೆ; ಇನ್ನೊಂದು ಕಡೆ ಅರ್ಜುನನಿಗೆ ಗೀತೋಪದೇಶ; ಮತ್ತೊಂದು ಕಡೆ ಸುಭದ್ರಾ ಹರಣಕ್ಕೆ ಬೇಕಾದ ಸಂಚನ್ನು ಏರ್ಪಡಿಸುತ್ತಾನೆ; ಜರಾಸಂಧನು ಮಹಾದುಷ್ಟನೆಂದು ಅವನ ವಧೆಗೆ ಉಪಾಯ ಮಾಡುತ್ತಾನೆ; ಯುದ್ಧದಲ್ಲಿ ತಂತ್ರಗಳನ್ನು ಹೆಣೆಯುತ್ತಾನೆ; ಫಲಾಭಿಲಾಷೆ ಯಿಲ್ಲದೆ ಕರ್ಮ ಮಾಡಬೇಕೆಂದು ಉಪದೇಶ ಮಾಡುತ್ತಾನೆ; ‘ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ’ ಗೀತೆ: ಸುಖ-ದುಃಖಗಳನ್ನೂ, ಲಾಭ-ನಷ್ಟಗಳನ್ನೂ, ಜಯ-ಅಪಜಯ ಗಳನ್ನೂ ಸಮಾನವಾಗಿ ಸ್ವೀಕರಿಸಬೇಕೆಂದು ಅಪ್ಪಣೆ ಮಾಡುತ್ತಾನೆ.
ಹಾಗೆಯೇ ಪಾಂಡವರಿಗೇ ಜಯ ಆಗಬೇಕೆಂದು ಅಪೇಕ್ಷಿಸುತ್ತಾನೆ. ಇವೆಲ್ಲವನ್ನೂ ಹೇಗೆ ಅರ್ಥಮಾಡಿ ಕೊಳ್ಳುವುದು. ಈ ಅಭಿಪ್ರಾಯವನ್ನೇ ಪುಷ್ಟೀಕರಿಸುವ ಒಂದು ಮಾತು ಭಾಗವತದ ಆರಂಭದಲ್ಲೇ ಬರುತ್ತದೆ.
ಮಲ್ಲಾನಾಮಶನಿರ್ನೃಣಾಂ ನರವರಃ ಸ್ತ್ರೀಣಾಂ ಸ್ಮರೋ ಮೂರ್ತಿಮಾನ್ |
ಗೋಪಾನಾಂ ಸ್ವಜನೋಸತಾಂ ಕ್ಷಿತಿಭುಜಾಂ ಶಾಸ್ತಾ ಸ್ವಪಿತ್ರೋಃಶಿಶುಃ ||
ಮೃತ್ಯುರ್ಭೋಜಪತೇ ರ್ವಿರಾಡವಿದು ಷಾಂ ತತ್ತ್ವಂ ಪರಂ ಯೋಗಿನಾಮ್ |
ವೃಷ್ಣೀನಾಂ ಪರದೇವತೇತಿ ವಿದಿತೋ ರಂಗಂಗತಃ ಸಾಗ್ರಜಃ ||
ಇದನ್ನೂ ಓದಿ: Krishna Janmastami 2026: ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ
‘ಮಲ್ಲರಿಗೆ ಸಿಡಿಲಾಗಿ, ನರರಿಗೆ ನರಶ್ರೇಷ್ಠನಾಗಿ, ಸ್ತೀಯರಿಗೆ ಸಾಕ್ಷಾತ್ ಮನ್ಮಥನಾಗಿ, ಗೋಪಾಲಕರಿಗೆ ತನ್ನವನಾಗಿ, ದುಷ್ಟರಾಜರಿಗೆ ಶಾಸಕನಾಗಿ, ತಂದೆ-ತಾಯಿಯರಿಗೆ ಮುದ್ದಿನ ಶಿಶುವಾಗಿ, ಕಂಸನಿಗೆ ಮೃತ್ಯುವಾಗಿ, ಋಷಿ-ಮುನಿಗಳಿಗೆ ಪರತತ್ತ್ವವಾಗಿ, ವೃಷ್ಣಿಗಳಿಗೆ ಪರದೇವತೆಯಾಗಿ ಕಾಣಿಸಿಕೊಂಡ ಶ್ರೀಕೃಷ್ಣ ತನ್ನ ಅಣ್ಣ ಬಲರಾಮನೊಡನೆ ಯುದ್ಧವೇದಿಕೆಯನ್ನು ಹತ್ತಿದ’. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಂಡವನು ಕೃಷ್ಣಪರಮಾತ್ಮ. ಇಂಥವನನ್ನು ಅರ್ಥಯಿಸಿ ಕೊಳ್ಳುವುದು ಹೇಗೆ? ಶ್ರೀಕೃಷ್ಣನ ವ್ಯಕ್ತಿತ್ವದಲ್ಲಿ ನಮಗೆ ಬಾಲ್ಯ, ಗೋಪೀವಿಲಾಸ, ರಾಜಕೀಯ ಮತ್ತು ಪರತತ್ತ್ವಬೋಧನೆ ಎಂಬ ನಾಲ್ಕು ಅಂಶಗಳು ಪ್ರಮುಖವಾಗಿ ಕಂಡುಬರುತ್ತವೆ. ಇವುಗಳಲ್ಲಿ ಬಾಲ್ಯ ಮತ್ತು ಗೋಪೀವಿಲಾಸ ಹೆಚ್ಚು ಪರಿಚಿತ. ಭರತನಾಟ್ಯ, ನಾಟಕ, ಹರಿಕಥಾ ಕಾರರು ಕೃಷ್ಣನ ಬಾಲ್ಯ ಮತ್ತು ಗೋಪೀವಿಲಾಸವನ್ನು ಉತ್ಪ್ರೇಕ್ಷಿಸಿ, ಅತಿರಂಜಿಸಿದ್ದಾರೆ. ಕೃಷ್ಣ ಎಂದರೆ ಕಾಮುಕ, ಲಂಪಟ ಅಂತ ಪ್ರಚುರಿಸಿದ್ದಾರೆ.
ವಾಸ್ತವವಾಗಿ ಕೃಷ್ಣ ಜಾರನೂ ಅಲ್ಲ; ಕಾಮುಕ ನೂ ಅಲ್ಲ. ಕಾಮಾರ್ತರಾಗಿ ಬಂದವರಿಗೆ ಆಶ್ರಯ ಕೊಟ್ಟ ಅಷ್ಟೇ! ಅವನನ್ನು ಬಯಸಿ ಬಂದ ಗೋಪಕನ್ಯೆಯರು ವ್ಯಭಿಚಾರಿಣಿಯರಲ್ಲ. ತಮ್ಮ ಪತಿಗಳ ವಿನಾ ಅವರು ಬೇರೆ ಯಾರಲ್ಲಾ ದರೂ ಅನುರಕ್ತರಾಗಿದ್ದರೆ ಅದು ಕೃಷ್ಣನಲ್ಲಿ ಮಾತ್ರ. ಅವನು ಪರಮಾತ್ಮ ಸ್ವರೂಪನೆಂದು, ಪರಮೇಶ್ವರಪ್ರತೀಕವೆಂದು ಅವನಲ್ಲಿ ಅನುರಕ್ತರಾದರು. ದ್ರೌಪದಿಗೆ ಐವರು ಗಂಡಂದಿರಂತೆ, ಗೋಪಿಯರಿಗೆ ಇಬ್ಬರು ಗಂಡಂದಿರು. ಒಬ್ಬ ಸ್ವಂತ ಗಂಡ ಇನ್ನೊಬ್ಬ ಕೃಷ್ಣ. ಇದೆಂತಹ ವೈಚಿತ್ರ್ಯ! ಇಲ್ಲೇ ಇರುವುದು ಇದರ ಮರ್ಮ.
