ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Maithri Bhat Column: ಭಾವಗಳ ದೀಪ, ಮೌನದ ಹಾದಿ

ಸಂಬಂಧವು ಬಾಂಧವ್ಯ ಆಗಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಅರಿತಂದು ಬಾಳು ಸಾರ್ಥಕ. ಆದರೆ ಯಾವ ಓದು ಕೂಡಾ ಅತ್ತ ಪ್ರೇರೇಪಿಸದೇ ಹೋದಲ್ಲಿ... ಹೇಳಿಯೂ ಅರಿತು ಕೊಳ್ಳದೇ ಹೋದಲ್ಲಿ ಹೇಗೆ? ಎನ್ನುವುದು ಕಾಡುವ ಪ್ರಶ್ನೆ. ಬಾಂಧವ್ಯ ಎಂದಾಗ ‘ನಾನು’ ಬದಲಾದರೆ ಸಾಲದು, ‘ನಾವು’ ಬದಲಾಗಬೇಕು.

ಡಾ.ಮೈತ್ರಿ ಭಟ್, ವಿಟ್ಲ

ಅಕ್ಷರದ ಜತೆಗಿನ ಒಡನಾಟ ಎನ್ನುವುದು ಒಂದು ಭಾವನಾತ್ಮಕ ಸಂಬಂಧವಿದ್ದಂತೆ. ಅದರಲ್ಲೂ ಅಕ್ಷರಗಳನ್ನು ಪೋಣಿಸ ಹೊರಟಾಗ ಭಾವಕೋಶವನ್ನೇ ಕೇಂದ್ರವಾಗಿರಿಸಿಕೊಂಡು ಬರೆಯುವು ದಿದೆಯಲ್ಲ ಅದು ಒಂದು ಸವಾಲಿನ ಕೆಲಸವೇ ಸರಿ. ಪ್ರತಿ ಅಕ್ಷರವ ಹೊಸೆಯುವ ಮುನ್ನವೂ ಒಂದಷ್ಟು ಭಾವನಾತ್ಮಕ ಜಾಗರೂಕತೆ ಅವಶ್ಯ.

ಹೇಳಹೊರಟಿರುವ ವಿಚಾರವನ್ನು ಇನ್ನೊಂದು ಮನಸ್ಸಿಗೆ ಆಪ್ತ ಎನಿಸುವಂತೆ, ಕುತೂಹಲ ಹುಟ್ಟಿಸುವಂತೆ ಹೇಳಬೇಕಾದರೆ ಅಷ್ಟೇ ನಯ, ನಾಜೂಕು, ಹಾಗೆಯೇ ಭಾವಸ್ಪಂದನೆ ಬೇಕು. ಬದುಕು ಹೂವಿನ ಹಾಸಿಗೆಯಲ್ಲ. ಹಾಗೆಂದು ಗುಲಾಬಿಯು ಮುಳ್ಳಿನ ನಡುವೆ ನಳನಳಿಸಿದರೂ ಅದನ್ನು ಮುಡಿಗೇರಿಸಿ ಸಂತಸಪಡದಿರಲು ಸಾಧ್ಯವೇ? ಅದರ ಸೆಳೆತವೇ ಅಂಥದ್ದು.

ಅಂತೆಯೇ ಕೆಲವು ಪುಸ್ತಕಗಳು ಕೂಡಾ ಅವುಗಳ ಶೀರ್ಷಿಕೆಯ ಮೂಲಕವೇ ಮನಸೆಳೆದು, ಕೈಗೆತ್ತಿಕೊಂಡಾಗ ಅವುಗಳ ಮುನ್ನುಡಿ, ಬೆನ್ನುಡಿಗಳು ಮತ್ತಷ್ಟು ಆಕರ್ಷಕ ಎನಿಸಿ, ಕುತೂಹಲ ಹುಟ್ಟಿಸಿ, ಓದಿಗೆ ತೊಡಗಿಸುತ್ತವೆ. ಇಂದಿನ ಮೊಬೈಲ್ ಯುಗದಲ್ಲಿ ಮೊಬೈಲುಗಳಷ್ಟೇ ವೇಗವಾಗಿ ಭಾವನೆ, ಮನಸ್ಸು, ಯೋಚನೆಗಳು ಬದಲಾಗುತ್ತಿರುವಾಗ ಯುವ ಮನಸ್ಸುಗಳನ್ನು ಮುಟ್ಟಬೇಕಾದ, ತಟ್ಟಬೇಕಾದ ಅನಿವಾರ್ಯತೆ ಬರಹದ ಸ್ವರೂಪವನ್ನೇ ಬದಲಾಯಿಸಿದೆ.

ಇದನ್ನೂ ಓದಿ: Dr Maithri Bhat Column: ಮಾತನ್ನು ಆಡುವ ಮುನ್ನ ಇರಲಿ ಒಂದಿಷ್ಟು ಎಚ್ಚರ !

ಈ ಬದುಕು ಮಾತಾಗುವ ಮೌನ, ಮಾತಾಗದ ಮೌನ, ಮೌನದ ಮಾತು, ಮಾತಿನ ಮೌನದ ನಡುವಿನ ಓಲಾಟದಂತೆ... ಹೇಳಬೇಕಿನಿಸಿದುದೆಲ್ಲವ ಹೇಳಲಾಗದೆ, ಹೇಳಬೇಕಿರುವುದನ್ನು ಹೇಳಲಾ ಗದೆ ಸಾಗುವುದಲ್ಲವೇ? ಮಾತನ್ನು ನಮ್ಮ ಬದುಕಿನ ಕಕ್ಷೆಯ ಮಿತಿಯೊಳಗೆ ಓದುವ ನಾವು ಮೌನವನ್ನು ಓದಲು ಕಲಿತಿಲ್ಲ.

ಸಂಬಂಧವು ಬಾಂಧವ್ಯ ಆಗಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಅರಿತಂದು ಬಾಳು ಸಾರ್ಥಕ. ಆದರೆ ಯಾವ ಓದು ಕೂಡಾ ಅತ್ತ ಪ್ರೇರೇಪಿಸದೇ ಹೋದಲ್ಲಿ... ಹೇಳಿಯೂ ಅರಿತು ಕೊಳ್ಳದೇ ಹೋದಲ್ಲಿ ಹೇಗೆ? ಎನ್ನುವುದು ಕಾಡುವ ಪ್ರಶ್ನೆ. ಬಾಂಧವ್ಯ ಎಂದಾಗ ‘ನಾನು’ ಬದಲಾದರೆ ಸಾಲದು, ‘ನಾವು’ ಬದಲಾಗಬೇಕು.

ಸಂಬಂಧ ಹಾಗೂ ಬಾಂಧವ್ಯದ ನಡುವಿರುವ ಅಂತರವೇ ಇದು ಒಂದು ಸಂಬಂಧ ಬೆಳೆದು ಗಟ್ಟಿಯಾಗಲು ವರುಷಗಳು ಬೇಕಾದರೂ ಅದನ್ನು ಮುರಿಯಲು ಕೆಲವೊಮ್ಮೆ ಕ್ಷಣ ಸಾಕಾಗುತ್ತದೆ. ಆದರೆ ಸಂಬಂಧವನ್ನು ಜೀವಂತವಾಗಿಡಬಲ್ಲ ಮಾತೇ ಮೌನಕ್ಕೆ ಸರಿಯಲು ಕಾರಣವಾದರೂ ಏನು? ಅದೆಷ್ಟೋ ಹರಟುತಿದ್ದ ಮನಗಳು ಒಮ್ಮೆಗೇ ಮೌನಕ್ಕೆ ಶರಣಾದರೆ ಮಾತುಗಳು ಸಡಿಲಾಗಿ ಸಂಬಂಧಗಳು ಶಿಥಿಲವಾಗಲು ಮುಂದಾದಾಗ ಕೊಂಡಿ ಕಳಚಿಕೊಂಡರೆ ಅಲ್ಲಿಗೇ ಬಾಂಧವ್ಯ ಕೊನೆಯಾಗುವುದೇ? ಸಂಬಂಧವೇ ಬೇರೆ, ಬಾಂಧವ್ಯದ ಬೆಸುಗೆಯೇ ಬೇರೆ.

ಅವೆರಡೂ ಒಂದೇ ಅಲ್ಲ. ಬಾಂಧವ್ಯದ ಬೆಸುಗೆ ಹೊಸೆಯದ ಅದೆಷ್ಟೋ ಸಂಬಂಧಗಳು ನಮ್ಮ ಸುತ್ತಮುತ್ತಲಿವೆ. ಪ್ರತಿಯೊಬ್ಬರ ಆಯ್ಕೆಯೂ ಭಿನ್ನ. ಪ್ರತಿ ಮನಸ್ಸಿನ ಯೋಚನಾ ಲಹರಿಯೂ ಭಿನ್ನ. ಭಾವ ಲಹರಿಯನ್ನಂತೂ ಅರಿಯುವುದು ಕಷ್ಟ. ಮನಸಿನ ಮಾತುಗಳನ್ನು ಹೇಳಿಕೊಳ್ಳದೇ ಇರಲು ಕಾರಣಗಳೇನು? ಅದರಲ್ಲೂ ಅನನ್ಯ ಹಾಗೂ ಅನುಪಮವಾದ ಬಾಂಧವ್ಯದಲ್ಲಿ ಕೂದಲೆಳೆಯ ಅಂತರವೂ ಬೃಹತ್ ಗೋಡೆಯ ಸೃಷ್ಟಿಗೂ ಕಾರಣವಾಗಬಹುದು.

ಅಂತರಂಗದ ಕೋಣೆಯ ಕೀಲಿ ತೆರೆಯದೆ ‘ನಿನ್ನ ನಾ ನನ್ನ ನೀ ಅರಿತು, ನೀನು ನಾನಾಗಿ ನಾನು ನೀನಾಗಿ ಆನು ತಾನಾಗಿ ತಾನು ತಾವಾಗಿ’ ಅಂತರಂಗದ ಭಾವ ಬೆರೆತಾಗ ಮಾತ್ರ ಸಂಬಂಧವು ಬಾಂಧವ್ಯವಾದೀತು. ಕನಸ ಹೂ ಅರಳೀತು, ಮನಸ ಹೂ ಹೊಸೆದೀತು.

ಇಂಥ ಭಾವ ಬಾಂಧವ್ಯದ ಹೊಸಿಲಲಿ ನಿಂತು, ಅದನ್ನು ದಾಟಿ ಮುನ್ನಡೆಯಬೇಕಾದ ಬಾಳ ಪುಟಗಳಲಿ ಬಾಂಧವ್ಯದ ಕೊಂಡಿ ಸಡಿಲಾಗದಂತೆ, ಭಾವುಕತೆ ಕನಸಾಗದಂತೆ ಬಾಳನ್ನು ಮುನ್ನಡೆ ಸಬೇಕಾದ ದಾರಿದೀವಿಗೆ ಎಂಬಂತೆ ಮನಸ್ಸನ್ನು ಚಿಂತನೆಗೆ ಒಡ್ಡುವ, ಕತ್ತಲಲಿ ತೊಳಲಾಡುವ ಅಂತರಂಗವನ್ನು ಬೆಳಕಿನ ದಿಶೆಯತ್ತ ತೆರೆದಿಡುವ ಓದು ನಮ್ಮದಾಗಲಿ...