ಆ.2 ಸಂಜೆ ಜೆಸಿಎಸಿ ಸಭಾಂಗಣ ಭಕ್ತಿ, ನಾದ ಮತ್ತು ನೃತ್ಯದ ಸುಗಂಧದಿಂದ ತುಂಬಿತ್ತು. ಬೆಂಗಳೂರಿನ ಗುರುದೇವ್ ಅಕಾಡೆಮಿಯ ಗುರು ಡಾ.ಚೇತನಾ ರಾಧಾಕೃಷ್ಣ ಅವರ ಶಿಷ್ಯೆ ಕುಮಾರಿ ಪಾರ್ಕ್ಷಿತಾ ತಮ್ಮ ರಂಗಪ್ರವೇಶದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಗಂಭೀರ ನಾಟ ರಾಗ, ಆದಿ ತಾಳದಲ್ಲಿ ಆರಂಭ ವಾದ ಪ್ರಾರ್ಥನಾ ರೂಪದ ನೃತ್ಯ ನಟರಾಜನಿಗೆ, ಗುರುಗಳಿಗೆ ಮತ್ತು ರಸಿಕರಿಗೆ ವಂದನೆಯಾಗಿ, ಶುದ್ಧ ನೃತ್ತದ ಚಲನೆಗಳಲ್ಲಿ ದೇವರ ಸಾನ್ನಿಧ್ಯ ಮತ್ತು ಗುರು ಕೃಪೆ ಎದ್ದು ಕಾಣುತ್ತಿತ್ತು. ಅವರ ಲಯಬದ್ಧತೆ ಮತ್ತು ಶಾಂತ ಮುಖಭಾವ ಪ್ರಾರಂಭದಿಂದಲೇ ವೇದಿಕೆಗೆ ಒಂದು ಪವಿತ್ರತೆಯನ್ನು ತಂದಿತು.
ಮಿಶ್ರ ಜಾತಿ ಅಲರಿಪು: ಸಾಂಪ್ರದಾಯಿಕ ಅಲರಿ ಪುವಿಗೆ ನವೀನ ನೃತ್ಯ ಸಂಯೋಜನೆ ನೀಡಲಾಗಿತ್ತು. ಮಿಶ್ರ ಜಾತಿಯ ಈ ಅಲರಿಪುವಿನಲ್ಲಿ ಚುರುಕುತನ, ಗೆಜ್ಜೆಯ ಸದ್ದು ಮತ್ತು ಕೈಗಳ ಜ್ಯಾಮಿತಿ ಅದ್ಭುತವಾಗಿ ಹೊಂದಿ ಕೊಂಡವು. ಹೊಸತನ ಇದ್ದರೂ ಮಾರ್ಗವನ್ನು ಬಿಡದ ಸಮ ತೋಲನ ಗುರುಗಳ ಕೌಶಲ್ಯಕ್ಕೆ ಸಾಕ್ಷಿಯಾಯಿತು. ತಮಿಳು ಶಿವ ಕೃತಿ ‘ತಾ ತೈ ಎಂದಾಡುರ್ವ’ ಸಿಂಧುಭೈರವಿ ರಾಗ, ಆದಿ ತಾಳದಲ್ಲಿ ನಟರಾಜನ ನೃತ್ಯ ವೈಭವವನ್ನು ವರ್ಣಿಸುವ ಈ ಕೃತಿಯಲ್ಲಿ ಪಾರ್ಕ್ಷಿತಾ ಶಿವನ ತಾಂಡವದ ಶಕ್ತಿ ಮತ್ತು ಸೌಂದರ್ಯ ಎರಡನ್ನೂ ತೋರಿಸಿದರು.
ಇದನ್ನೂ ಓದಿ: Shashidhara Halady Column: ಈ ಮರಗಳು ನಮ್ಮೂರಿನ ಮಕ್ಕಳ ಸ್ನೇಹಿತರು !
ಅಭಿನಯದಲ್ಲಿ ಭಕ್ತಿ ಮತ್ತು ನೃತ್ತದಲ್ಲಿ ನಿಖರತೆ ಸಮನಾಗಿ ನಿಂತವು. ರಾಗದ ಭಾವವನ್ನು ಮುಖದಲ್ಲಿ ಹಿಡಿದಿಟ್ಟ ರೀತಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ಡಿ.ವಿ.ಗುಂಡಪ್ಪನವರ ಅಂತರಪುರ ಗೀತೆ - ಯದುವಂಶ ತಿಲಕನೇ ರಚನೆ, ಕಾಮಾಚ್ ರಾಗ, ಮಿಶ್ರ ಚಾಪು ತಾಳ. ಬೇಲೂರು ಶಿಲ್ಪದ ಮದನಿಕೆ ಯಾದ ಮುರಳೀಧರೆ - ಕೃಷ್ಣನಂತೆ ವೇಷ ಹಾಕಿದ ಗೋಪಿಕೆಯ ಸಾರೂಪ್ಯ ಸೌಖ್ಯ ಭಕ್ತಿಯನ್ನು ತುಂಬಾ ಸೂಕ್ಷ್ಮ ವಾಗಿ ಅಭಿನಯಿಸಿದರು.
ಶಿಲ್ಪ ದಲ್ಲಿನ ನಿಲುವು, ಮುದ್ರೆ, ಕಣ್ಣಿನ ಭಾವ ಎಲ್ಲವನ್ನೂ ನೃತ್ಯದಲ್ಲಿ ತಂದ ರೀತಿ ವಿಶೇಷವಾಗಿತ್ತು. ಇದು ಕೇವಲ ನೃತ್ಯವಲ್ಲ, ಒಂದು ಜೀವಂತ ಶಿಲ್ಪದರ್ಶನವಾಗಿತ್ತು. ರಂಗಪ್ರವೇಶದ ಕೊನೆಯ ನೃತ್ಯಬಂಧವಾದ ದೇಶ್ ರಾಗ, ಆದಿ ತಾಳದ ತಿಲ್ಲಾನವನ್ನು ರಚಿಸಿದವರು ವಿದ್ವಾನ್ ಡಿಎಸ್ ಶ್ರೀವತ್ಸ. ಅಂತ್ಯದ ತಿನದಲ್ಲಿ ಚುರುಕಾದ ಕೊರ್ವೈಗಳು, ಶಿಲ್ಪದಂತೆ ನಿಲ್ಲುವ ಭಂಗಿಗಳು ಮತ್ತು ದೇಶ್ ರಾಗದ ಸಿಹಿಯನ್ನು ಹೇಳುವ ಸಣ್ಣ ಸಾಹಿತ್ಯ ಎಲ್ಲವೂ ಒಂದಾದವು.
ನೃತ್ಯಗಳಿಗೆ ಡಾ.ಚೇತನಾ ರಾಧಾಕೃಷ್ಣ ಅವರ ಕಲಾತ್ಮಕ ನಿರ್ದೇಶನ ವಿತ್ತು. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನವೀನತೆಯನ್ನು ಸೇರಿಸಿದ ರೀತಿ, ಶಿಷ್ಯೆಯ ಸಾಮರ್ಥ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಕಷ್ಟ ಹೆಚ್ಚಿಸಿದ ಕ್ರಮ ಇಲ್ಲಿ ಸ್ಪಷ್ಟವಾಗಿ ಕಾಣಿಸಿತು. ಪಾರ್ಕ್ಷಿತಾ ತೋರಿಸಿದ ಲಯಜ್ಞಾನ, ಅಭಿನಯದ ಆಳ ಮತ್ತು ವೇದಿಕೆಯ ಮೇಲಿನ ಆತ್ಮವಿಶ್ವಾಸ ವರ್ಷಗಳ ತಪಸ್ಸಿನ ಫಲ.