ಹಿಂದಿರುಗಿ ನೋಡಿದಾಗ
ಒಂದು ಸಣ್ಣ ಹಳ್ಳಿಯ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೆ ಮಧ್ಯರಾತ್ರಿಯಲ್ಲಿ ಯುವಕನೊಬ್ಬ ಓಡಿಬಂದ. ಅವನ ಮುಖದಲ್ಲಿ ಮರಣಭಯವಿತ್ತು. ಎರಡೂ ಕೈಗಳಿಂದ ತನ್ನ ಜನನಾಂಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ‘ಡಾಕ್ಟರ್, ಅದು ದೇಹದೊಳಕ್ಕೆ ಹೋಗುತ್ತಿದೆ! ಸಂಪೂರ್ಣವಾಗಿ ಒಳಗೆ ಹೋದರೆ ನಾನು ಸಾಯುತ್ತೇನೆ!’ ಎಂದು ಆತ ಕಿರುಚಿದ. ವೈದ್ಯರು ಅವನನ್ನು ಪರೀಕ್ಷಿಸಿದರು. ಯಾವುದೇ ಅಪಾಯಕಾರಿ ದೈಹಿಕ ಬದಲಾವಣೆಗಳು ಇರಲಿಲ್ಲ. ಚಳಿಯಿಂದಲೋ, ಭಯದಿಂದ ಲೋ ಸಾಮಾನ್ಯವಾಗಿ ಸಂಭವಿಸಬಹುದಾದ ತಾತ್ಕಾಲಿಕ ಸಂಕೋಚನ ಮಾತ್ರ ಇತ್ತು. ಆದರೆ ಯುವಕನ ಅನುಭವ ಸುಳ್ಳಾಗಿರಲಿಲ್ಲ. ಅವನ ಭಯ ನಿಜವಾಗಿತ್ತು; ಹೃದಯ ವೇಗವಾಗಿ ಬಡಿದು ಕೊಳ್ಳುತ್ತಿತ್ತು; ಮೈ ಬೆವರಿತ್ತು; ಉಸಿರಾಟ ತೀವ್ರಗೊಂಡಿತ್ತು.
ಇದು ಕೊರೋ- ಎಂಬ ಸಾಂಸ್ಕೃತಿಕ ಲಕ್ಷಣಾವಳಿಯ ಒಂದು ಮಾದರಿ.
ಕಾಯಿಲೆಗಳು: ಮನುಷ್ಯನಿಗೆ ಕಾಯಿಲೆಗಳು ಹೇಗೆ ಬರುತ್ತವೆ? ಇದಕ್ಕೆ ಸರಳವಾದ ಉತ್ತರವೆಂದರೆ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳಿಂದ ಬರಬಹುದು. ಜನ್ಮದತ್ತವಾಗಿ ಬರಬಹುದು. ಜೀವನಶೈಲಿಯ ಏರುಪೇರಿಂದ ಬರಬಹುದು. ಪರಿಸರದಿಂದ ಬರಬಹುದು. ನಾವು ಕೈಗೊಳ್ಳುವ ವೃತ್ತಿಯೂ ಸಹ ಕಾಯಿಲೆ ಉಂಟುಮಾಡಬಹುದು. ನಮ್ಮ ದೇಹದಲ್ಲಿರುವ ರೋಗ ರಕ್ಷಣಾವ್ಯವಸ್ಥೆಗೆ ತಪ್ಪು ಮಾಹಿತಿಯುಂಟಾದಾಗ ಅಲರ್ಜಿಯಂತಹ ಸ್ವಯಂವಿನಾಶಕ ರೋಗ ಉಂಟು ಮಾಡಬಹುದು. ವಯಸ್ಸಾಗುತ್ತಿರುವ ಹಾಗೆ ಕೆಲವು ವಿಶಿಷ್ಟ ರೋಗಗಳು ಕಾಣಬಹುದು. ಇವೆಲ್ಲವು ನಮ್ಮ ದೇಹಕ್ಕೆ ಸಂಬಂಧಪಟ್ಟ ರೋಗಗಳು. ನಮ್ಮ ಮನಸ್ಸಿಗೆ ಸಂಬಂಧಪಟ್ಟ ಹಾಗೆಯೂ ರೋಗಗಳು ಬರುತ್ತವೆ. ಹಾಗೆಯೇ ಮನಸ್ಸಿನ ಕಾರಣದಿಂದ ದೇಹದಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇವನ್ನು ಮನೋದೈಹಿಕ ಬೇನೆಗಳು (ಸೈಕೋಸೊಮಾಟಿಕ್ ಡಿಸಾರ್ಡರ್ಸ್) ಎಂದು ಕರೆಯುವುದುಂಟು. ಇವೆಲ್ಲ ಅಲ್ಲದೇ, ನಮ್ಮ ಸಂಸ್ಕೃ ತಿಯ ಕಾರಣದಿಂದಲೂ ಕಾಯಿಲೆಗಳು ಬರುತ್ತವೆ ಎಂದರೆ, ನಂಬುವುದು ಕಷ್ಟವಾಗಬಹುದು. ಈ ವರ್ಗದ ಕಾಯಿಲೆಗಳನ್ನು ಸಂಸ್ಕೃತಿ ಬದ್ಧ ಲಕ್ಷಣಾವಳಿ (ಕಲ್ಚರ್ ಬೌಂಡ್ ಸಿಂಡ್ರೋಮ್ಸ್) ಎಂದು ಕರೆಯುತ್ತಿದ್ದರು. ಈಗ ಇವನ್ನು ಸಾಂಸ್ಕ ತಿಕ ಸಂಕಟಗಳ ಪರಿಕಲ್ಪನೆಗಳು (ಕಲ್ಚುರಲ್ ಕಾನ್ಸೆಪ್ಟ್ಸ್ ಆಫ್ ಡಿಸೀಸಸ್) ಎಂದು ಕರೆಯುವ ಪರಿಪಾಠವಿದೆ.
