ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರ ಗಳ ಪ್ರತಿನಿಧಿಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

ನಾರಾಯಣ ಯಾಜಿ

ಇನ್ನು ಕೆಲವೇ ವಾರಗಳಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 2 ಲಕ್ಷ ರುಪಾಯಿ ದಾಟಬಹುದು ಎಂಬ ಲೆಕ್ಕಾಚಾರವಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಿ ಡಾಲರ್ ಚಕ್ರಾಧಿ ಪತ್ಯಕ್ಕೆ ಒದಗಿರುವ ನಡುಕ ಮತ್ತು ಪೆಟ್ರೋಡಾಲರ್ ಯುಗದ ಅಂತ್ಯ! ವಿವಿಧ ಸರಕಾರಗಳು ಈಗ ಚಿನ್ನವನ್ನು ಸಂಗ್ರಹಿಸುತ್ತಿವೆ! ಏನಿದರ ಒಳಗುಟ್ಟು? ಓದಿ ನೋಡಿ.

ಸುಮಾರು 80 ವರ್ಷಗಳಿಂದ ಜಾಗತಿಕ ವ್ಯಾಪಾರದ ಮಧ್ಯವರ್ತಿಯಾಗಿ ಮೆರೆದ ಡಾಲರ್ ಇಂದು ತನ್ನ ಚಕ್ರಾಧಿಪತ್ಯವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಅಮೆರಿಕದ ಅಧ್ಯಕ್ಷರು ಅದನ್ನು ಮರಳಿ ಹಳಿಗೆ ತರುವ ಎಲ್ಲಾ ಸಾಹಸವನ್ನು ಮಾಡಲು ಪ್ರಯತ್ನಿಸುತ್ತಿರುವುದೇ ಇಂದಿನ ಗೊಂದಲಕ್ಕೆ ಮೂಲ ಕಾರಣ. ಪರಿಣಾಮವೇ ಚಿನ್ನದ ಬೆಲೆ ಗಗನಮುಖಿಯಾಗುತ್ತಿದೆ.

ಕರೆನ್ಸಿ ವಿನಿಮಯಕ್ಕೆ ಡಾಲರ್ ಅಧಿಕೃತ ಪಟ್ಟವೇರಿರುವುದಕ್ಕೆ ಕಾರಣ ಅಮೆರಿಕದ ಹಿಂದಿನ ಚಾಣಾಕ್ಷ ನಾಯಕರು. 1945ರ ನಂತರ ನಡೆದ ಎರಡು ಮಹತ್ವದ ಒಪ್ಪಂದಗಳು ಅಮೆರಿಕವವನ್ನು ಜಾಗತಿಕ ನಾಯಕನನ್ನಾಗಿಸಿದವು.

ಬ್ರೆಟನ್‌ ವುಡ್ಸ್ ಒಪ್ಪಂದ ಎರಡನೇ ಮಹಾಯುದ್ಧದ ತನಕ ಬ್ರಿಟನ್ ಜಾಗತಿಕ ನಾಯಕನಾಗಿ ಮೆರೆ ದಿತ್ತು. ಅದರ ಪೌಂಡ್ ಆಡಿದ್ದೇ ಆಟ. ಎರಡನೇ ಮಹಾಯುದ್ಧದ ಪರಿಣಾಮ ಸೂರ್ಯ ಮುಳುಗದ ದೇಶ ತನ್ನ ಅಸ್ತಿತ್ವಕ್ಕೆ ಒದ್ದಾಡಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿತು. ಹಾಗಾಗಿ ತನ್ನ ಹಲವಾರು ವಸಾಹತುಗಳಿಗೆ ಸ್ವಾತಂತ್ರ್ಯವನ್ನು ಘೋಷಿಸತೊಡಗಿತು.