ಲೈಂಗಿಕ ಚಾಪಲ್ಯವು ಮನುಷ್ಯಸಾಮಾನ್ಯ ಲಕ್ಷಣ. ಅದಕ್ಕೆ ಸ್ತ್ರೀಪುರುಷ ಭೇದವಿಲ್ಲ. ಕೆಲವರಲ್ಲಿ ಗೂಢವಾಗಿರುತ್ತದೆ. ಇನ್ನು ಕೆಲವರಲ್ಲಿ ಪ್ರಕಟವಾಗಿರುತ್ತದೆ. ಯಾರು ಅದನ್ನು ಪ್ರಕಟಿಸುವು ದಿಲ್ಲವೋ ಅವರಿಂದ ಇತರರು ಕೆರಳುವುದಿಲ್ಲ. ಅದು ಒಳ್ಳೆಯದು. ಆದರೆ ಯಾರು ಆ ಚಪಲವನ್ನು ತಡೆಯಲಾರರೋ ಅವರಲ್ಲಿ ಅದು ವ್ಯಾಧಿಯಾಗಿ ಅವರನ್ನು ನರಳಿಸುತ್ತಿರುತ್ತದೆ. ರಾವಣ, ಕೀಚಕ, ಜವಾಹರ್‌ಲಾಲ್ ನೆಹರೂ, ಪ್ರೊತಿಮಾ ಬೇಡಿ, ವಿಡಿಯೋದಲ್ಲಿ ಸಿಕ್ಕಿಬಿದ್ದ ಕೆಲವು ರಾಜಕಾರಣಿಗಳು ಇವರೆಲ್ಲರೂ ಆ ವರ್ಗಕ್ಕೆ ಸೇರಿದವರು. ಇದೊಂದು ಬಗೆಯ ವ್ಯಾಧಿ. ಅಂತಹವರಿಗೆ ಚಿಕಿತ್ಸೆ ಬೇಕಾಗು ತ್ತದೆ. ಅದನ್ನು ಕೃಷ್ಣ ಗೋಪಿಕೆಯರಿಗೆ ನೀಡಿದ. ಇದನ್ನು ಉತ್ಪ್ರೇಕ್ಷಿಸಿ ಕಥೆ ಕಟ್ಟಿ ಹಾಡಿದವರು ಕೃಷ್ಣನನ್ನು ಜಾರಚೋರಶಿ ಖಾಮಣಿ ಎಂದು ವರ್ಣಿಸಿದ್ದಾರೆ. ಅದು ಅವನ ಮೇಲಿನ ಅಪವಾದವೇ ವಿನಾ ಸತ್ಯ ಸಂಗತಿಯಲ್ಲ. ಹಾಗಾದರೆ ಇದರ ಗೂಢ ಏನು? ಕಾಮ ಒಳ್ಳೆಯದಲ್ಲ; ಅದಕ್ಕಾಗಿ ವಿಷಯಾಸಕ್ತರು ಇಂದ್ರಿಯನಿಗ್ರಹ ಮಾಡಬೇಕು. ಮನಸ್ಸನ್ನು ಜಯಿಸಬೇಕು- ಎಂದು ಯಾರು ಬೇಕಾದರೂ ಉಪದೇಶ ಮಾಡಬಹುದು. ಆದರೆ ಆಚರಿಸುವುದು ಬಲು ಕಷ್ಟ. ಇದನ್ನು ಹೇಳುವು ದಕ್ಕೆ ಯಾರಿಗೆ ಅಧಿಕಾರವಿದೆ? ಇಂದ್ರಿಯ ಜಯಿಸಿದವರು ಎಷ್ಟು ಮಂದಿ ಇದ್ದಾರೆ?
ವಿಶ್ವಾಮಿತ್ರಪರಾಶರಪ್ರಭೃತಯೋ
ವಾತಾಂಬುಪರ್ಣಾಶನಾಃ |
ತೇಪಿ ಸೀಮುಖಪಂಕಜಂ ಸುಲಲಿತಂ ದೃಷ್ಟ್ವಾಪಿ
ಮೋಹಂಗತಾಃ || (ಭರ್ತೃಹರಿಯ ನೀತಿಶತಕ)
‘ನೀರು, ಗಾಳಿ, ಎಲೆಗಳನ್ನಷ್ಟೇ ತಿಂದು ಬದುಕುವ ವಿಶ್ವಾಮಿತ್ರಪರಾಶರರಂತಹ ಋಷಿ-ಮುನಿಗಳೇ ಮನೋಹರವಾದ ಸೀಮುಖಕಮಲವನ್ನು ನೋಡಿ ಮೋಹಾವಿಷ್ಟರಾದರು. ಬೇಟೆಗೆಂದು ಬಂದ ದುಃಶಂತ ಶಕುಂತಲೆಯನ್ನು ನೋಡಿ ಮರುಳಾದ. ಇನ್ನು ಉಳಿದವರ ಪಾಡೇನು?’ ಎಂದು ಕೈಚೆಲ್ಲಿ ಕುಳಿತುಕೊಳ್ಳಬಹುದು. ಛೇ! ಹಾಗೇನೂ ಇಲ್ಲ. ‘ಇಂದ್ರಿಯಗಳನ್ನು ಗೆದ್ದವರೂ ಇದ್ದಾರೆ. ಅವರೇ ಈಶ್ವರರು’ ಎಂದು ಶುಕಮಹರ್ಷಿಗಳು ಹೇಳುತ್ತಾರೆ.
