ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ ಇದನ್ನು ಮೌನ ಹಂತಕ ಎಂದೇ ಕರೆಯಲಾಗುತ್ತದೆ. ಪ್ರತೀ ವರ್ಷ ಜುಲೈ 28ರಂದು ‘ವಿಶ್ವ ಹೆಪಟೈಟಿಸ್ ದಿನ’ವನ್ನು ಆಚರಿಸ ಲಾಗುತ್ತದೆ. ಈ ದಿನದ ಉದ್ದೇಶ ಕೇವಲ ಆಚರಣೆಯಷ್ಟೇ ಅಲ್ಲ; ಜನರಲ್ಲಿ ಅರಿವು ಮೂಡಿಸುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ.

ಡಾ.ಮೈತ್ರಿ ಭಟ್‌, ವಿಟ್ಲ

ಮಾನವ ದೇಹವನ್ನು ಒಂದು ಕಾರ್ಖಾನೆಗೆ ಹೋಲಿಸಿದರೆ, ಅದರ ಕಾರ್ಯನಿರತ ಅಂಗ ಯಕೃತ್ತು (ಲಿವರ್). ನಾವು ಸೇವಿಸುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವುದರಿಂದ ಹಿಡಿದು ದೇಹ ದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವವರೆಗೆ, ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವುದರಿಂದ ಹಿಡಿದು ರೋಗ ನಿರೋಧಕ ಶಕ್ತಿಗೆ ನೆರವಾಗುವವರೆಗೆ ಯಕೃತ್ತು ಹಗಲಿರುಳು ವಿಶ್ರಾಂತಿಯಿಲ್ಲದೆ ಕೆಲಸ ಮಾಡು ತ್ತದೆ. ಇಂತಹ ಜೀವಾಧಾರ ಅಂಗದ ಮೇಲೆ ದಾಳಿ ಮಾಡುವ ಪ್ರಮುಖ ಕಾಯಿಲೆಗಳಲ್ಲಿ ಹೆಪಟೈಟಿಸ್ ಕೂಡಾ ಒಂದು.

ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದ ಕಾರಣ ಇದನ್ನು ಮೌನ ಹಂತಕ ಎಂದೇ ಕರೆಯಲಾಗುತ್ತದೆ. ಪ್ರತೀ ವರ್ಷ ಜುಲೈ 28ರಂದು ‘ವಿಶ್ವ ಹೆಪಟೈಟಿಸ್ ದಿನ’ವನ್ನು ಆಚರಿಸ ಲಾಗುತ್ತದೆ. ಈ ದಿನದ ಉದ್ದೇಶ ಕೇವಲ ಆಚರಣೆಯಷ್ಟೇ ಅಲ್ಲ; ಜನರಲ್ಲಿ ಅರಿವು ಮೂಡಿಸುವುದು, ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಮತ್ತು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೋಟ್ಯಂತರ ಜನರು ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿ ನೊಂದಿಗೆ ಬದುಕುತ್ತಿದ್ದಾರೆ. ಆದರೆ ಅವರಲ್ಲಿ ಬಹಳಷ್ಟು ಜನರಿಗೆ ತಮಗೆ ಸೋಂಕು ಇದೆ ಎಂಬ ಅರಿವೇ ಇಲ್ಲ. ನಮ್ಮ ದೇಹದ ಅತ್ಯಂತ ಶ್ರಮಜೀವಿ ಅಂಗ ವಾದ ಯಕೃತ್ತಿನ ಆರೋಗ್ಯದ ಬಗ್ಗೆ ನಾವು ಹೆಚ್ಚು ಗಮನ ಕೊಡುವುದಿಲ್ಲ. ಅದರ ಪರಿಣಾಮವೇ ಹೆಪಟೈಟಿಸ್‌ನಂತಹ ಕಾಯಿಲೆಗಳು. ಹೆಪಟೈಟಿಸ್ ಎಂದರೆ ಯಕೃತ್ತಿನಲ್ಲಿ ಉಂಟಾಗುವ ಉರಿಯೂತ.

