ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maya Balachandra Column: ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ

ಧರ್ಮ ಸಾಧನೆ ಎನ್ನುವುದು ಸೀಮಿತಾರ್ಥದ ಮತಾಚರಣೆಯಲ್ಲ, ಪ್ರಾಚೀನರಿಂದ ಉಲ್ಲೇಖಿತ ವಾದ ಆಚರಣೆಗಳ ಅಂಧಾನುಕರಣೆಯೂ ಅಲ್ಲ. ಪೂಜೆ, ಪ್ರಾರ್ಥನೆ, ಆರಾಧನೆಗೆ ಸೀಮಿತ ವಾದದ್ದೂ ಅಲ್ಲ. ಇದು ಜೀವನದ ಎಲ್ಲಾ ಆಯಾಮಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ, ಸರಿಯಾದ ಮಾರ್ಗಪಥಿಕರಾಗಿ, ನೈತಿಕವಾಗಿ ಬದುಕಿ, ಆಧ್ಯಾತ್ಮಿಕವಾಗಿ ಬೆಳೆದು, ದುರ್ಲಭವಾದ ನರಜನ್ಮ ವನ್ನು ಸಾರ್ಥಕಗೊಳಿಸಿಕೊಳ್ಳುವ ಒಂದು ಅನನ್ಯ ಪ್ರಕ್ರಿಯೆ.

ಮಾಯಾ ಬಾಲಚಂದ್ರ, ಶ್ರೀನಿವಾಸಪುರ

‘ಶರೀರಮಾದ್ಯಂ ಖಲು ಧರ್ಮ ಸಾಧನಂ’, ಅಂದರೆ, ‘ನಿಜ ಧರ್ಮ ಸಾಧನೆಗೆ ಶರೀರವೇ ಮೊದಲ ಸಾಧನ’ ಎಂಬ ಅತ್ಯುನ್ನತ ಚಿಂತನೆಯೇ, ಪತಂಜಲಿ ಮುನಿಗಳ ಯೋಗಶಾಸ್ತ್ರ ದಲ್ಲಿ ಆಸನಾಭ್ಯಾಸಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದೆ.

ಧರ್ಮ ಸಾಧನೆ ಎನ್ನುವುದು ಸೀಮಿತಾರ್ಥದ ಮತಾಚರಣೆಯಲ್ಲ, ಪ್ರಾಚೀನರಿಂದ ಉಲ್ಲೇಖಿತವಾದ ಆಚರಣೆಗಳ ಅಂಧಾನುಕರಣೆಯೂ ಅಲ್ಲ. ಪೂಜೆ, ಪ್ರಾರ್ಥನೆ, ಆರಾಧನೆಗೆ ಸೀಮಿತವಾದದ್ದೂ ಅಲ್ಲ. ಇದು ಜೀವನದ ಎಲ್ಲಾ ಆಯಾಮಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ, ಸರಿಯಾದ ಮಾರ್ಗಪಥಿಕರಾಗಿ, ನೈತಿಕವಾಗಿ ಬದುಕಿ, ಆಧ್ಯಾತ್ಮಿಕವಾಗಿ ಬೆಳೆದು, ದುರ್ಲಭವಾದ ನರಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವ ಒಂದು ಅನನ್ಯ ಪ್ರಕ್ರಿಯೆ.

ಇಂಥ ಒಂದು ಸಮಗ್ರ ಪರಿಕಲ್ಪನೆಯನ್ನು ವಿಶ್ವದ ಬೇರೆ ಯಾವ ಪರಂಪರೆಗಳಲ್ಲೂ ಕಾಣೆವು. ಭಾರತೀಯ ಪರಂಪರೆಯು ಒಂದು ತಾತ್ವಿಕ ತಳಹದಿಯ ಮೇಲೆ ತನ್ನ ಧರ್ಮಾ ಚರಣೆಯನ್ನು ಜೀವಂತವಾಗಿ ಇಟ್ಟಿದೆ. ಇಲ್ಲಿ ಧರ್ಮವೆಂದರೆ ಸಂತೋಷದ ಪರಾಕಾಷ್ಠೆ ಯೇ. ಭೌತಿಕ ವಿಮೋಚನೆಯಂಥ ಮಾರ್ಗಸೂಚಿಯನ್ನು ಅನುಸರಿಸಿ ಪಡೆದ, ಅತ್ಯಂತ ಆನಂದದ ಸ್ಥಿತಿಯದು.

