ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof R G Hegde Column: ಕ್ಷುಲ್ಲಕ ವಾಸ್ತವ ನಡುವೆಯೇ ಮನಸೆಳೆವ ತಾಳಮದ್ದಳೆ

ಗ್ಯಾಸ್‌ಲೈಟ್‌ಗೆ ಅಷ್ಟಷ್ಟು ಹೊತ್ತಿಗೆ ಹವಾ ಹೊಡೆಯುತ್ತಿರಬೇಕು. ಮ್ಯಾಂಟಲ್ ಹೋಗದಂತೆ ಹವಾ ಹೊಡೆಯಲು ಎಕ್ಸ್‌ಪರ್ಟ್ ವ್ಯಕ್ತಿಯೇ ಬೇಕು. ಅದಕ್ಕಾಗಿ ಜಗನ್ನಾಥ ಶೆಟ್ಟಿಗೆ ಮೊದಲೇ ಹೇಳಿರುತ್ತಿದ್ದರು. ಹೊರಗಡೆ ಆಷಾಢದ ವಿಪರೀತ ಮಳೆ. ತುಂಬಿದ ಕತ್ತಲು. ಬ್ಯಾಟ್ರಿ ಇದ್ದವರು ಬ್ಯಾಟ್ರಿ ತರುತ್ತಿದ್ದರು. ಅವರು ಶ್ರೀಮಂತರು. ಹೆಚ್ಚು ಜನ ತರುವುದು ಸೂಡಿ.

ತಾಳ-ಮೇಳ

ಪ್ರೊ.ಆರ್.ಜಿ.ಹೆಗಡೆ

ತಾಳಮದ್ದಳೆಯ ಅಬ್ಬರ ಆರಂಭವಾಗುತ್ತಿದ್ದುದು ಮಳೆಗಾಲದಲ್ಲಿ. ಆಟದ ಮೇಳದವರೆಲ್ಲ ಮೇಳ ಮುಡಿಸಿ ಇದ್ದ ಬಿದ್ದ ಚಿಕ್ಕಪುಟ್ಟ ತೋಟಕ್ಕೆ ಮದ್ದು ಹೊಡೆಸಿ ಅಥವಾ ಗದ್ದೆ ನೆಟ್ಟಿ ಮಾಡಿ ಮುಗಿಸಿ ನಿರಾಳವಾದ ಬಳಿಕ. ಯಾವುದಾದರೂ ದೇವಸ್ಥಾನದಲ್ಲಿ ಅಥವಾ ದೊಡ್ಡ ಹೊಳ್ಳಿ ಇದ್ದ ಮನೆ ಗಳಲ್ಲಿ ಏನಾದರೂ ವಿಶೇಷ ಕಾರ್ಯ-ಕಟ್ಲೆ ಇದ್ದಾಗ ಸಾಯಂಕಾಲ ಅಥವಾ ರಾತ್ರಿ ತಾಳಮದ್ದಳೆ. ನೆಲಕ್ಕೆ ಜಮಖಾನ ಇದ್ದರೆ ಜಮಖಾನ ಇಲ್ಲದಿದ್ದರೆ ಹಂಡಗಂಬಳಿ ಹಾಸಿ, ಲೋಟದಲ್ಲಿ ಅಕ್ಕಿ ಹಾಕಿ ಊದುಬತ್ತಿ ಹಚ್ಚಿಟ್ಟರೆ ಸ್ಟೇಜ್ ರೆಡಿ.

ಆಗ ಊರಲ್ಲಿ ಒಬ್ಬಿಬ್ಬರ ಮನೆಯಲ್ಲಿ ಗ್ಯಾಸ್‌ಲೈಟ್ ಇತ್ತು. ಆದರೆ ಆ ಗ್ಯಾಸ್‌ಲೈಟಿಗೆ ಮ್ಯಾಂಟಲ್ ಹೋಗುವ ಶೀಕು ಇತ್ತು. ಹೀಗಾಗಿ ಗ್ಯಾಸ್‌ಲೈಟ್ ಕೊಡುವವರೂ ಒಮ್ಮೆ ಮ್ಯಾಂಟಲ್ ಹೋದರೆ ಬೇರೆ ಮ್ಯಾಂಟಲ್ ಹಾಕಿಸಿಕೊಡುವ ಕಂಡಿಷನ್ ಮೇಲೆಯೇ ಕೊಡುತ್ತಿದ್ದರು.

