ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Surendra Pai Column: 100% ಫಲಿತಾಂಶ: ದಾಖಲಾತಿ ಹೆಚ್ಚಿಸುವುದೇ ?

ನಾವು ಮೊಟ್ಟೆ ನೀಡುತ್ತೇವೆ, ಬಟ್ಟೆ ಕೊಡುತ್ತೇವೆ, ಶೇ.100 ಫಲಿತಾಂಶ ಬರುವ ಹಾಗೇ ಮಾಡು ತ್ತೇವೆ ಎಂಬಿತ್ಯಾದಿ ಅಂಶಗಳನ್ನು ಮಾತ್ರ ಪುನಃ ಪುನಃ ಹೇಳಿದರೆ ಹೊರತು ಎಲ್ಲೂ ಸಹ ‘ಕೇವಲ ಅಂಕಗಳು ಮಕ್ಕಳ ಭವಿಷ್ಯ ರೂಪಿಸುವುದಿಲ್ಲ, ಅಂಕಗಳ ಹೊರತಾಗಿಯೂ ಜ್ಞಾನ ಮುಖ್ಯ, ಕೌಶಲ ಮುಖ್ಯ, ನಮ್ಮ ಸರಕಾರ ಅಂಕಗಳ ಹಿಂದೆ ಬಿದ್ದಿಲ್ಲ, ಬದಲಾಗಿ ನಾವು ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ಹೇಳಲಿಲ್ಲ.

ಒಡಲಾಳ

ಸುರೇಂದ್ರ ಪೈ, ಭಟ್ಕಳ

ನಾನು ಸರಕಾರಿ ಶಾಲೆಯ ಕಲಿತ ವಿದ್ಯಾರ್ಥಿ. ನಾನೊಬ್ಬನೇ ಅಲ್ಲ, ನನ್ನಂತಹ ಲಕ್ಷಾಂತರ ಜನರು ಸರಕಾರಿ ಶಾಲೆಯ ಕಲಿತಿದ್ದಾರೆ. ನಮಗೆಲ್ಲರಿಗೂ ನಾವು ಕಲಿತ ಸರಕಾರಿ ಶಾಲೆ ಕುರಿತು ಪ್ರೀತಿ, ಗೌರವ ಇಂದಿಗೂ ಇದೆ. ಅದ್ಯಾವ ಖಾಸಗೀಕರಣದ ಗಾಳಿ ಬಿಸಿತೋ ತಿಳಿಯೇ ಯಾವ ಸರಕಾರಿ ಶಾಲೆಗಳು ನಮ್ಮೆಲ್ಲರ ಭವಿಷ್ಯವನ್ನು ರೂಪಿಸಿದ್ದವೋ ಸರಕಾರದ ನಿರ್ಲಕ್ಷ್ಯದ ಕಾರಣ ಮೂಲೆಗುಂಪಾದವು.

ಖಾಸಗೀಕರಣದ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ತೋರಿದ ಉದ್ದೇಶಿತ, ಯೋಜಿತ ನಿರಾಸಕ್ತಿಯ ಕಾರಣ ಸರಕಾರಿ ಶಾಲೆ ಎಂದರೆ ಅದು ಬಡ ಮಕ್ಕಳ ಶಾಲೆ, ದಡ್ಡರು ಹಾಗೂ ಕಲಿಕೆಯಲ್ಲಿ ಹಿಂದುಳಿದವರಿಗಾಗಿ ಇರುವ ಶಾಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು.

ಪ್ರಸುತ್ತ ರಾಜ್ಯ ಶಾಲಾ ಮತ್ತು ಸಾಕ್ಷರತಾ ಇಲಾಖೆಯ ಎಸ್‌ಎಸ್‌ಎಲ್‌ಸಿ-1 ಪರೀಕ್ಷೆಯ ದಾಖಲೆಯ ಶೇ.94.10ರಷ್ಟು ಫಲಿತಾಂಶವು ಪುನಃ ಸರಕಾರಿ ಶಾಲೆಗಳಿಗೆ ಜೀವ ತುಂಬುತ್ತದೆ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಸಚಿವರ ಆತ್ಮವಿಶ್ವಾಸಕ್ಕೆ ದಾಖಲೆಯ ಫಲಿತಾಂಶ ದ ಜತೆಗೆ ಈ ಬಾರಿ ರಾಜ್ಯದಲ್ಲಿ ಒಟ್ಟು 6176 ಶಾಲೆಗಳು ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿದ್ದು ಅವುಗಳ ಪೈಕಿ ಶೇ.50ರಷ್ಟು ಅಂದರೆ 2393 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ.

ಜತೆಗೆ ಈ ಬಾರಿ ಯಾವ ಸರಕಾರಿ ಶಾಲೆಯು ಸಹ ಶೂನ್ಯ ಫಲಿತಾಂಶ ದಾಖಲಿಸಿಲ್ಲ. ಈ ಕಾರಣಗಳಿಂದಾಗಿ ಪಾಲಕರು ಖಂಡಿತವಾಗಿಯೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡುತ್ತಾರೆ ಎಂಬ ಭರವಸೆ ಸಚಿವರದ್ದು. ಮುಂದುವರಿದು ನಮ್ಮ ಸರಕಾರ ಮಕ್ಕಳಿಗೆ ಮೊಟ್ಟೆ, ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ, ಹಾಲು, ಬಾಳೆ ಹಣ್ಣು ನೀಡುತ್ತದೆ. ಜತೆಗೆ ಈ ಬಾರಿಯಿಂದ ಸರಕಾರಿ ಶಾಲೆಯಲ್ಲಿ ಅದರಲ್ಲೂ ರಾಜ್ಯ ಪಠ್ಯಕ್ರಮ ಶಾಲೆಗಳ ಮಕ್ಕಳು ಶೇ.100 ಫಲಿತಾಂಶವನ್ನು ದಾಖಲಿಸುವುದು ಗ್ಯಾರಂಟಿ. ಹಾಗಾಗಿ ಪಾಲಕರು ಸರಕಾರಿ ಶಾಲೆ ಬಿಟ್ಟು ಸಿಬಿಎಸ್‌ಇ ಅಥವಾ ಖಾಸಗಿ ಶಾಲೆಗಳತ್ತ ಹೋಗುವು ದಿಲ್ಲ ಎಂಬ ಆತ್ಮವಿಶ್ವಾಸದ ವ್ಯಕ್ತಪಡಿಸಿದ್ದಾರೆ. ಜತೆಗೆ ನೂರರಷ್ಟು ಫಲಿತಾಂಶ ಪಡೆದ ಸರಕಾರಿ ಶಾಲೆಯ ಮುಂದೆ ಹೋಲ್ಡಿಂಗ್ಸ್ ಹಾಕಲು ಆದೇಶ ನೀಡಿದ್ದೇವೆ. ‌

ವಾರಕ್ಕೊಂದು ಹೊಸ ಹೊಸ ಯೋಜನೆಯನ್ನು ಘೋಷಣೆ ಮಾಡುತ್ತೇವೆ, ನಿರೀಕ್ಷೆಯಿರಲಿ ಎಂದಿದ್ದಾರೆ. ಜತೆಗೆ ‘8 ಶೈಕ್ಷಣಿಕ ಗ್ಯಾರಂಟಿ’ ಭರವಸೆಯನ್ನು ಮುಂದಿನ ಶಿಕ್ಷಣ ವರ್ಷ ದಿಂದಲೇ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಶ್ರಮವಹಿಸುತ್ತಿರುವ ಸಚಿವರ ಯೋಜನೆ ಯಶಸ್ಸು ಕಾಣಲಿ.

ಶಿಕ್ಷಣ ಸಚಿವರ ಈ ಆತ್ಮವಿಶ್ವಾಸದ ಮಾತುಗಳು ನಿಜವಾಗಿಯೂ ಈ ಸಲ ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ ಮಾಡುತ್ತವೆಯೇ ಎಂಬುದೇ ಯಕ್ಷ ಪ್ರಶ್ನೆ. ಸರಕಾರಿ ಶಾಲೆಯು 80-90ರ ದಶಕದಂತೆ ಮರು ಜೀವ ಪಡೆಯಬೇಕೆಂಬ ಕನಸು ಎಲ್ಲರಲ್ಲೂ ಇದೆ. ಆದರೆ ಕಳೆದ ಒಂದು ವಾರದಲ್ಲಿ ಶಿಕ್ಷಣ ಸಚಿವರು ನಡೆಸಿದ ಎಲ್ಲ ಪತ್ರಿಕಾಗೋಷ್ಠಿ ಯನ್ನೊಮ್ಮೆ ಗಮನವಿಟ್ಟು ಕೇಳಿಸಿಕೊಳ್ಳಿ.

ನಾವು ಮೊಟ್ಟೆ ನೀಡುತ್ತೇವೆ, ಬಟ್ಟೆ ಕೊಡುತ್ತೇವೆ, ಶೇ.100 ಫಲಿತಾಂಶ ಬರುವ ಹಾಗೇ ಮಾಡುತ್ತೇವೆ ಎಂಬಿತ್ಯಾದಿ ಅಂಶಗಳನ್ನು ಮಾತ್ರ ಪುನಃ ಪುನಃ ಹೇಳಿದರೆ ಹೊರತು ಎಲ್ಲೂ ಸಹ ‘ಕೇವಲ ಅಂಕಗಳು ಮಕ್ಕಳ ಭವಿಷ್ಯ ರೂಪಿಸುವುದಿಲ್ಲ, ಅಂಕಗಳ ಹೊರತಾಗಿಯೂ ಜ್ಞಾನ ಮುಖ್ಯ, ಕೌಶಲ ಮುಖ್ಯ, ನಮ್ಮ ಸರಕಾರ ಅಂಕಗಳ ಹಿಂದೆ ಬಿದ್ದಿಲ್ಲ, ಬದಲಾಗಿ ನಾವು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇವೆ’ ಎಂದು ಹೇಳಲಿಲ್ಲ.

ಸಚಿವರು ಹುರುಪಿನಲ್ಲಿ ಘೋಷಣೆ ಮಾಡಿರುವ 8 ಶೈಕ್ಷಣಿಕ ಗ್ಯಾರಂಟಿಗಳು ಮೊಣಕೈಗೆ ತುಪ್ಪ ಸವರಿದ ಹಾಗಿದೆ. ‘ಶಿಕ್ಷಕರ ಕೊರತೆ ನೀಗಿಸುವುದು (ಕಲೆ, ದೈಹಿಕ ಶಿಕ್ಷಕ), ಡಿಜಿಟಲ್ ಶಿಕ್ಷಣ, ಶಿಕ್ಷಕರ ಅನ್ಯಕೆಲಸದ ಬಾರ ಇಳಿಕೆ’ ಈ ಮೂರು ಅಂಶಗಳು ಈ ವರ್ಷವೇ ಪೂರೈಸಲು ಅಸಾಧ್ಯ.

ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಸಮಯಬೇಕು. ಡಿಜಿಟಲ್ ಶಿಕ್ಷಣ ನೀಡಬೇಕಾದರೆ ಮೊದಲು ಸುವ್ಯವಸ್ಥಿತ ಕೊಠಡಿಗಳು ಬೇಕು. ಶಿಕ್ಷಕರಿಗೆ ಸೂಕ್ತ ತರಬೇತಿ ಬೇಕು. ಇವ್ಯಾವುದನ್ನು ಒಂದೂವರೆ ತಿಂಗಳಲ್ಲಿ ಮಾಡಲು ಆಗದು. ಹೀಗಿರುವಾಗ ಶಾಲೆಯ ಮುಂದೆ 8 ಗ್ಯಾರಂಟಿ ಶಿಕ್ಷಣದ ಹೋಲ್ಡಿಂಗ್ ಹಾಕಿ ಜನರನ್ನು ಸಾಽಸುವುದಾದರೂ ಏನು? ಇಂದಿನ ಮಕ್ಕಳಿಗೆ ಇದರೊಟ್ಟಿಗೆ ಸರಕಾರಿ ಶಾಲೆಯಲ್ಲೂ 6ನೇ ತರಗತಿಯಿಂದಲೇ ನೀಟ್, ಸಿಇಟಿ, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಫೌಂಡೇಶನ್ ಕೋರ್ಸ್ ಪ್ರಾರಂಭಿಸಬೇಕಿದೆ.

ಅದಕ್ಕಾಗಿ ವಿಶೇಷ ನುರಿತ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ತನ್ಮೂಲಕ ಪ್ರಗತಿಪರ ಹಾಗೂ ಸಮಕಾಲೀನ ಶಿಕ್ಷಣಕ್ಕೆ ಒತ್ತು ನೀಡಬೇಕು. ಆದರೆ ಶಿಕ್ಷಣ ಸಚಿವರು ಇಂತಹ ಯಾವೊಂದು ಅಂಶವನ್ನು ಹೇಳಲಿಲ್ಲ. ಮುಖ್ಯವಾಗಿ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಮಕ್ಕಳು ಫೇಲ್ ಆಗುತ್ತಿದ್ದವರು ಪ್ರಸುತ್ತ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರಿಗೆ ಅನ್ಯ ಕೆಲಸದ ಒತ್ತಡಗಳ ಹೇರಿಕೆಯ ನಡುವೆ ದಾಖಲೆಯ ಫಲಿತಾಂಶ ಹೇಗೆ ಸಾಧ್ಯವಾಯಿತು ಎಂದು ಯಾರು ಕೇಳಲಿಲ್ಲ, ಅವರು ಹೇಳಲಿಲ್ಲ.!

ಈ ಬಾರಿಯ ಬಜೆಟ್‌ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ನಿರ್ವಹಣೆ ಮತ್ತು ಅನುದಾನ ಕ್ಕಾಗಿ ರು.15,693 ಕೋಟಿ ಮೀಸಲಿಡಲಾಗಿದೆ. ಒಟ್ಟಾರೆಯಾಗಿ, ರಾಜ್ಯದ ಒಟ್ಟು ಬಜೆಟ್ ವೆಚ್ಚದಲ್ಲಿ ಸುಮಾರು ಶೇ.10.7ರಿಂದ 11ರಷ್ಟು ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ.

ಹೀಗಿರುವಾಗ 8 ಗ್ಯಾರಂಟಿಗಳ ಅನುಷ್ಠಾನ ಹೇಗೆ ಸಾಧ್ಯ? ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳು ಹೆಚ್ಚುತ್ತಲೇ ಇವೆ. ನಮಗೆ ಸರಕಾರಿ ಕೆಲಸ ಬೇಕು, ಸರಕಾರಿ ಯೋಜನೆಯ ಲಾಭಬೇಕು. ಆದರೆ ನಮ್ಮ ಮಕ್ಕಳು ಮಾತ್ರ ಸರಕಾರಿ ಶಾಲೆಯಲ್ಲಿ ಕಲಿಯಬಾರದು ಎಂಬ ಮನಸ್ಥಿತಿ ಎಲ್ಲರದ್ದು.

ಇಂದಿನ ಶಿಕ್ಷಣ ಸಚಿವರಿಂದ ಹಿಡಿದು ಕನ್ನಡಪರ ಹೋರಾಟ ಮಾಡುವ, ಸರಕಾರಿ ಶಾಲೆಯ ಉಳಿಯಬೇಕು ಎಂದು ಅಭಿಯಾನ ಮಾಡುವ ಎಲ್ಲರ ಮಕ್ಕಳು ಕಲಿತದ್ದು, ಕಲಿಯುತ್ತಿರುವುದು ಮಾತ್ರ ಖಾಸಗಿ ಶಾಲೆಯಲ್ಲಿ, ಅದು ಸಹ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಯಲ್ಲಿ.

ಕಾರಣ ಸರಕಾರಿ ಶಾಲೆಯ ಆಡಳಿತ ವ್ಯವಸ್ಥೆಯ ಮರ್ಮ ಅವರಿಗೆಲ್ಲ ಗೊತ್ತು. ಎಲ್ಲದಕ್ಕಿಂತಲೂ ತಮಾಷೆಯ ಸಂಗತಿಯೆಂದರೆ ರಾಜ್ಯದ ಬಹುಪಾಲು ದೊಡ್ಡ ಮಟ್ಟದ ಹೆಸರು ಮಾಡಿದ ಖಾಸಗಿ ಶಾಲೆಯನ್ನು ನಮ್ಮ ರಾಜ್ಯದ ಎಲ್ಲ ಪಕ್ಷದ ರಾಜಕಾರಣಿಗಳೇ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆ ಒದಗಿಸಿ ಲಕ್ಷಾಂತರ ರುಪಾಯಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಹಾಗಿದ್ದರೆ ಇವರಿಗೆಲ್ಲ ಇಂದಿನ ಕಾಲಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಎಲ್ಲಿಂದ ಸಂಗ್ರಹಿಸಬೇಕು? ಆಡಳಿತ ವ್ಯವಸ್ಥೆ ಹೇಗಿರಬೇಕು? ಎಂಬಿತ್ಯಾದಿ ಅಂಶಗಳ ಬಗ್ಗೆ ಜ್ಞಾನವಿದೆ ಎಂದಾಯಿತು. ಇಷ್ಟೇಲ್ಲ ಗೊತ್ತಿದ್ದರೂ ಸಹ ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ನಿಲ್ಲಿಸಿದ್ದಾರಲ್ಲ ಏನು ಹೇಳೋಣ? ಪಾಸ್ ಅಂಕ ಕಡಿಮೆ ಮಾಡಿ ಬಹಳ ಬುದ್ಧಿವಂತಿಕೆಯಿಂದ ದಾಖಲೆಯ ಫಲಿತಾಂಶ ಪಡೆದು, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭ್ರಮೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಇದ್ದಂತಿದೆ.

ಮರು ಮೌಲ್ಯಮಾಪನದಲ್ಲಿ ಈ ಬಾರಿ ದಾಖಲೆಯ ತಪ್ಪುಗಳಾಗಿರುವುದು, ಕಳಪೆ ಮೌಲ್ಯ ಮಾಪನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸಿಬಿಎಸ್‌ಇ ಪಠ್ಯಕ್ರಮವನ್ನೊಮ್ಮೆ ನೋಡಿ 2026-27 ರಿಂದ 2030-31ನೇ ಸಾಲಿನ 5 ವರ್ಷಗಳ ಪಠ್ಯಕ್ರಮ, ಪರೀಕ್ಷಾ ನೀತಿ, ಬೋಧಮಾ ಪದ್ಧತಿಯ ಚೌಕಟ್ಟನ್ನು ಒದಗಿಸಿದ್ದಾರೆ.

ನಾವಿಲ್ಲಿ ನಮ್ಮ ಮಕ್ಕಳಿಗೆ ಹಿಂದಿ ವಿಷಯ ಬೇಡ, ಐದು ವಿಷಯ ಸಾಕು, 6 ವಿಷಯ ಮಕ್ಕಳಿಗೆ ಕಲಿಯಲು ಭಾರವಾಗುತ್ತದೆ ಎಂದು ಮಕ್ಕಳ ಸೃಜನಶೀಲತೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜಕೀಯ ಹಿತಾಸಕ್ತಿಗಾಗಿ ಮಾಡುತ್ತಿದ್ದೇವೆ. ಅದುವೇ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಇನ್ನು ಮುಂದೆ ಹಂತ ಹಂತವಾಗಿ 9 ಕಡ್ಡಾಯ ವಿಷಯವನ್ನು ಬೋಧಿಸ ಲಾಗುತ್ತದೆ.

ಅದರಲ್ಲಿ ಶೇ.50 ರಷ್ಟು ಪ್ರಾಯೋಗಿಕ ಶಿಕ್ಷಣವು ಅಡಗಿದೆ. ಅದಕ್ಕೆ ತಕ್ಕಂತೆ ಶಾಲೆಗಳಲ್ಲಿ ಸ್ಕೀಲ್ ಲ್ಯಾಬ್ ಸಿದ್ಧವಾಗುತ್ತಿದೆ. ಆದರೆ ನಮ್ಮಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ನೀಡಿ ಎಂದು ಮುಖ್ಯ ಶಿಕ್ಷಕರು ಹೋರಾಟ ಮಾಡಬೇಕಿದೆ. ಹೌದು ಸ್ವಾಮಿ ನೀವು ಮೊಟ್ಟೆ, ಬಟ್ಟೆ ಕೋಡ್ತೀರಿ ಸರಿ. ಮಕ್ಕಳನ್ನು ಎಸ್‌ಎಸ್‌ಎಲ್‌ಸಿ ಪಾಸ್ ಕೂಡ ಮಾಡಿ ಕೈ ಬಿಡುತ್ತೀರಿ ಸರಿ. ಅಲ್ಲಿಗೆ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣದ ಕನಸು ಸಾಕಾರವಾಗುತ್ತೆ ಒಪ್ಪೋಣ.

ಆದರೆ ಜ್ಞಾನವಿಲ್ಲದೇ ಮಕ್ಕಳು ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು. ಇಂದು ಎಐ ಸಾವಿರ ಜನರ ಕೆಲಸ ಮಾಡಿ ಮುಗಿಸುತ್ತಿದೆ. ನೀವು ಕೊಟ್ಟ ಮೊಟ್ಟೆ, ಬಟ್ಟೆ ಕ್ಷಣಿಕದ ಹಸಿವನ್ನು ನೀಗಿಸಬಹುದು. ಆದರೆ ಜೀವನದ ಹಸಿವನ್ನು, ನಿರುದ್ಯೋಗ ಸಮಸ್ಯೆಯನ್ನು ನೀಗಿಸುವವರು ಯಾರು?ಖಾಸಗೀಕರಣಕ್ಕೆ ಆದ್ಯತೆ ನೀಡುವ ಸರಕಾರ, ಭಾಷೆಯ ವಿಷಯ ದಲ್ಲಿ ಪರೀಕ್ಷಾ ಕೇಂದ್ರಕ್ಕೆ ದಾಳಿ ನಡೆಸುವ ಕೆಳಮಟ್ಟದ ಬುದ್ದಿ ಹೊಂದಿರುವ ಸಂಘಟನೆ ಗಳು 1-5ನೇ ತರಗತಿಯ ಶಿಕ್ಷಣ ಕಡ್ಡಾಯ ವಾಗಿ ಸರಕಾರಿ ಶಾಲೆಯಲ್ಲಿ ದೊರಕುವಂತಾಗ ಬೇಕು ಎಂದು ಒಮ್ಮತದ ಹೋರಾಟವನ್ನೇಕೆ ಮಾಡುವುದಿಲ್ಲ.

ಭಾರತದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಅವುಗಳಿಗೆ ನೀಡುವ ಪ್ರಾಮುಖ್ಯತೆಯ ವಿಷಯಕ್ಕೆ ಬಂದರೆ, ಪ್ರಮುಖವಾಗಿ ಕೇರಳ,ದೆಹಲಿ ರಾಜ್ಯಗಳು ಮುಂಚೂಣಿಯಲ್ಲಿವೆ. ಶೇ.20-25ರಷ್ಟು ಬಜೆಟ್‌ನಲ್ಲಿ ಅನುದಾನ ಹಂಚಿಕೆ, ಹೈಟೆಕ್ ಶಾಲೆಗಳು, ಶಿಕ್ಷಕರ ನೇಮಕಾತಿ, ಸಾರ್ವಜನಿಕ ಸಹಭಾಗಿತ್ವ, ಸ್ವಿಮ್ಮಿಂಗ್ ಪೂಲ್, ಅತ್ಯಾಧುನಿಕ ಲ್ಯಾಬ್ ಮತ್ತು ಕ್ರೀಡಾಂಗ‌ಣ ಗಳಂತಹ ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಸೌಲಭ್ಯಗಳನ್ನು ಸರಕಾರಿ ಶಾಲೆಗಳಲ್ಲಿ ಒದಗಿಸಲಾಗಿದೆ.

ಕೇರಳದಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ‘ಹ್ಯಾಪಿನೆಸ್ ಕ್ಲಾಸ್’ ಮತ್ತು ಉದ್ಯಮ ಶೀಲತೆ ಬೆಳೆಸಲು ‘ಬಿಸಿನೆಸ್ ಬ್ಲಾಸ್ಟರ್ಸ್’ ನಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಶಿಕ್ಷಕರಿಗೆ ನಿರಂತರವಾಗಿ ಆಧುನಿಕ ಬೋಧನಾ ಪದ್ಧತಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಕೇವಲ ಅಂಕಗಳಿಗೆ ಆದ್ಯತೆ ನೀಡದೆ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾದ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇಂತಹ ಬದಲಾವಣೆಯ ಕಾರಣ ದಿಂದಲೇ ಒಟ್ಟು ದಾಖಲಾತಿಯ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಶೇಕಡಾವಾರು ಪ್ರಮಾಣದಲ್ಲಿ ಹಿಮಾಚಲ ಪ್ರದೇಶದಂತಹ ಈಶಾನ್ಯ ರಾಜ್ಯಗಳು ಮುಂದಿವೆ.

ಇವೆಲ್ಲವೂ ಸಾಧ್ಯವಾಗಿದ್ದು ಸರಕಾರದ ಇಚ್ಛಾಶಕ್ತಿಯಿಂದಲೇ ಹೊರತು, ರಾಜಕೀಯ ಹಿತಾಶಕ್ತಿಯ ನೆಲೆಯಿಂದಲ್ಲ. ಫಿನ್ಲ್ಯಾಂಡ್, ಅಮೆರಿಕ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ 90ರಷ್ಟು ಸರಕಾರಿ ಶಾಲೆ ಇದ್ದರೆ ಬೆರಳೆಣಿಕೆಯಷ್ಟು ಖಾಸಗಿ ಶಾಲೆ. ಇಲ್ಲಿಂದ ಅಲ್ಲಿ ನೆಲೆಸಿ ದವರು ಸರಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಿದರೂ ಸಹ ಅವರಿಗೆ ಗುಣಮಟ್ಟ ದಲ್ಲಿ ವ್ಯತ್ಯಾಸ ಕಾಣುತ್ತಿಲ್ಲ.

ನಮ್ಮಲ್ಲಿ ಖಾಸಗಿ ಶಾಲೆ 90ರಷ್ಟಿದ್ದರೂ ಎಡೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬುದು ಹೇಳಲಾಗದು. ಇನ್ನೂ ತಡವಾಗಿಲ್ಲ. ಬದಲಾವಣೆ ಇಂದಿಗೂ ಸಾಧ್ಯವಿದೆ. ಮೊದಲು ರಾಜಕೀಯ ನಾಯಕರು, ಸರಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯ ವಿದ್ಯಾಭ್ಯಾಸ ನೀಡಲು ಮುಂದಾಗಿ ಎಲ್ಲರಿಗೂ ಮಾದರಿಯಾಗಲಿ. ಇದು ಸಾಧ್ಯವೇ?