ವಿ.ಎಸ್.ಕಳಸೇಶ್ವರ
ಇಂದು ಶಿವರಾತ್ರಿ ಬಂತೆಂದರೆ, ಎಲ್ಲ ಹಬ್ಬಗಳಂತೆಯೇ ವಾಟ್ಸಾಪ್ ಸಂದೇಶಗಳ ಸುರಿಮಳೆ. ದೇವಸ್ಥಾನಗಳಲ್ಲೆಲ್ಲ ವಿಶೇಷ ದರ್ಶನಕ್ಕೆ ಭಕ್ತರ ಸಾಲುಸಾಲು. ಅಷ್ಟೇ ಅಲ್ಲದೆ ಕಾಶಿಯಿಂದ ತಂದ ಪವಿತ್ರ ಗಂಗಾಜಲ ತೀರ್ಥ ವಿತರಣೆಯೂ ನಡೆಯುತ್ತದೆ. ನಮ್ಮ ಬಾಲ್ಯಕಾಲದಲ್ಲಿ ಶಿವರಾತ್ರಿ ಹೇಗಿರುತ್ತಿತ್ತು ಎಂಬುದೇ ಈ ಮೆಲುಕು.
ನಮ್ಮ ಬಾಲ್ಯದಲ್ಲಿ ಅಂದರೆ 50-60 ವರ್ಷಗಳ ಹಿಂದೆ ಮಲೆನಾಡಿನ ಮೂಲೆಯಲ್ಲಿದ್ದ ನಮ್ಮ ಮನೆಯಲ್ಲಿ ಶಿವರಾತ್ರಿಗೆ ಸುಮಾರು ಒಂದು ತಿಂಗಳ ಮೊದಲೇ ಸಿದ್ಧತೆ ಆರಂಭ ವಾಗುತ್ತಿತ್ತು. ಶಿವರಾತ್ರಿಯ ದಿನ ಬೆರಣಿ ಸುಟ್ಟು ಇಡೀ ವರ್ಷಕ್ಕಾಗುವಷ್ಟು ವಿಭೂತಿ ತಯಾರಿಸಿ, ಅದನ್ನು ಮುಂದಿನ ಶಿವರಾತ್ರಿಯ ತನಕ ಬಳಸುತ್ತಿದ್ದೆವು!
ವಿಭೂತಿ ತಯಾರಿಸಲು ಸಗಣಿ ಸಂಗ್ರಹಿಸಿ ಒದಗಿಸುವ ಪ್ರಕ್ರಿಯೆ ಒಂದು ತಿಂಗಳಿಂದಲೇ ಪ್ರಾರಂಭವಾಗುತ್ತಿತ್ತು. ನಮ್ಮ ಮನೆಯಲ್ಲಿ ಸಾಕಿದ್ದ ದನಕರುಗಳ ಸಗಣಿಯನ್ನು ಪ್ರತ್ಯೇಕ ವಾಗಿ ಸಂಗ್ರಹಿಸಿ ಗರಿಗರಿಯಾಗುವಂತೆ ಬಿಸಿಲಲ್ಲಿ ಒಣಗಿಸುತ್ತಿದ್ದೆವು. ಜೊತೆಗೆ ನಮ್ಮ ಮನೆ ಯ ಹಿಂಭಾಗದಲ್ಲಿ ಒಂದು ದೊಡ್ಡ ಕೆರೆಯಿದ್ದು ಅದರ ಇಳಿಜಾರಾಗಿದ್ದ ಏರಿಯ ಮೇಲೆ ಹುಲುಸಾಗಿ ಬೆಳೆದಿದ್ದ ಜೆಡ್ಡು ಹುಲ್ಲನ್ನು ಮೇಯಲು ದಿನವೂ ದನಕರುಗಳು ಬರುತ್ತಿದ್ದವು. ಸಂಜೆಯ ಹೊತ್ತು ಒಂದು ಹೆಡಗೆ (ಬೆತ್ತದ ಬುಟ್ಟಿ)ಯಲ್ಲಿ ಒಣಗಿದ ಸಗಣಿ ತುಂಡುಗಳನ್ನೆಲ್ಲ ತಂದು ಸಂಗ್ರಹಿಡುತ್ತಿದ್ದೆವು.
ಇದನ್ನೂ ಓದಿ: Keshav Prasad Column: ಸಂಯೋಜಿತ ಚಿಕಿತ್ಸೆಯ ಹರಿಕಾರ
ಶಿವರಾತ್ರಿಯ ದಿನ ಬೆಳಿಗ್ಗೆ ಎದ್ದ ಕೂಡಲೇ ಶಿವನಿಗೆ ಶ್ರೇಷ್ಠವೆಂದು ಹೇಳಲಾದ ತುಂಬೇ ಹೂವನ್ನು (ಗದ್ದೆ ತುಂಬೆ ಎಂಬ ಬಿಳಿಯ ಬಣ್ಣದ ಸಣ್ಣ ಹೂವು) ಕೊಯ್ಯುವುದೇ ನಮ್ಮ ಮುಖ್ಯ ಕಾರ್ಯಕ್ರಮ. ಮನೆ ಹಿಂದಿನ ಕೆರೆ ದಂಡೆಯಲ್ಲಿ ಹುಲುಸಾಗಿ ಬೆಳೆದ ಗದ್ದೆ ತುಂಬೆ ಗಿಡಗಳಿಂದ ಹೂವು ಸಂಗ್ರಹಿಸಿ, ಬುಟ್ಟಿಯಲ್ಲಿ ತುಂಬಿ ತರುತ್ತಿದ್ದೆವು.
ಶಿವರಾತ್ರಿಯಂದು ನಮಗೆಲ್ಲ ಉಪವಾಸ. ಉಪವಾಸವೆಂದರೆ ನಿರಾಹಾರವಲ; ಅದರಲ್ಲೂ ಮಕ್ಕಳಿಗೆ, ಲಘು ದೇಹಿಗಳಿಗೆ ಕಟ್ಟುನಿಟ್ಟಿನ ಉಪವಾಸದಿಂದ ವಿನಾಯಿತಿ ಇದೆ ಅಲ್ಲವೆ! ಮುಸುರೆಯೆಂದು ಗಣಿಸಲಾದ ಅನ್ನವನ್ನು ಹೊರತುಪಡಿಸಿದ ಉಪ್ಪಿಟ್ಟು-ಅವಲಕ್ಕಿ ಇತ್ಯಾದಿಗಳ ಲಘೂಪಹಾರ. ಪೂಜೆ ಮಾಡುವ ನಮ್ಮ ತಂದೆ ಹಾಗೂ ನೈವೇದ್ಯ ಸಿದ್ಧಪಡಿ ಸುವ ನಮ್ಮ ಅಮ್ಮ ಮಾತ್ರ ಕಟ್ಟುನಿಟ್ಟಾದ ಉಪವಾಸ ಮಾಡುತ್ತಿದ್ದರು.
ಗದ್ದೆಯಲ್ಲಿ ಬೆರಣಿ ಬೆಂಕಿ
ಸಂಜೆಯಾಗುತ್ತಿದ್ದಂತೆ ನಾವು ಅಂದರೆ ಹುಡುಗರು, ಕಳೆದ ನಾಲ್ಕಾರು ವಾರಗಳಿಂದ ಸಂಗ್ರಹಿಸಿದ ಒಣಗಿಸಿದ ಸಗಣಿ ಚೂರುಗಳನ್ನು ಗದ್ದೆಯ ಬಯಲಿಗೆ ಸಾಗಿಸಿ ದೊಡ್ಡ ರಾಶಿ ಹಾಕಿ ಬೆಂಕಿ ಹಚ್ಚುತ್ತಿದ್ದವು. ಚುಮುಚುಮು ಚಳಿಯಲ್ಲಿ ದಗದಗ ಹೊತ್ತಿ ಉರಿಯುತ್ತಿರುವ ಬೆರಣಿಯ ರಾಶಿಯ ಸುತ್ತಲೂ ಕುಳಿತು ಬೆಂಕಿ ಕಾಯಿಸುವುದೇ ನಮಗೊಂದು ವಿಶೇಷ ಸಂಭ್ರಮ. ಸಗಣಿ ರಾಶಿ ಸಂಪೂರ್ಣವಾಗಿ ಉರಿದು ಬೂದಿಯಾಗುವವರೆಗೂ ಅಲ್ಲಿಂದ ಬಿಟ್ಟು ಕದಲುತ್ತಿರಲಿಲ್ಲ.
ಇತ್ತ ಮನೆಯಲ್ಲಿ, ನಮ್ಮ ತಂದೆಯವರು ಸುದೀರ್ಘ ಪೂಜೆ ಮಾಡಿ ಮುಗಿಸುವಾಗ ತಡರಾತ್ರಿ ಯಾಗಿರುತ್ತಿತ್ತು. ನಂತರ ಹೆಸರುಂಡೆ, ರವೆ ಉಂಡೆ, ಅವಲಕ್ಕಿ, ಹೆಸರು ಪಾಯಸ ಇತ್ಯಾದಿಗಳ ಉಪಾಹಾರ. ಅಲ್ಲಿಗೆ ಶಿವರಾತ್ರಿಯ ಹಬ್ಬದ ಒಂದು ಹಂತ ಮುಗಿದಂತೆ. ರಾತ್ರಿ ಭಜನೆ ಮಾಡುತ್ತಾ ಜಾಗರಣೆ ಮಾಡುವವರು ಕೆಲವರು ಇರುತ್ತಿದ್ದರು.
ಮರುದಿನ ಸೆಗಣಿಯ ಬೂದಿಯನ್ನು ಸಂಗ್ರಹಿಸಿ ನೀರಿಗೆ ಹಾಕಿ ತೆಳುವಾದ ಬಟ್ಟೆಯ ಮೇಲೆ ಹಾಕಿ ಸೋಸಿದ ತಿಳಿಯನ್ನು ಅಗಲವಾದ ಪಾತ್ರೆಯಲ್ಲಿ ಹರಡಿ ಒದಗಿಸಿದಾಗ ನುಣುಪಾದ ವಿಭೂತಿ ಸಿದ್ಧವಾಗುತ್ತಿತ್ತು. ಅದನ್ನು ಮುಂದಿನ ಶಿವರಾತ್ರಿಯವರೆಗೂ ಬಳಸಲಾಗುತ್ತಿತ್ತು. ಇದು ನಮ್ಮ ಬಾಲ್ಯದ ಶಿವರಾತ್ರಿ ಆಚರಣೆ. ಮುಂದೆ ನಾನು ಕಾಲೇಜು ಶಿಕ್ಷಣಕ್ಕಾಗಿ ಉಜಿರೆಯ ಸಿದ್ಧವನ ಗುರುಕುಲದಲ್ಲಿ ನೆಲೆಸಿದ್ದ ಸಮಯದಲ್ಲಿ, ಧರ್ಮಸ್ಥಳಕ್ಕೂ ಒಮ್ಮೆ ಶಿವರಾತ್ರಿಯ ಉತ್ಸವದಲ್ಲಿ ಭೇಟಿ ನೀಡಿ ಪಾಲ್ಗೊಂಡಿದ್ದ ನೆನಪು ಹಚ್ಚಹಸಿರಾಗಿದೆ.
ಶಿವರಾತ್ರಿಯಂದು ಅಲ್ಲಿ ಇಡೀ ರಾತ್ರಿ ಜನಜಂಗುಳಿಯ ನಡುವೆ ಮೆರವಣಿಗೆ- ಉತ್ಸವ; ಜಾಗರಣೆಯ ಅಂಗವಾಗಿ ಅಲ್ಲಿ ರಾತ್ರಿಯಿಡೀ ಕಾರ್ಯ ಕ್ರಮ. ರಾಜ್ಯದ ವಿವಿಧ ಭಾಗಗಳಿಂದ ಬಂದು ಸೇವೆಯಲ್ಲಿ ಭಾಗವಹಿಸುವ ಜಾನಪದ ನೃತ್ಯಗಳು, ಭಜನೆ, ಮೆರವಣಿಗೆ, ಪೂಜೆ ಇತ್ಯಾದಿಗಳನ್ನು ನೋಡುವುದೇ ಒಂದು ಸಂಭ್ರಮ.
ಕೀಟಲೆಗಾಗಿ ಕಳ್ಳತನ
ದಕ್ಷಿಣ ಕನ್ನಡದ ಉಜಿರೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ, ಶಿವರಾತ್ರಿಯ ಜಾಗರಣೆಯ ವಿಶೇಷವೆಂದರೆ, ಹಳ್ಳಿಯ ಜನರಲ್ಲಿ ಕೆಲವರು ಕೀಟಲೆಗಾಗಿ ಕಳ್ಳತನ ಮಾಡುವುದು! ನಮ್ಮಲ್ಲಿ ಅಂದರೆ ಮಲೆನಾಡಿನ ಕೆಲವೆಡೆಗಳಲ್ಲಿ ನರಕಚತುರ್ದಶಿಯ ಹಿಂದಿನ ರಾತ್ರಿ ಯಂದು ‘ಬೂದಿಗಳು’ ಎಂಬ ಕುಂಬಳಕಾಯಿ ಕದಿಯುವ ಅಥವಾ ಅದೇ ನೆಪದಲ್ಲಿ ಇನ್ನಿತರ ವಸ್ತುಗಳನ್ನೂ ಕದಿಯುವ ಪದ್ಧತಿಯಿತ್ತು. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಶಿವರಾತ್ರಿಯಂದು ಕಳ್ಳತನದ ಸಂಪ್ರದಾಯವಿತ್ತು. ಅಂದು ನಮ್ಮ ಹಾಸ್ಟೆಲ್ಲಿನ ಆವರಣ ದಲ್ಲಿದ್ದ ತೆಂಗಿನ ಮರಗಳಿಂದ ಕಾಯಿಗಳನ್ನು ಕದಿಯುವವರಿದ್ದರು. ಅದರ ಮುನ್ನೆಚ್ಚರಿಕೆ ಯ ಕ್ರಮವಾಗಿ ನಾವು ಅಂದರೆ ಹಾಸ್ಟೆಲ್ಲಿನ ವಿದ್ಯಾರ್ಥಿಗಳು ರಾತ್ರಿಯಿಡೀ, ಪಾಳಿಯ ಮೇಲೆ ತೆಂಗಿನ ಕಾಯಿ ಕಳ್ಳರ ಮೇಲೆ ಕಣ್ಗಾವಲಿಡಲು ಜಾಗರಣೆ ಮಾಡುತ್ತಿದ್ದೆವು.
ಗವಿ ಗಂಗಾಧರೇಶ್ವರ ದೇಗುಲದಲ್ಲಿ
ಶಿಕ್ಷಣ ಮುಗಿಸಿ ಉದ್ಯೋಗ ನಿಮಿತ್ತ 80ರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ನೋಡಿದ ಬೆಂಗಳೂರಿನ ಅಂದಿನ ಶಿವರಾತ್ರಿಯ ಸಂಭ್ರಮ ಇನ್ನೊಂದು ತೆರನಾಗಿತ್ತು. ಬೆಂಗಳೂರಿನಲ್ಲಿ ಗವಿಗಂಗಾಧರೇಶ್ವರದಂತಹ ವಿಶೇಷ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ದರ್ಶನಕ್ಕಾಗಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಉಪವಾಸ, ದೇಗುಲ ದರ್ಶನ ಒಂದೆಡೆ ಯಾದರೆ, ಜಾಗರಣೆಯ ನೆಪದಲ್ಲಿ ರಾತ್ರಿಯಿಡೀ ಸಿನಿಮಾ ನೋಡುತ್ತಾ ಜಾಗರಣೆ ಮಾಡು ವುದೂ ಇನ್ನೊಂದು ವಿಶೇಷವಾಗಿತ್ತು.
ಶಿವರಾತ್ರಿಯಂದು ಎಲ್ಲ ಸಿನಿಮಾ ಮಂದಿರಗಳಲ್ಲೂ ರಾತ್ರಿಯಿಡೀ ಅಂದರೆ ಸೆಕೆಂಡ್ ಶೋ ನಂತರ ಮಿಡ್ ನೈಟ್ ಶೋ, ರಾತ್ರಿಯ ಎರಡು ಗಂಟೆಗೆ ಮತ್ತೊಂದು ಶೋ ಇರುತ್ತಿತ್ತು. ಪ್ರತಿ ಪ್ರದರ್ಶನಕ್ಕೂ ಬೇರೆ ಬೇರೆ ಸಿನಿಮಾಗಳಿರುತ್ತಿದ್ದು ಭಕ್ತಿಪ್ರಧಾನ ಹಾಗೂ ಇತg ಕಪ್ಪು-ಬಿಳುಪು ಚಿತ್ರಗಳಲ್ಲವೂ ಅಂದು ಪ್ರದರ್ಶನಗೊಳ್ಳುತ್ತಿದ್ದವು.
ಪ್ರದರ್ಶನಗೊಳ್ಳುವ ಚಿತ್ರಗಳ ವಿವರಗಳು ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟ ವಾಗುತ್ತಿದ್ದವು. ಜನರೂ ಸಹ ರಾತ್ರಿಯಿಡೀ ಸಿನಿಮಾ ನೋಡುವುದರ ಮೂಲಕ ಜಾಗರಣೆ ಮಾಡುತ್ತಿದ್ದರು. ಮುಂದೆ ದೂರದರ್ಶನ ಪ್ರಾರಂಭವಾದ ಮೇಲೆ ಶಿವರಾತ್ರಿಯಂದು ತಡರಾತ್ರಿಯಲ್ಲಿ ಯಾವುದಾದರೂ ಭಕ್ತಿಪ್ರದಾನ ಚಿತ್ರ ಪ್ರಸಾರವಾಗುತ್ತಿತ್ತು! ಅದು ಶಿವರಾತ್ರಿಯ ಜಾಗರಣೆಯ ಒಂದು ಭಾಗ!
ಬದಲಾಗಿರುವ ಇಂದಿನ ಕಾಲಘಟ್ಟದಲ್ಲಿ ಇವೆಲ್ಲವೂ ಗತಕಾಲದ ನೆನಪಾಗಿ ಉಳಿದಿವೆ. ಇಂದು ಶಿವರಾತ್ರಿಯ ಸಂಭ್ರಮವು ಸಾಕಷ್ಟು ಕಂಡುಬರುತ್ತಿದ್ದರೂ, ಅಂದಿಗಿಂತ ತುಸು ಬೇರೆಯ ರೀತಿಯಲ್ಲಿ ಜಾಗರಣೆ ಮೊದಲಾದ ಆಚರಣೆಗಳು ಕಂಡುಬರುತ್ತಿವೆ.