ಹಿಂದಿರುಗಿ ನೋಡಿದಾಗ
ಒಂದು ಹಸಿರು ಬಣ್ಣವು ಇಂಗ್ಲಂಡಿನ ವಿಕ್ಟೋರಿಯನ್ ಪ್ರಜೆಗಳನ್ನು ತುಂಬಾ ಆಕರ್ಷಿಸಿತು. ಈ ಹಸಿರು ಬಣ್ಣವು ತಾಜಾ ಎಳೆ ಹಸಿರು ಹುಲ್ಲಿನಂತೆ, ಪ್ರಜ್ವಲ ವರ್ಣ ದೊಡನೆ, ನೋಡಿದವರಿಗೆ ಆಹ್ಲಾದವೆನಿಸುವಂತೆ ಅತ್ಯಾಕರ್ಷಕವಾಗಿತ್ತು. ತಮ್ಮ ಮನೆಯ ಗೋಡೆಗಳಿಗೆ ಈ ಹಸಿರು ಬಣ್ಣವನ್ನು ಲೇಪಿಸಿದರು. ಆದರೆ...
ಬ್ರಿಟನ್‌ನ ರಾಣಿ ವಿಕ್ಟೋರಿಯ (1819- 1901) 1837ರಿಂದ 1901ವರೆಗೆ ರಾಜ್ಯವನ್ನು ಆಳಿದಳು. ಈ ಅವಧಿಯು ವಿಕ್ಟೋರಿಯನ್ ಇಂಗ್ಲಂಡ್ ಎಂದು ಇತಿಹಾಸದಲ್ಲಿ ಪ್ರಸಿದ್ಧ ವಾಗಿದೆ. ಕೈಗಾರಿಕಾ ಕ್ರಾಂತಿಯ ಫಲವಾಗಿ ಇಂಗ್ಲಂಡಿನಲ್ಲಿ ಅಸಾಧಾರಣ ಸುಧಾರಣೆ ಯಾಗಿತ್ತು.
ಟೆಲಿಗ್ರಾಫ್, ಟೆಲಿಫೋನ್, ಗ್ಯಾಸ್ ಲೈಟ್, ರೈಲ್ವೇ, ಉಗಿ ಜಹಜು ಇತ್ಯಾದಿ ಸೌಲಭ್ಯಗಳು ಮುಕ್ತವಾಗಿ ದೊರೆಯುತ್ತಿದ್ದವು. ಚಾರ್ಲ್ಸ್ ಡಾರ್ವಿನ್ ತನ್ನ ವಿಕಾಸವಾದವನ್ನು ಮಂಡಿಸಿದ್ದ. ಚಾರ್ಲ್ಸ್ ಡಿಕನ್ಸ್ ತನ್ನ ಪ್ರಖ್ಯಾತ ಕಾದಂಬರಿಗಳನ್ನು ಪ್ರಕಟಿಸಿದ್ದ.
ಒಟ್ಟಿನಲ್ಲಿ ಇಂಗ್ಲಂಡ್ ಹೊಸ ಲವಲವಿಕೆಯಿಂದ ನಳನಳಿಸುತ್ತಿದ್ದ ಕಾಲ. ಇಂಗ್ಲಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ, ಕಲ್ಲಿದ್ದಿಲಿನ ಉಪಯೋಗವು ಮಿತಿಮೀರಿತ್ತು. ಎಲ್ಲೆಲ್ಲೂ ಕಪ್ಪು ಮಸಿಯದೇ ಕಾರು ಬಾರು. ಮನೆಯ ಒಳ-ಹೊರ ಗೋಡೆಗಳಲ್ಲಿ ಕಪ್ಪು ಛಾಯೆ ಯಿಂದ ಕೂಡಿದ್ದ ಕಾರಣ, ಜನರ ಮನಸ್ಸೂ ಸಹ ಒಂದು ರೀತಿ ಮಂಕುಬಡಿದಂತಿತ್ತು.
ಇಂತಹ ಸಂದರ್ಭದಲ್ಲಿ ಒಂದು ಹಸಿರು ಬಣ್ಣವು ವಿಕ್ಟೋರಿಯನ್ ಪ್ರಜೆಗಳನ್ನು ತುಂಬಾ ಆಕರ್ಷಿಸಿತು. ಈ ಹಸಿರು ಬಣ್ಣವು ತಾಜಾ ಎಳೆ ಹಸಿರು ಹುಲ್ಲಿನಂತೆ, ಪ್ರಜ್ವಲ ವರ್ಣದೊಡನೆ, ನೋಡಿದವರಿಗೆ ಆಹ್ಲಾದವೆನಿಸುವಂತೆ ಅತ್ಯಾಕರ್ಷಕವಾಗಿತ್ತು. ತಮ್ಮ ಮನೆಯ ಗೋಡೆಗಳಿಗೆ ಈ ಹಸಿರು ಬಣ್ಣವನ್ನು ಲೇಪಿಸಿದರೆ, ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ಭಾವಿಸಿದರು.
ತಮ್ಮ ಮನೆಯ ಗೋಡೆಗಳಿಗೆ ಈ ಹಸಿರು ಬಣ್ಣವನ್ನು ಲೇಪಿಸುವುದರ ಜೊತೆಯಲ್ಲಿ ತಮ್ಮ ರೇಷ್ಮೆ ಉಡುಪುಗಳಿಗೂ ಸಹ ಈ ಹಸಿರು ಪುಡಿಯನ್ನು ಲೇಪಿಸಿ, ಹೊಸ ಫ್ಯಾಶನ್ ಯುಗವನ್ನು ಆರಂಬಿಸಿದರು. ಆದರೆ ಆ ಮರಕತದ ಹೊಳಪನ್ನು ಮೀರಿಸುವ ಈ ಹಸಿರು ಬಣ್ಣದ ಹಿಂದೆ ಕರಾಳ ಮೃತ್ಯುವು ಅಡಗಿತ್ತೆಂದು ಯಾರಿಗೂ ತಿಳಿದಿರಲಿಲ್ಲ.
ಇದನ್ನೂ ಓದಿ: Dr N Someshwara Column: ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು
ಹಸಿರು ಮಕ್ಕಳು: ವಿಕ್ಟೋರಿಯನ್ ಯುಗದ ಜನರು ಮಾರಕ ಹಸಿರುಬಣ್ಣದ ಮೋಹಕ್ಕೆ ತುತ್ತಾಗಿ ಸಾವು ನೋವುಗಳನ್ನು ಅನುಭವಿಸಿದ ಕಥೆಯನ್ನು ಕೇಳುವ ಮೊದಲು ವೂಲ್ಪಿಟ್ ಹಳ್ಳಿಯ ಹಸಿರು ಮಕ್ಕಳು ಕಥೆಯನ್ನು ತಿಳಿಯುವುದು ಒಳ್ಳೆಯದು. 12ನೆಯ ಶತಮಾನದ ಇಂಗ್ಲಂಡ್. ಕಿಂಗ್ ಸ್ಟೀಫನ್ (1092-1154) ರಾಜ್ಯಭಾರವನ್ನು ಮಾಡುತ್ತಿದ್ದ ಕಾಲ.
ಇಂಗ್ಲಂಡಿನ ಸಫೋಕ್ ಪ್ರಾಂತದ ವೂಲ್ಪಿಟ್ ಹಳ್ಳಿ. ಅಲ್ಲಿ ಇಬ್ಬರು ಮಕ್ಕಳು-ಸೋದರ ಸೋದರಿಯರು-ತೋಳಗಳನ್ನು ಹಿಡಿಯುವ ಗುಂಡಿಯ ಬಳಿ ಕಂಡು ಬಂದರು. ಅವರು ನೋಡುವುದಕ್ಕೆ ಎಲ್ಲ ಮಕ್ಕಳ ಹಾಗೆ ಇದ್ದರೂ, ಚರ್ಮ ಮಾತ್ರ ಉಜ್ವಲ ಹಸಿರು ಬಣ್ಣಕ್ಕೆ ಇತ್ತು. ಅವರು ಅಪರಿಚಿತ ಭಾಷೆಯನ್ನು ಮಾತನಾಡುತ್ತಿದ್ದರು. ಅವರ ನಡೆನುಡಿಗಳು ವಿಭಿನ್ನವಾಗಿದ್ದವು.
ಇಂಗ್ಲೀಷಿನವರು ತಿನ್ನುತ್ತಿದ್ದ ಯಾವ ಒಂದು ಆಹಾರ ಪದಾರ್ಥವನ್ನೂ ಅವರು ಮುಟ್ಟ ಲಿಲ್ಲ. ಹಲವು ದಿನಗಳ ಉಪವಾಸವೇ ಇದ್ದರು. ಒಂದು ಸಲ ಚಪ್ಪರದವರೆಯನ್ನು (ಪಾವಾ ಬೀನ್ಸ್) ಕಂಡೊಡನೆ, ಅದನ್ನು ಹಸಿಹಸಿಯಾಗಿ ಮುಕ್ಕಿದರು. ಹುಡುಗನು ದಿನೇ ದಿನೇ ನಿಶ್ಶಕ್ತನಾಗಿ ಒಂದು ದಿವಸ ಮರಣಿಸಿದ. ಆದರೆ ಹುಡುಗಿಯೂ ಹೇಗೋ ಬದುಕುಳಿದಳು. ಕ್ರಮೇಣ ಅವಳು ಎಲ್ಲ ಆಹಾರ ಪದಾರ್ಥಗಳನ್ನು ತಿನ್ನಲು ಕಲಿತಳು.
ಕಾಲಕ್ರಮೇಣ ಅವಳ ಚರ್ಮದ ಹಸಿರು ಬಣ್ಣವು ಮಾಯವಾಗಿ ಎಲ್ಲರಂತೆ ಸಹಜ ಬಣ್ಣ ವನ್ನು ತಳೆಯಿತು. ಇಂಗ್ಲಿಷ್ ಭಾಷೆಯನ್ನೂ ಕಲಿತಳು. ಆಗ ಅವಳು ತಾನು ಸೈಂಟ್ ಮಾರ್ಟಿನ್ ಲ್ಯಾಂಡ್‌ಗೆ ಸೇರಿದವಳು ಎಂದಳು. ತಾನು ಹೇಗೆ ವೂಲ್ಪಿಟ್ ಹಳ್ಳಿಗೆ ಬಂದೆ ಎನ್ನುವುದನ್ನು ಅವಳು ಹೇಳದಾದಳು.
ಒಟ್ಟಿನಲ್ಲಿ ಆಕೆಯು ಓರ್ವ ನಿಗೂಢ ಹಸಿರು ಹುಡುಗಿಯಾಗಿ ಇಂಗ್ಲಂಡಿಗರ ಜಾನಪದ ಕಥೆಗಳನ್ನು ಬೆರೆತು ಹೋದಳು. ಈಗ ಆಧುನಿಕ ವೈದ್ಯಕೀಯ ವಿಜ್ಞಾನದ ಹಿನ್ನೆಲೆಯಲ್ಲಿ ಆಕೆಗೆ ಕ್ಲೋರೋಸಿಸ್ ಎಂಬ ಹೆಸರಿನ ರಕ್ತಹೀನತೆಯು ಇದ್ದಿರಬಹುದು ಎನ್ನುತ್ತಾರೆ. ಆದರೆ ವಿಕ್ಟೋರಿಯನ್ ಯುಗದಲ್ಲಿ ಕಂಡಬರುವ ಹಸಿರು ಮಕ್ಕಳು ಹಾಗೂ 12ನೆಯ ಶತಮಾನ ದಲ್ಲಿ ಕಂಡುಬಂದ ಈ ಹಸಿರು ಮಕ್ಕಳು ಸಂಪೂರ್ಣ ಭಿನ್ನರಾಗಿದ್ದಾರೆ. ಆ ಬಗ್ಗೆ ಗಮನ ವನ್ನು ಹರಿಸೋಣ.
ಶೀಲೇಸ್ ಗ್ರೀನ್: 1775. ಸ್ವೀಡಿಶ್ ರಸಾಯನ ವಿಜ್ಞಾನಿ ಕಾರ್ಲ್ ವಿಲ್‌ಹೆಲ್ಮ್ ಶೀಲೆ (1742-1786). ಇವನು ಕ್ಯುಪ್ರಿಕ್ ಹೈಡ್ರೋಜೆನ್ ಅರ್ಸೆನೇಟ್ ಎಂಬ ಬಣ್ಣದ ವಸ್ತುವೊಂದನ್ನು ಸೃಜಿಸಿದ. ಇದು ಶೀಲೇಸ್ ಗ್ರೀನ್ ಎಂದು ಹೆಸರುವಾಸಿಯಾಯಿತು. ಇದೊಂದು ಹಳದಿ-ಹಸಿರು ಮಿಶ್ರಿತ ರಾಸಾಯನಿಕ. ಇದೊಂದು ತಾಮ್ರದ ಲವಣ. ತಾಮ್ರವು ಅರ್ಸೆನಸ್ ಆಸಿಡ್ ಜೊತೆ ರಾಸಾಯನಿಕವಾಗಿ ವರ್ತಿಸಿ ಈ ಬಣ್ಣದ ವಸ್ತುವನ್ನು ಸೃಜಿಸುತ್ತಿತ್ತು. ಅದರ ಉಜ್ವಲ ಹಸಿರು ವರ್ಣವು ಹೆಚ್ಚು ಆಕರ್ಷಕವಾಗಿತ್ತು.
