ಅಮೃತಕಾಲ
ಲೀನಾ ಜೋಶಿ
ಇತಿಹಾಸದ ಘಟನೆಗಳನ್ನು ನಾವು ಪುಸ್ತಕಗಳಲ್ಲಿ ಓದುತ್ತೇವೆ, ಚಲನಚಿತ್ರಗಳಲ್ಲಿ ನೋಡುತ್ತೇವೆ, ಐತಿಹಾಸಿಕ ಸ್ಥಳಗಳಲ್ಲಿ ಹುಡುಕುತ್ತೇವೆ. ಅಪರೂಪಕ್ಕೆ ಮಾತ್ರ, ಆ ಇತಿಹಾಸವನ್ನು ಹೇಳುವ ಮೂಲ ದಾಖಲೆಯೇ ನಮ್ಮ ಕಣ್ಣ ಮುಂದೆ ಬರುತ್ತದೆ. ನನಗೆ ಅಂತಹ ಅನುಭವವಾದದ್ದು ನವದೆಹಲಿಯ ‘ತೀನ್ ಮೂರ್ತಿ ಭವನ’ಕ್ಕೆ ಭೇಟಿ ನೀಡಿದಾಗ. ಭಾರತದ ಸ್ವಾತಂತ್ರ್ಯಪೂರ್ವ ಇತಿಹಾಸಕ್ಕೆ ಸಂಬಂಧಿ ಸಿದ ದಾಖಲೆಗಳನ್ನು ಹುಡುಕುತ್ತಾ ಹಲವು ಬಾರಿ ಹೋಗಿದ್ದೇನೆ, ಕೆಲವು ದಾಖಲೆಗಳು ನನ್ನನ್ನು ದಿಗ್ಮೂಢ ಳಾಗಿಸಿದೆ. ಅದರಲ್ಲಿ ಒಂದು, ಬ್ರಿಟಿಷ್ ಪೊಲಿಟಿಕಲ್ ಡಿಪಾರ್ಟ್‌ಮೆಂಟ್ ಮತ್ತು ಕಾನ್ರಾಡ್ ಕಾರ್‌ಫೀಲ್ಡ್ ಎಂಬ ವ್ಯಕ್ತಿಯ ಕುರಿತು.
ಪುಸ್ತಕಗಳಲ್ಲಿ ಓದಿರದೆ ಇದ್ದ ವಿಷಯದ, ಅಧಿಕೃತ ದಾಖಲೆಯ ರೂಪದಲ್ಲಿ ಸಾಕ್ಷಿ ನನ್ನ ಮುಂದಿ ತ್ತು. ಬ್ರಿಟಿಷ್ ಆಡಳಿತದ ಬಗ್ಗೆ ನಮಗೆ ಇಷ್ಟವಿರಲಿ, ಇಲ್ಲದಿರಲಿ, ಒಂದು ವಿಷಯವನ್ನು ಒಪ್ಪಿಕೊಳ್ಳಲೇಬೇಕು, ಅವರು ಆಡಳಿತಾತ್ಮಕ ದಾಖಲೆಗಳನ್ನು ಇಟ್ಟುಕೊಳ್ಳುವುದರಲ್ಲಿ ಅತ್ಯಂತ ನಿಷ್ಣಾತರಾಗಿದ್ದರು. ಭಾರತವೊಂದನ್ನೇ ಬ್ರಿಟಿಷರು ತಮ್ಮ ಅಧೀನದಲ್ಲಿಟ್ಟಿರಲಿಲ್ಲ.