ಅದು ಚಿಮಣಿ ಎಣ್ಣೆಯ ಮೇಲೆ ಉರಿಯುವ ಲೈಟ್. ‘ಹುಸ್’ ಎಂದು ತಣ್ಣನೆಯ ಒಂದೇ ಶ್ರುತಿಯ ಸದ್ದು ಮಾಡುವ ಆ ಗ್ಯಾಸ್‌ಲೈಟ್ ರಾತ್ರಿ ದೊಡ್ಡ ದೊಡ್ಡ ನೆರಳುಗಳನ್ನು ಸೃಷ್ಟಿಸುತ್ತಿತ್ತು. ರಾತ್ರಿ ಅಂಥ ನೆರಳು- ಬೆಳಕು ನೋಡಿರದ ನಾಯಿಗಳು, ಬೆಕ್ಕುಗಳು, ಇಲಿ, ಹಲ್ಲಿ ಮುಂತಾದ ಪ್ರಾಣಿಗಳು ಜಗತ್ತಿಗೆ ಏನೋ ಆಗಿಬಿಟ್ಟಿತೆಂಬ ಗಡಿಬಿಡಿಯಲ್ಲಿ ಭಯಪಟ್ಟು ಓಡಾಡುತ್ತಿದ್ದವು. ಲೈಟ್ ಮೊದಲು ಭಗಭಗ ಬೆಂಕಿಯಾಗಿ, ಚಿಮಣಿ ಎಣ್ಣೆಯ ವಾಸನೆ ಮನೆಯೆಲ್ಲ ತುಂಬಿ ನಂತರ ಕ್ರಮೇಣ ಮ್ಯಾಂಟಲ್ ಕೆಂಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿ ಬೆಳಕಾದ ಮೇಲೆ ತಾಳಮದ್ದಳೆಗೆ ಒಂದು ಭಾಗ ರೆಡಿ.

ಗ್ಯಾಸ್‌ಲೈಟ್‌ಗೆ ಅಷ್ಟಷ್ಟು ಹೊತ್ತಿಗೆ ಹವಾ ಹೊಡೆಯುತ್ತಿರಬೇಕು. ಮ್ಯಾಂಟಲ್ ಹೋಗದಂತೆ ಹವಾ ಹೊಡೆಯಲು ಎಕ್ಸ್‌ಪರ್ಟ್ ವ್ಯಕ್ತಿಯೇ ಬೇಕು. ಅದಕ್ಕಾಗಿ ಜಗನ್ನಾಥ ಶೆಟ್ಟಿಗೆ ಮೊದಲೇ ಹೇಳಿರು ತ್ತಿದ್ದರು. ಹೊರಗಡೆ ಆಷಾಢದ ವಿಪರೀತ ಮಳೆ. ತುಂಬಿದ ಕತ್ತಲು. ಬ್ಯಾಟ್ರಿ ಇದ್ದವರು ಬ್ಯಾಟ್ರಿ ತರುತ್ತಿದ್ದರು. ಅವರು ಶ್ರೀಮಂತರು. ಹೆಚ್ಚು ಜನ ತರುವುದು ಸೂಡಿ. ಬ್ಯಾಟ್ರಿ ಇದ್ದವರೂ ಕೂಡ ಹೆಚ್ಚು ಹೊತ್ತು ಬೆಳಕು ಮಾಡಿದರೆ ಶೆಲ್ಲು ಖರ್ಚಾಗುತ್ತಿತ್ತು ಎಂದು ಅಂತರ ಅಂತರ ಬಿಟ್ಟು ಬ್ಯಾಟ್ರಿ ಹೊಡೆದು ಲೈಟ್ ಮಾಡುತ್ತಿದ್ದರು.

ಇದನ್ನೂ ಓದಿ: Prof R G Hegde Column: ಸಾವಿನ ನಂತರದ ಪಯಣದ ಸುತ್ತಮುತ್ತ ಒಂದು ಕಿರುನೋಟ

ವಿಪರೀತ ಮಳೆಯಲ್ಲಿ ಸೂಡಿ ಕಷ್ಟ. ಆದರೆ ಸೂಡಿ ತರುವವರೇ ಹೆಚ್ಚು. ಒಮ್ಮೆ ಅವರು ಬೆಳಕಿದ್ದಾ ಗಲೇ ಬಂದಿದ್ದರೆ ವಾಪಾಸು ಹೋಗಬೇಕಿದ್ದರೆ ಅವರಿಗೆ, ಆ ಮನೆಯವರು ಸೂಡಿ ಕೊಡಬೇಕು. ಅದು ಮರ್ಯಾದೆಯ ವಿಷಯ. ಈ ಅವಶ್ಯಕತೆಗಾಗಿಯೇ ಬೇಸಗೆಯಲ್ಲಿಯೇ ಗಡಿಗಾಲದ ತಯಾರಿಯ ಭಾಗವಾಗಿ ಎಲ್ಲ ಮನೆಯವರು ಮಡ್ಲಗರಿಯ ನೂರಾರು ಸೂಡಿ ಕಟ್ಟಿ ಪಿಂಡಿ ಮಾಡಿ ಇಡುತ್ತಿದ್ದರು. ಸೂಡಿ ಉರಿಸುವುದೂ ಒಂದು ಕಲೆ.

ಕಟ್ಟು ಒಮ್ಮೆಲೆ ಬಿಚ್ಚಿ ಬಿಟ್ಟರೆ ಸೂಡಿ ಭರ್ರೆಂದು ಉರಿದುಹೋಗುತ್ತದೆ. ಕಟ್ಟು ಬಹಳ ಹುಷಾರಿ ಯಿಂದ ಬಿಚ್ಚಬೇಕು. ಗಂಟು ತನ್ನಿಂದ ತಾನೇ ಬಿಚ್ಚಿಕೊಂಡರೆ ಒಳ್ಳೆಯದು. ಅಲ್ಲದೆ ಸೂಡಿ ಕೆಳ ಮುಖವಾಗಿ ಬಹಳ ಹೊತ್ತು ಹಿಡಿದಿರಬಾರದು. ಕೆಳಮುಖವಾಗಿ ಮೇಲ್ಮುಖವಾಗಿ ಹಿಡಿಯುತ್ತಾ ಸೂಡಿಯ ಮುಂದಿರುವ ಬೆಂಕಿಯ ಬೆಳಕನ್ನು ನಿಭಾಯಿಸುತ್ತಾ ಹೋಗುವುದೇ ನಿಜವಾದ ಕಲೆ.

ಚಾಪರಕನ ಸೂಡಿ ಒಳ್ಳೆಯದು. ತಡೆದು ಉರಿಯುತ್ತದೆ. ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಬ್ಯಾಟ್ರಿ, ಸೂಡಿ, ಮಳೆ, ಕಂಬಳಿ, ಕತ್ತಿ ಇತ್ಯಾದಿ ಕುರಿತು ಬಂದು ಸೇರಿದವರೆರೂ ಮಾತಾಡಿ ಮುಗಿಸಿದ ನಂತರವೇ ತಾಳಮದ್ದಳೆಯ ಆರಂಭ. ಲೈಟಿನ ಬೆಳಕಿನ ಜತೆ ಸೂಡಿಯ ಸುಟ್ಟ ವಾಸನೆ ಸೇರಿ ಒಂದು ಬೇರೆ ಜಗತ್ತು ಸೃಷ್ಟಿ ಆದ ಮೇಲೆ ತಾಳ ಮದ್ದಳೆಯ ವಾತಾವರಣ ಬರುತ್ತಿತ್ತು.

ಮೊದಲು ಬಂದು ಕುಳಿತುಕೊಳ್ಳುವವವರು ಮೃದಂಗ ಮತ್ತು ಹಾರ್ಮೋನಿಯಂ ಬಾರಿಸುವವರು. ಚಂಡೆ ತಾಳಮದ್ದಳೆಗೆ ಅತ್ಯವಶ್ಯಕವೆಂದೇನೂ ಅಲ್ಲ. ಇದ್ದರೆ ಒಳ್ಳೆಯದು, ರಂಗು ಬರುತ್ತದೆ. ಮೊದಲ ಕೆಲಸ ಶ್ರುತಿ ಕೂಡಿಸುವುದು. ಒಂದು ಚಿಕ್ಕ ಸುತ್ತಿಗೆಯಿಂದ ಮೃದಂಗದ ಚರ್ಮ ಕಟ್ಟಿದ ಭಾಗಕ್ಕೆ ಹೊಡೆದು ಹೊಡೆದು ‘ಪೊಂವ್ ಪೊಂವ್’ ಮಾಡಿ ಎರಡು ಬಿಡತೆಗೆ ಹಾಕಿ, ಅದರ ಶ್ರುತಿ ಹಾರ್ಮೋನಿಯಂನ ಬಿಳಿ ಎರಡರ ಶ್ರುತಿಗೆ ಕೂಡಿದರೆ ನಿರಾಳವಾದಂತೆ, ಧೈರ್ಯ ಬಂದಂತೆ.

V Bhat 251

ಕೆಲವೊಮ್ಮೆ ಮದ್ದಳೆಗೆ ತಂಪು ಹಿಡಿದು ಹೋಗಿದ್ದರೆ, ಬೆಂಕಿಯಲ್ಲಿ ಚರ್ಮದ ಭಾಗವನ್ನು ಕಾಸ ಬೇಕಿತ್ತು. ಆಗ ಶ್ರುತಿ ಕೂಡುವುದು. ಅದಿಲ್ಲದಿದ್ದರೆ ಮುಂದುವರಿ ಯುವುದು ಸಾಧ್ಯವಿಲ್ಲ. ಇವೆಲ್ಲ ಮುಗಿದ ಮೇಲೆ ಭಾಗವತರು ಕವಳ ಉಗುಳಿ ಬಂದು ಕೂತು ಕಿವಿಗೆ ಕೈಕೊಟ್ಟು ಹಾರ್ಮೋ ನಿಯಂನ ಸದ್ದಿನೊಂದಿಗೆ, ಆ.. ಆ... ಆ... ಎಂಬ ನಾದ ಆರಂಭಿಸಿದರೆ, ತಾಳಮದ್ದಳೆ ಆರಂಭವಾಯಿತು.

ಆರಂಭವಾದ ತಾಳಮದ್ದಳೆ ಎಲ್ಲ ಕ್ಷುಲ್ಲಕ ವಾಸ್ತವಗಳ ನಡುವೆಯೇ ನಮ್ಮನ್ನು ಬೇರೊಂದು ಲೋಕಕ್ಕೆ ಎತ್ತಿಕೊಂಡು ಕರೆದೊಯ್ಯುವ ರೀತಿ ಬೆರಗುಗೊಳಿಸುವಂಥದ್ದು. ಅರ್ಥಧಾರಿಗಳು ಹಾಸಿಟ್ಟ ಜಮಖಾನೆಯ ಮೇಲೆ ಕುಳಿತು ಮುಖಕ್ಕೆ ಬಣ್ಣ ಕೂಡ ಹಚ್ಚಿಕೊಳ್ಳದೆ, ಬೇರೊಂದು ಭ್ರಮಾಜಗತ್ತಿನ ಯಾವುದೇ ಪರಿಕರಗಳನ್ನು ಬಳಸದೆ, ಮಾತುಕತೆಯನ್ನೇ ಮಾನವೀಯ ನಾಟಕ ವಾಗಿಸುವ, ಯಕ್ಷಗಾನವಾಗಿಸುವ, ದಿವ್ಯವಾಗಿಸುವ ರೀತಿಯ ಕಲಾಪ್ರಕಾರ ಬೇರೊಂದಿಲ್ಲ ವೆಂದೆನಿಸುತ್ತದೆ.