ಇದನ್ನೂ ಓದಿ: Dr N Someshwara Column: ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!
ನಮ್ಮ ಮನೆ, ಕುಟುಂಬ, ನಾವು ಕೇಳಿದ ಕಥೆಗಳು, ಧಾರ್ಮಿಕ ನಂಬಿಕೆಗಳು, ಲೈಂಗಿಕತೆಯ ಬಗೆಗಿನ ನಮ್ಮ ಧೋರಣೆ, ನಮ್ಮ ಚರ್ಮದ ಬಣ್ಣದ ಬಗ್ಗೆ ಪ್ರಚಲಿತದಲ್ಲಿರುವ ವಿಚಾರಗಳು, ನಮ್ಮ ದೇಹ ಸೌಂದರ್ಯದ ಬಗೆಗಿನ ಪರಿಕಲ್ಪನೆಗಳು, ಶಕುನ-ಅಪಶಕುನಗಳ ಬಗೆಗಿನ ಭಯ ಮತ್ತು ನಮ್ಮ ಸಮಾಜ ಬಳಸುವ ಭಾಷೆ- ಇವೆಲ್ಲವೂ ನಮ್ಮ ಮನಸ್ಸು ಹಾಗೂ ನಡವಳಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಒಂದು ನಿರ್ದಿಷ್ಟ ಸಮಾಜ ಅಥವಾ ಸಾಂಸ್ಕೃತಿಕ ಸಮುದಾಯದಲ್ಲಿ ಪರಿಚಿತ ವಾಗಿರುವ, ಅಲ್ಲಿನ ಜನರು ನಿರ್ದಿಷ್ಟ ಹೆಸರಿನಿಂದ ಗುರುತಿಸುವ ಮತ್ತು ಅಲ್ಲಿನ ನಂಬಿಕೆ-ಮೌಲ್ಯ-ಭಾಷೆಗಳು ಅಭಿವ್ಯಕ್ತಪಡಿಸಬಹುದಾದ ಮನೋದೈಹಿಕ ಸಂಕಟಗಳ ಮಾದರಿಗಳನ್ನು ಜಗತ್ತಿನ ಎಲ್ಲ ಕಾಲಗಳ, ದೇಶಗಳ, ಸಂಸ್ಕೃತಿಗಳಲ್ಲೂ ಕಾಣಬಹುದು. ಇಲ್ಲಿ ವ್ಯಕ್ತಿಯು ಅನುಭವಿಸುವ ನೋವು ಅಥವ ಭಯ ಅವನ ಕಲ್ಪನೆ ಮಾತ್ರವಾಗಿರುವುದಿಲ್ಲ. ಅವನು ಅನುಭವಿಸುವ ಆತಂಕ, ನೋವು, ದೌರ್ಬಲ್ಯ, ಉಸಿರಾಟದ ತೊಂದರೆ, ಹೃದಯದ ದಡದಡಿಕೆ ಅಥವಾ ವರ್ತನೆಯ ಬದಲಾವಣೆ ನಿಜವಾಗಿರುತ್ತವೆ. ಈ ಎಲ್ಲ ಲಕ್ಷಣಗಳ ಬೇರು, ಅವನು ಬೆಳೆದು ಬಂದ ಸಂಸ್ಕ ತಿಯಲ್ಲಿರುತ್ತದೆ. ಅಂತಹ ಕೆಲವು ಲಕ್ಷಣಾವಳಿಗಳನ್ನು ಈಗ ಗಮನಿಸೋಣ.