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರಗಳ ಪ್ರತಿನಿಧಿ ಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

ಇದನ್ನೂ ಓದಿ: Narayana Yaji Column: ಕರ್ಕಿ ಪ್ರಭಾಕರ ಭಂಡಾರಿಯವರ ನಾದ ಮೌನ

ಡಾಲರ್ ಮತ್ತು ಚಿನ್ನದ ಸಂಬಂಧ ಈ ಒಪ್ಪಂದದ ಪ್ರಕಾರ ಅಮೆರಿಕ ತನ್ನ ಡಾಲರ್ ಮೌಲ್ಯವನ್ನು ಅಪರಂಜಿ ಚಿನ್ನಕ್ಕೆ ಜೋಡಿಸಿತು. ಇದರ ಪ್ರಕಾರ ಒಂದು ಔನ್ಸ್ ಚಿನ್ನಕ್ಕೆ 35 ಡಾಲರ್ ಎಂದು ನಿಗದಿಯಾಯಿತು. ವಿಶ್ವದ ಉಳಿದ ರಾಷ್ಟ್ರಗಳು ತಮ್ಮ ಕರೆನ್ಸಿಯ ಮೌಲ್ಯವನ್ನು ಡಾಲರ್‌ಗೆ ಲಿಂಕ್ ಮಾಡಿದವು. ಜಾಗತಿಕ ವ್ಯಾಪಾರದ ಆಧಾರ ಬಿಂದುವಾದ ಡಾಲರ್ ಅಧಿಕೃತವಾಗಿ ‘ಜಾಗತಿಕ ಮೀಸಲು ಕರೆನ್ಸಿ’ (ಗ್ಲೋಬಲ್ ರಿಸರ್ವ್ ಕರೆನ್ಸಿ) ಆಗಿ ಅಂಗೀಕರಿಸಲ್ಪಟ್ಟಿತು. ಜತೆಗೆ ಜಾಗತಿಕ ಅರ್ಥವ್ಯವಸ್ಥೆಯನ್ನು ಹಳಿಗೆ ತರಲು ಅಮೆರಿಕಕ್ಕೆ ಮಾತ್ರ ಸಾಧ್ಯವೆಂದು ಜಗತ್ತನ್ನು ನಂಬಿಸಿತು.

ಯುರೋಪು ಅದಾಗಲೇ ಅಮೆರಿಕದ ಮರ್ಜಿಯಲ್ಲಿತ್ತು. ಇನ್ನುಳಿದ ದೇಶಗಳು ಧ್ವನಿ ಎತ್ತುವ ಶಕ್ತಿ ಯನ್ನು ಹೊಂದಿರಲಿಲ್ಲ. ಜತೆಗೆ ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ತನ್ನ ಉಡ ದಂಥ ಹಿಡಿತವನ್ನು ಸ್ಥಾಪಿಸಿ ಎಲ್ಲವನ್ನೂ ತನ್ನ ಅಂಕೆಯಲ್ಲಿರಿಸಿಕೊಳ್ಳುವಂತೆ ಅದು ನೋಡಿ ಕೊಂಡಿತು.

ಬ್ರೆಟನ್‌ವುಡ್ಸ್ ಒಪ್ಪಂದದ ಭಾಗವಾಗಿಯೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್ ಸ್ಥಾಪನೆಯಾದವು. ಈ ಸಂಸ್ಥೆಗಳು ಸಾಲ ನೀಡಿಕೆಯ ಅಸ್ತ್ರವನ್ನು ಬಳಸಿ ವ್ಯವಹಾರಗಳಲ್ಲಿ ಡಾಲರ್ ಬಳಕೆಯನ್ನು ಉತ್ತೇಜಿಸಿದವು.

ನಿಕ್ಸನ್ ನೀಡಿದ ಶಾಕ್

ಜಗತ್ತಿನ ಅರ್ಥವ್ಯವಸ್ಥೆಗೆ ಮೊದಲ ಅಘಾತ ನೀಡಿದ್ದು ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್. 1971ರ ವೇಳೆಗೆ ಅಮೆರಿಕದ ಚಿನ್ನದ ಸಂಗ್ರಹ ಕಡಿಮೆಯಾಗಿ, ಆರ್ಥಿಕ ಸ್ಥಿತಿ ಹದಗೆಡ ತೊಡಗಿತು; ಇತರ ದೇಶಗಳು ಡಾಲರ್ ನೀಡಿ ಚಿನ್ನವನ್ನು ವಾಪಸ್ ಕೇಳುತ್ತಿದ್ದವು. ಇದು ಮುಂದು ವರಿದರೆ ಅಮೆರಿಕ ದಿವಾಳಿಯಾಗುತ್ತಿತ್ತು.

Gold Rate (40)

ಆಗ ರಾಷ್ಟೀಯ ಭದ್ರತಾ ಸಲಹೆಗಾರಾಗಿದ್ದ ಹೆನ್ರಿ ಕಿಸಿಂಜರ್ ಅವರು ಅಧ್ಯಕ್ಷ ನಿಕ್ಸನ್‌ಗೆ ‘ನೈತಿಕತೆ ಗಿಂತ ಅಮೆರಿಕದ ಆರ್ಥಿಕ ಭದ್ರತೆ ಮುಖ್ಯ’ ಎಂಬ ಸಲಹೆ ನೀಡಿದರು. ಪರಿಣಾಮವಾಗಿ ನಿಕ್ಸನ್ ಡಾಲರ್‌ಗಿರುವ ಚಿನ್ನದ ಬೆಂಬಲವನ್ನು 1971ರಲ್ಲಿ ರದ್ದುಮಾಡಿದರು. ಕಿಸಿಂಜರ್ ಅವರ ಚಾಣಾಕ್ಷ ನಡೆಯಿಂದ ‘ನ್ಯಾಟೋ’ ಒಕ್ಕೂಟದ ರಾಷ್ಟ್ರಗಳಿಗೆ ರಷ್ಯಾದ ಗುಮ್ಮನನ್ನು ತೋರಿಸಿ ಡಾಲರ್ ‘ಫಿಯೆಟ್ ಕರೆನ್ಸಿ’ಯಾಗಿ (ಸರಕಾರದ ನಂಬಿಕೆಯ ಮೇಲೆ ನಡೆಯುವ ನಾಣ್ಯ) ಮುಂದುವರಿ ಯುವಂತೆ ನೋಡಿಕೊಂಡರು.

ಇಷ್ಟಾದರೂ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲಿಲ್ಲ. ಡಾಲರ್ ಪಾರಮ್ಯಕ್ಕಾಗಿ ಕಿಸಿಂಜರ್ ಹೂಡಿದ ಇನ್ನೊಂದು ನಡೆಯೇ ಸೌದಿ ಅರೇಬಿಯಾದೊಡನೆ ಮಾಡಿಕೊಂಡ ಒಪ್ಪಂದ. ಪೆಟ್ರೋಡಾಲರ್ ಒಪ್ಪಂದ ಆಗ ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ವೈಮನಸ್ಸು ತೀವ್ರವಾಗಿತ್ತು. ಅಮೆರಿಕವು ಇಸ್ರೇಲನ್ನು ತನ್ನ ದಾಳವನ್ನಾಗಿ ಯಾವಾಗಲೂ ಉಪಯೋಗಿಸಿಕೊಂಡಿದೆ.

1973ರ ಮಧ್ಯಪ್ರಾಚ್ಯದ ಸಂಘರ್ಷದ ಸಂದರ್ಭದಲ್ಲಿ ಸೌದಿ ಅರೇಬಿಯಾವು, ಅಮೆರಿಕದ ಮೇಲೆ ‘ತೈಲ ದಿಗ್ಬಂಧನ’ ಹೇರಿದ ಪರಿಣಾಮ ಅಮೆರಿಕದ ಆರ್ಥಿಕತೆ ನಲುಗಿಹೋಗಿತ್ತು. ಅಮೆರಿಕದ ವಿದೇಶಾಂಗ ನೀತಿ ಹೇಗಿದೆಯೆಂದರೆ ತಾನು ಗೆದ್ದಾಗಲೂ ಬೇರೆಯವರು ಗೆದ್ದಾಗಲೂ ಎದುರಾಳಿಯ ಮೇಲೆ ಮಂಕುಬೂದಿ ಎರಚಿ, ‘ನಾನಿಲ್ಲದಿದ್ದರೆ ನಿಮ್ಮ ರಕ್ಷಣೆ ಅಸಾಧ್ಯ’ ಎನ್ನುವ ಭಾವನೆಯನ್ನು ಮೂಡಿಸುತ್ತದೆ.

ಡಾಲರ್ ಪಾರಮ್ಯವನ್ನು ಇನ್ನಷ್ಟು ಗಟ್ಟಿಮಾಡಲು ಅಧ್ಯಕ್ಷ ನಿಕ್ಸನ್ ಮತ್ತು ಕಿಸಿಂಜರ್ ಇನ್ನೊಂದು ಹೂಟ ಹೂಡಿದರು. ಅದರ ಪರಿಣಾಮವೇ ಡಾಲರಿಗೆ ಪುನಶ್ಚೇತನ ನೀಡಿದ 1974ರ ‘ಪೆಟ್ರೋ ಡಾಲರ್ ಒಪ್ಪಂದ’. ಸೌದಿಯ ದೊರೆ ಫೈಸಲ್ ಬಿನ್ ಅಬ್ದುಲಜೀಜ್ ಅಲ್ ಸೌದ್‌ಗೆ ತೈಲವನ್ನು ಸಂಸ್ಕರಿಸಲು ಅಮೆರಿಕದ ತಂತ್ರಜ್ಞಾನದ ನೆರವು ಅಗತ್ಯವಾಗಿತ್ತು. ಹೆನ್ರಿ ಕಿಸಿಂಜರ್ ನೇತೃತ್ವದಲ್ಲಿ ನಡೆದ ಸಂಧಾನದಂತೆ ಸೌದಿ ಅರೇಬಿಯಾದೊಂದಿಗೆ ‘ಪೆಟ್ರೋಡಾಲರ್’ ಒಪ್ಪಂದ ಏರ್ಪಟ್ಟಿತು.

ಇದರ ಪ್ರಕಾರ, ಸೌದಿ ತನ್ನ ತೈಲವನ್ನು ಕೇವಲ ‘ಅಮೆರಿಕದ ಡಾಲರ್ ಮೂಲಕವೇ ಮಾರಾಟ ಮಾಡಲು ಮತ್ತು ಆ ಲಾಭವನ್ನು ಅಮೆರಿಕದ ಟ್ರೆಜರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು’ ಒಪ್ಪಿಕೊಂಡಿತು. ಪ್ರತಿಯಾಗಿ ಅಮೆರಿಕವು ಸೌದಿ ರಾಜಮನೆತನಕ್ಕೆ ರಕ್ಷಣೆ ಮತ್ತು ಆಧುನಿಕ ಶಸಾಸಗಳ ಅಭಯ ನೀಡಿತು. ಸೌದಿಯಿಂದ ಹೊರಟ ತೈಲ ಟ್ಯಾಂಕರ್ ಸುದೀರ್ಘ ಸಮುದ್ರ ಯಾನದ ನಂತರ ನ್ಯೂಯಾರ್ಕ್ ಬಂದರು ತಲುಪುವಷ್ಟರಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಲೆ ಡಾಲರ್ʼನಲ್ಲಿಯೇ ಸ್ಥಿರವಾಗಿರುತ್ತಿತ್ತು.

ಪರಿಣಾಮ ಜಾಗತಿಕವಾಗಿ ಡಾಲರ್ ಬೇಡಿಕೆ ಹೆಚ್ಚಾಯಿತು. ಸೌದಿ ಅರೇಬಿಯಾವು ತೈಲ ಮಾರಾಟ ದಿಂದ ಬಂದ ಈ ಡಾಲರ್‌ಗಳನ್ನು ಮರಳಿ ಅಮೆರಿಕದ ಟ್ರೆಜರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ ಕಾರಣ, ಅಮೆರಿಕವು ತನ್ನ ಬೃಹತ್ ಸಾಲದ ನಡುವೆಯೂ ಕಡಿಮೆ ಬಡ್ಡಿದರದಲ್ಲಿ ಹಣಕಾಸು ವ್ಯವಸ್ಥೆಯನ್ನು ನಿಭಾಯಿಸಲು ಮತ್ತು ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಮುಂದುವರಿಯಲು ಸಹಾಯಕವಾಯಿತು.

ಸುಮಾರು ಐದು ದಶಕಗಳ ಕಾಲ ಜಾಗತಿಕ ಆರ್ಥಿಕತೆಯನ್ನು ನಿಯಂತ್ರಿಸಿದ ಈ ಒಪ್ಪಂದದಿಂದ ಹೊರಬರಲು ಈಗ ಸೌದಿ ಉತ್ಸುಕವಾಗಿದೆ. ಜತೆಗೆ ಇತರ ಕರೆನ್ಸಿಗಳಲ್ಲೂ ವ್ಯಾಪಾರ ನಡೆಸಲು ಇಚ್ಛಿಸಿದೆ.

