250 ವರ್ಷಗಳ ಹಿಂದೆ ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ ಪಡೆದ ಅಮೆರಿಕ, ಇವತ್ತು ಜಗತ್ತಿನ ಸಾರ್ವಭೌಮ ಶಕ್ತಿಯಾಗಿ ಬೆಳೆದು ನಿಂತಿರುವುದು ಜಾಗತಿಕ ಇತಿಹಾಸದ ಒಂದು ವಿಸ್ಮಯ. ದೇಶದ ಆಂತರಿಕ ರಾಜಕೀಯ ಧ್ರುವೀಕರಣ, ಆರ್ಥಿಕ ಅಸಮಾನತೆ ಮತ್ತು ಚೀನಾದಂತಹ ಹೊಸ ಆರ್ಥಿಕ ಶಕ್ತಿಗಳ ಪೈಪೋಟಿಯಂತಹ ಹಲವು ಆಧುನಿಕ ಸವಾಲು ಗಳು ಅಮೆರಿಕದ ಮುಂದಿವೆ. ಆದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಅದರ ಪ್ರಜಾಪ್ರಭುತ್ವದ ಮೌಲ್ಯಗಳು, ಮುಕ್ತ ಆರ್ಥಿಕ ನೀತಿ, ಮತ್ತು ತಂತ್ರಜ್ಞಾನದ ಆವಿಷ್ಕಾರ ಗಳು ಅಮೆರಿಕವನ್ನು ಇಂದಿಗೂ ಜಗತ್ತಿನ ಸೂಪರ್ ಪವರ್ ಆಗಿ ಉಳಿಸಿವೆ. ತನ್ನ 250ನೇ ವರ್ಷದ ಈ ಸಂಭ್ರಮದಲ್ಲಿ ಅಮೆರಿಕ ಜಾಗತಿಕ ರಂಗದ ನಾಯಕನಾಗಿ ಇಡೀ ಆಧುನಿಕ ವಿಶ್ವದ ಚರಿತ್ರೆಯನ್ನು ಬರೆಯುತ್ತಲೇ ಸಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ಇಂದು (ಶನಿವಾರ) ತನ್ನ 250ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂಭ್ರಮದಲ್ಲಿದೆ. ಎರಡೂವರೆ ಶತಮಾನಗಳ ಹಿಂದೆ ಕೇವಲ 13 ಬ್ರಿಟಿಷ್ ವಸಾಹತುಗಳಾಗಿದ್ದ ಒಂದು ಭೂಪ್ರದೇಶ, ಇಂದು ಜಗತ್ತಿನ ರಾಜಕೀಯ, ಆರ್ಥಿಕ, ಮಿಲಿಟರಿ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ರಂಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಏಕೈಕ ಜಾಗತಿಕ ಮಹಾಶಕ್ತಿಯಾಗಿ ಬೆಳೆದು ನಿಂತಿರುವುದು ಆಧುನಿಕ ವಿಶ್ವ ಚರಿತ್ರೆಯ ಅತ್ಯಂತ ರೋಚಕ ಅಧ್ಯಾಯ.
ಸ್ಥಳೀಯ ಬುಡಕಟ್ಟು ಜನರಿದ್ದ (ರೆಡ್ ಇಂಡಿಯನ್ಸ್) ನೆಲಕ್ಕೆ ಐರೋಪ್ಯರು ಕಾಲಿಟ್ಟ ದಿನದಿಂದ ಹಿಡಿದು, ಇಂದು ಇಡೀ ಜಗತ್ತಿಗೆ ‘ದೊಡ್ಡಣ್ಣ’ ಎನಿಸಿಕೊಳ್ಳುವವರೆಗಿನ ಅಮೆರಿಕದ ಪಯಣ, ಅದರ ಚಾರಿತ್ರಿಕ ತಿರುವುಗಳು, ಧೀಮಂತ ನಾಯಕರ ದೂರದೃಷ್ಟಿ ಮತ್ತು ಮಹತ್ವಾಕಾಂಕ್ಷೆಯ ನಿರ್ಧಾರ ಗಳು, ಬಂಡವಾಳ ಶಾಹಿ ವ್ಯವಸ್ಥೆಯ ನಡುವೆಯೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವ ರಾಜಕೀಯ ವ್ಯವಸ್ಥೆ ಅಧ್ಯಯನ ಯೋಗ್ಯವಾದುದು.
ಸ್ವಾತಂತ್ರ್ಯ ಸಂಗ್ರಾಮ
ಅಮೆರಿಕದ ಒಟ್ಟಾರೆ ಇತಿಹಾಸವು ಸಾಹಸ, ಸಂಘರ್ಷ ಮತ್ತು ಅನ್ವೇಷಣೆಗಳಿಂದ ಕೂಡಿದೆ. 15ನೇ ಶತಮಾನದ ಕೊನೆಯಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕ ಖಂಡವನ್ನು ತಲುಪಿದ ನಂತರ, ಯುರೋಪಿನ ಪ್ರಮುಖ ಶಕ್ತಿಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಲು ಪೈಪೋಟಿಗೆ ಬಿದ್ದವು. ಇಲ್ಲಿನ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರನ್ನು ಬದಿಗೆ ಸರಿಸಿ, ಐರೋಪ್ಯ ವಲಸಿಗರು ಇಡೀ ಭೂಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.
ಇದನ್ನೂ ಓದಿ: Lokesh Kayarga Column: ಸ್ಟೆತಸ್ಕೋಪ್ ಮತ್ತು ಲೇಖನಿಯ ನೈತಿಕ ತೊಳಲಾಟ
ಅಂತಿಮವಾಗಿ ಬ್ರಿಟಿಷರು 1607ರಲ್ಲಿ ‘ಜೇಮ್ಸ್ ಟೌನ್’ (ವರ್ಜೀನಿಯಾ) ಎಂಬ ಮೊದಲ ಶಾಶ್ವತ ಬ್ರಿಟಿಷ್ ವಸಾಹತನ್ನು ಸ್ಥಾಪಿಸಿದರು. ಮುಂದೆ ಇನ್ನೂ 13 ವಸಾಹತುಗಳು ಸೇರಿ ಬ್ರಿಟಿಷರ ತೆಕ್ಕೆಗೆ ಸೇರಿದವು. ಅಲ್ಲಿಂದ ಸರಿಸುಮಾರು 170 ವರ್ಷಗಳ ಕಾಲ ಬ್ರಿಟನ್, ಅಮೆರಿಕದಲ್ಲಿ ವಸಾಹತುಶಾಹಿ ಆಡಳಿತವನ್ನು ಹೊಂದಿತ್ತು. ಭಾರತದಲ್ಲಿ ದೌರ್ಜನ್ಯ ನಡೆಸಿ, ಇಲ್ಲಿನ ಸಂಪತನ್ನು ಲೂಟಿ ಹೊಡೆದಂತೆ ಅಲ್ಲೂ ಬ್ರಿಟಿಷರು ಇದೇ ಕಾಯಕ ನಡೆಸಿದ್ದರು. ಆದರೆ ಇಂಗ್ಲಿಷ್ ಭಾಷೆಯು ಇಂದು ಅಮೆರಿಕದ ಪ್ರಮುಖ ಭಾಷೆಯಾಗಲು ಅಂದಿನ ಬ್ರಿಟಿಷ್ ಆಡಳಿತವೇ ಕಾರಣ. ಅಮೆರಿಕದ ಪ್ರಜಾಪ್ರಭುತ್ವ ಮತ್ತು ಕಾನೂನು ವ್ಯವಸ್ಥೆ ಕೂಡ ಬ್ರಿಟನ್‌ನ ‘ಕಾಮನ್ ಲಾ’ ಮತ್ತು ಮ್ಯಾಗ್ನಾ ಕಾರ್ಟಾದಂತಹ ತತ್ವಗಳಿಂದ ಪ್ರೇರಿತವಾಗಿದೆ. ಅಮೆರಿಕದ ಇಂದಿನ ಪ್ರತಿಷ್ಠಿತ ಹಾರ್ವರ್ಡ್, ಯೇಲ್ ಮತ್ತು ವಿಲಿಯಂ ಮೇರಿ ಕಾಲೇಜುಗಳನ್ನು ಅಂದು ಬ್ರಿಟಿಷ್ ವಸಾಹತುಶಾಹಿಗಳೇ ಸ್ಥಾಪಿಸಿದ್ದರು.
17ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಸರಕಾರದ ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಅಮೆರಿಕದ 13 ವಸಾಹತುಗಳು ಒಟ್ಟಾಗಿ ಬಂಡೆದ್ದವು. 1776ರ ಜುಲೈ 4ರಂದು ಅಮೆರಿಕ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು.
ವರ್ಜೀನಿಯಾ ಮೂಲದ ಜಾರ್ಜ್ ವಾಷಿಂಗ್ಟನ್ ಅವರ ಸಮರ್ಥ ಸೇನಾ ನಾಯಕತ್ವದಲ್ಲಿ ನಡೆದ ಸುದೀರ್ಘ ಹೋರಾಟದ ನಂತರ, ಬ್ರಿಟಿಷರನ್ನು ಸೋಲಿಸಿ ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ಹೊಸ ದೇಶ ಉದಯಿಸಿತು. ಅಂದಿನ 13 ವಸಾಹತುಗಳ ಭೂಭಾಗ ಇಂದಿನ ಅಮೆರಿಕದ ಒಟ್ಟು ವಿಸ್ತೀರ್ಣದ ಕೇವಲ ಶೇ.10ರಿಂದ ಶೇ.11ರಷ್ಟು ಮಾತ್ರ ಇತ್ತು. ಆದರೆ, 1783ರಲ್ಲಿ ಅಮೆರಿಕದ ಕ್ರಾಂತಿಕಾರಿ ಯುದ್ಧ ಮುಗಿದು, ‘ಪ್ಯಾರಿಸ್ ಒಪ್ಪಂದ’ದ ಮೂಲಕ ಬ್ರಿಟನ್ ಅಧಿಕೃತವಾಗಿ ಅಮೆರಿಕಕ್ಕೆ ಸ್ವಾತಂತ್ರ್ಯ ನೀಡಿದಾಗ, ಅಮೆರಿಕದ ಗಡಿಯನ್ನು ಪಶ್ಚಿಮದ ಮಿಸ್ಸಿಸ್ಸಿಪ್ಪಿ ನದಿಯವರೆಗೆ ವಿಸ್ತರಿಸಲಾಯಿತು. ಬಳಿಕ ಅಮೆರಿಕ ಆಡಳಿತಗಾರರ ಜಾಣ್ಮೆಯಿಂದ ಭೂಪ್ರದೇಶ ವಿಸ್ತರಿಸುತ್ತಲೇ ಸಾಗಿತು.
1803ರಲ್ಲಿ ಅಂದಿನ ಅಧ್ಯಕ್ಷ ಥಾಮಸ್ ಜೆಫರ್ಸನ್ ಅವರು ಫ್ರಾನ್ಸ್‌ನ ನೆಪೋಲಿಯನ್‌ನಿಂದ ಲೂಸಿಯಾ ನದ ಬೃಹತ್ ಭೂಪ್ರದೇಶವನ್ನು ಕೇವಲ 15 ಮಿಲಿಯನ್ ಡಾಲರ್‌ಗೆ ಖರೀದಿಸಿದರು. ಇದು ಅಮೆರಿಕದ ವಿಸ್ತೀರ್ಣವನ್ನು ರಾತ್ರೋರಾತ್ರಿ ದುಪ್ಪಟ್ಟು ಗೊಳಿಸಿತು. ಬಳಿಕ ಸ್ಪೇನ್‌ನಿಂದ ಪ್ಲೊರಿಡಾವನ್ನು ಪಡೆದುಕೊಂಡರೆ, ಮೆಕ್ಸಿಕೋ ಜೊತೆಗಿನ ಯುದ್ಧದ ನಂತರ ಟೆಕ್ಸಾಸ್, ಕ್ಯಾಲಿಫೋರ್ನಿಯಾ ಸೇರಿದಂತೆ ಪಶ್ಚಿಮ ಕರಾವಳಿಯ ಪ್ರಮುಖ ಪ್ರಾಂತ್ಯಗಳು ಅಮೆರಿಕದ ಪಾಲಾದವು. ಅಟ್ಲಾಂಟಿಕ್ ಮಹಾಸಾಗರ ದಿಂದ ಪೆಸಿಫಿಕ್ ಮಹಾಸಾಗರದವರೆಗೆ ಅಮೆರಿಕದ ಸಾಮ್ರಾಜ್ಯ ವಿಸ್ತರಿಸಿತು.
ಮೂರು ಮಹಾ ತಿರುವುಗಳು
ಅಮೆರಿಕದ ಬೆಳವಣಿಗೆಯಲ್ಲಿ ಮೂರು ಪ್ರಮುಖ ಯುದ್ಧಗಳು ಜಾಗತಿಕ ನಾಯಕನ ಪಟ್ಟಕ್ಕೇರಲು ದಾರಿ ಮಾಡಿಕೊಟ್ಟವು. ಅದರಲ್ಲಿ ಪ್ರಮುಖವಾದುದು 1861 ರಿಂದ ಹಿಡಿದು 1865ರವರೆಗಿನ ಅಮೆರಿಕದ ಅಂತರ್ಯುದ್ಧ. ದೇಶವು ಆರ್ಥಿಕವಾಗಿ ಬೆಳೆಯುತ್ತಿದ್ದಾಗಲೇ ದಕ್ಷಿಣದ ಪ್ರಾಂತ್ಯಗಳು (ಗುಲಾಮಗಿರಿ ಪದ್ಧತಿಯನ್ನು ಬೆಂಬಲಿಸುವವರು) ಮತ್ತು ಉತ್ತರದ ಪ್ರಾಂತ್ಯಗಳ (ಗುಲಾಮಗಿರಿ ಪದ್ಧತಿಯನ್ನು ವಿರೋಧಿಸುವವರು) ನಡುವೆ ಭೀಕರ ಅಂತರ್ಯುದ್ಧ ಆರಂಭವಾಯಿತು. ದೇಶ ಒಡೆದು ಚೂರಾಗುವ ಪರಿಸ್ಥಿತಿ ಬಂದಾಗ, ಅಧ್ಯಕ್ಷ ಅಬ್ರಹಾಂ ಲಿಂಕನ್ ದೃಢವಾಗಿ ನಿಂತು ದೇಶದ ಒಗ್ಗಟ್ಟನ್ನು ಕಾಪಾಡಿದರು. ದಾಸ್ಯ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಮೂಲಕ ಅಮೆರಿಕದಲ್ಲಿ ಮಾನವ ಹಕ್ಕುಗಳ ಹೊಸ ಯುಗ ಆರಂಭವಾಯಿತು. ಈ ಯುದ್ಧದ ನಂತರ ಅಮೆರಿಕ ಶಕ್ತಿಯುತ ವಾದ ಏಕೀಕೃತ ರಾಷ್ಟ್ರವಾಗಿ ಹೊರಹೊಮ್ಮಿತು.
ಮೊದಲನೇ ಮತ್ತು 2ನೇ ಜಾಗತಿಕ ಮಹಾಯುದ್ಧಗಳು ಅಮೆರಿಕ ಸೂಪರ್ ಪವರ್ ಆಗಲು ಪ್ರಮುಖ ಕಾರಣವಾದವು. ಯುರೋಪಿನ ಬಲಿಷ್ಠ ದೇಶಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿಗಳು ಯುದ್ಧ ದಿಂದಾಗಿ ಸಂಪೂರ್ಣವಾಗಿ ಆರ್ಥಿಕವಾಗಿ ಹೈರಾಣಾದವು. ಆದರೆ, ಅಮೆರಿಕವು ಆರಂಭದಲ್ಲಿ ಯುದ್ಧದಿಂದ ದೂರವಿದ್ದು, ಮಿತ್ರಪಡೆಗಳಿಗೆ ಶಸ್ತ್ರಾಸ್ತ್ರ, ಆಹಾರ ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಜಗತ್ತಿನ ಅತಿ ದೊಡ್ಡ ಸಾಲದಾತ ದೇಶವಾಗಿ ಮಾರ್ಪಟ್ಟಿತು.
1941ರಲ್ಲಿ ಜಪಾನ್ ದೇಶವು ಅಮೆರಿಕದ ‘ಪರ್ಲ್ ಹಾರ್ಬರ್’ ನೌಕಾ ನೆಲೆಯ ಮೇಲೆ ದಾಳಿ ಮಾಡಿ ದಾಗ, ಅಮೆರಿಕ ಎರಡನೇ ಮಹಾಯುದ್ಧಕ್ಕೆ ನೇರವಾಗಿ ಪ್ರವೇಶಿಸಿತು. 1945ರಲ್ಲಿ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ಹಾಕುವ ಮೂಲಕ ಯುದ್ಧವನ್ನು ಕೊನೆಗೊಳಿಸಿತು. ಯುದ್ಧ ಮುಗಿ ಯುವ ಹೊತ್ತಿಗೆ ಜಗತ್ತಿನ ಶೇ. 50ರಷ್ಟು ಕೈಗಾರಿಕಾ ಉತ್ಪಾದನೆ ಮತ್ತು ಜಗತ್ತಿನ ಬಹುಪಾಲು ಚಿನ್ನದ ದಾಸ್ತಾನು ಅಮೆರಿಕದ ಬಳಿಯಿತ್ತು. ಈ ಮೂಲಕ ಜಗತ್ತಿನ ಆರ್ಥಿಕ ಮತ್ತು ಮಿಲಿಟರಿ ನಾಯಕನಾಗಿ ಅಮೆರಿಕ ಎಂಬ ದೇಶದ ಪ್ರತಿಷ್ಠಾಪನೆಯಾಯಿತು. ಅಮೆರಿಕವನ್ನು ಆಳಿದ ಅಧ್ಯಕ್ಷರಲ್ಲಿ ಅನೇಕರು ಕಾಲ ಕಾಲಕ್ಕೆ ಬಂದ ಬಿಕ್ಕಟ್ಟುಗಳನ್ನು ನಿವಾರಿಸುತ್ತಲೇ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ವ್ಯಕ್ತಿಗಳಿಗೆ ಮನ್ನಣೆ
ಅಮೆರಿಕವು ಇಂದಿಗೂ ಪ್ರಬಲ ಬಂಡವಾಳಶಾಹಿ ರಾಷ್ಟ್ರ. ಇಷ್ಟಾದರೂ ಪ್ರಜಾಪ್ರಭುತ್ವದ ಬೇರು ಗಳು ಇಲ್ಲಿ ಅತ್ಯಂತ ಗಟ್ಟಿಯಾಗಿ ನೆಲೆಯೂರಿವೆ. ಸಾಮಾನ್ಯವಾಗಿ ಬಂಡವಾಳಶಾಹಿ ದೇಶಗಳಲ್ಲಿ ಶ್ರೀಮಂತರ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುವ ಅಪಾಯ ವಿರುತ್ತದೆ. ಆದರೆ ಅಮೆರಿಕ ಇದನ್ನು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಪ್ರಬಲ ಲಿಖಿತ ಸಂವಿಧಾನ.
ಅಮೆರಿಕದ ಸಂವಿಧಾನವು ವಿಶ್ವದ ಅತ್ಯಂತ ಹಳೆಯ ಲಿಖಿತ ಸಂವಿಧಾನಗಳಲ್ಲಿ ಒಂದಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಸ್ತಿಯ ಹಕ್ಕಿಗೆ ಅತ್ಯುನ್ನತ ರಕ್ಷಣೆ ನೀಡುತ್ತದೆ. ಸಂವಿಧಾನದಲ್ಲಿ ಈ ಸಮತೋಲನ ವ್ಯವಸ್ಥೆ ಇರುವ ಕಾರಣದಿಂದಲೇ ಅಧ್ಯಕ್ಷರಾಗಲಿ, ಸಂಸತ್ತಾ ಗಲಿ (ಕಾಂಗ್ರೆಸ್) ಅಥವಾ ನ್ಯಾಯಾಂಗವಾಗಲಿ ಯಾರೂ ಕೂಡ ಸರ್ವಾಧಿಕಾರಿಯಾಗಲು ಸಾಧ್ಯ ವಿಲ್ಲ. ಒಬ್ಬರ ಅಧಿಕಾರವನ್ನು ಇನ್ನೊಬ್ಬರು ನಿಯಂತ್ರಿಸುವ ವ್ಯವಸ್ಥೆ ಇಲ್ಲಿದೆ. ವೀಸಾ ನೀತಿ, ಸುಂಕ ಹೇರಿಕೆಯಂತಹ ಟ್ರಂಪ್ ಅವರ ಏಕಪಕ್ಷೀಯ ತೀರ್ಮಾನಗಳಿಗೂ ಇದೇ ಸಂವಿಧಾನ ಕಡಿವಾಣ ಹಾಕಿರುವುದು ಗಮನಾರ್ಹ.
ಅಮೆರಿಕನ್ ಕನಸು ಎಂಬ ಪರಿಕಲ್ಪನೆಯೇ ಇಲ್ಲಿನ ಶಕ್ತಿ. ಯಾರು ಬೇಕಾದರೂ ತಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಶೂನ್ಯದಿಂದ ಕೋಟ್ಯಧಿಪತಿಯಾಗಬಹುದು ಎಂಬ ವಾತಾ ವರಣವನ್ನು ಇಲ್ಲಿನ ಮುಕ್ತ ಮಾರುಕಟ್ಟೆ ನಿರ್ಮಿಸಿದೆ. ಕಾನೂನಿನ ಆಡಳಿತ ಮತ್ತು ಮುಕ್ತ ಪತ್ರಿಕೋದ್ಯಮವು ಸರಕಾರದ ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿಟ್ಟಿದೆ.
ಕಪ್ಪುವರ್ಣೀಯರ ನಾಗರಿಕ ಹಕ್ಕುಗಳ ಹೋರಾಟ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಂತಹ ನಾಯಕರ ಪ್ರಯತ್ನದಿಂದಾಗಿ, ಕಾಲಕಾಲಕ್ಕೆ ವ್ಯವಸ್ಥೆಯು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಪ್ರಜಾಪ್ರಭುತ್ವವನ್ನು ಮತ್ತಷ್ಟು ಒಳಗೊಳ್ಳುವಂತೆ, ಸರ್ವರಿಗೂ ಸಮಬಾಳು ಸಿಗುವಂತೆ ನೋಡಿ ಕೊಂಡಿದೆ.
ಡಾಲರ್ ಸಾಮ್ರಾಜ್ಯ
ಅಮೆರಿಕ ಜಗತ್ತಿನ ಆರ್ಥಿಕ ರಾಜನಾಗಿದ್ದು ಹೇಗೆ ಎಂಬುದು ಒಂದು ಅದ್ಭುತ. ಇಂದು ಜಗತ್ತಿನ ಅತಿ ದೊಡ್ಡ ಆರ್ಥಿಕತೆ ಅಮೆರಿಕzಗಿದೆ. ಇದಕ್ಕೆ ಮುಖ್ಯ ಕಾರಣ 1944ರ ಬ್ರೆಟ್ಟನ್ ವುಡ್ಸ್ ಒಪ್ಪಂದ. ಎರಡನೇ ಮಹಾ ಯುದ್ಧ ಮುಗಿಯುವ ಮುನ್ನವೇ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಮರು ರೂಪಿಸಲು ಅಮೆರಿಕದ ಬ್ರೆಟ್ಟನ್ ವುಡ್ಸ್‌ನಲ್ಲಿ ಜಾಗತಿಕ ಸಮ್ಮೇಳನ ನಡೆಯಿತು. ಅಲ್ಲಿ ಇಡೀ ವಿಶ್ವದ ವ್ಯಾಪಾರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್ ಅನ್ನು ಅಧಿಕೃತ ಜಾಗತಿಕ ಕರೆನ್ಸಿಯಾಗಿ ಸ್ವೀಕರಿಸಲಾಯಿತು.
ಇಂದು ಜಗತ್ತಿನ ಯಾವುದೇ ದೇಶವು ಕಚ್ಚಾ ತೈಲವಾಗಲಿ ಅಥವಾ ಯಾವುದೇ ಪ್ರಮುಖ ವಸ್ತು ವಾಗಲಿ ಖರೀದಿಸಬೇಕಾದರೆ ಡಾಲರ್ ಬಳಸಲೇಬೇಕು. ಇದು ಅಮೆರಿಕಕ್ಕೆ ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ನೀಡಿತು. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಧಾನ ಕಚೇರಿಗಳು ಅಮೆರಿಕದಲ್ಲೇ ಇವೆ. ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದರೂ 18 ಮತ್ತು 19ನೇ ಶತಮಾನದಲ್ಲಿ ಇದನ್ನು ಮುಂದುವರಿಸಿದ್ದು ಅಮೆರಿಕ.
ಹೆನ್ರಿ ಫೋರ್ಡ್ ಅವರ ಅಸೆಂಬ್ಲಿ ಲೈನ್ ತಂತ್ರಜ್ಞಾನದ ಮೂಲಕ ಅಮೆರಿಕ ವಾಹನ ಉತ್ಪಾದನೆ ಯಲ್ಲಿ ಜಾಗತಿಕ ಕ್ರಾಂತಿ ಮಾಡಿತು. ದೇಶದಾದ್ಯಂತ ನೈಸರ್ಗಿಕ ಸಂಪನ್ಮೂಲಗಳಾದ ಕಲ್ಲಿದ್ದಲು, ಕಬ್ಬಿಣ ಮತ್ತು ತೈಲ ಯಥೇಚ್ಛವಾಗಿ ಸಿಕ್ಕಿದ್ದು ದೇಶದ ಕೈಗಾರಿಕಾ ಪ್ರಗತಿಗೆ ವೇಗ ನೀಡಿತು. ವಾಲ್ ಸ್ಟ್ರೀಟ್ ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಜಗತ್ತಿನ ಇಡೀ ಬಂಡವಾಳವನ್ನು ನಿಯಂತ್ರಿಸುವ ಕೇಂದ್ರಗಳಾದವು.
ಜಗತ್ತಿನ ಜ್ಞಾನಕೇಂದ್ರ
ಜ್ಞಾನ ಮತ್ತು ನಾವೀನ್ಯತೆಯೇ ಅಮೆರಿಕದ ಶಕ್ತಿ. ಜಗತ್ತಿನ ಅತ್ಯಂತ ಬುದ್ಧಿವಂತ ಮೆದುಳುಗಳನ್ನು ತನ್ನ ದೇಶದತ್ತ ಸೆಳೆ ಯುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಅಮೆರಿಕವನ್ನು ಕಟ್ಟಿದವರು ಅಮೆರಿಕನ್ನರು ಮಾತ್ರವಲ್ಲ. ಭಾರತೀಯರೂ ಸೇರಿ ಇಲ್ಲಿಗೆ ವಲಸೆ ಬಂದ ನೂರಾರು ಅದ್ಭುತ ಪ್ರತಿಭೆಗಳು ಈ ದೇಶಕ್ಕೆ ತಮ್ಮ ಜ್ಞಾನಶಕ್ತಿಯನ್ನು ಧಾರೆ ಎರೆದಿದ್ದಾರೆ. ಜ್ಞಾನದ ಮುಕ್ತ ಹರಿವಿಗೆ ಅವಕಾಶ ಮಾಡಿಕೊಟ್ಟಿದ್ದು ಅಮೆರಿಕದ ಹೆಗ್ಗಳಿಕೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಇಂದು ಜಾಗತಿಕ ತಂತ್ರಜ್ಞಾನದ ರಾಜಧಾನಿ. ಮೈಕ್ರೋ ಸಾಫ್ಟ್, ಆಪಲ್, ಗೂಗಲ್, ಫೇಸ್‌ಬುಕ್ (ಮೆಟಾ), ಅಮೆಜಾನ್ ಮತ್ತು ಇಂಟೆಲ್‌ನಂತಹ ದೈತ್ಯ ಸಂಸ್ಥೆ ಗಳು ಅಮೆರಿಕದಲ್ಲಿ ಹುಟ್ಟಿ, ಇಂದು ಇಡೀ ಜಗತ್ತಿನ ದೈನಂದಿನ ಜೀವನವನ್ನು ನಿಯಂತ್ರಿಸುತ್ತಿವೆ.
ಇಂಟರ್ನೆಟ್ ಮತ್ತು ಜಿಪಿಎಸ್
ತಂತ್ರಜ್ಞಾನವನ್ನು ಕಂಡುಹಿಡಿದಿದ್ದು ಅಮೆರಿಕದ ರಕ್ಷಣಾ ಇಲಾಖೆ. ಶೀತಲ ಸಮರದ ಸಮಯದಲ್ಲಿ ರಷ್ಯಾಕ್ಕೆ ಸಡ್ಡು ಹೊಡೆದ ಅಮೆರಿಕ, ಬಾಹ್ಯಾಕಾಶ ರಂಗದಲ್ಲಿ ಪಾರಮ್ಯ ಸಾಧಿಸಿತು. 1969ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಅವರನ್ನು ಚಂದ್ರನ ಮೇಲೆ ಇಳಿಸುವ ಮೂಲಕ ಇತಿಹಾಸ ನಿರ್ಮಿಸಿತು. ಹಬಲ್ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕಗಳು, ಮಂಗಳ ಗ್ರಹಕ್ಕೆ ಕಳುಹಿಸಿದ ರೋವರ್‌ಗಳು, ಮತ್ತು ಇಂದು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ನಂತಹ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ಮೂಲಕ ಅಮೆರಿಕ ಬಾಹ್ಯಾಕಾಶ ರಂಗದಲ್ಲಿ ಇಂದಿಗೂ ಮುಂಚೂಣಿಯಲ್ಲಿದೆ.
ವೈದ್ಯಕೀಯ ರಂಗದಲ್ಲೂ ಪೆನ್ಸಿಲಿನ್‌ನಿಂದ ಹಿಡಿದು ಆಧುನಿಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ವರೆಗೆ ಹೆಚ್ಚಿನ ಸಂಶೋಧನೆಗಳು ನಡೆದಿದ್ದು ಅಮೆರಿಕದ ಪ್ರಯೋಗಾಲಯ ಗಳ. ಜಗತ್ತಿನ ಅತಿ ಹೆಚ್ಚು ನೊಬೆಲ್ ಪ್ರಶಸ್ತಿಗಳು (400ಕ್ಕೂ ಹೆಚ್ಚು) ಅಮೆರಿಕದ ಪಾಲಾಗಿರುವುದು ಇದಕ್ಕೆ ಸಾಕ್ಷಿ.
ಕ್ರೀಡಾ ಪಾರಮ್ಯ: ಒಲಿಂಪಿಕ್ಸ್ ಇತಿಹಾಸದ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಅಮೆರಿಕದ ಹೆಸರಲ್ಲಿದೆ. ಅಮೆರಿಕದ ‘ಹಾಲಿವುಡ್’ ಚಿತ್ರರಂಗ ಇಡೀ ಜಗತ್ತಿನ ಮನರಂಜನಾ ಕ್ಷೇತ್ರವನ್ನು ಆಳುತ್ತಿದೆ. ಜಾಗತಿಕವಾಗಿ ಜನರು ಅಮೆರಿಕನ್ ಸಿನಿಮಾಗಳನ್ನು ನೋಡುತ್ತಾರೆ, ಅಮೆರಿಕನ್ ಪಾಪ್ ಸಂಗೀತವನ್ನು ಕೇಳುತ್ತಾರೆ. ಜೀನ್ಸ್ ಪ್ಯಾಂಟ್, ಕೋಕಾಕೋಲಾ, ಮೆಕ್ ಡೊನಾಲ್ಡ್ಸ್ ಬರ್ಗರ್ ಮತ್ತು ಐಫೋನ್ ಬಳಸುವುದು ಇಂದು ಜಾಗತಿಕವಾಗಿ ಆಧುನಿಕತೆಯ ಸಂಕೇತವಾಗಿ ಮಾರ್ಪಟ್ಟಿದೆ. ಇಷ್ಟೆಲ್ಲದರ ಹೊರತಾಗಿ ಅಮೆರಿಕ ಜಗತ್ತಿನ ದೊಡ್ಡಣ್ಣನಾಗಲು ಅದರ ಅಪ್ರತಿಮ ಮಿಲಿಟರಿ ಶಕ್ತಿಯೇ ಪ್ರಮುಖ ಕಾರಣ. ಜಗತ್ತಿನ ಮುಂದಿನ 10 ಬಲಿಷ್ಠ ದೇಶಗಳು ಒಟ್ಟಾಗಿ ಮಾಡುವ ಮಿಲಿಟರಿ ವೆಚ್ಚಕ್ಕಿಂತ ಹೆಚ್ಚು ಹಣವನ್ನು ಅಮೆರಿಕ ಒಂದೇ ದೇಶ ತನ್ನ ರಕ್ಷಣಾ ಬಜೆಟ್‌ಗಾಗಿ ಮೀಸಲಿಡುತ್ತದೆ.
ಜಗತ್ತಿನಾದ್ಯಂತ 80ಕ್ಕೂ ಹೆಚ್ಚು ದೇಶಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳಿವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಕೆಲವೇ ಗಂಟೆಗಳಲ್ಲಿ ಅಲ್ಲಿಗೆ ತಲುಪಬಲ್ಲ ಹನ್ನೊಂದು ಬೃಹತ್ ಅಣುಶಕ್ತಿ ಚಾಲಿತ ಯುದ್ಧನೌಕೆಗಳು ಅಮೆರಿಕದ ಬಳಿ ಇವೆ. ಈ ಬಲದಿಂದಲೇ ಅದು ಜಾಗತಿಕ ರಾಜಕಾರಣದಲ್ಲಿ ತನಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಜಾಗತಿಕ ಶಾಂತಿ ಯನ್ನು ಕಾಪಾಡುವ ನೆಪದಲ್ಲಿ ವಿಶ್ವದ ಪೊಲೀಸ್‌ನಂತೆ ವರ್ತಿಸುತ್ತದೆ.
3ನೇ ಅತಿ ದೊಡ್ಡ ದೇಶದಲ್ಲಿ 9 ಕಾಲಮಾನ!
ಬ್ರಿಟಿಷ್ ಆಡಳಿತಕ್ಕೊಳಪಟ್ಟ 13 ವಸಾಹತುಗಳನ್ನೊಳಗೊಂಡ ಅಮೆರಿಕದ ಒಟ್ಟು ವಿಸ್ತೀರ್ಣ ಸುಮಾರು 3.38ರಿಂದ 4.30 ಲಕ್ಷ ಚದರ ಮೈಲಿಗಳು. ಈ ವಸಾಹತುಗಳು ಅಮೆರಿಕದ ಪೂರ್ವ ಕರಾವಳಿಯುದ್ದಕ್ಕೂ (ಅಟ್ಲಾಂಟಿಕ್ ಸಾಗರದ ತೀರದಲ್ಲಿ) ಕಿರಿದಾದ ಪಟ್ಟಿಯಂತೆ ಹರಡಿಕೊಂಡಿ ದ್ದವು. ಆದರೆ, 1783ರಲ್ಲಿ ಅಮೆರಿಕದ ಕ್ರಾಂತಿಕಾರಿ ಯುದ್ಧ ಮುಗಿದು, ‘ಪ್ಯಾರಿಸ್ ಒಪ್ಪಂದ’ದ ಮೂಲಕ ಬ್ರಿಟನ್ ಅಧಿಕೃತವಾಗಿ ಅಮೆರಿಕಕ್ಕೆ ಸ್ವಾತಂತ್ರ್ಯ ನೀಡಿದಾಗ, ಅಮೆರಿಕದ ಗಡಿಯನ್ನು ಪಶ್ಚಿಮದ ಮಿಸ್ಸಿಸ್ಸಿಪ್ಪಿ ನದಿಯವರೆಗೆ ವಿಸ್ತರಿಸಲಾಯಿತು. ಹೀಗೆ ಸ್ವಾತಂತ್ರ್ಯ ಪಡೆದ ಹೊಸದರ ಲ್ಲಿಯೇ ಅಮೆರಿಕದ ಒಟ್ಟು ವಿಸ್ತೀರ್ಣವು ದುಪ್ಪಟ್ಟಾಗಿ ಸುಮಾರು 8.64 ಲಕ್ಷ ಚದರ ಮೈಲಿಗಳಿಗೆ ತಲುಪಿತು. ಫ್ರಾನ್ಸ್, ಸ್ಪೇನ್, ಮೆಕ್ಸಿಕೊ ಮುಂತಾದ ದೇಶಗಳಿಂದ ಭೂಮಿಯನ್ನು ಖರೀದಿಸಿ ಹಾಗೂ ಯುದ್ಧಗಳ ಮೂಲಕ ವಶಪಡಿಸಿಕೊಂಡು ಬಳಿಕ ಇಂದಿನ ಅಮೆರಿಕದ ಭೌಗೋಳಿಕ ವಿಸ್ತೀರ್ಣ 9.8 ಲಕ್ಷ ಚದರ ಮೈಲಿಗಳನ್ನೂ ಮೀರಿದೆ. ಭೌಗೋಳಿಕ ವಿಸ್ತೀರ್ಣದ ದೃಷ್ಟಿ ಯಿಂದ ರಷ್ಯಾ ಮತ್ತು ಕೆನಡಾ ದೇಶಗಳ ನಂತರ ಅಮೆರಿಕ ಪ್ರಪಂಚದ ಮೂರನೇ ಅತಿದೊಡ್ಡ ದೇಶವಾಗಿದೆ. ಈ ವಿಸ್ತೀರ್ಣ ಕ್ಕನುಗುಣವಾಗಿ ಅಮೆರಿಕ ಮತ್ತು ಅದರ ಅಧೀನದಲ್ಲಿರುವ ಪ್ರದೇಶಗಳಲ್ಲಿ ಒಟ್ಟು 9 ಅಧಿಕೃತ ಕಾಲಮಾನಗಳಿವೆ. ಅಮೆರಿಕದ 50 ರಾಜ್ಯಗಳನ್ನು ಗಣನೆಗೆ ತೆಗೆದ ಕೊಂಡರೂ 6 ವಿಭಿನ್ನ ಕಾಲಮಾನಗಳಿವೆ. ಅಮೆರಿಕದ ಪಶ್ಚಿಮ ತುದಿ (ಕ್ಯಾಲಿಫೋರ್ನಿಯಾ) ಮತ್ತು ಪೂರ್ವ ತುದಿ (ನ್ಯೂಯಾರ್ಕ್) ನಡುವೆ ಒಟ್ಟು 3 ಗಂಟೆಗಳ ಸಮಯದ ವ್ಯತ್ಯಾಸವಿದೆ.