ರಾಘವೇಂದ್ರ ಜೋಯಿಸ್, ಮೈಸೂರು
ಎಸ್.ಜಾನಕಿ ಅವರು ಈ ದೇಶ ಕಂಡ ಅಪರೂಪದ ಮತ್ತು ಅಪ್ರತಿಮ ಹಿನ್ನೆಲೆ ಗಾಯಕಿ. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಇವರು ಇವತ್ತಿಗೆ 88 ವಸಂತಗಳನ್ನು ಪೂರೈಸಿ 89ಕ್ಕೆ ಕಾಲಿಡುತ್ತಿದ್ದಾರೆ. ಭಾರತದ 17 ಮತ್ತು ವಿದೇಶದ 4 ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಇವರದ್ದು.
1957ರಲ್ಲಿ ತಮಿಳು ಚಲನಚಿತ್ರವೊಂದಕ್ಕೆ ಹಾಡುವ ಮೂಲಕ ಹಿನ್ನೆಲೆ ಗಾಯನ ವೃತ್ತಿಯನ್ನು ಆರಂಭಿಸಿದ ಜಾನಕಿಯವರು ಅಲ್ಲಿಂದೀಚೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ಇಲ್ಲಿಯವರೆಗೆ ಸುಮಾರು 50,000 ಹಾಡುಗಳನ್ನು ಹಾಡಿ ನಾಲ್ಕು ರಾಷ್ಟ್ರಪ್ರಶಸ್ತಿಗಳು, 33 ಬೇರೆ ಬೇರೆ ರಾಜ್ಯ ಪ್ರಶಸ್ತಿಗಳು, ಅನೇಕ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದರೂ ಇವರದ್ದು ತುಂಬಾ ಸರಳವಾದ ವ್ಯಕ್ತಿತ್ವ ಹಾಗೂ ಮೃದು ಸ್ವಭಾವ.
ಹಾಡಿನ ಸಾಹಿತ್ಯವನ್ನು ಅರ್ಥಮಾಡಿಕೊಂಡು, ಸಿನಿಮಾದಲ್ಲಿನ ಅದರ ಸಂದರ್ಭವನ್ನು ತಿಳಿದು ಕೊಂಡು, ಜೀವ-ಭಾವ ತುಂಬಿ ಹಾಡುವುದು ಇವರ ವಿಶೇಷ. ಕನ್ನಡದಲ್ಲಿ ಇವರು ಹಾಡಿರುವ ಸಹಸ್ರಾರು ಹಾಡುಗಳಿಗೂ ಈ ಮಾತು ಅನ್ವಯವಾಗುತ್ತದೆ. ಈ ಪೈಕಿ, ತುಂಬಾ ಜನಪ್ರಿಯವಾದ, ವೈವಿಧ್ಯಮಯವಾದ ಮತ್ತು ಅವರ ದೈತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದ 10 ಹಾಡು ಗಳನ್ನು, ಅವರ ಹುಟ್ಟಿದ ದಿನವಾದ ಇಂದು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಶುಭ ಕೋರೋಣ.
ಇದನ್ನೂ ಓದಿ: Janaki Vs State of Kerala Movie: ಸ್ವಾತಂತ್ರ್ಯ ದಿನಕ್ಕೆ ʻಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಸ್ಟ್ರೀಮಿಂಗ್!.
1 ಶಿವ ಶಿವ ಎನ್ನದ ನಾಲಿಗೆ ಏಕೆ (ಚಿತ್ರ: ಹೇಮಾವತಿ): ಎಲ್. ವೈದ್ಯನಾಥನ್ ಅವರ ಅದ್ಭುತ ರಾಗ ಸಂಯೋಜನೆಯ, ಶಾಸ್ತ್ರೀಯ ಸಂಗೀತದ ಮಟ್ಟುಗಳಿಂದ ಕೂಡಿದ ಹಾಡು ಇದು. ಹಾಡುವು ದಕ್ಕೆ ತುಂಬಾ ಕ್ಲಿಷ್ಟಕರವಾದ ಈ ಗೀತೆಯನ್ನು ಜಾನಕಮ್ಮ ತುಂಬಾ ಸುಲಲಿತವಾಗಿ ಹಾಡಿದ್ದಾರೆ. ಇಂದಿಗೂ ಇದು ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ಹಾಡು.
2 ಭುವನೇಶ್ವರಿಯ ನೆನೆ ಮಾನಸವೇ (ಚಿತ್ರ: ಮರೆಯದ ಹಾಡು): ಜಿ.ಕೆ.ವೆಂಕಟೇಶ್ ಅವರ ಅದ್ಭುತವಾದ ಸಂಗೀತ ಸಂಯೋಜನೆಯಿದ್ದ ಈ ಹಾಡು ‘ಮೋಹನ ಕಲ್ಯಾಣಿ’ ರಾಗದಲ್ಲಿದೆ. ಇದು ಕೂಡ ತುಂಬಾ ಕಷ್ಟದ ಸಂಯೋಜನೆಯಿಂದ ಕೂಡಿದ ಹಾಡು. ಆದರೆ ಜಾನಕಮ್ಮ ಅವರು ಇದನ್ನು ಅದ್ಭುತವಾಗಿ ಹಾಡಿ, ಅಂದಿಗೂ ಇಂದಿಗೂ ಎಂದೆಂದಿಗೂ ‘ಮರೆಯದ ಹಾಡಾಗಿ’ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ.
3ಇಂದು ಎನಗೆ ಗೋವಿಂದ (ಚಿತ್ರ: ಎರಡು ಕನಸು): ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನ ವಿರುವ ಈ ಹಾಡಿನಲ್ಲಿ ಜಾನಕಮ್ಮ ಅವರು ತುಂಬಿಸಿರುವ ಭಕ್ತಿರಸವು ಎಂಥ ನಾಸ್ತಿಕರಲ್ಲೂ ಭಕ್ತಿಯು ಹುಟ್ಟುವಂತೆ ಮಾಡುತ್ತದೆ.
4 ಬಿಡೆನು ನಿನ್ನ ಪಾದ (ಚಿತ್ರ: ನಾ ನಿನ್ನ ಬಿಡಲಾರೆ): ಚಿತ್ರದ ನಾಯಕಿಯು ತನ್ನನ್ನು ಕಷ್ಟ ದಿಂದ ಪಾರು ಮಾಡುವಂತೆ ಕೋರಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗುವ ಸಂದರ್ಭದಲ್ಲಿ ಬರುವ ಹಾಡಿದು. ಇದನ್ನು ಜಾನಕಮ್ಮನವರು ಹಾಡಿರುವ ರೀತಿಯು ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ.
5 ತಂಗಾಳಿಯಲ್ಲಿ ನಾನು ತೇಲಿಬಂದೆ (ಚಿತ್ರ: ಜನ್ಮ ಜನ್ಮದ ಅನುಬಂಧ): ಇಳಯರಾಜ ಅವರ ಅದ್ಭುತವಾದ ರಾಗ ಸಂಯೋಜನೆ ಇರುವ ಈ ಹಾಡನ್ನು ಜಾನಕಮ್ಮನವರು ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಹಾಡಿನ ಸಾಹಿತ್ಯ ಮತ್ತು ಸನ್ನಿವೇಶವನ್ನು ಅರ್ಥಮಾಡಿಕೊಂಡು, ಮೈಗೂಡಿಸಿ ಕೊಂಡು ಅವರು ಹಾಡಿರುವ ರೀತಿಯು ರೋಮಾಂಚನವನ್ನು ಉಂಟುಮಾಡುವಂತಿದೆ.
6 ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ (ಚಿತ್ರ: ಚಕ್ರವ್ಯೂಹ): ಇದೊಂದು ಯುಗಳ ಗೀತೆ. ಈ ಹಾಡಿಗೆ ದನಿಗೂಡಿಸಿರುವವರು ಮತ್ತೊಬ್ಬ ಮಹಾನ್ ಗಾಯಕಿ ಪಿ.ಸುಶೀಲ. ಚಿತ್ರದ ನಾಯಕಿಯು ಹಾಡುವ ಸಾಲುಗಳನ್ನು ಸುಶೀಲಾ ಅವರು ಹಾಡಿದ್ದರೆ, ಚಿಕ್ಕ ಮಗುವು ಹಾಡುವ ಸಾಲುಗಳಿಗೆ ಜಾನಕಮ್ಮ ದನಿಯಾಗಿದ್ದಾರೆ. ಮಗುವೊಂದು ಮುಗ್ಧವಾಗಿ ಮತ್ತು ತೊದಲು ನುಡಿ ಯಲ್ಲಿ ಹಾಡುವ ರೀತಿಯಲ್ಲಿಯೇ ನಮ್ಮ ದನಿಯನ್ನು ಬದಲಿಸಿಕೊಂಡು ಅವರು ಇಲ್ಲಿ ಹಾಡಿರುವ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇದು ಜಾನಕಮ್ಮನವರ ದೈತ್ಯ ಪ್ರತಿಭೆಯನ್ನು ಅನಾವರಣ ಗೊಳಿಸುವ ಹಾಡೂ ಹೌದು.
7 ಜೀವ ಹೂವಾಗಿದೆ, ಭಾವ ಜೇನಾಗಿದೆ (ಚಿತ್ರ: ನೀ ನನ್ನ ಗೆಲ್ಲಲಾರೆ): ಡಾ. ರಾಜ್‌ಕುಮಾರ್ ಅವರ ಸಹಗಾಯಕಿಯಾಗಿ ಜಾನಕಮ್ಮನವರು ಈ ಹಾಡನ್ನು ಬಹಳ ಮಧುರವಾಗಿ ಹಾಡಿ, ಅದು ಎಂದೆಂದಿಗೂ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಈ ಹಾಡಿನಲ್ಲಿ ಬರುವ ‘ಸಂಜೆ ತಂಗಾಳಿ ತಂಪಾಗಿ ಬೀಸಿ..’ ಎಂಬ ಸಾಲು ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವವರ ಪಾಲಿಗೆ ಬಹಳ ಅಚ್ಚುಮೆಚ್ಚಾಗಿರುವಂಥದ್ದು ಎಂದರೆ ಅತಿಶಯೋಕ್ತಿಯಲ್ಲ. ಇಳಯರಾಜ ಅವರ ಮಧುರ ಸಂಗೀತವೂ ಈ ಹಾಡಿನ ಜನಪ್ರಿಯತೆಗೆ ಸಾಥ್ ಕೊಟ್ಟಿದೆ.
8 ನಗುವ ನಯನ, ಮಧುರ ಮೌನ (ಚಿತ್ರ: ಪಲ್ಲವಿ ಅನುಪಲ್ಲವಿ): ಆರ್.ಎನ್.ಜಯಗೋಪಾಲ್ ಅವರ ಅದ್ಭುತವಾದ ಸಾಹಿತ್ಯ ಹಾಗೂ ಇಳಯರಾಜ ಅವರ ಮಧುರ ಸಂಗೀತವಿರುವ ಈ ಹಾಡನ್ನು ಜಾನಕಮ್ಮ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೋಡಿಯು ಪ್ರತಿ ಪದಕ್ಕೂ ಜೀವ ತುಂಬಿ ಹಾಡಿದೆ ಮತ್ತು ಇನ್ನೂ ನೂರಾರು ವರ್ಷಗಳು ಕಳೆದರೂ ಜನರು ಈ ಹಾಡನ್ನು ಕೇಳುತ್ತಲೇ ಇರುವಂತೆ ಮಾಡಿದೆ.
9 ಜೊತೆಯಲಿ, ಜೊತೆ ಜೊತೆಯಲಿ (ಚಿತ್ರ: ಗೀತಾ): ಈ ಹಾಡಿನಲ್ಲಿ ಜಾನಕಮ್ಮ ಮತ್ತು ‘ಎಸ್‌ಪಿಬಿ’ ಮಾಡಿರುವ ಮೋಡಿಯು ಎಲ್ಲಾ ಜೋಡಿಗಳ ಬಾಯಲ್ಲಿ ಈ ಹಾಡು ಸದಾ ಗುನುಗು ವಂತೆ ಮಾಡಿದೆ.
10 ನಗಿಸಲು ನೀನು, ನಗುವೆನು ನಾನು (ಚಿತ್ರ: ಗಾಳಿಮಾತು): ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಅದ್ಭುತ. ಸಿನಿಮಾದಲ್ಲಿನ ಸನ್ನಿವೇಶಕ್ಕೆ ತಕ್ಕ ಹಾಗೆ ಪ್ರೀತಿ, ಸಂಕೋಚ, ಆಸೆ, ಭಯ ಎಲ್ಲವನ್ನೂ ಬೆರೆಸಿ ಅನುಭವಿಸಿ ಜಾನಕಮ್ಮನವರು ಹಾಡಿರುವ ರೀತಿ ನಿಜಕ್ಕೂ ಅದ್ಭುತ.
ಹೇಳುತ್ತಾ ಹೋದರೆ ಈ ಪಟ್ಟಿಗೆ ಇನ್ನಷ್ಟು ಮತ್ತಷ್ಟು ಹಾಡುಗಳು ಸೇರುತ್ತಲೇ ಹೋಗುತ್ತವೆ ಹಾಗೂ ಸಂಗೀತ ಪ್ರೇಮಿಗಳು ಅವನ್ನು ನೂರಾರು ವರ್ಷಗಳವರೆಗೆ ಗುನುಗುತ್ತಲೇ ಇರುತ್ತಾರೆ. ತಮ್ಮ ಇಂಪಾದ ಧ್ವನಿಯಿಂದ ನಮ್ಮೆಲ್ಲರ ಮನಸೂರೆಗೊಂಡು, ನಮ್ಮ ನೋವು-ನಲಿವು ಎರಡೂ ಸಂದರ್ಭಗಳಿಗೂ ಅಪಾರ ಹಾಡುಗಳನ್ನು ಮೊಗೆಮೊಗೆದು ಕೊಟ್ಟಿರುವ ಗಾಯಕಿ ಎಸ್.ಜಾನಕಿ ಅವರಿಗೆ ಕನ್ನಡ ನಾಡಿನ ಎಲ್ಲಾ ಸಂಗೀತ ಪ್ರೇಮಿಗಳ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಮರ್ಪಿಸೋಣ....