ಒಪ್ಪಂದದ ವಿವಾದ

ವರ್ತಮಾನದ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆಧುನಿಕ ವಿಚಾರಧಾರೆಯುಳ್ಳ ವ್ಯಕ್ತಿ. ಈಗಾಗಲೇ 1974ರಲ್ಲಿಯದು ರಹಸ್ಯವಾದ ಒಪ್ಪಂದವಾಗಿರುವುದರಿಂದ ಅಧಿಕೃತವಾಗಿ 50 ವರ್ಷಗಳ ನಂತರ ಈ ಒಪ್ಪಂದ ಕೊನೆಗೊಳ್ಳುತ್ತದೆ ಎಂಬ ಲಿಖಿತ ದಾಖಲೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ 2024ಕ್ಕೆ 50 ವರ್ಷಗಳು ತುಂಬಿವೆ. ಇದನ್ನು ಕಾಯುತ್ತಿರುವ ಈತನು ‘ವಿಷನ್ 2030’ ಎನ್ನುವ ಯೋಜನೆಯ ಮೂಲಕ ತೈಲ ಬೆಲೆಯ ಮೇಲೆ ಅಮೆರಿಕದ ಹಿಡಿತದಿಂದ ಹೊರ ಬರಲು ಯೋಚಿಸುತ್ತಿದ್ದಾನೆ. ಜತೆಗೆ ಇತರ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಲು ಆಸಕ್ತಿ ತೋರುತ್ತಿರು ವುದರಿಂದ, 50 ವರ್ಷಗಳ ಒಪ್ಪಂದ ಮುಗಿದಿದೆ ಎನ್ನುವ ವಾದವನ್ನು ಮುಂದಿಟ್ಟಿದ್ದಾನೆ.

ತೈಲ ಮಾರಾಟಕ್ಕೆ ಡಾಲರ್ ಅನ್ನು ಮಾತ್ರ ನೆಚ್ಚಿಕೊಂಡರೆ, ಅಮೆರಿಕದ ಆರ್ಥಿಕ ಏರಿಳಿತಗಳು ಸೌದಿಯ ಮೇಲೂ ಪರಿಣಾಮ ಬೀರುತ್ತವೆ ಎನ್ನುವುದನ್ನು ಕಂಡುಕೊಂಡಿದ್ದಾನೆ. ಡಾಲರ್ ಮೊದಲಿನಂತೆ ಇದೀಗ ಫಿಯಟ್ (ವಿಶ್ವಾಸಾರ್ಹ) ಕರೆನ್ಸಿಯಾಗಿ ಉಳಿದಿಲ್ಲ. ಇದು ಅಧ್ಯಕ್ಷ ಟ್ರಂಪ್ ಅವರ ದೊಡ್ಡ ತಲೆನೋವು. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮರುಳು ಮಾಡಲು ಸಾಧ್ಯವಿಲ್ಲ.

ರಷ್ಯಾ, ಚೀನಾ, ಭಾರತ ದೇಶಗಳು ನವಶಕ್ತಿಗಳಾಗಿ ಮುಂದೆ ಬರುತ್ತಿವೆ. ಚೀನಾಕ್ಕೆ ತಂತ್ರಜ್ಞಾನ ವರ್ಗಾಯಿಸಿ ಉದ್ದಿಮೆ ಸ್ಥಾಪಿಸಿ ಅಗ್ಗದ ದರದಲ್ಲಿ ವಸ್ತುವನ್ನು ಉತ್ಪಾದನೆ ಮಾಡಿಸಿ ಅಧಿಕ ಲಾಭ ಗಳಿಸಬಹುದೆನ್ನುವ ಆಸೆಯಿಂದ ಅಮೆರಿಕ ಮಾಡಿದ್ದ ವಿದೇಶಿ ಹೂಡಿಕೆ ಅದಕ್ಕೇ ತಿರುವುಮುರು ವಾಗಿದೆ.