ಅಂದಿನ ದಿನಗಳಲ್ಲಿ ವಾಲ್‌ಪೇಪರ್ʼಗಳು ಜನಪ್ರಿಯವಾಗಿದ್ದವು. ಗೋಡೆಗೆ ನೇರವಾಗಿ ಬಣ್ಣವನ್ನು ಬಳಿಯುವ ಬದಲು, ಬಣ್ಣ ಬಣ್ಣದ ಕಾಗದಗಳನ್ನು ಹಾಗೂ ನಾನಾ ನಮೂನೆ ಯ ಚಿತ್ತಾರಗಳಿರುವ ಭಿತ್ತಿಚಿತ್ರಗಳನ್ನು ಗೋಡೆಗೆ ಅಂಟಿಸುತ್ತಿದ್ದರು. ಚಿತ್ರಗಳು ಹಳೆಯ ದಾಗುತ್ತಿದ್ದಂತೆಯೇ, ಅದನ್ನು ತೆಗೆದು ಮತ್ತೆ ಹೊಸತೊಂದನ್ನು ಅಂಟಿಸುತ್ತಿದ್ದರು.
1858ರ ವೇಳೆಗೆ ಸುಮಾರು 100 ದಶಲಕ್ಷ ಚದರ ಮೈಲಿಯಷ್ಟು ಶೀಲೇಸ್ ಗ್ರೀನ್ ಬಣ್ಣ ಬಳಿದ ವಾಲ್ʼಪೇಪರುಗಳು ಇಂಗ್ಲಂಡಿಗರ ಮನೆಯ ಗೋಡೆಗಳನ್ನು ಅಲಂಕರಿಸಿದವು. ಜೊತೆಗೆ ಇಂಗ್ಲಂಡಿಗರು ಧರಿಸುವ ಉಡುಪುಗಳಿಗೂ ಹಾಗೂ ಹ್ಯಾಟುಗಳಿಗೂ ಇದೇ ಶೀಲೇಸ್ ಗ್ರೀನ್ ಬಣ್ಣವನ್ನು ಬಳಿದು ಚೆನ್ನಾಗಿ ಹಣವನ್ನು ಮಾಡಿಕೊಂಡರು.
ಇಂಗ್ಲಂಡಿನಲ್ಲಿ ಶೀಲೇಸ್ ಗ್ರೀನ್ ಬಣ್ಣದ ಫ್ಯಾಶನ್ ಮಿತಿ ಮೀರಿತು. ಈ ಹಸಿರು ಬಣ್ಣದ ವಾಲ್ ಪೇಪರ್ ಹಾಕುವುದು ಪ್ರತಿಷ್ಠೆಯ ಸಂಕೇತವಾಯಿತು. ಇಂಗ್ಲಂಡಿಗರ ಶೀಲೇಸ್ ಗ್ರೀನ್ ಹುಚ್ಚು ಹೆಚ್ಚಾಗುತ್ತಿದ್ದಂತೆಯೇ, ಒಂದು ಹೊಸ ಅಪರಿಚಿತ ರೋಗವೊಂದು ಮೆಲ್ಲನೆ ತನ್ನ ಸಹಸ್ರ ಬಾಹುಗಳನ್ನು ಎಲ್ಲೆಡೆ, ವಿಶೇಷವಾಗಿ ಫ್ಯಾಶನ್ ಪ್ರಿಯರ ಶ್ರೀಮಂತ ಮನೆಗಳಲ್ಲಿ ಹರಡಲಾರಂಭಿಸಿತು. ಈ ಹೊಸ ಕಾಯಿಲೆಯ ಸ್ವರೂಪವು ವೈದ್ಯರಿಗೆ ತಿಳಿಯಲಿಲ್ಲ.
ಕೆಲವರು ಇದನ್ನು ಡಿಫ್ತೀರಿಯ (ಗಂಟಲುಮಾರಿ) ಎಂದರು. ಹಲವರು ಇದು ಕಾಲರಾ ಕಾಯಿಲೆಯ ಮತ್ತೊಂದು ರೂಪವೆಂದರು. ಉಳಿದವರು ಇದು ಅಲ್ಪಪ್ರಮಾಣದ ಜ್ವರ ವನ್ನು ಹರಡುವ ಅಪರಿಚಿತ ಕಾಯಿಲೆ ಎನ್ನುವ ತೀರ್ಮಾನಕ್ಕೆ ಬಂದರು.
ವೈದ್ಯನ ವ್ಯಾಧಿ: 1857. ಬರ್ಮಿಂಗ್‌ಹ್ಯಾಮಿನಲ್ಲಿ ಡಾ|ವಿಲಿಯಂ ಹೈಂಡ್ಸ್ ಎಂಬ ವೈದ್ಯ. ತನ್ನ ಓದುವ ಕೊಣೆಗೆ ಹೊಸದಾಗಿ ವಾಲ್‌ಪೇಪರ್ ಹಾಕಿಸಿದ್ದ. ಪ್ರತಿದಿನ ಸಂಜೆ ಅಧ್ಯಯನ ಕ್ಕೆಂದು ಓದುವ ಕೊಠಡಿಯಲ್ಲಿ ಕೂರುತ್ತಿದ್ದಂತೆಯೇ ಅವನಿಗೆ ಹೊಟ್ಟೆನೋವು ಹಾಗೂ ವಾಕರಿಕೆ ಕಾಡುತ್ತಿದ್ದವು. ತಲೆಯು ಹಗುರವಾಗಿ ಎಲ್ಲಿಯೋ ತೇಲಿ ಹೋಗುತ್ತಿರುವ ಅನುಭವವಾಗುತ್ತಿತ್ತು. ಏಕಾಗ್ರತೆಯು ಮಾಯವಾಗುತ್ತಿತ್ತು. ಆದರೆ ವಿಚಿತ್ರವೆಂದರೆ, ಓದುವ ಕೋಣೆಯನ್ನು ಬಿಟ್ಟು ಮಲಗಲೆಂದು ತನ್ನ ಶಯನಕಕ್ಷೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಈ ಎಲ್ಲ ಲಕ್ಷಣಗಳು ಮರೆಯಾಗುತ್ತಿದ್ದವು.
ಹೀಗೆ ಸುಮಾರು ಒಂದು ತಿಂಗಳು ಕಳೆಯಿತು. ಕೊನೆಗೆ ಒಂದು ದಿನ ಹೊಳೆಯಿತು. ತಾನು ಓದುವ ಕೊಠಡಿಯಲ್ಲಿದ್ದಾಗ ಮಾತ್ರ ವಿಚಿತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ತಾನು ಓದುವ ಕೊಠಡಿಯನ್ನು ಬಿಟ್ಟು ಬೇರೆಡೆ ಹೋಗುತ್ತಿರುವಂತೆಯೇ ಲಕ್ಷಣಗಳು ಮಾಯವಾ ಗುತ್ತಿದ್ದವು.
ಅಂದರೆ ತನ್ನ ವಿಚಿತ್ರ ಲಕ್ಷಣಗಳಿಗೆ ಕಾರಣ ಓದುವ ಕೊಠಡಿಯಲ್ಲಿಯೇ ಇರಬೇಕೆಂದು ತೀರ್ಮಾನಿಸಿದ. ಓದುವ ಕೊಠಡಿಯಲ್ಲಿ ಹೊಸದಾಗಿ ವಾಲ್‌ಪೇಪರ್ ಹಾಕಿಸಿದ್ದ. ಅದನ್ನು ಬಿಟ್ಟರೆ ಯಾವ ಬದಲಾವಣೆಗಳನ್ನೂ ಮಾಡಿರಲಿಲ್ಲ. ಹಾಗಾಗಿ ವಾಲ್‌ಪೇಪರನ್ನು ಹೆರೆದು, ಅ ಬಣ್ಣದ ಪುಡಿಯನ್ನು ಸಂಗ್ರಹಿಸಿದ. ಅದನ್ನು ನೇರವಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ದ. ಆ ಪುಡಿಯ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುವಂತೆ ಹೇಳಿದ.
ಪ್ರಯೋಗಾಲಯದ ವರದಿಯು ಆ ಪುಡಿಯ ತುಂಬ ಪ್ರಬಲ ಶಂಖಪಾಷಾಣ ಅಥವ ಅರ್ಸೆನಿಕ್ ಇರುವುದಾಗಿ ತೀರ್ಮಾನವನ್ನು ನೀಡಿತು. ಅವನು ಕೂಡಲೇ ಒಂದು ಪ್ರಬಂಧ ವನ್ನು ಬರೆದು ಗ್ರೇಟ್ ಬ್ರಿಟನ್‌ನಲ್ಲಿ ನಿಧಾನ ವಿಷಪ್ರಾಶನವು ನಡೆಯುತ್ತಿದೆ ಎಂಬ ಹೆಸರಿನಲ್ಲಿ ಪ್ರಕಟಿಸಿದ.
ಕುರುಡು ಕಾನೂನು: 1862. ಡಾ|ಥಾಮಸ್ ಆರ್ಟನ್ ಎಂಬ ವೈದ್ಯನಿಗೆ ಲಂಡನ್ನಿನ ಲೈಮ್ ಹೌಸ್ ಬಡಾವಣೆಯಲ್ಲಿ ವಾಸಿಸುತ್ತಿದ್ದ ಟರ್ನರ್ ಮನೆಯಿಂದ ಕರೆ ಬಂದಿತು. ಅವರನ್ನು ಭೇಟಿಯಾದ. ಅವರ ಮನೆಯನ್ನು ಪರಿಶೀಲಿಸಿದ. ಅವರ ಮಕ್ಕಳೆಲ್ಲರೂ ಹಸಿರು ಕೋಣೆ ಯಲ್ಲಿ ಮಲಗುತ್ತಿದ್ದರು. ಕೋಣೆಯ ಎಲ್ಲ ಗೋಡೆಗಳ ಮೇಲೆ ದಟ್ಟ ಹಸಿರುಬಣ್ಣದ ವಾಲ್ ಪೇಪರುಗಳಿದ್ದವು. ಟರ್ನರ್ ದಂಪತಿಗಳು ವಿಹ್ವಲರಾಗಿದ್ದರು. ಅವರ ಮೂವರು ಮಕ್ಕಳು “ಡಿಫ್ತೀರಿಯ" ಕಾರಣ ಈಗಾಗಲೇ ಸತ್ತಿದ್ದರು. ಈಗ ನಾಲ್ಕನೆಯ ಮಗುವು, ಅನ್ನ ಅಮೇಲಿಯ ಗಂಟಲುನೋವಿನಿಂದ ನರಳುತ್ತಿದ್ದಾಳೆ. ಮೈಕೈ ಸ್ನಾಯುಗಳು ಸೊರಗಿವೆ.
ವಿಪರೀತ ದಣಿವು ಎನ್ನುತ್ತಿದ್ದಾಳೆ. ದಯವಿಟ್ಟು ಇವಳನ್ನು ಉಳಿಸಿಕೊಡಿ ಎಂದು ಗೋಗರೆದರು. ಆದರೆ ಆರ್ಟನ್ ಅವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ಟರ್ನರ್ ಮಕ್ಕಳು ಹಸಿರು ವಾಲ್‌ಪೇಪರಿನಲ್ಲಿರುವ ಅರ್ಸೆನಿಕ್ ವಿಷಪ್ರಾಶನದಿಂದ ಸತ್ತಿದ್ದಾರೆ; ಈ ಹಸಿರು ವಾಲ್ ಪೇಪರ್ ಬಳಕೆಯನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ. ಆದರೆ ನ್ಯಾಯಾಲಯವು ಆರ್ಟನ್ ವಾದವನ್ನು ಒಪ್ಪಲಿಲ್ಲ.
ಮಕ್ಕಳು ಡಿಫ್ತೀರಿಯದಿಂದ ಸಹಜ ಸಾವನ್ನಪ್ಪಿದ್ದಾರೆ ಎಂದಿತು. ಆರ್ಟನ್ ನಾಲ್ಕು ಮಕ್ಕಳ ಶವವನ್ನು ಪೋಸ್ಟ್ ಮಾರ್ಟಮ್ ಮಾಡಿಸಿದ. ಅವರ ದೇಹದಲ್ಲಿ ಶಂಖಪಾಷಾಣವು ಇರುವುದನ್ನು ನಿರೂಪಿಸಿದ. ಹೆನ್ರಿ ಲೆಥೆಬಿ ಎಂಬ ಸಾರ್ವಜನಿಕ ಆರೋಗ್ಯಾಧಿಕಾರಿಯು ಟರ್ನರ್ ಮನೆಯಲ್ಲಿ ಮಕ್ಕಳು ಮಲಗುವ ಕೋಣೆಯಲ್ಲಿದ್ದ ಹಸಿರು ವಾಲ್‌ಪೇಪರಿನಲ್ಲಿದ್ದ ಹಸಿರು ಬಣ್ಣವನ್ನು ಹೆರೆದು ಪ್ರಯೋಗಾಲಯಕ್ಕೆ ಕಳುಹಿಸಿದ. ಪ್ರತಿ ಚದರ ಅಡಿ ವಾಲ್ ಪೇಪರಿನಲ್ಲಿ ಮೂರು ಗ್ರೈನ್ ಅರ್ಸೆನಿಕ್ ಇರುವುದಾಗಿ ಪ್ರಯೋಗಾಲದ ವರದಿ ಸಾರಿತು.