ತಾಳಮದ್ದಳೆಯ ಮಧ್ಯೆ ಮಧ್ಯೆ ಅರ್ಥಧಾರಿಗಳು ಸ್ಟೇಜ್ ಮೇಲೆ ಕುಳಿತುಕೊಂಡೇ ಕವಳ ಹಾಕು ವುದೋ, ಅಡಕೆ ಕೆರೆಯುವುದೋ, ಬೀಡಿ ಸೇದುವುದೋ ಅಥವಾ ಒಂದು ಹುರುಕೆ ಹೊಡೆಯು ವುದೋ ಕೂಡ ಇತ್ತು. ಆದರೆ ಪ್ರೇಕ್ಷಕವರ್ಗ ಅದನ್ನು ಅಲ್ಲಿಯೆ ಬಿಟ್ಟು, ಅದೆಲ್ಲಾ ಸಾಧಾರಣ ವಿಷಯವೆನ್ನುವಂತೆ ನೋಡಿ ತಾಳಮದ್ದಳೆಯ ಕತೆಯ ಮುನ್ನಡೆ ಮತ್ತು ಗಂಭೀರ, ತಾತ್ವಿಕ, ವಾದ-ವಿವಾದಗಳೆಡೆ ಲಕ್ಷ್ಯ ಹರಿಸಿ ಎಂಜಾಯ್ ಮಾಡುತ್ತಿದುದು ನಿಜಕ್ಕೂ ಅದ್ಭುತ ವಿಷಯ.

ಭಾಗವತರು ‘ಇಂದಿರೆಗೆ ತಲೆಬಾಗಿ’ ಎಂದು ಪದವನ್ನು ಆರಂಭಿಸುತ್ತಿದ್ದಂತೆ ಒಂದು ರೀತಿಯ ವಿಶಿಷ್ಟ ಅಲೌಕಿಕತೆ ಮನವನ್ನು ಮುತ್ತಿಕೊಳ್ಳುತ್ತದೆ. ಸುತ್ತಮುತ್ತಲಿನ ವಾಸ್ತವವೆಲ್ಲವೂ ಅವಾಸ್ತವ ವಾಗಿ ಕಾಲ್ಪನಿಕ ಪುರಾಣ ಕತೆಯೇ ವಾಸ್ತವವಾಗುತ್ತದೆ. ತಾಳಮದ್ದಳೆಯ ಭೀಷ್ಮರಾದ ಶ್ರೇಷ್ಠ ಅರ್ಥಧಾರಿ ಗಳು ಯಾವ ಪಾತ್ರವನ್ನು ನಿರ್ವಹಿಸಿದರೂ ಅವರ ವೈಯಕ್ತಿಕ ವ್ಯಕ್ತಿತ್ವ ಮರೆಯಾಗಿ ಹೋಗಿ, ಒಂದು ಅಲೌಕಿಕ ವ್ಯಕ್ತಿತ್ವ ಸೃಷ್ಟಿಯಾಗುತ್ತದೆ.

ವಾಲಿಯ ದರ್ಪ, ಭೀಷ್ಮನ ಗಾಂಭೀರ‍್ಯ, ಮಾಗಧನ ಸೊಕ್ಕು ಅಥವಾ ದುರ್ಯೋಧನನ ಹಟ ವಾಸ್ತವ ವಾಗುತ್ತವೆ. ಕೆರೆಮನೆ ಶಂಭು ಹೆಗಡೆಯವರು ಕರ್ಣನ ಪಾತ್ರಧಾರಿಯಾಗಿ ‘ಘಳಿಗೆ ಸೈರಿಸು ಪಾರ್ಥ, ರಥವೇರಿ’ (ದಯವಿಟ್ಟು ಒಂದು ನಿಮಿಷ ಕಾಯ್ದಿರು ಅರ್ಜುನ!

ರಕ್ತದ ಕೆಸರಿನಲ್ಲಿ ಹೂತುಹೋಗಿರುವ ರಥವನ್ನು ಎತ್ತಿಕೊಂಡು ನಿನ್ನೊಡನೆ ಮರಳಿ ಯುದ್ಧಕ್ಕೆ ಬರುತ್ತೇನೆ) ಎನ್ನುವಲ್ಲಿನ ಕರ್ಣನ ಅಸಹಾಯಕತೆ ಪ್ರೇಕ್ಷಕರಲ್ಲಿ ಕಣ್ಣೀರು ತರಿಸುತ್ತದೆ. ರಾಮ ನಿರ್ಯಾಣದ ರಾಮನಾಗಿ ಕುಳಿತ ಪಾತ್ರಧಾರಿ ತನ್ನ ಅತಿ ಪ್ರೀತಿಯ, ತನ್ನ ಜೀವವೇ ಆದ ಲಕ್ಷ್ಮಣನಿಗೆ “ನಿನಗೆ ಮರಣದಂಡನೆ ವಿಧಿಸಿದ್ದೇನೆ, ಹೋಗು; ಆದರೆ ಒಂದು ವಿನಂತಿ.

ದಯವಿಟ್ಟು ತಿರುಗಿ ನೋಡಬೇಡ! ನಿನ್ನ ಕಣ್ಣುಗಳನ್ನು ಎದುರಿಸಲಾರೆ" ಎನ್ನುವಾಗ ಕರುಳು ಕಿತ್ತುಬರುತ್ತದೆ. ತನ್ನ ಮಗ ಕರ್ಣನಿಗೆ ತಾಯಿ ಕುಂತಿ “ಬಿಟ್ಟಂಬ ಬಿಡದಿರು ಮಗನೆ" ಎನ್ನುವಾಗ ದುಃಖ ತಡೆಯಲಾರದೆ ಖ್ಯಾತ ಅರ್ಥಧಾರಿ ನಮ್ಮ ಮಾವ ಜಮಖಾನದ ಮೇಲೆ ಉರುಳಾಡಿದ್ದಿದೆ.

ಮುಂದೆ ಮಾವ “ನನಗೆ ಕುಂತಿಯ ಪಾತ್ರವೇ ಬೇಡ. ನನ್ನ ಎದೆ ಬಿರಿದು ಹೋಗುತ್ತದೆ, ಒಡೆಯುತ್ತದೆ" ಎಂದು ಹೇಳುತ್ತಿದ್ದುದು ನೆನಪಿದೆ. ಕಟ್ಟೆಭಟ್ಟರು ಮತ್ತು ಬುಚ್ಚನ್ ಶಾಸ್ತ್ರಿಗಳು ಎದುರು ಬದುರು ಪಾತ್ರಧಾರಿಗಳಾಗಿ ಕೂತರೆ ಅಪಾರ ವಿದ್ವತ್ ಜ್ಞಾನ ಭಂಡಾರ ಚರ್ಚೆ-ವಿಚರ್ಚೆಯಲ್ಲಿ ಕೆಳಗಿಳಿಯು ತ್ತಿತ್ತು.

ಮೂರೂರು ದೇವರು ಹೆಗಡೆ ಭೀಮನಾಗಿ, ರಾವಣನಾಗಿ, ವಾಲಿಯಾಗಿ, ಆರ್ಭಟಿಸಿದರೆ ನಿದ್ದೆ ಮಾಡಿದ ಮಕ್ಕಳೂ ಕೂಡ ಎದ್ದು ಕುಳಿತು ಹೆದರಿ ನಡುಗುತ್ತಿದ್ದರು. ಮತ್ತೆ ಮಧ್ಯದಲ್ಲಿಯೇ ಯಜಮಾನನ ಮತ್ತು ಭಾಗವತರ ನಡುವೆ ಮಾತುಕತೆ: “ಮುಗಿಸೋಣವೇ? ರಾತ್ರಿಯಾಯಿತು. ಅನ್ನ ಹುಳಿ ತಣಿದುಹೋಯಿತೆಂದು ಹೆಂಗಸರು ಹೇಳುತ್ತಿದ್ದಾರೆ. ಬಾಳೆ ಹಾಕೋಣವೇ?" ಎಂದು ಕೇಳಿದ ನಂತರ ಭಾಗವತರು ಹಾಗೂ ಪ್ರಮುಖ ಪಾತ್ರಧಾರಿಗಳ ನಡುವೆ ಅಲ್ಲಿಯೇ ಚಿಕ್ಕ ಚರ್ಚೆ.

ಈಗ ಭಾಗವತರು ಪದ ಓಡಿಸಿ ತಾಳಮದ್ದಳೆ ಮುಕ್ತಾಯದತ್ತ ತರುವುದು. ಅವರು “ರಂಗನಾಯಕ, ರಾಜೀವಲೋಚನ" ಆರಂಭಿಸಿದಂತೆ ಒಂದು ಕಡೆ ಬಾಳೆ ಹಾಕಲು ಆರಂಭ. ಊಟದಲ್ಲಿ ಹಲಸಿನ ಹಣ್ಣಿನ ಪಾಯಸ. ಆದರೆ ಯಾಕೋ ಎಲ್ಲರ ಮುಖದಲ್ಲಿಯೂ ಏನೋ ಒಂದನ್ನು ಕಳೆದುಕೊಂಡ ಭಾವನೆ. ತಾಳ ಮದ್ದಳೆಯ ಆರಂಭದಲ್ಲಿ ಇದ್ದ ಅದೂ ಇದೂ ಸುದ್ದಿ ಹೇಳುವ ಮೂಡು ಈಗ ಇಲ್ಲ. ಎಲ್ಲರೂ ಒಮ್ಮೆಲೇ ನಿರ್ವೀರ್ಯರಾಗಿ ಹೋದ ಹಾಗೆ. ಪಿಸುಮಾತು ಮಾತ್ರ. ಬಡಿಸುವವರಿಗೂ ದೊಡ್ಡ ಮಾತನಾಡುವ ಉತ್ಸಾಹ ಇಲ್ಲ.

ಬೇರೆ ಜಗತ್ತಿನಿಂದ ಈ ಜಗತ್ತಿಗೆ ಮರಳಿ ಬರಲು ಸಮಯ ಬೇಕು. ನಂತರ ಒಬ್ಬೊಬ್ಬರಾಗಿ ಬೆಳಕು ತರದವರು “ಸೂಡಿ ಕೊಡಾ" ಎಂದು ಹೇಳಿ ಬೆಳಕು ಪಡೆದು, ರಾತ್ರಿಯ ನೀರವತೆಯಲ್ಲಿ ಅಂತರ್ಧಾನವಾಗುತ್ತಾರೆ. ಕೆಲವೇ ಕ್ಷಣಗಳ ಹಿಂದೆ ಮನೆಯಲ್ಲಿ ಇದ್ದ ಆರ್ಭಟವೆಲ್ಲ ತಣ್ಣನೆ ಚಿಮಣಿಯ ಬುರುಡೆಯ ಮೌನದಲ್ಲಿ ಲೀನವಾಗುತ್ತದೆ.

(ಲೇಖಕರು ಸಂವಹನಾ ಸಲಹೆಗಾರರು)