ಇಂದು ಚೀನಾ ಜಾಗತಿಕವಾಗಿ ಎರಡನೆಯ ಬೃಹತ್ ಆರ್ಥಿಕ ಶಕ್ತಿಯಾಗಿ ಮೇಲೆದ್ದಿದೆ. ರಷ್ಯಾ ಸಹ ಪುಟಿನ್ ನೇತೃತ್ವದಲ್ಲಿ ತನ್ನ ಸಾಮ್ರಾಜ್ಯವನ್ನು ಭದ್ರಪಡಿಸಿಕೊಂಡಿದೆ. ಭಾರತವು ಜಗತ್ತಿನ ನಾಲ್ಕನೇ ದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. ಮಧ್ಯಪ್ರಾಚ್ಯ ದೇಶಗಳು ಅಮೆರಿಕವನ್ನು ಸುಲಭಕ್ಕೆ ನಂಬುವ ಸ್ಥಿತಿಯಲ್ಲಿಲ್ಲ.

ಡಾಲರ್-ಮುಕ್ತ ವ್ಯವಹಾರ

ಇದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾದ ಹೊತ್ತಿನಲ್ಲಿ ಡಾಲರ್ ಅನ್ನು ರಾಜಕೀಯ ಮತ್ತು ಆರ್ಥಿಕ ಆಯುಧವಾಗಿ ಬಳಸುವ ಟ್ರಂಪ್ ಅವರ ಆಲೋಚನೆಯ ಪರಿಣಾಮವಾಗಿ, ‘ಡಾಲರ್-ಮುಕ್ತ ವ್ಯವಹಾರವಾಗಬೇಕೆನ್ನುವ’ ಕೂಗು ಜೋರಾಗಿದೆ. ಇದರೊಂದಿಗೆ ಉಕ್ರೇನ್, ವೆನಿಜುವೆಲಾ, ಗ್ರೀನ್‌ಲ್ಯಾಂಡ್, ಮಧ್ಯಪ್ರಾಚ್ಯ ವಿಷಯಗಳಲ್ಲಿ ಜಾಗತಿಕವಾಗಿ ಅಮೆರಿಕದ ಆವಾಂತರಗಳು ಹೆಚ್ಚಾ ದಂತೆ ಬ್ರಿಕ್ಸ್ ದೇಶಗಳ ‘ಡಿ-ಡಾಲರೈಸೇಷನ್’ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಎಲ್ಲಾ ಕಾರಣ ಗಳಿಂದ ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಸಂಗ್ರಹಿಸತೊಡಗಿವೆ.

ಭಾರತದ ರಿಸರ್ವ್ ಬ್ಯಾಂಕ್ ‘ಪೆಟ್ರೋ ಡಾಲರ್’ ಗೊಂದಲವನ್ನು ಊಹಿಸಿಯೇ 2024ರಲ್ಲಿ ದಾಖಲೆ ಪ್ರಮಾಣದ 72 ಟನ್ ಚಿನ್ನವನ್ನು ಖರೀದಿ ಮಾಡಿ ದಾಸ್ತಾನು ಮಾಡಿಕೊಂಡಿದೆ. ಅದನ್ನೇ 2025ರಲ್ಲಿ ಚೀನಾ, ರಷ್ಯಾದಂಥ ದೇಶಗಳು ಅನುಸರಿಸಿರುವುದರಿಂದ ಚಿನ್ನದ ಬೆಲೆ 10 ಗ್ರಾಂಗೆ 1,70,000 ರುಪಾಯಿ ದಾಟಿದೆ. ಇದು ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಕೆಲವೇ ವಾರಗಳಲ್ಲಿ ಇದು ಎರಡು ಲಕ್ಷ ರುಪಾಯಿ ದಾಟಬಹುದೆಂದು ಅಂದಾಜಿಸಲಾಗಿದೆ. ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ಅಮೆರಿಕಕ್ಕೆ ಫ್ರಾಂಕ್ಲಿನ್ ರೂಸ್‌ವೆಲ್ಟ್, ರಿಚರ್ಡ್ ನಿಕ್ಸನ್‌ರಂಥ ಚಾಣಾಕ್ಷ ನಾಯಕರು, ಹೆನ್ರಿ ಕಿಸಿಂಜರ್‌ರಂಥ ವೃತ್ತಿಪರ ಸಂಧಾನಕಾರರು ಜಾಗತಿಕ ಹಿತದೃಷ್ಟಿಯಿಂದ ಇರಬೇಕಿತ್ತು.