ಇದನ್ನೂ ಓದಿ: Hepatitis: ಚಿಕಿತ್ಸೆ ಪಡೆಯದಿದ್ದರೆ ಹೆಪಟೈಟಿಸ್‌ನಿಂದ ಏನಾಗುತ್ತದೆ? ದೀರ್ಘಕಾಲೀನ ಪರಿಣಾಮಗಳನ್ನು ತಿಳಿದುಕೊಳ್ಳಿ

ಇದು ಮುಖ್ಯವಾಗಿ ಎ, ಬಿ, ಸಿ, ಡಿ ಮತ್ತು ಇ ಎಂಬ ಐದು ವಿಧದ ವೈರಸ್‌ಗಳಿಂದ ಉಂಟಾಗುತ್ತದೆ. ಹೆಪಟೈಟಿಸ್ ಎ ಮತ್ತು ಇ ಸಾಮಾನ್ಯವಾಗಿ ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡು ತ್ತವೆ. ಸ್ವಚ್ಛತೆಯ ಕೊರತೆ ಇರುವ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ಸೋಂಕಿತ ರಕ್ತ, ಅಸುರಕ್ಷಿತ ಸೂಜಿಗಳ ಬಳಕೆ, ಸೋಂಕಿತ ವ್ಯಕ್ತಿಯೊಂದಿಗೆ ರಕ್ಷಣೆ ಇಲ್ಲದ ಲೈಂಗಿಕ ಸಂಪರ್ಕ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಹರಡಬಹುದು. ಹೆಪಟೈಟಿಸ್ ಡಿ ಸೋಂಕು ಬಿ ಸೋಂಕು ಇರುವವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.

ಹೆಪಟೈಟಿಸ್‌ನ ಆರಂಭಿಕ ಲಕ್ಷಣಗಳು ಸಾಮಾನ್ಯ ಜ್ವರದಂತೆಯೇ ಇರುತ್ತವೆ. ದಣಿವು, ಹಸಿವಿನ ಕೊರತೆ, ವಾಂತಿ, ಹೊಟ್ಟೆನೋವು, ಕಣ್ಣು ಮತ್ತು ಚರ್ಮ ಹಳದಿಯಾಗುವುದು, ಗಾಢ ಬಣ್ಣದ ಮೂತ್ರ, ಮಲದ ಬಣ್ಣದಲ್ಲಿ ಬದಲಾವಣೆ ಮುಂತಾದ ಲಕ್ಷಣಗಳು. ಅನೇಕ ಬಾರಿ ಯಾವುದೇ ಲಕ್ಷಣಗಳಿಲ್ಲದೆ ವರ್ಷಗಳ ಕಾಲ ಸೋಂಕು ಉಳಿಯಬಹುದು. ಈ ಅವಧಿಯಲ್ಲಿ ಯಕೃತ್ತಿಗೆ ನಿಧಾನವಾಗಿ ಹಾನಿಯಾಗು ತ್ತಿರುತ್ತದೆ. ಪರಿಣಾಮವಾಗಿ ಸಿರೋಸಿಸ್, ಯಕೃತ್ತಿನ ವೈಫಲ್ಯ ಹಾಗೂ ಯಕೃತ್ತಿನ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು.

ಪ್ರಸ್ತುತ ಹೆಪಟೈಟಿಸ್ ಬಿ ವಿರುದ್ಧ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಲಭ್ಯವಿದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ಮಗುವಿಗೆ ಮೊದಲ ಡೋಸ್ ನೀಡುವುದರಿಂದ ಸೋಂಕಿನ ಅಪಾಯ ಬಹುತೇಕ ತಡೆಯಬಹುದು. ಹೆಪಟೈಟಿಸ್ ಸಿಗೆ ಇನ್ನೂ ಲಸಿಕೆ ಇಲ್ಲದಿದ್ದರೂ ಆಧುನಿಕ ಔಷಧಿಗಳ ಮೂಲಕ ಹೆಚ್ಚಿನ ರೋಗಿ ಗಳನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಾಗಿದೆ. ಆದ್ದರಿಂದ ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆಯೇ ಜೀವ ಉಳಿಸುವ ಪ್ರಮುಖ ಅಸ್ತ್ರ.

ಹೆಪಟೈಟಿಸ್ ತಡೆಗಟ್ಟುವುದು ಬಹಳ ಸುಲಭ. ಸುರಕ್ಷಿತ ಕುಡಿಯುವ ನೀರು ಬಳಸುವುದು, ಸ್ವಚ್ಛ ಆಹಾರ ಸೇವಿಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ರಕ್ತ ವರ್ಗಾವಣೆಯ ಮೊದಲು ಸೂಕ್ತ ಪರೀಕ್ಷೆ ನಡೆ ಸುವುದು, ಒಮ್ಮೆ ಮಾತ್ರ ಬಳಸಿ ಎಸೆಯುವ ಸೂಜಿಗಳನ್ನು ಬಳಸುವುದು ಹಾಗೂ ಹೆಪಟೈ ಟಿಸ್ ಬಿ ಲಸಿಕೆ ಕಡ್ಡಾಯವಾಗಿ ಪಡೆಯುವುದು ಅತ್ಯಂತ ಪರಿಣಾಮಕಾರಿ ಕ್ರಮಗಳಾಗಿವೆ. ಆಸ್ಪತ್ರೆಗಳು, ದಂತ ಚಿಕಿತ್ಸಾಲಯಗಳು, ಟ್ಯಾಟೂ ಮತ್ತು ಕಿವಿ ಚುಚ್ಚುವ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣ ಕ್ರಮ ಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಕೂಡ ಅಷ್ಟೇ ಮುಖ್ಯ. ಭಾರತದಲ್ಲಿ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ನಡೆಸುತ್ತಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವಿನ ಕೊರತೆ, ಮೂಢನಂಬಿಕೆಗಳು ಮತ್ತು ತಡವಾಗಿ ವೈದ್ಯರನ್ನು ಸಂಪರ್ಕಿಸುವ ಪ್ರವೃತ್ತಿ ಇನ್ನೂ ಸವಾ ಲಾಗಿಯೇ ಉಳಿದಿವೆ.

ಯಕೃತ್ತಿನ ಕಾಯಿಲೆಗಳಲ್ಲಿ ಸ್ವಯಂ ಚಿಕಿತ್ಸೆ ಅಪಾಯಕಾರಿ. ಕಾಮಾಲೆ ಬಂದರೆ ಮನೆಮದ್ದು ಸಾಕು ಎಂಬ ತಪ್ಪು ನಂಬಿಕೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇಂದಿನ ಜೀವನಶೈಲಿಯೂ ಯಕೃತ್ತಿನ ಆರೋಗ್ಯಕ್ಕೆ ಸವಾಲಾಗಿದೆ. ಅತಿಯಾದ ಮದ್ಯಪಾನ, ಧೂಮಪಾನ, ಜಂಕ್ ಫುಡ್, ಸ್ಥೂಲಕಾಯ, ಮಧುಮೇಹ, ವೈದ್ಯರ ಸಲಹೆಯಿಲ್ಲದೆ ಔಷಽಗಳನ್ನು ಸೇವಿಸುವ ಅಭ್ಯಾಸ ಮತ್ತು ದೈಹಿಕ ಚಟುವಟಿಕೆಯ ಕೊರತೆ ಯಕೃತ್ತಿನ ಆರೋಗ್ಯವನ್ನು ಹದಗೆಡಿಸುತ್ತವೆ. ಆದ್ದರಿಂದ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ, ಲಸಿಕೆ ಹಾಗೂ ಆಗಾಗ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಆರೋಗ್ಯಕರ ಬದುಕಿನ ಮೂಲಮಂತ್ರ ವಾಗಬೇಕು.