ಸುಮನಾ ರಮಾನಂದ, ಕೊಯ್ಮತ್ತೂರು
‘ಬದುಕು’ ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು. ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನ್ನು ಪಡೆಯಲಾರೆವು.
ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ, ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ. ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ ಹೊರತು ಬೇರೆಯವರ ದೃಷ್ಟಿಯಲ್ಲಿ ಆ ಬದುಕನು ಹೇಗೆ ಕಾಣಬೇಕು ಅಂತ ತಿಳಿದಿರುವುದಿಲ್ಲ ಅನಿಸುತ್ತೆ ಒಮ್ಮೊಮ್ಮೆ.
ಬದುಕಿನ ಬಗ್ಗೆ ಬರೆಯಲು ಕುಳಿತರೆ ಅದೆಷ್ಟೂ ಪದಗಳಲ್ಲಿ, ಸಾಲುಗಳಲ್ಲಿ ವಿವರಿಸಲಾರದ ಭಾವವೊಂದು ಮನಸಿಗೆ ಕಾಡುವುದುಂಟು. ಏಕೆಂದರೆ ಬದುಕನ್ನು ಬಂದ ಹಾಗೆಯೇ ಸ್ವೀಕರಿಸಿದವರ ಜಾಯಮಾನಕೆ ನಾನೂ ಸೇರುತ್ತೇನೆ. ಸಣ್ಣ-ಪುಟ್ಟ ವಿಷಯಗಳಿಗೂ ವಿಪರೀತ ಕೊರಗದೆ, ಸೊರಗದೆ ನಮ್ಮ ಯೋಗ್ಯತೆ ಎಷ್ಟಿದೆಯೋ ಅಷ್ಟಕ್ಕೇ ನಮ್ಮ ಬದುಕನ್ನು ನಾವು ಮಾರ್ಪಡಿಸುತ್ತಾ ಅಂತಹ ಸನ್ನಿವೇಶಗಳಿಗೆ ನಮ್ಮನು ನಾವು ಅಳವಡಿಸಿ ಕೊಂಡರೆ ಮಾತ್ರ ನಿಜವಾದ ನೆಮ್ಮದಿ, ಸಂತಸ ಪಡೆಯುತ್ತೇವೆ ಅನ್ನೊದಂತೂ ಸತ್ಯ.
ಇದನ್ನೂ ಓದಿ: Readers Colony: ಟೈಟಲ್ ಕಾರ್ಡ್: ಮತ್ತೆ ಆರಂಭ?
ನಾವು ಕಾಣುವ ಕನಸುಗಳು ದೊಡ್ಡದಾಗಿದ್ದರೆ ಖಂಡಿತಾ ತಪ್ಪಿಲ್ಲ. ಆದರೆ, ಅದೆಲ್ಲ ನನಸಾಗಿಸುವ ಶಕ್ತಿ ಮನಸ್ಸಿನಲಿ ದೃಢನಿಶ್ಚಯ ನಮ್ಮಲಿದ್ದರೆ ಮಾತ್ರ ಆ ಕನಸಿಗೆ ಬೆಲೆ. ಇಲ್ಲದಿದ್ದರೆ ನಾವೂ ಸಹ ಅಂಬಾನಿಯಂತಾಗಬೇಕೆಂದು ಬಯಸಿದರೆ ಸಾಮಾನ್ಯವಾಗಿ ಜೀವಿಸುವ ಬದುಕೂ ನಮ್ಮಿಂದ ಕೈತಪ್ಪಿ ಹೋಗುವ ಸಂಭವವಿರುತ್ತದೆ.
ನಾವು ಬಾಳುವ ಬದುಕಲ್ಲಿ ಸದಾಕಾಲ ವಿಶ್ವಾಸವಿರ ಬೇಕು. ಆದರೆ, ಅತಿಯಾದ ಆತ್ಮವಿಶ್ವಾಸವಿರಬಾರದಷ್ಟೆ. ಅದಿದ್ದರೆ ಮಾತ್ರ ಬದುಕು ದುಸ್ತರವೆನಿಸುವುದು. ನಮ್ಮ ಬದುಕನು ಮತ್ತೊಬ್ಬರ ಬದುಕಿನೊಂದಿಗೆ ಹೋಲಿಸಿದಾಗಲೇ ಸಮಸ್ಯೆಯ ಉದ್ಭವ ವಾಗುತ್ತದೆ.
ಹಾಗೊಂದು ವೇಳೆ ಹೋಲಿಸಿಕೊಳ್ಳುವ ಸಂದರ್ಭ ಬಂದರೆ ನಮಗಿಂತ ಯಾರಿಗೆ ಕಮ್ಮಿಯಾದ ಅವಕಾಶ ಸಿಕ್ಕಿರುವುದೋ ಅಂತಹ ವರೊಡನೆ ಹೋಲಿಸಿಕೊಂಡಾಗ ನಮಗೆ ಆ ಭಗವಂತ ಇಷ್ಟಾದರೂ ಕರುಣಿಸಿದ್ದಾನೆ ಅನ್ನುವ ಸತ್ಯದ ಅರಿವಾಗಿ ಬದುಕು ಸಹನೀಯ ವೆನಿಸುವುದು. ನಾವು ಎದುರಿಸುವ ಬದುಕಿನಲಿ ಅದೆಷ್ಟೋ ರೀತಿಯಲಿ ಅಡೆತಡೆಗಳಿದ್ದರೂ, ಅವುಗಳನೆಲ್ಲಾ ನಿವಾರಿಸುವ ಶಕ್ತಿ ಯನ್ನು ಸಹ ಆ ಭಗವಂತನೇ ನಮಗೆ ಕೊಟ್ಟಿರುತ್ತಾ ನೆಂಬ ಸತ್ಯವನ್ನು ಮಾತ್ರ ನಾವು ಮರೆ ತಂತಿರುತ್ತೇವೆ.
ನಾವು ಯಾವಾಗಲೂ ಏನೊ ಬೇಡದ ಚಿಂತೆಗಳಲಿ, ಆ ಕ್ಷಣದಲಿ ನಿವಾರಣೆಯಾಗದ ಯೋಚನೆಗಳಲ್ಲಿ ಮುಳುಗಿ, ಬದುಕನ್ನು ಅದರಲಿರುವ ಅಮೂಲ್ಯವಾದ ಕ್ಷಣ ಗಳನ್ನು ಆಸ್ವಾದಿಸದೇ ಕಳೆದು ಬಿಡುತ್ತೇವೆ. ಮುಂದೆ ಇದರ ಅರಿವಾಗುವ ಕಾಲ ಬಂದಾಗ ನಾವು ಮೌಲ್ಯಯುತವಾದೊಂದು ನಿಧಿಯ ಕಳೆದು ಕೊಂಡೆವೆಂದು ಪರಿತಪಿಸಿ ಗೋಳಿಡುತ್ತೇವೆ. ಅದೆಂದಿಗೂ ನಮ್ಮಪಾಲಿಗೆ ನಿಲುಕದ ನಕ್ಷತ್ರವಾಗಿಬಿಡುತ್ತದೆ.
ಹಾಗಾಗಬಾರದೆಂದರೆ ನಮಗಿರುವ ಯೋಗ್ಯತೆಯನ್ನು ಪರಿಗಣಿಸಿ ನಮ್ಮ ಗುರಿಯ ತಲುಪುವ ನಿಶ್ಚಯ ಮಾಡಬೇಕಿದೆ. ಬದುಕಿನ ವಿಧವಿಧ ಮುಖಗಳು, ವಿವಿಧ ಮಜಲುಗಳು ನಮಗೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿಯೇ ನಿತ್ಯ ಕಾಣಸಿಗುತ್ತದೆ. ಒಂದು ಉದ್ಯಾನವನದಲ್ಲಿ ನಡೆಯುತ್ತಾ ಗಮನಿಸುವುದಾದರೆ ಅರಳುತಿರುವ ಹೂವಿರಬಹುದು, ಕಿಲ-ಕಿಲನೆ ನಗುತ್ತಿರುವ ಮಗುವಿರಬಹುದು, ತಮ್ಮ ಬೊಚ್ಚುಬಾಯಿಯಲಿ ನಗುತಾ ಹರಟುವ ಇಳಿ ಪ್ರಾಯದವರ ಆ ಮುಗ್ಧ ನಗುವಿನಲಿ, ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಆಗಸದಲ್ಲಿ ಹಾರಾಡುವ ಹಕ್ಕಿಗಳ ಕಲರವವ ನೋಡುತ್ತಾ ನಮ್ಮ ಗೋಳನೆಲ್ಲ ಮರೆತು ನಾವು ಬಾಳುವ ಬದುಕನು ಸುಂದರಗೊಳಿಸುವ ಪ್ರಯತ್ನವನಾದರೂ ಮಾಡಬಹು ದಲ್ಲವೇ. ಇನ್ನಾದರೂ ಕೊರಗದೇ, ಚಿಂತಿಸದೇ ಪ್ರತಿ ಕ್ಷಣವನ್ನು ಆಸ್ವಾದಿಸಿ ನಗುತ್ತಾ ಬದುಕಿಬಿಡಿ..ಏನಂತೀರಿ?