ಕಾಡುದಾರಿ
ಒಂದು: ಮೊನ್ನೆ ಮಗಳ ಸ್ಕೂಲ್ ಬತ್ ಡೇ. ಮಕ್ಕಳದೇ ಸರ್ಕಸ್ ಶೋ. ಶೋದ ಕೊನೆಯಲ್ಲಿ ಒಂದು ಪಾಪ್ ಬೀಟ್‌ನ ಕನ್ನಡ ಹಾಡು. ಅದಕ್ಕೆ ಮಕ್ಕಳು ಆನಂದದಿಂದ ನರ್ತಿಸುತ್ತಿದ್ದರು. ಈ ಹಾಡು ಎಲ್ಲೋ ಕೇಳಿದಂತಿದೆಯಲ್ಲ ಅನಿಸತೊಡಗಿತು. ಆಮೇಲೆ ಗೊತ್ತಾಯಿತು- ಅದು 12ನೇ ಶತಮಾನದ ಬೊಂತಾದೇವಿ ಅವರ ವಚನ. ‘ಊರ ಒಳಗಣ ಬಯಲು/ ಊರ ಹೊರಗಣ ಬಯಲೆಂದುಂಟೆ/ ಊರೊಳಗೆ ಬ್ರಾಹ್ಮಣ ಬಯಲು/ ಊರ ಹೊರಗೆ ಹೊಲೆಬಯಲೆಂದುಂಟೆ/ ಎಲ್ಲಿ ನೋಡಿದಡೆ ಬಯಲೊಂದೇ’. ಬಿ.ಕೆ ಸುಮಿತ್ರಾ ಹಾಡಿದ್ದದನ್ನು ಕೇಳಿದ್ದೆ.
ಅದರಲ್ಲಿ ಸ್ವಲ್ಪ ವಿಷಾದದ ದನಿಯಿತ್ತು. ಈಗ ಕೆಲ ತಿಂಗಳ ಹಿಂದೆ ಎಂ.ಡಿ ಪಲ್ಲವಿ ಮತ್ತು ಆಂಡಿ ಒಟ್ಟೊ ಸಂಗೀತ ನೀಡಿ ಹಾಡಿರುವ ‘ಸಾಂಗ್ಸ್ ಫಾರ್ ಬ್ರೋಕನ್ ಶಿಪ್ಸ್’ ಎಂಬ ಆಲ್ಬಂನಲ್ಲಿ ಈ ಹಾಡಿದೆ. ಹಾಡಿಗೆ ಮೊದಲು ‘ತಕುದಿಕುತಾ, ತದಿಗಿಣತೊ’ ಎಂಬ ಆಲಾಪ ಹಾಗೂ ಬೀಟ್ ಇದೆ. ಅದು ಜೆನ್ ಜಿ ಮಕ್ಕಳು ಹುಚ್ಚೇಳುವಂತೆಯೇ ಇದೆ. ಇಲ್ಲದೆ ಹೋದರೆ ಜೆನ್ ಜೀ ಆಕರ್ಷಿತರಾಗುವಂಥ ಹಾಡಲ್ಲ ಅದು.
ಅಸ್ಪೃಶ್ಯತೆಯ ಕುರಿತ ಸಾಮಾಜಿಕ ವಿಮರ್ಶೆ ಹಾಗೂ ಬಯಲು ಎಂಬ ತಾತ್ವಿಕತೆಯ ಕುರಿತ ಆಧ್ಯಾತ್ಮಿಕ ನೋಟ ಎರಡೂ ಹದಮಿಳಿತವಾಗಿರುವ ಹಾಡು ಅದು. ಮಕ್ಕಳಿಗೆ ಅರ್ಥ ಆಗಿರಲಿಕ್ಕಿಲ್ಲ. ಆದರೆ ಬೀಟ್ ಅವರನ್ನು ಆಕರ್ಷಿಸಿದೆ. ಮುಂದೆಂದಾದರೂ ಹಾಡು ಅರ್ಥವಾದೀತು. ಅಷ್ಟಾದರೆ ಸಾಕು. ಹಳೆಯ ಹಾಡುಗಳು ಹೀಗೆ ಹೊಸದಾಗುವುದು ಅಗತ್ಯ ಅಂತ ಅನಿಸುತ್ತದೆ. ಅದರಲ್ಲಿ ಬಣ್ಣದ ತಗಡಿನ ತುತ್ತೂರಿಯೂ ಇದೆ. ಯುಟ್ಯೂಬ್‌ನಲ್ಲಿದೆ.
ಇದನ್ನೂ ಓದಿ: Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ
ಎರಡು: ಬಾಳೆಗುಬ್ಬಿ ಅಂತಾರಲ್ಲ ಅದು. ಪುಟ್ಟ ಹಕ್ಕಿ. ಎಷ್ಟು ಪುಟ್ಟದು ಅಂತೀರಿ. ನಿಮ್ಮ ಅಂಗೈಯ ಮುಷ್ಟಿ ಮಾಡಿದರೆ ಅದರೊಳಗೆ ಹಿಡಿಸಬಹುದು. ಅಯ್ಯೋ ಮುಷ್ಟಿ ಮಾಡಿ ಹಿಡಿಯಬೇಡಿ, ಪಾಪ. ಎಷ್ಟೋ ಹೊತ್ತಿನಿಂದ ಅದನ್ನು ಕಿಟಕಿಯಿಂದ ನೋಡುತ್ತ ಕೂತಿದ್ದೆ. ಒಂದು ಮನುಷ್ಯ ಪ್ರಾಣಿ ತನ್ನನ್ನು ನೋಡುತ್ತಿದೆ ಎಂಬ ಅರಿವೇ ಇಲ್ಲದೆ ಬಿಳಿಯ ನಂದಬಟ್ಟಲು ಹೂವಿನ ಗಿಡದ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿತ್ತು. ಹೂವಿನೊಳಗೆ ಮೂತಿ ತೂರಿಸಿ ಹಿಂದಕ್ಕೆಳೆಯುತ್ತಿತ್ತು. ಆಚೆ ಸುರಿಯುತ್ತಿದ್ದ ಮಳೆ, ಕ್ಷಣವೂ ಸುಮ್ಮನಿರದೆ ಚಂಚಲಿಸುತ್ತಿದ್ದ ಬಾಳೆಗುಬ್ಬಿಯನ್ನು ಒದ್ದೆ ಮಾಡಲು ಹರಸಾಹಸ ಮಾಡುತ್ತಿತ್ತು. ಅದನ್ನು ನೋಡುತ್ತ ನೋಡುತ್ತ ನನಗೇನಾಯಿತು ಎಂದು ನೋಡಿಕೊಂಡೆ.
ಚಲಿಸುತ್ತಿದ್ದ ಕೈಕಾಲುಗಳು, ಬಾಳೆಗುಬ್ಬಿಗೆ ಡಿಸ್ಟರ್ಬ್ ಆಗದಿರಲಿ ಎಂದು ಸ್ತಬ್ದವಾಗಿದ್ದವು. ಮನಸ್ಸು ಬೇರೇನನ್ನೂ ಯೋಚಿಸದೆ ಹಕ್ಕಿಯಲ್ಲಿ ನೆಟ್ಟಿತ್ತು. ಹೊರಗೆ ಕ್ಷಣಕ್ಕೊಮ್ಮೆ ಚಲಿಸುವ ಹಕ್ಕಿ. ಒಳಗೆ ಧ್ಯಾನ ದಿಂದ ಎಂಬಂತೆ ಬೇರೇನನ್ನೂ ಒಳಬಿಟ್ಟುಕೊಳ್ಳದೆ ನಿಶ್ಚಲವಾಗಿದ್ದ ಮನಸ್ಸು. ನಿಮಿಷಗಳು ಉರುಳಿದ್ದೇ ಗೊತ್ತಾಗಲಿಲ್ಲ. ಇದ್ದಕ್ಕಿದ್ದಂತೆ ದೂರದಿಂದ ಇನ್ನೊಂದು ಹಕ್ಕಿ ಚಿಂವ್ ಎಂದಿತು. ಈ ಹಕ್ಕಿ ಅತ್ತ ಹಾರಿಹೋಯಿತು. ಮನಸ್ಸಿನಿಂದ ಪೇರಿ ಕಿತ್ತಿದ್ದ ಲೌಕಿಕದ ಯೋಚನೆಗಳೆಲ್ಲ ಮತ್ತೆ ಬರತೊಡಗಿದವು.
ಮೂರು: ಇನ್ನೊಂದು ಹಾಡು. ಈಗ ಜಗಜೀತ್ ಸಿಂಗ್ ಹಾಡಿದ ‘ವೋ ಕಾಗಜ್ ಕಿ ಕಶ್ತೀ, ವೋ ಬಾರಿಸ್ ಕಾ ಪಾನಿ’ ಗಜಲ್. ಮಂದ್ರದಲ್ಲಿ ಆರಂಭವಾಗಿ ಮಂದ್ರದ ಮುಗಿಯುವ ಮೆಲೋಡಿ. ಅದನ್ನು ಬರೆದದ್ದು ಯಾರು ಎಂಬುದು ನಮಗೆಲ್ಲ ಮರೆತೇಹೋಗಿದೆ. ಹಾಡು ಜಗಜೀತ್‌ನ ರೇಶಿಮೆ ದನಿಯಿಂದಲೇ ಜನಪ್ರಿಯ. ಯೇ ದೌಲತ್ ಭಿ ಲೇ ಲೋ, ಯೇ ಶೌಹ್ರತ್ ಭಿ ಲೇ ಲೋ- ನನ್ನ ದರ್ಪ ದೌಲತ್ತು ಜವಾನಿ ಎಲ್ಲ ತೆಗೆದುಕೋ, ಆದರೆ ನನಗೆ ಬಾಲ್ಯದ ಮಳೆಗಾಲದ ದಿನಗಳನ್ನು ಮರಳಿ ಕೊಡು.
ನನಗೀಗ ಬೇಕಾದ್ದು ಬಾಲ್ಯದ ಆ ಮಳೆ, ಅಂಗಳದಲ್ಲಿ ಹರಿವ ನೀರಿನಲ್ಲಿ ಕಾಗದದ ದೋಣಿ ಮಾಡಿ ಬಿಡುವ ಹುಚ್ಚು ಹುಮ್ಮಸ್ಸು. ಗೊಂಬೆಗಳ ಮದುವೆಯಲ್ಲಿ ಸುಮ್ಮಸುಮ್ಮನೇ ಪುಟ್ಟ ಜಗಳ ಹುಸಿ ಮುನಿಸು. ಆದರೆ ಕಾಗದದ ದೋಣಿಯಂತೆಯೇ ಆ ಬಾಲ್ಯವೂ ಕಳೆದುಹೋಯಿತಲ್ಲ! ಆ ಮುಗ್ಧ ದಿನಗಳನ್ನು ಮನಸ್ಸಿನಲ್ಲಿ ಹಾಗೇ ಕಾಪಿಟ್ಟುಕೊಳ್ಳುವ ಕವಿಮನಸ್ಸಿಲ್ಲದೆ ಇಂಥದೊಂದು ಹಾಡು ಉಕ್ಕಲು ಸಾಧ್ಯವೇ ಅನಿಸುವುದು ಅದನ್ನು ಜಗಜೀತ್ ಹಾಡುವ ವೈಖರಿಯನ್ನು ಆಲಿಸಿ ದಾಗಲೇ. ಮಳೆಗಾಲವೇ ನಾಸ್ತಾಲ್ಜಿಕ್. ಈ ಹಾಡು ಅದನ್ನು ಇನ್ನಷ್ಟು ಹಳಹಳಿಯ ಕ್ಷಣವಾಗಿಸುತ್ತದೆ. ಇದನ್ನು ಬರೆದ ಸುದರ್ಶನ್ ಫಕೀರ್, ಜನಿಸಿದ್ದು ಫಿರೋಜ್‌ಪುರದಲ್ಲಿ.
ಜಲಂಧರ್ ಆಕಾಶವಾಣಿಯಲ್ಲಿ ಸಣ್ಣದೊಂದು ಕೆಲಸ ಮಾಡುತ್ತಿದ್ದರು. ಒಂದು ಗಜಲ್ ಅವರ ಜೀವನವನ್ನು ಬದಲಿಸಿತು. ರೇಡಿಯೋ ಸ್ಟೇಶನ್ ಗೆ ಬರುವ ಗಾಯಕರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರುವುದು ಅವರ ಕೆಲಸ. ಹಾಗೆ ಒಮ್ಮೆ ಸುಪ್ರಸಿದ್ಧ ಗಾಯಕಿ ಬೇಗಂ ಅಖ್ತರ್‌ರನ್ನು ಕರೆದುಕೊಂಡು ಬರಲು ಹೋಗಿದ್ದರು.
‘ನೀನೇನ್ ಮಾಡ್ತೀಯಾ ಆಕಾಶವಾಣಿಯಲ್ಲಿ ಕುಳಿತುಕೊಂಡು’ ಎಂಬುದು ಬೇಗಂ ಪ್ರಶ್ನೆ. ‘ಹಾಡು ಬರೀತೀನಿ’ ಎಂಬುದು ಫಕೀರ್ ಉತ್ತರ. ಹಾಗಾದ್ರೆ ನಿನ್ನ ಹಾಡಿನ ಒಂದು ಸಾಲು ಹೇಳು. ಫಕೀರ್ ಹೇಳಿದರು- ‘ಕುಚ್ ತೋ ದುನಿಯಾ ಕಿ ಇನಾಯತ್ ನೇ ದಿಲ್ ತೋಡ್ ದಿಯಾ, ಔರ್ ಕುಚ್ ತಲ್ಖೀ ಇ ಹಾಲತ್ ನೆ ದಿಲ್ ತೋಡ್ ದಿಯಾ’ (ಜಗದ ಕೆಲವು ಕ್ರೌರ್ಯಗಳು ನನ್ನ ಹೃದಯ ಮುರಿದವು, ಇನ್ನು ಕೆಲವು ಸನ್ನಿವೇಶಗಳೇ ಕಹಿಯಾಗಿ ಎದೆಗೆ ಇರಿದವು- ಇದನ್ನು ಕೇಳಿ ಬೇಗಂ ಮೌನವಾದರು. ನಂತರ ಇಡೀ ಹಾಡು ಕೊಡುವಂತೆ ಹೇಳಿದರು. ಫಕೀರ್ ಕೊಟ್ಟರು.
ನಂತರ ಬೇಗಂ ರೇಡಿಯೋದ ಸ್ಟುಡಿಯೋ ರೂಮಿಗೆ ಹೋದರು. ಸ್ಟುಡಿಯೋ ಕೋಣೆಯಲ್ಲಿ ಕುಳಿತು ಬೇಗಂ ರೆಕಾರ್ಡಿಂಗ್ ಆಲಿಸುತ್ತಿದ್ದ ಫಕೀರ್‌ಗೆ ಆಶ್ವರ್ಯವಾಗುವಂತೆ ಇವರದೇ ಹಾಡು ಬೇಗಂ ದನಿಯಲ್ಲಿ ಮೊಳಗಿತು. ಕವಿಯ ಹೆಸರು ಸಮೇತ. ಅಲ್ಲಿಂದಾಚೆಗೆ ಸುದರ್ಶನ್ ಫಕೀರ್ ಉರ್ದುವಿನ ಖ್ಯಾತ ಗಜಲ್ ಕವಿಯೆನಿಸಿದರು.
ನಾಲ್ಕು: ಆಷಾಢ, ಶ್ರಾವಣ ಅಂದರೆ ನಮ್ಮೂರಿಗೆ ಒರತೆಗಳ ಕಾಲ. ಜುಲೈ ಮೊದಲ ವಾರದಲ್ಲಿ ಕೆರೆ ಮತ್ತು ಬಾವಿಗಳಿಗೆ ಒರತೆಯಾಗಿ, ಅವು ತುಂಬಿ ಹರಿಯಲು ಶುರು ಮಾಡುತ್ತಿದ್ದವು. ಆಗ ಮೀನುಗಳು ಬಹಳ ಮೇಲೆ ಕೈಗೇ ಸಿಗುವಂತೆ ಓಡಾಡಿಕೊಂಡಿರುತ್ತಿದ್ದವು. ಕೆಲವೊಮ್ಮೆ ಕೆರೆ ಯಾವುದು, ನೆಲ ಯಾವುದು ಗೊತ್ತಾಗದಂತೆ ನೀರು ತುಂಬಿರುತ್ತತ್ತು. ಶಾಲೆಗೆ ಹೋಗುವ ದಾರಿಯ ಪಕ್ಕದ ಬರೆಗಳಿಂಧ ನೀರಿನ ಒರತೆಗಳು ಉಕ್ಕುತ್ತಿದ್ದವು. ಮನೆಗೆ ಮರಳುವಾಗ ನಮಗೆ ಅದೇ ಆಟದ ಜಾಗ. ಕೆಲವು ಕಡೆ ಒರತೆ ಹನಿ ಹನಿಯಾಗಿ ಜಿನುಗುತ್ತಿತ್ತು. ಇನ್ನು ಕೆಲವು ಕಡೆ ಬರೆಯ ಮಣ್ಣಲ್ಲಿ ಆದ ತೂತುಗಳಿಂದ ಜೋರಾಗಿ ಸುರಿಯುತ್ತಿತ್ತು. ಅಲ್ಲ ಸಣ್ಣ ಸಣ್ಣ ಜಲಪಾತಗಳು ನಿರ್ಮಾಣ ಆಗುತ್ತಿದ್ದವು.
ಜಿನುಗುವ ಒರತೆಗೆ ದೋಣಿಕಾಯಿ ಅಥವಾ ಎಲೆ ಸಿಕ್ಕಿಸಿ ಅದು ಧಾರೆಯಾಗುವುದನ್ನು ನೋಡು ವುದು ಒಂದು ಸಂಭ್ರಮ. ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಯಾವಾಗ ಒರತೆಯಾಗುತ್ತದೆ ಎಂದು ಹೇಳುವವರು ಸಿಗುತ್ತಿದ್ದರು. ಮಳೆ ಹನಿಯುವ ಪ್ರಮಾಣ, ಮಾನ್ಸೂನ್ ಆರಂಭವಾದ ಅವಽ, ಗಾಳಿ ಬೀಸುವ ದಿಕ್ಕು- ಇದನ್ನೆಲ್ಲ ನೋಡಿ ಒರತೆ ಯಾವಾಗ ಆಗುತ್ತದೆ ಎಂಬುದನ್ನು ಹೇಳುತ್ತಿದ್ದರು. ಹೆಚ್ಚೂ ಕಡಿಮೆ ಅದೇ ದಿನ ಒರತೆಯಾಗುತ್ತಿತ್ತು. ಅವರು ಹೇಗೆ ಅಂಥ ಜ್ಞಾನವನ್ನು ಸಿದ್ಧಿಸಿಕೊಂಡಿದ್ದರೋ ಕಾಣೆ. ಒರತೆ ಉಂಟಾ ಗಬೇಕಾದರೆ ಸರಿಯಾಗಿ ಮಳೆಯಾಗಬೇಕು.
ಜೂನ್ ಪೂರ್ತಿ ಮಳೆಯಾದರೆ ಗುಡ್ಡಬೆಟ್ಟಗಳೆಲ್ಲ ಒzಯಾಗಿ, ಸಾಕಷ್ಟು ನೀರು ಹೀರಿ, ಜುಲೈ ಹೊತ್ತಿಗೆ ನೀರನ್ನು ಬಿಟ್ಟುಕೊಡಲು ಸಿದ್ಧವಾಗುತ್ತವೆ. ಮಾನ್ಸೂನ್‌ನಲ್ಲಿ ಸರಿಯಾಗಿ ಮಳೆಯಾಗ ದಿದ್ದರೆ ಒರತೆ ತಡವಾಗುತ್ತದೆ. ಒರತೆಗಳು ಎಲ್ಲೂ ಇರುತ್ತವೆ. ಹಿಮಾಲಯದ ಸ್ಪಿಟಿ ವ್ಯಾಲಿಗೆ ನಾವು ಹೋಗಿದ್ದಾಗ, ಅಲ್ಲಿ ಒಂದು ಬರೆಯಿಂದ ಒಸರಿ ಬರುತ್ತಿದ್ದ ಒರತೆಯ ನೀರಿಗೆ ಬಿದಿರಿನಂಥ ಒಂದು ಮರದ ಕೊಳವೆ ಇಟ್ಟು ನೀರು ಹಿಡಿದುಕೊಳ್ಳುತ್ತಿದ್ದರು.
ನಾವೂ ಜೀಪು ನಿಲ್ಲಿಸಿ ಅದನ್ನು ಕುಡಿದೆವು. ಅದು ಅಮೃತಕ್ಕಿಂತ ಸವಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಮಲೆನಾಡಿನಲ್ಲಿ ನಡೆಯುತ್ತಿರುವ ಗುಡ್ಡಕುಸಿತಕ್ಕೂ ಈ ಒರತೆಗಳಿಗೂ ಸಂಬಂಧ ಇರಬಹುದು ಎಂಬುದು ಭೂತಜ್ಞನಲ್ಲದ ನನ್ನ ಅನುಮಾನ. ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಅಪಾರ ಪ್ರಮಾಣದಲ್ಲಿ ಇಂಗಿದ ನೀರು ಒಂದಷ್ಟು ಪ್ರಮಾಣ ಅಂತರ್ಜಲಕ್ಕೆ ಸೇರಿ, ಉಳಿದದ್ದು ಎದರೊಂದು ಕಡೆ ಹೊರಬಂದು ಹರಿಯಬೇಕು.
ಹಾಗೆ ಹರಿಯಲು ಸಾಧ್ಯವಾಗದೆ ಎಲ್ಲೂ ಕಲ್ಲಿನ ಮತ್ತು ಕಾಂಕ್ರೀಟಿನ ಅಡ್ಡಗೋಡೆಗಳು ತಡೆಯಾ ದರೆ, ಅಥವಾ ಗುಡ್ಡದ ಮೈ ನೀರಿನ ಹರಿವಿಗೆ ಸುಲಭವಾಗಿ ಒದಗದೆ ಇದ್ದಕ್ಕಿದ್ದಂತೆ ಕತ್ತರಿಸಿ ತೆಗೆದಿಟ್ಟಂತೆ ಇದ್ದರೆ ಅಪಾರ ಪ್ರಮಾಣದ ನೀರು ಒಂದೇ ಸಲಕ್ಕೆ ಒತ್ತಡ ಹಾಕಬಹುದು. ಆಗ ಮಣ್ಣು ಜರಿಯಬಹುದು. ಜುಲೈಯಲ್ಲಿ ಉಂಟಾದ ಒಸರುಗಳು ನವೆಂಬರ್ ವರೆಗೂ ಹಳ್ಳಗಳಿಗೆ ನೀರನ್ನು ಕಳಿಸುತ್ತಾ ಇರುತ್ತವೆ.
ನೆನಪುಗಳು ಕೂಡ ಈ ಒರತೆಗಳಂತೆ. ಐದು: ವಿಕ್ಟರ್ ಹ್ಯೂಗೋ ಫ್ರಾನ್ಸಿನ ವಿಖ್ಯಾತ ಕಾದಂಬರಿಕಾರ, ಕವಿ. ಇವನು 1829ರಲ್ಲಿ ಒಂದು ಒಪ್ಪಂದ ಮಾಡಿಕೊಂಡ. 12 ತಿಂಗಳಲ್ಲಿ ಪ್ರಕಾಶಕರಿಗೆ ಒಂದು ಕಾದಂಬರಿ ಕೊಡಬೇಕು. ದೊಡ್ಡ ಮೊತ್ತದ ಕಾಸು ಪಡೆದುಕೊಂಡ. ಹ್ಯೂಗೋಗೆ ಸಾರ್ವಜನಿಕ ಸಭೆ, ಭಾಷಣ, ಬೆರೆಯುವಿಕೆಯ ಹುಚ್ಚು. 12 ತಿಂಗಳು ಹೀಗೆ ಸುತ್ತಾಡುತ್ತಾ, ಜಾಲಿ ಮಾಡುತ್ತಾ ಕಳೆದ. ಅವಧಿ ಮುಗಿಯುತ್ತಲೇ ಪ್ರಕಾಶಕರಿಂದ ಎಚ್ಚರಿಕೆ ಬಂತು- ‘ಇನ್ನು ಆರು ತಿಂಗಳಲ್ಲಿ ಕಾದಂಬರಿ ಕೊಡದಿದ್ದರೆ ಹಣ ವಾಪಸ್ ಕೊಡಬೇಕು. ಹ್ಯೂಗೋಗೆ ತನ್ನ ಸೋಶಿಯಲ್’ ಹುಚ್ಚು ದುಬಾರಿ ಯಾಯಿತು ಎಂಬುದು ಗೊತ್ತಾಯಿತು.
ಸೊಂಟದ ಕೆಳಗಿನ ಒಂದು ತುಂಡು ಬಟ್ಟೆ ಹೊರತುಪಡಿಸಿ ಉಳಿದ ಎಲ್ಲ ಬಟ್ಟೆಯನ್ನೂ ಬೀರುವಿ ನಲ್ಲಿ ಲಾಕ್ ಮಾಡಿ, ತನಗೆ ಕೊಡಬೇಡ ಎಂದು ಸಹಾಯಕನಿಗೆ ಎಚ್ಚರಿಸಿ, ಬರೆಯುತ್ತಾ ಕೂತು ಬಿಟ್ಟ. ಈಗ ಹೊರಗೆ ಹೋಗುವುದೂ, ಅತಿಥಿಗಳನ್ನು ಬರಮಾಡಿಕೊಳ್ಳುವುದೂ ಸಾಧ್ಯವಿಲ್ಲವಲ್ಲ!
ಆರು ತಿಂಗಳಿಗೂ ಎರಡು ವಾರ ಮೊದಲೇ ಅವನ ಖ್ಯಾತ ಕಾದಂಬರಿ ‘ಹಂಚ್‌ಬ್ಯಾಕ್ ಆಫ್ ನೋತ್ರೆಡೇಮ್’ ಪ್ರಕಾಶಕರ ಕೈ ಸೇರಿತು. ನಾವೂ ಮೊಬೈಲ್ ಎಂಬ ಬಟ್ಟೆಯನ್ನು ಕೈಗೆ ಸಿಗದಂತೆ ಬಚ್ಚಿಟ್ಟು ಬೆತ್ತಲಾದರೆ ಮಾತ್ರ ಏನನ್ನಾದರೂ ಬರೆಯಬಹುದು, ಓದಬಹುದು ಅಂತ ಎಷ್ಟೋ ಸಲ ಅನಿಸಿದ್ದಿದೆಯಾ? ಆರು: ಇದು ರವೀಂದ್ರನಾಥ ಟ್ಯಾಗೋರ್ ಅವರ ‘ಗೀತಾಂಜಲಿ’ಯ ಒಂದು ಪದ್ಯದ ಭಾವಾನುವಾದ: ದಿನದಿನವೂ ನಾನು ನನ್ನ ಕಾಗದದ ದೋಣಿಗಳ ತೊರೆಯಲ್ಲಿ ತೇಲಿ ಬಿಡುವೆ.
ದೊಡ್ಡ ಕಪ್ಪು ಅಕ್ಷರಗಳಲ್ಲಿ ನನ್ನ ಮತ್ತು ನಾನು ವಾಸಿಸುವ ಊರಿನ ಹೆಸರನ್ನು ಅದರಲ್ಲಿ ಬರೆಯುವೆ. ಎಲ್ಲೋ ಯಾವುದೋ ವಿಚಿತ್ರ ಊರಲ್ಲಿ ಯಾರೋ ಒಬ್ಬ ನನ್ನನ್ನು ಗುರುತಿಸುವನೆಂಬ ಭರವಸೆ. ಆ ದೋಣಿಗಳಲ್ಲಿ ನನ್ನ ಉದ್ಯಾನದ ಪುಟ್ಟ ಹೂಗಳ ತುಂಬಿಸುವೆ. ಮುಂಜಾನೆ ಅರಳಿದ ಈ ಹೂಗಳು ರಾತ್ರಿ ಸುರಕ್ಷಿತವಾಗಿ ತಲುಪುವುದೆಂಬ ಆಸೆ. ದೋಣಿಗಳ ಬಿಡುವಾಗ ತಲೆ ಮೇಲೆತ್ತಿ ಆಕಾಶವನ್ನು ನೋಡುವೆ, ಪುಟ್ಟ ಮೋಡಗಳು ಒಟ್ಟಾಗಿ ದೊಡ್ಡ ಹಾಯಿಪಟದ ಹಡಗಾಗುವುದನ್ನು. ಆಕಾಶದಲ್ಲಿ ನನ್ನ ಜೊತೆ ಸ್ಪಽಸುತ್ತಿರುವ ಆ ಜೊತೆಗಾರ ಗಾಳಿಯಲ್ಲಿ ಅವುಗಳನ್ನು ತೇಲಿ ಬಿಡುವನು.
ರಾತ್ರಿಯಾದಾಗ ತೋಳುಗಳಲ್ಲಿ ಮುಖ ಹುದುಗಿಸಿ, ತಾರೆಗಳ ಬೆಳಕಿನಲ್ಲಿ ತೇಲುವ ಕಾಗದದ ದೋಣಿಗಳ ಕನಸು ಕಾಣುವೆ. ಬುಟ್ಟಿಗಳಲ್ಲಿ ಕನಸುಗಳ ತುಂಬಿಕೊಂಡ ನಿದ್ರೆಯ ದೇವತೆಗಳು ಅವುಗಳಲ್ಲಿ ಚಲಿಸುತ್ತಿರುವರು. ಏಳು: ಜಪಾನಿನ ಜನಪದ ಕತೆಯೊಂದಿದೆ. ಅದರಲ್ಲಿ ಒಬ್ಬ ಕಮ್ಮಾರ. ಅವನ ಕೆಲಸ ಚೆನ್ನಾಗಿತ್ತು. ಆದರೆ ಅದೃಷ್ಟ ಇರಲಿಲ್ಲ. ಒಂದು ದಿನ ದಾರಿಯಲ್ಲಿ ಚಕಮಕ ಓಡಾಡುವ ಚುರುಕಾದ ಅಳಿಲೊಂದನ್ನು ಕಂಡ. ಮಾರುಹೋದ. ಮನೆಗೆ ಬಂದು ಅದರದೇ ಧ್ಯಾನದಲ್ಲಿ ತಾನು ತಯಾರಿಸುವ ಕತ್ತಿ, ಚೂರಿ, ಹಾರೆ ಇತ್ಯಾದಿಗಳ ಮೇಲೆ ಅಳಿಲಿನ ಸುಂದರ ಕೆತ್ತನೆ ಮಾಡಿದ. ಅದೃಷ್ಟ ಕೈಹಿಡಿಯಿತು.
ಜನ ಈತನ ಕೌಶಲಕ್ಕೆ ಮಾರುಹೋಗಿ ಅವನ ಮನೆಯ ಮುಂದೆ ಸಾಲು ನಿಂತು ಕೊಂಡುಕೊಳ್ಳ ತೊಡಗಿದರು. ಅಲ್ಪ ಅವಧಿಯಲ್ಲಿ ಶ್ರೀಮಂತನಾದ. ಪುರುಸೊತ್ತೇ ಇಲ್ಲದಷ್ಟು ಕೆಲಸ. ಅದರ ಜೊತೆಗೆ ಇನ್ನೊಂದು- ರಾತ್ರಿಯೆಲ್ಲ ಅವನ ಕನಸಿನಲ್ಲಿ ಒಂದು ಅಳಿಲು ಬಂದು ಆಡುತ್ತಿತ್ತು. ಅದರಿಂದ ಅವನ ನಿದ್ರೆ ಕೆಡುತ್ತಿತ್ತು. ನಿದ್ರೆ ಕೆಟ್ಟು ಹುಚ್ಚನಂತಾದ. ಒಂದು ರಾತ್ರಿ ಹೀಗೇ ಕನಸಿನಲ್ಲಿ ಬಂದ ಅಳಿಲನ್ನು, ಅ ಕತ್ತಿ ಬೀಸಿ ಕೊಂದುಹಾಕಿದ. ಮರುದಿನದಿಂದ ಅವನಿಗೆ ಅಳಿಲಿನ ಚಿತ್ರವನ್ನೇ ಬಿಡಿಸಲು ಸಾಧ್ಯವಾಗಲಿಲ್ಲ. ಅಳಿಲಿಲ್ಲದ ಸಾಧನಗಳನ್ನು ಜನ ಕೊಂಡುಕೊಳ್ಳಲಿಲ್ಲ. ಅವನಿಂದ ದೂರ ಹೋದರು. ಅತ್ಯಲ್ಪ ಅವಧಿಯಲ್ಲಿ ಬಂದ ಹಣವನ್ನೂ ಕಳೆದುಕೊಂಡು ಮತ್ತೆ ಮೊದಲಿನಂತೆಯೇ ಆದ.