ಕೊರೊ ಲಕ್ಷಣಾವಳಿ: ವೈದ್ಯಕೀಯವಾಗಿ ಕೋರೋ ಸಿಂಡ್ರೋಮ್ ಎನ್ನುವುದು ಪ್ರಮುಖವಾಗಿ ದಕ್ಷಿಣ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ‘ಸಂಸ್ಕೃತಿ-ಸಂಬಂಧಿತ ಲಕ್ಷಣಾವಳಿ’. ಕನ್ನಡದಲ್ಲಿ ಇದನ್ನು ಜನನಾಂಗಗಳು ದೇಹದೊಳಕ್ಕೆ ಹೋಗುವ ಭಯ ಎಂದು ಸರಳವಾಗಿ ಅರ್ಥೈಸಬಹುದು. ಇದು ಒಂದು ರೀತಿಯ ‘ಉತ್ಕಟ ಆತಂಕ’ (ಪ್ಯಾನಿಕ್ ಡಿಸಾರ್ಡರ್). ಈ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ತಮ್ಮ ಜನನಾಂಗಗಳು ಕುಗ್ಗುತ್ತಿವೆ ಅಥವಾ ದೇಹದೊಳಕ್ಕೆ ಸಂಪೂರ್ಣವಾಗಿ ಹಿಂಸರಿಯುತ್ತಿವೆ ಎಂದು ನಂಬುತ್ತಾರೆ. ಜನನಾಂಗ ಸಂಪೂರ್ಣವಾಗಿ ಒಳಹೋದರೆ, ತಮಗೆ ಸಾವು ಸಂಭವಿಸುತ್ತದೆ ಎಂಬ ತೀವ್ರವಾಗಿ ಭೀತರಾಗಿರು ತ್ತಾರೆ. ಮಹಿಳೆಯರಲ್ಲಿ ಕೂಡ ಇದೇ ರೀತಿಯ ಭಯ ಕಂಡುಬರುತ್ತದೆ; ಸ್ತನಗಳು, ಸ್ತನತೊಟ್ಟುಗಳು ಅಥವಾ ಜನನಾಂಗಗಳು ದೇಹದೊಳಕ್ಕೆ ಸರಿಯುತ್ತಿವೆ ಎಂಬ ಭ್ರಮೆಯಿಂದ ಪೀಡಿತರಾಗುತ್ತಾರೆ.
ಇದು ಜನನಾಂಗಗಳು ಕಣ್ಮರೆಯಾಗುತ್ತವೆ ಅಥವಾ ದೇಹದೊಳಕ್ಕೆ ಹೋಗುತ್ತವೆ ಎಂಬ ಅತಿಯಾದ ಮತ್ತು ತರ್ಕಬದ್ಧವಲ್ಲದ ಭಯ. ವಾಸ್ತವದಲ್ಲಿ ಯಾವುದೇ ದೈಹಿಕ ಬದಲಾವಣೆ ಇರುವುದಿಲ್ಲ ವಾದರೂ, ವ್ಯಕ್ತಿಗೆ ತನ್ನ ಅಂಗಗಳು ಕುಗ್ಗುತ್ತಿವೆ ಎಂದು ಅನಿಸುವ ಭಾವವೇ ಪ್ರಧಾನವಾಗಿ ಎದ್ದು ಕಾಣುತ್ತದೆ. ಇದನ್ನು ನಿಯಂತ್ರಿಸಲು ಅಂಗಗಳನ್ನು ಹೊರಕ್ಕೆ ಎಳೆಯಲು ಕೈಗಳಿಂದ ಹಿಡಿದು ಕೊಂಡು ಜಗ್ಗುವುದು, ದಾರವನ್ನು ಕಟ್ಟಿ ಎಳೆಯುವುದು ಇಲ್ಲವೇ ಇಕ್ಕುಳದಿಂದ ಹಿಡಿದಿಟ್ಟು ಕೊಳ್ಳುವುದು ಇಂತಹ ವಿಚಿತ್ರ ವರ್ತನೆಗಳನ್ನು ವ್ಯಕ್ತಿಗಳು ತೋರುತ್ತಾರೆ. ಹೃದಯ ಬಡಿತ ಹೆಚ್ಚಾಗುತ್ತದೆ. ವಿಪರೀತ ಬೆವರುತ್ತಾರೆ, ಉಸಿರಾಟದ ತೊಂದರೆ ಕಂಡುಬರುತ್ತದೆ. ಸಾವು ಯಾವಾಗ ಬೇಕಾದರೂ ತಮ್ಮ ಮೇಲೆ ಎರಗಬಹುದು ಎಂದು ಭೀತರಾಗಿರುತ್ತಾರೆ.
ಕೋರೋ ಲಕ್ಷಣಾವಳಿಗೆ ಯಾವುದೇ ವೈದ್ಯಕೀಯ ದೈಹಿಕ ಕಾರಣಗಳಿಲ್ಲ. ಇದು ಆಯಾ ಸಂಸ್ಕೃತಿ ಯಲ್ಲಿರುವ ಲೈಂಗಿಕತೆಯ ಬಗೆಗಿನ ತಪ್ಪು ಕಲ್ಪನೆಗಳು, ಅಪರಾಧ ಪ್ರಜ್ಞೆ ಮತ್ತು ಅತಿಯಾದ ಕಲ್ಪನೆ ಯಿಂದ ಉಂಟಾಗುತ್ತದೆ. ದೀರ್ಘಕಾಲದ ಒತ್ತಡ, ಖಿನ್ನತೆ ಅಥವಾ ಲೈಂಗಿಕ ಸಂಬಂಧಿ ಸಮಸ್ಯೆಗಳು ಈ ಭ್ರಮೆಯನ್ನು ಉಲ್ಬಣಗೊಳಿಸಬಹುದು. ಕೆಲವೊಮ್ಮೆ ಇದು ಒಂದು ನಿರ್ದಿಷ್ಟ ಸಮುದಾಯ ದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತದೆ. ಒಬ್ಬ ವ್ಯಕ್ತಿಗೆ ಇದು ಬಂದಿದೆ ಎಂದು ತಿಳಿದಾಗ, ಸುತ್ತಮುತ್ತ ಲಿನಲ್ಲಿ ಇರುವವರಲ್ಲೂ ಭ್ರಮೆ ಆರಂಭವಾಗಬಹುದು.
ವೈದ್ಯಕೀಯ ವಿಜ್ಞಾನದ ಪ್ರಕಾರ, ಇದು ‘ಡಿಲ್ಯೂಷನಲ್ ಡಿಸಾರ್ಡರ್’ ಅಥವಾ ‘ಸೋಮಾಟಿಕ್ ಸಿಂಪ್ಟಮ್ ಡಿಸಾರ್ಡರ್’ನ ಒಂದು ಭಾಗ. ಇದು ವ್ಯಕ್ತಿಯ ಲೈಂಗಿಕ ಆರೋಗ್ಯದ ಬಗ್ಗೆ ಇರುವ ಭಯ ಮತ್ತು ಅಜ್ಞಾನದ ಪ್ರತೀಕ. ಮೊದಲು ಇವರ ಮನಸ್ಸನ್ನು ಒಲಿಸಿಕೊಳ್ಳಬೇಕು ಹಾಗೂ ಆಶ್ವಾಸನೆ ನೀಡಬೇಕು. ಜನನಾಂಗದ ಅಂಗರಚನಾಶಾಸದ ಬಗ್ಗೆ ಸರಿಯಾದ ವೈಜ್ಞಾನಿಕ ವಿವರಣೆ ನೀಡಿ, ಆತಂಕವನ್ನು ಹೋಗಲಾಡಿಸುವುದು ಚಿಕಿತ್ಸೆಯ ಪ್ರಮುಖ ಭಾಗ.
ರೋಗಿಯ ಮಾನಸಿಕ ಒತ್ತಡಗಳನ್ನು ಅರ್ಥಮಾಡಿಕೊಂಡು ಆಪ್ತಸಮಾಲೋಚನೆ ನಡೆಸಬೇಕಾಗು ತ್ತದೆ. ತೀವ್ರವಾದ ಆತಂಕ ಅಥವಾ ಖಿನ್ನತೆ ಇದ್ದರೆ, ಅದಕ್ಕೆ ಸಂಬಂಧಿಸಿದ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ನೀಡಬಹುದು. ಕೋರೋ ಲಕ್ಷಣಾವಳಿಯು ಯಾವುದೇ ಮಾಟಮಂತ್ರ ಅಥವಾ ದೈಹಿಕ ದೋಷದಿಂದ ಬರುವುದಿಲ್ಲ. ಇದು ಕೇವಲ ಮಾನಸಿಕ ಸ್ಥಿತಿ. ಇಂತಹ ಸಂದರ್ಭಗಳಲ್ಲಿ ರೋಗಿಯನ್ನು ಗೇಲಿ ಮಾಡದೆ, ಮನೋವೈದ್ಯರ ಬಳಿ ಕರೆದೊಯ್ಯುವುದು ಅತಿ ಮುಖ್ಯ.
ಧಾತ್ ಲಕ್ಷಣಾವಳಿ: ವೈದ್ಯಕೀಯವಾಗಿ ಧಾತ್ ಸಿಂಡ್ರೋಮ್ ಎನ್ನುವುದು ಭಾರತೀಯ ಉಪಖಂಡ ದಲ್ಲಿ (ವಿಶೇಷವಾಗಿ ಭಾರತದಲ್ಲಿ) ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಚಲಿತದಲ್ಲಿರುವ ಒಂದು ಸಾಂಸ್ಕೃತಿಕ ಮಾನಸಿಕ ಸ್ಥಿತಿ. ಇದನ್ನು ಸರಳವಾಗಿ ವೀರ್ಯ ನಷ್ಟದಿಂದ ಉಂಟಾಗುವ ಆತಂಕದ ಸ್ಥಿತಿ ಎಂದು ಕರೆಯಬಹುದು.
‘ಧಾತು’ ಎಂಬ ಪದಕ್ಕೆ ದೇಹದ ಮೂಲವಸ್ತು ಅಥವಾ ಸಾರ ಎಂಬ ಅರ್ಥವಿದೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳ ಅನ್ವಯ ಆಹಾರವು ಕ್ರಮೇಣ ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಮತ್ತು ಕೊನೆಗೆ ಶುಕ್ರವಾಗಿ ಪರಿವರ್ತನೆಯಾಗುತ್ತದೆ ಎಂಬ ಪರಿಕಲ್ಪನೆಯಿದೆ. ಆದ್ದರಿಂದ ಒಂದು ಹನಿ ವೀರ್ಯ ನಿರ್ಮಾಣಕ್ಕೆ ಅಪಾರ ದೈಹಿಕ ಶಕ್ತಿ ಬೇಕು; ಅದು ಹೊರಹೋದರೆ ಜೀವ ಶಕ್ತಿಯೇ ನಷ್ಟವಾಗುತ್ತದೆ ಎಂಬ ಭಯ ಕೆಲವರಲ್ಲಿ ಆಳವಾಗಿ ನೆಲೆಸಿರುತ್ತದೆ. ಯುವಕನೊಬ್ಬ ರಾತ್ರಿ ಸಂಭವಿಸುವ ಸಹಜ ಸ್ವಪ್ನ ಸ್ಖಲನದ ನಂತರ, ‘ನನ್ನ ಶಕ್ತಿ ಹೋಗಿದೆ; ಮಿದುಳು ದುರ್ಬಲ ವಾಗಿದೆ; ದೇಹ ಕರಗುತ್ತಿದೆ’ ಎಂದು ಭಾವಿಸಬಹುದು. ಆಯಾಸ, ಆತಂಕ, ತಲೆತಿರುಗುವಿಕೆ, ಏಕಾಗ್ರತೆಯ ಕೊರತೆ, ಲೈಂಗಿಕ ಸಾಮರ್ಥ್ಯದ ಭಯ ಮತ್ತು ಖಿನ್ನತೆ ಕಾಣಬಹುದು.
ಧಾತ್ ಲಕ್ಷಣಾವಳಿಗೆ ತುತ್ತಾದ ಯುವಕನಲ್ಲಿ ಕಂಡು ಬರುವ ದೈಹಿಕ ಲಕ್ಷಣಗಳಲ್ಲಿ ತೀವ್ರ ಆಯಾಸ, ದೌರ್ಬಲ್ಯ, ಬೆನ್ನುನೋವು, ಕಣ್ಣಿನ ಸುತ್ತ ಕಪ್ಪು ವರ್ತುಲಗಳು, ಜ್ಞಾಪಕ ಶಕ್ತಿ ಕುಂದುವುದು ಮತ್ತು ತಲೆಸುತ್ತುವುದು ಮುಖ್ಯವಾದವು. ವೀರ್ಯ ನಷ್ಟದಿಂದ ತನ್ನ ಲೈಂಗಿಕ ಸಾಮರ್ಥ್ಯವೇ ಕಳೆದು ಹೋಗುತ್ತದೆ ಅಥವಾ ತಾನು ನಪುಂಸಕರಾಗುತ್ತಿದ್ದೇನೆ ಎಂಬ ಭಯ ಕಾಡುತ್ತದೆ. ಹಸ್ತಮೈಥುನ ಅಥವಾ ವೀರ್ಯ ನಷ್ಟಕ್ಕೆ ಸಂಬಂಧಿಸಿದಂತೆ ಅತಿಯಾದ ಅಪರಾಧ ಪ್ರಜ್ಞೆ ಕಾಡಬಹುದು. ಈ ಭೀತಿಯಿಂದಾಗಿ ನಿದ್ರೆಯಿಲ್ಲದೆ ಒದ್ದಾಡುವುದು, ಸದಾ ಚಿಂತಿತನಾಗಿರುವುದು ಕಂಡುಬರುತ್ತದೆ.
ಧಾತ್ ಲಕ್ಷಣಾವಳಿಗೆ ಮುಖ್ಯ ಕಾರಣ ಅಜ್ಞಾನ ಮತ್ತು ತಪ್ಪು ತಿಳಿವಳಿಕೆ. ಸಮಾಜದಲ್ಲಿರುವ ಹಳೆಯ ನಂಬಿಕೆಗಳು ಮತ್ತು ಕೆಲವು ಜಾಹೀರಾತುಗಳು, 40 ಹನಿ ರಕ್ತವು ಒಂದು ಹನಿ ವೀರ್ಯಕ್ಕೆ ಸಮ ಎಂದು ಬಿಂಬಿಸುತ್ತವೆ. ಈ ಅಶಾಸ್ತ್ರೀಯ ಮಾಹಿತಿ ವ್ಯಕ್ತಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕ ಆರೋಗ್ಯದ ಬಗ್ಗೆ ಇರುವ ಮುಜುಗರ ಮತ್ತು ಸರಿಯಾದ ಶಿಕ್ಷಣದ ಕೊರತೆ ಈ ಭಯವನ್ನು ಹೆಚ್ಚಿಸುತ್ತದೆ.
ಇದು ಮೂಲತಃ ದೈಹಿಕ ಕಾಯಿಲೆಯಲ್ಲ, ಬದಲಾಗಿ ವ್ಯಕ್ತಿಯ ಆತಂಕ ಮತ್ತು ಖಿನ್ನತೆಯ ಒಂದು ರೂಪ. ವೈದ್ಯವಿಜ್ಞಾನದ ಅನ್ವಯ ವೀರ್ಯಸ್ಖಲನ ಅಥವಾ ಸ್ವಪ್ನ ಸ್ಖಲನ ಎಂಬುದು ಒಂದು ಸಹಜ ಪ್ರಕ್ರಿಯೆ. ವೀರ್ಯ ನಷ್ಟದಿಂದ ದೇಹದ ಶಕ್ತಿ ಕುಂದುತ್ತದೆ ಅಥವಾ ಬುದ್ಧಿಶಕ್ತಿ ಕಡಿಮೆ ಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ದೇಹವು ನಿರಂತರವಾಗಿ ವೀರ್ಯವನ್ನು ಉತ್ಪಾದಿಸುತ್ತಲೇ ಇರುತ್ತದೆ. ಆದ್ದರಿಂದ ಸ್ವಪ್ನಸ್ಖಲನ ಒಂದು ಸಾಮಾನ್ಯ ದೈಹಿಕ ಕ್ರಿಯೆ.
ಧಾತ್ ಲಕ್ಷಣಾವಳಿಯಿಂದ ನರಳುವವರಿಗೆ ಮೊದಲು ಸರಿಯಾದ ಮಾಹಿತಿ ನೀಡಬೇಕು. ವ್ಯಕ್ತಿಗೆ ಲೈಂಗಿಕ ಅಂಗರಚನಾಶಾಸ್ತ್ರದ ಬಗ್ಗೆ ಮತ್ತು ವೀರ್ಯದ ಬಗ್ಗೆ ಸರಿಯಾದ ವೈಜ್ಞಾನಿಕ ತಿಳುವಳಿಕೆ ನೀಡುವುದು ಅತ್ಯಂತ ಮುಖ್ಯ. ಮನೋವೈದ್ಯರು ಅಥವಾ ಆಪ್ತಸಲಹೆಗಾರರು ವ್ಯಕ್ತಿಯ ಆತಂಕ ಹೋಗಲಾಡಿಸಲು ನೆರವಾಗಬೇಕು. ತೀವ್ರವಾದ ಆತಂಕ ಅಥವಾ ಖಿನ್ನತೆ ಇದ್ದರೆ ಮಾತ್ರ ವೈದ್ಯರು ಔಷಧಿಗಳನ್ನು ನೀಡುತ್ತಾರೆ.
ಧಾತ್ ಲಕ್ಷಣಾವಳಿಯು ದೈಹಿಕ ರೋಗವಲ್ಲ. ಯುವಕರು ತಮ್ಮ ಸಮಸ್ಯೆಗಳ ಬಗ್ಗೆ ಯಾವುದೇ ಅಂಜಿಕೆ ಇಲ್ಲದೆ ಅರ್ಹ ವೈದ್ಯರೊಂದಿಗೆ (ಮನೋವೈದ್ಯರು ಅಥವಾ ಸೆಕ್ಸಾಲಜಿಸ್ಟ್) ಮುಕ್ತವಾಗಿ ಚರ್ಚಿಸುವುದು ಉತ್ತಮ. ಹಸ್ತಮೈಥುನ ಅಥವಾ ಸ್ವಪ್ನ ಸ್ಖಲನವು ಯಾವುದೇ ರೋಗದ ಲಕ್ಷಣವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಧಾತು ಸಿಂಡ್ರೋಮ್‌ನಿಂದ ಹೊರಬರಲು ಇರುವ ಮೊದಲ ಮೆಟ್ಟಿಲು.
ಗಿಲ್ಹರಿ ಲಕ್ಷಣಾವಳಿ: ಹಿಂದಿಯಲ್ಲಿ ‘ಗಿಲ್ಹರಿ’ ಎಂದರೆ ಅಳಿಲು. ಈ ಅಪರೂಪದ ಲಕ್ಷಣಾವಳಿ ಪೀಡಿತನಿಗೆ ಚರ್ಮದ ಕೆಳಗೆ ಅಳಿಲು ಅಥವಾ ಸಣ್ಣ ಪ್ರಾಣಿ ಓಡಾಡುತ್ತಿದೆ, ಗಡ್ಡೆಯು ತನ್ನ ದೇಹದ ಒಂದು ಭಾಗದಿಂದ ಮತ್ತೊಂದು ಚಲಿಸುತ್ತಿದೆ, ತನ್ನ ಸ್ನಾಯುಗಳಲ್ಲಿ ಹಲ್ಲಿಯಂತಹ ಜೀವಿಯು ಸಂಚರಿಸುತ್ತಿದೆ ಎಂಬ ಅನುಭವ ಅಥವಾ ನಂಬಿಕೆ ಉಂಟಾಗಿ ನಾನಾ ಮನೋದೈಹಿಕ ಲಕ್ಷಣಗಳು ಕಂಡುಬರಬಹುದು. ರಾಜಸ್ಥಾನದಲ್ಲಿ ಈ ಸಮಸ್ಯೆಯು ಸಾಮಾನ್ಯವೆನ್ನಲಾಗಿದೆ.
ಪಪ್ಪಿ ಪ್ರಗ್ನೆನ್ಸಿ ಸಿಂಡ್ರೋಮ್: ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತ ವರದಿಯಾದ ಅತ್ಯಂತ ಅಪರೂಪದ ನಂಬಿಕೆ. ನಾಯಿಯ ಕಚ್ಚಿದ ಮೇಲೆ ತನ್ನ ಹೊಟ್ಟೆಯಲ್ಲಿ ನಾಯಿ ಮರಿಗಳು ಬೆಳೆಯುತ್ತಿವೆ ಎಂದು ವ್ಯಕ್ತಿ ನಂಬಿ ವಿಹ್ವಲನಾಗುವ ಲಕ್ಷಣಾವಳಿ.
ಬಾನಾಮತಿ: ಕರ್ನಾಟಕದ ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೆಳಗಾವಿ ಮುಂತಾದ ಕಡೆ ಪ್ರಚಲಿತದಲ್ಲಿದ್ದ ಪ್ರಮುಖ ಸಾಂಸ್ಕೃತಿಕ ಲಕ್ಷಣಾವಳಿ. ಮನೆಯ ಮೇಲ್ಛಾವಣಿಯ ಮೇಲೆ ಕಲ್ಲು ಬೀಳುವುದು, ಬಟ್ಟೆಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣುವುದು, ಆಹಾರದಲ್ಲಿ ಕೂದಲು ಅಥವಾ ಕೀಟಗಳು ಕಾಣಿಸಿಕೊಳ್ಳುವುದು. ಮನೆಯ ಸದಸ್ಯರು ಹಠಾತ್ತಾಗಿ ಅನಾರೋಗ್ಯಕ್ಕೆ ಒಳಗಾಗುವುದು, ಅತಿಯಾದ ಭಯ, ನಿದ್ರಾಹೀನತೆ ಅಥವಾ ವಿಚಿತ್ರವಾಗಿ ವರ್ತಿಸುವುದು. ನೆರೆಹೊರೆಯವರ ಮೇಲೆ ಅನುಮಾನಪಡುವುದು ಅಥವಾ ಯಾರೋ ವೈಯಕ್ತಿಕ ದ್ವೇಷದಿಂದ ಮಾಟ ಮಾಡಿzರೆ ಎಂದು ಭಾವಿಸುವುದು ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಬಾನಾಮತಿ ಅಪರೂಪವಾಗಿದೆ.
ಜಾಗತಿಕ: ಅಮೆರಿಕದ ಮಾನಸಿಕ ಅಸ್ವಸ್ಥೆಗಳ ರೋಗ ನಿರ್ಣಯ ಮತ್ತು ಸಂಖ್ಯಾಶಾಸ್ತ್ರೀಯ ಕೈಪಿಡಿ (ಡಯಾಗ್ನೋಸ್ಟಿಕ್ ಅಂಡ್ ಸ್ಟಾಟಿಸ್ಟಿಕ್ಸ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್) 50ಕ್ಕೂ ಹೆಚ್ಚು ನಮೂನೆಯ ಸಾಂಸ್ಕೃತಿಕ ಲಕ್ಷಣಾವಳಿಯನ್ನು ಗುರುತಿಸಿರುವುದುಂಟು. ಇವು ವಿಶ್ವದ ಎಲ್ಲ ಪ್ರಮುಖ ಹಾಗೂ ಮುಂದುವರೆದ ದೇಶಗಳಲ್ಲಿ ಕಂಡುಬರುತ್ತವೆ.
‘ಸಂಸ್ಕೃತಿ-ಸಂಬಂಧಿತ ಸಿಂಡ್ರೋಮ್’ ಪ್ರಕರಣಗಳ ವ್ಯಾಪ್ತಿಯಲ್ಲಿರುವ ರೋಗಿಗಳು ವೈದ್ಯಕೀಯ ವಿಜ್ಞಾನಕ್ಕಿಂತ ಹೆಚ್ಚಾಗಿ ತಮ್ಮ ಸಾಂಸ್ಕೃತಿಕ ನಂಬಿಕೆಗಳ ಮೇಲೆ ಭರವಸೆ ಇಟ್ಟಿರುತ್ತಾರೆ. ಹಾಗಾಗಿ ರೋಗಿಯು ಹೇಳುವ ಮಾಟ-ಮಂತ್ರ ಅಥವಾ ದೈವಿಕ ಶಕ್ತಿಯ ಬಗ್ಗೆ ಇದೆ ಸುಳ್ಳು ಅಥವಾ ಮೂಢ ನಂಬಿಕೆ ಎಂದು ತಕ್ಷಣವೇ ತಳ್ಳಿಹಾಕಬಾರದು. ಹೀಗೆ ಮಾಡಿದರೆ ರೋಗಿ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾನೆ ಮತ್ತು ಚಿಕಿತ್ಸೆಯನ್ನು ನಿಲ್ಲಿಸುತ್ತಾನೆ.
ಮನೋವೈದ್ಯರು/ಆಪ್ತಸಲಹೆಗಾರರು ನಿಮಗೆ ಈ ರೀತಿಯ ಅನುಭವವಾಗುತ್ತಿದೆ ಮತ್ತು ಇದರಿಂದ ನೀವು ತೀವ್ರ ಆತಂಕದಲ್ಲಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿದೆ ಎಂದು ಹೇಳಿ, ರೋಗಿಯ ಜೊತೆಯಲ್ಲಿ ನಂಬಿಕೆಯ ಬಾಂಧವ್ಯವನ್ನು ನಿರ್ಮಿಸುವುದು ಅಗತ್ಯವಾಗುತ್ತದೆ.
