ಅಶ್ವತ್ಥಕಟ್ಟೆ
ಭಾರತದಂಥ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಕೊನೆಗೆ ‘ಮತ’ಗಳಿಕೆಯ ಸರಕಾಗುತ್ತದೆ ಎನ್ನುವುದು ಹೊಸದೇನಲ್ಲ. ಅದರಲ್ಲಿಯೂ ವರ್ಷಕ್ಕೊಮ್ಮೆ ಮಂಡನೆಯಾಗುವ ಬಜೆಟ್ʼಗಳು ಸರಕಾರಗಳ ವರ್ಷದ ಆಲೋಚನೆಯನ್ನು ಪ್ರತಿಬಿಂಬಿಸುವುದಕ್ಕಿಂತ ಹೆಚ್ಚಾಗಿ ಉಚಿತ ಯೋಜನೆ ಗಳ ಘೋಷಣೆಗಳ ಕಡೆಗೇ ಕೇಂದ್ರೀಕರಿಸುತ್ತಿವೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಅದರಲ್ಲಿಯೂ ಚುನಾವಣಾ ಕಾಲದ ಬಜೆಟ್‌ಗಳು ಆಡಳಿತ ಪಕ್ಷದ ಪ್ರಣಾಳಿಕೆಯ ರೀತಿಯಲ್ಲಿರುತ್ತವೆ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ. ಈ ಎಲ್ಲ ಮಾತುಗಳನ್ನು ಮೀರಿ ಈ ಬಾರಿಯ ಭಾನುವಾರದ ಬಜೆಟ್ ಭಿನ್ನವಾಗಿದೆ ಎನ್ನುವುದು ಸ್ಪಷ್ಟ.
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಒಂಬತ್ತನೇ ಬಜೆಟ್ ಬಗ್ಗೆ ಅನೇಕರು, ‘ಬಜೆಟ್ ಸಪ್ಪೆಯಂತೆ’.. ’ಬಜೆಟ್‌ನಲ್ಲಿ ಏನಿಲ್ಲವಂತೆ’ ಎಂದು ಹೇಳಿದ್ದಿದೆ. ಇದು ಕಳೆದ ಎರಡು ದಿನಗಳಿಂದ ಜನಸಾಮಾನ್ಯರ ಬಾಯಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಅದಕ್ಕೆ ಕಾರಣ ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ಭಾನುವಾರದ ಬಜೆಟ್ ನಲ್ಲಿ ‘ಘೋಷಣೆ’ಗಳಿಲ್ಲರಿವುದು ಎನ್ನುವುದು ಸ್ಪಷ್ಟ. ಈ ಬಾರಿ 85 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ ಸಚಿವೆ, ಈ ವರ್ಷ ಕೇಂದ್ರ ಏನು ಮಾಡಲಿದೆ ಎನ್ನುವುದಕ್ಕಿಂತ ಮುಂದಿನ ಎರಡು ದಶಕದಲ್ಲಿ ಭಾರತ ಹೇಗಿರಬೇಕು ಎನ್ನುವ ಹಲವು ದೂರದೃಷ್ಟಿಯ ಅಂಶ ಹಾಗೂ ಯೋಜನೆ ಗಳನ್ನು ಉಲ್ಲೇಖಿಸಿದರು.
ಉಚಿತ ಯೋಜನೆ, ಅನುದಾನಗಳಿಗಿಂತ ಹೆಚ್ಚಾಗಿ, ಮೂಲಸೌಕರ್ಯ, ಶಿಕ್ಷಣ, ಉದ್ಯಮ, ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರೊಂದಿಗೆ ಜನಸಾಮಾನ್ಯರಿಗೆ ನಾಳೆಯಿಂದಲೇ ಬದಲಾಗಬಹು ದಾದ ಅಥವಾ ಜಾರಿಯಾಗಬಹುದಾದ ಯೋಜನೆಗಳಿಲ್ಲದಿರುವುದರಿಂದ ಅನೇಕರಿಗೆ ಈ ಬಾರಿಯ ಬಜೆಟ್ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಇದನ್ನೂ ಓದಿ: Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'
ನಿಜವಾಗಿ ಹೇಳಬೇಕೆಂದರೆ, ಭಾರತದಲ್ಲಿ ಬಜೆಟ್‌ಗೆ ಸಿಗುವಷ್ಟು ಮಾನ್ಯತೆ ಇನ್ಯಾವ ದೇಶದಲ್ಲಿಯೂ ಸಿಗುವುದಿಲ್ಲವೇನೋ ಎನಿಸುವಷ್ಟರ ಮಟ್ಟಿಗೆ ಕುತೂಹಲವಿರುತ್ತದೆ. ಬಜೆಟ್‌ಗಳೆಂದರೆ ಜನರಿಗೆ ಯಾವೆಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಆಯಾ ಆರ್ಥಿಕ ವರ್ಷದಲ್ಲಿ ದೇಶದ ಖಜಾನೆಗೆ ಬರುವ ಆದಾಯವೆಷ್ಟು, ಮಾಡುತ್ತಿರುವ ಖರ್ಚೆಷ್ಟು? ಅನುದಾನ ಹಂಚಿಕೆಗೆ ಮಾಡಿಕೊಂಡಿರುವ ಲೆಕ್ಕಾಚಾರಗಳೇನು? ಎನ್ನುವ ಅಂಶವನ್ನು ದೇಶದ ಮುಂದಿಡು ವುದೇ ಆಗಿರುತ್ತದೆ.
ಭಾರತದಲ್ಲಿ ನಡೆಸಿಕೊಂಡು ಬಂದಿರುವ ಬಜೆಟ್‌ನಲ್ಲಿ ಘೋಷಣೆಗಳೇ ಹೆಚ್ಚಾಗಿದ್ದರೂ, ನೈಜ ಅರ್ಥದಲ್ಲಿ ಘೋಷಣೆಗಳು ಬಜೆಟ್ʼನ ಒಂದು ಭಾಗವೇ ಹೊರತು ಇಡೀ ಬಜೆಟ್ ಅಲ್ಲ. ಆದರೆ ಭಾರತದಲ್ಲಿ ಬಜೆಟ್‌ನಲ್ಲಿ ಘೋಷಣೆಗಳಿಗೆ ಹೆಚ್ಚು ಆದ್ಯತೆ ಸಿಗುವ ಕಾರಣಕ್ಕೆ, ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ‘ಬಜೆಟ್’ ಅನೇಕರಿಗೆ ಸಪ್ಪೆ ಎನಿಸಿತು.
ಕೇಂದ್ರ ಸರಕಾರದ ಬಜೆಟ್ ಮಂಡಿಸುವಾಗ ದೇಶಕ್ಕೆ, ಜನರಿಗೆ ಸಿಕ್ಕಿದ್ದೇನು ಎನ್ನುವ ಕುತೂಹಲ ದೊಂದಿಗೆ ನಮ್ಮ ಕರ್ನಾಟಕಕ್ಕೆ ಸಿಕ್ಕಿದ್ದೇನು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಕರ್ನಾ ಟಕದ ಮಟ್ಟಿಗೆ ನೋಡುವುದಾದರೆ, ಎರಡು ಹೈಸ್ಪೀಡ್ ರೈಲು (ರಾಜ್ಯದಲ್ಲಿ ಎಷ್ಟು ಕಿ.ಮೀ. ಓಡುತ್ತವೆ ಎನ್ನುವುದು ಬೇರೆ) ಹೊರತುಪಡಿಸಿ, ಕರಾವಳಿ ಭಾಗದಲ್ಲಿ ಟ್ರೆಕ್ಕಿಂಗ್ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬಗ್ಗೆ ಪ್ರಸ್ತಾಪವಾಗಿದೆ.
ಈ ಎರಡು ಯೋಜನೆ ಹೊರತಾಗಿ, ಸ್ಪಷ್ಟವಾಗಿ ಕರ್ನಾಟಕಕ್ಕೆಂದು ಯಾವುದೇ ಯೋಜನೆಗಳನ್ನು ನಮೂದಿಸಿಲ್ಲ. ಆದರೆ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ ಘೋಷಣೆ ಹಾಗೂ ಸೆಮಿ ಕಂಡಕ್ಟರ್ ವಲಯಕ್ಕೆ ಘೋಷಿಸಿರುವ 40 ಸಾವಿರ ಕೋಟಿ ರು.ಗಳಿಂದ ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದರೊಂದಿಗೆ ತೆಂಗು, ಶ್ರೀಗಂಧ ಮತ್ತು ಗೇರು ಬೆಳೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಮುಂದಿನ 5 ವರ್ಷದಲ್ಲಿ ಗೇರು ಮತ್ತು ಕೋಕೋ ಬೆಳೆಗಳನ್ನು ಜಾಗತಿಕ ರಫ್ತು-ಉತ್ಪನ್ನಗಳನ್ನಾಗಿ ರೂಪಿಸುವ ಗುರಿಯಿರುವುದಾಗಿ ಘೋಷಿಸಲಾಗಿದೆ. ಈಗಾಗಲೇ ಗೇರು, ಕೋಕೋ ಬೆಳೆಯುತ್ತಿರುವ ರಾಜ್ಯ ರೈತರಿಗೆ ಮಾರುಕಟ್ಟೆ ಮತ್ತು ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ವಿಶ್ಲೇಷಿಸ ಲಾಗುತ್ತಿದೆ.
ಇದರೊಂದಿಗೆ ದೇಶದಲ್ಲಿಯೇ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಿರುವುದರಿಂದ ಈ ಕ್ಷೇತ್ರದಲ್ಲಿ ಕೈಗಾರಿಕೋದ್ಯಮಿಗಳು ಕರ್ನಾಟಕದತ್ತ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಯೋಜನೆಗಳಿಗಿಂತ ಹೆಚ್ಚಾಗಿ 16ನೇ ಹಣಕಾಸು ಆಯೋಗ ದಲ್ಲಿ ಕರ್ನಾಟಕಕ್ಕೆ ಏನು ಸಿಗಲಿದೆ? ಎಷ್ಟು ಸಿಗಲಿದೆ ಎನ್ನುವ ಕುತೂಹಲ ಅನೇಕರಿಗಿತ್ತು. ರಾಜ್ಯ ಸರಕಾರವು ಶೇ.4.71ರಷ್ಟು ತೆರಿಗೆ ಪಾಲನ್ನು ನೀಡಬೇಕು ಎಂದು ಮನವಿ ಮಾಡಿತ್ತು. ಇದು ಕೇವಲ ಮನವಿಯಾಗಿ ಉಳಿಯದೇ ಬಿಜೆಪಿಯೇತರ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಡುವಿನ ತೆರಿಗೆ ಯುದ್ಧವೆಂದೇ ಇದನ್ನು ಬಿಂಬಿಸಲಾಗಿತ್ತು. ಈ ಯುದ್ಧದಲ್ಲಿ ಕೇಂದ್ರ ಸರಕಾರ ಸಂರ್ಪೂಣ ವಾಗಿ ಬಿಜೆಪಿಯೇತರ ಸರಕಾರಗಳು ಹೇಳಿದಂತೆ ಕೇಳದಿದ್ದರೂ, ಕಳೆದ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಪ್ರಮಾಣದಲ್ಲಿ ಏರಿಸಿರುವುದು ಸಮಾಧಾನಕರ ಸಂಗತಿ.
16ನೇ ಹಣಕಾಸು ಆಯೋಗ ತನ್ನ ವರದಿಯಲ್ಲಿ ಮುಂದಿನ ಐದು ವರ್ಷಕ್ಕೆ ಸಂಗ್ರಹವಾಗುವ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಶೇ.41ರಷ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಿತ್ತು. ಅದರಂತೆ, 2026-27ನೇ ಸಾಲಿನಲ್ಲಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ರು. ಹಂಚಿಕೆ ಮಾಡಲು ತೀರ್ಮಾನಿಸಿದೆ.
ಇದರಲ್ಲಿ ಕರ್ನಾಟಕಕ್ಕೆ ಶೇ.4.13ರಷ್ಟು ನೀಡುವುದಾಗಿ ಹೇಳಿದೆ. ಈ ಬಾರಿ ಹಂಚಿಕೆಯಾಗಿರುವ ಅನುದಾನ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದರೆ, 15ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಹೆಚ್ಚು ಎನ್ನಬಹುದು. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ. 4.71ರಷ್ಟು ನೀಡಿದ್ದ ಕೇಂದ್ರ ಸರಕಾರ, 15ನೇ ಹಣಕಾಸು ಆಯೋಗದಲ್ಲಿ ಶೇ 3.64ರಷ್ಟು ನೀಡಿತ್ತು.
15ನೇ ಹಣಕಾಸು ಆಯೋಗದಲ್ಲಿ ಈ ಪ್ರಮಾಣದಲ್ಲಿ ತಗ್ಗಿಸಿದ್ದರಿಂದ ಐದು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ 68 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ ಖೋತಾವಾಯಿತು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಆರೋಪವಾಗಿತ್ತು. ಇದೀಗ ಶೇ.4.13ರಷ್ಟು ಹಂಚಿಕೆ ಮಾಡಿರುವುದರಿಂದ ಕರ್ನಾಟಕಕ್ಕೆ ಈ ವರ್ಷ 63,049 ಕೋಟಿ ರು. ಬರಬಹುದು ಎಂದು ಅಂದಾಜಿಸಲಾಗಿದೆ.
ಆದರೆ 16ನೇ ಹಣಕಾಸು ಆಯೋಗದಲ್ಲಿಯೂ ಉತ್ತರ ಪ್ರದೇಶ ಹಾಗೂ ಹಿಂದಿ ಭಾಷಿಕ ರಾಜ್ಯಗಳಿಗೆ ಹೆಚ್ಚು ಪಾಲು ನೀಡಿರುವುದು ಬಿಜೆಪಿಯೇತರ ಸರಕಾರಗಳಿರುವ ರಾಜ್ಯ ನಾಯಕರ ಕಣ್ಣು ಕೆಂಪಾ ಗಿಸಿದೆ. ಉದಾಹರಣೆಗೆ ಉತ್ತರ ಪ್ರದೇಶಕ್ಕೆ ಶೇ.17.61, ಬಿಹಾರಕ್ಕೆ ಶೇ.29.94ರಷ್ಟು ತೆರಿಗೆ ಪಾಲು ನೀಡಿರುವುದು ಇದೀಗ ಕೇಂದ್ರದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ತಿರುಗಿ ಬೀಳುವಂತೆ ಮಾಡಿದೆ. ಈ ರೀತಿ ಹಂಚಿಕೆ ಮಾಡಿರುವುದರಿಂದ ಮುಂದಿನ ದಿನದಲ್ಲಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳಿಗೆ ಸಿಗುವ ನೂರು ರುಪಾಯಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ 4.13 ರು. ಸಿಕ್ಕರೆ, ಉತ್ತರ ಪ್ರದೇಶಕ್ಕೆ 17.61 ರು., ಬಿಹಾರಕ್ಕೆ 29.94 ರು. ಸಿಗಲಿದೆ.
ಅದೇ ರೀತಿ ಪಶ್ಚಿಮ ಬಂಗಾಳಕ್ಕೆ 7.21 ರು., ಮಹಾರಾಷ್ಟ್ರಕ್ಕೆ 6.44 ರು., ರಾಜಸ್ಥಾನಕ್ಕೆ 5.92 ರು. ದೊರಕಲಿದೆ. ಕಳೆದ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚುವರಿ ಅನುದಾನ ಸಿಕ್ಕರೂ ನಿರೀಕ್ಷಿತ ಪ್ರಮಾಣದ ಅನುದಾನ ಸಿಕ್ಕಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಆರೋಪವಾಗಿದೆ.
ಈ ಅನುದಾನ ಹಂಚಿಕೆಯ ವಿಷಯ, ವಿಕಸಿತ ಭಾರತದ ಪರಿಕಲ್ಪನೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಒತ್ತು, ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಸೇರಿದಂತೆ ಕೇಂದ್ರದ ಹಲವು ಘೋಷಣೆಗಳು ಭವಿಷ್ಯದ ಹಾಗೂ ಭಾರತದ ಆದಾಯದ ದೃಷ್ಟಿಯಿಂದ ಅದ್ಭುತ ಎನಿಸುವ ಘೋಷಣೆಗಳಾದರೂ, ಜನರ ‘ಮನಸ್ಸಿಗೆ’ ನಾಟುವುದಿಲ್ಲ.
ಏಕೆಂದರೆ, ಈ ಎಲ್ಲ ಘೋಷಣೆಗಳಿಂದ ರಾಜ್ಯ, ದೇಶದ ಜನರಿಗೆ ‘ನೇರ’ವಾಗಿ ಲಾಭ ಅಥವಾ ನಷ್ಟ ವಾಗುವುದಿಲ್ಲ. ಹಾಗೆ ನೋಡಿದರೆ, ಜನರಿಗೆ ಈ ಬಾರಿಯ ಬಜೆಟ್ ಹೆಚ್ಚು ‘ಆಪ್ತ’ ಎನಿಸದಿರುವು ದಕ್ಕೂ ಹಲವು ಕಾರಣಗಳಿವೆ. ಪ್ರಮುಖವಾಗಿ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ಗಳ ಏರಿಳಿತ, ಹೆಚ್ಚುವರಿ ತೆರಿಗೆ, ಕರಗಳ ಸೇರ್ಪಡೆ, ವಸ್ತುಗಳ ಮೇಲಿನ ದರ ಏರಿಳಿತವನ್ನು ತಿಳಿಯುವುದಕ್ಕೆ ಅನೇಕರು ಬಜೆಟ್ ಅನ್ನು ನೋಡುತ್ತಾರೆ.
ಕೇಂದ್ರ ಸರಕಾರ ಜಿಎಸ್‌ಟಿ ಜಾರಿಗೊಳಿಸಿದ ಬಳಿಕ, ಬಹುಪಾಲು ಉತ್ಪನ್ನಗಳು ಜಿಎಸ್ ಟಿಯ ವಿವಿಧ ಸ್ಲಾಬ್‌ನಲ್ಲಿಯೇ ಬರುವುದರಿಂದ ಬಜೆಟ್ʼನಲ್ಲಿ ವಸ್ತುಗಳ ದರ ಏರಿಳಿಕೆ ತೀವ್ರ ಪ್ರಮಾಣದಲ್ಲಿ ಆಗುವುದಿಲ್ಲ. ಇನ್ನು ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ಗೆ ಸಂಬಂಧಿಸಿದಂತೆ ‘ಮಹತ್ವ’ ತೀರ್ಮಾನಗಳಾಗಿಲ್ಲ. ಇನ್ನು ತೆರಿಗೆ ವಂಚಿಸಿದರೆ ದಂಡ ಪ್ರಮಾಣ, ಐಟಿ ರಿಟರ್ನ್ಸ್ ಅವಧಿಯಲ್ಲಿನ ಕೆಲ ಬದಲಾವಣೆ ತರಲಾಗಿದೆ.
ಆದ್ದರಿಂದ ಈ ಬಾರಿಯ ಕೇಂದ್ರದ ಬಜೆಟ್‌ನಲ್ಲಿ ಜನರಿಗೆ ‘ಖುಷಿ-ದುಃಖ’ ಕೊಡುವ ಹೆಚ್ಚಿನ ಅಂಶಗಳಿಲ್ಲ ಎನ್ನುವುದು ವಾಸ್ತವ. ಈ ಕಾರಣಕ್ಕಾಗಿಯೇ ಬಜೆಟ್ ಅನ್ನು ಯಾವ ರೀತಿಯಲ್ಲಿ ನೋಡಬೇಕು ಎನ್ನುವ ಗೊಂದಲದಲ್ಲಿ ಹಲವರಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
2047ರ ವಿಕಸಿತ ಭಾರತಕ್ಕೆ ಮುನ್ನಡಿ ಬರೆಯುವ ರೀತಿಯಲ್ಲಿ ಸಜ್ಜಾಗಿದೆ ಎನ್ನುವ ಈ ಬಜೆಟ್‌ನಲ್ಲಿ ಏಪ್ರಿಲ್ ಒಂದರಿಂದ ಕೇಂದ್ರ ಸರಕಾರ ಏನೆಲ್ಲ ಮಾಡಲಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಮುಂದಿನ ಎರಡು ದಶಕದಲ್ಲಿ ಭಾರತ ಯಾವ ರೀತಿಯಲ್ಲಿ ‘ವಿಕಸನ’ಗೊಳ್ಳಲು ಬೇಕಿರುವ ಅಂಶಗಳಿಗೆ ಬುನಾದಿ ಕಲ್ಪಿಸುವ ಬಜೆಟ್ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಯಾವುದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಬಜೆಟ್‌ಗಳು ಹತ್ತಿರದಲ್ಲಿ ಎದುರಾಗ ಬಹುದಾದ ರಾಜ್ಯ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಕೆಲ ಘೋಷಣೆಗಳನ್ನು ಮಾಡಲಾಗುತ್ತದೆ. ಆದರೆ ಮೇನಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಿದ್ದರೂ, ಆ ರಾಜ್ಯಗಳಿಗೆ ಯಾವುದೇ ‘ಫ್ಯಾಂಟಸಿ’ ಅಥವಾ ಒಲೈಸುವ ಘೋಷಣೆಗಳನ್ನು ಬಹುದೊಡ್ಡ ಮಟ್ಟ ದಲ್ಲಿ ಮಾಡದಿರುವ ಹಿಂದಿರುವ ಉದ್ದೇಶವೇನು ಎನ್ನುವ ಕುತೂಹಲವಿದೆ.
ದಶಕಗಳಿಂದ ಬಜೆಟ್ ಎಂದರೆ ಘೋಷಣೆ ಎನ್ನುವ ಪರಿಪಾಠವನ್ನು ನಡೆಸಿಕೊಂಡು ಬಂದಿದ್ದ ಸರಕಾರಗಳಿಗಿಂತ ಈ ಬಾರಿಯ ಬಜೆಟ್ ಭಿನ್ನವಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ‘ವಿಕಸಿತ’ ಭಾರತದ ಕಲ್ಪನೆ ಯಾವ ರೀತಿಯಲ್ಲಿ ಈಡೇರಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸ ಬೇಕಿದೆ.