ಒಂದು ಗ್ರೈನ್ ಎಂದರೆ ಸುಮಾರು 65 ಮಿಲಿಗ್ರಾಮ್. 3 ಗ್ರೈನ್ ಎಂದರೆ 194 ಮಿಲಿಗ್ರಾಮ್. ಈ ಪ್ರಮಾಣದ ಶಂಖಪಾಷಾಣವು ಮಕ್ಕಳ ದೇಹ ಪ್ರಮಾಣಕ್ಕೆ ಅಪಾಯಕಾರಿಯಾದದ್ದು ಎನ್ನುವುದನ್ನು ನ್ಯಾಯಾಲಯ ಒಪ್ಪಬೇಕಾಯಿತು. ಕ್ರಮೇಣ ಶೀಲೇಸ್ ಗ್ರೀನ್ ಬಣ್ಣವನ್ನು ಬಳಸಿದ್ದ ವಾಲ್‌ಪೇಪರುಗಳ ಉತ್ಪಾದನೆಯು ನಿಂತಿತು.
ಮರಣ ಪ್ರಕ್ರಿಯೆ: ಶೀಲೇಸ್ ಗ್ರೀನ್ ಬಣ್ಣವು ವಾಲ್ ಪೇಪರಿನ ಮೇಲಿದೆ. ಬಣ್ಣದಲ್ಲಿರುವ ಶಂಖಪಾಷಾಣವು ಮಕ್ಕಳನ್ನು ಹೇಗೆ ಕೊಲ್ಲಲು ಸಾಧ್ಯ ಎನ್ನುವ ಪ್ರಶ್ನೆಯು ಉದ್ಭವ ವಾಯಿತು. ಇದಕ್ಕೆ ಈ ಕೆಳಕಂಡಂತೆ ವಿವರಣೆಯನ್ನು ನೀಡಿದರು.
ಬಣ್ಣದ ಧೂಳು: ಪೇಪರಿನ ಮೇಲಿರುವ ಶೀಲೇಸ್ ಗ್ರೀನ್, ಹಳೆಯದಾಗುತ್ತಿರುವಂತೆಯೇ ಪೇಪರನ್ನು ಬಿಟ್ಟು ಮೇಲೆದ್ದು ಸಣ್ಣ ಸಣ್ಣ ಧೂಳಿನ ಕಣವಾಗಿ ಗಾಳಿಯಲ್ಲಿ ಬೆರೆಯುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ, ನೆಲದ ಮೇಲಿರುವ ಧೂಳು ಮೇಲಕ್ಕೇಳುತ್ತದೆ. ಆ ಧೂಳು ಮಕ್ಕಳು ಉಸಿರಾಟದ ಮೂಲಕ ಮಕ್ಕಳ ಶ್ವಾಸಕೋಶವನ್ನು ಪ್ರವೇಶಿಸುತ್ತವೆ.
ಗಾಳಿಯಲ್ಲಿರುವ ಧೂಳು ಸಾವಕಾಶವಾಗಿ ನೆಲದ ಮೇಲೆ ಬೀಳುತ್ತದೆ. ಮನೆಯನ್ನು ಗುಡಿಸು ವಾಗ, ಈ ಧೂಳು ಮತ್ತೆ ಮೇಲಕ್ಕೆದ್ದು ಮಕ್ಕಳ ಉಸಿರಾಟದ ಮೂಲಕ ದೇಹವನ್ನು ಸೇರಬಹುದು. ಮಕ್ಕಳು ಗೋಡೆಯ ಮೇಲಿರುವ ಪೇಪರನ್ನು ಮುಟ್ಟಬಹುದು. ಅದೇ ಕೈಬೆರಳನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು.
ಧೂಳು ಬಿದ್ದ ಆಟಿಕೆಗಳನ್ನು ಮಕ್ಕಳು ಅಕಸ್ಮಾತ್ ಬಾಯಿಯಲ್ಲಿ ಇಟ್ಟುಕೊಂಡರೆ, ವಿಷವು ಹೊಟ್ಟೆಯನ್ನು ಸೇರಬಹುದು. ಇಂಗ್ಲಂಡಿನ ಹವೆ ತಂಪಾದುದು. ವಾಲ್ ಪೇಪರಿಗೆ ಅಂಟಿಸುವ ಪಿಷ್ಟಗೋಂದು ಬಿಟ್ಟುಕೊಳ್ಳಬಹುದು. ಈ ಗೋಂದನ್ನು ತಿಂದು ಬದುಕುವ ಶಿಲೀಂಧ್ರಗಳು ಸಾಕಷ್ಟಿವೆ. ಟ್ರೈಮೀಥೈಲ್‌ಅರ್ಸೈನ್ ಮುಂತಾದ ಅನಿಲಗಳನ್ನು ಉತ್ಪಾದಿಸುತ್ತವೆ. ಇವು ಬೆಳ್ಳುಳ್ಳಿಯ ಘಾಟನ್ನು ಹೋಲುತ್ತವೆ. ಈ ಅನಿಲಗಳು ವಿಷಪ್ರಭಾವ ವನ್ನು ಬೀರಬಲ್ಲವು.
