ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಯುರ್ವೇದ ರೋಗಿಯನ್ನು ಹಲವು ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತದೆ. ರೋಗದ ಮೂಲವನ್ನು ವಿಭಿನ್ನವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತದೆ.
ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಮ್ಮೆಲ್ಲರ ಕಣ್ಣೆದುರು ಒಂದು ವಿಚಿತ್ರ ದೃಶ್ಯ ನಡೆಯಿತು. ಒಂದೇ ಮನೆಯ ಐವರು ಒಂದೇ ವೈರಸ್‌ಗೆ ಒಡ್ಡಿಕೊಂಡರು. ಒಬ್ಬರು ತೀವ್ರ ಅನಾ ರೋಗ್ಯಕ್ಕೆ ತುತ್ತಾದರು. ಇನ್ನೊಬ್ಬರಿಗೆ ಸಣ್ಣ ಜ್ವರ ಮಾತ್ರ. ಉಳಿದವರಿಗೆ ಸೋಂಕು ತಗುಲಿದ ಗುರುತೂ ಇರಲಿಲ್ಲ. ವೈರಸ್ ಒಂದೇ ಆಗಿದ್ದರೆ ಫಲಿತಾಂಶಗಳು ಇಷ್ಟು ವಿಭಿನ್ನವಾಗಿದ್ದು ಏಕೆ?
ಈ ಪ್ರಶ್ನೆ ನನ್ನ ಮನಸ್ಸನ್ನು ವೈದ್ಯಳಾಗಿ ಮಾತ್ರವಲ್ಲ, ಆಯುರ್ವೇದದ ವಿದ್ಯಾರ್ಥಿನಿಯಾಗಿ ಅನೇಕ ಬಾರಿ ಕಾಡಿದೆ. ಒಮ್ಮೆ ವರ್ಷಗಳಿಂದ ಚರ್ಮರೋಗದಿಂದ ಬಳಲುತ್ತಿದ್ದ ಒಬ್ಬ ರೋಗಿ ನನ್ನನ್ನು ಕೇಳಿದರು. ‘ಡಾಕ್ಟರ್, ಎಷ್ಟೋ ಚಿಕಿತ್ಸೆ ಮಾಡಿಸಿದ್ದೇನೆ. ಎಷ್ಟೋ ಔಷಧಿಗಳನ್ನು ತೆಗೆದುಕೊಂಡಿ ದ್ದೇನೆ. ಸ್ವಲ್ಪ ಕಡಿಮೆ ಯಾಗುತ್ತದೆ. ಮತ್ತೆ ಬರುತ್ತದೆ. ನನ್ನ ದೇಹದಲ್ಲಿ ಇನ್ನೂ ಯಾವ ಕ್ರಿಮಿ ಉಳಿದಿದೆ?’
ಕೆಲ ದಿನಗಳ ನಂತರ ಮತ್ತೊಬ್ಬ ರೋಗಿ ಬಂದರು. ಅವರಿಗೆ ಎರಡು- ಮೂರು ತಿಂಗಳಿಗೊಮ್ಮೆ ಜ್ವರ ಬರುತ್ತಿತ್ತು. ಪ್ರತಿಯೊಂದು ಬಾರಿ ಪರೀಕ್ಷೆ, ಪ್ರತಿಯೊಂದು ಬಾರಿ ಔಷಧಿ. ಜ್ವರ ಕಡಿಮೆಯಾಗುತ್ತಿತ್ತು. ಆದರೆ ಮತ್ತೆ ಮರುಕಳಿಸುತ್ತಿತ್ತು. ಇನ್ನೊಬ್ಬ ಮಹಿಳೆಯ ನೋವು ಇನ್ನೂ ವಿಭಿನ್ನವಾಗಿತ್ತು. ‘ಎ ವರದಿಗಳೂ ನಾರ್ಮಲ್ ಅಂತೆ ಡಾಕ್ಟರ್. ಆದರೆ ನನಗೆ ಆರೋಗ್ಯವಾಗಿರುವ ಅನುಭವವೇ ಇಲ್ಲ.’
