ಗಂಟಾಘೋಷ
ನಾನು ಆಗ ಸಿಂಡಿಕೇಟ್ ಬ್ಯಾಂಕ್‌ನ ಉದ್ಯೋಗಿಯಾಗಿದ್ದೆ. ಆಫೀಸಿನಲ್ಲಿ, ನೆರೆಹೊರೆಯಲ್ಲಿ ಗುಸು ಗುಸು ಸುದ್ಧಿ ಹರಿದಾಡುತ್ತಿತ್ತು. ನ್ಯಾಯಾಲಯದ ತೀರ್ಪು ಇಂದಿರಾಗಾಂಧಿ ವಿರುದ್ಧ ಬಂದಿದ್ದರಿಂದ, ದೇಶದಲ್ಲಿ ಏನೋ ಒಂದು ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಜೋರಾಗಿಯೇ ಹರಿದಾಡುತ್ತಿತ್ತು ಎಂದು ತಮ್ಮ ನೆನಪಿನಬುತ್ತಿ ಬಿಚ್ಚಿಡುತ್ತ ಹೋದರು ಹಿರಿಯ ಜೀವ ಮಧುಕರ ನಾಯಕ್. ಅಪ್ರತಿಮ ದೇಶಪ್ರೇಮಿ, ಜನಸೇವೆಗೆಂದೇ ಇಡೀ ಜೀವನವನ್ನು ಮುಡಿಪಾಗಿಟ್ಟ ಸೇವಾಜೀವಿ!
ಈ ದೇಶಕಂಡ ಅತ್ಯಂತ ಕರಾಳದಿನವೆಂದರೆ ಅದು, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ. ನವ ಯುವಕರಿಂದ ಹಿಡಿದು ಇಳಿವಯಸ್ಸಿನವರೂ ಈ ಒಂದು ಕರಾಳತೆಗೆ ನಲುಗಿ ಹೋದರು. ಅಮಾಯಕರು ಜೀವತೆತ್ತರು, ದೇಶದ ತುಂಬೆಲ್ಲ ಲಕ್ಷೋಪಲಕ್ಷ ಜನರ ಬಂಧನವಾಯಿತು. ದೇಶದ ಚಿಂತಕರನ್ನು, ಹೋರಾಟಗಾರರನ್ನು, ರಾಜಕಾರಣಿಗಳನ್ನು ಸೆರೆಮನೆಗೆ ದೂಡಲಾಯಿತು.
ಕೊನೆಗೆ ಪತ್ರಿಕೋದ್ಯಮವನ್ನೂ ಹತ್ತಿಕ್ಕಲಾಯಿತು. ರಾಷ್ಟ್ರಮಟ್ಟದಲ್ಲಿ ಜಯಪ್ರಕಾಶ ನಾರಾಯಣ, ವಾಜಪೇಯಿ, ಅಡ್ವಾಣಿ, ಜಾರ್ಜ್ ಫೆರ್ನಾಂಡಿಸ್, ದಂಡವತೆ ಸೇರಿದಂತೆ ಮುಂಚೂಣಿ ನಾಯಕರು ತತಕ್ಷಣವೇ ಬಂಧಿಸಲ್ಪಟ್ಟರು. ಕರ್ನಾಟಕದಲ್ಲಿ ಭಾವುರಾವ್ ದೇಶಪಾಂಡೆ, ಮೈಕಲ್ ಫೆರ್ನಾಂಡಿಸ್, ಲಾರೆ ಫೆರ್ನಾಂಡಿಸ್, ಜೆ.ಎಚ್.ಪಟೇಲ, ಎಚ್.ಡಿ.ದೇವೇಗೌಡರಂತಹ ನಾಯಕರು ಬಂಧಿಸಲ್ಪಟ್ಟರು.

ಆಗ, ಜನಸಾಮಾನ್ಯರು, ವಿದ್ಯಾರ್ಥಿಗಳು ಮುಂಚೂಣಿ ಹೋರಾಟವನ್ನು ಕೈಗೆತ್ತಿಕೊಂಡರು. ಇಂತಹ ಸಮಯದಲ್ಲಿ ನನ್ನಂತಹ ಅದೆಷ್ಟೋ ತರುಣರು, ರಾಷ್ಟ್ರೀಯ ಸ್ವಯಂಸೇವಕ ಕಾರ್ಯಕರ್ತರು ಗುಪ್ತವಾಗಿ ವಿವಿಧ ರೂಪದ ಚಳುವಳಿಯಲ್ಲಿ ಪಾಲ್ಗೊಂಡಿದ್ದೆವು. ಜೂನ್ 25ರಂದು ತುರ್ತುಪರಿಸ್ಥಿತಿ ಹೇರಿದ ಬಳಿಕ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆಂದು ತಿಳಿದಿದ್ದರಿಂದ, ಕಾರ್ಯಕರ್ತರು ಸೇರಿದಂತೆ ನಾವೆಲ್ಲ ಭೂಗತರಾಗಿದ್ದೆವು.
ನಮ್ಮ ಕೆಲ ಹಿರಿಯರನ್ನು ಭೇಟಿ ಮಾಡಲು ನಾಯಕರುಗಳು ಊರಿಗೆ ಬರುತ್ತಿದ್ದುದರಿಂದ, ಅವರನ್ನು ಗುಪ್ತವಾಗಿ ಕರೆದುಕೊಂಡುಬರುವ ಮತ್ತು ಬೇರೊಂದು ಊರಿಗೆ ಸುರಕ್ಷಿತವಾಗಿ ಕಳುಹಿಸಿ ಕೊಡುವ ಹೊಣೆಯೂ ನನ್ನದಾಗಿತ್ತು. ಇದೆಲ್ಲವನ್ನು ಯಶಸ್ವಿಯಾಗಿ ಮಾಡುತ್ತಾ ಬರುತ್ತಿದ್ದೆ. ಇದೆಲ್ಲವೂ ಪೊಲೀಸಿನವರಿಗೆ ತಿಳಿಯಿತು. ನನ್ನ ಮೇಲೆ ತೀವ್ರ ನಿಗಾ ಇಡಲು ಶುರು ಮಾಡಿದರು. ರಾತ್ರಿಯಲ್ಲಿ ಎಲ್ಲಾ ಕೆಲಸ ಮಾಡುವುದು, ಊಟದ ವ್ಯವಸ್ಥೆ, ಹೋರಾಟಗಾರರಿಗೆ ವಸತಿ, ಉಳಿದು ಕೊಳ್ಳಲು ಜಾಗ, ಅವರ ಗುಪ್ತಸಭೆಯ ಭಾಷಣಗಳನ್ನು ಏರ್ಪಡಿಸುವುದು ಇತ್ಯಾದಿ ಇರುತ್ತಿತ್ತು. ಹಗಲಿನಲ್ಲಿ ಎಂದಿನಂತೆ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಿದ್ದೆ ಎಂದು ತಮ್ಮ ಹೋರಾಟದ ಕಿಚ್ಚನ್ನು ಬಿಚ್ಚಿಟ್ಟರು ಸಂಘದ ಕಾರ್ಯಕರ್ತರ ಅಕ್ಕರೆಯ ಅಣ್ಣ, ಮಧುಕರಣ್ಣ!
ನಿರಂಕುಶಾಡಳಿತ ಹೇರಿಕೆ ವಿರೋಧಿಸಿ, ತಡರಾತ್ರಿಯಲ್ಲಿ ಹೊರಟು, ಪೇಂಟಿನಲ್ಲಿ ಗೋಡೆ ಬರಹ ಗಳನ್ನು ಬರೆಯುವುದು, ಕೈಬರಹದ ಹಾಳೆಗಳನ್ನು ಬಹಿರಂಗವಾಗಿ ದೊಡ್ಡದೊಡ್ಡ ಗೋಡೆಗಳ ಮೇಲೆ ಅಂಟಿಸುವುದು, ಸರಕಾರಿ ಕಚೇರಿ, ಕಟ್ಟಡಗಳ ಗೋಡೆಗೆ, ಜಿಲ್ಲಾಧಿಕಾರಿಗಳ, ಪೊಲೀಸ್ ಅಧಿಕಾರಿಗಳ ಕಚೇರಿಗಳ ಕಾಂಪೌಂಡು, ಹೊರಗೋಡೆಗಳ ಮೇಲೆ ತೀವ್ರವಾಗಿ ವಿರೋಧಿಸಿ, ಕಠಿಣ ಶಬ್ಧಗಳಲ್ಲಿ ಬರೆದಿರುತ್ತಿದ್ದೆವು.
ಇದನ್ನೂ ಓದಿ: Gururaj Gantihole Column: ಯೋಧನನ್ನೂ ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು !
ಇದೆಲ್ಲ ಮಂಗಳೂರು ಆಡಳಿತಕ್ಕೆ, ಪೊಲೀಸಿನವರಿಗೆ ದೊಡ್ಡ ತಲೆಬಿಸಿಗೆ ಕಾರಣವಾಯಿತು. ಎರಡು ಕಡೆ ಬಹಳ ಗಂಭೀರ ಪರಿಸ್ಥಿತಿಯಲ್ಲಿ ಪೊಲೀಸರ ಕೈಗೆ ಸಿಕ್ಕುವ ಅವಕಾಶವಿತ್ತು, ಆದರೂ ನಾನು ಅವರಿಗೆ ಸಿಕ್ಕಲಿಲ್ಲ. ನಾವೆಲ್ಲ ಆವಾಗ ದೇಶದ ಕ್ರಾಂತಿಕಾರಿಗಳನ್ನು ಓದಿಕೊಂಡಿದ್ದೇವಲ್ಲ. ಹಾಗಾಗಿ, ನಾವೂ ಅವರನ್ನು ನಮ್ಮ ಮೇಲೆ ಆಹ್ವಾನಿಸಿಕೊಂಡಂತೆ ಕಾಂಪೌಂಡುಗಳನ್ನು ಜಿಗಿಯುವುದೋ, ಆಳದ ಕಂದಕಕ್ಕೆ ಹಾರುವುದೋ, ಕಲ್ಲುಮುಳ್ಳುಗಳನ್ನು ಲೆಕ್ಕಿಸಿದೆ ಪರಾರಿಯಾಗುವುದೋ ಮಾಡುತ್ತಿದ್ದೆವು.
ಸ್ಥಳೀಯ ಪೊಲೀಸರು ನಮ್ಮ ಹಿಂದೆ ನಿರಂತರ ಬೆನ್ನುಬಿದ್ದ ಕಾರಣ, ನಾವು ನಮ್ಮ ಕಾರ್ಯ ಚಟುವಟಿಕೆಯನ್ನು ಬದಲಾಯಿಸಿಕೊಂಡೆವು. ಭೂಗತವಾಗುತ್ತಿದ್ದ ಜಾಗಗಳನ್ನು ಆಗಾಗ ಬದಲಾ ಯಿಸುತ್ತಿದ್ದೆವು. ಇದೇ ಸಂದರ್ಭದಲ್ಲಿ ಕಹಳೆ ಕೈಬರಹ ಪತ್ರಿಕೆ ಹೊರಬರುತ್ತಿತ್ತು. ಇಡೀ ರಾತ್ರಿ ಕುಳಿತು ಸುದ್ಧಿಮೂಲ, ರೆಕಾರ್ಡ್‌ಗಳನ್ನು ಅಧ್ಯಯನ ಮಾಡಿ, ವಿಷಯ ಜೋಡಿಸಿ, ಪತ್ರಿಕೆಯನ್ನು ಕಾಪಿಗಳನ್ನಾಗಿಸುವ ಕೆಲಸವನ್ನೂ ಮಾಡುತ್ತಿದ್ದೆವು.
ಡಾ.ಮಾಲ ಭಂಡಾರ ಮನೆಯಲ್ಲಿ ಎಲ್ಲ ಲೈಟುಗಳನ್ನು ಆರಿಸಿ, ಮಧ್ಯ ಕೋಣೆಯಲ್ಲಿ ಕುಳಿತು ಅಚ್ಚುಬರಹದ ಕೆಲಸಗಳನ್ನು ಮಾಡುತ್ತಿದ್ದೆವು. ಇದು ಹೇಗೋ ಪೊಲೀಸಿನವರಿಗೆ ಗೊತ್ತಾಗಿ, ನನಗೆ ನೇರ ಎಚ್ಚರಿಕೆ ಕೊಟ್ಟು, ‘ನೋಡಿ ಮಧುಕರ್, ಇನ್ನೊಂದು ಬಾರಿ ನಿಮ್ಮ ಹೆಸರು ಯಾವುದರದ್ರೂ ಬಂದರೆ, ನಿಮ್ಮನ್ನ ನೇರ ಎತ್ತಾಕೊಂಡು ಹೋಗುತ್ತೇವೆ’ ಎನ್ನುತ್ತಿದ್ದರು. ಕೆಲ ಸ್ಥಳೀಯ ಪೊಲೀಸಿ ನವರಿಗೂ ನಾನು ಪೂರ್ವ ಪರಿಚಯ ಇದ್ದಿದ್ದರಿಂದ, ‘ಒಳ್ಳೆಯ ಜನರಿದ್ದೀರಿ, ಯಾಕೆ ಈ ವ್ಯವಸ್ಥೆಯ ವಿರುದ್ಧ ಹೋಗುವುದು, ಕೆಲಕಾಲ ಸುಮ್ಮನಿದ್ದುಬಿಡಿ’ ಎಂಬ ಕಿವಿಮಾತು ಹೇಳುತ್ತಿದ್ದರು.
ನಾವು ಅಶೋಕ ನಗರದ ಗುಡ್ಡೆ ಮೇಲೆ ಭಾಸ್ಕರ ಅಂಡ್ ಸನ್ಸ್ ಎಂಬ ಸೈಕಲ್ ಶಾಪ್‌ನಲ್ಲಿ ಮುದ್ರಣದ ಕಾರ್ಯವನ್ನು ಸ್ಥಳಾಂತರ ಮಾಡಿದೆವು. ಸೈಕಲ್ ಶಾಪ್ ಆಗಿದ್ದರಿಂದ ನಮ್ಮ ಕಾರ್ಯಕ್ಕೆ ಯಾವ ಅಡೆತಡೆಯು ಇದ್ದಿರಲಿಲ್ಲ. ಜೊತೆಗೆ, ನಮ್ಮ ಕಾರ್ಯಕರ್ತರ ಸೇವೆಯಲ್ಲಿ, ಸಂಘದಡಿಯಲ್ಲಿ ವಿನಮ್ರನಾಗಿ ದುಡಿದಿದ್ದರಿಂದ, ನಾನು ಹೋದಲೆಲ್ಲ ತಮ್ಮ ಮನೆಮಗನಂತೆ ನನ್ನನ್ನು ಕಾಣುತ್ತಿದ್ದರು.
ಕೆಲವೆಡೆ ರಾತ್ರಿ ತಂಗಲು ಗುಪ್ತ ಜಾಗ ಸಿಗುತ್ತಿತ್ತು. ಊಟ ವಸತಿ ಅದ್ಹೇಗೋ ನಡೆದು ಬಿಡುತ್ತಿತ್ತು. ಇನ್ನೊಂದು ವಿಚಾರ ಏನಂದರೆ, ಕಹಳೆ ಪ್ರಿಂಟ್ ಅಂದರೆ ಅದು ಕೈಬರಹದ ನೂರಾರು ಕಾಪಿ ಗಳನ್ನು ಆ ಕ್ಷಣ ಬರೆದು ತಯಾರು ಮಾಡುವುದಾಗಿತ್ತು. ಈ ಒಂದು ಹೋರಾಟದಲ್ಲಿ ನಮಗೊಂದು ಸೂಚನೆಯಿತ್ತು.
ನಿರಂಕುಶ ಆಡಳಿತ ವಿರೋಧಿಸಿ, ಬರೆಯುವ ಪೋಸ್ಟರ್ ಹಾಗೂ ಗೋಡೆ ಬರಹಗಳನ್ನು ಮೊದಲ ಆದ್ಯತೆ ಮೇರೆಗೆ ಡೆಪ್ಯೂಟಿ ಕಲೆಕ್ಟರ್, ಎಸ್.ಪಿ ಕಚೇರಿಗಳು, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ಲೀಡರುಗಳ ಮನೆಗೆ ಮೊದಲು ಹಾಕಲೇಬೇಕಿತ್ತು. ಇಲ್ಲಿ ಒಂದು ಪ್ರಮುಖ ವಿಚಾರ ನಿಮಗೆ ಹೇಳುತ್ತೇನೆ.
ನಾವು ಎಂದೂ, ಎಲ್ಲಿಯೂ ಸುಳ್ಳು ಬರಹ, ಸುಳ್ಳು ಆರೋಪವಾಗಲಿ, ಕೆಟ್ಟನಿಂದನೆ ವಿಚಾರ ವನ್ನಾಗಲಿ ಹಾಕುತ್ತಿರಲಿಲ್ಲ. ಮುಖಕ್ಕೆ ಹೊಡೆದಂತೆ ಸತ್ಯವಿಷಯಗಳನ್ನು ಕೇವಲ ಕೈಬರಹದ ಪ್ರತಿಗಳನ್ನು ತಯಾರಿಸಿ, ಎಲ್ಲಿ ತಲುಪಿಸಿ ನಮ್ಮ ಹೋರಾಟ, ಪ್ರತಿಭಟನೆ ತೋರಬೇಕೋ ಅಲ್ಲಿಗೆ ತಲುಪಿಸಿಯೇ ತೀರುತ್ತಿದ್ದೆವು.
ಇಂತಹ ಒಂದು ವಾಸ್ತವಿಕ ಪ್ರಜ್ಞೆಯ ನೆಲೆಗಟ್ಟಿನಲ್ಲಿ ಮಾಡುತ್ತಿದ್ದ ನಮ್ಮ ಹೋರಾಟದಿಂದ ದೇಶದಲ್ಲಿ, ರಾಜ್ಯದ ಇತರೆ ಭಾಗದಲ್ಲಿ ಏನು ನಡೆಯುತ್ತಿದೆ. ಜನಪರರು ಯಾರು, ಎಲ್ಲಿ, ಏನು ಮಾಡುತ್ತಿದ್ದಾರೆ ಎಂಬೆಲ್ಲ ಮಾಹಿತಿಗಳು ಜನಸಾಮಾನ್ಯರಿಗೆ ಸರಾಗವಾಗಿ ತಲುಪುತ್ತಿದ್ದವು. ಇದು ಪೊಲೀಸರಿಗೆ ಬಹುದೊಡ್ಡ ತಲೆನೋವು ಕೊಟ್ಟಿತು. ಮೇಲಿನವರಿಂದ ‘ಈ ಭೂಗತ ತಂಡವನ್ನು ಹೇಗಾದರೂ ಸರಿಯೇ ಬಂಧಿಸಿ ಜೈಲಿಗಟ್ಟಿ’ ಎಂಬ ಕಠಿಣ ಆಜ್ಞೆ ಪಾಸುಮಾಡಿದ್ದಾರೆಂದು ನಮಗೆ ತಿಳಿಯಿತು.
ಆದರೂ, ನಮ್ಮ ಕೆಲಸವನ್ನು ನಾವು ಜಾಗೃತೆಯಿಂದ ಮಾಡುತ್ತಿದ್ದೆವು. ಇದನ್ನು ನಾವು ರಾಷ್ಟ್ರ ಯಜ್ಞ ಎಂದು ಪರಿಭಾವಿಸಿದ್ದೆವು. ಹಗಲು ಹೊತ್ತಿನಲ್ಲಿ, ಮೈದಾನದಲ್ಲಿ ಪುಟ್ಬಾಲ್ ಆಡುವುದು, ಇತರೆ ಶ್ರಮದ ಚಟುವಟಿಕೆಯಲ್ಲಿ ತೊಡಗುವುದು ಸೇರಿದಂತೆ ದೇಹದಾರೋಗ್ಯದ ಕಡೆಗೂ ನಮ್ಮ ಗಮನವಿರುತ್ತಿತ್ತು.
ಕೆಲವೊಮ್ಮೆ ಸರಿಯಾದ ಊಟ ಸಿಗದೆ, ಊರಿಂದ ಊರಿಗೆ ಹೋಗುವ ಸಂದರ್ಭದಲ್ಲಿ ಕೆಲದಿನಗಳ ವರೆಗೆ ಉಪವಾಸವಿದ್ದ ಸಂದರ್ಭಗಳನ್ನೂ ನಾವು ಎದುರಿಸಿದ್ದೇವೆ. ಇಷ್ಟರಗಲೇ ದೇಶಾದ್ಯಂತ ಸತ್ಯಾಗ್ರಹ ಘೋಷಣೆಯಾಗಿತ್ತು. ಹಾಗಾಗಿ, ನಮ್ಮ ಹಿರಿಯರ ಮುಂದಾಳತ್ವದಲ್ಲಿ ವಿರೋಧಿ ಜಾಥಾ, ಪ್ರತಿಭಟನೆಗಳು ನಗರದಲ್ಲಿ ನಡೆಯುತ್ತಿದ್ದವು. ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದ ನಾಯಕರನ್ನು ಬಂಧಿಸುವುದು ಪೊಲೀಸರ ಕಾರ್ಯಯೋಜನೆಯಾಗಿತ್ತು.
ಅವರ ಎಲ್ಲ ಯೋಜನೆಗಳನ್ನು ತಲೆಕೆಳಗಾಗುವಂತೆ ನಾವು ಪ್ರತಿಯೋಜನೆ ರೂಪಿಸುತ್ತಿದ್ದೆವು. ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾದರೆ, ಅದು ನಿಗದಿತ ಸಮಯಕ್ಕೆ ನಡೆಯುತ್ತಿತ್ತು. ಮುಂದಾಳತ್ವ ವಹಿಸಿದ ನಾಯಕರು ಬಂದು ಸಮಯಕ್ಕೆ ಸರಿಯಾಗಿ ಸಭೆ ಉದ್ದೇಶಿಸಿ ಭಾಷಣ ಮಾಡಿ ಮತ್ತೆ ಭೂಗತರಾಗುವಂತೆ ನಾವು ವ್ಯವಸ್ಥೆ ಮಾಡಿರುತ್ತಿದ್ದೆವು. ಕೆಲವೆಡೆ ಮಾಲಭಂಡಾರ ಅವರು ಭಾಷಣ ಮಾಡುತ್ತಿದ್ದರು, ಮತ್ತೊಂದೆಡೆ ಆನಂದ ಶೆಟ್ಟಿಯವರ ಭಾಷಣವಿರುತ್ತಿತ್ತು.
ಇಷ್ಟೆಲ್ಲ ವ್ಯವಸ್ಥಿತವಾಗಿ ಯಾರು ಕಾರ್ಯಕ್ರಮ ಯೋಜನೆ ಮಾಡುತ್ತಿದಾರೆಯೋ ಅವರನ್ನು ಹಿಡಿಯಲೇಬೇಕೆಂದು ಕಟ್ಟಾeಯಾಯಿತು. ನಾನು ಬ್ಯಾಂಕ್‌ಗೆ ಹೋಗದೆ ಸುಮಾರು 18 ದಿನಕ್ಕೂ ಮೇಲಾಗಿತ್ತು. ಆಗ, ನಾನು ಕದ್ರಿ ವಿಭಾಗದ ಬ್ಯಾಂಕ್‌ನಲ್ಲಿ ನಿಯುಕ್ತನಾಗಿದ್ದೆ. ಮಣಿಪಾಲ್ ಮುಖ್ಯ ಕಚೇರಿಗೆ ದೂರು ಹೋಯಿತು. ಮಣಿಪಾಲ್ ನಿಂದ ನನಗೆ ಕರೆಬಂದು, ಕಚೇರಿಗೆ ಹೋಗಿ ಸಹಿ ಮಾಡಿ ಎಂದಾಗ, ನಾನು ಅದರಂತೆ ಬ್ಯಾಂಕ್‌ಗೆ ಹೋದೆ. ಅಲ್ಲಿ, ಎಸ್‌ಪಿ ಕಚೇರಿಯ ಅಧಿಕಾರಿಯೊಬ್ಬರು ಕುಳಿತಿದ್ದರು.
‘ಬಾ..., ನಿಮ್ಮನ್ನು ಕರೆ ತರಲು ಹೇಳಿದ್ದಾರೆ’ ಎಂದಾಗ, ನಾನು ನಿರಾಕರಿಸಿದೆ. ಬ್ಯಾಂಕಿನ ಮ್ಯಾನೇಜರ್ ಪುತ್ರನ್ ಕೂಡ ಕಳಿಸಲು ನಿರಾಕರಿಸಿದರು. ಆಗ ಬಲವಂತವಾಗಿ ಎಳೆದುಕೊಂಡು ಹೋದರು. ಪುತ್ರನ್, ಮಣಿಪಾಲ್ ಮುಖ್ಯ ಕಚೇರಿಗೆ ಫೋನ್ ಮಾಡಿ ನನ್ನ ಅರೆ ಮಾಡಿದ ವಿಚಾರ ತಿಳಿಸಿದರು.
ಮಣಿಪಾಲ್ ಕಚೇರಿಯಿಂದ ಉಳಿದ ಶಾಖೆಗಳಿಗೆ ಈ ಸುದ್ದಿ ತಲುಪುವಂತೆ ನೋಡಿಕೊಂಡಿದ್ದರಿಂದ, ನನ್ನನ್ನು ಬಂಧಿಸಿದ ಸುದ್ದಿ ಬಹಿರಂಗವಾಯಿತು, ಜನರಿಗೆಲ್ಲ ತಿಳಿಯಿತು. ಇಲ್ಲದಿದ್ದರೆ ಜೀವಾಘಾತ ವಾಗುತ್ತಿತ್ತೇನೋ ಎಂಬ ವಿಚಾರ ಮನಪಟಲದಲ್ಲಿ ಇಂದಿಗೂ ಹರಿದಾಡುತ್ತಿದೆ. ನನ್ನನ್ನು ಪಾಂಡೇಶ್ವರ ಪೊಲೀಸ್ ಸ್ಟೇಷನ್‌ನಲ್ಲಿ ನನ್ನನ್ನು ಅರ್ಧಗಂಟೆ ಕೂರಿಸಲಾಯಿತು. ಮತ್ತೆ ಇಲ್ಲಿಂದ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ, ಬಂದರು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಅಗಲಪಟ್ಟಿ ಬೆಲ್ಟ್‌ನಿಂದ ಹೊಡೆಯುವುದು, ಎರಡೂ ಕೈಗಳ ಮಧ್ಯೆ ಲಾಟಿಯಿಟ್ಟು ಹಗ್ಗದಿಂದ ಕಟ್ಟಿ ಹೊಡೆಯುವುದು ಸೇರಿದಂತೆ ಇಲ್ಲಿ ನನಗೆ ವಿಪರೀತ ಚಿತ್ರಹಿಂಸೆ ಕೊಡಲಾಯಿತು. ಮೇಲೆ ಯಾವ ಗಾಯವೂ ಆಗುತ್ತಿರಲಿಲ್ಲ, ಆದರೆ ದೇಹದೊಳಗೆ ವಿಪರೀತ ನೋವುಗಳು, ಪೆಟ್ಟುಗಳು ಸಹಿಸಲ ಸಾಧ್ಯವಾಗಿದ್ದವು.
ನಾವು ಹಿಂದೆ ಆಯೋಜಿಸಿದ್ದ ಯಶಸ್ವಿ ಪ್ರತಿಭಟನೆ, ಬಹಿರಂಗ ಭಾಷಣ ಕಾರ್ಯಕ್ರಮಗಳು ಇವರಿಗೆ ಇನ್ನಿಲ್ಲದ ಸಿಟ್ಟು ತರಿಸಿತ್ತು. ನಾಳೆ ಮತ್ತು ಇನ್ಮುಂದೆ ಯಾವೆಲ್ಲ ಯೋಜನೆಗಳನ್ನು ಹಾಕಿ ಕೊಂಡಿದ್ದೀರಿ, ಕಹಳೆ ಪತ್ರಿಕೆ ಹಿಂದಿರುವ ಎಲ್ಲರ ಮಾಹಿತಿ, ನಾಯಕರೆಲ್ಲ ಎಲ್ಲಿ ಭೂಗತರಾಗಿದ್ದಾರೆ ಅವರ ಮಾಹಿತಿಕೊಡಿ ಎಂದಾಗ, ನಾನು ಸಂಪೂರ್ಣ ನಿರಾಕರಿಸಿದ್ದೆ.
ಹಾಗಾಗಿ, ಚಿತ್ರಹಿಂಸೆಯ ದಾರಿ ಹಿಡಿದಿದ್ದರು. ಏರೋಪ್ಲೇನ್ ರೀತಿಯಲ್ಲಿ ನನ್ನನ್ನು ಕಟ್ಟಿಹಾಕಿದ ಜಾಗ ಮೇಲಿತ್ತು. ಕೆಳಗೆ ದೊಡ್ಡದಾದ ತಡೆಗೋಡೆ, ಮುಂದೆ ಬಯಲು. ಇವರು ನೋಡಿದರೆ ಪ್ರಾಣ ತೆಗೆಯದೆ ಬಿಡಲಾರರು ಅನಿಸುತ್ತದೆ. ಬದುಕುವ ದಾರಿಯೆಂತು ಎಂದೆಣಿಸುತ್ತಿರುವಾಗಲೇ ಬ್ಯಾಂಕಿನಿಂದ ಅರೆ ಮಾಡಿ ಕರೆದುಕೊಂಡು ಬಂದಿದ್ದ ಅಧಿಕಾರಿ ನನ್ನನ್ನು ಅಚಾನಕ್ಕಾಗಿ ಜೋರಾಗಿ ತಳ್ಳಿದರು. ನಾನು ಅಷ್ಟು ಎತ್ತರದಿಂದ ಬಿz, ಬಲಗಾಲಿಗೆ ಗಂಭೀರ ಪೆಟ್ಟಾಯಿತು.
ಎಡಗಾಲು ಪಾದ ಒಡೆದುಹೋಗಿ ರಕ್ತ ವಿಪರೀತ ಸೋರುತ್ತಿತ್ತು. ಕೂಡಲೇ ನನ್ನನ್ನು ಜೀಪಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಡು ಹೋಗಲಾಯಿತು. ಅಲ್ಲಿನ ಒಂದು ಸೆಲ್‌ನಲ್ಲಿ ಹಾಕಲಾಯಿತು. ಆ ಸಮಯದಲ್ಲಿ ಆಸ್ಪತ್ರೆಯ ಜವಾಬ್ದಾರಿ ಹೊತ್ತಿದ್ದ ಡಾ.ಶಾಂತರಾಮ ಶೆಟ್ಟಿ, ಡಾ.ಸುಧಾಕರ್ ಶೆಟ್ಟಿ ಮತ್ತು ಡಾ. ಉಮಾನಂದ ಮಲ್ಯರಂತಹ ಘನವೈದ್ಯರು ನನ್ನ ಶುಶ್ರೂಷೆಗೆ ನಿಂತರು. ಅರವಳಿಕೆ ಮದ್ದುನೀಡಿ, ಕೆಲ ಶಸ್ತ್ರಚಿಕಿತ್ಸೆಯೂ ಮುಗಿದವು.
ಪ್ರಜ್ಞೆ ಬಂದಾಗ, ನನ್ನ ಸುತ್ತ ದೊಡ್ಡದೊಡ್ಡ ಅಧಿಕಾರಿಗಳು, ಎಸ್.ಪಿ. ಕುಳಿತು, ಒಂದೇ ಸಮನೆ ವಿಚಾರಿಸಿದರು. ಸತ್ಯ ಬಾಯಿ ಬಿಡಿಸುತ್ತಾರೆಂದು (ಚಂದ್ರಶೇಖರ್ ಆಜಾದ್ ಅವರ ಬದುಕಿನ ಘಟನೆ ಗೊತ್ತಿತ್ತಲ್ಲ! ಹಾಗಾಗಿ) ನನಗೇನು ಗೊತ್ತಿಲ್ಲವೆಂದೇ ಹೇಳುತ್ತ ಪ್ರಾರ್ಥನೆ ಮಾಡಿಕೊಂಡು ಮಲಗಿದ್ದೆ. ಶಸಚಿಕಿತ್ಸೆಯಾದ ಕಾರಣ, ಕೆಲ ತಿಂಗಳು ಕಾಲ ವಿಶ್ರಾಂತಿ ಪಡೆಯಬೇಕಾಯಿತು. ನಂತರ, ನನ್ನ ಬಗ್ಗೆ ಗಂಭೀರ ತನಿಖೆ ನಡೆಯಲಿಲ್ಲ. ಅಷ್ಟರಲ್ಲಿ ತುರ್ತುಪರಿಸ್ಥಿತಿ ಮುಗಿದು, ಚುನಾವಣೆಗೆ ತಯಾರಿ ನಡೆಯುತ್ತಿದ್ದವು.
ಇದಿಷ್ಟು ಕಾಂಗ್ರೆಸ್ ಮತ್ತು ಇಂದಿರೆಯ ತುರ್ತುಪರಿಸ್ಥಿತಿಯ ಕರಾಳದಿನಗಳ ನೆನಪುಗಳು ಎಂದು ತಮ್ಮ ಅಂದಿನ ಹೋರಾಟದ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಂಡರು. ಸಂಘಕ್ಕೆ ಸೇರುವ ಯುವ ಕಾರ್ಯಕರ್ತರಿಗೆ ಮಂಗಳೂರು ವಿಭಾಗದಲ್ಲಿ ಒಂದಿಷ್ಟು ಹಿರಿಯ, ಮಹಾನುಭಾವಿ ಮಾರ್ಗದರ್ಶಿಗಳಿzರೆ. ಅಂಥವರಲ್ಲಿ ಎಲ್ಲರ ಪ್ರೀತಿಯ ಮಧುಕರಣ್ಣ ಕೂಡ ಒಬ್ಬರು.
ಅಪರಿಚಿತರನ್ನೂ ಸಹ ಎಷ್ಟೋ ವರ್ಷಗಳಿಂದ ತಮ್ಮವರೆ ಎಂಬಂತೆ ಮಾತಾಡಿಸಿ ಆಪ್ಯಾಯಮಾನ ಪ್ರೀತಿ ತೋರುವ, ಇಂದಿಗೂ ತಾವು ಅನುಭವಿಸಿದ ನೋವುಗಳ ಜೊತೆಗೆ, ಅಂದಿನ ಸಮಾಜ ಜಾಗೃತಿಗೆ, ಯುವಜನತೆಯೊಂದಿಗೆ ಒಗ್ಗೂಡಿ ಹೋರಾಡಿದ ಕಿಚ್ಚು, ಈ ಇಳಿವಯಸ್ಸಿನ ಕಣ್ಣಂಚಿ ನಲ್ಲೂ ಕಿಡಿರೂಪದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು!