ತುಂಟರಗಾಳಿ
ಸಿನಿಗನ್ನಡ
ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಧ್ರುವ ಸರ್ಜಾ ಚಿತ್ರದುದ್ದಕ್ಕೂ ಧ್ರುವ ನಕ್ಷತ್ರದಂತೆ ಮಿನುಗಿದ್ದಾರೆ ಅಂತಿದ್ದಾರೆ. ಅಲ್ಲಿಗೆ ಅವರು ತಮ್ಮ ಸ್ಟಾರ್ ಪಟ್ಟ ಉಳಿಸಿಕೊಂಡಿದ್ದಾರೆ ಎನ್ನಬಹುದು. ಆದರೆ, ಪ್ರೇಮ್ ಅವರ ಕಥೆ ಏನು ಅಂತ ಕೇಳಿದರೆ ಅದಕ್ಕೂ ಪಾಸಿಟಿವ್ ಉತ್ತರ ಬರುತ್ತಿದೆ. ಬಹಳ ದಿನಗಳ ನಂತರ ಪ್ರೇಮ್ ಮತ್ತೆ ಲೈಮ್ ಲೈಟಿಗೆ ಬಂದಿದ್ದಾರೆ, ತಮ್ಮ ಫಾರ್ಮ್‌ಗೆ ಬಂದಿದ್ದಾರೆ, ತಮ್ಮ ಚಾರ್ಮ್ ಕಂಡುಕೊಂಡಿ ದ್ದಾರೆ ಅಂತಿದ್ದಾರೆ ಜನ.
ಅಲ್ಲಿಗೆ ಕೆಡಿ ಸಿನಿಮಾ ಪ್ರೇಮ್ ಅವರ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರಿಕೊಳ್ಳೋದು ತಪ್ಪಿದಂತಾಗಿದೆ. ಆದ ರೆ, ಕೆಲವರು ಮಾತ್ರ ಇನ್ನೂ ಪ್ರೇಮ್ ಅವರ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಕಾಲ್ ಎಳೆಯೋಕ್ ಬಂದೋರೆಲ್ಲ ಕಾಲ ಕೆಳಗೆ ಉಳಿದು ಹೋದ್ರಲ್ಲ ಅಂತ ಈ ಚಿತ್ರದಲ್ಲಿ ಪ್ರೇಮ್ ಹಾಡು ಬರೆದಿದ್ದರೂ ಕೆಲವರಿಗೆ ಪ್ರೇಮ್ ಅವರು ಸೋತಿದ್ದಾರೆ ಅಂತ ಹೇಳೋದ್ರಲ್ಲಿ ಅದೇನೋ ಖುಷಿ.
ಅಂತಹ ಅತೃಪ್ತರನ್ನು ತೃಪ್ತಿ ಪಡಿಸೋದು ಕಷ್ಟ ಬಿಡಿ. ಆದರೆ, ಪ್ರೇಮ್ ಗೆದ್ದಿದ್ದಾರೆ ಅಂತ ಪ್ರೇಕ್ಷಕ ತೀರ್ಪು ಕೊಟ್ಟಿದ್ದಾನೆ. ಅಲ್ಲಿಗೆ ಇನ್ಯಾರು ಏನ್ ಹೇಳಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ಕೆಡಿ ಚಿತ್ರ ಯಶಸ್ಸಿನ ಕಿಡಿ ಹೊತ್ತಿಸಿದೆ ಎನ್ನಬಹುದು. ರಾಜ್ಯದಾದ್ಯಂತ ಎಲ್ಲ ಕಡೆ ಕೆಡಿ ಚಿತ್ರಕ್ಕೆ ಪಾಸಿಟಿವ್ ಅಭಿಪ್ರಾಯ ಬಂದಿದೆ. ಅಲ್ಲಿಗೆ ಪ್ರೇಮ್ ಗೆದ್ದಿದ್ದಾರೆ. ಕೆಡಿ ಚಿತ್ರದ ಎರಡನೇ ಭಾಗ ಮಾಡ್ತೀನಿ ಅಂತ ಹುಮ್ಮಸ್ಸಿನಿಂದ ರೆಡಿ ಆಗ್ತಿದ್ದಾರೆ ಪ್ರೇಮ್. ಈ ಚಿತ್ರದಲ್ಲಿ ತಮ್ಮ ಮಗನನ್ನು ಬೆಳ್ಳಿ ತೆರೆಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ ಪ್ರೇಮ್. ಹಾಗಾಗಿ ಅವರ ಮಗನನ್ನು ಪ್ರೇಮ್ ಯಾವಾಗ ಹೀರೋ ಮಾಡ್ತಾರೆ ಅನ್ನೋ ಕುತೂಹಲವೂ ಈಗ ಸೃಷ್ಟಿ ಆಗಿದೆ. ಒಟ್ಟಿನಲ್ಲಿ ಭರವಸೆಯ ನಿರ್ದೇಶಕ ಭರವಸೆ ಉಳಿಸಿಕೊಂಡಿರೋದು ಚಿತ್ರರಂಗದ ಪಾಲಿಗೆ ಪಾಸಿಟಿವ್ ವಿಷಯ.
ಇದನ್ನೂ ಓದಿ: Hari Paraak Column: ರಾಘವ ಛಡ್ಡಾ- ಹಮ್ ʼಆಪ್ʼ ಕೇ ಹೈ ಕೌನ್
ಲೂಸ್ ಟಾಕ್- ಚೇತನ್ ಅಹಿಂಸಾ
ಅಲ್ರೀ, ಚೇತನ್ ಅಹಿಂಸಾ ಅಂತ ಹೆಸರಿಟ್ಕೊಂಡು, ಯಾವಾಗ್ಲೂ ಹಿಂಸೆಗೆ ದಾರಿ ಆಗೋ ಥರಾನೇ ಸ್ಟೇಟ್ʼಮೆಂಟ್ ಕೊಡ್ತಾ ಇರ್ತೀರಲ್ಲ?
- ನಾನು ಮೊದ್ಲು ‘ಸ್ಟೇಟ್ಸ್’ನಲ್ಲಿ ಇದ್ದಾನಲ್ವಾ, ಅದಕ್ಕೇ ಸ್ಟೇಟ್ ಮೆಂಟ್ ಕೊಡೋದು ನನ್ನ ಹಾಬಿ
ನಿಮ್ಮ ಸ್ಟೇಟಸ್ ಏನೇ ಇರಬಹುದು, ಆದ್ರೆ, ನಮ್ಮ ಸ್ಟೇಟ್ ಕಂಡೀಷನ್ ನೋಡ್ಕೊಂಡ್ ಮಾತಾಡ್ಬೇಕಲ್ವಾ?
- ನಂಗೆ ಹಿಂಗೆಲ್ಲಾ ಕಂಡೀಷನ್ ಹಾಕ್ಬಾರ್ದು, ನಾನ್ ಯಾವಾಗ್ಲೂ ಕಂಡೀಷನ್ ಆಗೇ ಮಾತಾಡ್ತೀನಿ.
ಏನ್ರೀ, ಇದು, ಅಮೆರಿಕ ಇಂಗ್ಲಿಷ್ ಬಿಟ್ಟು ನಮ್ಮ ಬಟ್ಲರ್ ಇಂಗ್ಲಿಷ್ ಶುರು ಮಾಡಿಬಿಟ್ರಿ, ಸರಿ, ಬರೀ ಇದೇ ಮಾಡ್ತೀರೋ ಇಲ್ಲಾ ಸಿನಿಮಾನೂ ಮಾಡ್ತೀರೋ? ನಿಮ್ಮ ಲಾಸ್ಟ್ ಸಿನಿಮಾ ಯಾವುದು ಅಂತ ನಿಮಗಾದ್ರೂ ನೆನಪಿದೆಯಾ?
- ಅಲ್ರೀ, ಸಿನಿಮಾದಲ್ಲಿ ಆಕ್ಟ್ ಮಾಡೋಕೆ ಅವಕಾಶ ಸಿಕ್ಕಿದ್ದಿದ್ರೆ, ಇದೆಲ್ಲಾ ಯಾಕ್ ಮಾಡ್ತಿದ್ದೆ?
ಅದೂ ಸರಿನೇ..ಆದ್ರೆ ಮೊನ್ನೆ ಮಾತಾಡಿದ್ದೊಂದು, ಇವತ್ತು ಮಾತಾಡೋದೊಂದು ಅನ್ನೋ ಥರ ಆಡ್ತೀರಂತೆ ನೀವು?
- ಮತ್ತೆ, ‘ಆ ದಿನಗಳ’ಲ್ಲಿ ಮಾತಾಡಿದ್ದನ್ನ, ಮತ್ತೆ ಈ ದಿನಗಳಲ್ಲೂ ಮಾತಾಡೋಕಾಗುತ್ತಾ?
ಆಯ್ತಪ್ಪ, ಇಷ್ಟೆಲ್ಲಾ ಮಾತಾಡ್ತೀರಲ್ಲ, ನಿಮ್ಮ ಉದ್ದೇಶ ಏನು ಅಂತ ಅಟ್ ಲೀಸ್ಟ್ ನಿಮಗಾದ್ರೂ ಸ್ಪಷ್ಟವಾಗಿ ಗೊತ್ತಿದೆಯಾ?
- ಉದ್ದೇಶದ್ ಮನೆ ಹಾಳಾಯ್ತು, ನಂಗೆ ಸರಿಯಾಗಿ ನನ್ನ ದೇಶ ಯಾವ್ದು ಅಂತಾನೇ ಸರಿಯಾಗಿ ಗೊತ್ತಾಗ್ತಿಲ್ಲ.
ಓಹೋ, ನಿಮ್ಮನ್ನು ನೋಡಿನೇ, ಓ ನನ್ನ ಚೇತನಾ, ಆಗು ನೀ ಅನಿಕೇತನಾ ಅಂತ ಕುವೆಂಪು ಅವರು ಹಾಡು ಬರೆದಿದ್ದು ಅನ್ಸುತ್ತೆ
- ಕುವೆಂಪುನಾ? ಅದ್ಯಾರು?
ನಿಮಗೆ ಪರ್ಮನೆಂಟ್ ದೇಶ ಇಲ್ಲ ಅನ್ನೋ ಕಾರಣಕ್ಕೆ, ನಿಮಗೆ ಕಾಲು ಒಂದ್ಕಡೆ ನಿಲ್ಲಲ್ಲ, ನೆಲದ ಮೇಲೆ ಕಾಲು ನಿಲ್ಲಲ್ಲ ಅಂತ ಜನ ಮಾತಾಡ್ಕೊತಾ ಇದ್ರು, ಈಗ ಹಿಂಗೆಲ್ಲಾ ಕೇಳೋದ್ ನೋಡಿದ್ರೆ ಕುತ್ತಿಗೆ ಮೇಲೆ ತಲೆ ನಿಲ್ಲಲ್ಲ ಅನ್ಸುತ್ತೆ
- ಇದೇನ್ ಪ್ರಶ್ನೆನೋ, ಪ್ರಬಂಧನೋ ಗೊತ್ತಾಗ್ತಿಲ್ಲ. ಆದ್ರೂ, ಈ ನಿ ವಿಷಯ ಬಂದ್ರೆ ನನ್ನದು ಅಂತ ಒಂದ್ ‘ಸ್ಟ್ಯಾಂಡ್’ ಇರುತ್ತೆ. ಅದಕ್ಕೆ ತಕ್ಕಂಗೆ ಮಾತಾಡ್ತೀನಿ ಅಷ್ಟೇ.
ಬರೀ ಸ್ಟ್ಯಾಂಡ್ ಇದ್ರೆ ಸಾಲದು, ಒಂದ್ ಸ್ಟ್ಯಾಂಡರ್ಡ್ ಇರಬೇಕು, ಅದು ಜನಕ್ಕೆ ಅಂಡರ್ ಸ್ಟ್ಯಾಂಡ್ ಕೂಡಾ ಆಗಬೇಕು ಅಲ್ವಾ?
- ಅವೆಲ್ಲಾ ಗೊತ್ತಿಲ್ರೀ, ಒಟ್ನಲ್ಲಿ ಈ ವಿಷಯದಲ್ಲಿ ‘ಐ ಸ್ಟ್ಯಾಂಡ್ ವಿಥ್ ಮೈ ಸೆಲ್’ ಅಷ್ಟೇ.
ಅಯ್ಯೋ, ನೀವ್ ಎಲ್ಲಾದ್ರೂ ನಿಂತ್ಕೊಳಿ, ಈಗ ಸದ್ಯಕ್ಕೆ ಮಾತು ನಿಲ್ಲಿಸ್ರಪ್ಪಾ ಸಾಕು..
- ಹಲೋ, ಜಾಸ್ತಿ ಮಾತಾಡ್ತಿರೋದ್ ನಾನಾ, ನೀವಾ? 5 ಪ್ರಶ್ನೆ ಅಂತ ಹೇಳಿ 10 ಪ್ರಶ್ನೆ ಆಯ್ತು. ಒಂದ್ ಉತ್ತರಕ್ಕೆ ಎಷ್ಟು ಮಾರ್ಕ್ಸ್ ಅಂತಾನೂ ಹೇಳಿಲ್ಲ. ನಿಮಗೆ ಮಾರ್ಕ್ಸ್‌ವಾದ ಗೊತ್ತಾ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ, ಈ ಬಾರಿ ಅವನು ಸೋಮು ಜತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ. ಸೋಮು ಸ್ವಲ್ಪ ದಡ್ಡ. ಜತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟ್ರು. ಹೋಗುವಾಗ, ಖೇಮು, ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ. ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು. ಕೂಡಲೇ, ಚಿರತೆ, ‘ಓಡು’ ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ. ಆಮೇಲೆ ಸೋಮು ಕಡೆ ನೋಡಿ, ‘ನಿಂಗೇನ್ ಬುದ್ಧಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇಲ್ಲೇ ನಿಂತಿದ್ದೆ, ಚಿರತೆ ಬಂದಿದ್ದು ಕಾಣಿಸಲಿಲ್ವಾ ನಿಂಗೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ಚಿರತೆ, ‘ಓಡು’ ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇದ್ದೆ.
ಲೈನ್ ಮ್ಯಾನ್
ಬಾರ್‌ನಲ್ಲಿ ಕುಡಿದು ಗಲಾಟೆ ಮಾಡುವವರಿಗೆ ಒಂದು ಕಿವಿಮಾತು
- ಎಣ್ಣೆ ಹೊಡೆದು ಎಗರಾಡದಿರಿ ಬಾರ್ ಬಂಧುಗಳೇ ಕುಡಿಯುವುದು ಎಗರಾಡಲಿಕ್ಕೆ ಅಲ್ಲ ದೇಹ ಹಗುರಾಗಲಿಕ್ಕೆ ಮನಸ್ಸು ಮಗುವಾಗಲಿಕ್ಕೆ
ಸಂಜೆ ಆದ ಕೂಡಲೇ ಕಾಡುವ ಕುಡಿತದ ತುಡಿತ
- ಕಡಿತ
ಯಾರ ಹಂಗೂ ಇಲ್ಲದೆ ದಿನಾ ಕುಡಿಯುವವನ ಮಾತು
- ಎಣ್ಣೇ ನಿನಗೇನು ಬಂಧನ?
ಕುಡಿದಾಗ ನಾನು ಸಾಯ್ತೀನಿ ಅಂತ ಸ್ನೇಹಿತರನ್ನು ಹೆದರಿಸೋದು
- ಗಾಳಿಯಲ್ಲಿ ಗುಂಡು ಹೊಡೆದ ಹಾಗೆ
ಪ್ರತಿದಿನ 60 ಎಂಎಲ್ ಕುಡಿಯುವವನು
- ಸೀನಿಯರ್ ಸಿಟಿಜನ್
ಎಣ್ಣೆ ಕುಡಿಯುವಾಗ ಮಿಕ್ಸ್ ಕುಡಿಯಬಾರದು. ಯಾಕೆ?
- ಯಾಕಂದ್ರೆ, ಎಣ್ಣೆಗೆ ಎಣ್ಣೆನೇ ಶತ್ರು ಕುಡಿದು ಪೇಂಟಿಂಗ್ ಮಾಡೋನು ಯಾವ ಚಿತ್ರ ಬರೀತಾನೆ?
- ‘ತೈಲ’ ಚಿತ್ರ