1800ರಲ್ಲಿ ಇಟಾಲಿಯನ್ ಸೂಕ್ಷ್ಮಜೀವಿ ವಿಜ್ಞಾನಿ ಬೋರ್ಥೋಲೋಮಿಯೊ ಗೋಸಿಯೊ (1863-1944) ಎಂಬುವವನು ಪೆನಿಸಿಲ್ಲಿಯಮ್ ಬ್ರೆವಿಕಾಲ್ ಎಂಬ ಶಿಲೀಂಧ್ರವನ್ನು ಬಳಸಿ ಇದನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಹಾಗಾಗಿ ಶಿಲೀಂಧ್ರಗಳು ಉತ್ಪಾದಿಸುವ ಅನಿಲ ಸಮುಚ್ಚಯವನ್ನು ಗೋಸಿಯೋ ಗ್ಯಾಸ್ ಎಂದು ಕರೆದ.
ನೆಪೋಲಿಯನ್: ನೆಪೋಲಿಯನ್ ಬೊನಪಾರ್ಟಿ (1769-1821) ಹೇಗೆ ಸತ್ತ ಎನ್ನುವುದರ ಬಗ್ಗೆ ಇಂದಿಗೂ ಚರ್ಚೆಯು ಜಾರಿಯಲ್ಲಿದೆ. ಅವನು ಜಠರ ಕ್ಯಾನ್ಸರ್ ಕಾರಣ ಸತ್ತ ಎನ್ನು ವುದು ಮರಣೋತ್ತರ ಶವಪರೀಕ್ಷೆಯಿಂದ ತಿಳಿದುಬಂದಿದೆ. ಆದರೆ ಅವನ ಕೂದಲನ್ನು ಪರೀಕ್ಷೆ ಮಾಡಿದಾಗ, ಅದರಲ್ಲಿ ಶಂಖಪಾಷಾಣದ ಅಂಶವು ಪತ್ತೆಯಾಗಿದೆ.
ಸೈಂಟ್ ಹೆಲೀನದಲ್ಲಿ ನೆಪೋಲಿಯನ್ ಇದ್ದ ಮನೆಯ ಗೋಡೆಗೆಲ್ಲ ಹಸಿರು ಬಣ್ಣದ ವಾಲ್ ಪೇಪರ್ ಹಾಕಿದ್ದರು. ಇದು ಕಾಕತಾಳೀಯವೋ ಅಥವಾ ಪ್ರಜ್ಞಾಪೂರ್ವಕ ಕೃತ್ಯವೋ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಉಪಸಂಹಾರ: 1870ರ ಹೊತ್ತಿಗೆ ಸಾರ್ವಜನಿಕರ ಒತ್ತಡವು ತೀವ್ರವಾದ ಹಿನ್ನೆಲೆಯಲ್ಲಿ ಶೀಲೇಸ್ ಗ್ರೀನ್ ಇರುವ ವಾಲ್‌ಪೇಪರುಗಳ ಉತ್ಪಾದನೆಯು ನಿಂತಿತು. ಇಂಗ್ಲಂಡಿನ ರಾಣಿ ಬಕಿಂಗ್‌ಹ್ಯಾಮ್ ಪ್ಯಾಲೇಸಿನಲ್ಲಿದ್ದ ಎಲ್ಲ ಹಸಿರು ವಾಲ್‌ಪೇಪರುಗಳನ್ನು ಬದಲಿಸಲು ಸೂಚನೆಯನ್ನು ನೀಡಿದಳು. ಅಂದು ಅರ್ಸೆನಿಕ್ ವಾಲ್ʼಪೇಪರುಗಳು ಜನಸಾಮಾನ್ಯರ ಅನಾರೋಗ್ಯಕ್ಕೆ ಕಾರಣವಾಯಿತು. ಇಂದು ಅರ್ಸೆನಿಕ್ ವಾಲ್ ಪೇಪರುಗಳ ಸ್ಥಾನವನ್ನು ಮೈಕ್ರೋ ಪ್ಲಾಸ್ಟಿಕ್ ಆಕ್ರಮಿಸಿಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ.