ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr N Someshwara Column: ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ

ಅಪರೂಪದ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಕೇದಾರನಾಥ್, ಲಭ್ಯವಿದ್ದ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಗೌರವಗಳನ್ನು ತಮ್ಮದಾಗಿಸಿಕೊಂಡರು. ಅವರು ಬರೋಬ್ಬರಿ ಎಂಟು ಚಿನ್ನದ ಪದಕಗಳನ್ನು ಗಳಿಸಿದರು. ಅತ್ಯಂತ ಕಠಿಣ ವಿಭಾಗವಾದ ಸೂಲಗಿತ್ತಿ ತಂತ್ರಜ್ಞಾನದಲ್ಲಿ (ಮಿಡ್‌ ವೈಫರಿ) ನೂರಕ್ಕೆ ನೂರು ಅಂಕಗಳನ್ನು ಪಡೆದದ್ದು ಗಮನೀಯ ಹಾಗೂ ಗಣನೀಯ.

ಹಿಂದಿರುಗಿ ನೋಡಿದಾಗ

ಒಬ್ಬ ವೈದ್ಯ ಮತ್ತು ಶಿಕ್ಷಣತಜ್ಞರಾಗಿ, ಸರ್ ಕೇದಾರನಾಥ್ ಅವರು ತಮ್ಮ ಉನ್ನತ ವ್ಯಕ್ತಿತ್ವವನ್ನು ಕಾದಿಟ್ಟುಕೊಂಡರು. ಸಮಾಜಕ್ಕೆ ಅತ್ಯುತ್ತಮ ವೈದ್ಯರು ಮಾತ್ರ ದೊರೆಯ ಬೇಕೆಂಬ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಪರೀಕ್ಷರಾಗಿ, ರಾಜಿ ಮಾಡಿ ಕೊಳ್ಳದ ವೈದ್ಯಕೀಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಮಾರ್ಚ್ 13, 1926 ರಂದು, ತಮ್ಮ 69ನೇ ವಯಸ್ಸಿ ನಲ್ಲಿ, ಈ ದಿವ್ಯ ವೈದ್ಯರು ಕೋಲ್ಕತಾದಲ್ಲಿ ನಿಧನ ರಾದರು. ಅವರು ಸೃಷ್ಟಿಸಿದ ಬೆಂಗಾಲ್ -ರ್ಸೆಪ್ಸ್, ಭಾರತೀಯ ವೈದ್ಯಕೀಯ ಜಾಣ್ಮೆಯ ಶಾಶ್ವತ ಸ್ಮಾರಕವಾಗಿ ಉಳಿದಿದೆ - ತಾಯಿ ಮತ್ತು ಮಗುವಿನ ನಡುವಿನ ಪವಿತ್ರ ಬಂಧವನ್ನು ರಕ್ಷಿಸಲು ಸ್ಥಳೀಯ ಶರೀರ ರಚನೆಯ ಮಸೂರದ ಮೂಲಕ ನೋಡಿದ ಒಬ್ಬ ದಾರ್ಶನಿಕ ವೈದ್ಯನಿಗೆ ಇದು ಜೀವಂತ ಸಾಕ್ಷಿಯಾಗಿದೆ.

ನಮ್ಮ ದೇಶದಲ್ಲಿ ಆಯುರ್ವೇದವು ಅಧಿಕೃತ ವೈದ್ಯಕೀಯ ಪದ್ಧತಿಯಾಗಿತ್ತು ಹಾಗೂ ಇಂದಿಗೂ ಆಗಿದೆ. ಬ್ರಿಟಿಷರ ಆಗಮನದೊಡನೆ ಪಾಶ್ಚಾತ್ಯ ವೈದ್ಯಕೀಯ ಪದ್ಧತಿಯೂ ನಮ್ಮಲ್ಲಿ ನೆಲೆಯೂರಿ, ಅದನ್ನು ಕಲಿಸುವ ವಿದ್ಯಾಲಯಗಳು ಆರಂಭವಾದವು. ಈ ಸಂಧಿಕಾಲದಲ್ಲಿ ಆಧುನಿಕ ವೈದ್ಯಕೀಯವನ್ನು ಕಲಿತ ಹಲವು ವೈದ್ಯರಲ್ಲಿ ಸರ್ ಕೇದಾರ ನಾಥ್ ದಾಸ್ (1867-1936) ಅವರು ಪ್ರಮುಖರು. ಇವರು ಸೀರೋಗ ಹಾಗೂ ಪ್ರಸೂತಿ ತಂತ್ರದ ತಜ್ಞರಾಗಿದ್ದರು. ಅದರಲ್ಲೂ ಶಸ್ತ್ರಚಿಕಿತ್ಸಾ ಪ್ರಸೂತಿ ತಂತ್ರ ವಿಜ್ಞಾನದ ದೈತ್ಯ ಪ್ರತಿಭೆಯಾಗಿದ್ದರು.

ಬ್ರಿಟಿಷ್ ರಾಜ್‌ನ ಉತ್ತುಂಗದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇದಾರನಾಥ್ ಅವರು, ಭ್ರೂಣವಿಜ್ಞಾನದ ಕುರಿತಾದ ಸಾಂಪ್ರದಾಯಿಕ ಆಯುರ್ವೇದ ಒಳನೋಟಗಳು ಮತ್ತು ಪಾಶ್ಚಿ ಮಾತ್ಯ ಶಸ್ತ್ರಚಿಕಿತ್ಸಾ ಪದ್ಧತಿಯ ಕಟ್ಟುನಿಟ್ಟಾದ ಪ್ರಾಯೋಗಿಕ ಮಾನದಂಡಗಳನ್ನು ಸಮೀಕರಿ ಸುವ ಕೊಂಡಿಯಾಗಿ ಕಾರ್ಯನಿರ್ವಹಿಸಿದರು.

ಶೈಕ್ಷಣಿಕ ಪ್ರತಿಭೆ: ಕೇದಾರನಾಥ್ ದಾಸ್ ಅವರು ಫೆಬ್ರವರಿ 24, 1867 ರಂದು ಬಂಗಾಳದ ಬೌದ್ಧಿಕ ಕೇಂದ್ರವಾದ ಕೋಲ್ಕತಾದಲ್ಲಿ ಜನಿಸಿದರು. ಇವರು ಜದಬ್ ಕೃಷ್ಣ ದಾಸ್ ಅವರ ದ್ವಿತೀಯ ಪುತ್ರ. ಅತ್ಯಂತ ಎಳೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತೀವ್ರ ದುಃಖ ಅನುಭವಿಸಿದ ಯುವ ಕೇದಾರನಾಥ್, ತಮ್ಮ ಸಂಪೂರ್ಣ ಗಮನವನ್ನು ಶಿಕ್ಷಣದ ಕಡೆಗೆ ಹರಿಸಿದರು. ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಕೋಲ್ಕತಾದ ಐತಿಹಾಸಿಕ ಹಿಂದೂ ಶಾಲೆಯಲ್ಲಿ ಪ್ರಾರಂಭಿಸಿದರು. ತರುವಾಯ ಅವರು ಸ್ಕಾಟಿಷ್ ಚರ್ಚ್ ಕಾಲೇಜಿ ನಿಂದ ತಮ್ಮ ‘ಫಸ್ಟ್ ಆರ್ಟ್ಸ್’ ಪರೀಕ್ಷೆಯನ್ನು ಪಾಸು ಮಾಡಿದರು, ಈ ಮೂಲಕ ಕಟ್ಟು ನಿಟ್ಟಾದ ವಿಶ್ಲೇಷಣಾತ್ಮಕ ಚಿಂತನೆಯಲ್ಲಿ ತಮ್ಮ ತೀವ್ರ ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಪ್ರತಿಭಾವಂತ: ಮಾನವನ ಸಂಕಟಗಳನ್ನು ನಿವಾರಿಸುವ ಹಂಬಲದಿಂದ ಪ್ರೇರಿತರಾದ ಅವರು, ಕೋಲ್ಕತಾ ಮೆಡಿಕಲ್ ಕಾಲೇಜನ್ನು ಪ್ರವೇಶಿಸಿ 1892 ರಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್ (ಎಂ.ಬಿ) ಪದವಿಯನ್ನು ಪಡೆದರು.

ಅಪರೂಪದ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಕೇದಾರನಾಥ್, ಲಭ್ಯವಿದ್ದ ಬಹುತೇಕ ಎಲ್ಲ ಪ್ರಮುಖ ಶೈಕ್ಷಣಿಕ ಗೌರವಗಳನ್ನು ತಮ್ಮದಾಗಿಸಿಕೊಂಡರು. ಅವರು ಬರೋಬ್ಬರಿ ಎಂಟು ಚಿನ್ನದ ಪದಕಗಳನ್ನು ಗಳಿಸಿದರು. ಅತ್ಯಂತ ಕಠಿಣ ವಿಭಾಗವಾದ ಸೂಲಗಿತ್ತಿ ತಂತ್ರಜ್ಞಾನದಲ್ಲಿ (ಮಿಡ್‌ ವೈಫರಿ) ನೂರಕ್ಕೆ ನೂರು ಅಂಕಗಳನ್ನು ಪಡೆದದ್ದು ಗಮನೀಯ ಹಾಗೂ ಗಣನೀಯ.

ಇದರೊಂದಿಗೆ ಹತ್ತು ಗೌರವ ಪ್ರಮಾಣ ಪತ್ರಗಳನ್ನು (ಸರ್ಟಿಫಿಕೇಟ್ಸ್ ಆಫ್ ಆನರ್) ಪಡೆದರು. ಅವರ ಶಸ್ತ್ರಚಿಕಿತ್ಸಾ ಕೌಶಲ್ಯ ಮತ್ತು ಶಾರೀರಿಕ ರಚನಾ ನಿಖರತೆಯ ತಿಳಿವು ಅವರಿಗೆ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿಷ್ಠಿತ ‘ಡ್ಯೂಕ್ ಆಫ್ ಎಡಿನ್‌ಬರ್ಗ್ ಪ್ರಶಸ್ತಿ’, ‘ಕ್ಲಿನಿಕಲ್ ಸರ್ಜರಿ ಪ್ರಶಸ್ತಿ’ ಮತ್ತು ‘ಅನ್ಯಾಟಮಿ ಪ್ರೊಸೆಕ್ಟರ್ ಪ್ರಶಸ್ತಿ’ ಯನ್ನು ತಂದುಕೊಟ್ಟವು.

ಕೇದಾರನಾಥ್ ಅವರು ತಮ್ಮ ವೈದ್ಯಕೀಯ ಶಿಕ್ಷಣ ಅವಧಿಯುದ್ದಕ್ಕೂ, ‘ದುರ್ಗಾ ಚರಣ್ ಲಾ ಸ್ಕಾಲರ್‌ಶಿಪ್’ (ಮೊದಲ ಎಂ.ಬಿ., ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ), ‘ಅಬ್ದುಲ್ ಗನ್ನಿ ಸ್ಕಾಲರ್‌ಶಿಪ್’ (ವರ್ಷದ ಅತ್ಯುತ್ತಮ ವಿದ್ಯಾರ್ಥಿಗಾಗಿ) ಮತ್ತು ಪ್ರಸೂತಿ ವಿಜ್ಞಾನದಲ್ಲಿ ‘ಗುಡೀವ್ ಸ್ಕಾಲರ್‌ಶಿಪ್’ ಸೇರಿದಂತೆ ಪ್ರಮುಖ ಕಾಲೇಜು ವಿದ್ಯಾರ್ಥಿ ವೇತನ ಗಳನ್ನು ಪಡೆದರು. ಇವು ಅವರ ಶಿಕ್ಷಣಕ್ಕೆ ನಿರಂತರವಾಗಿ ಬೆಂಬಲವನ್ನು ನೀಡಿದವು.

1895ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ತಮ್ಮ ಡಾಕ್ಟರ್ ಆಫ್‌ ಮೆಡಿಸಿನ್ (ಎಂ.ಡಿ) ಪದವಿಯನ್ನು ಯಶಸ್ವಿಯಾಗಿ ಪಡೆದರು. ನಂತರದ ದಿನಗಳಲ್ಲಿ, ಲಂಡನ್‌ನ ಬ್ರಿಟಿಷ್ ಕಾಲೇಜ್ ಆಫ್ ಅಬ್ಸ್ಟೆಟ್ರಿಶಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ (ಈಗಿನ ಆರ್.ಸಿ.ಓಜಿ) ನ ‘ಫೌಂಡೇಶನ್ ಫೆಲೋ’ ಆಗಿ ನೇಮಕಗೊಂಡಾಗ ಅವರ ಜಾಗತಿಕ ಸ್ಥಾನಮಾನವು ಮತ್ತಷ್ಟು ಗಟ್ಟಿಯಾಯಿತು.

ಎರಡು ದಶಕಗಳ ಕಾಲ, ಅವರು ಧದಾಸ್ ಅವರು ತಮ್ಮ ಕ್ಲಿನಿಕಲ್ ವೃತ್ತಿಜೀವನವನ್ನು 1892ರಲ್ಲಿ ಕೋಲ್ಕತ್ತಾದ ಈಡನ್ ಆಸ್ಪತ್ರೆಯಲ್ಲಿ ಆರಂಭಿಸಿದರು. ಮೊದಲು ಮೆಡಿಸಿನ್, ಆನಂತರ ಸರ್ಜರಿ ವಿಭಾಗದಲ್ಲಿ ರಿಜಿಸ್ಟ್ರಾರ್ ಆಗಿ ಕೆಲಸವನ್ನುಅರಂಭಿಸಿದರು. ಅವರ ಆಳವಾದ ವೈದ್ಯಕೀಯ ಜಾಣ್ಮೆ ಹಾಗೂ ಪ್ರತಿಭೆಯು ಶೀಘ್ರದಲ್ಲೇ ಮೇಲಧಿಕಾರಿಗಳ ಗಮನವನ್ನು ಸೆಳೆಯಿತು. ಹಾಗಾಗಿ ಅವರು 1899ರಲ್ಲಿ ಕ್ಯಾಂಪ್‌ಬೆಲ್ ಮೆಡಿಕಲ್ ಶಾಲೆ ಯಲ್ಲಿ ಪ್ರಸೂತಿ ವಿಜ್ಞಾನದ ಶಿಕ್ಷಕರಾದರು.

ಎರಡು ದಶಕಗಳ ಕಾಲ, ಅವರು ಭಾರತೀಯ ವೈದ್ಯರ ಪೀಳಿಗೆಗೆ ತರಬೇತಿ ನೀಡಿದರು. 1919ರಲ್ಲಿ, ಕಾರ್ಮೈಕಲ್ ಮೆಡಿಕಲ್ ಕಾಲೇಜು ಆರಂಭವಾಯಿತು. ಆನಂತರ ಇದು ಆರ್.ಜಿ.ಕರ್ ಮೆಡಿಕಲ್ ಕಾಲೇಜ್ ಆಗಿ ಪ್ರಸಿದ್ಧಿಯನ್ನು ಪಡೆಯಿತು. ಈ ವಿದ್ಯಾಲಯದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೇದಾರನಾಥ್ ಸೇರಿದರು.

1922ರಲ್ಲಿ ಪ್ರಾಂಶುಪಾಲರಾದರು. ಈ ಪ್ರತಿಷ್ಠಿತ ಆಡಳಿತಾತ್ಮಕ ಹುದ್ದೆಯನ್ನು ಅವರು 1936ರಲ್ಲಿ ತಮ್ಮ ನಿಧನದವರೆಗೂ ಘನತೆಯಿಂದ ನಿರ್ವಹಿಸಿದರು. ತಮ್ಮ ಕಾಲೇಜಿನ ಆಚೆಗೂ, ಸರ್ ಕೇದಾರನಾಥ್ ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡೀನ್ ಆದರು. ಬ್ರಿಟಿಷ್ ಆಡಳಿತದ ಅಡಿಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾದ ನಿರೀಕ್ಷಕರಾಗಿ, ಸಾರ್ವಜನಿಕ ಆರೋಗ್ಯ ನೀತಿಗಳನ್ನು ಸಕ್ರಿಯವಾಗಿ ರೂಪಿಸಿದರು. ಅವರು 1901ರಲ್ಲಿ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ಸಂಸ್ಥೆ, ಕೋಲ್ಕತಾ ಶಾಖೆಯ ಉಪಾಧ್ಯಕ್ಷರಾಗಿ (1928-1930) ಮತ್ತು ತರುವಾಯ ಅಧ್ಯಕ್ಷರಾಗಿ (೧೯೩೧-೧೯೩೪) ಸೇವೆಯನ್ನು ಸಲ್ಲಿಸಿದರು.

ಬೆಂಗಾಲ್ ಫೋರ್ಸೆಪ್ಸ್ (ದಾಸ್ ಫೋರ್ಸೆಪ್ಸ್) ಉಗಮ: ಪ್ರಸೂತಿ ಶಸ್ತ್ರಚಿಕಿತ್ಸಾ ತಂತ್ರ ಜ್ಞಾನಕ್ಕೆ ಕೇದಾರನಾಥ್ ಅವರ ಸ್ಮರಣೀಯ ಕೊಡುಗೆಯನ್ನು ಅರ್ಥಮಾಡಿ ಕೊಳ್ಳಲು, 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಭಾರತೀಯ ತಾಯಂದಿರ ಮೂಕವೇದನೆಯನ್ನು ಅವಲೋಕಿಸಬೇಕು.

ಪ್ರಸವವೆಂದರೆ ತಾಯಿಗೆ ಮರುಹುಟ್ಟು ದೊರೆತಂತೆ ಎಂಬ ಉತ್ಪ್ರೇಕ್ಷೆಯದಲ್ಲ. ಹೆರಿಗೆಯ ಸಮಯದಲ್ಲಿ ಮಗು ಜನನದ್ವಾರದಲ್ಲಿ ಸಿಲುಕಿಕೊಂಡಾಗ ಅಥವಾ ಗರ್ಭಾಶಯವು ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡು ಜಡವಾದಾಗ, ಒಂದು ರೀತಿಯ ತ್ರಿಶಂಕು ಸ್ಥಿತಿಯು ಏರ್ಪಡುತ್ತದೆ. ಮಗುವನ್ನು ಹೊರದೂಡಲು ತಾಯಿಯು ಮುಕ್ಕಿ ಮುಕ್ಕಿ ದಣಿದಿರುತ್ತಾಳೆ. ಈ ಅವಧಿಯಲ್ಲಿ ಆಗಬಹುದಾದ ಹಾಗೂ ಗಾಯಗಳು ಹಾಗೂ ಅನಿಯಂತ್ರಿತ ರಕ್ತಸ್ರಾವವು ತಾಯಿಯನ್ನುನಿತ್ರಾಣಗೊಳಿಸುತ್ತದೆ.

ಹೀಗೆಯೇ ಬಿಟ್ಟರೆ ಶಿಶುವು ಜನನ ದ್ವಾರದಲ್ಲಿ ಉಸಿರುಗಟ್ಟಿ ಸಾಯುವ ಸಾಧ್ಯತೆಯು ಅಧಿಕ ವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಿಶೇಷವಾದ ಇಕ್ಕುಳದ ಸಹಾಯದಿಂದ ಮಗುವಿನ ತಲೆಯನ್ನು ಹಿಡಿದುಕೊಂಡು, ನಿಧಾನವಾಗಿ ಶಿಶುವನ್ನು ಹೊರಗೆ ಎಳೆಯುತ್ತಾರೆ. ವೈದ್ಯರು ಅಥವಾ ಸೂಲಗಿತ್ತಿಯರು ಈ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದರೆ ತಾಯಿ-ಮಗುವಿನ ಜೀವವು ಉಳಿಯುತ್ತದೆ. ಈ ಪ್ರಸೂತಿ ಫೋರ್ಸೆಪ್ಸ್‌ಗಳು ಅನೇಕ ತಾಯಿ-ಮಗುವನ್ನು ಬದುಕಿಸಿವೆ.

ಕೋಲ್ಕತ್ತಾವನ್ನು ಒಳಗೊಂಡಂತೆ ಭಾರತೀಯ ಹೆರಿಗೆ ವಾರ್ಡುಗಳಲ್ಲಿ ಒಂದು ಸಮಸ್ಯೆಯು ತಾಯಿ ಮತ್ತು ಮಗುವಿನ ಸಾವಿಗೆ ಕಾರಣವಾಗುತ್ತಿದ್ದವು. ಪ್ರಸವ ಇಕ್ಕಳವನ್ನು ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು.

ಮುಖ್ಯವಾಗಿ ಸಿಂಪ್ಸನ್, ಬಾರ್ನ್ಸ್ ಅವರ ಸಾಂಪ್ರದಾಯಿಕ ದೀರ್ಘ ವಕ್ರ ಫೋರ್ಸೆಪ್ಸ್ʼಗಳು ಅಥವಾ ಟಾರ್ನಿಯರ್ ಅವರ ಆಕ್ಸಿಸ್-ಟ್ರಾಕ್ಷನ್ ಮಾದರಿಗಳು - ಹೆಚ್ಚು ಜನಪ್ರಿಯ ವಾಗಿದ್ದವು. ಈ ಇಕ್ಕಳಗಳನ್ನು ತಯಾರಿಸುವ ಕಾರ್ಖಾನೆಗಳು ಯೂರೋಪಿನಲ್ಲಿಯೇ ಇದ್ದವು. ಅವರು ಯೂರೋಪಿಯನ್ ಬಿಳಿ ಮಹಿಳೆಯರ ಶ್ರೋಣಿ ಕುಹರದ (ಪೆಲ್ವಿಕ್ ಕ್ಯಾವಿಟಿ) ಅಳತೆಗೆ ತಕ್ಕಂತೆ ಇಕ್ಕಳಗಳನ್ನು ರೂಪಿಸಿದ್ದರು.

ಭಾರತೀಯ ಮಹಿಳೆಯರ ಶ್ರೋಣಿಯು ಯೂರೋಪಿಯನ್ ಮಹಿಳೆಯರ ಶ್ರೋಣಿಗಿಂತ ಕಿರಿದಾಗಿದ್ದವು. ಹಾಗಾಗಿ ಯೂರೋಪಿಯನ್ ಮಹಿಳೆಯರಿಗಾಗಿ ರೂಪಿಸಿದ ಇಕ್ಕುಳಗಳು ಭಾರತೀ ಮಹಿಳೆಯರಿಗೆ ತುಂಬಾ ದೊಡ್ಡದಾಗಿದ್ದವು. ಇಂತಹ ಇಕ್ಕುಳಗಳಿಂದ ಫೋರ್ಸೆಪ್ಸ್‌ ಡೆಲಿವರಿ ಮಾಡಲು ಪ್ರಯತ್ನಿಸಿದಾಗ, ತಾಯಿ-ಶಿಶುವಿನ ಸಾವು ಸಂಭಾವ್ಯತೆಯು ಅಧಿಕ ವಾಗಿರುತ್ತಿತ್ತು. ಭಾರತೀಯ ವೈದ್ಯರು, ಭಾರತೀಯ ತಾಯಂದಿರ ಶ್ರೋಣೀಗೆ ಸೂಕ್ತವಾದ ಇಕ್ಕುಳಗಳನ್ನು ತಯಾರಿಸುವಂತೆ ಕಾರ್ಖಾನೆಗಳಿಗೆ ಹೇಳಬೇಕು ಎಂದರು.

ಆದರೆ, ಬ್ರಿಟಿಷ್ ವೈದ್ಯರಿಗೆ ಇದು ಅಷ್ಟು ಮುಖ್ಯವಾಗಿ ಕಾಣಲಿಲ್ಲ. ಸತ್ತರೆ ಸಾಯಲಿ ಬಿಡು ಎಂಬ ಉದಾಸೀನತೆಯು ಅವರಲ್ಲಿ ಮನೆ ಮಾಡಿತ್ತು. ಹಾಗಾಗಿ ಹೆರಿಗೆಯ ಕೋಣೆಯೆಂದರೆ, ರಕ್ತದ ಮಡುವಿನಲ್ಲಿ ಚೀತ್ಕರಿಸುವ ತಾಯಂದಿರ ಅಸಹಾಯಕ ನರಕವಾಗಿತ್ತು.

ಶ್ರೋಣಿಯ ಅಳತೆ: ಭಾರತೀಯ ಉಪಖಂಡದ ಮಹಿಳೆಯರು, ವಿಶೇಷವಾಗಿ ಬಂಗಾಳ ಪ್ರೆಸಿಡೆನ್ಸಿಯಲ್ಲಿದ್ದ ಮಹಿಳೆಯರ ಶ್ರೋಣಿ ಕುಹರಗಳು, ಯುರೋಪಿಯನ್ ಮಹಿಳೆಯರಿಗೆ ಹೋಲಿಸಿದರೆ ಸಣ್ಣದಾಗಿದ್ದವು ಮತ್ತು ಕಿರಿದಾಗಿದ್ದವು. ಪೆಲ್ವಿಕ್ ಪ್ರವೇಶದ್ವಾರ, ಕುಹರ ಮತ್ತು ನಿರ್ಗಮನ ದ್ವಾರದ ವ್ಯಾಸಗಳು ಗಣನೀಯವಾಗಿ ಕಡಿಮೆಯಿದ್ದವು. ಭಾರತೀಯ ನವಜಾತ ಶಿಶುಗಳ ಸರಾಸರಿ ಜನನ ತೂಕ ಮತ್ತು ಅದಕ್ಕೆ ಅನುಗುಣವಾದ ತಲೆಯ ಸುತ್ತಳತೆ ಪಾಶ್ಚಿಮಾತ್ಯ ಶಿಶುಗಳಿಗಿಂತ ತುಲನಾತ್ಮಕವಾಗಿ ಕಡಿಮೆಯಾಗಿದ್ದವು. ಬೃಹತ್, ಭಾರವಾದ ಮತ್ತು ಆಳವಾದ ವಕ್ರರೇಖೆಯುಳ್ಳ ಯುರೋಪಿಯನ್ ಫೋರ್ಸೆಪ್ಸ್‌ಗಳನ್ನು ಭಾರತೀಯ ತಾಯಿಯ ಕಿರಿದಾದ ಜನನ ಮಾರ್ಗದಲ್ಲಿ ತೂರಿಸಿದಾಗ, ಅವು ಅತಿಯಾದ ಮತ್ತು ಅನಿಯಂತ್ರಿತ ಒತ್ತಡ ಹೇರುತ್ತಿದ್ದವು. ಈ ಅಸಮತೋಲನವು ತಾಯಿಯ ಮೃದು ಅಂಗಾಂಶಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದವು. ಯೋನಿಯಲ್ಲಿ ಗಂಭೀರ ಗಾಯಗಳಾಗುತ್ತಿದ್ದವು. ಪ್ರಸವದ ಮೂರನೇ ಹಂತದಲ್ಲಿ ಗುದ ಮುಂದಾಣ ಛಿದ್ರತೆಯಾಗಿ (ಪೆರಿನಿಯಲ್ ಟೇರ್ಸ್) ವಿಪರೀತ ರಕ್ತಸ್ರಾವವಾಗುತ್ತಿದ್ದವು. ನವಜಾತ ಶಿಶುಗಳಲ್ಲಿ ಮಾರಕ ಆಂತರಿಕ ರಕ್ತಸ್ರಾವ ಅಥವಾ ತಲೆಬುರುಡೆಯ ಮೂಳೆಮುರಿತಗಳಿಗೆ ಕಾರಣವಾಗುತ್ತಿದ್ದವು.

ತಾಂತ್ರಿಕ ಆವಿಷ್ಕಾರಗಳು:

ಕೇದಾರನಾಥ್ ಅವರು ಪ್ರಸ್ತುತ ಸಮಸ್ಯೆಯ ಬಿಕ್ಕಟ್ಟನ್ನು ಅರ್ಥ ಮಾಡಿಕೊಂಡರು. ಅವರು, ಭಾರತೀಯ ತಾಯಂದಿರ ಶರೀರ ರಚನೆಗೆ ಸೂಕ್ತವಾಗಿ ಹೊಂದುವಂತಹ ಒಂದು ಹೊಸ ದೀರ್ಘ ವಕ್ರ ಪ್ರಸೂತಿ ಇಕ್ಕುಳವನ್ನು ರೂಪಿಸಲು ಮಾನಸಿಕವಾಗಿ ಸಿದ್ಧತೆಯನ್ನು ನಡೆಸಿದರು. ಅವರು ಏನೇ ಕೆಲಸವನ್ನು ಮಾಡಬೇಕಾದರೂ ರಹಸ್ಯವಾಗಿ ಮಾಡಬೇಕಾ ಗಿತ್ತು. ಕೇದಾರನಾಥ್ ಒಂದು ಸಾಹಸಮಯ, ದಶಕದ ಅವಧಿಯ ಮಾನವಶಾಸ್ತ್ರೀಯ ಯುದ್ಧವನ್ನು ಆರಂಭಿಸಿದರು.

ಬ್ರಿಟಿಷ್ ಮೇಲಧಿಕಾರಿಗಳ ಕಣ್ಣಿಗೆ ಬೀಳದಂತೆ, ಅತ್ಯಂತ ರಹಸ್ಯವಾಗಿ, ಅವರು ಭಾರತದ ವಿವಿಧ ಪ್ರದೇಶ ಮತ್ತು ಹಿನ್ನೆಲೆಯ ಸಾವಿರಾರು ಭಾರತೀಯ ಮಹಿಳೆಯರ ಶ್ರೋಣಿ ಅಳತೆಗಳನ್ನು (ಪೆಲ್ವಿಕ್ಡೈ ಮೆನ್ಷನ್ಸ್) ತಾವೇ ಖುದ್ದಾಗಿ ತಮ್ಮ ಕೈಯಾರೆ ಅಳೆದರು. ಅವರ ಬಳಿ ಅಭೂತಪೂರ್ವವಾದ, ಭಾರತೀಯ ಮಹಿಳೆಯರ ಶರೀರ ರಚನೆಯ ಕರಾರುವಾಕ್ಕಾದ ದತ್ತಾಂಶದ (ಅನಟಾಮಿಕಲ್ ಡೇಟ) ಬೆಟ್ಟವೇ ಸೃಷ್ಟಿಯಾಯಿತು.

ಬ್ರಿಟಿಷ್ ಮಹಿಳೆಯರಿಗೆ ಹೋಲಿಸಿದರೆ ಭಾರತೀಯ ಮಹಿಳೆಯರ ಶ್ರೋಣಿ ಕುಹರ (ಪೆಲ್ವಿಕ್ ಕ್ಯಾವಿಟಿ) ಮತ್ತು ಹುಟ್ಟುವ ಶಿಶುಗಳ ತಲೆಯ ಗಾತ್ರ (ನಿಯೋನಟಲ್ ಕ್ರೇನಿಯಂ) ಚಿಕ್ಕದಾ ಗಿರುತ್ತದೆ ಎಂಬುದನ್ನು ಅವರುಗಣಿತದ ಸಮೀಕರಣಗಳೊಂದಿಗೆ ಸಾಬೀತುಪಡಿಸಿ ದರು.

ಕೇದಾರನಾಥ್ ಅವರು ತಮ್ಮ ರೇಖಾಚಿತ್ರಗಳು ಮತ್ತು ಲೆಕ್ಕಾಚಾರಗಳೊಂದಿಗೆ ಸನ್ನದ್ಧ ರಾದರು. ಬ್ರಿಟಿಷರ ಗಣ್ಯ ವೈದ್ಯಕೀಯ ಸರಬರಾಜು ಜಾಲವನ್ನು ಸಂಪೂರ್ಣವಾಗಿ ಬದಿಗೆ ತಳ್ಳಿದರು. ಅವರು ಕೋಲ್ಕತಾದ ಒಂದು ಅಜ್ಞಾತ ಗಲ್ಲಿಯಲ್ಲಿದ್ದ ಕಮ್ಮಾರನ ಕುಲುಮೆಯ ಬಳಿಗೆ ನೇರವಾಗಿ ನಡೆದರು. ಕಮ್ಮಾರನು ತನ್ನ ತಿದಿಯನ್ನ ಒತ್ತುತ್ತಿದ್ದಂತೆಯೇ ಉರಿಯು ತ್ತಿರುವ ಕಿಡಿಗಳು ಸೂರಿನವರೆಗೆ ಚಿಮ್ಮುತ್ತಿದ್ದವು. ಮತ್ತೊಂದು ಕಡೆ ಕಮ್ಮಾರರು ಕಾದ ಕಬ್ಬಿಣವನ್ನು ತಾಳಬದ್ಧ ಸುತ್ತಿಯೇಟಿಯಿಂದ ಹದಗೊಳಿಸುತ್ತಿದ್ದವು.

ಇಂತಹ ಪರಿಸರದಲ್ಲಿ ಕೇದಾರನಾಥರು ಭಾರತೀಯ ತಾಯಂದಿರ ಹಾಗೂ ಅವರ ಕಂದಮ್ಮಗಳ ಜೀವವನ್ನು ರಕ್ಷಿಸಬಲ್ಲ ಒಂದು ಸುರಕ್ಷಿತ ಉಪಕರಣದ ಸಿದ್ಧತೆಗೆ ಶ್ರೀಕಾರ ವನ್ನು ಹಾಕಿದರು. ಕಮ್ಮಾರನಿಗೆ ಅಗತ್ಯವಾದ ಮಾರ್ಗದರ್ಶನವನ್ನು ನೀಡುವುದರ ಜತೆ, ತಾವೇ ಆ ಬೆಂಕಿಯ ಮುಂದೆ ಕುಳಿತು ಇಕ್ಕುಳ ಹೇಗಿರಬೇಕೆಂದು ಸಲಹೆ-ಸೂಚನೆಗಳನ್ನು ಕೊಡುತ್ತಿದ್ದರು.

ಪ್ರಸವ ಇಕ್ಕುಳದ ರಚನೆ: ಪ್ರಸವ ಇಕ್ಕುಳದ ರಚನೆಯನ್ನು ಅರ್ಥಮಾಡಿಕೊಳ್ಳಬೇಕು. ಒಂದು ಪ್ರಸವ ಇಕ್ಕುಳದಲ್ಲಿ ಎರಡು ಭಾಗಗಳು (ಬ್ಲೇಡ್) ಇರುತ್ತವೆ. ಪ್ರತಿಯೊಂದು ಬ್ಲೇಡಿನ ಹಿಡಿದುಕೊಳ್ಳಲಿಕ್ಕೆ ಕೈಪಿಡಿಗಳು (ಹ್ಯಾಂಡಲ್), ಕೈಪಿಡಿಯಲ್ಲಿ ಬೆರಳುಗಳ ಬಿಗಿಹಿಡಿತಕ್ಕೆ ಕೊರಕಲುಗಳು, ಎರಡು ಬ್ಲೇಡುಗಳನ್ನು ಒಂದರಲ್ಲಿ ಒಂದನ್ನು ಸೇರಿಸಿ, ಅಲುಗದಂತೆ ಸ್ಥಿರವಾಗಿಸುವ ಬೀಗಗಳು ಹಾಗೂ ಶ್ರೋಣಿ ತಿರುವು (ಪೆಲ್ವಿಕ್ ಕರ್ವ್) ಇರುತ್ತಿದ್ದವು.

ಎರಡೂ ಬ್ಲೇಡುಗಳನ್ನು ಒಟ್ಟಿಗೆ ಜೋಡಿಸಿದಾಗ, ಶ್ರೋಣಿ ತಿರುವುಗಳೆರಡೂ ಸೇರಿಕೊಂಡು ಶಿರೋ ತಿರುವುಗಳು (ಸೆಫಾಲಿಕ್ ಕರ್ವ್) ಆಗುತ್ತಿದ್ದವು. ಶಿರೋತಿರುವಿನ ಸಹಾಯದಿಂದ ಶಿಶುವಿನ ತಲೆಯನ್ನು ಹಿಡಿದುಕೊಂಡು ಮೃದುವಾಗಿ ಜಗ್ಗಿದಾಗ, ಮಗುವು ತಾಯಿಯ ಜನನ ಮಾರ್ಗದಿಂದ ಸುರಕ್ಷಿತವಾಗಿ ಹೊರಗೆ ಬರುತ್ತದೆ.

ಅಂತಿಮವಾಗಿ ಸಿದ್ಧವಾಯಿತು: ಒಂದು ದಿನ ಕೇದಾರನಾಥ್ ಅವರಿಗೆ ತೃಪ್ತಿಯನ್ನು ಕೊಟ್ಟಂತಹ ಇಕ್ಕುಳವು ಸಿದ್ಧವಾಯಿತು. ಅದು ಬ್ರಿಟಿಷರ ಇಕ್ಕುಳಕ್ಕಿಂತ(38-40 ಸೆಂ.ಮೀ) ಅತ್ಯಂತ ಚಿಕ್ಕದಾಗಿತ್ತು (32-33 ಸೆಂ.ಮೀ) ಹಾಗೂ ಹಗುರವಾಗಿತ್ತು. ಭಾರತೀಯ ತಾಯಂದಿರ ಸಣ್ಣ, ಸೂಕ್ಷ್ಮ ಶರೀರಕ್ಕೆ ಕರಾರುವಾಕ್ಕಾಗಿ ಹೊಂದಿಕೊಳ್ಳುವಂತಹ ಪ್ರೆಸಿಷನ್-ಎಂಜಿನಿಯರಡ್ ಇಕ್ಕುಳವಾಗಿತ್ತು. ಶ್ರೋಣೀ ತಿರುವು, ಶಿರೋ ತಿರುವು, ಶ್ಯಾಂಕ್ ಮತ್ತು ಇಂಗ್ಲಿಷ್ ಲಾಕ್ ಚಿಕ್ಕದಾಗಿದ್ದವು. ಮಗುವಿನ ತಲೆಗೆ ಅತಿಯಾದ ಒತ್ತಡ ಬೀಳದಂತೆ ತಡೆಯುವ ಸ್ವಯಂಚಾಲಿತ ಸುರಕ್ಷತೆಯನ್ನು ಹೊಂದಿತ್ತು. ಸಮ್ಮಿತೀಯ, ಸೊಗಸಾದ ಮತ್ತು ಕನಿಷ್ಠ ವಿನ್ಯಾಸದ ಆ ಉಪಕರಣವನ್ನು ಜಗತ್ತಿನ ದಿಗ್ಗಜ ತಜ್ಞರು ಬೆಂಗಾಲ್ ಫೋರ್ಸೆಪ್ಸ್ ಅಥವಾ ದ ದಾಸ್ ಫೋರ್ಸೆಪ್ಸ್ ಎಂದು ಕರೆದರು. ಆರಂಭದಲ್ಲಿ ಬ್ರಿಟಿಷ್ ವೈದ್ಯರು ಪ್ರತಿಭಟಿಸಿದರೂ, ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಬೆಂಗಾಲ್ ಫೋರ್ಸೆಪ್ಸ್‌ನ ಪರಿಚಯವು ಏಷ್ಯಾದಾದ್ಯಂತ ತಾಯಂದಿರ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿತು. ದೇಶವಿದೇಶಗಳಿಂದ ಪ್ರಶಸ್ತಿಗಳು ದೊರೆಯಲಾ ರಂಭಿಸಿದವು. 1933ರಲ್ಲಿ ನಟ್ ಹುಡು ದೊರೆತು ಸರ್ ಡಾ. ಕೇದಾರನಾಥ್ ದಾಸ್ ಆದರು.

ಸಾಹಿತ್ಯಿಕ ಕೃತಿ: ಸರ್ ಕೇದಾರನಾಥ್ ದಾಸ್ ಅವರು ದಣಿವರಿಯದ ಸಂಶೋಧಕ ರಾಗಿದ್ದರು. ಅವರ ಸಂಶೋಧನಾ ಪ್ರಕಟಣೆಗಳು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದವು. ಅವರ ಅತ್ಯುತ್ತಮ ಕೃತಿಯೆಂದರೆ ಕೋಲ್ಕತಾದ ದಿ ಆರ್ಟ್ ಪ್ರೆಸ್ ಪ್ರಕಟಿಸಿದ ಅವರ ‘ಆಬ್ಸ್ಟೆಸ್ಟ್ರಿಕ್ಸ್ ಫೋರ್ಸೆಪ್ಸ್: ಇಟ್ಸ್ ಹಿಸ್ಟರಿ ಅಂಡ್ ಎವಲ್ಯೂಶನ್’ ಎಂಬ 900ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಮತ್ತು 620 ಚಾರಿತ್ರಿಕ ಉಲ್ಲೇಖಗಳನ್ನು ವಿಶ್ಲೇಷಿಸುವ ಅದ್ಭುತ ಕೃತಿ. ಇದು ಸಾರ್ವತ್ರಿಕ ಪ್ರಶಂಸೆಯನ್ನು ಪಡೆಯಿತು, ಬ್ರಿಟಿಷ್ ಮೆಡಿಕಲ್ ಜರ್ನಲ್ ಇದನ್ನು ಸಾಟಿಯಿಲ್ಲದ ಚಾರಿತ್ರಿಕ ಮೊನೊಗ್ರಾಫ್ ಎಂದು ಶ್ಲಾಘಿಸಿತು.

ಡಾ.ನಾ. ಸೋಮೇಶ್ವರ

View all posts by this author