ರಂಗನಾಥ್ ಗುಡಿಮನಿ, ಸಿದ್ದಾಪೂರ
ಈ ಬದುಕೇ ಒಂದು ಸುಂದರ ಸೊಬಗಿನ ಕಾನನದಂತೆ. ಮೇಲಾಗಿ ಕೇಳಿದ್ದನ್ನೆಲ್ಲ ನೀಡುವ ಕಾಮಧೇನುವಿದ್ದಂತೆ. ನಾವೆಲ್ಲರೂ ಒಂದು ದಿನ ಬಂದು, ಒಂದು ದಿನ ಹೇಳದೇ ಕೇಳದೇ ಎದ್ದು ಹೊರಟು ಹೋಗುವ ಗೇಣಿದಾರರು. ಬದುಕಿನಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ.
ಹಾಗೆಯೇ ಇಲ್ಲಿ ಯಾವುದೂ ಶಾಶ್ವತವಲ್ಲ. ಯಾವುದೂ ಅಶಾಶ್ವತವಲ್ಲ. ಸುಖ-ದುಃಖ, ಸೋಲು-ಗೆಲುವು, ನೋವು-ನಲಿವು, ಸರಸ-ವಿರಸ ಇವೆಲ್ಲವೂ ಬದುಕಿನಲ್ಲಿ ಬಂದೊದಗುವ ಏರಿಳಿತಗಳು. ಜಗತ್ತಿನಲ್ಲಿ ಸಜ್ಜನರು, ದುರ್ಜನರು ಎನ್ನುವ ಎರಡು ವರ್ಗಗಳ ಜನರು ಮುಖ್ಯವಾಗಿ ನಮಗೆ ಕಾಣಸಿಗುತ್ತಾರೆ. ಇಲ್ಲಿ ಸಜ್ಜನರ ಬದುಕಿನ ವೈಖರಿಗೂ, ದುರ್ಜನರ ಬದುಕಿನ ವೈಖರಿಗೂ ಅಗಾಧ ವ್ಯತ್ಯಾಸ ಕಂಡುಬರುತ್ತದೆ.
ಬದುಕು ಎಂದರೇನು? ಎಂಬ ಪ್ರಶ್ನೆಗೆ ಹತ್ತು ಹಲವು ಉತ್ತರಗಳು ನಮ್ಮೊಳಗೆ ಸ್ಪುರಿಸುತ್ತವೆ. ಅದೇ ರೀತಿ, ದುಃಖ ಹಾಗೂ ಸುಖ ಎನ್ನುವ ಪದದ ಅರ್ಥಗಳು ಈಗಲೂ ನಮ್ಮನ್ನು ಗಾಢ ಚಿಂತನೆಗೆ ದೂಡುತ್ತವೆ. ಮನುಷ್ಯನಿಗೆ ಬೇಕು ಬೇಕೆಂದೆನಿಸುವುದೇ ಸುಖ. ಬೇಡ ಬೇಡವೆಂದೆನಿಸುವುದೇ ದುಃಖ.
ಇವು ಒಂದೇ ನಾಣ್ಯದ ಎರಡು ಮುಖಗಳು. ದುಃಖ ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಎರಡನ್ನೂ ಸಮಭಾವದಿಂದ ಸ್ವೀಕರಿಸುವ ಮನೋಭಾವ ಇರಲಿ. ಇಲ್ಲವಾದಲ್ಲಿ ಇಡೀ ಬದುಕು ಅಸ್ತವ್ಯಸ್ತವಾಗಿ ಗೊಂದಲಗಳ ಗೂಡಾಗುವುದು. ಪ್ರಾರಂಭದಲ್ಲಿ ಸಜ್ಜನರ ಬದುಕಿನ ಹಾದಿಯು ದುರ್ಗಮವಾಗಿರುತ್ತದೆ, ಅದೇ ದುರ್ಜನರ ಹಾದಿಯು ತುಂಬಾ ಸುಗಮವಾಗಿರುತ್ತದೆ.
ಇದನ್ನೂ ಓದಿ: Ranganath Gudimani Column: ತಾಳುವಿಕೆಗಿಂತ ಅನ್ಯ ತಪವಿಲ್ಲ
ಕಾಲ ಉರುಳಿ ಹೋದಂತೆ ದುರ್ಜನರ ಹಾದಿಯೇ ದುರ್ಗಮವಾಗಿ, ಸಜ್ಜನರ ಹಾದಿಯು ಸುಗಮವಾಗುವುದು. ಸಜ್ಜನರಿಗೆ ಸಮಸ್ಯೆ-ಸಂಕಷ್ಟಗಳು ಅಧಿಕ. ದುರ್ಜನರಿಗೆ ಸಿರಿ-ಸಂಪತ್ತು ಅತ್ಯಧಿಕ. ಬದುಕಿನ ಸುದೀರ್ಘ ಹೋರಾಟದಲ್ಲಿ ಸೋತು ಗೆಲ್ಲುವವರು ಸಜ್ಜನನಾದರೆ, ಗೆದ್ದು ಸೋಲುವವರೇ ದುರ್ಜನರು. ದುರ್ಜನರ ಸಿರಿವಂತಿಕೆಯು ಮಧ್ಯಾಹ್ನದ ಬಿಸಿಲಿನಂತೆ.
ಸಜ್ಜನರ ದುಃಖವು ಸಂಜೆಯ ನೆರಳಿನಂತೆ. ಇವು ಎಂದಿಗೂ ಶಾಶ್ವತವಲ್ಲ. ಮೊದಮೊದಲು ಸಜ್ಜನರಿಗೆ ಎಲ್ಲದರಲ್ಲಿಯೂ ತುಂಬಾ ತೊಂದರೆ ಉಂಟಾಗುವುದು, ದುರ್ಜನರಿಗೆ ಒಳ್ಳೆಯದಾಗುವುದು. ಆದರೆ ಕಟ್ಟಕಡೆಗೆ ಸಜ್ಜನರು ತಮ್ಮ ಸದ್ಗುಣಗಳಿಂದ ಗೆದ್ದು ಬೀಗಿದರೆ, ದುರ್ಜನರು ದುರ್ಗುಣಗಳಿಂದ ಸೋತು ಸುಣ್ಣವಾಗುವರು.
ನಮ್ಮ ವಚನ ಸಾಹಿತ್ಯವು ‘ಸಜ್ಜನರ ಸಂಗವು ಹೆಜ್ಜೇನಿನಂತೆ ಸಿಹಿಯಾಗಿದ್ದರೆ, ದುರ್ಜನರ ಸಂಗವು ಹಾವಿನಂತೆ ವಿಷಕಾರಿ’ ಎಂದು ಬೋಧಿಸುತ್ತದೆ. ನಮ್ಮ ಪ್ರತಿಯೊಂದು ಧರ್ಮ ಗ್ರಂಥಗಳು ಕೂಡ ‘ದುರ್ಜನರಿಗೆ ಶಿಕ್ಷೆಯಾಗಿ, ಶಿಷ್ಟರಿಗೆ ರಕ್ಷಣೆ ಸಿಗಲಿ’ ಎಂದು ಸಾರಿ ಹೇಳು ತ್ತವೆ. ಸಜ್ಜನರು ಸಮಾಜಕ್ಕೆ ಬೇಕಾದವರು. ದುರ್ಜನರು ಇಡೀ ಸಮಾಜಕ್ಕೆ ಬೇಡವಾದವರು.
ಇಂದಿನ ದಿನಗಳಲ್ಲಿ ಸಜ್ಜನರ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿದ್ದು, ದುರ್ಜನರ ಮೌಲ್ಯ ತ್ವರಿತವಾಗಿ ಹೆಚ್ಚುತ್ತಿದೆ. ಒಟ್ಟಾರೆ ಯಾವುದೇ ಸಮಯ, ಸಂದರ್ಭಗಳಲ್ಲಿ ಬೇರೊಂದು ಆಸೆ-ಆಮಿಷಗಳಿಗೆ ಒಳಗಾಗದೇ ದುರ್ಜನರನ್ನು ತಿರಸ್ಕರಿಸಿ, ಸಜ್ಜನರನ್ನು ಪುರಸ್ಕರಿಸೋಣ. ಸಜ್ಜನರಿಗೆ ಸಕಲ ಸವಲತ್ತುಗಳ ನೀಡಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ದುರ್ಜನರ ಕಪಟತನವನ್ನು ಬೇರು ಸಮೇತ ಕಿತ್ತು ಹಾಕೋಣ...