ಸೂರ್ಯ ಮುಳುಗದ ಸಾಮ್ರಾಜ್ಯವಾಗಿತ್ತು ಕಳೆದ ಶತಮಾನದಲ್ಲಿ ಬ್ರಿಟನ್. ಕಣ್ಣಿಗೆ ಕಾಣುವ ಬಹುತೇಕ ದೇಶಗಳು ಅವರ ಬಳಿಯೇ ಇದ್ದವು. ದಿನಾಂಕ, ಪತ್ರವ್ಯವಹಾರ, ಸಭೆಯ ನೋಟ್ಸ್, ಅಧಿಕಾರಿಗಳ ವರದಿಗಳು, ರಾಜಕೀಯ ಮೌಲ್ಯಮಾಪನಗಳು, ಒಪ್ಪಂದಗಳು, ಗುಪ್ತ ಪತ್ರಗಳು ಇತ್ಯಾದಿ ವಿಷಯಗಳನ್ನು ಅವರು ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ದಾಖಲಿಸುತ್ತಿದ್ದರು. ಇದು ಅವರ ಆಡಳಿತದ ಒಂದು ದೊಡ್ಡ ಶಕ್ತಿ, ಅದರಲ್ಲಿ ನೋ ಕಾಂಪ್ರಮೈಸ್! ಶತಮಾನಗಳ ದಾಖಲೆಗಳಲ್ಲಿ, ಒಬ್ಬ ಅಧಿಕಾರಿ ಏನು ಬರೆದ? ಯಾವ ದಿನ ಬರೆದ? ಯಾರೊಂದಿಗೆ ಮಾತನಾಡಿದ? ಯಾವ ನಿರ್ಧಾರ ತೆಗೆದುಕೊಳ್ಳಲಾಯಿತು? ಯಾವ ಸಂಸ್ಥಾನದ ಬಗ್ಗೆ ಏನು ವರದಿ ಬಂದಿತು? ಇಂತಹ ಮಾಹಿತಿಗಳನ್ನು ದಾಖಲಿಸುವ ಅಭ್ಯಾಸ ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿತ್ತು.
ಇದನ್ನೂ ಓದಿ: Leena Joshi Column: ಗಡಿಯಾಚೆ ಉಳಿದ ಮರಳಿ ಹೋಗದೂರು
ಅದಕ್ಕಾಗಿಯೇ ಇಂದು, ಸುಮಾರು 79 ವರ್ಷಗಳ ನಂತರವೂ, ನಾವು 1947ರ ಘಟನೆಗಳ ಕುರಿತು ಮೂಲ ದಾಖಲೆಗಳನ್ನು ಹುಡುಕಲು ಸಾಧ್ಯವಾಗುತ್ತಿದೆ. ಆದರೆ ಇದೇ ಸಂಗತಿ ಮತ್ತೊಂದು ಪ್ರಶ್ನೆ ಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಅವರು ಇಷ್ಟು ವ್ಯವಸ್ಥಿತವಾಗಿ ದಾಖಲೆಗಳನ್ನು ಇಟ್ಟು ಕೊಂಡಿದ್ದರೆ, ಅವರು ಯಾವ ದಾಖಲೆಗಳನ್ನು ನಾಶಪಡಿಸಿದರು ಎಂಬುದೂ ಅಷ್ಟೇ ಮಹತ್ವದ ಪ್ರಶ್ನೆಯಲ್ಲವೇ? ಭಾರತದಲ್ಲಿ ಈ ಎಲ್ಲಾ ದಾಖಲೆಗಳ ರೂವಾರಿ ಕಾನ್ರಾಡ್ ಕಾರ್‌ಫೀಲ್ಡ್, ಭಾರತದ ಜನಿಸಿ ತಮ್ಮ ಸೇವಾ ಜೀವನದ ಬಹುಭಾಗವನ್ನು ಭಾರತೀಯ ಆಡಳಿತ ಮತ್ತು ಸಂಸ್ಥಾನಗಳ ವ್ಯವಹಾರಗಳ ನಡುವೆ ಕಳೆದವರು. ಅವರಿಗೆ ಭಾರತದ ರಾಜರು, ಮಹಾರಾಜರು, ನವಾಬರು, ದಿವಾನರು ಮತ್ತು ಸಂಸ್ಥಾನಗಳ ರಾಜಕೀಯದ ಬಗ್ಗೆ ಅಪಾರ ಅರಿವಿತ್ತು.
ಬ್ರಿಟಿಷರ ಬಳಿ, ಸಂಸ್ಥಾನಗಳ ಕುರಿತು ವರ್ಷಗಳಿಂದ ಸಂಗ್ರಹವಾಗುತ್ತಿದ್ದ ಮಾಹಿತಿ ಸಾಮಾನ್ಯ ಆಡಳಿತ ದಾಖಲೆಗಳಷ್ಟೇ ಆಗಿರಲಿಲ್ಲ. ಯಾವ ರಾಜ ಯಾರೊಂದಿಗೆ ಹತ್ತಿರವಾಗಿದ್ದ? ಯಾವ ಸಂಸ್ಥಾನದಲ್ಲಿ ಯಾರಿಗೆ ಅಧಿಕಾರದ ಪೈಪೋಟಿ? ಯಾವ ರಾಜಮನೆತನದಲ್ಲಿ ಉತ್ತರಾಧಿಕಾರದ ಸಮಸ್ಯೆ ಇದೆ? ಯಾವ ದಿವಾನ ಬ್ರಿಟಿಷರ ಪರ? ಯಾರು ರಾಷ್ಟ್ರೀಯ ಚಳವಳಿಗೆ ಹತ್ತಿರ? ಯಾವ ಸಂಸ್ಥಾನ ಸ್ವಾತಂತ್ರ್ಯದ ನಂತರ ಭಾರತಕ್ಕೆ ಸೇರುವ ಸಾಧ್ಯತೆ ಹೊಂದಿದೆ? ಯಾವ ಸಂಸ್ಥಾನದಲ್ಲಿ ದಂಗೆಯೇಳುವ ಸಾಧ್ಯತೆಗಳಿವೆ? ಯಾವ ಸಂಸ್ಥಾನದಲ್ಲಿ ಅಧಿಕಾರಕ್ಕಾಗಿ ಕೊಲೆಗಳು ನಡೆದವು? ಯಾರ ಜೊತೆ ಯಾರಿಗೆ ಅನೈತಿಕ ಸಂಬಂಧಗಳಿವೆ? ಯಾರು ಎಷ್ಟು ಪ್ರಮಾಣದಲ್ಲಿ ಧನ ಹಂಚಿದ್ದಾರೆ? ಯಾರ ಬಳಿ ಎಷ್ಟು ಸಂಪತ್ತಿದೆ? ಇಂತಹ ಅನೇಕ ಮಾಹಿತಿಗಳು ಬ್ರಿಟಿಷ್ ಪೊಲಿಟಿಕಲ್ ಡಿಪಾರ್ಟ್‌ಮೆಂಟ್‌ನ ಕಡತಗಳಲ್ಲಿ ಸಂಗ್ರಹವಾಗಿದ್ದವು.
ಕಾರ್‌ಫೀಲ್ಡ್ ಭಾರತವನ್ನು ಹೊರಗಿನಿಂದ ನೋಡಿದ ವ್ಯಕ್ತಿಯಲ್ಲ, ಅದರೊಳಗೇ ಜೀವನ ಕಳೆದಿದ್ದ ವ್ಯಕ್ತಿ. 1947ರಲ್ಲಿ ಬ್ರಿಟಿಷರು ಭಾರತವನ್ನು ತೊರೆಯುವ ಸಮಯ ಬಂದಾಗ, ಅವರ ಮುಂದೆ ಒಂದು ದೊಡ್ಡ ಪ್ರಶ್ನೆಯಿತ್ತು. ಬ್ರಿಟಿಷ್ ಇಂಡಿಯಾದ ಹೊರತಾಗಿ ಭಾರತದಲ್ಲಿ ನೂರಾರು ಸಂಸ್ಥಾನಗಳಿದ್ದವು. ಅವು ಬ್ರಿಟಿಷರ ಸರ್ವೋಚ್ಚ ಅಧಿಪತ್ಯದ ಅಡಿಯಲ್ಲಿ ತಮ್ಮದೇ ಆದ ಆಂತರಿಕ ಆಡಳಿತ ವ್ಯವಸ್ಥೆಗಳನ್ನು ಹೊಂದಿದ್ದವು.
ಬ್ರಿಟಿಷರ ಅಧಿಪತ್ಯ ಮುಗಿದ ನಂತರ ಈ ಸಂಸ್ಥಾನಗಳ ಭವಿಷ್ಯ ಏನು? ಅವು ಭಾರತಕ್ಕೆ ಸೇರುತ್ತವೆಯೇ? ಸ್ವತಂತ್ರವಾಗಿರಲು ಪ್ರಯತ್ನಿಸುತ್ತವೆಯೇ? ಬೇರೆ ರೀತಿಯ ರಾಜಕೀಯ ಒಪ್ಪಂದ ಮಾಡಿಕೊಳ್ಳುತ್ತವೆಯೇ? ಇದು ಕೇವಲ ರಾಜರ ಪ್ರಶ್ನೆಯಾಗಿರಲಿಲ್ಲ. ಹೊಸ ಭಾರತದ ಏಕತೆ ಮತ್ತು ಭವಿಷ್ಯದ ಪ್ರಶ್ನೆಯಾಗಿತ್ತು. ಈ ಸಮಯದಲ್ಲಿ ಬ್ರಿಟಿಷರ ಬಳಿ ಇದ್ದ ಸಂಸ್ಥಾನಗಳ ಕುರಿತ ಹಳೆಯ ದಾಖಲೆಗಳು ಅಪಾರ ರಾಜಕೀಯ ಮೌಲ್ಯ ಹೊಂದಿದ್ದವು. ಅದು ಕೇವಲ ಹಳೆಯ ಕಡತಗಳ ಗುಡ್ಡವಲ್ಲ. ಅದು ಭಾರತದ ರಾಜಕೀಯದ ಒಳನಕ್ಷೆಯಾಗಿತ್ತು.
ನನ್ನನ್ನು ಬೆಚ್ಚಿಬೀಳಿಸಿದ್ದು, ಕಾರ್‌ಫೀಲ್ಡ್ ಮತ್ತು ಅವರ ಇಲಾಖೆಯ ಬಳಿ ಇದ್ದ ಕೆಲವು ಸೂಕ್ಷ್ಮ ದಾಖಲೆಗಳನ್ನು ನಾಶಪಡಿಸುವ ಕ್ರಮ. ಕೆಲವು ಐತಿಹಾಸಿಕ ಮೂಲಗಳು ಸುಮಾರು ನಾಲ್ಕು ಟನ್ ದಾಖಲೆಗಳು ನಾಶವಾದವು ಎಂದು ಉಲ್ಲೇಖಿಸುತ್ತವೆ. ನಾಲ್ಕು ಟನ್! ಈ ಸಂಖ್ಯೆಯನ್ನು ಓದಿದಾಗ ಮೊದಲಿಗೆ ಅದು ಕೇವಲ ಒಂದು ಅಂಕಿಯಂತೆ ಕಾಣುತ್ತದೆ. ಆದರೆ ಒಂದು ಕ್ಷಣ ಯೋಚಿಸಿ! ನಾಲ್ಕು ಟನ್ ಕಾಗದದೊಳಗೆ ಎಷ್ಟು ರಾಜರ ಕಥೆಗಳಿರಬಹುದು? ಎಷ್ಟು ಕುಟುಂಬಗಳ ಒಳಜಗಳಗಳಿರ ಬಹುದು? ಎಷ್ಟು ಗುಪ್ತ ಮಾತುಕತೆಗಳಿರಬಹುದು? ಯಾವ ರಾಜಕೀಯ ನಿರ್ಧಾರಗಳ ಹಿನ್ನೆಲೆ ಇರಬಹುದು? ನಾವು ಇಂದು ತಿಳಿದಿರುವ ಭಾರತದ ಇತಿಹಾಸಕ್ಕಿಂತ ಬೇರೆ ಒಂದು ಚಿತ್ರ ಆ ದಾಖಲೆಗಳಲ್ಲಿ ಅಡಗಿದ್ದಿರಬಹುದೇ? ತೀನ್ ಮೂರ್ತಿಭವನದಲ್ಲಿ, ನೆಹರು ಆರ್ಕೈವ್‌ನಲ್ಲಿ, 13 ಜೂನ್ 1947ರ ಒಂದು ಪ್ರಮುಖ ದಾಖಲೆಯಿದೆ. ಅದರ ವಿಷಯ ಪೊಲಿಟಿಕಲ್ ಡಿಪಾರ್ಟ್‌ಮೆಂಟ್ ಮತ್ತು ಅದರ ಕ್ರಮಗಳ ಬಗ್ಗೆ ಉಂಟಾದ ಆಕ್ಷೇಪಗಳಿಗೆ ಸಂಬಂಧಿಸಿದ್ದು.
ದಾಖಲೆಯನ್ನು ಓದುತ್ತಿದ್ದಾಗ ನನಗೆ ಒಂದು ಕ್ಷಣ ನಿಜವಾಗಿಯೂ ಆಶ್ಚರ್ಯವಾಯಿತು. ನಾವು ಇತಿಹಾಸದ ಪುಸ್ತಕಗಳಲ್ಲಿ ಓದುವ ಘಟನೆಗಳು ಕೇವಲ ನಂತರದ ವ್ಯಾಖ್ಯಾನಗಳಲ್ಲ. ಅವು ನಡೆಯುತ್ತಿದ್ದ ಕಾಲದಲ್ಲಿಯೇ ಅವುಗಳ ಬಗ್ಗೆ ಚರ್ಚೆಗಳು, ಆಕ್ಷೇಪಗಳು ಮತ್ತು ಅಧಿಕೃತ ದಾಖಲೆ ಗಳಿದ್ದವು.
1947ರಲ್ಲಿಯೇ ಭಾರತೀಯ ನಾಯಕತ್ವದ ಮುಂದೆ ಈ ವಿಷಯ ಬಂದಿತ್ತು. ಕಾರ್‌ಫೀಲ್ಡ್ ಏಕೆ ದಾಖಲೆ ಗಳನ್ನು ನಾಶಪಡಿಸಿದರು? ಸರಳವಾಗಿ ಬ್ರಿಟಿಷರು ಇತಿಹಾಸವನ್ನು ಅಳಿಸಲು ದಾಖಲೆ ಸುಟ್ಟರು ಎಂದು ಹೇಳಿಬಿಡುವುದು ಸರಿಯಾಗುವುದಿಲ್ಲ.
ಭಾರತದಿಂದ ಕೊಳ್ಳೆ ಹೊಡೆದ, ಕೊಳ್ಳೆ ಹೊಡೆಯಲು ಸಹಕರಿಸಿದ ರಾಜರುಗಳ ಋಣ ತೀರಿಸಲು ಕಾರ್‌ಫೀಲ್ಡ್ ನೇತೃತ್ವದ ಬ್ರಿಟಿಷ್ ಇಂಡಿಯಾ ತೆಗೆದುಕೊಂಡಿದ್ದ ನಿರ್ಧಾರವೇ, ಕಡತಗಳ ದಹನ. ರಾಜಮನೆತನಗಳ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಗಳು ಸ್ವತಂತ್ರ ಭಾರತದ ಹೊಸ ಸರಕಾರದ ಕೈಗೆ ಸಿಕ್ಕರೆ ಅವುಗಳನ್ನು ರಾಜಕೀಯವಾಗಿ ಬಳಸಬಹುದು ಎಂಬ ಆತಂಕ ಇತ್ತೇನೋ? ಅವರು ಸಂಸ್ಥಾನಗಳ ರಾಜಮನೆತನಗಳೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದರು. ಅವರ ಗೌಪ್ಯತೆಯನ್ನು ರಕ್ಷಿಸುವುದು ತಮ್ಮ ಕರ್ತವ್ಯವೆಂದು ಅವರು ಭಾವಿಸಿದ್ದಿರಬಹುದು.
ನಾವು ಪ್ರಿನ್ಸ್‌ಲಿ ಸ್ಟೇಟ್ಸ್ ಎಂದು ಕರೆಯುವ ಆ ಸಂಸ್ಥಾನಗಳು ಇಂದು ರಾಜಕೀಯ ನಕ್ಷೆಯಲ್ಲಿಲ್ಲ. ಆದರೆ ಆ ಸಂಸ್ಥಾನಗಳ ಅನೇಕ ರಾಜಮನೆತನಗಳ ವಂಶಸ್ಥರು ಮಾತ್ರ ಭಾರತದ ಸಾರ್ವಜನಿಕ ಜೀವನದಿಂದ ಮಾಯವಾಗಿಲ್ಲ. ಕೆಲವರು ಸ್ವಾತಂತ್ರ್ಯಾನಂತರದ ಚುನಾವಣಾ ರಾಜಕೀಯಕ್ಕೆ ಬಂದರು. ಕೆಲವರು ಶಾಸಕರಾದರು, ಸಂಸದರಾದರು, ಮುಖ್ಯಮಂತ್ರಿಗಳಾದರು, ಕೇಂದ್ರ ಸಚಿವರಾದರು.
ವಿವಿಧ ರಾಜ್ಯಗಳಲ್ಲಿ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಭಾವ ಬೀರಿದರು. ಗತಕಾಲದ ಸಂಸ್ಥಾನಗಳ ಕುಟುಂಬಗಳು ಇಂದಿನ ಪ್ರಜಾಪ್ರಭುತ್ವದ ರಾಜಕೀಯದಲ್ಲಿಯೂ ಮುಂದುವರಿದಿವೆ. ಹಲವಾರು ಅರಮನೆಗಳು ಈಗ ಬೃಹತ್ ಹೋಟೆಲ್/ ರೆಸಾರ್ಟ್ ಗಳಾಗಿವೆ. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಎಲ್ಲಾ ರಾಜವಂಶಸ್ಥರು ವೈಭವೋಪೇತ ಜೀವನವನ್ನು ಈಗಲೂ ನಡೆಸುತ್ತಿದ್ದಾರೆ. ಇದರಿಂದಲೇ ಕಾರ್‌ಫೀಲ್ಡ್ ಬಳಿ ಇದ್ದ ದಾಖಲೆಗಳ ಪ್ರಶ್ನೆ ಇನ್ನಷ್ಟು ಆಸಕ್ತಿದಾಯಕವಾಗುತ್ತದೆ. ಅವುಗಳಲ್ಲಿ ಈ ಕುಟುಂಬಗಳ ಹಿಂದಿನ ರಾಜಕೀಯ ಸಂಬಂಧಗಳ ಬಗ್ಗೆ ಏನಿತ್ತು? ಬ್ರಿಟಿಷರೊಂದಿಗೆ ಅವರ ನಿಜವಾದ ಸಂಬಂಧ ಏನು? ಸ್ವಾತಂತ್ರ್ಯದ ಸಮಯದಲ್ಲಿ ಅವರ ನಿಲುವು ಏನಾಗಿತ್ತು? ಯಾರು ಭಾರತಕ್ಕೆ ಸೇರುವ ಪರವಾಗಿದ್ದರು? ಯಾರು ವಿರೋಧಿಸಿದ್ದರು? ಯಾವ ಕುಟುಂಬದೊಳಗೆ ಏನು ಚರ್ಚೆಯಾಗುತ್ತಿತ್ತು? ಈ ಪ್ರಶ್ನೆಗಳಿಗೆ ಕೆಲವು ಉತ್ತರಗಳು ದಾಖಲೆಗಳಲ್ಲಿ ಇದ್ದಿರಬಹುದು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ಧನ ಮತ್ತು ಸೈನಿಕ ಸಹಾಯ ಮಾಡಿದ್ದು ಯಾವ ರಾಜರು? ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ರಾಜ/ನವಾಬರನ್ನು ಸಂಪೂರ್ಣವಾಗಿ ನಾಶ ಮಾಡಿದ್ದರಲ್ಲಿ ಯಾರ ಪ್ರಮುಖ ಪಾತ್ರವಿತ್ತು? ಇಂತಹ ಅಸಂಖ್ಯಾತ ಪ್ರಶ್ನೆಗಳಿಗೆ ಉತ್ತರ ನೀಡಬಹು ದಾಗಿದ್ದ ದಾಖಲೆಗಳ ಒಂದು ಭಾಗ ಈಗ ಇಲ್ಲ. ನನ್ನ ದೃಷ್ಟಿಯಲ್ಲಿ, ಇದು ಈ ಸಂಪೂರ್ಣ ಕಥೆಯ ಅತ್ಯಂತ ಮುಖ್ಯವಾದ ಭಾಗ. ಆ ದಾಖಲೆ ಇಲ್ಲದಿದ್ದರೆ? ಒಂದು ಕಾಗದ ಸುಟ್ಟರೆ ಕಾಗದ ಮಾತ್ರ ಸುಡುವುದಿಲ್ಲ, ಅದರಲ್ಲಿರುವ ಸಾಕ್ಷ್ಯ ಸುಡುತ್ತದೆ.
ನಮ್ಮ ಬಳಿ ಊಹೆ ಮಾತ್ರ ಉಳಿಯುತ್ತದೆ. ಇತಿಹಾಸಕಾರನಿಗೆ ಅದೇ ದೊಡ್ಡ ನಷ್ಟ, ದೇಶಕ್ಕೂ ನಷ್ಟ. ಎಲ್ಲವನ್ನೂ ಸುಟ್ಟುಹಾಕಲಾಯಿತೇ ಎನ್ನುವುದು ಕೂಡ ಗೌಪ್ಯವಾಗಿದೆ. ಅನೇಕ ದಾಖಲೆಗಳು ಭಾರತದ ಉಳಿದಿವೆ. ಕೆಲವು ಬ್ರಿಟನ್‌ಗೆ ಹೋದವು. ಕೆಲವು ಆರ್ಕೈವ್‌ಗಳಲ್ಲಿ ಸಂರಕ್ಷಿಸಲ್ಪಟ್ಟಿವೆ. ಕೆಲವು ಸಂಶೋಧಕರಿಗೆ ಲಭ್ಯವಾಗಿವೆ. ಯಾವ ದಾಖಲೆಗಳು ನಾಶವಾದವು? ಯಾವವು ಉಳಿದವು? ಯಾವವು ಬ್ರಿಟನ್‌ಗೆ ಸಾಗಿದವು? ಇನ್ನೂ ಯಾವವು ಪತ್ತೆಯಾಗಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ, ಭಾರತದ ಸಂಸ್ಥಾನಗಳ ಇತಿಹಾಸವನ್ನು ನಾವು ಇನ್ನಷ್ಟು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು.
ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ, ನಮ್ಮದೇ ಸರಕಾರವನ್ನು ಕಟ್ಟಿದ್ದೇವೆ, ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇವೆ. ಆದರೆ ನಮ್ಮ ಇತಿಹಾಸದ ಪ್ರತಿಯೊಂದು ಪುಟವೂ ನಮ್ಮ ಬಳಿ ಉಳಿದಿದೆಯೇ? ಬಹುಶಃ ಇಲ್ಲ. ಕೆಲವು ಪುಟಗಳು ಬೆಂಕಿಯಲ್ಲಿ ನಾಶವಾಗಿವೆ, ಕೆಲವು ವಿದೇಶಿ ಆರ್ಕೈವ್‌ಗಳಲ್ಲಿ ಮಲಗಿವೆ, ಕೆಲವು ಇನ್ನೂ ನಮ್ಮದೇ ದೇಶದ ಆರ್ಕೈವ್‌ಗಳಲ್ಲಿ ಸಂಶೋಧಕರಿಗಾಗಿ ಕಾಯುತ್ತಿವೆ ಮತ್ತು ಕೆಲವು ಪುಟಗಳು ಎಂದಿಗೂ ಮರಳಿ ಬರುವುದಿಲ್ಲ. ನಾವು ನೋಡುತ್ತಿರುವ ಒಂದು ಪುಟದ ಹಿಂದಿನ ಅದೆಷ್ಟು ಪುಟಗಳು ಈಗ ಇಲ್ಲ. ಬ್ರಿಟಿಷರು ಭಾರತವನ್ನು ತೊರೆದರು, ಅವರು ಬಿಟ್ಟುಹೋದ ದಾಖಲೆಗಳಷ್ಟೇ ಅಲ್ಲ, ಅವರು ನಾಶಪಡಿಸಿದ ದಾಖಲೆಗಳೂ ನಮ್ಮ ಇತಿಹಾಸದ ಒಂದು ಭಾಗವಾಗಿದೆ.