ಈ ಮೂರು ರೋಗಿಗಳ ಸಮಸ್ಯೆಗಳು ಬೇರೆಬೇರೆ. ಆದರೆ ಅವರ ಪ್ರಶ್ನೆಗಳು ನನ್ನನ್ನು ಒಂದೇ ಉತ್ತರದ ಕಡೆಗೆ ಕರೆದೊಯ್ದವು. ನಿಜಕ್ಕೂ ರೋಗ ಎಂದರೇನು?
ಇದನ್ನೂ ಓದಿ: Dr Sadhanashree Column: ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ
ನಾವು ಸಾಮಾನ್ಯವಾಗಿ ರೋಗವನ್ನು ಒಂದು ವೈರಸ್, ಒಂದು ಬ್ಯಾಕ್ಟೀರಿಯಾ ಅಥವಾ ಒಂದು ರಕ್ತಪರೀಕ್ಷೆ ಯ ವರದಿಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ತಪ್ಪಲ್ಲ. ಇಂದಿನ ವೈದ್ಯಕೀಯ ವಿಜ್ಞಾನವು ಸೋಂಕುಗಳ ಬಗ್ಗೆ, ರೋಗಾಣುಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ ಮಾನವಕುಲಕ್ಕೆ ಅಪಾರ ಸೇವೆ ಸಲ್ಲಿಸಿದೆ. ಪ್ರತಿಜೀವಕಗಳು, ತುರ್ತು ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು- ಇವೆಲ್ಲವೂ ಅನೇಕ ಜೀವಗಳನ್ನು ಉಳಿಸಿವೆ.
ಬರಲು ಕಾರಣವೇನು?
ಆದರೆ ಆಯುರ್ವೇದ ಒಂದು ವಿಭಿನ್ನ ಪ್ರಶ್ನೆಯನ್ನು ಕೇಳುತ್ತದೆ. ರೋಗಕ್ಕೆ ಕಾರಣವೇನು? ಎನ್ನುವು ದಕ್ಕಿಂತ ಮೊದಲು, ಈ ವ್ಯಕ್ತಿಗೆ ರೋಗ ಬರಲು ಕಾರಣವೇನು? ಎಂದು ಕೇಳುತ್ತದೆ. ಈ ಎರಡೂ ಪ್ರಶ್ನೆಗಳ ನಡುವಿನ ವ್ಯತ್ಯಾಸವೇ ಆಯುರ್ವೇದದ ಹೃದಯ.
ಒಂದು ಕಾರ್ಯಕ್ಕೆ ಒಂದೇ ಕಾರಣ ಇರುವುದಿಲ್ಲ. ಒಂದು ಬೀಜವನ್ನು ನೆಟ್ಟರೆ ಸಾಕು, ಅದು ಮರವಾಗುವು ದಿಲ್ಲ. ಫಲವತ್ತಾದ ಮಣ್ಣು ಬೇಕು. ನೀರು ಬೇಕು. ಸೂರ್ಯನ ಬೆಳಕು ಬೇಕು. ಗಾಳಿ ಬೇಕು. ಸೂಕ್ತ ಋತು ಬೇಕು. ಇವೆಲ್ಲವೂ ಒಂದೇ ದಿಕ್ಕಿನಲ್ಲಿ ಕೆಲಸ ಮಾಡಿದಾಗ ಮಾತ್ರ ಒಂದು ಚಿಕ್ಕ ಬೀಜವು ಬೃಹತ್ ವೃಕ್ಷವಾಗುತ್ತದೆ. ರೋಗವೂ ಹಾಗೆಯೇ.
ವೈರಸ್ ದೇಹವನ್ನು ಪ್ರವೇಶಿಸುವುದು ಒಂದು ಘಟನೆ. ಆದರೆ ಅದು ರೋಗವಾಗಿ ಬೆಳೆಯುವುದು ಮತ್ತೊಂದು ಘಟನೆ. ಆಯುರ್ವೇದ ಇದನ್ನೇ ಕಾರ್ಯ-ಕಾರಣ ಸಿದ್ಧಾಂತ ಎಂದು ಹೇಳುತ್ತದೆ. ಪ್ರತಿಯೊಂದು ಕಾರ್ಯಕ್ಕೂ ಅನೇಕ ಕಾರಣಗಳು ಸೇರಿಕೊಂಡಿರುತ್ತವೆ. ಕಣ್ಣಿಗೆ ಕಾಣುವ ಕಾರಣ ಒಂದಿರಬಹುದು. ಆದರೆ ಅದರ ಹಿಂದೆ ಕಾಣದ ಅನೇಕ ಕಾರಣಗಳು ಮೌನವಾಗಿ ಕೆಲಸ ಮಾಡುತ್ತಿರುತ್ತವೆ.
ಹಾಗಾದರೆ ಒಂದೇ ವೈರಸ್‌ಗೆ ಒಡ್ಡಿಕೊಂಡ ಎಲ್ಲರೂ ಒಂದೇ ರೀತಿಯಾಗಿ ಏಕೆ ಅಸ್ವಸ್ಥರಾಗುವು ದಿಲ್ಲ? ಆಯುರ್ವೇದದ ಉತ್ತರ ಬಹಳ ಸುಂದರವಾಗಿದೆ. ಪ್ರತಿಯೊಬ್ಬರ ಅಗ್ನಿ ಒಂದೇ ಆಗಿರುವು ದಿಲ್ಲ. ಪ್ರತಿಯೊಬ್ಬರ ಓಜಸ್ಸು ಒಂದೇ ಆಗಿರುವುದಿಲ್ಲ. ಪ್ರತಿಯೊಬ್ಬರ ಬಲ, ಪ್ರತಿಯೊಬ್ಬರ ಪ್ರಕೃತಿ ಒಂದೇ ಆಗಿರುವುದಿಲ್ಲ. ಆದ್ದರಿಂದ ಹೊರಗಿನಿಂದ ಬರುವ ಕಾರಣ ಒಂದೇ ಆಗಿದ್ದರೂ, ಅದಕ್ಕೆ ದೇಹ ಪ್ರತಿಕ್ರಿಯಿಸುವ ರೀತಿ ವಿಭಿನ್ನವಾಗುತ್ತದೆ.
ಒಂದು ಸುಂದರ ಉಪಮೆ ನೆನಪಾಗುತ್ತದೆ. ವೈರಸ್ ಎಲ್ಲರ ಮನೆಯ ಬಾಗಿಲನ್ನೂ ತಟ್ಟಬಹುದು. ಆದರೆ ಎಲ್ಲ ಮನೆಗಳ ಬಾಗಿಲೂ ಒಂದೇ ರೀತಿಯಲ್ಲಿ ತೆರೆದುಕೊಳ್ಳುವುದಿಲ್ಲ. ರೋಗದ ಕಾರಣಗಳು ಕೇವಲ ಹೊರಗಿಲ್ಲ. ಇಲ್ಲಿಯವರೆಗೆ ನಾವು ರೋಗವನ್ನು ಮುಖ್ಯವಾಗಿ ಹೊರಗಿನಿಂದ ಬರುವ ಕಾರಣಗಳ ಮೂಲಕವೇ ನೋಡಿದ್ದೇವೆ. ಆದರೆ ಆಯುರ್ವೇದದ ದೃಷ್ಟಿಯಲ್ಲಿ ಅದು ರೋಗದ ಒಂದು ಆಯಾಮ ಮಾತ್ರ.
ಮೂರು ಕಾರಣಗಳು
ಆಚಾರ್ಯರು ರೋಗದ ಕಾರಣಗಳನ್ನು ಮೂರು ವಿಭಾಗಗಳಾಗಿ ವಿವರಿಸಿದ್ದಾರೆ- ಆಧಿಭೌತಿಕ, ಆಧ್ಯಾತ್ಮಿಕ, ಆಧಿದೈವಿಕ.
ಮೊದಲನೆಯದು ಆಧಿಭೌತಿಕ ಕಾರಣಗಳು. ವೈರಸ್, ಬ್ಯಾಕ್ಟೀರಿಯಾ, ವಿಷಪದಾರ್ಥಗಳು, ಗಾಯ ಗಳು, ಅಪಘಾತಗಳು, ಮಾಲಿನ್ಯ, ಅಶುದ್ಧ ಆಹಾರ, ಪರಿಸರದ ಪರಿಣಾಮ- ಇವೆಲ್ಲವೂ ಇದರೊಳಗೆ ಬರುತ್ತವೆ. ಇವು ಕಣ್ಣಿಗೆ ಕಾಣುತ್ತವೆ. ಪರೀಕ್ಷಿಸಬಹುದು. ಅಳೆಯಬಹುದು. ಇಂದಿನ ವೈದ್ಯಕೀಯ ವಿಜ್ಞಾನವು ಈ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಆದರೆ ಅದು ಇಲ್ಲಿಯೇ ನಿಲ್ಲುವುದಿಲ್ಲ.
ಎರಡನೆಯದು ಆಧ್ಯಾತ್ಮಿಕ ಕಾರಣಗಳು. ಇಲ್ಲಿ ‘ಆಧ್ಯಾತ್ಮಿಕ’ ಎಂದರೆ ಧರ್ಮ ಅಥವಾ ಮತವಲ್ಲ. ಅದು ಮನುಷ್ಯನ ಅಂತರಂಗಕ್ಕೆ ಸಂಬಂಧಿಸಿದ ಆಯಾಮ. ಆಚಾರ್ಯ ಚರಕರು ರೋಗದ ಪ್ರಮುಖ ಕಾರಣ ಗಳಲ್ಲಿ ಪ್ರಜ್ಞಾಪರಾಧವನ್ನು ಉಲ್ಲೇಖಿಸುತ್ತಾರೆ. ಅಂದರೆ, ಯಾವುದು ಹಿತ, ಯಾವುದು ಅಹಿತ ಎಂಬುದು ತಿಳಿದಿದ್ದರೂ ಅದಕ್ಕೆ ವಿರುದ್ಧವಾಗಿ ಬದುಕುವುದು.
ಹಸಿವು ಇಲ್ಲದಿದ್ದರೂ ತಿನ್ನುವುದು. ನಿದ್ರೆ ಬೇಕಾದಾಗ ಜಾಗರಣೆ ಮಾಡುವುದು. ಕೋಪವನ್ನು ವರ್ಷಗಳ ಕಾಲ ಹಿಡಿದುಕೊಳ್ಳುವುದು. ಶೋಕವನ್ನು ಒಳಗೊಳಗೇ ಹೊತ್ತುಕೊಂಡು ನಡೆಯು ವುದು.ಪ್ರಕೃತಿಯ ನಿಯಮಗಳನ್ನು ತಿಳಿದೂ ನಿರಂತರವಾಗಿ ಉಲ್ಲಂಘಿಸುವುದು.
ಇವು ಒಂದೇ ದಿನದಲ್ಲಿ ರೋಗವನ್ನು ಉಂಟುಮಾಡುವುದಿಲ್ಲ. ಆದರೆ ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಆರೋಗ್ಯದ ಅಡಿಪಾಯವನ್ನು ದುರ್ಬಲಗೊಳಿಸುತ್ತವೆ. ಕೆಲವು ರೋಗಗಳು ಹೊರಗಿನಿಂದ ಬರುತ್ತವೆ. ಕೆಲವು ರೋಗಗಳನ್ನು ನಾವು ನಮ್ಮ ಜೀವನಶೈಲಿಯಿಂದಲೇ ಆಹ್ವಾನಿಸುತ್ತೇವೆ.
ಆದರೆ ಆಯುರ್ವೇದ ಇನ್ನೊಂದು ಆಯಾಮವನ್ನೂ ಪರಿಚಯಿಸುತ್ತದೆ- ಆಧಿದೈವಿಕ ಕಾರಣಗಳು. ಇಲ್ಲಿ ದೈವ ಎಂಬ ಪದವನ್ನು ಮೂಢನಂಬಿಕೆಯ ಅರ್ಥದಲ್ಲಿ ಅರ್ಥೈಸಬಾರದು. ಮನುಷ್ಯನ ಬುದ್ಧಿ, ವಿಜ್ಞಾನ ಮತ್ತು ತರ್ಕದಿಂದ ಸಂಪೂರ್ಣವಾಗಿ ವಿವರಿಸಲಾಗದ ಸೂಕ್ಷ್ಮ ಕಾರಣಗಳನ್ನು ಸೂಚಿಸುವ ಪದ ಅದು. ಪ್ರಕೃತಿಯ ವೈಪರೀತ್ಯಗಳು, ಕಾಲದ ಪ್ರಭಾವ, ಜನ್ಮಸಿದ್ಧ ಅಂಶಗಳು, ಮತ್ತು ಶಾಸ್ತ್ರಗಳಲ್ಲಿ ಉಖವಾಗುವ ಕರ್ಮಫಲದಂತಹ ವಿಷಯಗಳಿಗೂ ಆಯುರ್ವೇದ ಸ್ಥಾನ ನೀಡುತ್ತದೆ. ಇದು ವಿಜ್ಞಾನವನ್ನು ನಿರಾಕರಿಸುವ ದೃಷ್ಟಿಕೋನವಲ್ಲ; ವಿಜ್ಞಾನದ ಮಿತಿಯನ್ನು ವಿನಮ್ರವಾಗಿ ಒಪ್ಪಿಕೊಳ್ಳುವ ದೃಷ್ಟಿಕೋನ.
ಬಹುಶಃ ಅದಕ್ಕಾಗಿಯೇ ಆಚಾರ್ಯರು ರೋಗವನ್ನು ಕೆಲವು ಸಂದರ್ಭಗಳಲ್ಲಿ ಪಾಪ್ಮಾ ಎಂದು ಕರೆದಿದ್ದಾರೆ.
ಇಲ್ಲಿ ಪಾಪ ಎಂದರೆ ದೇವರು ಕೊಟ್ಟ ಶಿಕ್ಷೆ ಎಂಬ ಅರ್ಥವಲ್ಲ. ಧರ್ಮದಿಂದ, ಪ್ರಕೃತಿಯ ನಿಯಮ ಗಳಿಂದ ಮತ್ತು ಸ್ವಹಿತದಿಂದ ದೂರವಾದಾಗ ಉಂಟಾಗುವ ದುಃಖ ಎಂಬ ಅರ್ಥದಲ್ಲಿ ಅದನ್ನು ಅರ್ಥೈಸಬೇಕು. ನಾವು ನಮ್ಮ ದೇಹದ ಧ್ವನಿಯನ್ನು ನಿರ್ಲಕ್ಷಿಸಿದಾಗ, ಮನಸ್ಸಿನ ಗಾಯಗಳನ್ನು ಮರೆಮಾಚಿದಾಗ, ತಿಳಿದೂ ಅಹಿತಕರ ಬದುಕನ್ನು ಆಯ್ಕೆ ಮಾಡಿಕೊಂಡಾಗ, ಅದರ ಪರಿಣಾಮ ವಾಗಿ ದೇಹವು ಯಾವುದೋ ಒಂದು ದಿನ ರೋಗದ ರೂಪದಲ್ಲಿ ನಮ್ಮೊಂದಿಗೆ ಮಾತನಾಡಲು ಆರಂಭಿಸುತ್ತದೆ. ದೇಹ ಎಂದಿಗೂ ಸುಳ್ಳು ಹೇಳುವುದಿಲ್ಲ. ಅದು ಕೇವಲ ತನ್ನ ಭಾಷೆಯಲ್ಲಿ ಮಾತನಾಡುತ್ತದೆ. ರೋಗವು ಆ ಭಾಷೆಯ ಒಂದು ರೂಪ.
ಇಲ್ಲಿ ಮತ್ತೊಂದು ವಿಷಯವನ್ನು ನಾವು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಆಯುರ್ವೇದ ದಲ್ಲಿ ರೋಗವನ್ನು ಪಾಪ್ಮಾ ಎಂದು ಕರೆದಾಗ, ಅದರ ಉದ್ದೇಶ ರೋಗಿಯನ್ನು ಅಪರಾಧಿಯನ್ನಾಗಿ ಮಾಡುವುದು ಅಲ್ಲ. ನೀನು ಪಾಪ ಮಾಡಿದ್ದೀಯ, ಅದಕ್ಕೇ ರೋಗ ಬಂದಿದೆ ಎಂಬ ಅರ್ಥವನ್ನು ಆಯುರ್ವೇದ ಎಲ್ಲಿಯೂ ಹೇಳುವುದಿಲ್ಲ. ಅಂತಹ ಅರ್ಥೈಸುವಿಕೆ ಶಾಸ್ತ್ರಕ್ಕೂ ಅನ್ಯಾಯ, ರೋಗಿಗೂ ಅನ್ಯಾಯ.
ಇಲ್ಲಿ ಪಾಪ ಎಂದರೆ ಧರ್ಮದಿಂದ ವಿಚಲಿತವಾಗುವುದು, ಸ್ವಹಿತವನ್ನು ಮರೆತಿರುವುದು, ದೇಹ- ಮನಸ್ಸಿನ ಸಹಜ ನಿಯಮಗಳಿಗೆ ವಿರುದ್ಧವಾಗಿ ಬದುಕುವುದು. ಅದು ನಮ್ಮ ಆಲೋಚನೆಗಳಲ್ಲಿ ಇರಬಹುದು, ನಮ್ಮ ಆಹಾರ- ವಿಹಾರದಲ್ಲಿ ಇರಬಹುದು, ನಮ್ಮ ಸಂಬಂಧಗಳಲ್ಲಿ ಇರಬಹುದು, ಅಥವಾ ನಮ್ಮ ಜೀವನದ ದೃಷ್ಟಿಕೋನದಲ್ಲಿಯೂ ಇರಬಹುದು.
ಒಂದು ನದಿಯು ತನ್ನ ದಾರಿಯನ್ನು ಬಿಟ್ಟರೆ ಹೇಗೆ ಪ್ರವಾಹ, ಬರ ಅಥವಾ ವಿನಾಶ ಉಂಟಾಗುತ್ತದೆ ಯೋ, ಹಾಗೆಯೇ ಮನುಷ್ಯನ ಜೀವನವೂ ತನ್ನ ಸಹಜ ಧರ್ಮದಿಂದ ದೂರವಾದಾಗ ಅದರ ಪರಿಣಾಮ ಕೆಲವೊಮ್ಮೆ ಮಾನಸಿಕ ಅಶಾಂತಿಯಾಗಿ, ಕೆಲವೊಮ್ಮೆ ದೈಹಿಕ ರೋಗವಾಗಿ, ಮತ್ತೆ ಕೆಲವೊಮ್ಮೆ ಜೀವನದ ವಿವಿಧ ರೀತಿಯ ದುಃಖಗಳಾಗಿ ವ್ಯಕ್ತವಾಗಬಹುದು.
ಹೀಗಾಗಿ ಆಯುರ್ವೇದದ ದೃಷ್ಟಿಯಲ್ಲಿ ರೋಗವು ದಂಡನೆ ಅಲ್ಲ; ದಿಕ್ಕು ತೋರಿಸುವ ಸಂದೇಶ. ದೇಹ ನಮ್ಮ ವಿರುದ್ಧ ಹೋರಾಡುವುದಿಲ್ಲ; ನಮ್ಮೊಂದಿಗೆ ಮಾತನಾಡುತ್ತದೆ. ಪ್ರತಿಯೊಂದು ನೋವು, ಪ್ರತಿಯೊಂದು ಜ್ವರ, ಪ್ರತಿಯೊಂದು ಅಸ್ವಸ್ಥತೆಯೂ - ನಿನ್ನೊಳಗೆ ಯಾವುದೋ ಸಮತೋಲನ ಕದಡಿದೆ, ಅದನ್ನು ಮತ್ತೆ ಸ್ಥಾಪಿಸು ಎಂದು ಹೇಳುವ ದೇಹದ ಭಾಷೆಯಾಗಿರ ಬಹುದು.
ಆದ್ದರಿಂದ ಆಯುರ್ವೇದದಲ್ಲಿ ರೋಗವನ್ನು ಕೇವಲ ಶತ್ರುವಾಗಿ ನೋಡುವುದಿಲ್ಲ; ಅದು ದೇಹದೊಳಗಿನ ಅಸಮತೋಲನದ ಸಂದೇಶವಾಹಕ. ಜ್ವರವು ತಾಪಮಾನ ಮಾತ್ರವಲ್ಲ; ದೇಹದ ಪ್ರತಿಕ್ರಿಯೆ. ನೋವು ಕೇವಲ ಕಿರಿಕಿರಿಯಲ್ಲ; ಯಾವುದೋ ಅಸಮತೋಲನದ ಎಚ್ಚರಿಕೆ. ಆಯುರ್ವೇದದ ವೈದ್ಯನು ಲಕ್ಷಣ ಗಳನ್ನು ಮಾತ್ರ ನೋಡುವುದಿಲ್ಲ; ಅವುಗಳ ಹಿಂದೆ ಅಡಗಿರುವ ಕಾರಣಗಳ ಪದರಗಳನ್ನು ಅರಿಯಲು ಪ್ರಯತ್ನಿಸುತ್ತಾನೆ.
ಅಸಮತೋಲನ
ಇದೇ ಕಾರಣಕ್ಕೆ ಆಯುರ್ವೇದದ ಪ್ರಶ್ನೆಯೂ ವಿಭಿನ್ನ. ವೈದ್ಯಶಾಸ್ತ್ರ ಕೇಳುವ ಮೊದಲ ಪ್ರಶ್ನೆ- ರೋಗಕ್ಕೆ ಕಾರಣವಾದ ಜೀವಾಣು ಯಾವುದು? ಆಯುರ್ವೇದ ಕೇಳುವ ಮೊದಲ ಪ್ರಶ್ನೆ- ಈ ವ್ಯಕ್ತಿಗೆ ರೋಗ ವ್ಯಕ್ತವಾಗಲು ಕಾರಣವಾದ ಅಸಮತೋಲನ ಯಾವುದು?
ಈ ಎರಡೂ ಪ್ರಶ್ನೆಗಳು ಪರಸ್ಪರ ವಿರೋಧಿಗಳಲ್ಲ; ಪರಸ್ಪರ ಪೂರಕಗಳು. ಒಂದು ರೋಗವನ್ನು ಗುರುತಿಸುತ್ತದೆ. ಇನ್ನೊಂದು ರೋಗಿಯನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ಜೀವಾಣುವಿನ ಮೇಲೆ ಗಮನಹರಿಸುತ್ತದೆ. ಇನ್ನೊಂದು ಜೀವಶಕ್ತಿಯ ಮೇಲೂ ಗಮನ ಹರಿಸುತ್ತದೆ.
ಆದ್ದರಿಂದಲೇ ಆಯುರ್ವೇದ ನಮಗೆ ಒಂದು ವಿಶಾಲವಾದ ದೃಷ್ಟಿಕೋನವನ್ನು ನೀಡುತ್ತದೆ. ವೈರಸ್‌ಗಳು ಮುಖ್ಯ, ಬ್ಯಾಕ್ಟೀರಿಯಾಗಳು ಮುಖ್ಯ, ಔಷಧಿಗಳೂ ಅನಿವಾರ್ಯ. ಆದರೆ ಆರೋಗ್ಯ ವನ್ನು ಕೇವಲ ರೋಗಾಣುಗಳ ಅನುಪಸ್ಥಿತಿಯೆಂದು ಪರಿಗಣಿಸುವುದಿಲ್ಲ. ದೇಹ, ಮನಸ್ಸು, ಆಚರಣೆ, ಪ್ರಕೃತಿ ಮತ್ತು ಜೀವನದ ನಡುವಿನ ಸಮತೋಲನವೇ ನಿಜವಾದ ಆರೋಗ್ಯ ಎಂದು ಹೇಳುತ್ತದೆ.
ಹೀಗಾಗಿ ಮುಂದಿನ ಬಾರಿ ನಾವು ಅಥವಾ ನಮ್ಮ ಆತ್ಮೀಯರು ಅಸ್ವಸ್ಥರಾದಾಗ, ಯಾವ ವೈರಸ್, ಯಾವ ಬ್ಯಾಕ್ಟೀರಿಯಾ, ಯಾವ ಔಷಧಿ ಎಂಬ ಪ್ರಶ್ನೆಗಳ ಜೊತೆಗೆ ಇನ್ನೂ ಕೆಲವು ಪ್ರಶ್ನೆಗಳನ್ನೂ ಕೇಳೋಣ.
ನನ್ನ ಜೀವನದಲ್ಲಿ ಯಾವ ಅಸಮತೋಲನ ಉಂಟಾಗಿದೆ? ನನ್ನ ದೇಹ ನನಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದೆ? ನನ್ನ ಮನಸ್ಸು ಎಷ್ಟು ದಿನಗಳಿಂದ ಕೇಳಿಸದ ನೋವನ್ನು ಹೊತ್ತುಕೊಂಡಿದೆ? ನಾನು ಪ್ರಕೃತಿಯ ನಿಯಮಗಳೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆಯೇ? ನಾನು ನನ್ನೊಂದಿಗೆ ಹೇಗೆ ವರ್ತಿಸುತ್ತಿದ್ದೇನೆ? ಇತರರೊಂದಿಗೆ ಹೇಗೆ ವರ್ತಿಸುತ್ತಿದ್ದೇನೆ? ಈ ರೋಗದ ಬೇರುಗಳು ನಿನ್ನೆಯ ಆಹಾರ ದಲ್ಲಿವೆಯೇ, ಅಥವಾ ವರ್ಷಗಳ ಹಿಂದಿನ ನನ್ನ ಅಭ್ಯಾಸಗಳಲ್ಲಿ, ಆಲೋಚನೆಗಳಲ್ಲಿ, ಭಾವನೆಗಳಲ್ಲಿ ಅಥವಾ ಕರ್ಮಗಳಲ್ಲಿ ಅಡಗಿವೆಯೇ?
ಬಹುಶಃ ಈ ಪ್ರಶ್ನೆಗಳೇ ನಿಜವಾದ ಅರಿವಿನ ಆರಂಭವಾಗಬಹುದು. ರೋಗಕ್ಕೆ ವೈರಸ್‌ಗಳು, ಬ್ಯಾಕ್ಟೀರಿಯಾ ಗಳು, ಗಾಯಗಳು, ವಿಷಪದಾರ್ಥಗಳು ಅಥವಾ ಆಹಾರದ ದೋಷಗಳು ಕಾರಣ ವಾಗುವುದಿಲ್ಲ ಎಂದೇನೂ ಆಯುರ್ವೇದ ಹೇಳುವುದಿಲ್ಲ. ಅವೆಲ್ಲವೂ ಕಾರಣಗಳಾಗಬಹುದು. ಆದರೆ ಅವುಗಳೇ ಸಂಪೂರ್ಣ ಕಾರಣ ಗಳಲ್ಲ ಎಂಬುದನ್ನು ಅದು ನೆನಪಿಸುತ್ತದೆ.
ರೋಗವೆಂದರೆ ಕೇವಲ ದೇಹದೊಳಗೆ ಪ್ರವೇಶಿಸಿದ ಯಾವುದೋ ಹೊರಗಿನ ಶತ್ರುವಿನ ಕಥೆಯಲ್ಲ. ಅದು ನಮ್ಮ ದೇಹ, ಮನಸ್ಸು, ಜೀವನಶೈಲಿ, ಪ್ರಕೃತಿಯೊಡನೆಯ ಸಂಬಂಧ ಮತ್ತು ಕೆಲವೊಮ್ಮೆ ನಮ್ಮ ಅರಿವಿಗೂ ಮೀರಿದ ಸೂಕ್ಷ್ಮ ಕಾರಣಗಳ ಒಟ್ಟಾರೆ ಪ್ರತಿಫಲನವಾಗಿರಬಹುದು.
ಬಹುಶಃ ಅದಕ್ಕಾಗಿಯೇ ಆಯುರ್ವೇದವು ರೋಗವನ್ನು ಕೇವಲ ಗುಣಪಡಿಸಬೇಕಾದ ಸಮಸ್ಯೆ ಯಾಗಿ ನೋಡುವುದಿಲ್ಲ; ಅರ್ಥ ಮಾಡಿಕೊಳ್ಳಬೇಕಾದ ಸಂದೇಶವಾಗಿ ನೋಡುತ್ತದೆ. ರೋಗದ ಕಾರಣಗಳು ಇಷ್ಟು ವಿಶಾಲವಾಗಿದ್ದರೆ, ಚಿಕಿತ್ಸೆಯೂ ಕೇವಲ ಮಾತ್ರೆಯಾಗಿರಲು ಸಾಧ್ಯವೇ? ಆ ಪ್ರಶ್ನೆಯ ಉತ್ತರವನ್ನು ಮುಂದಿನ ವಾರ ನೋಡೋಣ.