ವ್ಯಕ್ತಿಯ ಇತಿಹಾಸವನ್ನು ವಿವರವಾಗಿ ಪಡೆಯಬೇಕು. ರೋಗಿಯ ದೈಹಿಕ ಲಕ್ಷಣಗಳ ಜೊತೆಗೆ, ಅವರ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಕೇಳಿ ತಿಳಿಯಬೇಕು. ಸಮಸ್ಯೆ ಯಾವಾಗ ಆರಂಭವಾಯಿತು? ಮನೆಯಲ್ಲಿನ ಯಾವುದಾದರೂ ಬದಲಾವಣೆಗಳು ಅಥವಾ ಒತ್ತಡದ ಘಟನೆಗಳು ಇದಕ್ಕೆ ಕಾರಣವೇ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ನೇರವಾಗಿ ‘ಮಾನಸಿಕ ಕಾಯಿಲೆ’ ಎಂದು ಹೇಳುವ ಬದಲು, ಅವರ ನಂಬಿಕೆಗೆ ಹೊಂದಿಕೊಳ್ಳುವ ರೀತಿಯಲ್ಲಿ ವಿವರಿಸುವುದು ಸೂಕ್ತ. ಉದಾಹರಣೆಗೆ: ನಿಮ್ಮ ದೇಹದಲ್ಲಿ ಉಂಟಾಗುತ್ತಿರುವ ಈ ಲಕ್ಷಣ ಗಳು ತೀವ್ರವಾದ ಮಾನಸಿಕ ಒತ್ತಡ ಅಥವಾ ನರಗಳ ಅತಿಯಾದ ಆತಂಕದಿಂದಾಗಿ ಉಂಟಾಗುತ್ತಿವೆ ಎಂದು ವಿವರಿಸಲೆತ್ನಿಸಬೇಕು.
ರೋಗಿಯು ನಂಬುವ ಮಾಟ-ಮಂತ್ರದ ಲಕ್ಷಣಗಳ ಹಿಂದೆ ಯಾವುದೇ ದೈಹಿಕ ಕಾಯಿಲೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಸಂಪೂರ್ಣ ದೈಹಿಕ ತಪಾಸಣೆ ನಡೆಸುವುದು ಅಗತ್ಯ. ಇದು ರೋಗಿಗೆ ವೈದ್ಯರು ನನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ಭರವಸೆಯನ್ನು ನೀಡುತ್ತದೆ.
ಆಪ್ತಸಲಹೆ ಮತ್ತು ಮನೋವೈದ್ಯಕೀಯ ನೆರವು ಅಗತ್ಯ. ಬಹುಪಾಲು ಪ್ರಕರಣಗಳು ಆತಂಕ ಅಥವಾ ಖಿನ್ನತೆಯಿಂದ ಉಂಟಾಗಿರುತ್ತವೆ. ಅವರಿಗೆ ಅಗತ್ಯ ಮನೋವೈದ್ಯಕೀಯ ಸಮಾಲೋಚನೆ ಅಗತ್ಯ. ಅಗತ್ಯವಿದ್ದರೆ ಮಾತ್ರ ಆತಂಕವನ್ನು ಕಡಿಮೆ ಮಾಡುವ ಅಥವಾ ಖಿನ್ನತೆ ನಿವಾರಕ ಔಷಧಿಗಳನ್ನು ನೀಡಬೇಕಾಗುತ್ತದೆ.
ಸಂಸ್ಕೃತಿ-ಸಂಬಂಧಿತ ಲಕ್ಷಣಾವಳಿಯಲ್ಲಿ ಕುಟುಂಬದ ಪಾತ್ರ ದೊಡ್ಡದು. ಕುಟುಂಬ ಸದಸ್ಯರಿಗೆ ರೋಗಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವರನ್ನು ಗೇಲಿ ಮಾಡದಂತೆ ತಿಳುವಳಿಕೆ ನೀಡಬೇಕು. ಒಂದೇ ದಿನದಲ್ಲಿ ರೋಗಿಯ ನಂಬಿಕೆಯನ್ನು ಬದಲಾಯಿಸಲು ಪ್ರಯತ್ನಿಸುವುದು ತರವಲ್ಲ. ಚಿಕಿತ್ಸೆಯು ಮುಂದುವರೆದಂತೆ, ರೋಗಿಯ ಲಕ್ಷಣಗಳು ಕಡಿಮೆಯಾಗುತ್ತಿವೆ ಎಂಬು ದನ್ನು ವ್ಯಕ್ತಿಯ ಗಮನಕ್ಕೆ ತರ್ಬೇಕು. ಔಷಧಿ ಮತ್ತು ಆಲೋಚನೆಯಲ್ಲಿನ ಬದಲಾವಣೆಯಿಂದ ನಿಮ್ಮ ಸಮಸ್ಯೆ ಕಡಿಮೆಯಾಗುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು.