ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

ಒಮ್ಮೆ ಕೇರಳದ ತೇಕ್ಕಡಿಯ ಫಾರೆಸ್ಟ್ ಹೌಸೊಂದರಲ್ಲಿ ತಂಗಿದ್ದೆವು. ವಿಶಾಲವಾದ ಹಜಾರ. ಅಮಾವಾಸ್ಯೆ ಯ ಆಸುಪಾಸಿನ ರಾತ್ರಿ. ಕಾಡಿನ ಕತ್ತಲೆ ಹೇಗಿರುತ್ತದೆಂದು ವಿವರಿಸಬೇಕಿಲ್ಲ. ಬಂಗಲೆಯ ಸುತ್ತಲಿನ ಆಕಾಶದಿಂದ ತೂರಿ ಬರುತ್ತಿದ್ದ ನಕ್ಷತ್ರಗಳ ಕ್ಷೀಣ ಬೆಳಕು. ಬಂಗಲೆಯನ್ನು ಸುತ್ತುವರಿದಿದ್ದ ದೊಡ್ಡ ದೊಡ್ಡ ಮರಗಳು. ಕತ್ತಲನ್ನು ನಿರುಕಿಸುತ್ತ ಕುಳಿತಿದ್ದೆವು. ಕೀಟಗಳ ಚೀರು, ಇರುಳು ಹಕ್ಕಿಗಳ ಕೂಗು ಬಿಟ್ಟರೆ ಮತ್ತೆಲ್ಲೂ ಯಾವ ಚಲನೆಯೂ ಇಲ್ಲ, ಯಾವ ಸದ್ದೂ ಇಲ್ಲ.

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

-

ಹರೀಶ್‌ ಕೇರ
ಹರೀಶ್‌ ಕೇರ Aug 16, 2026 9:36 AM

ಆನೆ- ಮಾನವರ ನಡುವಿನ ಬದುಕು ಒಂಥರ ಪ್ರೀತಿ, ಹೊಂದಾಣಿಕೆ, ಆತಂಕ, ಜವಾಬ್ದಾರಿ, ಆರೈಕೆ ಎಲ್ಲ ಸೇರಿದ ಸಂಕೀರ್ಣತೆಯದು. ಆನೆ- ಮಾನವ ಮುಖಾಮುಖಿಗೆ ಏಕಮುಖಿ ಚಿತ್ರಣ ಇಲ್ಲ. ಒಪ್ಪಂದದ ಗೆರೆ ಎಲ್ಲಿ ಇರುತ್ತದೋ ಅಲ್ಲಿ ನೆಮ್ಮದಿ, ಅಳಿಸಿಹೋದಾಗ ದುರಂತ ಸಂಭವಿಸುತ್ತದೆ. ನಮ್ಮ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಆನೆಗಳಿವೆ; ಆನೆಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ಮನುಷ್ಯನು ನಿಧಾನವಾಗಿ ಆಕ್ರಮಿಸುತ್ತಾ ಹೋಗುತ್ತಿದ್ದಾನೆ, ಆನೆಗಳ ತಾಳ್ಮೆಯನ್ನು ಪರೀಕ್ಷಿಸು ತ್ತಿದ್ದಾನೆ; ಆನೆಗಳು ತಾಳ್ಮೆ ಕಳೆದುಕೊಂಡಾಗ, ಆನೆ ಮಾನವ ಸಂಘರ್ಷವಾಗುತ್ತದೆ; ದುರಂತ ವಾಗುತ್ತದೆ; ಅಂತಹ ವರದಿಗಳು ನಿರಂತರವಾಗಿ ಬರುತ್ತಲೇ ಇವೆ. ಆದರೆ, ಅದಾಗಬಾರದು. ಈ ಭೂಮಿಯಲ್ಲಿ ಎಲ್ಲರಿಗೂ, ಅಂದರೆ ಆನೆಗೂ ಗೌರವಯುತವಾಗಿ ಬದುಕುವ ಹಕ್ಕಿದೆ, ಅಲ್ಲವೇ?

ಒಮ್ಮೆ ಕೇರಳದ ತೇಕ್ಕಡಿಯ ಫಾರೆಸ್ಟ್ ಹೌಸೊಂದರಲ್ಲಿ ತಂಗಿದ್ದೆವು. ವಿಶಾಲವಾದ ಹಜಾರ. ಅಮಾವಾಸ್ಯೆಯ ಆಸುಪಾಸಿನ ರಾತ್ರಿ. ಕಾಡಿನ ಕತ್ತಲೆ ಹೇಗಿರುತ್ತದೆಂದು ವಿವರಿಸಬೇಕಿಲ್ಲ. ಬಂಗಲೆ ಯ ಸುತ್ತಲಿನ ಆಕಾಶದಿಂದ ತೂರಿ ಬರುತ್ತಿದ್ದ ನಕ್ಷತ್ರಗಳ ಕ್ಷೀಣ ಬೆಳಕು. ಬಂಗಲೆಯನ್ನು ಸುತ್ತು ವರಿದಿದ್ದ ದೊಡ್ಡ ದೊಡ್ಡ ಮರಗಳು. ಕತ್ತಲನ್ನು ನಿರುಕಿಸುತ್ತ ಕುಳಿತಿದ್ದೆವು. ಕೀಟಗಳ ಚೀರು, ಇರುಳು ಹಕ್ಕಿಗಳ ಕೂಗು ಬಿಟ್ಟರೆ ಮತ್ತೆಲ್ಲೂ ಯಾವ ಚಲನೆಯೂ ಇಲ್ಲ, ಯಾವ ಸದ್ದೂ ಇಲ್ಲ.

ಜೊತೆಯಲ್ಲಿದ್ದ ಫಾರೆಸ್ಟ್ ವಾಚರ್ ‘ಆನೆ ಬಂತು ಸಾರ್’ ಎಂದು ಪಿಸುಗುಟ್ಟಿದ. ಅರೇ, ನಮಗೆ ಅದರ ಒಂದಿಷ್ಟು ಸುಳಿವೂ ಸಿಕ್ಕಿರಲಿಲ್ಲ. ಹುಟ್ಟಿದಂದಿನಿಂದ ಕಾಡಿನ ಬೆಳೆದಿದ್ದ ಅವನಿಗೆ ಅದು ಹೇಗೋ ಗೊತ್ತಾಗಿ‌ ಬಿಟ್ಟಿತ್ತು. ಒಮ್ಮೆ ಅತ್ತ ಕಡೆ ಟಾರ್ಚ್ ಬೆಳಕು ಹಾಯಿಸಿದ, ನಮ್ಮಿಂದ ಐವತ್ತು ಮೀಟರ್ ದೂರದಲ್ಲಿ ಒಂದಷ್ಟು ಬಿಳೀ ದಂತಗಳು ಕಾಣಿಸಿದವು. ನಾವು ಮರ ಗಟ್ಟಿದಂತೆ ಕುಳಿತಿದ್ದೆವು. ಆನೆಗಳೂ ಸದ್ದಿಲ್ಲದೇ ಅಲ್ಲಿ ಬಹಳ ಹೊತ್ತು ನಿಂತಿದ್ದವೆಂದು ಕಾಣುತ್ತದೆ. ಬಹಳ ಹೊತ್ತಿನ ನಂತರ ನಾವು ಒಳಬಂದು ಮಲಗಿದೆವು.

ಇದನ್ನೂ ಓದಿ: Harish Kera Column: ಅತಿಥಿಯಲ್ಲ, ಕತ್ತರಿಸಿದರೆ ಬೆಳೆವ ರಕ್ತಬೀಜ!

ಮರುದಿನ ಬೆಳಗ್ಗೆ ವಾಚರ್ ‘ನಿನ್ನೆ ಇಲ್ಲಿ ಹತ್ತಕ್ಕೂ ಹೆಚ್ಚು ಆನೆಗಳು ಬಂದಿದ್ದವು’ ಎಂದು ಹೆಜ್ಜೆ ಗುರುತು ತೋರಿಸಿದ. ಆನೆಗಳು ಮತ್ತು ಮನುಷ್ಯ ಲೋಕದ ನಡುವೆ ಒಂದು ಮೌನ ಒಪ್ಪಂದ ಇದೆ ಎಂಬುದು ನನಗೆ ಅರ್ಥವಾದದ್ದು ಅಂದು. ಆನೆ ಕಾಡಿನಲ್ಲಿ ಯಾವ ಸದ್ದೂ ಮಾಡದೇ ಚಲಿಸ ಬಲ್ಲುದು. ಅದು ಬಂದು ಪಕ್ಕದ ಮರದ ಹಿಂದೆ ನಿಂತಿದ್ದರೆ ಮನುಷ್ಯನಿಗೆ ಕೆಲವೊಮ್ಮೆ ಗೊತ್ತೇ ಆಗದು. ಆದರೆ ಆನೆ ಬಂದಿದೆ ಎಂಬುದು ವಾಚರ್‌ಗೆ ಹೇಗೋ ಗೊತ್ತಾಗಿತ್ತು. ಅವು ನಮ್ಮನ್ನು ಮೌನವಾಗಿ ಬಹಳ ಹೊತ್ತು ನಿರುಕಿಸಿದ್ದವು. ನಾವಾಗಲೀ ಅವುಗಳಾಗಲೀ ಪರಸ್ಪರ ಗಾಬರಿಯೆಬ್ಬಿ ಸುವ ಏನನ್ನೂ ಮಾಡಿರಲಿಲ್ಲ. ತಮಗೆ ಬೇಕಾದ ಹಲಸಿನ ಹಣ್ಣನ್ನು ಕೆಡವಿ ಹೊತ್ತುಕೊಂಡು ಹೋಗಿದ್ದವು.

ಒಪ್ಪಂದವನ್ನು ಇಬ್ಬರೂ ಉಲ್ಲಂಘಿಸದೆ ಇದ್ದುದರಿಂದ ಯಾರಿಗೂ ಅಪಾಯ ಆಗಿರಲಿಲ್ಲ. ಆದರೆ ಎಲ್ಲಾ ಸಂದರ್ಭಗಳಲ್ಲೂ ಹೀಗೆ ಇರಬೇಕೆಂದಿಲ್ಲ: ಈ ಒಪ್ಪಂದ ಮುರಿದುಬಿದ್ದಾಗ ದುರಂತಗಳು ಸಂಭವಿಸಿವೆ. ನೋಡಿ ಬೇಕಿದ್ದರೆ. ಬಂಡಿಪುರದ ಕಾಡುದಾರಿಯಲ್ಲಿ ಸಾಗುತ್ತಿರುತ್ತೀರಿ.

ಕಾಡಾನೆಗಳ ಒಂದು ಹಿಂಡು ರಸ್ತೆ ದಾಟುತ್ತಿರುತ್ತದೆ. ನೀವು ಅವುಗಳನ್ನು ನೋಡಿ ದೂರದಲ್ಲಿ ಕಾರು ನಿಲ್ಲಿಸಿದರೆ, ಸುಮ್ಮನಿದ್ದರೆ, ನಿಮಗೂ ಅವುಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಸಾಗಿ ಹೋಗುತ್ತವೆ. ಅವುಗಳ ತೀರಾ ಹತ್ತಿರ ಹೋದರೆ, ಹಾರ್ನ್ ಬಜಾಯಿಸಿದರೆ, ಬಾಳೆಹಣ್ಣು ಕೊಡಲು ಹೋದರೆ, ಹೋಗಲು ದಾರಿ ಬಿಡದಂತೆ ಗುಂಪು ಸೇರಿದರೆ ಆಗ ಘಟಿಸುವುದೇ ಬೇರೆ.

ele 3 ಒಕ

ತಮಿಳಿನ ದೊಡ್ಡ ಕತೆಗಾರ ಜೆಯಮೋಹನ್ ಅವರ ‘ಆನೆ ಡಾಕ್ಟರ್’ ಎಂಬ ಒಂದು ಸೊಗಸಾದ ಕತೆಯಿದೆ. ಅದನ್ನು ಓದಿದರೆ, ಆನೆಗಳ ನಿರ್ಮಲವಾದ ಜಗತ್ತಿನ ಬಗ್ಗೆ ಪ್ರೀತಿಯೂ ಅದನ್ನು ನರಕ ಮಾಡುತ್ತಿರುವ ಮನುಷ್ಯನ ಬಗ್ಗೆ ರೋಷವೂ ಉಕ್ಕುತ್ತದೆ. ಅದರಲ್ಲಿ ‘ಕೆ’ ಎಂಬೊಬ್ಬ ಪ್ರಾಣಿವೈದ್ಯ. ಆನೆಗಳ ಬಗ್ಗೆ ವಿಶೇಷ ತಿಳಿವಳಿಕೆ ಅವರದು. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡುತ್ತಾರೆ.

ಎಲ್ಲ ಪ್ರಾಣಿಗಳ ಅಂತರಂಗವನ್ನು ಓದಬಲ್ಲ ಮನುಷ್ಯ. ಯಾವ ಮೃಗಕ್ಕೆ ಚಿಕಿತ್ಸೆ ನೀಡಬೇಕು, ಯಾವುದಕ್ಕೆ ನೀಡದೆ ಹಾಗೇ ಬಿಡಬೇಕು ಎಂಬ ನ್ಯಾಯವನ್ನು ಬಲ್ಲ ವ್ಯಕ್ತಿ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಬೇಕೆಂದು ಒಬ್ಬ ಫಾರೆಸ್ಟರ್ ಯತ್ನಿಸುತ್ತಿರುತ್ತಾನೆ. ಡಾಕ್ಟರ್ ‘ಕೆ’ಗೆ ಅದರ ಕುರಿತು ಯೋಚನೇ ಇಲ್ಲ!

ಅಷ್ಟು ಪ್ರಾಣಿಗಳ ಜಗತ್ತಿನಲ್ಲಿ ಅವರು ಕಳೆದುಹೋದವರು. ಕಾಡಿಗೆ ಪ್ರವಾಸದ ಹೆಸರಿನಲ್ಲಿ ಹೋಗುವ ಕೆಲವು ನೀಚರು, ಅಲ್ಲೇ ಕುಡಿದು ತಿಂದು ಗಬ್ಬೆಬ್ಬಿಸಿ, ಅಲ್ಲಿ ಬಿಯರ್ ಬಾಟಲ್‌ಗಳನ್ನು ಒಡೆದುಹಾಕಿ ಬರುತ್ತಾರೆ. ಆ ಗಾಜಿನ ಚೂರುಗಳ ಮೇಲೆ ಆನೆಗಳು ಕಾಲಿಟ್ಟರೆ ಅವು ಗಸಕ್ಕನೆ ಒಳಗೆ ತೂರಿಕೊಂಡು ಬಿಡುತ್ತವೆ. ಅದು ಒಳಗೇ ಉಳಿದು ಕೊಳೆತು ವ್ರಣವಾಗಿ, ಆನೆ ಓಡಾಡಲಾಗದ ಸ್ಥಿತಿಗೆ ತಲುಪುತ್ತದೆ. ದಿನದಲ್ಲಿ ಮೂವತ್ತು ಲೀಟರ್ ನೀರು ಕುಡಿದು, ಇನ್ನೂರು ಕಿಲೋ ಆಹಾರ ಸೇವಿಸಿ, ಐವತ್ತು ಕಿಲೋಮೀಟರ್ ನಡೆದು ಬಾಳಬೇಕಾದ ಆನೆ ಸಣ್ಣಗಾಗುತ್ತಾ ಕ್ಷೀಣಿಸಿ, ನಿಂತಲ್ಲೇ ನಿಂತು, ವಾಲಿ ಬಿದ್ದು, ಜೀವ ಬಿಡುತ್ತದೆ.

ಗುಂಪಿನ ಆನೆಗಳು ಕಣ್ಣೀರು ಸುರಿಸುವುದು ಬಿಟ್ಟರೆ ಬೇರೆ ಏನನ್ನೂ ಮಾಡಲಾ ಗದ ನಿಸ್ಸಹಾಯಕ ಸ್ಥಿತಿ. ಅಂಥ ಗಾಯಾಳು ಆನೆಗಳಿಗೆ ಮತ್ತು ಬರಿಸಿ, ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಚೂರು ಕಿತ್ತು ಬ್ಯಾಂಡೇಜ್ ಸುತ್ತಿ ಮದ್ದು ನೀಡುವ ಆ ಡಾಕ್ಟರ್‌ಗೆ ಮನುಷ್ಯ ಲೋಕದ ಎಲ್ಲ ಪ್ರಶಸ್ತಿ ಪುರಸ್ಕಾರ ಗಳು ಅರ್ಥಹೀನ ಬಡಬಡಿಕೆಗಳು.

ele2 ಒಕ

ಕಾಲಿನಲ್ಲಿ ಗಾಜಿನ ಚೂರು

ಹಾಗೇ ಮುದುಮಲೈ ಕಾಡಿನ ಒಂದು ಆನೆಯ ಕಾಲಿಗೆ ನುಗ್ಗಿದ ಗಾಜಿನ ಚೂರು ತೆಗೆಯಲು ವೈದ್ಯರು ಹೋಗಿರುತ್ತಾರೆ. ಇವರನ್ನು ನೋಡಿದ ಹಿಂಡಿನ ಇತರ ಆನೆಗಳು, ಮೊದಲು ಮನುಷ್ಯನ ಮೇಲೆ ಹೇವರಿಕೆ ತೋರಿಸಿ ದರೂ, ನಂತರ ಇವರ ಉದ್ದೇಶ ಅರ್ಥ ಮಾಡಿಕೊಂಡು ದೂರ ಹೋಗಿ ನಿಲ್ಲುತ್ತವೆ. ‘ಕೆ’ ಗಾಯಾಳು ಆನೆಯ ಕಾಲಿನ ಗಾಜು ಕಿತ್ತು ಉಪಚರಿಸಿ ಬರುತ್ತಾರೆ. ಆ ಹಿಂಡಿನ ಮತ್ತೊಂದು ಆನೆಮರಿಗೆ ಒಂದು ವರ್ಷದ ಬಳಿಕ ಕಾಲಿಗೆ ಅದೇ ಥರ ಗಾಜು ಚುಚ್ಚಿದಾಗ, ಆ ಹಿಂಡು ಇದೇ ವೈದ್ಯರನ್ನು ಹುಡುಕಿ ಕೊಂಡು ಎಷ್ಟೋ ಮೈಲು ಕತ್ತಲಲ್ಲಿ ಸಾಗಿ ಬಂದು, ಚಿಕಿತ್ಸೆ ಮಾಡಿಸಿ ಕೊಳ್ಳುವ ಒಂದು ಸನ್ನಿವೇಶ ಈ ಕತೆಯಲ್ಲಿದೆ. ಅದನ್ನು ಓದಿದಾಗ ರೋಮಾಂಚನವಾಗದೇ ಇರದು.

ಒಮ್ಮೆ ನೋಡಿದ ಮನುಷ್ಯನನ್ನು ಮತ್ತೊಮ್ಮೆ ನೋಡಿದರೆ ಆನೆ ಗುರುತು ಹಿಡಿಯಬಲ್ಲದು. ಅವು ಏನನ್ನಾದರೂ ಹುಡುಕಿಕೊಂಡು ಮುನ್ನೂರು ಕಿಲೋಮೀಟರ್ ದೂರ ಕೂಡ ಹೋಗಬಲ್ಲವು. ಆನೆಗಳ ಕಾರಿಡಾರ್‌ನ ರಹಸ್ಯ ಕೂಡ ಇದೇ. ಡಾಕ್ಟರ್ ಕೆ ಮಾತುಗಳನ್ನು ನೋಡಿ- ‘ಈ ಕಾಡನ್ನು ನೀನು ಅರ್ಥ ಮಾಡಿಕೊಂಡರೆ ಮಾತ್ರ ನೀನು ಇಲ್ಲಿ ಏನಾದರೂ ಮಾಡಲು ಸಾಧ್ಯ.

ಕಾಡನ್ನು ಅರ್ಥ ಮಾಡಿಕೊಳ್ಳ ಬೇಕಾದರೆ ಕಾಡಿನಲ್ಲಿ ವಾಸವಾಗಿರಬೇಕು. ಇಲ್ಲಿ ವಾಸವಾಗಿರುವು ದೆಂದರೆ ಮೊದಲು ನಿನ್ನ ಆ ಲೋಕದಲ್ಲಿ ಇರುವ ಹಣ, ಕೀರ್ತಿ, ಅಧಿಕಾರ ಇವುಗಳನ್ನೆಲ್ಲ ಕೈಬಿಟ್ಟು ಈ ಮಂಗಗಳ ಥರ, ಈ ಆನೆಯ ಥರ ಇಲ್ಲಿ ಇರುವುದು. ಅಲ್ಲಿ ನಿಂತಿದಾನಲ್ಲ ಆ ಸೆಲ್ವ (ಆನೆ), ಘನತೆ, ಆ ಕರುಣೆ, ಸಣ್ಣತನವಿಲ್ಲದ ಕಡಲಿನಂತಹ ವಿಶಾಲ ಮನಸು- ಅದನ್ನು ತಿಳಿದುಕೊಂಡರೆ ಆಮೇಲೆ ನಿನಗೆ ಯಾವ ಮನುಷ್ಯ ಲೆಕ್ಕಕ್ಕೆ ಇರುತ್ತಾನೆ?’ ಎನ್ನುವ ಕೆ, ಆನೆಗಳ ಮುಂದೆ ‘Man, vain insect!’ ಎಂದುಬಿಡುತ್ತಾರೆ.

ಅದು ಲಾರ್ಡ್ ಬೈರನ್‌ನ ಒಂದು ಕವಿತೆಯ ಸಾಲು. ನಿಸರ್ಗದಲ್ಲಿ ಪ್ರಾಣಿಗೆ ಹೋಲಿಸಿ ದರೆ ಮನುಷ್ಯ ಕ್ಷುಲ್ಲಕ, ದುರ್ಬಲ ಮತ್ತು ಅಮುಖ್ಯ ಎಂಬುದು ಅದರರ್ಥ. ಎಲ್ಲ ಪ್ರಾಣಿಗಳೂ ಪ್ರಕೃತಿ ಮರುಚೇತನ ಗೊಳ್ಳಲು ಏನಾದರೊಂದನ್ನು ಮಾಡುತ್ತಿರುತ್ತವೆ, ಆನೆ ಅದರಲ್ಲಿ ಮುಖ್ಯವಾದುದು. ಮನುಷ್ಯ ಏನು ಮಾಡಿದ್ದಾನೆ, ಕಾಡಿನಲ್ಲಿ ಕಸ ತುಂಬಿದ್ದನ್ನು ಬಿಟ್ಟರೆ!

ಲಾರೆನ್ಸ್ ಆಂಥನಿ ಎಂಬ ಆನೆಪ್ರೇಮಿ

ಜೆಯಮೋಹನ್ ಕತೆಯಲ್ಲಿ ಬರುವ ಘಟನೆಗಳು ಉತ್ಪ್ರೇಕ್ಷಿತ ಎಂದು ಭಾವಿಸಬೇಕಿಲ್ಲ. ‘ಎಲಿಫೆಂಟ್ ವ್ಹಿಸ್ಪರರ್’ ಎಂಬ ಪುಸ್ತಕ ಓದಿದ್ದರೆ, ಅಥವಾ ಲಾರೆನ್ಸ್ ಆಂಥನಿ ಎಂಬ ವ್ಯಕ್ತಿಯ ಕತೆ ಓದಿದ್ದರೆ, ಇದೆಲ್ಲ ನಿಮಗೆ ಗೊತ್ತಿರುತ್ತದೆ. ಆತ ದಕ್ಷಿಣ ಆಫ್ರಿಕಾದ ವನ್ಯಪ್ರೇಮಿ, ಸಂರಕ್ಷಣಾವಾದಿ. ಲಾರೆ ಆಂಥನಿ ಥುಲಾ ಥುಲಾ ಗೇಮ್ ರಿಸರ್ವ್‌ನಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರು. ಅವರ ಜೀವನದ ಅತ್ಯಂತ ಪ್ರಸಿದ್ಧ ಅಧ್ಯಾಯ ಆರಂಭವಾದದ್ದು ಒಂದು ದಿನ, ಸುಮಾರು 20 ಕಾಡಾನೆಗಳ ಹಿಂಡನ್ನು ಅವರ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದಾಗ. ಈ ಆನೆಗಳು ಸಾಮಾನ್ಯ ಆನೆಗಳಾಗಿರಲಿಲ್ಲ. ಅವುಗಳನ್ನು ಹಿಂದೆ ಮನುಷ್ಯರು ಹಿಂಸಿಸಿದ್ದರು. ಹೀಗಾಗಿ ಅವುಗಳಲ್ಲಿ ಮನುಷ್ಯ ರ ಬಗ್ಗೆ ಭಯ ಮತ್ತು ಕೋಪ ಎರಡೂ ಇತ್ತು. ಮನುಷ್ಯರನ್ನು ಕಂಡರೆ ರೇಗಿ ಜಜ್ಜಿಹಾಕಲು ಮುಂದಾಗುತ್ತಿದ್ದವು.

ಇವುಗಳನ್ನು ಕೊಂದುಬಿಡೋಣವೇ ಎಂದು ಸರಕಾರ ಕೂಡ ಯೋಚಿಸುತ್ತಿತ್ತು. ಅಂಥ ಹೊತ್ತಿನಲ್ಲೇ ಅವುಗಳನ್ನು ಥುಲಾ ಥುಲಾಗೆ ತಂದುಬಿಡಲಾಯಿತು. ಈ ಆನೆಗಳನ್ನು ಹೇಗಾದಾರೂ ಉಳಿಸಿಕೊಳ್ಳ ಬೇಕು ಎಂಬ ಕಳಕಳಿ ಲಾರೆನ್ಸ್‌ಗೆ ಬಂತು. ಆನೆಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಪದೇಪದೆ ಯತ್ನಿಸು ತ್ತಿದ್ದವು.

ಒಂದು ದಿನ ಬೇಲಿ ಮುರಿದು ಹೊರ ಹೋಗಲು ಸಿದ್ಧವಾದವು. ಹೊರಗೆ ಹೋದರೆ ಅವುಗಳನ್ನು ಯಾರಾದರೂ ಗುಂಡಿಕ್ಕಿ ಕೊಲ್ಲಬಹುದಿತ್ತು. ಒಳಗೇ ಇದ್ದರೆ ಇನ್ನೂ ಆತಂಕ. ಆಂಥನಿ ವಿಚಿತ್ರ ನಿರ್ಧಾರ ತೆಗೆದು ಕೊಂಡರು. ಆನೆಗಳ ಬಳಿ ಹೋಗಿ ಶಾಂತವಾಗಿ ನಿಂತರು, ಮಾತನಾಡಿದರು. ಅವುಗಳ ಭಯ ಅರ್ಥ ಮಾಡಿಕೊಳ್ಳಲು ಯತ್ನಿಸಿದರು. ‘ನಿಮಗೆ ಇಲ್ಲಿ ಅಪಾಯವಿಲ್ಲ’ ಎಂಬ ಸಂದೇಶ ದಾಟಿಸಿದರು.

ಆನೆಗಳಿಗೆ ಮಾನವ ಭಾಷೆ ಅರ್ಥವಾಗುತ್ತಿದ್ದಿರಲಿಕ್ಕಿಲ್ಲ. ಆದರೆ ಲಾರೆನ್ಸ್ ಧ್ವನಿಯಲ್ಲಿದ್ದ ಶಾಂತಿ, ದೇಹಭಾಷೆ ಮತ್ತು ನಿರಂತರ ನಂಬಿಕೆ ಅವುಗಳ ವರ್ತನೆಯಲ್ಲಿ ಬದಲಾವಣೆ ತಂದಿತು. ಕ್ರಮೇಣ ಆನೆಗಳು ಅವರ ಮೇಲೆ ನಂಬಿಕೆ ಇಟ್ಟವು. ಅವರ ಜೊತೆ ಒಡನಾಡತೊಡಗಿದವು. ಆನೆಗಳಿಗೂ ಲಾರೆನ್ಸ್‌ಗೂ ನಡುವೆ ಒಂದು ಭಾವುಕ ಬಂಧ ಬೆಳೆಯಿತು. 2012ರಲ್ಲಿ ಲಾರೆ ಆಂಥನಿ ನಿಧನರಾದರು.

ಸಂರಕ್ಷಿತಾರಣ್ಯದಲ್ಲಿದ್ದ ಆನೆಗಳ ಹಿಂಡು, ಹೇಗೋ ಅವರ ಸಾವಿನ ವಾಸನೆ ಹಿಡಿದು, ಹಿಂಡು ಹಿಂಡಾಗಿ ಬಂದು ಅವರ ಮನೆ ಬಳಿ ಮೌನವಾಗಿ ನಿಂತವು. ಅವು ಎರಡು ದಿನಗಳು ಅಲ್ಲೇ ಇದ್ದವಂತೆ. ತಮ್ಮ ಸ್ನೇಹಿತನನ್ನು ಹುಡುಕಿಕೊಂಡು ಬಂದಂತೆ ಅವು ನಿಶ್ಶಬ್ದವಾಗಿ ನಿಂತಿದ್ದವು. ಆನೆಗಳಿಗೆ ಮರಣದ ಅರ್ಥ ಗೊತ್ತಿತ್ತೇ, ಲಾರೆ ಆಂಥನಿಯನ್ನು ನೆನಪಿಸಿಕೊಂಡಿದ್ದವೇ ಎಂಬುದಕ್ಕೆಲ್ಲ ವೈಜ್ಞಾನಿಕ ಉತ್ತರ ಖಚಿತವಾಗಿ ನಮಗೆ ಗೊತ್ತಿಲ್ಲ.

ಮನುಷ್ಯ ಮತ್ತು ಆನೆಯ ನಡುವಿನ ನಂಬಿಕೆಯ ಸಂಬಂಧ ಎಷ್ಟು ಆಳವಾಗಿರ ಬಹುದು ಎಂಬು ದನ್ನು ಇದು ತೋರಿಸಿಕೊಟ್ಟಿತು. ನಂತರವೂ ವರ್ಷಕ್ಕೊಮ್ಮೆ, ಲಾರೆನ್ಸ್ ಮೃತಪಟ್ಟ ದಿನಗಳ ಆಚೀಚಿನಲ್ಲಿ, ಆ ಆನೆಗಳು ಅಲ್ಲಿ ಬಂದು ನಿಂತು ಹೋಗುತ್ತಿದ್ದವಂತೆ. ಅವುಗಳಿಗೆ ಯಾರೂ ಸುದ್ದಿ ಕಳಿಸುತ್ತಿರಲಿಲ್ಲ. ಹುಡುಕುತ್ತ ಹೋದರೆ ಇನ್ನೊಂದು ಥರದ ದೃಶ್ಯಗಳೂ ನಿಮಗೆ ಸಿಗುತ್ತವೆ.

ಸಾಕಿದ ಆನೆಗಳು ಮದ ಬಂದು ರೊಚ್ಚಿಗೆದ್ದು ಸೊಂಡಿಲಿಗೆ ಸಿಕ್ಕವರನ್ನು ಕಾಲ ಕೆಳಗೆ ಹಾಕಿ ಅಪ್ಪಚ್ಚಿ ಮಾಡುವ ಕೇರಳದ ವಿಡಿಯೊಗಳನ್ನು ನೀವು ನೋಡಿರಬಹುದು. ಸಫಾರಿ ವಾಹನಗಳನ್ನು ಮೈಲು ಗಟ್ಟಲೆ ಅಟ್ಟಿಸಿಕೊಂಡು ಬರುವ ಆಫ್ರಿಕನ್ ಆನೆಗಳ ವಿಡಿಯೊಗಳನ್ನೂ ನೋಡಿರಬಹುದು. ಇತ್ತೀಚೆಗೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ಚಾಮರಾಜನಗರದಲ್ಲಿ ಕಾಡಾನೆ ದಾಳಿ ಇಬ್ಬರನ್ನು ಕೊಂದು ಹಾಕಿವೆ. ಕನಕಪುರ, ರಾಮನಗರ, ಮೂಡಿಗೆರೆ - ಹೀಗೆ ಹಲವು ಕಡೆ ಆಗಾಗ ಆನೆ ಮನುಷ್ಯ ಸಂಘರ್ಷ ವರದಿ ಯಾಗುತ್ತಿದ್ದು, ಕೆಲವು ಮನುಷ್ಯರು ಸಹ ಪ್ರಾಣ ಕಳೆದುಕೊಂಡಿದ್ದಾರೆ. ಅದು ನಿಜಕ್ಕೂ ಬೇಸರದ ಸಂಗತಿ.

ಆನೆ- ಮಾನವರ ನಡುವಿನ ಬದುಕು ಒಂಥರ ಪ್ರೀತಿ, ಹೊಂದಾಣಿಕೆ, ಆತಂಕ, ಜವಾಬ್ದಾರಿ, ಆರೈಕೆ ಎಲ್ಲ ಸೇರಿದ ಸಂಕೀರ್ಣತೆಯದು. ಆನೆ- ಮಾನವ ಮುಖಾಮುಖಿಗೆ ಏಕಮುಖಿ ಚಿತ್ರಣ ಇಲ್ಲ. ಒಪ್ಪಂದದ ಗೆರೆ ಎಲ್ಲಿ ಇರುತ್ತದೋ ಅಲ್ಲಿ ನೆಮ್ಮದಿ, ಅಳಿಸಿಹೋದಾಗ ದುರಂತ ಸಂಭವಿಸುತ್ತದೆ.