ಧರ್ಮವ್ಯತಿಕ್ರಮೋ ದೃಷ್ಟಃ ಈಶ್ವರಾಣಾಂ ಚ ಸಾಹಸಮ್ |
ತೇಜೀಯಸಾಂ ನ ದೋಷಾಯ ವಹ್ನೇಃ
ಸರ್ವಭುಜೋ ಯಥಾ || (ಭಾಗವತ: 10-33)
‘ಯಾರ ಮೇಲೆ ಪ್ರಭುತ್ವ ನಡೆಸುವ ಇನ್ನೊಂದು ಶಕ್ತಿ, ವ್ಯಕ್ತಿ ಇಲ್ಲವೋ ಅವರೇ ಈಶ್ವರರು. ಇಂದ್ರಿಯ ಗಳನ್ನೂ, ಅಹಂಕಾರವನ್ನೂ ಗೆದ್ದವರು, ಯಾವುದರಿಂದಲೂ ಮನೋವಿಕಾರವನ್ನು ಹೊಂದದ ವರು, ಯಾವುದಕ್ಕೂ ಅಧೀನರಾಗದವರು ಅವರೇ ಈಶ್ವರರು’ ಎಂದು ಶುಕರು ಹೇಳುತ್ತಾರೆ.
ಯಾವುದನ್ನೂ ಬಯಸಬೇಕಾದ ಕಾರಣವಿಲ್ಲದವರು, ಧರ್ಮವ್ಯತಿಕ್ರಮ ಮಾಡಿದಂತೆ ತೋರು ವವರು, ಧರ್ಮವನ್ನು ತಲೆಕೆಳಗೆ ಮಾಡಿದಂತೆ ನಡೆದುಕೊಳ್ಳುವವರು- ಅಂತಹವರು ಕಂಡು ಬಂದರೆ ಅದು ದೋಷವಲ್ಲವೆ? ಎಂದು ಕೇಳಿದರೆ, ಅಲ್ಲವೆನ್ನುತ್ತದೆ ಭಾಗವತ. ಬೆಂಕಿಯಲ್ಲಿ ಒಳ್ಳೆಯ ಪದಾರ್ಥ, ಕೆಟ್ಟ ಪದಾರ್ಥ ಎಂಬ ಭೇದವಿಲ್ಲ. ಯಾವುದು ಬಿದ್ದರೂ ಅವನ್ನು ಸುಟ್ಟುಹಾಕುತ್ತದೆ. ಯಾವುದರಿಂದಲೂ ಅದಕ್ಕೆ ದೋಷ ಅಂಟಿಕೊಳ್ಳುವುದಿಲ್ಲ.
ಅಲ್ಲಿರುವ ದೋಷವನ್ನು ಪರಿಹಾರ ಮಾಡುತ್ತದೆ. ‘ಹಾಗೆಯೇ ಈಶ್ವರರಾದವರಲ್ಲಿ ಧರ್ಮವ್ಯತಿ ಕ್ರಮವೇನಾದರೂ ಕಂಡುಬಂದರೆ ಅವರು ಬೆಂಕಿಯಂತೆ ಅದರ ದೋಷವನ್ನು ಸುಡುತ್ತಾರೆ. ಧರ್ಮಾತಿಕ್ರಮಣ ಮಾಡಿದವರಂತೆ ಕಂಡುಬಂದವರ ಅಂತರಂಗದಲ್ಲಿ, ಅವರ ದೋಷದ ವಿಷಯ ದಲ್ಲಿ ಅವರಿಗೆ ಪ್ರೀತಿಯಿದೆ, ಅವರ ದೋಷದಿಂದ, ದೌರ್ಬಲ್ಯದಿಂದ ಅವರು ಲಾಭ ಪಡೆಯುತ್ತಾರೆ, ಅದರಿಂದ ಅವರು ಸುಖಪಡುತ್ತಾರೆ’ ಎಂದು ನಾವು ಭಾವಿಸಬಾರದು. ಅಷ್ಟೇ ಅಲ್ಲ. ಅವರಂತೆ (ಈಶ್ವರರಂತೆ) ನಾವು ನಡೆದುಕೊಳ್ಳಬಾರದು.
ಭಾರ್ಗವೇಣ ಹತಾ ಮಾತಾ ಏಕಜಾಯಾಶ್ಚ
ಪಾಂಡವಾಃ |
ಪರದಾರರತಃ ಕೃಷ್ಣೋ ನ ದೇವಚರಿತಂ ಚರೇತ್ ||
‘ಪರಶುರಾಮ ತಾಯಿಯನ್ನು ಕೊಂದ; ಪಾಂಡವರೈವರು ಒಬ್ಬಳನ್ನೇ ಮದುವೆಯಾಗಿದ್ದರು; ಕೃಷ್ಣನು ಪರರ ಪತ್ನಿಯರಲ್ಲಿ ಅನುರಕ್ತನಾಗಿದ್ದ; ಆದ್ದರಿಂದ ದೇವಾಂಶಪುರುಷರು ನಡೆದಂತೆ ಇತರರು ನಡೆದುಕೊಳ್ಳಬಾರದು’ ಎಂಬ ಈ ಸಿದ್ಧಾಂತವನ್ನು ಜಗತ್ತು ಅಂಗೀಕರಿಸಬೇಕು.
ಪರಮೇಶ್ವರ ವಿಷಪಾನ ಮಾಡಿದ; ಕಾಮದಹನ ಮಾಡಿದ ಅಂತ ನಾವು ಮಾಡಹೋದರೆ ನಾವು ಸಾಯಬೇಕಾದೀತು! ಈ ಎಚ್ಚರ ನಮಗಿರಬೇಕು.
ಶ್ರೀಕೃಷ್ಣ ಗೋಪಕನ್ಯೆಯರ ವಿಷಯದಲ್ಲಿ ವಿಶೇಷ ಧರ್ಮವನ್ನು ಆಚರಿಸಿದ್ದ. ಕೃಷ್ಣನು ತನ್ನ ಮಾಯಾಶಕ್ತಿಯಿಂದ ಗೋಪಿಯರಿಗೆ ಸಲ್ಲಬೇಕಾ ದದ್ದನ್ನು ಅವರಿಗೆ ಸಲ್ಲಿಸಿದ್ದ. ಅವರ ಗಂಡಂದಿರಿಗೆ ಸಲ್ಲಬೇಕಾದುದನ್ನು ಅವರಿಗೆ ಸಲ್ಲಿಸಿದ್ದ. ಅವರ ಪತ್ನಿಯರು ಅವರ ಬಳಿಯೇ ಇರುವಂತೆ ಮಾಯೆಯನ್ನು ಬೀಸಿದ್ದ. ಅವರು ಯಾವ ತಕರಾರನ್ನೂ ಮಾಡಿರಲಿಲ್ಲ; ಅಸೂಯೆ ಪಟ್ಟಿರಲಿಲ್ಲ.
ನಾಸೂಯನ್ ಖಲು ಕೃಷ್ಣಾಯ ಮೋಹಿತಾಸ್ತಸ್ಯ ಮಾಯಯಾ |
ಮನ್ಯಮಾನಾಃ ಸ್ವಪಾರ್ಶ್ವಸ್ಥಾನ್ ಸ್ವಾನ್ ಸ್ವಾನ್ ದಾರಾನ್ ವ್ರಜೌಕಸಃ || (ಭಾಗವತ: 10-36)
ಎಂದು ಶುಕಮಹರ್ಷಿಗಳು ಬರೆದಿದ್ದಾರೆ. ಯಾರು ಕಾಮಕ್ರೋಧಗಳನ್ನೂ, ಸ್ವಾರ್ಥವನ್ನೂ ಗೆದ್ದಿರು ತ್ತಾರೋ, ಯಾರಿಗೆ ಭೋಗಕಾಮನೆಗಳು ಇರುವುದಿಲ್ಲವೋ ಅಂತಹವವರು ಮಾತ್ರ ಈಶ್ವರರು. ಭಗವಂತ ಅಂತಹ ಈಶ್ವರ. ಅಂಥವರಿಗೆ ಸಾಮಾನ್ಯಜನದ ವಿಧಿ-ನಿಷೇಧಗಳು ಅನ್ವಯಿಸುವುದಿಲ್ಲ. ಯಾರಿಗೆ ಚಿತ್ತವಿಕಾರಗಳಿವೆಯೋ ಅವರಿಗೆ ಮಾತ್ರ ವಿಧಿ-ನಿಷೇಧಗಳು. ಕೃಷ್ಣ ಯಾಕೆ ಹೀಗೆ ನಡೆದು ಕೊಂಡ ಎಂದು ಕೇಳಿದರೆ ಲೋಕಾನುಗ್ರಹಕ್ಕಾಗಿ ಎಂದು ಹೇಳಬೇಕು. ಇದು ಅವತಾರಗಳ ವೈಶಿಷ್ಟ್ಯವೂ ಹೌದು.
ಕೃಷ್ಣನ ಮಹಿಮೆ ಅದಾವ ಪರಿಯದೆಂದರೆ ‘ಇಷ್ಟೊಂದು ಮಂದಿ ಮಡದಿಯರನ್ನು ಹೊಂದಿದ ಕೃಷ್ಣ ಹೇಗೆ ಸಂಸಾರ ನಡೆಸುತ್ತಿದ್ದಾನೆ’ ಎಂದು ನಾರದರಿಗೆ ಒಮ್ಮೆ ಸೋಜಿಗವುಂಟಾಯಿತಂತೆ. ಪರೀಕ್ಷಿಸಿಯೇ ಬಿಡಬೇಕೆಂದು ಹೊರಟರಂತೆ. ಅಲ್ಲಿ ಅವರು ಕಂಡದ್ದೇನು? ಅವನು ಸಾವಿರ ಸಾವಿರ ಮಡದಿಯರ ಮನೆಯಲ್ಲೂ ಇದ್ದನಂತೆ. ಕೆಲವರ ಮನೆಯಲ್ಲಿ ಸ್ನಾನ, ಕೆಲವೆಡೆ ದೇವರ್ಷಿ-ವಿಪ್ರರ ಅರ್ಚನೆ, ಕೆಲವರ ಮನೆಯಲ್ಲಿ ವಸ್ತ್ರಾಲಂಕಾರ, ಮತ್ತೆ ಕೆಲವರ ಮನೆಯಲ್ಲಿ ಹಾಸ್ಯಕಥಾ ಸಂಭಾ ಷಣೆ, ಇನ್ನು ಕೆಲವರ ಮನೆಯಲ್ಲಿ ನೃತ್ಯಗೀತವಿನೋದ, ಅಲ್ಲಲ್ಲಿ ಉಪನಯನ, ಮದುವೆಯ ಸಂಭ್ರಮ, ಕೆಲವರ ಮನೆಯಲ್ಲಿ ಮಂತ್ರಾಲೋಚನೆ - ಹೀಗೆ ಅವನು ಗೃಹಸ್ಥಧರ್ಮವನ್ನು ಪಾಲಿಸು ತ್ತಿದ್ದನಂತೆ.
ಇತ್ಯಾಚರಂತಂ ಸದ್ಧರ್ಮಾನ್ ಪಾವನಾನ್ ಗೃಹಮೇಧಿನಾಮ್ |
ತಮೇವ ಸರ್ವಗೇಹೇಷು ಸಂತಮೇಕಂ ದದರ್ಶ ಹ || (ಭಾಗವತ: 10-69, 41)
ಇಂಥಾದ್ದು ಭಗವಂತನ ಮಹಿಮೆ ಮತ್ತು ಮಾಯೆ. ಅದಕ್ಕಾಗಿಯೇ ನಾನು ಈ ಲೇಖನದ ಆರಂಭ ದಲ್ಲಿ ‘ಕೃಷ್ಣನ ವಿಚಾರವೆಂದರೆ ಮಾತು ಹಿಮ್ಮೆಟ್ಟುತ್ತದೆ; ಮನಸ್ಸು ಹೆದರುತ್ತದೆ; ಬುದ್ಧಿ ಸ್ತಬ್ಧವಾಗು ತ್ತದೆ; ಅವನು ಎಟುಕುವುದಿಲ್ಲ’ ಎಂದದ್ದು. ನಿಮಗೆ ಎಟುಕಿದರೆ ಹೇಳಿ.