ನೈಸರ್ಗಿಕವಾದುದೇ ಧರ್ಮ: ಧರ್ಮದ ವಿರುದ್ಧ ಅರ್ಥವೆಂದರೆ ‘ಅಧರ್ಮ’ ಅಥವಾ ‘ಅನೈಸರ್ಗಿಕ’. ಧರ್ಮವೆಂದರೆ ನೈಸರ್ಗಿಕವಾದುದು. ನಿಸರ್ಗದೊಂದಿಗೆ ಹೆಣೆದುಕೊಳ್ಳುತ್ತಾ, ಗುರುತಿಸಿಕೊಳ್ಳುವಂಥದ್ದು ಎನ್ನುವುದು ಸೂಕ್ತ. ಸಾಧನೆಗಾಗಿ, ನಿಸರ್ಗ ಮಾರ್ಗವಾಗಿ ಸಾಗಲು, ನಿಸರ್ಗ ನಿರ್ಮಿತ ಶರೀರವೇ ವಾಹನ. ಈ ವಾಹನ ಸುಸ್ಥಿತಿಯಲ್ಲಿ ಇರಬೇಕಾದರೆ, ಯೋಗವೆಂಬ ಕಾಯಕಲ್ಪದ ಅವಶ್ಯಕತೆ ಇದೆ.

ಇದನ್ನೂ ಓದಿ: Dr Nagaraj Shenoy Column: ಆಸ್ಪತ್ರೆಗಳಿಗೂ ಲಗ್ಗೆ ಹಾಕಿದ ಎಂಬಿಎಗಳು

‘ಅಪ್ರಾಪ್ತಸ್ಯ ಪ್ರಾಪಣಂ ಯೋಗಃ’ ಅಂದರೆ, ಇಲ್ಲದ್ದನ್ನು ಪಡೆಯುವುದು ಯೋಗ ಎನ್ನುವ ಅರ್ಥದಲ್ಲಿಯೂ ಶಾಸಕಾರರು ಇದನ್ನು ವ್ಯಾಖ್ಯಾನಿಸುತ್ತಾರೆ. ಇಲ್ಲಿ, ‘ಇಲ್ಲದ್ದು’ ಎಂದರೆ ಬಾಹ್ಯದ ಭೋಗೋಪಕರಣಗಳಲ್ಲ. ಬದಲಿಗೆ, ಪ್ರತ್ಯಾಹಾರದ ಮೂಲಕ ಪಡೆದ ಅಂತರ್‌ ಶಿಸ್ತು. ಪ್ರತ್ಯಾಹಾರವನ್ನು ಗಮನಿಸುವುದಾದರೆ, ‘ಪ್ರತಿ’ ಅಂದರೆ ಒಳಗೆ, ‘ಆಹಾರ’ ಎಂದರೆ ಎಳೆದುಕೊಳ್ಳುವುದು.

ಹೊರಮುಖವಾದ ಇಂದ್ರಿಯಗಳನ್ನು ಒಳಗೆಳೆದುಕೊಂಡು, ಅಂತರ್ಮುಖವಾಗಿಸುವುದು. ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಅರಿವನ್ನು ಕೊಡುವ ಜ್ಞಾನೇಂದ್ರಿಯಗಳನ್ನು ವಿಷಯಾವಭೋದ ಮಾಡುವಂತೆ, ಎಚ್ಚರದ ಸ್ಥಿತಿಗೆ ತಂದು, ಸ್ಥಿತಪ್ರಜ್ಞರಾಗುವುದು ಇಲ್ಲಿನ ಮಾರ್ಗಸೂಚಿ.

ಇಂಥ ಯೋಗಿಗಳು, ಯಜ್ಞದ ಹಾಗೆ, ಅಪ್ರೇರಿತ ಕರ್ಮಗಳನ್ನು ಮಾಡುತ್ತಾ, ಮನೋ ನಿಗ್ರಹ ವನ್ನು ಸಾಧಿಸುತ್ತಾರೆ. ಅವರಿಗೆ ಕರ್ಮಬಂಧವಿರುವುದಿಲ್ಲ. ಇದು ಅಷ್ಟಾಂಗ ಯೋಗ ಸೂತ್ರದ ಮೂಲ ಆಶಯ. ಯೋಗಾಭ್ಯಾಸಿಗಳ ಆಪ್ತಮಿತ್ರ: ಆಧುನಿಕ ಜೀವನ ಶೈಲಿಯಲ್ಲಿ ಹೆಚ್ಚಿನವರಿಗೆ ಯೋಗಸೂತ್ರದ ಒಳಹೊಕ್ಕು, ಅಷ್ಟಾಂಗ ಯೋಗವನ್ನು ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ.

ಯೋಗಾನುಭಾವಿಗಳಾಗುವಷ್ಟು ಸಮಯಾವಕಾಶ ಕಲ್ಪಿಸಿಕೊಳ್ಳಲಾಗದ ಹಲವರು, ದೇಹಾರೋಗ್ಯ ಮತ್ತು ಶರೀರ ಸೌಂದರ್ಯಕ್ಕಾಗಿಯಾದರೂ ಯೋಗಭ್ಯಾಸದಲ್ಲಿ ತೊಡಗು ತ್ತಿದ್ದಾರೆ.

ಇದರಿಂದ ನಷ್ಟವೇನಿಲ್ಲ. ಜೀವನಯಾತ್ರೆಗೆ ಬಳಕೆಯಾಗುವ ವಾಹನವು ಸುಸ್ಥಿತಿಯಲ್ಲಿದ್ದರೆ, ಪ್ರಯಾಣ ಸುಲಲಿತವಾಗುವುದು ನಿಶ್ಚಿತ. ಮನೋ- ದೈಹಿಕ ಸ್ವಾಸ್ಥ್ಯದ ಸಾಧನೆಗೆ ಸಾಧನ ವಾಗಬಲ್ಲ ಸೂರ್ಯ ನಮಸ್ಕಾರವು ಇಂದಿನ ಯೋಗಾಭ್ಯಾಸಿಗಳ ನೆಚ್ಚಿನ ಸಂಗಾತಿ.

ಚಲನಶೀಲವಾದ ಆಸನಗಳ ಮಾಲಿಕೆಗೆ ಸೂರ್ಯ ನಮಸ್ಕಾರವೆಂದೇ ಹೆಸರಿಸಲು ವಿಶಾಲ ವಾದ ಕಾರಣವಿದೆ. ಜಗತ್ತಿನ ಎಲ್ಲಾ ನಾಗರಿಕತೆಗಳಲ್ಲೂ ಸೂರ್ಯೋಪಾಸನೆಗೆ ಮಹತ್ವದ ಸ್ಥಾನ ಇದೆ. ಪರ್ಷಿಯನ್ನರು ‘ಮಿತ್ರಾಸ್’ ಎಂದು ಆರಾಧಿಸಿದರೆ, ಗ್ರೀಕರು ‘ಅಪೋಲೋ’ ಎಂದೂ, ಈಜಿಪ್ಷಿಯನ್ನರು ‘ಓಸಿರಿಸ್’ ಎಂದೂ ಸೂರ್ಯನನ್ನು ಪೂಜಿಸಿದ್ದಾರೆ.

ಸೂರ್ಯನ ಗುಣ-ವಿಶೇಷಗಳಿಗೆ ಅನುಗುಣವಾಗಿ ಗುರುತಿಸುತ್ತಾ, ಭಾರತೀಯರ ಆರಾಧನೆ ಸಾಗುತ್ತದೆ. ಅಗಸ್ತ್ಯ ಮಹರ್ಷಿಗಳು ಶ್ರೀರಾಮನಿಗೆ ‘ಆದಿತ್ಯ ಹೃದಯ’ ಶ್ಲೋಕವನ್ನು ಬೋಧಿಸಿ, ವರ್ಷದ 12 ತಿಂಗಳಲ್ಲಿ, 12 ವಿವಿಧ ವೈಶಿಷ್ಟ್ಯದೊಂದಿಗೆ ಜೀವಜಾಲವನ್ನು ಪೊರೆವ ಸೂರ್ಯನನ್ನು, 12 ಬೇರೆ ಬೇರೆ ಹೆಸರುಗಳಿಂದ ಅರ್ಚಿಸಲು ತಿಳಿಸುತ್ತಾರೆ. ಅದರಲ್ಲಿ ಮಾಘ ಶುಕ್ಲ ಸಪ್ತಮಿಯ ದಿನದ ಸೂರ್ಯಾರಾಧನೆಯ ವಿಶೇಷತೆಯನ್ನು ಒತ್ತಿಹೇಳುತ್ತಾರೆ.

ಪರಬ್ರಹ್ಮ ಸ್ವರೂಪ: ಸೂರ್ಯನನ್ನು ಪರಮಸತ್ಯ ಮತ್ತು ಅರಿವಿನ ಆಗರವಾಗಿ, ಕಣ್ಣಿಗೆ ಕಾಣುವ ‘ಪರಬ್ರಹ್ಮ ಸ್ವರೂಪ’ ಎಂದೇ ಪರಿಗಣಿಸಲಾಗಿದೆ. 12 ಆಸನಗಳ ಸರಣಿಯಲ್ಲಿ, ಸೂರ್ಯನ ಹನ್ನೆರಡು ಹೆಸರುಗಳನ್ನು ಪಠಿಸುತ್ತಾ, ದೃಷ್ಟಿ, ವಾಕ್, ಪ್ರಾಣ, ಚಿತ್ತವನ್ನೆಲ್ಲ ಒಂದೆಡೆ ಕ್ರಮಬದ್ಧವಾಗಿ ಕೇಂದ್ರೀಕರಿಸಿ, ಪ್ರಕೃತಿಯ ನಿತ್ಯಚಲಿತ ಸ್ವರೂಪಕ್ಕೆ ತಕ್ಕಂತೆ, ಶರೀರವನ್ನು ಗತಿಶೀಲ ಸ್ವಭಾವಕ್ಕೆ ಹೊಂದಿಸಿ, ಪ್ರಜ್ಞಾಪೂರ್ವಕವಾಗಿ ಅಂತರಂಗದ ಧ್ವನಿಯನ್ನು ಶ್ರವಣ ಮಾಡುವ ಅದ್ಭುತ ಪ್ರಕ್ರಿಯೆ ಇದು.

ಸಾಮಾನ್ಯವಾಗಿ, ಆಂತರ್ಯದ ಧ್ವನಿ ಕೇಳಲು, ಶರೀರ ಮತ್ತು ಮನಸ್ಸನ್ನು ಒಂದೆಡೆ ನಿಲ್ಲಿಸಿ, ಧ್ಯಾನಸ್ಥ ಸ್ಥಿತಿಗೆ ತೆರಳುವ ಸಾಧನಾಮಾರ್ಗ ಹೆಚ್ಚು ಪ್ರಚಲಿತ. ಆದರೆ, ಸೂರ್ಯ ನಮಸ್ಕಾರದ ಮೂಲಕ, ಚಲನೆಯಲ್ಲಿದ್ದೇ ಧ್ಯಾನಸ್ಥ ಸ್ಥಿತಿ ತಲುಪಬಹುದೆನ್ನುವುದನ್ನು ಅಭ್ಯಾಸಿಗಳು ಮನಗಾಣಬೇಕು.

ಇಲ್ಲಿ, ಸರ್ವಶಕ್ತ ಸೂರ್ಯನೇ eನದ ಕೇಂದ್ರ. ಇದು ಕೇವಲ ಬಾಹ್ಯದ ಕಣ್ಣಿಗೆ ಕಾಣುವ ಸೂರ್ಯನಲ್ಲ, ನಮ್ಮೊಳಗಿರುವ ಸೂರ್ಯ, ಅಂದರೆ ಆಕಾಶ ತತ್ವವೂ ಹೌದು. ಹೀಗೆ ಅಂತರಂಗ-ಬಹಿರಂಗಗಳ ಸಮನ್ವಯವು ಇಲ್ಲಿ ನಡೆಯುತ್ತದೆ. ಇದು ಯೋಗಶಾಸ್ತ್ರದ ಅಪೇಕ್ಷೆ ಸಹ.

ಸೂರ್ಯನೇ ಶಕ್ತಿಕೇಂದ್ರ: ‘ಯುಜ್’ ಧಾತುವಿನಿಂದಾದ ಯೋಗ ಎಂದರೆ ಸೇರಿಸು ಎನ್ನುವ ಅರ್ಥವನ್ನು ಬಿಂಬಿಸುವಲ್ಲಿ ಸಹಕರಿಸುವ ಅಂಶವಿದು. ಈ ಪ್ರಕ್ರಿಯೆಯಲ್ಲಿ, ಸೂರ್ಯನೇ ಕೇಂದ್ರಬಿಂದು ಆಗಲು ಬಹಳಷ್ಟು ಕಾರಣಗಳಿವೆ. ಪುರುಷ ಮತ್ತು ಪ್ರಕೃತಿ ತತ್ವಗಳೆರಡನ್ನೂ ಪ್ರತಿನಿಧಿಸುವ ಸೂರ್ಯನಲ್ಲಿ ಶಕ್ತಿಯ ಸಂಚಯನವಿದೆ.

ಸೂರ್ಯನ ಶಕ್ತಿಯ ಕಿರಣಗಳಿಲ್ಲದೆ ಚೈತನ್ಯ ಪ್ರಕಟವಾಗಲು ಅಸಾಧ್ಯ. ಸೂರ್ಯರಶ್ಮಿ ಬೀಳುವೆಡೆ ಮಾತ್ರ ಜೀವೋತ್ಪನ್ನ, ಸೃಷ್ಟಿ ಕ್ರಿಯೆಗಳು ನಡೆಯುವುದು ವೈಜ್ಞಾನಿಕವಾಗಿ ಸಾಬೀತಾದ ಅಂಶ. ಎಲ್ಲ ಚರಾಚರಗಳ ಒಳ-ಹೊರಗೂ ಸದಾ ಸಕ್ರಿಯವಾಗಿರುವುದು ಈ ಶಕ್ತಿಯ ಸಂಚಲನ. ಹಾಗಾಗಿಯೇ ಸೂರ್ಯ ಹಿರಣ್ಯಗರ್ಭ, ಎಂದರೆ ಇದು ತತ್ವಶಾಸ್ತ್ರದ ಪ್ರಕಾರ ವಿಶ್ವಸ್ಥಿತಿಗೆ ಕಾರಣವಾದ ಮೂಲಬೀಜ ಅಥವಾ ಶಕ್ತಿ.

ಇದರಿಂದಲೇ ಜೀವಿಗಳ ಉಗಮ ಎನ್ನುವ ಗಾಢವಾದ ನಂಬಿಕೆ ಇದೆ. ಇದನ್ನು ಅಲ್ಲಗಳೆ ಯಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಹಿರಣ್ಯಗರ್ಭವು ಜೀವ ಮತ್ತು ಬ್ರಹ್ಮರನ್ನು ಏಕಕಾಲದಲ್ಲಿ ಪ್ರತಿನಿಧಿಸುತ್ತದೆ. ಇದರಿಂದಲೇ ವಿಶ್ವದ ಸ್ಥೂಲ, ಸೂಕ್ಷ್ಮ ರೂಪಗಳು ಆವಿರ್ಭವಿಸಿದವು ಎಂದು ನಿದರ್ಶನಗಳ ಮೂಲಕ ಋಷಿಮುನಿಗಳು ತಿಳಿಸಿದ್ದಾರೆ.

ಎಲ್ಲಾ ಅಸ್ತಿತ್ವಗಳ ಒಟ್ಟು ಮೊತ್ತ ಇದು. ಇದರಲ್ಲಿ ಎಲ್ಲವೂ ಅಡಕವಾಗಿ, ಅಲ್ಲಿಂದಲೇ ಹೊರಟು ಮತ್ತಲ್ಲಿಗೇ ಮರಳುತ್ತವೆ. ಇದು ಸಾರ್ವತ್ರಿಕ ಪ್ರಜ್ಞೆಯ ಮೂಲಸೆಲೆ. ರಥಸಪ್ತಮಿ ಯ ಸಂಕೇತಗಳು, ಮಾನವ ಶರೀರ, ಜೀವನವನ್ನು ಸೂಚ್ಯವಾಗಿ ತಿಳಿಸುತ್ತವೆ.

‘ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು | ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ’ ಎಂದರೆ, ‘ಆತ್ಮ’ ರಥದ ಮಾಲೀಕ, ದೇಹವೇ ರಥ, ಬುದ್ಧಿಯೇ (ವಿವೇಕ ಶಕ್ತಿ) ರಥವನ್ನು ನಡೆಸುವ ಸಾರಥಿ, ಮನಸ್ಸು ಕುದುರೆಗಳ ಲಗಾಮಿನಂತೆ ಎನ್ನುತ್ತದೆ ಕಠೋಪನಿಷತ್. ಶ್ರೋತ್ರ, ಚಕ್ಷು, ಸ್ಪರ್ಶ, ರಸನ ಗ್ರಹಣ, ಕೈ, ಕಾಲುಗಳು ರಥಕ್ಕೆ ಕಟ್ಟಿದ ಏಳು ಕುದುರೆಗಳು. ಕುದುರೆಗಳು ಎಳೆದಂತೆ ರಥ ಹೋಗುವಂತಿಲ್ಲ.

ಅದಕ್ಕೆ ನಿರ್ದಿಷ್ಟ ಮಾರ್ಗದಲ್ಲಿ ಚಲಿಸಬೇಕಾದ ನಿಯಮವಿದೆ. ಆಕರ್ಷಕವಾಗಿ ಕಂಡದ್ದರ ಹಿಂದೆ ತತ್‌ಕ್ಷಣ ಹೋಗಿ, ನಡೆದು, ಪಡೆಯಲು ಆಗದಂತೆ, ಕಾಲು ಊನವಾಗಿರುವವನನ್ನೇ ಸಾರಥಿಯನ್ನಾಗಿ ಹೊಂದಿರುವ ಸೂರ್ಯ ನೀಡುವ ಸಂದೇಶ ಬಹಳ ದೊಡ್ಡದು.

ಸೂರ್ಯ ಅಂದರೆ ಸುಮ್ಮನೆ ಅಲ್ಲ!

ನಮ್ಮ ಶರೀರ ಎನ್ನುವ ರಥದಲ್ಲಿ, ‘ಜೀವ’ ಎನ್ನುವ ಸೂರ್ಯ ಕುಳಿತಿದ್ದಾನೆ, ‘ಸೂರಿಗಮ್ಯತ್ವ ಸೂರ್ಯಃ’- ಸೂರಿ ಎಂದರೆ ಪ್ರಜ್ಞಾವಂತ, ಗಮ್ಯತ್ವ ಎಂದರೆ ಅರಿಯಬಹುದಾದ ಗುಣ, ಸೂರ್ಯಃ ಅಂದರೆ ಆತ್ಮ ತತ್ವ. ಜ್ಞಾನಿಗಳ ಅರಿವಿಗೆ ಮಾತ್ರ ನಿಲುಕುವ ತತ್ವ ಸೂರ್ಯತತ್ವ. ಜಗತ್ತಿನ ಎಲ್ಲವನ್ನು ಕಾಣುವಂತೆ ಮಾಡುವವ ಸೂರ್ಯ. ತನ್ನ ಬೆಳಕನ್ನು ಎಡೆಯೂ ಚೆಲ್ಲುವುದರ ಮೂಲಕ, ಎಲ್ಲವನ್ನೂ ನಮಗೆ ತೋರಿಸಿಕೊಡುವವ ಸೂರ್ಯ. ಜ್ಞಾನಾರ್ಥಿ ಗಳಾಗಿ ಸಾಗುತ್ತಿರುವ ಸಾಧಕರಿಗೆ ತನ್ನ ಬೆಳಕನ್ನು ನೀಡಿ, ಮುನ್ನಡೆಯಲು ದಾರಿ ತೋರುವವ ಸೂರ್ಯ.

ನಮ್ಮ ಶರೀರವೆಂಬ ರಥವು, ಸರಿಯಾದ ಮಾರ್ಗದಲ್ಲಿ ಸಾಗಬೇಕಾದರೆ, ರಥಿಕನಾದ ಸೂರ್ಯನ ಬಗ್ಗೆ, ಅಂದರೆ ನಮ್ಮೊಳಗಿನ ಪರಬ್ರಹ್ಮ ತತ್ವದ ಬಗ್ಗೆ ಅಚಲವಾದ ನಂಬಿಕೆ ಬೇಕು. ಆ ನಂಬಿಕೆಯೇ, ನಮ್ಮನ್ನು ಧೀರತೆಯೆಡೆಗೆ ಕೊಂಡೊಯ್ಯುವ ಆತ್ಮವಿಶ್ವಾಸಕ್ಕೆ ದಾರಿಯಾಗುತ್ತದೆ. ಋಗ್ವೇದದಲ್ಲಿ ಸೂರ್ಯನನ್ನು ಪ್ರಾಣದ ಅಧಿಷ್ಠಾನ ಎನ್ನಲಾಗಿದೆ. ‘ಆದಿತ್ಯೋ ವೈ ಪ್ರಾಣಃ’ ಇಲ್ಲಿ ಪ್ರಕಾಶದ ಮೂಲ, ಜೀವಶಕ್ತಿ ಎಲ್ಲವೂ ಸೂರ್ಯನೇ.

ಪ್ರಾಚೀನ ‘ಹಠಯೋಗ ಪ್ರದೀಪಿಕಾ’ ಗ್ರಂಥದಲ್ಲಿ ಸೂರ್ಯನಾಡಿ, ಚಂದ್ರನಾಡಿಯ ಮೂಲಕ ಉಸಿರಾಟವನ್ನು ಕ್ರಮಬದ್ಧವಾಗಿಸುವ ಬಗ್ಗೆ ನಿಶ್ಚಿತ ಮಾಹಿತಿಗಳಿವೆ. ಇದನ್ನೇ ಅನುಸರಿಸಿ ಮುಂದೆ ಸೂರ್ಯ ನಮಸ್ಕಾರ ಎನ್ನುವ ಗತಿಶೀಲ ಆಸನಾಭ್ಯಾಸ ಗುಚ್ಛದ ಕ್ರಮ ಬೆಳೆದುಬಂದಿದೆ ಎನ್ನುವುದನ್ನು ಅಧ್ಯಯನದ ಮೂಲಕ ತಿಳಿಯಬಹುದು.

ಶರೀರ ತೀವ್ರ ಚಟುವಟಿಕೆಯಿಂದ ಕೂಡಿದ್ದಾಗಲೂ, ಮನಸ್ಸು ಏಕಕೇಂದ್ರಿತವಾಗಿ, ಒಂದು ಬಿಂದುವಿನಲ್ಲಿ ನೆಲೆ ನಿಂತು, ಸ್ಥಿರತೆಯನ್ನು ಪಡೆದುಕೊಳ್ಳುವುದೇ ಸೂರ್ಯ ನಮಸ್ಕಾರದ ವೈಶಿಷ್ಟ್ಯ. ವರ್ತಮಾನದಲ್ಲಿ ಸೂರ್ಯ ನಮಸ್ಕಾರದ ಕಡೆಗೆ ಜನರ ಗಮನ ಅನಾಯಾಸ ವಾಗಿ ಹೋಗುತ್ತಿರುವುದಕ್ಕೆ ಇದೇ ಮುಖ್ಯ ಕಾರಣ.

ಪ್ರಸ್ತುತದಲ್ಲಿ ಜನರಿಗೆ, ಕಣ್ಮುಚ್ಚಿ, ಶರೀರವನ್ನು ಒಂದಿಷ್ಟು ಕಾಲ ಶಾಂತವಾಗಿ ಕುಳ್ಳಿರಿಸಿ ಕೊಳ್ಳಬಲ್ಲ ತಾಳ್ಮೆ, ಸಹನೆಗಳಿಲ್ಲ. ಶರೀರ ಕ್ರಿಯಾಶೀಲವಾಗಿದ್ದಾಗಲೇ, ಕಣ್ಣುಗಳು ತೆರೆದಂತೆ ಯೇ, ಏಕಾಗ್ರತೆ ಸಾಧಿಸುತ್ತಾ, ಮನೋ-ದೈಹಿಕ ಸ್ವಾಸ್ಥ ಸೇರಿದಂತೆ ಎಲ್ಲವನ್ನೂ ಒಮ್ಮೆಲೆ ಸಾಧಿಸಬಲ್ಲೆವಾದರೆ, ಆ ಪ್ರಕ್ರಿಯೆ ನಮಗೆ ವರವೇ ತಾನೆ?! ಈ ಸಾಧನೆಯಿಂದ ಸಂತೋಷ ದೊರೆಯುವುದಂತೂ ಖಚಿತ.

ಉತ್ತರಾಯಣದ ಪಯಣದಲ್ಲಿ ಸೂರ್ಯನ ಶಾಖ ಹೆಚ್ಚುತ್ತಲೇ ಹೋಗುವುದು ಪ್ರಕೃತಿಯ ನಿಯಮ. ಈ ಅವಧಿಯಲ್ಲಿ ಭೂಮಿಯು ಸೂರ್ಯನಿಗೆ ಹೆಚ್ಚು ಸಮೀಪವರ್ತಿ. ಮುಂದೆ ಹೆಚ್ಚಲಿರುವ ಬಿಸಿಲಿನ ತಾಪಕ್ಕೆ, ಶರೀರವನ್ನು ಒಳಗಿನಿಂದಲೇ ಸಿದ್ಧಪಡಿಸಿಕೊಳ್ಳಬೇಕು.

ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಶರೀರದ ಒಳಗಿನ ಉಷ್ಣತೆ, ಬಾಹ್ಯದ ಉಷ್ಣತೆಯೊಂದಿಗೆ ಸಮತೋಲನ ಸಾಧಿಸುತ್ತದೆ. ಪ್ರಕೃತಿಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಬದಲಾವಣೆಗೆ ತಕ್ಕಂತೆ ನಮ್ಮನ್ನು ಸಿದ್ಧಗೊಳಿಸಿಕೊಳ್ಳುವ ಆಚರಣೆಯನ್ನೇ ಸಂಸ್ಕೃತಿಯನ್ನಾಗಿಸಿಕೊಂಡಲ್ಲಿ, ಆ ಆಚರಣೆಯೇ ಅಧ್ಯಾತ್ಮವಾಗಿ ಬಿಡುತ್ತದೆ.

ರಥಸಪ್ತಮಿಯ ದಿನ 108 ಸೂರ್ಯ ನಮಸ್ಕಾರಗಳನ್ನು ಮಾಡಿ, ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ, ವರ್ಷಪೂರ್ತಿ ನಿರೋಗಿಗಳಾಗಿರಬಹುದು ಎನ್ನುವ ಸದಾಶಯ ಯೋಗ ಪ್ರವರ್ತಕರದ್ದು.